ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭಾನುವಾರದ ಕಥೆ : ಹೀಗೊಂದು ಶಿಕಾರಿಯ ಕಥೆ

– ಅಜ್ಜಿಮನೆ ಗಣೇಶ್

ಅದು ಅಲ್ಲಿ ಬರೋದಕ್ಕೆ ಕಾರಣಗಳೇ ಇರಲಿಲ್ಲ ಏಕೆಂದರೆ, ಶಿಕಾರಿಪುರದ ಸುತ್ತಮುತ್ತ ಹುಡುಕಿದ್ರೂ ಕಾಡು ಕಾಣಿಸುತ್ತಿರಲಿಲ್ಲ. ಸೊರಬ, ಸಾಗರ, ಶಿವಮೊಗ್ಗ ದಿಕ್ಕಿಗೆ ಅಂಟಿಕೊಂಡ ಪ್ರದೇಶಗಳನ್ನ ಹೊರತು ಪಡಿಸಿ, ಶಿಕಾರಿಪುರದ ಗುಡ್ಡಗಳೆಲ್ಲ, ಬಗರ್ಹುಕುಂನ ಒಕ್ಕಲಾಗಿ ವರ್ಷಗಳೇ ಕಳೆದಿದ್ದವು. ಹೀಗಾಗಿ ಆ ಘಟನೆ ಊರು, ತಾಲ್ಲೂಕು, ಜಿಲ್ಲೆಯನ್ನೂ ಮೀರಿ ಇಡೀ ರಾಜ್ಯದ ಗಮನವನ್ನು ಸೆಳೆದುಕೊಂಡಿತ್ತು. ಟೀವಿಗಳಲ್ಲಂತೂ ಕ್ಷಣಕ್ಷಣಕ್ಕೂ ಬ್ರೇಕಿಂಗ್ ನ್ಯೂಸ್, ಥರಥರದ ಅಪ್ಡೇಟ್. ನಾನಾ ರೀತಿಯ ವಿಶ್ಲೇಷಣೆ.. ಹ್ಯಾಗೆ ಬಂತು? ಯಾಕೆ ಬಂತು? ಬರೋದಕ್ಕೆ ಅಲ್ಲೇನಿದೆ?. ಪೊಲೀಸು ,ಫಾರೆಸ್ಟು , ತಹಸೀಲ್ದಾರ್ರೂ, ಎಸಿ, ಡಿಸಿ ಎಲ್ಲ ಏನ್ ಮಾಡುತ್ತಿದ್ದಾರೆ?, ನಿರೂಪಕಿ ಒಂದೊಂದೇ ಪ್ರಶ್ನೆಗಳನ್ನ ತಾಳಮೇಳವಿಲ್ಲದೆ ಒಂದೇ ಸಮನೆ ಕೇಳುತ್ತಿದ್ದಳು. ಉತ್ತರವಿಲ್ಲದೇ ಉತ್ತರಿಸುತ್ತಿದ್ದರು ರಿಪೋರ್ಟರ್ಗಳು.
ಊರಿಗೇನೋ, ಮೆಟ್ಟಕೊಂಡೈತೆ ಕಂಡ್ಲಾ ಇಲ್ಲದಿದ್ರೆ ಅದ್ಯಾಕೆ ಊರೋಳಗೆ ಬರ್ತಿತ್ತು. ಸದ್ಯ ವಿಷಯ ಗೊತ್ತಾಯ್ತಲ್ಲ ಮಾರಾಯ,! ಇಲ್ಲದಿದ್ರೆ ಅದೇನೇನು ಅನಾಹುತ ಆಗ್ತಿತ್ತೋ ಹುಚ್ಚರಾಯನೇ ಬಲ್ಲ. ಇಂತಹ ಹತ್ತಾರು ಚರ್ಚೆಗಳು, ಈಸೂರಿನ ಮಂದಿಮಹೋದಯರ ಮಧ್ಯೆ ನಡೆಯುತ್ತಿತ್ತು. ವಿಚಾರ ಬಾಯಿಂದ ಬಾಯಿಗೆ ಹರಡಿ ನಾಚಾರವಾಗಿ ಹೋಗಿತ್ತು.
ಬೆಳ್ಳಂಬೆಳಿಗ್ಗೆ ಹರಡಿದ ಸುದ್ದಿ, ಪುಕಾರು ಎದ್ದೂ ಸೂರ್ಯ ನೆತ್ತಿ ಮೇಲೆ ನೆಟ್ಟಗೆ ನಿಲ್ಲೋ ಹೊತ್ತಿಗೆ, ಇಡೀ ಊರೇ ಅಲ್ಲಿ ನೆರೆದಿತ್ತು. ಯಾರ ಮನಸ್ಸಲ್ಲು ಭಯವಿಲ್ಲ. ಯಾಕೆ ಬಂದ್ವಿ? ಇಲ್ಲಿ ನಮ್ಮ ಕೆಲಸವೇನು?, ಗೊತ್ತಿಲ್ಲ? ಮಜಾ ತಗೊಂಡು ಸರ್ಕಾರಿ ಸಿಬ್ಬಂದಿಯನ್ನ ಆಡ್ಕೋಳ್ಳೋತ್ತಿದ್ರೆ , ಮತ್ತೆ ಕೆಲವರು ಓಫನ್ ಥಿಯೇಟರ್ನಲ್ಲಿ ಕಾಸಿಲ್ಲದೇ, ಪಿಚ್ಚರ್ ನೋಡೋಕೆ, ಕಟ್ಟಿದ್ದ ಪಂಚೆ ಸಡಿಲ ಮಾಡ್ಕೊಂಡು ಬೀಡಿ ಸೇದುತ್ತಾ ಕುಂತಿದ್ರು. ಉಚ್ಚೇಲೂ ಮೀನು ಹಿಡಿಯೋ ಒಂದಷ್ಟು ಮಂದಿ ಆದಷ್ಟು ಆಗಲಿ ಅಂತ ಅಲ್ಲೆ ಐಸ್ಕ್ರೀಮ್, ಎಳನೀರು, ಮಂಡಕ್ಕಿ, ಅಂಗಡಿಗಳನ್ನ ತೆರೆದು ವ್ಯಾಪಾರವನ್ನು ಶುರುವಿಟ್ಟಿದ್ರು..
ಯಾರಂದ್ರೆ ಯಾರಿಗೂ ಅಲ್ಲಿ ಘಟನೆಯ ಗಂಭೀರತೆ ಇದ್ದಂತಿರಲಿಲ್ಲ. ಪಾಪ ವಿದಿಯಿಲ್ಲ , ಚೌಡಿ ಬಿಟ್ಟೋರು ಹೆಣಹೊರೋಕಾಗಲ್ಲ ಅಂದ್ರು ಪೊಲೀಸನವ್ರು ಹೊರಲೇ ಬೇಕಲ್ಲ. ಅದೆಲ್ಲಿ ನಿಂತು ಯಾರ್ಯಾರ ಹತ್ತಿರ ಚಿಲ್ಲರೆ ಕಾಸು ಕಿತ್ಕೊ ಬೇಕು ಅಂತ ಸ್ಕೆಚ್ ಹಾಕಿದ್ರೋ ಗೊತ್ತಿಲ್ಲ. ಎಲ್ಲಬಿಟ್ಟು ಜನ್ರನ್ನ ಕಾಯವ ಕೆಲಸಕ್ಕೆ ಬರಬೇಕಾಯಿತು. ಇಲ್ಲೋ ಒಂದುಕಡೆ ಹುಚ್ಚಾಟ ,ಇನ್ನೊಂದು ಕಡೆ ಜೀವದ ಭಯ. ಅನ್ನಂಗಿಲ್ಲ ಅರಗಿಸಿಕೊಳ್ಳುವ ಹಾಗೂ ಇಲ್ಲ.
ಫಾರೆಸ್ಟ್ ನೋರು ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿರಿಲಿಲ್ಲ. ಏನೋ ಆಗೋ ಹೋಗಿದೆ, ಸರಿಮಾಡಿದ್ರಾತು. ಅದನ್ನ ಬಿಟ್ಟು ಇನ್ನೇನು ಮಾಡೋಕಾಗುತ್ತೆ ಅನ್ನೋ ಮನೋಬಾವ ಅವರದ್ದು, ಹೀಗಾಗಿ ಪರುಸೋತ್ತನಲ್ಲಿದ್ವರಂತೆ ಪ್ರತಿಯೊಂದು ಅಳೆದು ತೂಗಿ ಮಾಡುತ್ತಿದ್ರು. ಕೇಳಿದ್ರೆ ಮೇಲಿಂದ ಆರ್ಡರ್ ಬರಬೇಕು. ಮೇಲೆ ಅಂದ್ರೆ ಸ್ಟೇಟೂ ಅಲ್ಲ, ಸೆಂಟ್ರಲ್ ..ಸೆಂಟ್ರಲ್. ಸೆಂಟ್ರಲ್ ಮಿನಿಸ್ಟರ್ ಆರ್ಡರ್ ಕೊಡಬೇಕು..ಆಮೇಲೆ, ನಾವು ಫೀಲ್ಡಿಗಿಳಿಯೋದು.. ಅಲ್ಲಿತಂಕ ಹಿಂಗೆಯಾ ಅಂತಿದ್ರು..
