14

ವೇಗದ ನಗರಿ ಎಂದೇ ಕರೆಯಬಹುದಾದ ವಾಣಿಜ್ಯ ನಗರಿ ಮಂಗಳೂರಿನ ಬದುಕಿಗೆ ನನ್ನ ದೇಹವನ್ನು ಒತ್ತೆ ಇಟ್ಟು ಮೂರು ದಶಕ ಕಳೆದಿದ್ದೇ ಗೊತ್ತಾಗಿರಲಿಲ್ಲ. ದಿನಗಳು ಹೇಗೆ ಉರುಳಿದವು ಎಷ್ಟು ವಿದ್ಯಾರ್ಥಿಗಳು ಓದು ಮುಗಿಸಿ ನಮಗೆ ವಿದಾಯ ಹೇಳಿ ಬದುಕು ಕಟ್ಟಿಕೊಳ್ಳಲು ಹೊರಹೊರಟರು ಎಂಬುದನ್ನು ಲೆಕ್ಕವಿಡಲೇ ಸಾಧ್ಯವಿಲ್ಲದಷ್ಟು ವೇಗದಿಂದ ಓಡಿದ ದಿನಗಳವು. ಮಂಗಳೂರಿನ ಬದುಕಿನ ವೇಗವನ್ನು ಕಣ್ಣಾರೆ ಕಾಣಬೇಕೆಂದಿದ್ದರೆ ಮಂಗಳೂರಿನ ಸಿಟಿ ಬಸ್ಸುಗಳಲ್ಲಿ ಒಮ್ಮೆ ಓಡಾಡಬೇಕು. ಮಾನಸಿಕವೇಗದಲ್ಲಿ ಮಾತ್ರ ಓಡಬಹುದಾದ ಸ್ಪೀಡು ಅಲ್ಲಿಯ ಸಿಟಿಬಸ್ಸುಗಳದ್ದು. ನಾನು ಅದೆಷ್ಟು ಹಾಸ್ಯ ಲೇಖನಗಳನ್ನು ಮಂಗಳೂರಿನ ಸಿಟಿ ಬಸ್ಸಿನ ಮೇಲೆ ಬರೆದಿದ್ದೇನೋ.
ಆವೇಶದ ವೇಗ, ಆವೇಗ, ಅತಿ ವೇಗ ಹೀಗೆ ಡ್ರೈವರ್ ಮಹಾಶಯನ ವಯಸ್ಸಿಗನುಗುಣವಾದ ವೇಗದ ವಿವಿಧ ರೂಪಗಳನ್ನು ನಾನಲ್ಲಿ ನೋಡಿದ್ದೇನೆ. ಮಂಗಳೂರಿನ ಸಿಟಿ ಬಸ್ಸುಗಳಲ್ಲಿ ಚಾಲಕ ವೃತ್ತಿಗೆ ಸೇರುವವರು ಕೆಲಕಾಲ ವಿಮಾನ ನಡೆಸಿ ಅನುಭವ ಪಡೆದಿರಬೇಕೇನೋ ಎನಿಸುವಂತಹ ಸ್ಪೀಡು ಅಲ್ಲಿಯ ಬಸ್ಸುಗಳದ್ದು. ದಕ್ಷಿಣ ಕನ್ನಡ ಜಿಲ್ಲೆಯ ಉದ್ದಕ್ಕೂ ಚಲಿಸುತ್ತಿರುವವು ಖಾಸಗಿ ಸಾರಿಗೆ ಬಸ್ಸುಗಳು. ಪ್ರತಿ ಐದು ನಿಮಿಷಕ್ಕೊಮ್ಮೆ ನಗರದ ಎಲ್ಲಾ ಭಾಗಗಳಿಗೂ ತೆರಳುವ ಸಿಟಿಬಸ್ಸುಗಳು, ಗ್ರಾಮೀಣ ಪ್ರದೇಶಗಳಿಗೂ ಅದೇ ವೇಗದಲ್ಲಿ ತೆರಳುವ ವಿವಿಧ ಕುಳಗಳ ಒಡೆತನಕ್ಕೆ ಸೇರಿದ ಖಾಸಗಿ ಬಸ್ಸುಗಳು. ಅವುಗಳಲ್ಲಿ ಸಹಜವಾದ ಸ್ಪರ್ಧೆ. ತನ್ನ ಹಿಂದಿನ ಬಸ್ಸಿನ ಎಲ್ಲ ಸೀಟುಗಳನ್ನು ತಾನು ಹೊಡೆದುಕೊಂಡು ಬಿಡಬೇಕೆಂಬ ಡ್ರೈವರುಗಳ ಯೋಜನೆಗಳು ಮಂಗಳೂರಿನ ಸಿಟಿ ಬಸ್ಸುಗಳ ವೇಗಕ್ಕೆ ಕಾರಣವಾಗಿರಬಹುದು.
