ಆರ್ ಜಿ ಹಳ್ಳಿ ನಾಗರಾಜ
‘ಮರೆತು ಹೋದ ಹೊತ್ತೊಂದು ಉದಿರಿ ಮೂಡಿಸಿದೆ ಭವ್ಯ ಆಸೆ
ನಿಶಾಗುಹೆಯ ತೆರೆದಾದ ಅದ್ಭುತವ ಬರೆವ ಅಗ್ನಿರೇಷೆ’
-ದ ರಾ ಬೇಂದ್ರೆ
ಭೂತುಕನ್ನಡಿ ಕೊಡಿಸುವೆನೆಂದು ಪ್ರಾಮಿಸ್ಸು ಮಾಡಿದ್ದರು ಮೇಷ್ಟ್ರು
ಕವಿತೆ ಕಟ್ಟು ಹೊತ್ತು ಆ ಒಂದು ದಿನ ಕಾವ್ಯಮಂಡಲದ ಮಹಡಿ ಏರಿ
ಮೇಷ್ಟ್ರು ಅರಸುತ್ತ ಹೋದೆ.
ಗ್ರಾಮಾಫೋನು ಹಚ್ಚಿ ಮನ್ಸೂರರ ಅಕ್ಕನ ವಚನಕ್ಕೆ ತಲೆದೂಗಿದ್ದರು
ಎದುರಲ್ಲಿ ಬೃಹತ್ ನಿಘಂಟು, ವಿಶ್ವಕೋಶ – ಕೈಯಲ್ಲಿ ಭೂತುಕನ್ನಡಿ !
ಗೊತ್ತೇನ್ರಿ ನಿಘಂಟು, ಕೋಶ ಓದೋದು ?
ದಿನವೂ ಪೂಜೆ – ಕಾಯಕದಂತೆ ಪುಟಪುಟ ತಿರುಗಿಸಬೇಕು
ಪದಕ್ಕೆ ಪದಾರ್ಥ, ಅರ್ಥಕ್ಕೆ ಅರ್ಥ ಪೋಣಿಸಿ ಕಾವ್ಯ ಹೊಸೆಯಬೇಕು
ನಾಳೆಯ ಹೊಸ ಜಗತ್ತಿನ ಕವಿಯಾಗುತ್ತೀರಿ !
ನಸುನಕ್ಕು ಬೀಡಿ ಹಚ್ಚಿದ್ದರು ಮೇಷ್ಟ್ರು.
ಧೂಮಲೀಲೆಯಲ್ಲಿ ಕಾವ್ಯ ಲಹರಿ :
ಪಂಪ ಕುಮಾರವ್ಯಾಸ ಮಧುರಚೆನ್ನ
ಬೇಂದ್ರೆಯ ಜೋಗಿ, ಶಿವಪ್ರಕಾಶರ ಸಮಗಾರ ಭೀಮವ್ವ, ಮಂಟೆಸ್ವಾಮಿ, ನೀಲಗಾರ … ಎಲ್ಲೆಲ್ಲೋ ಹರಿದು ಬಂದು ನಿಂತದ್ದು
ಟಾಲ್ ಸ್ಟಾಯ್ ನ ‘ ವಾರ್ ಅಂಡ್ ಪೀಸ್’ಗೆ !
ಸಂಜೆ ಸೂರ್ಯ ಇಳಿದು ಗಂಟೆಯಾಗಿತ್ತು
ಜುಬ್ಬ ಬದಲಿಸಿ ಕನ್ನಡಕ ಧರಿಸಿ ಹೊರಡೋಣವೇ ಎಂದರು.
‘ಸಾರ್ ಕವಿತೆಗಳು’ ಎಂದು ಉಸುರಬೇಕಿತ್ತು;
ಮಾತು ಗಂಟಲಲ್ಲೆ ಉಳಿಯಿತು.
ಇಳಿದ ಮೆಟ್ಟಿಲು ಕೊನೆಯಾಯಿತು
ಪುಟ್ಟಮಗಳು ರಚ್ಚೆ ಹಿಡಿದಿದ್ದಳು.
ವಿಜಯಲಕ್ಷ್ಮಿ ಮೇಡಂ ತಡೆದು ಹೇಳಿದರು:
‘ಹಾರ್ಲಿಕ್ಸ್ ಮುಗಿದಿದೆ, ಸಕ್ಕರೆ ಖಾಲಿ,
ಬರುವಾಗ ಕಾಫಿಪುಡಿಯನ್ನೂ ತನ್ನಿ’.
ಮಾತು ಕಿವಿಗೆ ಬೀಳಲಿಲ್ಲ ಎನ್ನುವಂತಿದ್ದರು ಮೇಷ್ಟ್ರು
ಚಪ್ಪಲಿ ಮೆಟ್ಟುತ್ತ ‘ಬನ್ನಿಸಾರ್ ಇವರು ಹಾಗೇನೆ ! ದಿನವೂ ಇದ್ದದ್ದೆ !’

