19

ಕೆಲವೇ ದಶಕಗಳ ಹಿಂದಿನ ಮಾತು. ಯಾರ ಮನೆಗಳಲ್ಲು ಟಿವಿ ಎಂಬ ಮಾಯಾ ಪೆಟ್ಟಿಗೆ ಅವತರಿಸಿರಲಿಲ್ಲ. ಸಂಜೆ ಮನೆಯ ಹಿರಿಯರೆಲ್ಲಾ ಒಂದೆಡೆ ಸೇರಿ ಮಕ್ಕಳನ್ನು ಮಗ್ಗಿ ಬಾಯಿಪಾಠ ಮಾಡಿಸಿ ಭಜನೆ ಹೇಳುತ್ತ ಮನೆಗೆಲಸ ಮುಗಿಸಿ ಹರಟೆ ಹೊಡೆಯುತ್ತಿದ್ದರು. ಹರಟಿ ಹಗುರಾಗುವ ಹಿರಿಯರ ದಂಡೇ ಹಾಜರಿರುತ್ತಿತ್ತು. ಹಳ್ಳಿಯ ನಮ್ಮ ಮನೆಯಲ್ಲೂ ಎಲೆ ಅಡಿಕೆ ಬಟ್ಟಲು ಜಗುಲಿಯಲ್ಲಿ ಪ್ರತಿಷ್ಠಾಪಿಸಲ್ಪಟ್ಟು ಅದರ ಸುತ್ತ ಮಾತು ಕತೆ ಯಕ್ಷಗಾನ ಭಾಗವತಿಕೆ, ನಗು ಹರಟೆ ಎಲ್ಲವೂ ನಡೆಯುತ್ತಿತ್ತು..
ಹೆಚ್ಚಿನವು ಕೂಡು ಕುಟುಂಬಗಳೆ ಆಗಿದ್ದರೂ ಒಬ್ಬಳು ಬಾಣಂತಿ ಇನ್ನೊಬ್ಬಳು ದಿನ ತುಂಬಿದ ಬಸುರಿ. ಅವರನ್ನು ನೋಡಲು ಒಬ್ಬ ಅಜ್ಜಿ. ಎಲ್ಲರೂ ಮನೆಯ ಅಜ್ಜಿಯರೇ ಆಗಬೇಕೆಂದಿಲ್ಲ ಅದೆಲ್ಲಿಂದಲೋ ಬಂದು ನಮ್ಮ ಮನೆಯಲ್ಲಿ ಉಳಿದು ನಮ್ಮ ಮನೆಯವರೇ ಆಗಿಬಿಡುತ್ತಿದ್ದ ಅನೇಕ ಅಜ್ಜಿ ಆಯಿಯರಿಗೆ ಅನುಕೂಲಸ್ಥ ಕುಟುಂಬಗಳು ಆಶ್ರಯ ನೀಡುತ್ತಿದ್ದವು. ಅಂಥ ನೆಲೆರಹಿತ ಅಜ್ಜಿಯರಿಗೆ ತಾವು ಅನಾಥರು ಆಶ್ರಿತರು ಎಂಬ ಭಾವನೆ ಬರದಂತೆ ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿ ಬಿಡುತ್ತಿದ್ದರು. ಅವರ ಕಷ್ಟ ಸುಖಕ್ಕೆ ಇವರು, ಮನೆಯವರ ಕಷ್ಟ ಸುಖದಲ್ಲಿ ಭಾಗಿಯಾಗುವ ಈ ಆಶ್ರಿತರು. ಪರಸ್ಪರ ಪ್ರೀತಿಯಿಂದ ಬಂಧುಗಳ ಹಾಗೆಯೇ ಬೆಸೆದು ಕೊಂಡು ಬಿಡುತ್ತಿದ್ದರು.
