ಡಾ ಮಲ್ಲಿನಾಥ ತಳವಾರ
ಕಲಬುರಗಿ ಎನ್ ವಿ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರು. ಗಜಲ್ ಕ್ಷೇತ್ರದಲ್ಲಿ ಅಧ್ಯಯನ ಮಾಡಿದ್ದಾರೆ. `ಗಾಲಿಬ್ ಸ್ಮೃತಿ’ ಕೃತಿಯು ಗಜಲ್ ಲೋಕದಲ್ಲಿ ಸಂಚಲನ ಉಂಟುಮಾಡಿದೆ.
ಕಲಿಕೆ ನಮ್ಮ ಜೀವಂತಿಕೆಯ ಸಂಕೇತ. ತಿಳಿದಿದೆ ಎನ್ನುವ ಮುಖವಾಡಕ್ಕಿಂತ ತಿಳಿದಿಲ್ಲ ಎನ್ನುವ ಶ್ವೇತ ಮನಸ್ಸು ಇಂದಿಗೂ, ಎಂದೆಂದಿಗೂ ತುಂಬ ಅವಶ್ಯಕ. ಎಲ್ಲ ಬಲ್ಲೆ, ಕಲಿಯುವುದು ಇನ್ನೆನೂ ಉಳಿದಿಲ್ಲ ಎಂಬ ಭಾವ ನಮ್ಮಲ್ಲಿ ಹೆಡೆಯೆತ್ತಿದರೆ ನಮ್ಮ ಜ್ಞಾನದ ಕ್ಷಿತಿಜ ಜಡವಾಗುತ್ತದೆ, ಬದುಕು ಬಡವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಲಿಯುವ ವ್ಯಕ್ತಿ ಊರ್ಧ್ವಮುಖಿಯಾಗಿ ವಿಕಾಸಗೊಳ್ಳುತ್ತಾನೆ. ಇದಕ್ಕೆ ಉತ್ತಮ ಪ್ರಮಾಣಿಕ ಗುರುವಿನ ಅವಶ್ಯಕತೆ ಇದೆ. ಇದರೊಂದಿಗೆ ಶ್ರದ್ಧೆ, ಭಕ್ತಿ ಹಾಗೂ ಸಮರ್ಪಣೆ ಭಾವದ ಶಿಷ್ಯನ ಜರುರಿಯೂ ಇದೆ. ಗುರು ಶಿಷ್ಯನನ್ನು ಪುತ್ರನನ್ನಾಗಿ ಭಾವಿಸುವ, ಶಿಷ್ಯ ಗುರುವನ್ನು ತಂದೆಯಂತೆ ಕಾಣುವ ಮನೋಭಾವವೂ ಬೇಕಾಗಿದೆ. ಇದು ಎಲ್ಲ ರಂಗಗಳಿಗೂ ಅನ್ವಯಿಸುತ್ತದೆ!!
ಭಾಷೆ ಎಂದರೆ ಕೇವಲ ನಾವಾಡುವ ಮಾತುಗಳ ದಿಬ್ಬಣವಲ್ಲ. ಇದೊಂದು ಭಾವನೆಗಳ ಅಭಿವ್ಯಕ್ತಿಗೆ ಹುಟ್ಟಿಕೊಂಡ ಅನುಪಮ ಸಾಧನ!! ಮನುಕುಲದ ಇತಿಹಾಸ, ಸಂಸ್ಕೃತಿ, ಆಚಾರ ವಿಚಾರಗಳನ್ನು ಪ್ರಚುರಪಡಿಸುವ ಭಾಷೆಯ ಮಾನಸಪುತ್ರಿಯೆಂದರೆ ಸರಸ್ವತಿ!! ಈ ಸರಸ್ವತಿಯ ಮೂರ್ತರೂಪದಲ್ಲಿ ಗುರು-ಶಿಷ್ಯ ಪರಂಪರೆ ಉಸಿರಾಡುತ್ತಿದೆ. ಉರ್ದು ಸಾಹಿತ್ಯದಲ್ಲಿ ಇದೊಂದು ಶ್ಲಾಘನೀಯ ಸಂಪ್ರದಾಯ. ಪೂರ್ವದಿಂದ ಈ ಪರಂಪರೆ ಜೀವಂತವಿದೆ. ಇದರಿಂದಾಗಿಯೇ ತರಹೀ ಗಜಲ್ ಜೀವಂತಿಕೆ ಪಡೆದಿದೆ!!