ಡಿವಿಜಿ ರಸ್ತೆ ದಾಟಿ, ನೆಟ್ಟಕಲ್ಲಪ ಸರ್ಕಲ್ ಬಳಿ ಮಹಡಿ ಏರಿ
ಬಾರ್ ನಲ್ಲಿ ತಡರಾತ್ರಿ ಮಾತುಮಾತು ವಿಮರ್ಶೆ ಟೀಕು ಟಾಕು
ತಂಟೆ ತಕರಾರು ನಡುವೆ ಎಚ್ಚರಿಸಿದ್ದು – ಗಂಟೆ ಹನ್ನೆರಡು !
ಮೈ ಮನದಲ್ಲೂ ಕಾವ್ಯವನ್ನೇ ಹಾಸಿ ಹೊದ್ದರು ಮೇಷ್ಟ್ರು
ಹೊರಗೆಲ್ಲ ಬೆಳದಿಂಗಳ ಹಾಲು ಬೆಳಕು.
ಕಾವ್ಯದ ಕಟ್ಟು ಹಿಡಿದು
‘ಬನ್ನಿ, ಮಧುರಚೆನ್ನರ ತೋರಿಸುವೆ ‘ ಎಂದರು!
ಹಿಂಬಾಲಿಸಿದೆ ಮೌನವಾಗಿ ಗುರು ಹೊರಾಟ ಹಾದಿಯತ್ತ….
ಮನೆ ಬಾಗಿಲು ತಟ್ಟುವಾಗ ಜತೆ ಬೇಡವೆಂದು ಗದರಿದ್ದರು
ನಡುರಾತ್ರಿ ನಿಶೆಯಲ್ಲಿ ಹೇಳಿದೆ :
‘ಸಾರ್, ನನಗೊಂದು ಭೂತುಕನ್ನಡಿ ಬೇಕು’
ನಕ್ಕರು. ಕೊಡಿಸುತ್ತೇನೆ ; ಗಾಂಧಿಬಜಾರಿನಲ್ಲಿ ನಾಳೆಯೇ ಅಂದರು!
ಆ ನಾಳೆಗಳು ಇಂದು – ನಿನ್ನೆಗೆ ಜಾರಿದವು
ಮತ್ತೆಮತ್ತೆ ಭೇಟಿ, ಮಾತು; ಯಾವುದಕ್ಕೂ ಸಿಟ್ಟು ಸಣ್ಣಕೋಪ
ಜಗಳ ಮತ್ತೆ ಪ್ರೀತಿಮಳೆ – ಕಾವ್ಯ ಲಹರಿ.
ಮಹಾತ್ಮಗಾಂಧಿ ರಸ್ತೆಗೆ ಇಂಗ್ಲಿಷ್ ಪುಸ್ತಕಕ್ಕೆ ಲಗ್ಗೆ
ಮೆಜೆಸ್ಟಿಕ್ ಗೆ ಪೆನ್ನು ಖರೀದಿಸಲು ದಾಪುಗಾಲು
ಬಸವನಗುಡಿಯ ಸುಬ್ಬಮ್ಮನ ಅಂಗಡಿಯಲ್ಲಿ ಉಪ್ಪಿನಕಾಯಿ ಚಟ್ನಿ ಪುಡಿ
ಹಪ್ಪಳ ಸಂಡಿಗೆ ; ಪಕ್ಕದ ಶಾಪ್ ನಲ್ಲಿ ಆಯುರ್ವೇದ ಮಾತ್ರೆ !
ಬೀಡಾ ಅಂಗಡಿಯಲ್ಲಿ ಚಾಮ್ಸ್ ಸಿಗರೇಟುಪ್ಯಾಕು
ಜೋಗಿಯ ಜೋಳಿಗೆ ತುಂಬಾ ಇನ್ನೇನೊ ಮತ್ತೇನೊ …
ಅದೊಂದು ಸಾಹಿತ್ಯ ಸಂಜೆ, ಎಲ್ಲ ದಿನದಂಥ ಸಂಜೆ ಅದಾಗಿರಲಿಲ್ಲ
ನರನಾಡಿಗಳಲ್ಲಿ ಬೇಂದ್ರೆಯ ಜೋಗಿ ಹರಿದಾಡಿ ನರ್ತಿಸಿದ್ದ
ನುಡಿಮನೆ ತುಂಬಿ ತುಳುಕಾಡಿತ್ತು, ಅಪರೂಪದ ಚಿತ್ರ ಪ್ರತಿಮೆಗಳು
ಮೇಷ್ಟ್ರು ಜೋಗಿ ಕವಿತೆ ಓದಿ ದಿಲ್- ಖುಷ್ ಆಗಿ ಹೇಳಿದ್ದರು :
“ಕಾವ್ಯ ಚಿಕಿತ್ಸೆಯಾಗಿ ಕೆಲಸ ಮಾಡುತ್ತದೆ, ನಾನೀಗ ಯೌವ್ವನಿಗ !”
ಕೆಥಾರ್ಸಿಸ್ ಥೆಯರಿಯ ಅರಿಸ್ಟಾಟಲ್ ನೆನಪಾದ ಅವರಿಗೆ.
ನುಡಿಮನೆಯ ಒಳಮಾತು ಒಣಮಾತಿನ ಚರ್ಚೆ ಮುಗಿದಿತ್ತು
ಕಲ್ಲುಬೆಂಚಿಗೆ ಆತುಕೂತು ಜೇಬು ತಡಕಾಡಿ ಸಿಗರೇಟು ಹಚ್ಚಿ
ಧೂಮಲೀಲೆಯಲ್ಲಿ ಸಣ್ಣಗೆ ಕಂಪಿಸಿ ಮಾತಾಡಿದರು
ಹಣೆಯಲ್ಲಿ ಬೆವರುಕ್ಕಿ ಹರಿದಿತ್ತು!
ನಸುನಗುತ್ತಲೇ ಮನೆಹಾದಿ ಹಿಡಿದರು.
ಆ ರಾತ್ರಿ ಯಾವ ನೋವೊ … ಎದೆಯೊಳಗೆ ಅದ್ಯಾವ ಯುದ್ಧವೋ …
ಯಾರು ನೆನಪದರೋ, ಯಾವಚಿತ್ರ ಮಸುಕಾಯಿತೋ …
ಆಗಷ್ಟೇ ಆಗಸದಲ್ಲಿ ನಕ್ಷತ್ರಗಳು ಕಿರುನಗೆ ಚೆಲ್ಲಿದ್ದವು
ಅರ್ಧಚಂದ್ರ ಮೋಡದಲ್ಲಿ ನೆಳಲು ಬೆಳಕಿನಾಟ ಆಡುತ್ತಿದ್ದ
ಮೇಷ್ಟ್ರು ಬೇಂದ್ರೆ ಕನವರಿಸುತ್ತಲೇ ಎದೆ ಉಜ್ಜಿಉಜ್ಜಿ
ಗಾಢ ನಿದ್ರೆಗೆ ಜಾರಿದರು.
ಕಾವ್ಯ ಪರುಷಮಣಿಯ ಕೈ ನೆಲ ತಾಕಿತ್ತು
ಮೇಷ್ಟ್ರ ಬದುಕಬಂಡಿ ಬಹುದೂರಕೆ ಪಯಣ ಬೆಳೆಸಿತ್ತು
ಅಹೋರಾತ್ರಿ ಚಂದ್ರನತ್ತ ಮುಖಮಾಡಿ ನಾಯಿಗಳು ಘೀಳಿಟ್ಟವು.
ನನ್ನ ಭೂತುಕನ್ನಡಿ ಬ್ಯಾಲೆನ್ಸ್ ಉಳಿಸಿ ಹೋದರು ಮೇಷ್ಟ್ರು
‘ಕಾವ್ಯಮಂಡಲ’ ದಲ್ಲಿ ಪುಸ್ತಕರಾಶಿ ಪೆನ್ನು ನೋಟ್ಸು ಸಿಗರೇಟು ಬೀಡಿ
ಬೆಂಕಿಪೊಟ್ಟಣ ಆಷ್ ಟ್ರೆ ಟೇಪ್ ರೆಕಾರ್ಡರ್ ಆಯುರ್ವೇದ ಮಾತ್ರೆ …
ನನಗೆ ಕೊಂಡು ತಂದಿರುವ ‘ಭೂತಕನ್ನಡಿ ‘ ಅಲ್ಲೆಲ್ಲೋ ಇರಬೇಕು
‘ಫೋನು ಮಾಡುವೆ ಸಾರ್!’ ಎಂದಿದ್ದರು ಮೇಷ್ಟ್ರು.
ಇನ್ನೆಲ್ಲೋ ಇಟ್ಟಿರಬಹುದೆ ನನ್ನ ಭೂತುಕನ್ನಡಿ ?
ಸಾರ್, ಕಿರಂ ಸಾರ್! ಯಾರನ್ನ ಕೇಳಲಿ?
ನೀವಿಲ್ಲದ ಕಾವ್ಯ ಮಂಡಲದಲ್ಲಿ …
ಸಂಗಾತಿಗಳೇ, ನೀವಾದರೂ ಕಂಡಿರಾ ?
ನನ್ನ ಭೂತುಕನ್ನಡಿ ಹಾಗೂ ಸ್ಪರ್ಶಮಣಿ.
(‘ನಿಜದ ನಾಡೋಜ ‘ – ಸಂ : ಪ್ರದೀಪ ಮಾಲ್ಗುಡಿ )






ಕೀ ರಂ ನೆನಪುಗಳು, ಹುಡುಕಾಟದ ಒಡನಾಟ, ನಡೆದಾಡುವ ಭಂಡಾರದೊಂದಿಗೆ ಹೆಜ್ಜೆ ಹಾಕಿದ ಬಹುತೇಕರ ಎದೆಯಲ್ಲಿ ಬಿತ್ತಿದ ಸಾಹಿತ್ಯದ ಬೀಜಗಳೀಗ ಹೆಮ್ಮರಗಳಾಗಿರಬಹುದು. ಬರಹ ಚನ್ನಾಗಿದೆ,