ಜೀವಪರವಾದ ‘ಇಬ್ಬನಿಯ ಕಾವು’ ಮತ್ತು ಆರ್ದ್ರತೆಯ ಅನುಭವ
ಡಾ ಎಸ್ ಬಿ ಜೋಗೂರ್
ಲೇಖನಗಳು
ಲೇಖಕಿ- ಬಾನು ಮುಷ್ತಾಕ್
ಪುಟಗಳು-118 ಬೆಲೆ-90=00 ರೂ.
ಲಡಾಯಿ ಪ್ರಕಾಶನ,ಗದಗ
ಲಡಾಯಿ ಪ್ರಕಾಶನದ ಅಡಿಯಲ್ಲಿ ಹೊರಬಂದ ಲೇಖಕಿ ಬಾನು ಮುಸ್ತಾಕರ ‘ಇಬ್ಬನಿಯ ಕಾವು’ 15 ವಿಭಿನ್ನ ಲೇಖನಗಳ ಸಂಪದ. ಇಲ್ಲಿರುವ ಬಹುತೇಕ ಲೇಖನಗಳಲ್ಲಿರುವ ಇಬ್ಬನಿಗೆ ಓದುಗನನ್ನು ಬಿಸಿಯಾಗಿಸುವ ಕಾವಿದೆ. ಬಾನು ಅವರ ಅನುಭವ ಹಾಗೂ ಆಳವಾದ ಗ್ರಹಿಕೆಯ ಮೂಸೆಯಲ್ಲಿ ಇಲ್ಲಿಯ ಬರಹಗಳು ಮೈದಾಳಿದವುಗಳಾಗಿರುವದರಿಂದ ಕಾವಿನ ಜೊತೆಗೆ ಒಂದು ಬಗೆಯ ಆದ್ರ್ರತೆಯ ಗುಣವೂ ಈ ಬರಹಗಳಲ್ಲಿ ಅಂತರ್ಗತವಾಗಿದೆ. ಓದುಗನನ್ನು ಎದುರಲ್ಲಿ ಕುಳ್ಳರಿಸಿಕೊಂಡು ಎಂಪೆಥೆಟಿಕ್ ಸೆನ್ಸ್ ಮೂಲಕ ಆಪ್ತವಾಗಿ ಕತೆ ಹೇಳುವಂತಿದೆ. ಮೊದಲ ಲೇಖನ ಸುರಯ್ಯಾ ಒಂದು ಸಿನೇಮಾ ಕತೆಯಾಗಿದ್ದರೂ ಆಕೆ ಅನೇಕ ಶತಮಾನಗಳ ಮಹಿಳಾ ಶೋಷಣೆಯ ಒಂದು ಪ್ರಾತಿನಿಧಿಕ ರೂಪದಂತಿದ್ದಾಳೆ. ಸಮಷ್ಟಿಯ ಎದುರಲ್ಲಿ ಬಾಯಿ ಸತ್ತವಳಾಗುವ, ಮಾಡಿರದ ತಪ್ಪನ್ನು ಅತ್ಯಂತ ಅಮಾಯಕಳಾಗಿ ಅನುಭವಿಸುವ ವ್ಯಥೆಯನ್ನು ತುಂಬಾ ಮಾನವೀಯ ಕಳಿಕಳಿಯಿಂದ ಲೇಖಕಿ ಚರ್ಚಿಸಿರುವದಿದೆ. ಲೇಖಕಿಯ ಭಾವನೆಗಳ ಭಾರವನ್ನು ಸಹೃದಯಿ ಓದುಗ ಅಷ್ಟೇ ಕಳಕಳಿಯಿಂದ ಅನುಭವಿಸುತ್ತಾ ಸಾಗುವ ಬಹುದೊಡ್ಡ ಗುಣವೇ ಈ ಲೇಖನದ ಗೇಯ ಗುಣ.
ಸುರಯ್ಯಾಳನ್ನು ಕುತ್ತಿಗೆವರೆಗೆ ಹೂತುಹಾಕಿ ಆಕೆಗೆ ಕಲ್ಲೇಟು ಹೊಡೆಯುವಾಗ ಮೊದಲಿನ ಏಟು ತಂದೆಯದು, ಅದು ಗುರಿ ತಪ್ಪುತ್ತದೆ. ಆದರೆ ಆಕೆಯ ಗಂಡನೇಟು ಹಾಗಲ್ಲ. ಅದು ಆಕೆಯ ತಲೆಯಿಂದ ಛಳಾರನೇ ರಕ್ತ ಚಿಮ್ಮಿಸುತ್ತದೆ. ಇಲ್ಲಿ ಸುರಯ್ಯಾಳಿಗೆ ಬೀಳುವ ಕಲ್ಲೇಟುಗಳಿಗಿಂತಲೂ ಭೀಕರವಾದ, ಯಾತನಾಮಯವಾದ ಪೆಟ್ಟುಗಳು ಅಮೂರ್ತವಾಗಿ ವಿಶ್ವದ ಬೇರೆ ಬೇರೆ ಭಾಗದ ಮಹಿಳೆಯರ ಮೇಲೆ ನಿರಂತರವಾಗಿ ಬೀಳುವದಿದೆ. ಅದೇ ವೇಳೆಗೆ ಅತ್ಯಂತ ವಿಷಾದದ ಸಂಗತಿಯೆಂದರೆ ಹಾಶೀಮ್ ನಂತಾ ದುರ್ಬಲ ಪುರುಷರು ಅವಳು ನಿರಪರಾಧಿ ಎನ್ನುವ ವಿಷಯವನ್ನು ಮತ್ತೆ ಮತ್ತೆ ಹೇಳುತ್ತಾ ಹೋಗುತ್ತಾರೆ.