ಹೀಗೆ ಹೆಚ್ಚಿನ ಕುಟುಂಬಗಳು ನೆಮ್ಮದಿಯ ತಾಣಗಳು ಆಗಿದ್ದವು. ಶೈಶವಕ್ಕೆ ಅಗತ್ಯವಿರುವ ಅಕ್ಕರೆ, ವಾತ್ಸಲ್ಯ ಹಾಗೂ ಕೌಟುಂಬಿಕ ಲಾಲನೆ
ಪಾಲನೆ ಗಳಲ್ಲಿ ಚೂರೂ ಕೊರತೆ ಕಾಣದ ಮಕ್ಕಳು ಪರಾಕ್ರಮ ಶಾಲಿಗಳಾಗಿ ಧೈರ್ಯದಿಂದ ಜನರನ್ನು ಜೀವನವನ್ನು ಎದುರಿಸುತ್ತ ದೈಹಿಕವಾಗಿ ಮಾನಸಿಕವಾಗಿ ಸ್ವಸ್ಥರಾಗಿದ್ದು ಸ್ವಸ್ಥ ಸಮಾಜವೊಂದರ ಸದಸ್ಯರಾಗಿ ಬಾಳುತ್ತಿದ್ದರು.
ಮಗುವನ್ನು ಪೋಷಿಸಲು ತಾಯಿಯೇ ಆಗಬೇಕೆಂದಿಲ್ಲ. ಚಿಕ್ಕಮ್ಮ, ದೊಡ್ಡಮ್ಮ, ಅಜ್ಜಿ, ತಂದೆಯ ತಂಗಿ, ನೆರೆಮನೆಯ ಅಜ್ಜಿ, ದೂರದ ಅತ್ತೆ.. ಹೀಗೆ ಸಂಬಂಧಿಗಳ ಕೊಂಡಿಯೇ ಬೆಸೆದಿರುತ್ತಿತ್ತು. ಹೆಣ್ಣುಮಕ್ಕಳು ಚಿಕ್ಕ ಮಕ್ಕಳಿಂದ ಹಿಡಿದು ಯುವತಿಯರು ಸಹ ಅಜ್ಜನ ಮನೆಗೆ ಹೋಗಿ ಉಳಿಯುವುದು. ಚಿಕ್ಕಪ್ಪನ ಜೊತೆ ಜಾತ್ರೆಗೆ ಹೋಗಿ ಬರುವುದು, ದೊಡ್ಡಪ್ಪನ ಮಕ್ಕಳೊಂದಿಗೆ ಯಕ್ಷಗಾನ ನೋಡಲು ಹೋಗುವುದು ಮೊದಲಾದವು ಸಾಮಾನ್ಯವಾಗಿತ್ತು.

ತಮ್ಮ ಮಗಳು ಪರೀಕ್ಷೆ ಮುಗಿದು ಶಾಲೆಯ ರಜೆ ಕಳೆಯಲು ಪಕ್ಕದಲ್ಲೇ ಇರುವ ಹಳ್ಳಿಯ ಅಜ್ಜಿಯ ಮನೆಗೆ ಹೊರಟು ನಿಂತಾಗ ಸೈಕಲ್ಲಿನಲ್ಲಿ ಬರುವ ಪಕ್ಕದ ಮನೆ ಹುಡುಗ ಸುಬ್ಬುನ ಹತ್ತಿರ ‘ನಮ್ಮನೆ ಕೂಸಿಗೆ ಅಜ್ಜನ ಮನೆಗೆ ಇವತ್ತೇ ಹೋಗಬೇಕಂತೆ ಸ್ವಲ್ಪ ಬಿಟ್ಟು ಬರುತ್ತೀಯಾ ಮಗ?’