ಜಗತ್ತಿನ ಇನ್ನಾವುದೇ ಭಾಗದ ಸಿಟಿ ಬಸ್ಸುಗಳಲ್ಲಿ ಇರದ ವ್ಯವಸ್ಥೆಯೊಂದು ಮಂಗಳೂರಿನ ಸಿಟಿ ಬಸ್ಸುಗಳಲ್ಲಿದೆ. ಈ ಬಸ್ಸುಗಳಿಗೆ ಎರಡು ಬಾಗಿಲುಗಳು. ಮುಂದೆ ಒಂದು ಹಿಂದೆ ಒಂದು ಹೀಗೆ ಎರಡು ಬಾಗಿಲುಗಳಲ್ಲೂ ಜೋರಾಗಿ ಬಾಯಲ್ಲಿ ವಿಸ್ಹಿಲ್ ಹಾಕಬಲ್ಲ ಇಬ್ಬರು ಕಂಡಕ್ಟರುಗಳು. ಮುಂದಿನ ಬಾಗಿಲಿನಲ್ಲಿರುವ ನಿರ್ವಾಹಕನ ಕೆಲಸ ಮುಂಬಾಗಿಲಿನಲ್ಲಿ ಹತ್ತಿದ ಪ್ರಯಾಣಿಕರನ್ನು ಹಿಂದಕ್ಕೆ ಹೋಗಿ (ತುಳುವಿನಲ್ಲಿ ಪಿರಪೋಲೆ) ಎಂದು ಒದರುತ್ತ ಜನರನ್ನು ಹಿಂದೆ ಹಿಂದಕ್ಕೆ ತಳ್ಳುತ್ತಿರುವುದು. ಹಿಂಬಾಗಿಲಿನ ನಿರ್ವಾಹಕನ ಕೆಲಸವೂ ಅಷ್ಟೇ. ಬಾಯಲ್ಲಿ ಜೋರಾಗಿ ಸೀಟಿ ಊದುತ್ತಾ ದುಂಪೋಲೆ ದುಂಪೋಲೆ (ಅಂದರೆ ತುಳುವಿನಲ್ಲಿ ಮುಂದೆ ಹೋಗಿ ಮುಂದೆ ಹೋಗಿ) ಎಂದು ಜನರನ್ನು ಮುಂದಕ್ಕೆ ತಳ್ಳುವುದು.