ಇದನ್ನೆಲ್ಲ ಕೇಳ್ತಿದ್ದ ಜನರಿಗೆ ಇದ್ಯಾಕೋ ಕೆಲ ಗಂಟೆಯಲ್ಲೀ ಮುಗಿಯೋ ಪಿಚ್ಚರ್ ತರ ಕಾಣಲಿಲ್ಲ. ಬದಲಾಗಿ ರಾತ್ರಿಯಿಡಿ ನಡೆಯುವ ಯಕ್ಷಗಾನದಂತೆ ಕಂಡಿತು. ಇನ್ನೊಂದು ಮೂರು ದಿಸ ಆದ್ರೂ ತಗೋಬಹುದು ಅಂತ ಬೀಡಿ ಬಸವ ವಾದ ಶುರುವಿಟ್ಟುಕೊಂಡ. ಅಷ್ಟರಲ್ಲಿ ಮತ್ಯಾರೋ ಒಬ್ಬ ಅವರ್ ಕೈಯಲಾಗಿದ್ರೆ ಹೇಳಲಿ ನಾವೆ ಒಂದ್ ಕೈ ನೋಡೊಣ ಅಂದ. ಒಂದ್ ಮಾಡೋಕೋಗಿ ನೂರಾದ್ರೆ ಕಷ್ಟ ,ಬಿಡಪ್ಪ ಹೆಂಗೋ ಬಗೆಹರಿಲಿ, ಹಿಂದಿನಿಂದ ಯಾವುದೋ ಹಿರಿಧ್ವನಿ ಹೇಳಿತು. ಇವರ ಮಧ್ಯ ಒಂದಷ್ಟು ರೈತರು ಹೊಲದಿಂದ ಕಾಲ್ತೇಗಿರಿ, ದಮ್ಮಯ್ಯ ದಕ್ಕಯ್ಯ ಅಂತ ಬೇಡುತ್ತಲೇ ಸುಮ್ಮನೆ ಬೈಯ್ಯುತ್ತಿದ್ರು.
ಅಷ್ಟರಲ್ಲಿ ತೋಟದ ಬಾಳೆ ಸಂಧಿಯಿಂದ ನಿಶ್ಚಬ್ದವನ್ನ ಕೊಲ್ಲುವಂತಹ ಕೀರಲು ದನಿಯೊಂದು ಹೊರಡಿತು. ಮಳೆ ಮನ್ಸೂಚನೆ ನೀಡುವ ಸಿಡಿಲಿನಂತಹ ಆರ್ಭಟ, ವೀಕ್ಷಕವೃಂದದ ಚಟುವಟಿಕೆಗಳಿಗೆ ಬೆಣೆ ಇಟ್ಟಿತ್ತು. ಎಲ್ಲೆಡೆ ಮೌನ.. ಆಂತಕ. ಕುತೂಹಲ ಮುಂದೇನು.?ಅಲ್ಲಿಯವರೆಗೂ ಯಾವುದೋ ಕಾಡು ಚಿರತೆ ತೋಟಕ್ಕೆ ನುಗ್ಗಿ ಬಂದಿದೆ ಅಂತಲೇ ಅಂದುಕೊಂಡಿದ್ದರು. ಆದ್ರೆ ತೋಟದೊಳಿಗಿನ ಕೂಗೂ ಚಿರತೆಯದ್ದಾಗಿರಲಿಲ್ಲ. ಆ ಬಗ್ಗೆ ಜನರಿಗೆ ಅನುಮಾನ ಕಿಂಚಿತ್ತು ಇರಲಿಲ್ಲ. ಅದು ವ್ಯಾಘ್ರದ ಉಗ್ರಸ್ವರವಾಗಿತ್ತು.. ಹೌದು ಹುಲಿ, ಕಾಡಿನ ರಾಜ ಪ್ರತಿಯೊಬ್ಬರೂ ನಿರ್ಧರಿಸಿದ್ದರು..
ದೂರದೂರದ ಕಾಡಿನಲ್ಲಿ ಹೊಂಚುಹಾಕಿ ಬೇಟೆಯನ್ನ ಬಲಿಹಾಕಿದ ಹುಲಿಯ ದಂತಕಥೆಗಳೇನು ಮಲೆನಾಡಿನಲ್ಲಿ ಕಡಿಮೆಯಿರಲಿಲ್ಲ. ಅದನ್ನ ಹೊಡೆದು ಕೈಗೆ ಕಡಗ ಕಟ್ಟಿಸಿಕೊಂಡು ಊರೂರು ಮೆರವಣಿಗೆ ಮಾಡಿಸಿಕೊಂಡ ಸಾಧಕರು ಶಿಕಾರಿಪುರದಲ್ಲಿ ಲೆಕ್ಕವಿಲ್ಲದಷ್ಟಿದ್ರು. ಆದ್ರೆ ಕಾಡಲ್ಲೇ ಕಾಣಸಿಗದ ಸ್ಥಿತಿಯಿರೋ ಈ ಕಾಲದಲ್ಲಿ, ಹುಲಿ ನಾಡಲ್ಲಿ ಏನು ಮಾಡುತ್ತಿದೆ.? ಬೇಟೆ ಅರಸಿ ಬಂತ.?ದಾರಿ ತಪ್ಪಿ ಬಂತ.? ಕಾರಣಗಳು ಸಿಗುತ್ತಿರಲಿಲ್ಲ ಅಥವಾ

ಅಲ್ಲಿದ್ದವರಿಗೆ ಕಾರಣಗಳು ಹೊಳೆದಿರಲಿಲ್ಲ. ಹಾಗಾದ್ರೆ ಮಾಡೋದೇನು.? ಒಬ್ಬೊಬ್ಬರದ್ದೂ ಒಂದೊಂದು ಉಪಾಯ , ಕಾರ್ಯಸಾದುವುಗುವುದು ಮಾತ್ರ ಕಷ್ಟ ಕಷ್ಟ..
ತಲೆಬುಡುಗಳಿಲ್ಲದ ಹತ್ತಾರು ಯೋಚನೆಗಳು ಸಾವಿರಾರು ತಲೆಯಲ್ಲಿ ಓಡಾಡುತ್ತಿರ ಬೇಕಾದ್ರೆ ಶಿವಮೊಗ್ಗದ ವೈಲ್ಸ್ಲೈಫ್ ಡಿಎಫ್ಓ ಹುಲಿಯನ್ನ ಬೇಟೆಯಾಡುವುದು ಹೇಗೆ ಅನ್ನೋದರಲ್ಲಿ ಮಗ್ನರಾಗಿದ್ರು. ಹಾವು, ಉಡ, ಚಿರತೆಗಳನ್ನ ಹಿಡಿಯೋದರಲ್ಲಿ, ಕಾಡಿನಾನೆಯನ್ನ ಖೆಡ್ಡಾಕ್ಕೆ ಬೀಳಿಸಿ ಸಕ್ರೆಬೈಲಿಗೆ ಕಳುಹಿಸಿವುದರಲ್ಲಿ ನಿಸ್ಸೀಮರಾಗಿದ್ದ ಅವರಿಗೆ ಹುಲಿಬೇಟೆ ಹೊಸದಾಗಿತ್ತು. ಅಷ್ಟೇ ಸಾಹಸದ ಕೆಲಸವಾಗಿತ್ತು, ಯಾಮಾರಿದ್ರೆ ಯಾರ ಪ್ರಾಣ ಯಾವಾಗ ಬೇಕಾದ್ರು ಹುಲಿಬಾಯಿಗೆ ಆಹುತಿಯಾಗಬಹುದಿತ್ತು. ಮುಂದಾಗಬಹುದಾದ ಅನುಕೂಲ ,ಪ್ರತಿಕೂಲ ಪರಿಣಾಮಗಳನ್ನ ಊಹಿಸಿಯೇ ಡಿಏಫ್ಓಗೇ ತಲೆ ಸುತ್ತು ಬಂದಿತ್ತು .