ಸಾಹಿತ್ಯ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಆಪ್ತ ವೈದ್ಯಕೀಯ ಕ್ಷೇತ್ರ. ಅದರಲ್ಲೂ ‘ಗಜಲ್’… ಮನಸ್ಸುಗಳನ್ನು ಬೆಸೆಯುವ ಅನುಪಮ ಮುತ್ತಿನಹಾರ! ಇದಕ್ಕೊಂದು ಉತ್ತಮ ವೇದಿಕೆಯಾದದ್ದು ‘ಮುಶಾಯಿರಾ’…!! ಇದೊಂದು ಕಾವ್ಯಾತ್ಮಕ ವಿಚಾರ ಸಂಕಿರಣ ಹಾಗೂ ಗಜಲ್ ಗೋ ತನ್ನ ವ್ಯಕ್ತಿತ್ವವನ್ನು ಕಳೆದುಕೊಳ್ಳದೆ ಅದನ್ನು ಸಾಮುದಾಯಿಕತೆಯಲ್ಲಿ ಅರ್ಥಪೂರ್ಣವಾಗಿ ಬೆರೆಸುವ ಪ್ರಕ್ರಿಯೆಯಾಗಿದೆ. ಇದು ಗಜಲ್ ಗೋ ಅವರು ತಮ್ಮ ಗಜಲ್ ವಾಚಿಸಲು ಸೇರುವ ನಾಕವಾಗಿದೆ.
ಮುಶಾಯಿರಾ ದಕ್ಷಿಣ ಏಷ್ಯಾ, ಉತ್ತರ ಭಾರತ, ಪಾಕಿಸ್ತಾನ ಮತ್ತು ಡೆಕ್ಕನ್ ಸಂಸ್ಕೃತಿಯ ಭಾಗವಾಗಿದೆ. ಇದು ಮೊಗಲರ ಕಾಲ ೧೭ನೇ ಶತಮಾನದಲ್ಲಿ ಚಿಗುರೊಡೆದು, ೧೮ನೇ ಶತಮಾನದ ಮೊಗಲ್ ಸಾಮ್ರಾಜ್ಯದ ಕೊನೆಯ ದೊರೆ ಬಹದ್ದೂರ್ ಷಹಾ ಜಫರ್ ಕಾಲದಲ್ಲಿ ಸಾಹಿತ್ಯಾಸಕ್ತರ ಸಗ್ಗವಾಗಿ ಪರಿಣಮಿಸಿತು. ಮುಂದೆ ಅದು ಗುರು-ಶಿಷ್ಯ ಪರಂಪರೆಯ ಸಾಂಸ್ಕೃತಿಕ ಪಾಠಶಾಲೆಯಾಗಿ ಉರ್ದು ಬಿರಾದರಿಯಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದೆ. ಬಹು ಪ್ರಸಿದ್ಧ ಕವಿ ‘ಹಾಲಿ’ ಅವರಿಗೆ ‘ಮಿರ್ಜಾ ಗಾಲಿಬ್’ ರವರು ಗುರುವಾಗಿದ್ದರು. ‘ಇಕಬಾಲ್’ ರವರಿಗೆ ‘ದಾಗ್’ ರವರು ಗುರುವಾಗಿದ್ದರು. ಈ ಪರಂಪರೆ ನಮ್ಮ ಕನ್ನಡ ಗಜಲ್ ಗುಲ್ಜಾರ್ ನಲ್ಲಿ ಉದಯಿಸಬೇಕಾಗಿದೆ…!!