ಹೀಗೆ ದುಂಪೋಲೆ ಮತ್ತು ಪಿರಪೋಲೆ ಎಂದರೆ ಮುಂದಕ್ಕೆ ಹೋಗುವುದು ಹಾಗೂ ಹಿಂದಕ್ಕೆ ಹೋಗುವುದು ಎರಡೂ ಏಕಕಾಲದಲ್ಲಿ ಘಟಿಸುವುದು ಹೇಗಪ್ಪಾ ಎಂಬ ದಿಗ್ಭ್ರಮೆಯಲ್ಲಿ ನಾನು ಅದೆಷ್ಟೋ ಬಾರಿ ಬಸ್ಸಿನಲ್ಲಿ ಕಕ್ಕಾಬಿಕ್ಕಿ ಯಾಗಿ ದಿಗ್ಭ್ರಮೆ ಗೊಳಗಾಗಿದ್ದಿದೆ. ಇಬ್ಬರು ನಿರ್ವಾಹಕರ ಪಿಪಿಪಿಪಿ ಎಂಬ ಸೀಟಿಯಿಂದ ಭಯಭೀತಳಾಗಿ ನನ್ನ ಸ್ಟಾಪ್ ಬರುವ ಮೊದಲೇ ಬಸ್ಸಿನಿಂದ ಇಳಿದು ಬಿಟ್ಟ ಘಟನೆಗಳು ಅದೆಷ್ಟು! ನಿಧಾನಕ್ಕೆ ನಡೆದುಕೊಂಡೇ ಕಾಲೇಜಿಗೆ ಹೋದರಾಗಿತ್ತು ಅನ್ನಿಸಿದ್ದೂ ಇದೆ. ಇಬ್ಬರೂ ನಿರ್ವಾಹಕರು ‘ಬೇಗ ಬೇಗ’ ಎಂದು ಪ್ರಯಾಣಿಕರಿಗೆ ಕೈಕಾಲು ನಡುಕ ಬರುವಂತೆ ಕಿರುಚುತ್ತಿರುತ್ತಾರೆ.
ಇಬ್ಬರ ಬಾಯಲ್ಲೂ ಸದಾ ಸೀಟಿ ಊದುತ್ತಲೇ ಇರಬೇಕು. ಬಸ್ಸು ಹೊರಟ ತಕ್ಷಣ ಹೋಲ್ಡಾನ್ ಎನ್ನುವ, ನಿಂತಾಕ್ಷಣ ಪೋಲೆ ಎನ್ನುವ ಇಬ್ಬರು ಸೀಟಿಗರು ಸಹ ಬೇಗ ಬೇಗ ಎಂದು ಉಸಿರುಕಟ್ಟಿ ಕೂಗುತ್ತಿರುತ್ತಾರೆ. ಸ್ಪರ್ಧೆ ಎಂಬ ಜಾಲದಲ್ಲಿ ಸಿಲುಕಿಕೊಂಡ ಖಾಸಗಿ ಬಸ್ಸುಗಳು ಲಾಭಕ್ಕಾಗಿ ಅವರ ಡ್ರೈವರ್ ಮತ್ತು ಕಂಡಕ್ಟರ್ ಗಳನ್ನೇ ಅವಲಂಬಿಸಿರುತ್ತವೆ. ಅನ್ನ ನೀಡುವ ದಣಿಗೆ ಅನ್ಯಾಯವಾಗದಂತೆ ಈ ಬಾಂಧವರು ಬೊಬ್ಬೆ ಹಾಕಿ ಜನರನ್ನು ಬಸ್ಸಿನೊಳಗೆ ಎಳೆದು ತುರುಕಿ ತಳ್ಳಿ ಎಲ್ಲವನ್ನು ಅರೆಕ್ಷಣದಲ್ಲಿ ಮಾಡುತ್ತಾ ಅದೊಂದು ಪವಿತ್ರ ಕರ್ತವ್ಯವೆಂಬಂತೆ ಉದ್ಯೋಗ ನಿರ್ವಹಿಸುತ್ತಾರೆ. ಪ್ರಯಾಣಿಕರೂ ಅಷ್ಟೆ ಬಸ್ಸುಗಳ ಈ ವೇಗಕ್ಕೆ ಅದು ಹೇಗೋ ಹೊಂದಿಕೊಂಡು ಬಿಟ್ಟಂತೆ ನಿರ್ಲಿಪ್ತರಾಗಿ ಹತ್ತಿ ಇಳಿದು ಮಾಡಿಕೊಂಡಿರುತ್ತಾರೆ. ‘ವಾನಮನಿ ಸ್ಪೀಡು ಮಾರಾಯ’ ಎಂದು ತುಳುವಿನಲ್ಲಿ ‘ಸ್ಪೀಡು ಮಳಾರ್ ಕಂಡಾಬಟ್ಟೆ ಸ್ಪೀಡು’ ಎಂದು ಕೊಂಕಣಿಯಲ್ಲಿ ಗೊಣಗುತ್ತಾರಾದರೂ ಅದು ಎಂದೂ ಸ್ಪೋಟದ ಭಾಷೆಯಲ್ಲಿ ಹೊರಗೆ ಬರುವುದೇ ಇಲ್ಲ. ಡ್ರೈವರನಿಗೆ ಅದು ಕೇಳುವುದೂ ಇಲ್ಲ.