ಹೀಗಿರುವಾಗಲೇ ವ್ಯಾಘ್ರ ತನ್ನ ಸಹನೆಯನ್ನ ಕಳೆದುಕೊಂಡಿತ್ತು. ಹಸಿದಿದ್ದರಿಂದ , ಅದರ ಆಕ್ರೋಶಕ್ಕೆ ಏಲ್ಲೆಯೇ ಇರಲಿಲ್ಲ. ಊರ ಹಿಂಡಿನ ಚೀರಾಟ, ಕೂಗಾಟ, ಅದರ ತಾಳ್ಮೆಗೆ ಕೊಳ್ಳಿ ಇಟ್ಟಿತ್ತು. ಸುತ್ತಲು ಜನ ಸುತ್ತುವರೆದಿದ್ದರಿಂದ ತಪ್ಪಿಸಿಕೊಂಡು, ಓಡಿಹೋಗಲು ಹುಲಿಗೆ ಸಾದ್ಯವಿರಲಿಲ್ಲ. ಹೀಗಾಗಿ ಬಾಳೆ ಎಲೆಗಳ ಮರೆಯಲ್ಲಿ ಅವಿತುಕೊಂಡೆ ಮುಂದಿನ ಕಾರ್ಯಾಚರಣೆಗೆ ಹೊಂಚುಹಾಕಿತ್ತು. ಜೊತೆಯಲ್ಲಿಯೇ ಹೆದರಿಸುವ ಉದ್ದೇಶದಿಂದ ಆಗಾಗ ದೊಡ್ಡ ಉಸಿರಿನೊಂದಿಗೆ ಬೀಕರವಾಗಿ ಘರ್ಜಿಸುತ್ತಿತ್ತು. ಅದರ ಸದ್ದಿಗೆ ತೋಟವೇ ನಡುಗಿದಂತಾಗುತ್ತಿತ್ತಾದ್ರೂ , ಜನರು ಗುಂಪಲ್ಲಿ ಬಲವಿದೆ ಅನ್ನೋ ನಂಬಿಕೆ ಮೇಲೆ ಅಲ್ಲಿಂದ ಕಾಲು ಕಿತ್ತಿರಲಿಲ್ಲ..
ಸೂರ್ಯ ಪಡುವಣಕ್ಕೆ ದಿಕ್ಕು ಬದಲಿಸುತ್ತಿದ್ದ. ಸಂಜೆಯಾಗಿ ಕತ್ತಲಾದ್ರೆ ಸಂಭವಿಸುವ ಅಪಾಯದ ಬಗ್ಗೆ ಯಾರಿಗೂ ಅರಿವಿರಲಿಲ್ಲ. ಇದ್ದರೂ ಏನು ಮಾಡುವಂತಿರಲಿಲ್ಲ. ಅಷ್ಟರಲ್ಲಿ ದೊಡ್ಡ ಅಧಿಕಾರಿಗಳು ಅಲ್ಲಿಗೆ ಬಂದು ಗುಸುಗುಸು ಅಂತ ಅದೇನೋ ಹೇಳಿ ಹೋದ್ರು. ಅಲ್ಲಿಯವರೆಗೆ ತಲೆಗೆ ಹುಲಿ ಬಿಡ್ಕೊಂಡು ಇರೋ ಕೂದಲನ್ನೆ ಅಲ್ಲಾಡಿಸುತ್ತಿದ್ದ ಡಿಎಫ್ಓ ಕೊಂಚ ನಿರಾಳರಾದರು. ಅಥವಾ ಮುಖಭಾವ ಹಾಗನಿಸುತ್ತಿತ್ತು. ಸಿಬ್ಬಂದಿಗಳಿಗೆ ಕರೆಕೊಟ್ಟು ಶುರುವಿಟ್ಟುಕೊಂಡ್ರು ಆಪರೇಶನ್ ವ್ಯಾಘ್ರ.
ಮೊದಲೇ ಹಸಿದ ಹುಲಿ, ಜೊತೆಗೆ ಸಿಟ್ಟಿಗೆದ್ದಿತ್ತು, ಸ್ವಲ್ಪ ಎಡವಟ್ಟಾದ್ರೂ ತಿಂದೆ ಬಿಡಬೇಕಂಬ ಹುಂಬತನದ ಹುಲಿಯನ್ನ, ಬಲೆ ಹಾಕಿ ಹಿಡಿಯುವುದಂತೂ ಸಾದ್ಯವೇ ಇರಲಿಲ್ಲ. ಬೋನಿಗೆ ಬೀಳಿಸೋದು ಪ್ಲಾನೇ ಅಲ್ಲವೆಂಬಂತೆ ಕಂಡಿತು. ಖೆಡ್ಡಾ ತೋಡಿ ಬೀಳಿಸೋದು , ಪ್ರಸ್ತುತ ಅಪ್ರಸ್ತುತವಾಗಿತ್ತು. ಮತ್ತೇನು ಮಾಡೋದು ಇರೋದೊಂದೆ ದಾರಿ ಮತ್ತು ಬರಿಸಿ ಹಿಡಿಬೇಕು. ಆದ್ರೆ ಇರೋದು ಮೂರೆ ಅರವಳಿಕೆ ಸಿರೆಂಜು. ಅದಿರಿಲಿ, ಅದನ್ನು ಕೋವಿಯ ನಳಿಕೆಗಿಳಿಸಿ, ಹುಲಿಗೆ ಶೂಟ್ ಮಾಡೋದು ಹೇಗೆ .? ಮಾಡೋರು ಯಾರು.? ಸಿಬ್ಬಂದಿಗಳ ತಲೆಯಲ್ಲಿ ಪ್ರಶ್ನೆಗಳ ಅಲೆಯೇದ್ದಿತ್ತು.
ತೋಟದ ಸುತ್ತ ಬಲೆ ಹಾಕೋದು, ಪ್ರತಿ ಬದಿಯಲ್ಲೂ ಸಿಬ್ಬಂದಿಗಳನ್ನ ಕಾವಲು ನಿಲ್ಲಿಸಿ ಹುಲಿಯ ಚಲನೆ ಗಮನಿಸೋದು. ಪೊಲೀಸ್ ಇಲಾಖೆಯ ಗ್ರಿಲ್ ಜೀಫ್ನಲ್ಲಿ ಸಿಬ್ಬಂಧಿ ಕಳಿಸಿ, ಶೂಟ್ ಮಾಡಿ ಹುಲಿಯನ್ನ ಹಿಡಿಯೋದು. ಏನಾದ್ರೂ ಆಗಲಿ ಅಂತ ಡಿಎಫ್ಓ ಒಂದು ಅಂದಾಜಿನ ನಿರ್ಧಾರಕ್ಕೆ ಬಂದ್ರು. ಅದರಂತೆ ಕಾರ್ಯಾಚರಣೆಗೆ ಇಳಿದ್ರು. ಆದ್ರೆ ಹುಲಿ ಅದಾಗಲೇ ಎಲ್ಲರನ್ನ ಮೀಟಿ, ದೂರ ಓಡುವ ಉಪಾಯ ಹೂಡಿತ್ತು. ಪರಿಣಾಮ ನಡೆಯಬಾರದೆಂದುಕೊಂಡಿದ್ದ ದುರ್ಘಟನೆ ನಡೆದೆ ಹೋಯಿತು.