ಮುಶಾಯಿರಾ ಭಾವನೆಗಳನ್ನು ಬೆಸೆಯುವ ಸುಂದರ ಸೇತುವೆ. ಅದರಲ್ಲಿ ಮಜಾಹಿಯಾ ಮುಶಾಯಿರಾ, ಹಾಸಿಲ್-ಎ-ಮುಶಾಯಿರಾ ಹಾಗೂ ತರಹೀ ಮುಶಾಯಿರಾ ಎಂಬ ಹಲವು ಪ್ರಕಾರಗಳಿವೆ. ಅದರಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿ, ಪ್ರಸಿದ್ಧಿ ಪಡೆದದ್ದು ಮಾತ್ರ ತರಹೀ ಮುಶಾಯಿರಾ..!! ಈ ತರಹೀ ಮುಶಾಯಿರಾ ಇದುವರೆಗೂ ಬರೀ ಉರ್ದುವಿನ ಆಸ್ತಿಯಾಗಿಯೆ ಉಳಿದಿದೆ. ಹಿಂದಿ, ಉರ್ದುವಿನ ‘ತರಹ’, ‘ಇಸ್ ತರಹ’, ಎಂಬ ಹರ್ಫ್ ಗಳಿಂದ ‘ತರಹೀ’ ಎಂಬ ಶಬ್ದ ಹುಟ್ಟಿದೆ ಎನ್ನಲಾಗುತ್ತಿದೆ. ಕನ್ನಡದಲ್ಲಿ ಇವುಗಳಿಗೆ ಸಂವಾದಿಯಾಗಿ ‘ಇಂತಹ’, ‘ಇದರಂತಹ’, ಎಂಬ ಪದಗಳನ್ನು ಬಳಸಲಾಗುತ್ತದೆ. ಅಂದರೆ ಮಾದರಿಯಾಗಿ ಕೊಡಲ್ಪಡುವ ಮಿಸ್ರಾದಂತಹ ಜಮೀನನ್ನು ಬಳಸಿ ಬರೆಯುವ ಗಜಲ್ ಗಳಿಗೆ ‘ತರಹೀ ಗಜಲ್’ ಎಂದು ಕರೆಯುವರು. !!
ತರಹಿ ಎಂದರೆ ಬಿತ್ತುವುದು ಎಂದರ್ಥ. ಬೇರೆಯವರ ಜಮೀನಿನಲ್ಲಿ ಬೆಳೆಯುವುದು. ಪ್ರಸಿದ್ಧ ಗಜಲ್ ಕಾರರ ಮತ್ಲಾದಲ್ಲಿಯ ಒಂದು ಷೇರ್ ಅಥವಾ ಗಜಲ್ ನ ಯಾವುದಾದರೂ ಒಂದು ಸಾನಿ ಮಿಸ್ರಾವನ್ನು ಆಯ್ಕೆ ಮಾಡಿಕೊಂಡು ಆ ಮೂಲ ಗಜಲ್ ನ ಮೀಟರ್, ಭಾವಕ್ಕೆ ಪೂರಕವಾಗುವಂತೆ ಗಜಲ್ ಮುಂದುವರಿಸಿಕೊಂಡು ಹೋಗುವುದು ಗಜಲ್ ನ ಜೀವಾಳ. ಇಲ್ಲಿ ಮೂಲ ಗಜಲ್ ನ ಕಾಫಿಯಾ, ರದೀಫ್ ಮುಂದುವರಿಯುತ್ತದೆ.
ಮೊದಲೆಲ್ಲ ಈ ತರಹೀ ಗಜಲ್ ಬಹು ಮುಖ್ಯವಾಗಿ ಗಜಲ್ ಗೋಯಿ ಭಾಗವಾಗಿ ಬಳಕೆಯಾಗುತಿತ್ತು. ಅಂದು ಈ ತರಹೀ ಗಜಲ್ ಗಳನ್ನು ಮುಖ್ಯವಾಗಿ ತರಹೀ ಮುಶಾಯಿರಾಗಳ ಸಲುವಾಗಿಯೇ ರಚಿಸಲಾಗುತಿತ್ತು. ಆದರೆ ಮುಶಾಯಿರಾ ನಮ್ಮಲ್ಲಿ ಇನ್ನೂ ಆರಂಭವಾಗದ ಕಾರಣ ಸ್ವತಃ ಆಸಕ್ತ ಗಜಲ್ ಗೋ ತಮ್ಮ ಹಿರಿಯ ಅಥವಾ ಸಮಕಾಲೀನ ಗಜಲ್ ಗೋ ಒಬ್ಬರ ತುಂಬಾ ಇಷ್ಟವಾದ ಮಿಸ್ರಾವನ್ನು ಬಳಸಿ ತಾವೇ ಆ ಜಮೀನಿಗೆ ತಕ್ಕಂತೆ ಗಜಲ್ ರಚಿಸುತ್ತಿದ್ದಾರೆ. ಆದ್ದರಿಂದ ಇದು ತರಹೀ ಮುಶಾಯಿರಾ ಆಗದೆ ಬರೀ ತರಹೀ ಗಜಲ್ ಆಗಿಯೇ ಉಳಿದುಕೊಂಡಿದೆ!!