ಎಂದು ಕೇಳಿ ಮಗಳನ್ನು ಅವನ ಸೈಕಲ್ಲಿಗೆ ಏರಿಸಿ ಕಳಿಸಿ ನೆಮ್ಮದಿಯಿಂದ ಒಳ ಹೋಗುವ ಹಿರಿಯರು… ಅಂದಿನ ಸಾಮಾಜಿಕ ಸ್ವಾಸ್ಥ್ಯವೇ ಹಾಗಿತ್ತು. ಬರು ಬರುತ್ತಾ ನಾಗರಿಕತೆ ಬೆಳೆದು ಪಸರಿಸಿದಂತೆ ಏನಾಗಿ ಹೋಯಿತು? ಚಿಕ್ಕ ಮಗು ಶಾಲೆಯಿಂದ ಬರಲು ಕೊಂಚ ತಡವಾದರೂ ಆತಂಕಕ್ಕೆ ಒಳಗಾಗುವ ತಾಯಿ ತಂದೆಯರು. ಬಂದ ಮೇಲೆ ಶಾಲೆಯಲ್ಲಿ ನಡೆದ ಘಟನೆಗಳಲ್ಲಿ ಏನಾದರೂ ಅನುಚಿತ ನಡೆದಿತ್ತೇ ಎಂಬ ಅನೂಹ್ಯ ಭಯ. ಇದು ಬಂದಿದ್ದಾದರೂ ಎಲ್ಲಿಂದ? ಯೋಚಿಸಿದಷ್ಟೂ ಉತ್ತರ ಹೊಳೆಯದು.
ಅಂದಿನವರಿಗೆ ಮೈಮುರಿ ದುಡಿತ ಕಾಲ್ನಡಿಗೆಯ ಪ್ರವಾಸ,ಪ್ರಯಾಸ ಇದ್ಯಾವುದೂ ಕಾಡುತ್ತಲೇ ಇರಲಿಲ್ಲ. ಮಕ್ಕಳಿಲ್ಲದ ಅಜ್ಜಿ ಯೋರ್ವಳು ಅನಾಥಳಾದರೆ ಸಂಬಂಧಿಗಳಲ್ಲಿ ಯಾರನ್ನಾದರೂ ಆಶ್ರಯಿಸಿ ಜೀವನ ಸವೆಸುವ ದೃಶ್ಯ ಸಾಮಾನ್ಯವಾಗಿತ್ತು. ಆ ಮನೆಯ ಮಕ್ಕಳು ಮೊಮ್ಮಕ್ಕಳು ಅಜ್ಜಿಯನ್ನು ಆಶ್ರಯಿಸಿ ‘ಅಜ್ಜಿ ಮುದ್ದು’ ಅನುಭವಿಸುತ್ತಾ ಅನುನಯದ ನುಡಿಗಳನ್ನು ಆಲಿಸಿ ಅಜ್ಜಿಯ ಬಳಿ ಕಥೆ ಕೇಳುತ್ತಾ ತಮ್ಮಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಾ ಬೆಳೆಯುತ್ತಿದ್ದವು. ಅಜ್ಜಿ ಯಾದರೂ ಎಂದೂ ಸೋಮಾರಿಯಾಗಿರಲಿಲ್ಲ.