ಸುಮ್ಮನಿರೋ ಸುಮ್ಮನಿರೋ ಅಂದ್ರೂ, ತಿಕ ಕೆರ್ಕೊಂಡು ಹುಲಿಬಾಯಿಗೆ ಕೋಲು ಹಾಕೋಕೆ ಹೋದ್ರೆ ಬಿಡ್ತದಾ, ಈಗ ಅನುಭವಿಸು ಹುಲಿ ಪಂಜಿಗೆ ಪಕ್ಕೆಲುಬಿನ, ಕಾಲು ಅಂಗುಲ ಮಾಂಸ ಕಿತ್ತಿಸಿಕೊಂಡ ಹುಡುಗನೊಬ್ಬನ ನೋಡಿ ಯಾವೊನೋ ಒಬ್ಬ ಆಡಿಕೋಳ್ಳಿದ್ದ. ನೋವು ಹಾಗು ಭಯದಲ್ಲಿ ನರಳುತ್ತಿದ್ದ ಹುಡುಗನಿಗೆ ಅದ್ಯಾವುದು ನಾಟಲಿಲ್ಲ. ಅಷ್ಟಕ್ಕು ಈ ಘಟನೆಯಲ್ಲಿ ಹುಲಿಯ ತಪ್ಪೇನಿರಲಿಲ್ಲ. ಅದು ಕ್ರಿಯೆಗೆ ಪ್ರತಿಕ್ರಿಯೆ ನೀಡಿತ್ತಷ್ಟೇ, ನಿಜವಾಗಿಯೂ ವಯಸ್ಸಿನ ಬೆದೆಯಲ್ಲಿದ್ದ ಹುಡುಗ ಎನ್ ಆಗುತ್ತೇ ನೋಡುವ, ಇಷ್ಟೊಂದು ಜನ ಇದ್ದಾರಲ್ಲ ಹುಲಿ ಎಂತ ಮಾಡ್ತಾದೆ, ಅಂತ ಕೋಲು ಹಿಡಿದು ಬಾಳೆ ತೋಟದಲ್ಲಿ ಜಗ್ಗುತ್ತಿದ್ದ. ಆದ್ರೆ ವ್ಯಾಘ್ರ ತನ್ನ ಸಮೀಪದಲ್ಲೇ ಇರಬಹುದು ಅನ್ನೋ ಊಹೆ ಕೂಡ ಆತನಿಗಿರಲಿಲ್ಲ. ಧೈರ್ಯ ಪ್ರದರ್ಶಿಸಿ ಕೊಚ್ಚಿಕೊಳ್ಳುವ ಉದ್ದೇಶದಿಂದಲೇ ತೋಟದ ಬಾಳೆ ಸಾಲಿನಲ್ಲಿ ನುಗ್ಗಿದ್ದ. ಅದನ್ನ ಮೌನದಿಂದ ಗಮನಿಸುತ್ತಿದ್ದ ಹುಲಿ ಅಪಾಯವನ್ನ ನಿರೀಕ್ಷಿಸಿ, ಹುಡುಗನ ಎದೆ ನಡುಗುವಂತೆ ಘುರ್ ಎಂದು ಬೆಕ್ಕು ಚೋಟು ಹಾಕುವ ರೀತಿಯಲ್ಲಿ ಮುಂಗಾಲನ್ನ ಬೀಸಿತ್ತು. ಹುಲಿಯ ಏಕಾಯೇಕಿ ರಂಗಪ್ರವೇಶದಿಂದ ಹೆದರಿದ ಹುಡುಗ ಬೆನ್ನು ತಿರುಗಿಸಿ ಓಡಲೆತ್ನಿಸಿದ್ದರಿಂದ, ಬೆನ್ನ ಕೆಳಗಿನ ಭಾಗದ ಹಲ್ಲೆ ಕಿತ್ತುಬಂದಿತ್ತು. ಅದಕ್ಕಿಂತ ಹೆಚ್ಚಾಗಿ ಹುಡುಗನ ಎದೆ ಹಾರ್ಟ್ಫೈಲ್ ಆದವರಂತೆ ಹೊಡೆದುಕೊಳ್ಳುತ್ತಿತ್ತು. ಅವನ ನೋವಿನ ಆರ್ತನಾದಕ್ಕಿಂತ ಎದೆಯಾಳದ ಇಂಜಿನ್ನಲ್ಲಿ ಆಗುತ್ತಿದ್ದ ಸದ್ದು ಜೋರಾಗಿಯೇ ಕೇಳುತ್ತಿತ್ತು. ಸಾವನ್ನ ಎದುರಿನಿಂದ ನೋಡಿ ಹಿಂದಿನಿಂದ ಅನುಭವಿಸಿ ಚೂರೇ ಚೂರು ಪಾರಾಗಿ ಬಂದಿದ್ದ ಹುಡುಗ ಯಾರ ಸಮಾಧಾನಕ್ಕೂ ಬಗ್ಗುತ್ತಿರಲಿಲ್ಲ. ಅವನಿಗೆ ಕಳೆದ ಕ್ಷಣದ ಕೊನೆಯ ಗಳಿಗೆ ಭೀಕರವಾಗಿ ಕಾಡುತ್ತಿತ್ತು. ಕೊನೆಗೆ ಆತನ ಬಾಯಿ ಮುಚ್ಚಿ ಸುತ್ತಮುತ್ತಲಿನ ಜನ ಅವನನ್ನ ಶಿಕಾರಿಪುರದ ಆಸ್ಪತ್ರೆಗೆ ಸಾಗಹಾಕಬೇಕಾಯಿತು..
ಈ ಘಟನೆ ಅರಣ್ಯ ಸಿಬ್ಬಂಧಿಗಳಲ್ಲಿ ಹೊಸ ಆಘಾತ ಸೃಷ್ಟಿಸಿತು. ಹುಲಿ ಸುಮ್ಮನೆ ತೊಂದ್ರೆ ಕೊಡುವುದಿಲ್ಲ, ಇಷ್ಟೊಂದು ಜನರನ್ನ ಕಂಡು ಹೆದರಿ ಅಡಗಿ ಕುಳಿತಿರುವ ವ್ಯಾಘ್ರ , ತಮ್ಮ ಕಾರ್ಯಾಚರಣೆಗೆ ಅಡ್ಡಿ ಮಾಡದೇ ಶರಣಾಗಬಹುದು. ಮೇಲಾಗಿ ಕೂಂಬಿಂಗ್ನಲ್ಲಿ ಅಂತದೇನೂ ದುರ್ಘಟನೆ ನಡಿಲೀಕಿಲ್ಲ. ಚಿರತೆ, ಆನೆ ಹಿಡಿದಂತೆ ಇದನ್ನೂ ಹಿಡಿದು ಬಿಡಬಹುದು ಅಂದುಕೊಂಡಿದ್ರು ಸಿಬ್ಬಂದಿಗಳು. ಆದ್ರೆ, ಹುಡುಗನ ಮೇಲೆ ಹುಲಿ ನಡೆಸಿದ ದಾಳಿ, ನಡೆಯಬಹುದಾದ ಭವಿಷ್ಯದ ಸನ್ನಿವೇಶಗಳನ್ನ ಕಣ್ಣುಕಟ್ಟುವಂತೆ ಅನಾವರಣ ಗೊಳಿಸಿತ್ತು.. ಮೇಲಾಗಿ ಹುಲಿ ಹಿಡಿದ ಅನುಭವ ಯಾರಿಗೂ ಇರಲಿಲ್ಲ ಅನ್ನೋ ವಾಸ್ತವ ಅರಿವಿಗೆ ಬಂದಿತ್ತು. ಹೀಗಾಗಿ ಅಲ್ಲಿಯವರೆಗೂ ಅದೇನ್ ಮಹಾ ಹಿಡಿಯೋಣ ಬಿಡಿ ಅಂತಿದ್ದ ಗಾರ್ಡ್, ವಾಚರ್, ರೇಂಜರ್ಗಳೆಲ್ಲ ಈಗ ನಿಧಾನಕ್ಕೆ ಜನರ ಹಿಂದೆ ಅಡಗಿಕೊಳ್ಳೋಕೆ ಶುರುಮಾಡಿದ್ರು. ಸಿಬ್ಬಂದಿಗಳ ಹಾಗೆ ನುಣುಚಿಕೊಳ್ಳಲು ಅಧಿಕಾರಿಗಳಿಗೆ ಸಾಧ್ಯವಾಗ ಬೇಕಲ್ಲ.. ಇನ್ನೇನು ಕತ್ತಲನ್ನ ಸ್ವಾಗತಿಸಲು ಹವಣಿಸುತ್ತಿದ್ದ ಒಂದೆರಡು ಗಂಟೆಗಳು ಗಡಿಯಾರದ ಮುಳ್ಳುಗಳ ಹಿಂಬಾಲಿಸುತಿತ್ತು. ಪದೇ ಪದೇ ಟೈಮ್ ನೋಡಿಕೊಳ್ಳುತ್ತಿದ್ದ ಡಿಏಫ್ಓ ತಲೆ ಕೆರೆದುಕೊಳ್ಳುತ್ತಿರುವಾಗಲೇ, ತೋಟದ ಇನ್ನೊಂದು ಬದಿಯಲ್ಲಿ ಹೊಯ್ದಾಟ ಕೇಳಿಬಂತು. ಮತ್ತೇಂತ ಆಯ್ತೋ ಅಂತಲೇ ಅತ್ತ ದೌಡಾಯಿಸಿದ್ರು.