ತರಹೀ ಗಜಲ್ ತನ್ನದೇ ಆದಂತಹ ಅನುಪಮ ಲಕ್ಷಣಗಳನ್ನು ಹೊಂದಿದೆ. ಇದೊಂದು ಸಕಾರಾತ್ಮಕ ಮನಸ್ಸಿನ ಪ್ರತಿಕ್ರಿಯೆ, ಬೌದ್ಧಿಕ ಕಸರತ್ತಿನ ಕುರುಹು. ತರಹೀ ಗಜಲ್ ಗೋ ಅವರಿಗೆ ಬಹಳಷ್ಟು ಗಜಲ್ ಗಳನ್ನು ಓದುವ ಅವಕಾಶ ದೊರೆಯುತ್ತದೆ. ಇದೊಂದು ಸಂಯಮದ ಮತ್ತು ತಪಸ್ಸಿನ ಗಜಲ್ ಗೋಯಿ. ಉರ್ದುವಿನ ಹಲವಾರು ಸುಖನವರ್ ತರಹೀ ಗಜಲ್ ಗಳನ್ನು ಬರೆದಿದ್ದಾರೆ. ಅವರಲ್ಲಿ ಪ್ರಮುಖರೆಂದರೆ ಮಿರ್ಜಾ ಗಾಲಿಬ್, ಫೈಜ್ ಅಹ್ಮದ್ ಫೈಜ್, ಕೈಫೀ ಅಜ್ಮಿ… ಮುಂತಾದವರು. ಉರ್ದುವಿನಂತೆ ಹಿಂದಿ, ಮರಾಠಿಯಲ್ಲಿಯೂ ತರಹೀ ಗಜಲ್ ಪರಂಪರೆ ಕಾಣಬಹುದಾಗಿದೆ. ಇದರ ಲಕ್ಷಣ, ಸ್ವರೂಪ ಕುರಿತು ಹಲವಾರು ಚರ್ಚೆಗಳು ನಡೆದಿವೆ, ನಡೆಯುತ್ತಿವೆ. ಅವುಗಳಲ್ಲಿ ಕೆಲವೊಂದು…!!
೦೧. ತರಹೀ ಮಿಸ್ರಾದ ಆಯ್ಕೆ :
ಮತ್ಲಾದ ಯಾವ ಮಿಸ್ರಾವನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. (‘ಮತ್ಲಾದ ಊಲಾ ಮಿಸ್ರಾ ಮತ್ತು ಸಾನಿ ಮಿಸ್ರಾಗಳಲ್ಲಿ ಹೆಚ್ಚಾಗಿ ಸಾನಿ ಮಿಸ್ರಾ ಆಯ್ದುಕೊಂಡಿರುವ ಉದಾಹರಣೆಗಳು ಹೆಚ್ಚಾಗಿವೆ’ ಎನ್ನುತ್ತಾರೆ ಗಿರೀಶ್ ಜಕಾಪುರೆಯವರು)
ಅಶಅರ್ ನ ಸಾನಿ ಮಿಸ್ರಾವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬಹುದು.
ಯಾರ ಮಿಸ್ರಾ, ಯಾವ ಮಿಸ್ರಾ ಎಂಬುದನ್ನು ತರಹೀ ಗಜಲ್ ಬರೆದಂತಹ ಗಜಲ್ ಗೋ ತನ್ನ ಗಜಲ್ ನ ಮೇಲ್ಭಾಗ, ಇಲ್ಲವೇ ಕೆಳಭಾಗದಲ್ಲಿ ನಮೂದಿಸಬೇಕು.
೦೨. ಕಾಫಿಯಾ, ರದೀಫ್ ಆಯ್ಕೆ :
ಆಯ್ಕೆ ಮಾಡಿಕೊಂಡ ಮಿಸ್ರಾದ ಕಾಫಿಯಾ, ಯಥಾವತ್ತಾಗಿ ಅದೇ ರದೀಫ್, ಅದೇ ರವಿ, ಅಲಾಮತ್, ವೃತ್ತ ಮತ್ತು ಅದೇ ಮೀಟರ್ ನ್ನು ಬಳಸಬೇಕು.