‘ಅಧ್ಯಕ್ಶರ ಭಾಷಣ’ ಎಂಬ ಲೇಖನದಲ್ಲಿ ವ್ಯವಸ್ಥೆಯ ವ್ಯಂಗ್ಯವನ್ನು ಅತ್ಯಂತ ಚೂಪಾಗಿ ತಿವಿಯುತ್ತಲೆ ಬರೆಯುವ ಲೇಖಕಿ, ಸಾಹಿತ್ಯದ ವಲಯದಲ್ಲಿರುವ ಪ್ರಭುತ್ವದ ಹಿಡಿತವನ್ನು ಕುರಿತು ಮಾತನಾಡುತ್ತ ‘ಹತ್ತು ವರ್ಷಗಳ ಹಿಂದೆ ಪ್ರಕಟಿಸಿದ ಒಂದು ಲೇಖನವನ್ನು ಅಥವಾ ಕೃತಿಯನ್ನು ಇಂದು ಪ್ರಕಟಿಸಿದಲ್ಲಿ ವಿವಾದ ಸೃಷ್ಟಿಯಾಗುವ ಸಾಧ್ಯತೆಯಿದೆ. ಇಂದು ಸಾಹಿತ್ಯ ಮತ್ತು ಕಲೆಯ ಸ್ವಯಂ ಘೋಷಿತ ವಿಮರ್ಶಕರಾಗಿ ಎಲ್ಲೆಡೆ ವಿಜ್ರಂಭಿಸುತ್ತಿದ್ದಾರೆ’ ಎನ್ನುವ ಕಟುಸತ್ಯವನ್ನು ಅರುಹುತ್ತಾರೆ. ಸಾಹಿತ್ಯಕ ವಲಯದಲ್ಲಿಯ ಮುಟ್ಟುಗೋಲಿನಂಥಾ ಮನ:ಸ್ಥಿತಿಯನ್ನು ಕುರಿತು ಮಾತನಾಡುತ್ತಾ ‘ಮುಟ್ಟುಗೋಲಿಗೊಳಗಾಗುವ ಸಾಹಿತ್ಯ ಕೃತಿಗಳಲ್ಲಿ ಬಹುಮುಖ್ಯವಾಗಿ ರಾಜಕೀಯದ ಬಗ್ಗೆ ಅರಿವು ಮೂಡಿಸುವ ವಿಡಂಬನಾತ್ಮಕ ಕೃತಿಗಳು ಸೇರಿವೆ ಆವರ್ೆಲ್ ರ ‘1984’ ಎಂಬ ಹೆಸರಿನ ಕಾದಂಬರಿಯನ್ನು ಅವರು ಉಲ್ಲೇಖಿಸುತ್ತಾರೆ.
ಜಾಗತೀಕರಣದ ಏಕಮುಕ ಸಂಸ್ಕೃತಿಯ ಧಾಳಿಯ ಬಗ್ಗೆ ಲೇಖಕಿ ಅತ್ಯಂತ ಸ್ಥಿತಪ್ರಜ್ಞೆಯಿಂದ ಬರೆಯುತ್ತಾರೆ ‘ ಇಂದಿಗೂ ನಾವು ಅಂತರ್ಯದಲ್ಲಿ ಬಹುರೂಪಿ ಸಂಸ್ಕೃತಿಯನ್ನು ಹೃದಯಾಂತರಾಳದಿಂದ ಬಯಸುತ್ತಿದ್ದೇವೆ. ಏಕರೂಪಿ ಸಂಸ್ಕೃತಿಯು ಮನಸ್ಸಿನ ಮೇಲೆ ನಡೆಸುವ ಪರಿಣಾಮವನ್ನು ನೀವು ಅನುಭವಿಸಿಲ್ಲ, ಏಕಮುಖ ಸಂಸ್ಕೃತಿಯನ್ನು ನೀವು ಯಾರೂ ನೋಡಿಲ್ಲ ಹೀಗಾಗಿ ಅದರ ಕಲ್ಪನೆಯೂ ನಿಮಗೆ ಸಾಧ್ಯವಾಗಿಲ್ಲ. ಹೈಬ್ರಿಡ್ ಸಾಂಸ್ಕೃತಿಕ ಹಾವಳಿ ಮತ್ತು ಧಾಳಿಯ ನಡುವೆ ಅಸ್ಮಿತೆಯ ಅನನ್ಯತೆಯನ್ನು ಕಾಪಾಡಿಕೊಳ್ಳುವದು ಕೂಡಾ ದುಸ್ತರವಾಗುತ್ತಿದೆ. ನಾವೀಗ ಸಾಂಸ್ಕೃತಿಕ ಗೊಂದಲಗಳ ಗೂಡಿನಲ್ಲಿದ್ದೇವೆ.
‘ಆವರಣ’ ದ ಬಗ್ಗೆ ಬರೆಯುತ್ತಾ ಇತಿಹಾಸದ ಗೋರಿಗಳನ್ನು ಅಗೆಯುವ, ವಾಸ್ತವಿಕತೆಗೆ ಕಾಲ್ಪನಿಕತೆಯ ವಿಷ ಬೆರೆಸುವ ಕಾರ್ಯ ಮಾಡುವದು ಆತ್ಮದ್ರೋಹವೆಸಗಿದಂತೆ’ ಎಂದು ಪ್ರತಿಕ್ರಿಯಿಸುವ ಜೊತೆಗೆ ‘ಹುಟ್ಟಿನ, ಜಾತಿಯ, ರಕ್ತದ ವಿದ್ಯೆಯ ಮೂಲಕ ತಾನೇ ಸರಿ ಎಂಬ ಶ್ರೇಷ್ಟತೆಯ ಅಹಂಕಾರದೊಂದಿಗೆ ತನ್ನನ್ನು ಬಿಟ್ತರೆ ಉಳಿದವರೆಲ್ಲಾ ಕಾಲಕಸ ಎಂಬ ಅಹಂಕಾರದಿಂದ ಬೀಗುವವರಿಗೆ ಸತ್ಯದ ದರ್ಶನ ಸಾಧ್ಯವೇ..?’ ಎಂಬ ಪ್ರಶ್ನೆಯನ್ನು ಎತ್ತುವ ಮೂಲಕ ಆವರಣ ದ ಹಿಂದಿನ ಮನ:ಸ್ಥಿತಿಯ ಮೇಲೆಯೂ ಫéೋಕಸ್ ಮಾಡಿದ್ದಾರೆ. ‘ಅಪರಾಧ ಮತ್ತು ಶಿಕ್ಷೆ’ ಎಂಬ ಲೇಖನದಲ್ಲಿ ಕೋಲ್ಕತ್ತಾದ ಧನಂಜಯ ಚಟಜರ್ಿ ನೇಣುಗಂಬಕ್ಕೇರಿದಾಗ ತಳಮಳಗೊಂಡ ಲೇಖಕಿ ಜೀವಪರವಾದ ನಿಲುವಿನೊಂದಿಗೆ ‘ ಪ್ರಪಂಚದ ಎಲ್ಲಾ ಗಡಿಯಾರಗಳು 3-55 ಕ್ಕೆ ಸ್ಥಗಿತಗೊಳ್ಳಲಿ’ ಎಂದು ಪ್ರಾಥರ್ಿಸಿಕೊಳ್ಳುವ ಪರಿಯ ಹಿಂದೆ ಮನಕಲಕಿದ ಧಾರುಣ ಘಟನೆಯಿದೆ. ಟಪೋರಿ ಹುಡುಗರ ಮೇಲೆ ಸಿಟ್ಟಿಗೆದ್ದ ಇಷಿಡೊಲಮಾಳನ್ನು ಕುರಿತು ಲೇಖಕಿ ಕೂಲ್ ಆಗು ಎಂದು ಕೇಳಿಕೊಳ್ಳುವಲ್ಲಿಯೂ ಇಬ್ಬನಿಯ ಕಾವಿದೆ, ತೇವಿದೆ. ಹೀಗೆ ಇಡೀ ಸಂಕಲನದಲ್ಲಿ ಎದೆಗಿಳಿಯುವ ತಾಕತ್ತಿರುವ ಬರಹಗಳೇ ಹೆಚ್ಚಿಗಿವೆ. ಒಂದೆರಡು ವ್ಯಕ್ತಿ ಚಿತ್ರಣಗಳಿವೆಯಾದರೂ ಅವು ನಗಣ್ಯ ಎನ್ನುವಂಥವುಗಳಲ್ಲ. ಒಟ್ಟಾರೆ ಇಬ್ಬನಿಯ ಕಾವು ಓದುಗನನ್ನು ಒಂದು ಬಗೆಯ ತೇವದೊಂದಿಗೆ ಆವರಿಸಿಬಿಡುವ ಗುಣ ಹೊಂದಿದೆ. ಜೊತೆಗೆ ಸಮಾಜಶಾಸ್ತ್ರೀಯ ಅಧ್ಯಯನದ ಒಂದು ಭಾಗದಂತಿದೆ.







0 Comments