ಕೆಲಸ ಬೊಗಸೆ ಮುಗಿಸಿ ಮನೆಯ ಮಹಿಳೆಯರ ಕಷ್ಟ ಸುಖ ಅಲಿಸಿ ಕೊಳ್ಳುತ್ತಾ ಗಂಡಸರ ದುಡಿಮೆಗೂ ಕೈ ಜೋಡಿಸಿ ಸಲಹೆ ಸಹಕಾರ ನೀಡುತ್ತಾ ಆಳುಕಾಳುಗಳ ಜತೆ ನೆಮ್ಮದಿಯಿಂದ ದಿನ ಕಳೆಯುವಂತಹ ದೃಶ್ಯಗಳು ನನ್ನ ಕಣ್ಮುಂದೆ ಇಂದಿಗೂ ಇವೆ. ಅಜ್ಜಿಯರೆಂದರೆ ಈ ಕಾರಣಕ್ಕಾಗಿ ನನಗೆ ಎಲ್ಲಿಲ್ಲದ ಅಕ್ಕರೆ. ನಾನು ಕಂಡ ನಮ್ಮೊಂದಿಗೆ ಬಾಳಿದ ನಮ್ಮ ಕುಟುಂಬದ ಅನೇಕ ಅಜ್ಜಿಯರು ನನ್ನ ಹಿಂದೆ ಇದ್ದಂತೆ ನನಗೆ ಈಗಲೂ ಭಾಸವಾಗುವುದಿದೆ. ಅವರ ಧೈರ್ಯ ಸ್ಥೈರ್ಯ ವರ್ತಮಾನದ ಕಿರಿಕಿರಿಗಳನ್ನು ಚೂರು ಆತಂಕಗೊಳ್ಳದೆ ಪರಿಹರಿಸಿಕೊಳ್ಳುವ ಅವರ ಚಾಕಚಕ್ಯತೆ ನನಗೆ ಅಂದಿಗೂ ಇಂದಿಗೂ ಸೋಜಿಗ ವಾಗಿಯೇ ಉಳಿದಿದೆ. ಚಿಕ್ಕ ಅವಮಾನ ಚಿಕ್ಕ ಸೋಲು ಧೃತಿಗೆಡಿಸಿದ ಕ್ಷಣಗಳಲ್ಲಿ ನನ್ನ ಬೆನ್ನು ತಟ್ಟಿ ಮೈದಡವಿ ಧೈರ್ಯ ಹೇಳುವ ಅಜ್ಜಿಯರು ಇಂದು ಸಹ ನನ್ನ ಪಾಲಿಗಿರುವುದು ನನ್ನ ಅದೃಷ್ಟವೆಂದೇ ಭಾವಿಸಿದ್ದೇನೆ.
ಚಿಕ್ಕವರಿರುವಾಗ ನಮ್ಮ ಮನೆಯಲ್ಲಿ ಸಂಜೆಗೆ ಪತ್ರಿಕೆ ಬಂದು ತಲುಪುವುದಿತ್ತು. ತಮ್ಮ ತಂಗಿಯರು ಮನೆಗೆ ಬರುತ್ತಿದ್ದ ಪತ್ರಿಕೆಗಳನ್ನುಎಲ್ಲರೂ ಕಾದು ಓದುತ್ತಿದ್ದೆವಾದ್ದರಿಂದ ನಾಮುಂದು ತಾಮುಂದು ಎಂದು ಸ್ಪರ್ಧೆ ನಡೆಯುತ್ತಿತ್ತು. ಆಗ ನಮ್ಮ ಮನೆಯಲ್ಲಿ ಇದ್ದ ಇಬ್ಬರು ಅಜ್ಜಿಯರಲ್ಲಿ (ದುಗ್ಗಮ್ಮ ಪರಮಮ್ಮ) ಒಬ್ಬರಿಗೆ ಓದಲು ಬರುತ್ತಿತ್ತು ಆಸಕ್ತಿಯೂ ಇತ್ತು. ಬಿಡುವಿನ ವೇಳೆಯನ್ನು ಓದುವುದರಲ್ಲಿಯೇ ಕಳೆಯುತ್ತಿದ್ದರು. ಇನ್ನೊಬ್ಬ ಅಜ್ಜಿಗೆ ಓದಲು ಬರುತ್ತಿರಲಿಲ್ಲ ಆದರೆ ನಾವು ಓದಿದ ಎಲ್ಲ ಕತೆಗಳನ್ನು ಕಾದಂಬರಿಯನ್ನೂ ಸಹ ಅವರಿಗೆ ಓದಿ ಹೇಳಬೇಕಿತ್ತು. ನಮಗೆ ಆಡಲು ಹೋಗಬೇಕಿದ್ದ ಸಮಯದಲ್ಲಿ ಏನಾದರೂ ಓದಲು ಹೇಳಿದರೆ ನಾವು ಯಾವ ಪರಿ ಸ್ಪೀಡಿನಿಂದ ಓದುತ್ತಿದ್ದೆ ವೆಂದರೆ ‘ಥೋ ಈ ನಮನಿ ಗಾಡಿ ಓಡಿಸಿದರೆ ಪಲ್ಟಿಯಾಗುವದೇಯ. ಹೋಗು ಹೋಗು ಆಡಿಕೊ’ ಎಂದು ಹುಸಿ ಗದರಿಕೆಯಲ್ಲಿ ನಮ್ಮನ್ನು ಅಟ್ಟುತ್ತಿದ್ದರು.