ರದೀಫ್ ಅನ್ನು ಬದಲಿಸುವಂತಿಲ್ಲ, ಕಡಿಮೆಗೊಳಿಸುವಂತಿಲ್ಲ ಹಾಗೂ ವಿಸ್ತರಿಸುವಂತೆಯೂ ಇಲ್ಲ.
೦೩. ತರಹೀ ಮಿಸ್ರಾ ಬಳಸುವ ಕುರಿತು :
ಆಯ್ಕೆ ಮಾಡಿಕೊಂಡ ತರಹೀ ಮಿಸ್ರಾವನ್ನು ಮತ್ಲಾದ ಸಾನಿ ಮಿಸ್ರಾವನ್ನಾಗಿ ಬಳಸುವುದೆ ಹೆಚ್ಚು.
ಆಯ್ಕೆ ಮಾಡಿಕೊಂಡ ತರಹೀ ಮಿಸ್ರಾವನ್ನು ಮತ್ಲಾ, ಮಕ್ತಾ ಮತ್ತು ಅಶಅರ್ ನಲ್ಲಿಯೂ ಬಳಸಬಹುದು.
೦೪. ತರಹೀ ಗಜಲ್ ಬರೆಯುವ ಗಜಲ್ ಕಾರರು ತಮ್ಮ ಆಸಕ್ತಿಗನುಗುಣವಾಗಿ ಯಾವ ಗಜಲ್ ನಿಂದಾದರೂ ತರಹೀ ಮಿಸ್ರಾವನ್ನು ಆಯ್ದುಕೊಳ್ಳಬಹುದು.
೦೫. ತರಹೀ ಮಿಸ್ರಾವನ್ನು ದಪ್ಪ ಅಕ್ಷರಗಳಲ್ಲಿ ಬರೆಯಬೇಕು. ಇದು ತರಹೀ ಗಜಲ್ ನ ಬಿರಾದರಿಯಾಗಿದೆ.
೦೬. ಗಜಲ್ ನ ಯಾವುದೋ ಒಂದು ಷೇರ್ ತುಂಬಾ ಇಷ್ಟವಾಯಿತೆಂದು ಅದನ್ನು ಇಡಿಯಾಗಿ ಬಳಸುವಂತಿಲ್ಲ ಎನ್ನಲಾಗುತ್ತಿದೆಯಾದರೂ ಕೆಲವರು ಇಡೀ ಷೇರ್ ಬಳಸಿದ ಉದಾಹರಣೆಗಳೂ ಇವೆ!!
೦೭. ತರಹೀ ಗಜಲ್ ಬರೆಯುವವರು ಇನ್ನಿತರರ ಗಜಲ್ ನ ಮತ್ಲಾದ ಊಲಾ ಮಿಸ್ರಾವನ್ನು ತೆಗೆದುಕೊಂಡು, ತಮ್ಮ ಗಜಲ್ ನಲ್ಲಿಯೂ ಊಲಾ ಮಿಸ್ರಾದ ಸ್ಥಾನದಲ್ಲಿಯೇ ಅದನ್ನು ಬಳಸಿಕೊಂಡು ತರಹೀ ಗಜಲ್ ಬರೆದರೆ ಮುಂದಿನವರೂ ಕೂಡ ಊಲಾ ಮಿಸ್ರಾವನ್ನೇ ಅನುಸರಿಸಿದರೆ ಎಲ್ಲ ಕಡೆಗೂ ಮೂಲ ಗಜಲ್ ಗೋ ಅವರ ಹೆಸರನ್ನು ಉಲ್ಲೇಖಿಸಲಾಗುತ್ತದೆ. ಸಹಜವಾಗಿಯೇ ಅಲ್ಲಿ ಮೂಲ ಗಜಲ್ ಗೋ ಅವರ ಹೆಸರು ಮೂಲೆ ಗುಂಪು ಆಗುವುದಿಲ್ಲ. ಆದರೆ ತರಹೀ ಬರೆಯುವಾಗ ಇತರರ ಗಜಲ್ ನ ಮತ್ಲಾದ ಯಾವುದಾದರೊಂದು ಮಿಸ್ರಾ ಅಥವಾ ಇಡೀ ಗಜಲ್ ನ ಯಾವುದಾದರೂ ಸಾನಿ ಮಿಸ್ರಾ ತೆಗೆದುಕೊಂಡರೆ ಮೂಲ ಗಜಲ್ ಗೋ ಅವರ ಹೆಸರು ಮೂಲೆ ಗುಂಪಾಗುತ್ತದೆ. ನಾವು ತರಹೀಯಾಗಿ ಯಾರ ಮಿಸ್ರಾವನ್ನು ಬಳಸಿರುತ್ತೇವೆಯೋ ಅವರ ಹೆಸರನ್ನು ಉಲ್ಲೇಖಿಸಬೇಕಾಗುತ್ತದೆ..