ಮಂಗಳೂರಿನ ಗ್ರಂಥಸ್ಥ ಭಾಷೆಯೋ ಇದಕ್ಕೆ ತದ್ವಿರುದ್ಧ. ‘ಇಕಳ ನಮ್ಮ ಸ್ಟಾಪ್ ಬಂತು. ಇಳಿವನಾ? ಕದ್ರಿ ದಾಟಿ ಹೋದರೆ ಕಷ್ಟ ಉಂಟು. ಕಂಡಕ್ಟರೇ ಬಸ್ಸನ್ನು ಸ್ವಲ್ಪ ನಿಲ್ಲಿಸಿ. ನಾವು ಇಳಿಯುವವರು ಇದ್ದೇವೆ’ ಎಂದು ವ್ಯಾಕರಣಬದ್ಧವಾಗಿ ಹೇಳಿಯೇ ಕೆಳಗಿಳಿಯುತ್ತಾರೆ ಧಾರವಾಡದಲ್ಲಾದರೆ ‘ತರುಬ್ರೋಯಪ್ಪಾ ಇಳಿಯಾಕ್ ಹತ್ತೀವಿ’ ಅಂದುಬಿಡುತ್ತಾರೆ. ಶಿವಮೊಗ್ಗ ಸಾಗರದಲ್ಲಿ ‘ಹೋಲ್ಡೇನ್’ ಎಂದು ಒದರುತ್ತಾರೆ. ದಕ್ಷಿಣ ಕನ್ನಡದಲ್ಲಿ ಹಾಗಲ್ಲ ಕನ್ನಡ, ಕ್ರಮಬದ್ಧ ಕನ್ನಡ ಮಾತ್ರ. ಎಷ್ಟೇ ತಡವಾದರೂ ‘ಆಯಿತು ನಾವಿನ್ನು ಬರುವೆವು ಮತ್ತೆ ಭೇಟಿಯಾಗೋಣ ಆಯ್ತಾ’ ಎಂದೇ ಹೇಳಬೇಕಾಗುತ್ತದೆ. ಇಲ್ಲಿ ಮತ್ತೆ ಎಂದರೆ ಪುನಃ ಎಂದರ್ಥವಲ್ಲ ಆಮೇಲೆ ಎಂದರ್ಥ. ಆದರೆ ಬಸ್ಸುಗಳ ವ್ಯಾಕರಣ ಮಾತ್ರ ಇಲ್ಲಿ ಪೂರಾ ವಿರುದ್ಧ. ಪೂರ್ಣವಿರಾಮವೇ ಇಲ್ಲವೆನ್ನಬಹುದು.
ಪ್ರಯಾಣಿಕರು ಇಳಿಯಲು ಹತ್ತಲು ಅವಕಾಶವಾಗುವಷ್ಟುಅಲ್ಪವಿರಾಮ ಚಿಹ್ನೆ ಮಾತ್ರ ಇರುವುದು. ಪುನಃ ಬಸ್ಸು ಹಾರತೊಡಗುತ್ತದೆ. ರಷ್ಷು ಸ್ಪೀಡು ಎಂಬೆರಡು ಉಕಾರ ಗಳಿಂದಾಗಿ ಉಳಿಗಾಲವಿಲ್ಲ ಎಂಬಂಥ ಪರಿಸ್ಥಿತಿ ಪ್ರಯಾಣಿಕರದ್ದು. ದಿನವೂ ಕಾಲೇಜಿಗೆಂದು ಮನೆ ಬಿಡುವಾಗ ‘ಸಂಪೂರ್ಣಾಂಗಪೂರ್ಣೆ’ ಯಾದ ನಾನು ಯಾವತ್ತೂ ನನ್ನ ಚರ ಆವಶ್ಯಕ ವಸ್ತುಗಳೊಡನೆ ಬಸ್ಸೇರುತ್ತೇನಾದರೂ ಇಳಿಯುವಾಗ ಪೂರ್ಣಾಂಗಳಾಗಿರುತ್ತೇ ನೆಂದಾಗಲೀ ನನ್ನ ಚರಾಚರ ವಸ್ತುಗಳು ನನ್ನ ಜತೆಗೆ ಇಳಿಯುತ್ತವೆ ಎಂದಾಗಲಿ, ಇಳಿದರೂ ಇದ್ದ ಸ್ಥಿತಿಯಲ್ಲಿಯೇ ಇರುತ್ತವೆ ಎಂದಾಗಲೀ ಹೇಳಲು ಆಗುವುದಿಲ್ಲ.