ನಾವ್ಯಾರೂ ಸಿಗದಿದ್ದಾಗ ರಾತ್ರಿ ಕೆಲಸವೆಲ್ಲ ಮುಗಿದ ಮೇಲೆ ಚೂರು ಸುಣ್ಣದೊಂದಿಗೆ ಎಲೆ ಅಡಿಕೆ ಬಾಯಿಗೆ ಹಾಕಿಕೊಂಡು, ಒಂದು ಅಜ್ಜಿ ಇನ್ನೊಂದು ಅಜ್ಜಿಗೆ ಪುಸ್ತಕ ಓದಿ ಹೇಳುವುದು ತುಂಬಾ ಹೊತ್ತಿನ ತನಕ ಕೇಳಿ ಬರುತ್ತಿತ್ತು. ಮೊದಮೊದಲು ರಾಗವಾಗಿ ಕೇಳಿಬರುತ್ತಿದ್ದ ಓದುವಿಕೆ ಕ್ರಮೇಣ ನಿದ್ದೆ ಸ್ವಲ್ಪ ತೂಗಿ ತೂಗಿ ಮಲಗಿಸುವ ಧಾಟಿಗೆ ಹೊರಳಿಬಿಡುತ್ತಿತ್ತು. ಮಧ್ಯಾಹ್ನದ ಊಟ ಮುಗಿದ ನಂತರವೂ ಇವರ ಪೇಪರ್ ಓದುವ ಆಟ ತುಂಬಾ ಸ್ವಾರಸ್ಯಕರವಾಗಿ ನಡೆಯುತ್ತಿತ್ತು. ತಮ್ಮನ್ನು ಯಾರೂ ಗಮನಿಸುತ್ತಿಲ್ಲ ಎಂದು ಭಾವಿಸಿಕೊಂಡ ಪರಮಮ್ಮ ದುಗ್ಗಮ್ಮನನ್ನು ಕರೆದು ‘ಬಾರೇ ಇಲ್ಲಿ ಶಾಸ್ತ್ರಿಯವರಿಗೆ ಮದ್ದು ಹಾಕಿ ಕೊಂದಿದ್ದಾರಂತೆ. ಪಾಪ ಈ ಕೆಲಸ ಗೊತ್ತೇ ಇರದ ನಾವು ಇವತ್ತಿಡೀ ಉಂಡು ತಿಂದು ತೇಗಿದ್ದೇವೆ. ವಾರಕ್ಕೊಂದು ದಿನ ಉಪವಾಸ ಮಾಡಿ ಎಂದವನು ಈ ಪುಣ್ಯಾತ್ಮ ಅಲ್ಲವೇನೆ? ಈ ಪುಣ್ಯ ಜೀವಿಯನ್ನು ಕೊಂದವರಿಗೆ ನರಕ ತಪ್ಪದು’ ಎಂದು ದುಃಖದಿಂದ ಪತ್ರಿಕೆ ಓದುತ್ತಿದ್ದುದು ಲಾಲ್ ಬಹದ್ದೂರ್ ಶಾಸ್ತ್ರಿ ಸತ್ತ ದಿನ ನಮ್ಮ ಮನೆಯಲ್ಲಿ ನಡೆದಿತ್ತು. ಹಾಗೆಯೇ ಸುದ್ದಿ ಸ್ವಾರಸ್ಯದಡಿಯಲ್ಲಿ ಪ್ರಕಟವಾಗುತ್ತಿದ್ದ ಅನೇಕ ಸುದ್ದಿಗಳನ್ನು ಓದಿ ಹೇಳುತ್ತಿದ್ದ ಅಜ್ಜಿ ಗಂಟೆಗಟ್ಟಲೆ ನಗುತ್ತಿದ್ದುದು ಇನ್ನೂ ಕಿವಿಯಲ್ಲಿದೆ. ಗಂಡ ಗೊರೆಯುತ್ತಾನೆಂದು ತಲಾಖ್ ಕೊಟ್ಟ ವಿದೇಶೀ ಹೆಂಗಸಿನ ಸುದ್ದಿ ಅವರಿಗೆ ತುಂಬಾ ದೊಡ್ಡ ಸುದ್ದಿಯಾಗಿತ್ತು. ಪಾಪ ತಮ್ಮ ತಮ್ಮ ಗಂಡಂದಿರಿಂದ ಯಾವ್ಯಾವ ಕೋಟಲೆಗಳನ್ನು ಅನುಭವಿಸಿದ ಅಜ್ಜಿಯರೋ ಇವರು. ತಮ್ಮ ವೈಯಕ್ತಿಕ ಬದುಕಿನ ಚೂರು ದುಃಖವನ್ನು ಸಹ ಹೇಳಿಕೊಂಡವರಲ್ಲ. ಕೇವಲ ತಮ್ಮ ಎದುರಿರುವ ವಾಸ್ತವದಲ್ಲಿ ಮಾತ್ರ ಬದುಕುವುದು ಹೇಗೆ ಎಂಬುದನ್ನು ಇವರನ್ನು ನೋಡಿ ಕಲಿಯಬಹುದಿತ್ತು.
ಇಂದು ಯಾರ ಮನೆಯಲ್ಲೂ ಈ ಬಗೆಯ ಅಜ್ಜಿಯರು ಕಾಣಬರುತ್ತಿಲ್ಲ. ಬಾಣಂತಿಗಳು ಸಹ ಅಪರೂಪವಾಗಿದ್ದಾರೆ. ಅಲ್ಲಲ್ಲಿ ಸಿಸೇರಿಯನ್ ಶಿಶುಗಳು ತೊಟ್ಟಿಲು ತುಂಬುತ್ತವೆ ಯಾದರೂ ಅವರ ಬಾಣಂತನ ಎಂಬುದು ಕುಟುಂಬದ ಸಂಭ್ರಮವಾಗಿ ಉಳಿದಿಲ್ಲ. ಆಸ್ಪತ್ರೆ ವಾಸದ ಖರ್ಚಿನ ಬಾಬ್ತುಗಳಾಗಿ ಪರಿಗಣಿಸಲ್ಪಟ್ಟಿವೆ. ಅನಾಥರಿಗೆ ನೆರವು ನೀಡುವ ಕುಟುಂಬಗಳು ಕಡಿಮೆಯಾಗಿ ಅನಾಥಾಶ್ರಮಗಳಿಗೆ ಕಳಿಸಲ್ಪಡುತ್ತಿರುವ ಹಿರಿಯರ ಸಂಖ್ಯೆಯನ್ನು ನೋಡಿದಾಗ ಕರುಳು ಕಿತ್ತು ಬರುತ್ತದೆ. ಕಾಲಾಯ ತಸ್ಮೈ ನಮಃ ಎಂದು ಕೈ ಮುಗಿಯುವುದು ಮಾತ್ರ ನಾವು ಮಾಡಬಹುದಾದ ಪ್ರತಿಕ್ರಿಯೆ ಎಂಬಂತಾಗಿ ಹೋಗಿದೆ.
| ಇನ್ನು ಮುಂದಿನ ವಾರಕ್ಕೆ |






0 Comments