ಹುಡುಗನ ಬೆನ್ನಿಗೆ ಪಂಜಿನಿಂದ ಗಾಯಗೊಳಿಸಿದ್ದ ಹುಲಿ ಮತ್ತಷ್ಟು ವ್ಯಘ್ರವಾಗಿತ್ತು. ಅದರ ಸಿಟ್ಟು ಎಷ್ಟರಮಟ್ಟಿಗೆ ಇತ್ತಂದ್ರೆ , ಅವಕಾಶ ಸಿಕ್ಕರೆ ಸಾಲು ನಿಂತ ಜನರ ಹಿಂಡಿನಲ್ಲಿ ನಾಲ್ಕೈದು ಮಂದಿಯನ್ನ ಕೊಂದಾದ್ರೂ ದೂರದ ಕಾಡು ಸೇರಿಕೊಳ್ಳುವ ತವಕದಲ್ಲಿತ್ತು. ಹೀಗಾಗಿ ಅದುವರೆಗೂ ಬಾಳೆಗಿಡ ಮಧ್ಯೆ ಅಡಗಿದ್ದ ಹುಲಿರಾಯ ತೋಟದ ಸುತ್ತ ಕಳ್ಳಹೆಜ್ಜೆ ಹಾಕುತ್ತ ಜಾಗ ಹುಡುಕುತ್ತಿದ್ದ. ತೋಟದ ಒಂದು ಬದಿಯಲ್ಲಿ ಹಾದೂ ಹೋಗಿದ್ದ ಈಸೂರು ರಸ್ತೆಯ ಇನ್ನೊಂದು ಬದಿಯಲ್ಲಿ, ಒಂದಷ್ಟು ಕುರುಚಲು ಬೀಳುಗಳಿದ್ವು. ಸಾಲುಮರಗಳ ನೆರಳಿದ್ದರಿಂದ ಜನ್ರು ಸಹ ಅಲ್ಲಲ್ಲಿ ಗುಂಪು ಗುಂಪಾಗಿ ಕುಳಿತು ಲೈವ್ ಸಿನಿಮಾ ನೋಡ್ತಿದ್ರು. ಹೀಗಾಗಿ ಎದುರಿನ ದಾರಿ ಸ್ಪಷ್ಟವಾಗಿಲ್ಲದಿದ್ರು, ಬಾಳೆ ಮರೆಯಲ್ಲಿ ಅಲ್ಪಸ್ವಲ್ಪ ಕಾಣುತ್ತಿತ್ತು. ಅದನ್ನೆ ಅಡಿಕೆ ಗರಿ ಸಂದಿಯಲ್ಲಿ ನೋಡುತ್ತ ಹುಲಿ ತನ್ನೊಳಗೆ ಉಪಾಯವೊಂದನ್ನ ಹೂಡಿತು.ಮೇಲಾಗಿ ಮರು ಆಲೋಚನೆ ಮಾಡದೇ, ನಾಗಲೋಟದ ನೆಗೆತ ಕಿತ್ತು, ಜನರ ಮಧ್ಯದಿಂದ ಕಾಡಿನತ್ತ ಪರಾರಿಗೆ ಪ್ರಯತ್ನ ನಡೆಸಿಯೇ ಬಿಟ್ಟಿತ್ತು.
ಹುಲಿಯ ಉಪಾಯ ಸರಿಯಿತ್ತಾದ್ರೂ, ತೋಟದ ಬೇಲಿಗೆ ಕಟ್ಟಿದ್ದ ಬಲೆಯನ್ನ ಅದು ಗಮನಿಸಿರಲಿಲ್ಲ ಇಲ್ಲವೇ ನಿರ್ಲಕ್ಷಿಸಿತ್ತು. ಕಾಡು ಸೇರಿಕೊಳ್ಳುವ ತವಕದಲ್ಲಿದ್ದ ಹುಲಿ ಬಲೆ ಬೀಳಲಿಗೆ ಸಿಕ್ಕು ಬೇಲಿ ಪಕ್ಕದಲ್ಲಿದ್ದ ಗುಂಪಿನ ಮೇಲೆ ಬಿತ್ತು. ಜನರ ಉದ್ವೇಗ, ಹುಲಿಯ ಗಾಬರಿಯಿಂದಾಗಿ ಏನು ನಡೆಯಿತು ಅನ್ನೋದೆ ಅಸ್ಪಷ್ಟವಾಯಿತು. ಬಲೆಯ ಬೀಳಿಗೆ ಕಾಲಿನುಗುರು ಸಿಕ್ಕಿಸಿಕೊಂಡು ಹೊರಬಿದ್ದ ಹುಲಿ ಧೈರ್ಯಮಾಡಿದ್ದರೆ ತಪ್ಪಿಸಿಕೊಳ್ಳಬಹುದಿತ್ತು. ಆದ್ರೇ, ಗುಂಪಿನ ಗಲಾಟೆಯಲ್ಲಿ ಗಲಿಬಿಲಿಗೊಂಡ ಹುಲಿ ಎತ್ತ ಹಾರಬೇಕೆಂದು ತಿಳಿಯದೆ ಪುನಃ ತೋಟದೊಳಗೆ ಹಾರಿ ಬಾಳೆಕಂದುಗಳ ನಡುವೇ ಮಾಯವಾಯಿತು.
ಇತ್ತ, ಹುಲಿಯ ಅನೀರಿಕ್ಷಿತ ದಾಳಿಯಿಂದ ಬೆಚ್ಚಿ ದಿಕ್ಕಾಪಾಲಾಗಿ ಓಡಿದ್ದ ಜನ್ರು ಹುಲಿ ಹಾರಿ ತೋಟಕ್ಕೆ ಹಾರಿದ್ದನ್ನ ಕಂಡು, ನಿಟ್ಟಿಸುರು ಬಿಡುತ್ತ ಮತ್ತೆ ಕುಳಿತ ಜಾಗಕ್ಕೆ ಬಂದು, ಆರ್ಪಾರಾದ ಚಪ್ಪಲಿಗಳನ್ನ ಹುಡುಕತೊಡಗಿದ್ರು. ಘಟನೆಯಲ್ಲಿ ಕೇಳಿದ ಆರ್ತನಾದಗಳು ಮತ್ತಷ್ಟು ಗುಂಪು ಅಲ್ಲಿ ಜಮಾಯಿಸುವಂತೆ ಮಾಡಿತ್ತು. ಆಗಲೇ ಗೊತ್ತಾಗಿದ್ದು , ಬಲೆ ಮೀರಿ ಹಾರಿದ ಹುಲಿ ತಿಮ್ಮರಾಯನಿಗೆ ಗಾಯಗೊಳಿಸಿದೆ ಅಂತ.
ಇರೋ ಒಂದೆರಡು ಎಕೆರೆಯಲ್ಲಿ, ಅಲ್ಪಸಲ್ಪ ಭತ್ತ ಬೆಳೆಕೊಂಡು ಆರಾಮಾಗಿದ್ದ ತಿಮ್ಮರಾಯ ಎಲ್ಲರಂತೆ ಸ್ವತಂತ್ರವಾಗಿವ ಹುಲಿಯನ್ನ ಕಣ್ಣಾರೆ ನೋಡುವ ಸಲುವಾಗಿ ಅಲ್ಲಿಗೆ ಬಂದಿದ್ದ. ಅಮ್ಮ ಹೋಗಬೇಡ ಮಗನೆ ಅಂದಿದ್ದಾಳಾದ್ರೂ, ಅದನ್ನ ಕೇಳಿಸಿಕೊಳ್ಳುವ ವಯಸ್ಸು ಅವನದ್ದಾಗಿರಲಿಲ್ಲ, ವ್ಯವದಾನವೂ ಅವನಿಗಿರಲಿಲ್ಲ. ಯಾವುದಕ್ಕೂ ಇರಲಿ ಅನ್ನೋ ಎಚ್ಚರಿಕೆಯ ದೃಷ್ಟಿಯಿಂದ, ಸುರಕ್ಷಿತ ಅಲ್ಲದಿದ್ರೂ, ಅನಿವಾರ್ಯ ಸಂದರ್ಭದಲ್ಲಿ ಕಾಲ್ಕೀಳಬಹುದಾದ ಜಾಗ ಹುಡುಕಿ ಕುಳಿತು ಬೀಡಿ ಹಚ್ಚಿ ಅಕ್ಕಪಕ್ಕದವರೊಂದಿಗೆ ದೇಶಾವರಿ ಮಾತುಗಳನ್ನ ಶುರುವಿಟ್ಟಿದ್ದ. ದುರದೃಷ್ಟವೋ ಅವನ ಹಣೆಬರಹವೋ, ಪರಾರಿ ಪ್ರಯತ್ನದಲ್ಲಿದ ಹುಲಿ ಬಲೆ ಕಂಡಿಗೆ ಸಿಕ್ಕಿ ತಿಮ್ಮನ ಮೇಲೆ ಹಾರಿತ್ತು. ತಪ್ಪಿಸಿಕೊಳ್ಳುವ ಭರದಲ್ಲಿ ತಿಮ್ಮನೂ ಸಾಕಷ್ಟು ಕೊಸರಾಡಿದ್ದ, ಹುಲಿಯು ಹೋಯ್ದಾಡಿತ್ತು. ಪರಿಣಾಮ ತಿಮ್ಮನ ಮೈ ಪೂರ ಹುಲಿಯೂಗುರಿನ ಗಾಯಗಳೆದ್ದವು. ಬಳಬಳ ರಕ್ತ ಸುರಿತ್ತಿದ್ದ ತಿಮ್ಮನ ಕಂಡು ಜನ ಸತ್ತೆ ಹೋಗಿರಬೇಕು ಅಂದುಕೊಂಡಿದ್ರು. ನರಳಾಡುತ್ತಿದ್ದ ಆತನ ಕೈಕಾಲುಗಳು ಜೀವಂತಿಕೆಯನ್ನ ಸೂಚಿಸುತ್ತಿತ್ತು. ತಕ್ಷಣ ಆತನನ್ನ ಥೇಟು ಹೆಣಹೊರುವಂತೆ ಹೊತ್ತು ಸಾಗಿಸಿ ಹುಡುಗನ ಘಟನೆಯಿಂದ ಎಚ್ಚೆತ್ತುಕೊಂಡು ಬಂದಿದ್ದ ಅಂಬುಲೆನ್ಸ್ಗೆ ಹಾಕಿದ್ರು..