ಮಂಗಳೂರಿನ ಬಸ್ಸುಗಳಲ್ಲಿ ಬೆಳಿಗ್ಗೆ ಎಂಟರಿಂದ ಹತ್ತರ ತನಕ ನೂಕುನುಗ್ಗಲಿನ ‘ನೂಕ್ ಅವರ್.’ (ಪೀಕ್ ಅವರ್ ಎನ್ನುತ್ತಾರಲ್ಲ ಹಾಗೆ )ಆಫೀಸಿಗೆ ತೆರಳುವ ಬಾಡಿಗೆ ಮುಖದ ದುಡಿಯುವ ಜನಾಂಗ, ಬಿಸಿಬಿಸಿ ಡಬ್ಬಾ ತುರುಕಿ ಹೊರಲಾರದ ಪುಸ್ತಕದ ಮೂಟೆಯೊಂದಿಗೆ ಪರ್ವತಾರೋಹಿಗಳಂತೆ ಬಸ್ಸೇರುವ ಯೂನಿಫಾರಂ ಚಿಳ್ಳೆಪಿಳ್ಳೆಗಳು, ಮಿಡಿ ಮ್ಯಾಕ್ಸಿ ತುಂಡು ಲಂಗದ ಬಾಲೆಯರು ಇವರುಗಳ ಸಂದಿಯಲ್ಲಿ ಸಿಕ್ಕಿ ಡ್ರೈವರಣ್ಣನ ವೇಗ ಕಂಡಕ್ಟರುಗಳ ಬೇಗಗಳ ನಡುವೆ ದಬ್ಬಿಸಿಕೊಳ್ಳುತ್ತಾ ನುಜ್ಜುಗುಜ್ಜಾದ ಪ್ರಾಣಿಯಂತೆ ನಾನು ಸಿಕ್ಕಿ ಹಾಕಿಕೊಂಡಿರುತ್ತೇನೆ.

ಬಸ್ಸಿಂದ ಇಳಿಯುವಾಗ ನನ್ನ ದಿನನಿತ್ಯದ ಸಂಗಾತಿಗಳಾದ ಜಡೆ ಕೊಡೆ ಬ್ಯಾಗು ಕರ್ಚೀಫು ಟಿಫಿನ್ ಬಾಕ್ಸು ಚಪ್ಪಲಿ ಸೀರೆ ಇವಿಷ್ಟರಲ್ಲಿ ಎಲ್ಲವೂ ಸುಸ್ತಿತಿಯಲ್ಲಿದ್ದು ಸುರಕ್ಷಿತವಾಗಿ ಇಳಿದ ದಾಖಲೆಯೇ ಇಲ್ಲ. ಒಂದೊಂದು ದಿನ ಸಮವಸ್ತ್ರದ ಜ್ಯೂನಿಯರ್ ಶಾಲಾ ಸೈನಿಕನೊಬ್ಬನ ಬ್ಯಾಗಿನ ಚೈನಿಗೆ ಸಿಕ್ಕ ನನ್ನ ಜಡೆ ಕಣ್ಣೆದುರೇ ಪರಪರ ಹರಿದು ಹೋಗಿ ಅರ್ಧ ಜಡೆ ನನ್ನ ತಲೆಯಲ್ಲಿಯೂ ಉಳಿದರ್ಧ ಜಡೆ ಆ ಶಾಲಾ ಬ್ಯಾಗಿನಲ್ಲಿಯೂ ನೇತಾಡುವುದನ್ನು ಕಂಡರೂ ಏನೂ ಮಾಡಲಾರದವಳಾಗಿರುತ್ತೇನೆ.
