ಇದು ಎಂ.ಎಸ್ ಆಶಾದೇವಿಯವರು ಕಿ.ರಂ ಸರ್ ಅವರನ್ನು “ಏನ್ಸಾರ್ ಇವತ್ತು ಸಾಯಂಕಾಲ ಅಕ್ಕಮಹಾದೇವಿಯ ಜೊತೆ ವಾಕಿಂಗ್ ಹೋಗಿದ್ದೆ ಅಂತ ಹೇಳಿದ್ರಲ್ಲ,ಹೀಗೆ ವಾಕಿಂಗ್ ಊಟದ ಹೊತ್ತಿನಲ್ಲಿ ನಿಮಗೆ ಕವಿಗಳು ಭೇಟಿಯಾಗ್ತಾನೆ ಇರ್ತಾರಲ್ಲ” ಎಂಬ ಪ್ರಶ್ನೆಗೆ ಕಿ.ರಂ ಕೊಟ್ಟ ಉತ್ತರ.
-ಹೆಚ್.ಎಸ್. ರೇಣುಕಾರಾಧ್ಯ

ಭಾಷಾ ಶರೀರದಾಚೆಗೂ ನನಗೆ
ಕಾವ್ಯದ ಅಸ್ತಿತ್ವವಿದೆ -ಕಿ. ರಂ.ನಾಗರಾಜ
..ನಾನು ಅಕ್ಕನನ್ನು ಗ್ರಹಿಸಿಕೊಳ್ಳೋದೆ ಹೀಗೆ. ಅವಳು ನನ್ನ ಪರಮ ಸ್ನೇಹಿತೆ. ಕವಿಗಳು ನನಗೆ ಜೀವಂತಗೊಳ್ಳೋದು ಈ ಬಗೆಯಲ್ಲಿ. ಸಾಹಿತ್ಯದ ಶೈಕ್ಷಣಿಕವಾದ ಗ್ರಹಿಕೆಯ ವಿಧಾನಗಳನ್ನು ಮೀರೊದು ನನಗೆ ಇದರಿಂದ ಸಾಧ್ಯವಾಗಿದೆ.
ಯಾವ ಒಳ್ಳೆಯ ಕವಿಯೂ ನನಗೆ past ಅಲ್ಲ. ಅವರೆಲ್ಲರೂ ನನಗೆ ಜೀವಂತವೆ, ನನ್ನೆದುರಿಗೆ ಇರುವವರು. ನಾನು ಅವರ ಜೊತೆ ಸಂವಾದ ನಡೆಸ್ತಾ ಇದ್ದೀನಿ. ಭಾಷಾಶರೀರದಾಚೆಗೂ ನನಗೆ ಕಾವ್ಯದ ಅಸ್ತಿತ್ವವಿದೆ. ಕಾವ್ಯದ ಮೂಲಕ ಕವಿ ಬದುಕಿನ ಒಂದು ಭಾಗವನ್ನು ನಮಗಾಗಿ ತೆರೆದಿರ್ತಾನೆ.
ಪ್ರಾಣದ ಕೆಚ್ಚನು ಕೆತ್ತಿ ಹೊಮ್ಮಿಸಿದೆ
ಲೀಲೆಯಲಿ ತೂರಿ ಅನಾಯಸ
ಅಂತ ಬೇಂದ್ರೆ ಹೇಳೋದು ನನಗೆ ಅಕ್ಷರಶಃ ನಿಜ.
ನನಗೆ ವಿದ್ಯಾರ್ಥಿ ಸಮುದಾಯದಲ್ಲಿ ಕಾವ್ಯಾಭಿರುಚಿಯನ್ನು ಮೂಡಿಸಲು ಈ ದಾರಿಗಳು ಅಗತ್ಯ. ಕಾವ್ಯ ಅನ್ನೋದು ಕೇವಲ ಒಂದು ಪಠ್ಯವಲ್ಲ. ಕಾವ್ಯದ ಓದು ಜೀವಂತವಾಗಲು, ಆಸಕ್ತಿದಾಯಕವಾಗಲು ಈ ಬಗೆಯ ರೂಪಕ ದಾರಿಗಳು ನೆರವು ನೀಡುತ್ತವೆ. ವಿದ್ಯಾರ್ಥಿಗಳು ಕಾವ್ಯವನ್ನು ಛಿದ್ರಗೊಳಿಸಲಿ, ನನಗೆ ಅದರ ಬಗ್ಗೆ ಚಿಂತೆಯಿಲ್ಲ.
ಆದರೆ ಕಾವ್ಯವನ್ನು ನೇತ್ಯಾತ್ಮಕವಾಗಿ ನೋಡಬಾರದು,ಇತ್ಯಾತ್ಮಕವಾಗಿ ನೋಡೋದಕ್ಕೆ ಸಾಧ್ಯವಾಗುವುದಾದರೆ ಶೈಕ್ಷಣಿಕವಾಗಿ ನಾವು ರೂಪಿಸಿದ ಯಾಂತ್ರಿಕ ಕ್ರಮಗಳನ್ನು ಒಡೆದು ಹೊಸ ದಾರಿಗಳನ್ನು ಹುಡುಕಬೇಕು.




0 Comments