ಮಂಜುನಾಥ ಲತಾ
**
ಹಬ್ಬದ ಊಟಕ್ಕೆಂದು ಅಪ್ಪ ಎಲೆಗಳನ್ನು ಕೊಯ್ಯುವಾಗ
ನಾನು ತೋಟದ ಮಾಲೀಕನತ್ತ ನೋಡುತ್ತಿದ್ದೆ;
ಅವನು ಅಂಗಿ ಕಳಚಿ ಸೆಖೆ ಆರಿಸುತ್ತಾ ಇರುತ್ತಿದ್ದ.
ಹೆಂಗಸರ ಸ್ತನಗಳಂತೆ ಉಬ್ಬಿದ ಅವನ ಎದೆ
ಹೊಟ್ಟೆಗೆ ಜಾರಿದ ಜೋಲುತೊಟ್ಟುಗಳು
ಅವನು ಹೆಣ್ಣಾಳುಗಳತ್ತ ನೋಡಿ ಕುಲುಕಿ ನಕ್ಕಾಗಲೆಲ್ಲ
ಕುಣಿಯುತ್ತಿದ್ದವು.
ಅಪ್ಪ ಆಳುಗಳ ಊಟಕ್ಕೆಂದು ಎಲೆಗಳನ್ನು ಕೊಯ್ಯುತ್ತಿದ್ದ.
ನಾನು ಬಗ್ಗಿ ಎಲೆಗಳನ್ನು ಜೋಡಿಸುವಾಗಲೆಲ್ಲ
ಒಮ್ಮೊಮ್ಮೆ ನೆತ್ತಿಗೆ ನೆತ್ತರ ಹನಿ ತೊಟ್ಟಿದಂತೆ ಅನಿಸಿ
ತಲೆ ಎತ್ತಿ ನೋಡಿದರೆ ಮರದ ಕಾಂಡಗಳು
ಕೆಂಪಾದಂತೆ ಬೆಚ್ಚುತ್ತಿದ್ದೆ.
ಜೋಡಿಸಿದ ಎಲೆಗಳಲಿ ನಮ್ಮ ಊಟದ ಸರದಿಗೆ
ಸಿಕ್ಕುವ ಎಲೆಗಳು ಯಾವುವೆಂದು ಲೆಕ್ಕಿಸುತ್ತಿದ್ದೆ.
ಅಪ್ಪ ಕೊಯ್ದಿಟ್ಟ ಹಸಿರೆಲೆಗಳು ಕೆಂಪಾಗಿ ಕಂಡಾಗಲೆಲ್ಲ
ಅವನ ಅಂಗೈಗಳ ಬಿಡಿಸಿ ನೋಡುತ್ತಿದ್ದೆ;
ಹಸಿರು ಹರಿವಾಣದಂತೆ, ಕಂಚಿನ ತಣಿಗೆಯಂತೆ
ಅವು ತಣ್ಣಗಿರುತ್ತಿದ್ದವು.
ಕಿದ್ದಂಡೆಯಲ್ಲಿರುತ್ತಿದ್ದ ಅವನ ಕುಡುಗೋಲು
ಹೆಡೆ ಮುರಿದ ಹಾವಿನಂತೆ ಮಲಗಿರುತ್ತಿತ್ತು.
ಸಭ್ಯರು, ಗಣ್ಯರು, ಸಭಾಸದರ ಊಟ ಮುಗಿದಾದ ಮೇಲೆ
ಕೊಟ್ಟಿಗೆಯಲಿ ಕೂತು ಎಲ್ಲರೂ ಎಲೆಗಳ ಸರದಿಗೆ
ಹೆಣಗಳಂತೆ ಕಾಯುತ್ತಿದ್ದೆವು.
ಸರದಿಯಲಿ ನಾನು ಅಪ್ಪ ಕೊಯ್ದ ಎಲೆಗಳ ಗುರುತಿಸಲು ಹೆಣಗುತ್ತಿದ್ದೆ.
ಹಸಿರೆಲೆಗಳು ಒಲೆ ಹೊಕ್ಕಿ ಬಂದು ಕಪ್ಪಾದಂತೆ ಕಂಡು
ಕುಲುಮೆಯಲಿ ಬೇಯುವ ಕುಡುಗೋಲಿನಂತೆ ನಡುಗುತ್ತಿದ್ದೆ.
ಕಪ್ಪನೆಯ ಎಲೆಯಲ್ಲಿ ಅಪ್ಪ ಅನ್ನ ಕಲೆಸುವಾಗ
ಹರಿದ ಎಲೆಯಡಿಯಲ್ಲಿ ಗಂಜಲಿನಂತೆ ಹರಿಯುತ್ತಿದ್ದ ಸಾರು ನೋಡುತ್ತಿದ್ದೆ.
ಹಿಡಿದ ಕುಡುಗೋಲು ಹಿಡಿದಂತೆಯೇ ಅಪ್ಪ ಸತ್ತ.
ಅವನ ಹಾಲು-ತುಪ್ಪ, ಹಿಂಡೆ ಕುಳ್ಳಿಗೆ ಅನ್ನಾಹಾರ ಇಡುವಾಗ
ಅವನ ಸಮಾಧಿಯ ಮೇಲೆ ಅವನು ಕೊಯ್ದ ಎಲೆಗಳು ಇರಲಿಲ್ಲ!
* * * * *
ಈಗಲೂ ನನ್ನ ಮೇಜಿನ ಗಾಜಿನ ಕೆಳಗೆ
ಅಪ್ಪ ಕೊಯ್ದಿಟ್ಟ ಹಸಿರೆಲೆಯ ಚಿತ್ರಗಳಿವೆ.
ನಾನು ಹಸಿರು ಶಾಯಿಯಲಿ ಸಹಿ ಮಾಡುವೆ.
ಆದರೆ,
‘ಜೀತ ಎಂದರೇನು’ ಎಂದು ಆಗಾಗ್ಗೆ ಕೇಳುವ
ನನ್ನ ಮಗನ ಪ್ರಶ್ನೆಗೆ ಮೌನವಾಗುಳಿದಿರುವೆ…
ತುಂಬಾ ಚೆನ್ನಾಗಿದೆ