ಈ ಘಟನೆ, ಜನರ ತಾಳ್ಮೆಗೆ ಕೊಳ್ಳಿ ಇಟ್ಟಿತ್ತು. ಅರಣ್ಯಇಲಾಖೆ ವಿರುದ್ದ ದಿಕ್ಕಾರದ ಘೋಷಣೆ ಕೇಳಿಬಂತು. ರೊಚ್ಚಿಗೆದ್ದು ಫಾರಸ್ಟೇನೋರ ಮೇಲೆ ಏಗಿ ಹೋದ್ರು ಜನ್ರು. ಸಿಬ್ಬಂದಿಗಳ ಸಮಾಧಾನಕ್ಕೆ ಬಗ್ಗದ ಗುಂಪಿನ ಹಿಂದಿನಿಂದ ಕಲ್ಲುಗಳು ತೂರಿ ಬಂದ್ವು. ಪೊಲೀಸನವರು ಇಲ್ಲಿದಿದ್ರೆ ಫಾರೆಸ್ಟನೋರ ತಿಥಿಯಾಗುತ್ತಿತ್ತಂತೆ ಕಾಣುತ್ತೆ. ಆದ್ರೆ ಜನ ಕಾಯಲು ಬಂದಿದ್ದ ಪೊಲೀಸ್ರು ಹುಲಿಹಿಡಿಯುಲು ಬಂದೋರ ಜೀವ ಕಾಪಾಡಿದ್ರು. ಸುತ್ತಲು ನೆರದಿದ್ದ ಜನರಿಗೆ ಲಾಠಿಯ ಪೆಟ್ಟುಕೊಟ್ಟು ಓಡಿಸಿದ್ರು. ಹುಲಿಯ ಆರ್ಭಟ ,ಪೊಲೀಸ್ರರ ಲಾಠಿ, ಜನರ ಸಹನೆಯನ್ನ ಅಸಹನೆಯಾಗಿಸಿ ಬೇಕಾಬಿಟ್ಟಿ ಹರಿಯುವಂತೆ ಮಾಡಿತು. ಎಲ್ಲೆಲ್ಲಂದಿಲೋ ಕಲ್ಲುಗಳು ತೂರಿ ಬಂದವು. ಮೆಟ್ಟುಗಳು ಗಾಳಿಯಲ್ಲಿ ಹಾರಾಡಿದವು. ಏನು ನಡೆಯುತ್ತಿದೆ, ಹುಲಿ ಏನು ಮಾಡುತ್ತಿದೆ ಯಾರ ಅರಿವಿಗೂ ಬರಲಿಲ್ಲ. ಕಲ್ಲು ಬೀಳದಂತೆ ತಲೆಯನ್ನ ಕೈಯಿಂದ ಮುಚ್ಚಿಕೊಳ್ಳತ್ತಿದ್ದವರೇ ಹೆಚ್ಚಾಗಿದ್ರು..
ಸನ್ನಿಗೊಳಗಾಗಿ ಸಿಕ್ಕಲ್ಲೆಲ್ಲ ಚದುರುತ್ತಿದ್ದ ಗುಂಪಿನಿಂದಾಗಿ ತೋಟದ ಸುತ್ತಮುತ್ತವಿದ್ದ ಗದ್ದೆಗಳೆಲೆಲ್ಲ ಧೂಳೆದ್ದಿತ್ತು. ಅಲ್ಲದೆ ಅರಪಾವಿನ ಕಾಸಿಗೆ ಹಾಕಿದ್ದ ಉದ್ದು, ಹುರಳಿಗಳೆಲ್ಲ ಕಾಲ್ತುಳಿತದಡಿಯಲ್ಲಿ ಪಾತಾಳ ಸೇರಿದ್ದವು. ಒಟ್ಟಾರೆ ಇಡಿ ದೃಶ್ಯ ಯಾವುದೋ ಕೋಮುಗಲಭೆಯನ್ನ ನೆನಪಿಸಿತ್ತು . ಗುಂಪಿನ ಗದ್ದಲ ತಪ್ಪಿಸಿ, ಪರಿಸ್ಥಿತಿಯನ್ನ ಕೈ ತೆಗೆದುಕೊಳ್ಳುವಲ್ಲಿ ಪೊಲೀಸರಿಗೆ ಯಶಸ್ಸು ಸಿಕ್ಕಿತಾದ್ರೂ , ಅದರ ಮುಂದಿನ ಯಾವ ಕಾರ್ಯಾಚರಣೆಗೂ ಅವರಲ್ಲಿ ಶಕ್ತಿ ಉಳಿದಿರಲಿಲ್ಲ. ಅಧಿಕಾರಿಗಳಿಲ್ಲಿ ಬರಿ ಮೂಕಪ್ರೇಕ್ಷಕರು. ಯಾಕಂದ್ರೆ ಅದನ್ನ ಹೊರತಾಗಿ ಏನೇ ಮಾಡಹೊರಟಿದ್ರೂ ಜನರ ಕೈಯಲ್ಲಿ ಪೆಟ್ಟು ತಿನ್ನಬೇಕಾಗಿತ್ತು. ಈ ಎಲ್ಲಾ ಘಟನೆಗಳು ಹುಲಿಯನ್ನ ಹಿಡಿದೇ ತೀರಬೇಕೆಂಬ ನಿರ್ಧಾರವನ್ನ ಅರಣ್ಯ ಇಲಾಖೆಗೆ ತೆಗೆದುಕೊಳ್ಳುವಂತೆ ಪ್ರೇರಣೆ ನೀಡಿತು.. ಏನಾದರಾಗಲಿ ಹುಲಿ ಹಿಡಿಯೋದೆ ಸೈ ಅಂತ ಮೇಲ್ಪಂಕ್ತಿಯ ಅಧಿಕಾರಿಗಳೆಲ್ಲ ತಮ್ಮೊಳಗೆ ಆದೇಶ ವಿಟ್ಟುಕೊಂಡರು.

ಈ ಗಲಾಟೆಯಲ್ಲಿ ಹುಲಿ ತೋಟದಲ್ಲೇ ಉಳಿದುಕೊಂಡಿದೆಯಾ..? ಅನ್ನೋ ಪ್ರಶ್ನೆ ಎಲ್ಲರನ್ನ ಕಾಡತೋಡಗಿತು. ಯಾಕಂದ್ರೆ ಸಿಕ್ಕಿದ ಅವಕಾಶ ಬಳಸಿ ಯಾವುದೋ ದಿಕ್ಕಿಗೆ ಹುಲಿ ಪರಾರಿಯಾಗಿರಲಿಕ್ಕೂ ಸಾಕು, ಅನ್ನೋದು ಡಿಪಾರ್ಟಮೆಂಟ್ನ ಊಹೆಯಾಗಿತ್ತು. ಹಾಗೇ ಆಗಿದ್ದ್ರೆ ದೊಡ್ಡ ತಲೆನೋವು ತಪ್ಪಿತಂತಾಗುತ್ತೆ. ಯಾವುದಕ್ಕೂ ಒಂದ್ಸಲ ಹುಡುಕಿ ನೋಡೋಣ ಅಂದುಕೊಂಡ್ರು, ಗಾರ್ಡ್ಗಳು. ಇದು ಮತ್ತೊಂದು ತರಹದ ಸಮಸ್ಯೆ ತಂದಿಟ್ಟಿತು. ಹುಲಿ ಇದೆಯೋ ,ಇಲ್ಲವೋ ಹುಡುಕೋದು ಹ್ಯಾಗೆ.? ತೋಟದೊಳಗೆ ಹೋಗೋದ್ಯಾರು.? ಅಂತಹ ಧೈರ್ಯವಂತರು ನಮ್ಮಲ್ಲಿ ಯಾರಿದ್ದಾರೆ.? ಹತ್ತಾರು ಪ್ರಶ್ನೆಗಳು,ನಿರಾಶವಾದಿಯ ಮನದಲ್ಲೇಳುವ ತುಮುಲಗಳಂತೆ ಕಂಡವು. ಅಷ್ಟಕ್ಕೂ ಎಕರೆ ಅಳೆದು ಒಂದೆರಡು ಕುಂಟೆಯಷ್ಟಿದ್ದ ತೋಟದಲ್ಲಿ ಹುಲಿ ಹುಡಕೋದು ಕಷ್ಟವಾಗಿರಲಿಲ್ಲ. ಆದ್ರೆ ಸಾಲು ಸಾಲಾಗಿ ಬೆಳೆದ ಬಾಳೆಯ ದಿಂಡು,ಅದರ ನೆರಳಲ್ಲಿದ್ದ ಅಡಿಕೆ ಸಸಿಗಳು,ಸಂದಿಗುಂದೀಲಿ ಸೊಂಪಾಗಿ ಬೆಳದಿದ್ದ ಹುಲ್ಲು, ಹುಲಿಯ ಇರುವಿಕೆಯನ್ನ ಮರೆಮಾಚಿತ್ತು. ಹೀಗಾಗಿ ಹುಲಿ ಹುಡುಕೋದು ಹಿಡಿಯೋದಕ್ಕಿಂತ ಕಷ್ಟದ ಕೆಲಸವಾಗಿ ತೋರಿತ್ತು..