ನನ್ನ ಸ್ಟಾಪಿನಲ್ಲಿ ನಾನು ಇಳಿಯೋಣವೆಂದರೆ ಯಾರದೋ ಕೊಡೆಯ ಕೊಂಡಿಗೆ ನನ್ನ ಸೆರಗು ಸಿಕ್ಕಿಕೊಂಡಿದೆ. ನಾನು ಅದನ್ನು ಅಲಕ್ಷಿಸಿ ಹಠಹೊತ್ತು ಇಳಿದೇಬಿಟ್ಟೆನಾದರೆ ನನ್ನ ಸೀರೆ ಮೇಲೇ ಉಳಿಯುವ ಎಲ್ಲಾ ಸಾಧ್ಯತೆ ಇದೆ. ಒಂದೋ ವಾಪಸ್ ಬಸ್ಸು ಹತ್ತಿ ಸೀರೆಯ ಅಂಚು ಯಾರಿಗೆ ಯಾರ ಚೀಲಕ್ಕೆ ಸಿಕ್ಕಿಕೊಂಡಿದೆ ಎಂದು ಹುಡುಕಬೇಕು ಇಲ್ಲವೇ ಅದರ ಆಸೆ ಬಿಟ್ಟು ಕೆಳಗಿಳಿಯಬೇಕು. ಪಂಚ ಪತಿವ್ರತೆಯರಲ್ಲಿ ಯಾರಿಗೂ ಎದುರಾಗದ ಧರ್ಮಸಂಕಟದ ಕ್ಷಣಗಳು ನನಗೆ ಮಂಗಳೂರಿನ ಸಿಟಿ ಬಸ್ಸುಗಳಲ್ಲಿ ಎದುರಾಗಿವೆ.
ಮೀನು ಮಾರ್ಕೆಟ್ಟು ಹುಡುಗಿಯರ ಕಾಲೇಜು ಮೊದಲಾದ ಜನಪ್ರಿಯ ಬಸ್ಸ್ಟಾಪುಗಳಲ್ಲಿ ಇಳಿಯುವವರ ಸಂಖ್ಯೆ ಹೆಚ್ಚಿರುವುದರಿಂದ ಇನ್ನೂ ಆ ಸ್ಟಾಪು ಬರುವ ಮೊದಲೇ ಜನ ಬಾಗಿಲಿನತ್ತ ಪ್ರವಾಹದಂತೆ ನುಗ್ಗಿ ಬರ ತೊಡಗುತ್ತಾರೆ. ಯಾರ ಸೀಟಿಯನ್ನೂ ಲೆಕ್ಕಿಸದ ರಭಸ ಅವರದ್ದು. ಅಂಥಸ್ಟಾಪು ಗಳಲ್ಲಿ ಇಳಿಯುವವರ ಕಾಲು ನೆಲಕ್ಕಿಳಿದರೆ ಚಪ್ಪಲಿ ನಾಪತ್ತೆ ಚಪ್ಪಲಿ ಹೇಗೋ ಇಳಿಸಿದೆವೆಂದರೆ ಕಾಲೇ ನಾಪತ್ತೆ. ನೂರೆಂಟು ಕಾಲುಗಳ ನಡುವೆ ಸಿಕ್ಕು ಅಪ್ಪಚ್ಚಿಯಾದ ಬಡಪಾಯಿ ಸ್ವಂತ ಕಾಲನ್ನು ಹುಡುಕಿ ಕೆಳಗಿಳಿಯುವಾಗ ಕಾಲ ಮೀರಿರುತ್ತದೆ.
| ಇನ್ನು ಮುಂದಿನ ವಾರಕ್ಕೆ |






0 Comments