ಉರ್ದು, ಪಾರ್ಸಿಯಲ್ಲಿ ತರಹೀ ಗಜಲ್ ಪರಂಪರೆಗೆ ಹಲವಾರು ಶತಮಾನಗಳ ಇತಿಹಾಸವಿದೆ. ಹಿಂದಿ, ಮರಾಠಿಯಲ್ಲೂ ಇದರ ಹೆಜ್ಜೆ ಗುರುತುಗಳನ್ನು ಗುರುತಿಸಬಹುದು. ಗಜಲ್ ನ ಅನುವಾದ, ರೂಪಾಂತರ, ಭಾಷಾಂತರ ಚಟುವಟಿಕೆಗಳು ನಡೆದಿವೆ, ನಡೆಯುತ್ತಿವೆಯಾದರೂ ಮೂಲದ ಸ್ವಾದ ಮಾತ್ರ ಗಗನ ಕುಸುಮವಾಗಿಯೇ ಉಳಿದಿದೆ. ಗಜಲ್ ನ ಅನಿವಾರ್ಯ ಅಂಗಗಳಾದ ಕವಾಫಿ, ರದೀಫ್, ರವಿ/ರವೀಶ್, ಅಲಾಮತ್, ಬೆಹರ್, ಜಮೀನ್, ವೃತ್ತ, ಮೀಟರ್… ಇವೆಲ್ಲವನ್ನು ಮೂಲ ಭಾಷೆಯಿಂದ ಇನ್ನೊಂದು ಭಾಷೆಗೆ ತರುವುದು ಅಸಾಧ್ಯವೇ ಸರಿ!!
ಈ ಹಿನ್ನೆಲೆಯಲ್ಲಿ ಗಜಲ್ ನ ಅನುವಾದ ಮೂಲ ಗಜಲ್ ನ ಸರ್ವ ಲಕ್ಷಣಗಳನ್ನು ಹೊಂದಿರುವುದು ಕಷ್ಟ ಎಂಬುದು ಮನವರಿಕೆಯಾಗುತ್ತದೆ. ಈ ಕಾರಣಕ್ಕಾಗಿಯೇ ಅನ್ಯಭಾಷೆಯಿಂದ ಅನುವಾದ ಆಗಿರುವ ಗಜಲ್ ನ ಮಿಸ್ರಾವನ್ನು ತರಹೀ ಗಜಲ್ ಬರೆಯಲು ಆಯ್ಕೆ ಮಾಡಿಕೊಳ್ಳುವುದು ಸೂಕ್ತವಾಗದು ಎನ್ನಲಾಗಿದೆಯಾದರೂ ಕನ್ನಡಕ್ಕೆ ಮೊದಲ ತರಹೀ ಗಜಲ್ ಪರಿಚಯಿಸಿದ ಜಂಬಣ್ಣ ಅಮರಚಿಂತರು ಆಯ್ಕೆ ಮಾಡಿಕೊಂಡದ್ದು ಮಾತ್ರ ತೆಲುಗು ಗಜಲ್ ನ ಒಂದು ಮಿಸ್ರಾ! ಅದು ತೆಲುಗಿನ ಖ್ಯಾತ ಗಜಲ್ ಕಾರ ಡಾ. ಸಿ. ನಾರಾಯಣರೆಡ್ಡಿ ಯವರ ಗಜಲ್ ನ ಕನ್ನಡ ಅನುವಾದ…
‘ಯಾರೇನು ಅಂದರೇನು? ಈ ತಿರುಪೆ ವೇಷ ಭೇಷಿದೆ
ಯಾರು ಮೋಸ ಹೋದರೇನು? ಬಹುರೂಪ ವೇಷ ಭೇಷಿದೆ’
-ಜಂಬಣ್ಣ ಅಮರಚಿಂತ
ಜಂಬಣ್ಣ ಅಮರಚಿಂತರ ನಂತರ ಚಿದಾನಂದ ಸಾಲಿಯವರು ಕೂಡ ಡಾ. ಸಿ. ನಾರಾಯಣರೆಡ್ಡಿ ಯವರ ಗಜಲ್ ನ ಅನುವಾದದ ಷೇರ್ ಆಯ್ಕೆ ಮಾಡಿಕೊಂಡು ತರಹೀ ಗಜಲ್ ಬರೆದಿದ್ದಾರೆ. ಮೂಲ ಕನ್ನಡದ ಮಿಸ್ರಾ ಆಯ್ದುಕೊಂಡು ಶುದ್ಧವಾದ ತರಹೀ ಗಜಲ್ ಬರೆದವರಲ್ಲಿ ಗಿರೀಶ್ ಜಕಾಪುರೆಯವರೆ ಮೊದಲಿಗರು. ಇಂದು ತರಹೀ ಗಜಲ್ ಗಳನ್ನು ಬರೆಯುವ ಗಜಲ್ ಕಾರರ ಸಂಖ್ಯೆ ಅಧಿಕವಾಗುತ್ತಿದೆ. ಆದರೆ ತರಹೀ ಗಜಲ್ ಸಂಕಲನ ಪ್ರಕಟಿಸುವ ಸಾಹಸ ಯಾರೂ ಮಾಡಿಲ್ಲ. ಈ ನೆಲೆಯಲ್ಲಿ ಕನ್ನಡ ಗಜಲ್ ಪರಪಂಚಕ್ಕೆ ಮೊದಲ ತರಹೀ ಗಜಲ್ ಸಂಕಲನ ನೀಡಿರುವ ಶ್ರೇಯಸ್ಸು ಗಿರೀಶ್ ಜಕಾಪುರೆಯವರಿಗೆ ಸಲ್ಲುತ್ತದೆ. ಇವರ ನಂತರ ತರಹೀ ಗಜಲ್ ಸಂಕಲನ ಪ್ರಕಟಿಸಿದವರು ಶ್ರೀಮತಿ ಪ್ರಭಾವತಿ ಎಸ್. ದೇಸಾಯಿಯವರು. ಇವರು ಕನ್ನಡದಲ್ಲಿ ತರಹೀ ಗಜಲ್ ಸಂಕಲನ ಪ್ರಕಟಿಸುತ್ತಿರುವ ಪ್ರಥಮ ಮಹಿಳಾ ಗಜಲ್ ಗೋ!!
ತರಹೀ ಗಜಲ್… ಸೃಜನಶೀಲತೆಯ ದಿಕ್ಸೂಚಿಯೂ ಹೌದು, ಪರಾವಲಂಬನೆಯ ಸಾಂಕೇತಿಕವೂ ಹೌದು. ಪ್ರತಿಭೆಯನ್ನು ಒರೆಗೆ ಹಚ್ಚುವುದರ ಜೊತೆಗೆ ಅಸ್ಮಿತೆಯನ್ನು ಕೊಂಚ ಅಲುಗಾಡಿಸುತ್ತದೆ. ಆದಾಗ್ಯೂ ಪ್ರತಿ ಷೇರ್ ಓದುಗರಿಗೆ ಹೊಸ ಅನುಭವವನ್ನು, ಆಯಾಮವನ್ನು ನೀಡುತ್ತದೆ. ಹಿಂದಿಯ ಖ್ಯಾತ ಗಜಲ್ ಕಾರರಾದ ವೀನಸ್ ಕೇಸರಿಯವರು ‘ತರಹೀ ಮಿಸ್ರಾದಲ್ಲಿ ಕಾಫಿಯಾ, ರದೀಫ್ ನಿರ್ಧರಿಸುವುದು ಮುಖ್ಯ’ ಎನ್ನುತ್ತಾರೆ.
0 ಪ್ರತಿಕ್ರಿಯೆಗಳು