ಅಷ್ಟರಲ್ಲಿ, ತೂರಿದ ಕಲ್ಲು, ಪೊಲೀಸರ ಲಾಠಿಗೆ ಹೆದರಿ ಮನೆ ಸೇರಿಕೊಂಡಿದ್ದ ಜನರೆಲ್ಲ ಮತ್ತೆ ಎಲೆ ಅಡಿಕೆ ಜಗಿದ ಕೆಂಪಾದ ಹಲ್ಲುಗಳನ್ನ ತೋರುತ್ತ ತೋಟದತ್ತ ಜಮಾಯಿಸಿದ್ರು. ಅವಱರಿಗೂ ಹುಲಿ ಅಲ್ಲೇ ಇದೆ ಅನ್ನೋ ನಂಬಿಕೆ ಇರಲಿಲ್ಲ. ಆದ್ರೆ ಕೊನೆಗೆ ಎಂತ ಆಗುತ್ತೆ ಅಂತ ತಿಳಿದುಕೊಳ್ಳುವ ಕುತೂಹಲ.ಈ ಕಾರಣಕ್ಕೆ ಮತ್ತೆ ಮೊದಲಿನಂತೇ ತೋಟದ ಬೇಲಿ ಕಾಯೋಕೆ ಶುರುಮಾಡಿದ್ರು. ಆದ್ರೆ ಕುತೂಹಲ ತಣಿಯಲಿಲ್ಲ. ಹಿಂಗಾದ್ರೆ, ಹಿಂಗೀಂಗೆ , ಇತರಕ್ಕೆ ಈತರ ಅಂತ ಮಾತನಾಡಿಕೊಳ್ಳುತ್ತಿದ್ದ ಮಂದಿಗೆ ಹುಲಿ ತೋಟದಲ್ಲೆ ಇದೇಯಾ.? ಅನ್ನೋದಕ್ಕೆ ಮಾತ್ರ ಉತ್ತರ ಸಿಗಲ್ಲಿಲ್ಲ.. ಫಾರೆಸ್ಟನೋರು ಇದೇ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದರಿಂದ ಅವರನ್ನ ಕೇಳುವ ಹಾಗಿರಲಿಲ್ಲ. ಸುಮನ್ನಿರೋಕೆ ಕುತೂಹಲ ಬಿಡ್ತಿಲ್ಲ. ಸೇದಿದ ಬೀಡಿಗಿಂತಲೂ, ಶೇಂದಿಯ ಗಮಗಿಂತಲೂ ಹುಲಿಯ ಇರುವಿಕೆಯ ಪ್ರಶ್ನೆಯೇ ಜನರಿಗೆ ಕಿಕ್ ನೀಡುತ್ತಿತ್ತು. ಮುಂದೆ ಈ ಕುತೂಹಲವೇ ಮತ್ತೊಂದು ದುರ್ಘಟನೆಯ ಪೀಠಿಕೆಯಾಯಿತು..
ಬೇಲಿ ಸುತ್ತ ಹಿಂಡು ಹಿಂಡಾಗಿ ನಿಂತಿದ್ದ ಜನ್ರು ಡಿಪಾರ್ಟ್ಮೆಂಟಿಗೂ ಮೊದಲೇ ಹುಲಿ ಹುಡುಕೋದಕ್ಕೆ ಮುಂದಾದ್ರು. ಅದಕ್ಕೆ ಅವರು ಕಂಡುಕೊಂಡ ದಾರಿ, ಕೆಲ ಕ್ಷಣಗಳ ಹಿಂದೆ ಬೀಸಿದ ಕಲ್ಲುಗಳು. ಪೊಲೀಸ್ ಹಾಗು ಫಾರಸ್ಟ್ನೋರ ಮೇಲೆ ಬೀಸಿದ್ದ ಕಲ್ಲುಗಳು ಎಲ್ಲಂದರಲ್ಲಿ ಬಿದ್ದಿದ್ದವು. ಅದನ್ನೇ ಆಯ್ದುಕೊಂಡ ಜನ ತೋಟದತ್ತ ಬೀಸಿ ಏಸೆಯಲು ಶುರುಮಾಡಿದ್ರು. ಒಬ್ಬನ ನೋಡಿ ಇನ್ನೊಬ್ಬ , ಅದನ್ನ ನೋಡಿ ಮತ್ತೊಬ್ಬ, ಮಗದೊಬ್ಬ, ಹೀಗೆ ಬೇಡ ಬೇಡ ಅಂದ್ರೂ ಕೇಳಿಸಿಕೊಳ್ಳದೆ ತೋಟದ ನಾಲ್ಕು ಸುತ್ತಿನಿಂದಲೂ ಕಲ್ಲುಗಳು ತೋಟದೆಡೆಗೆ ತೂರಿ ಬಂದವು. ಅದಷ್ಟು ಕಲ್ಲುಗಳು ಎಲ್ಲಿದ್ದವೋ ಆ ಭಗವಂತನಿಗೆ ಗೊತ್ತಿತ್ತು. ಅದ್ರಿಂದ ಒಂದೇ ಒಂದು ಒಳ್ಳೆ ಕೆಲಸವಾಗಿತ್ತು ,ದುರದೃಷ್ಟ ಅದರ ಸ್ವರೂಪ ಹಾಗೂ ಪರಿಣಾಮಗಳೆರಡು ಭೀಕರವಾಗಿದ್ವು.
ಕಲ್ಲಿನ ಮೊದಲ ಪ್ರವರದಲ್ಲಿ ಜನರೆಲ್ಲಾ ಚದುರಿದಂತೆ, ಹುಲಿ ಕೂಡ ಹೆದರಿ ಅಡಿಕೆ ಬುಡಕ್ಕೆ ಹೊದಿಸಿದ ಕೊಳತ ಹಾಳೆಗಳಡಿಯಲ್ಲಿ ಅಡಗಿ ಕುಳಿತಿತ್ತು. ತಪ್ಪಿಸಿಕೊಳ್ಳುವ ಅವಕಾಶವಿತ್ತಾದ್ರೂ ಹುಲಿ ಶಬ್ದದ ಗುಡುಗಿಗೆ ಅಡಗಿ ಕೊಳೆ ಹಾಳೆಯಿಂದ ಮೇಲೇಳಲೇ ಇಲ್ಲ. ಯಾವಾಗ ತೋಟದ ಮೇಲೆ ಕಲ್ಲಿನ ಮಳೆ ಬೀಳಲು ಶುರುವಾಯಿತು. ಹುಲಿ ಮತ್ತಷ್ಟು ಭಯಬಿತ್ತು. ಬಿದ್ದ ಕಲ್ಲು ತೋಟದಲ್ಲಿ ಸೃಷ್ಟಿಸಿದ ಅಲೆ, ಮೈಮೇಲೆ ಎಗರಿದ ಕಲ್ಲುಗಳು ವ್ಯಾಘ್ರದ ವ್ಯವದಾನವನ್ನೇಲ್ಲಾ ಕಳೆದುಹೋಗುವಂತೆ ಮಾಡಿತ್ತು. ಹೀಗಾಗಿ ಹೆಜ್ಜೆಯ ಜಾಡಿನಲ್ಲಿ ಏನಾದ್ರೂ ಆಗಲಿ ಎಂಬಂತೆ ನಿರ್ಧರಿಸಿದ್ದ ಅದು ಈ ಬಾರಿ ಜನರಿಗೆ ತನ್ನ ಶಕ್ತಿ ತೋರುವ ಮನಸ್ಸುಮಾಡಿತ್ತು. ಬೇಟೆಗಾಗಿಯೇ ದಾಳಿ ಮಾಡುವ ಹೊಂಚು ಹಾಕೀತು. ಅದೇ ಸಮಯದಲ್ಲಿ ತೋಟದಿಂದ ಪ್ರತಿಕ್ರಿಯೆ ಬರದಿದ್ದನ್ನ ನೋಡಿ ಜನರು ಬೇಲಿ ಹತ್ತಿರ ಬರೋದಕ್ಕೆ ಶುರುವಿಟ್ಟರು. ಹತ್ತಿರದಿಂದಲೇ ಕಲ್ಲು ಬೀಸಲು ಅಡಿಯಿಟ್ಟರು. ಇದು ಹುಲಿಯನ್ನ ಇನ್ನಷ್ಟು ರೊಚ್ಚಿಗೆಬ್ಬಿಸಿತು, ಜೊತೆಯಲ್ಲಿ ಮರುಹೋರಾಟ ನಡೆಸಲು ಹುಲಿಯನ್ನ ಪ್ರೇರೇಪಿಸಿತು. ಮುಂಗಾಲು ಚಾಚಿ ಮುಂದಿನ ಬೇಟೆಗೆ ಸಿದ್ದವಾಗಿದ್ದ ಹುಲಿ ಸಮಯ ಕಾಯುಲು ಶುರುಮಾಡಿತು. ಇಂತಹ ಹುಲಿಯನ್ನ ದಾಳಿಗಿಳಿಯುವಂತೆ ಮಾಡಿದ್ದು, ಬೇಲಿ ಮಗ್ಗುಲಿನಿಂದ ಬಂದ ಕಲ್ಲು. ಹತ್ತಿರದಿಂದ ಬೀಸಿ ಒಗೆದ ಕಲ್ಲು ,ನೆತ್ತಿಗೆ ಬಡಿದಿದ್ದರಿಂದ ಹುಲಿ ಕೆರಳಿತು. ಮರುಕ್ಷಣವೇ, ಮುಂದಿನ ಪಂಜನ್ನ ನೆಲಕ್ಕೆ ಒತ್ತಿ ಹಿಡಿದು ಹಾರಿಯೇ ಬಿಟ್ಟಿತು. ಕಲ್ಲೊಗೆದು ಓಟಕೀಳುವ ತರಾತುರಿಯಲ್ಲಿದ್ದ ಮುದಕಪ್ಪನ ಜೀವ ಅನಿರೀಕ್ಷಿತ ಹುಲಿಯ ದಾಳಿಯ ನುಡುವೇಯೇ ಹಾರಿ ಹೋಗಿತ್ತಂತೆ ಕಾಣುತ್ತೆ. ಹುಲಿಯದ್ದೇನಿದ್ದರೂ ಉಗಿರಿನ ಹೊಡೆತದಲ್ಲಿ ರಕ್ತ ಚಿಮ್ಮಿ, ಸಾವಿಗೆ ಕಾರಣವಾಗುವ ಪಾತ್ರವಾಗಿತ್ತು. ಕ್ಷಣ ಮಾತ್ರದಲ್ಲಿ ಘಟನೆ ನಡೆದು ಹೋಯಿತು, ಹುಲಿಯನ್ನ ಲೈವ್ ಆಗಿ ಹಿಡಿಯಬೇಕೆಂದು ಕ್ಯಾಸೆಟ್ ಕಾಲಿ ಮಾಡುತ್ತಿದ್ದ ಕ್ಯಾಮೆರಾ ಮೆನ್ಗಳಿಗೆ ಸಿಕ್ಕ ಮೊದಲ ದೃಶ್ಯ ಹೀಗೆ ರೌದ್ರವಾಗಿ ಸೆರೆಯಾಗಿತ್ತು. ಮುದಕಪ್ಪ ನಡುವಿಗೆ ಹಾರಿ ತೊಡೆ ಬಗೆದ ಹುಲಿ, ಮತ್ತೆ ಹೆದರಿ ತೋಟ ಸೇರಿಕೊಂಡಿತು.
ಮೊದಲೆರಡು ದಾಳಿಗಳು ಹುಲಿ ಬೆದರಿ ಆತ್ಮರಕ್ಷಣೆಗೆ ಮಾಡಿದಾಗಿತ್ತು. ಆದ್ರೆ ಮೂರನೇಯ ಭಾರಿ ಸ್ವತಃ ದಾಳಿಗೆ ಹೊಂಚುಹಾಕಿದ್ದ ಹುಲಿಗೆ ತಾನಾಗೀಯೇ ಬೇಟೆಯಾಗಿದ್ದ ಮುದುಕಪ್ಪ. ಅವನು ಮಾಡಿದ್ದನ್ನ ಸರಿ ಅನ್ನುವವಱರು ಅಲ್ಲಿರಲಿಲ್ಲ. ಅಲ್ಲದೆ ಬೆಳಗಿನ ಘಟನೆಗಳಂತೆ ಮತ್ತೆ ಹೊಯಿಲೆಬ್ಬಿಸಲು ಸಿದ್ದರಿರಲಿಲ್ಲ. ಮತ್ತೊಂದು ಕಡೆ ಹುಲಿ, ಹೆಣ ಬೀಳಿಸಿದ್ರೂ ಸುಮ್ಮನಿದ್ದ ಅರಣ್ಯಇಲಾಖೆಯ ನಡತೆ, ಜನರಲ್ಲಿ ಮೌನ ಹುಟ್ಟಿಸಿತ್ತು. ಕ್ಷಣ ತಪ್ಪಾದ್ರೂ ತಾಳ್ಮೆ ಕಳೆದುಕೊಳ್ಳುವ ಸರ್ಕಾರಿ ಸಿಬ್ಬಂದಿಗಳು ಏನೂ ಬೇಕಾದ್ರೂ ಮಾಡಬಹುದು ಅನ್ನೋ ಅನುಮಾನ ಅವರದ್ದು. ಹೀಗಾಗಿ ಸದ್ದಿಲ್ಲದೆ ಮುದಕಪ್ಪನ ಹೆಣ ಸಾಗಿಸಿದ್ರು, ಕಲ್ಲು ತೂರುವುದು ನಿಂತಿತು. ಹುಲಿ ಹಿಡಿಯೋಕೆ ಸಹಕರಿಸುತ್ತೇವೆ ಅನ್ನುವ ಧ್ವ ನಿಗಳು ಉಲಿದವು. ಇನ್ನೊಂದು ಜೀವ ಹುಲಿ ಬಾಯಿಗೆ ಸಿಕ್ಕಿಸುವ ಸಾಹಸಕ್ಕೆ ಕೈ ಹಾಕದೇ ಎಲ್ಲರೂ ಮೌನ ವೃತ ಆಚರಿಸಿದಂತೆ ಬೇಲಿಯ ಕಾಯುತ್ತ ಹುಲಿ ಹೆಜ್ಜೆ ಎಣಿಸೋಕೆ ಶುರುಮಾಡಿದ್ರು. ಇತ್ತ ಹುಲಿಯ ಇರುವಿಕೆ ಈ ರೀತಿಯಲ್ಲಿ ಖಚಿತ ಪಡಿಸಿಕೊಂಡ ಇಲಾಖೆ , ಕ್ಲೈಮಾಕ್ಸ್ ಕಾರ್ಯಾಚರಣೆಗೆ ಮುಂದಾಯ್ತು. ಮೊದಲೆ ಮಾಡಿದ ಉಪಾಯದಂತೇ, ತ್ಯಾವರೆ ಕೊಪ್ಪದ ಸಿಂಹದಾಮದಲ್ಲಿ ಹುಲಿ ಸಿಂಹಗಳ ಜೊತೆ ಪಳಗಿದ ಸಿಬ್ಬಂದಿಯೊಬ್ಬನ ಕೈಯಲ್ಲಿ ಅರವಳಿಕೆ ಚುಚ್ಚುವ ಮದ್ದು ಕೊಟ್ಟು ಹುಲಿಬೇಟೆಗೆ ಕಳುಹಿಸಿದ್ರು. ಒಲ್ಲದ ಮನಸ್ಸಿದ್ದರು ಮೇಲಾಧಿಕಾರಿಗಳ ಆಜ್ಞೆಯಂತೆ, ತ್ಯಾವರೆ ಕೊಪ್ಪದ ಸೀನ ಕೋವಿ ಹಿಡಿದು ಸನ್ನದ್ಧನಾದ. ಇರೋ ಮೂರು ಇಂಜೆಕ್ಷನ್ನಲ್ಲಿ ಹುಲಿಗೆ ನಿದ್ರೆ ಬರಿಸಬೇಕು, ಬಳಿಕ ಅದನ್ನ ಹೊತ್ತು ಬೋನಿಗೆ ಹಾಕಬೇಕು. ಆಮೇಲೆ ಲಾರಿಯಲ್ಲೋ, ಟ್ರಾಕ್ಟರ್ನಲ್ಲೋ, ಸಾಗಿಸಬೇಕು. ಇದು ಪ್ಲಾನ್ ಆಗಿತ್ತು. ಪ್ಲಾನ್ ಸಕ್ಸಸ್ ಆಗುತ್ತಾ.? ಈ ನಂಬಿಕೆ ಯಾರಲ್ಲೂ ಇರಲಿಲ್ಲ. ಆದ್ರೆ ಕತ್ತಲಿಗೆ ಕಾತರಿಸುತ್ತಿರುವ ಹಗಲು, ಎಲ್ಲೇ ಮೀರಿದ ವ್ಯಾಘ್ರದ ಆರ್ಭಟ. ಪಾರೆಸ್ಟ್ಇಲಾಖೆ ಏನಾದ್ರೂ ಮಾಡಲೇಬೇಕಾಗಿತ್ತು. ತರಾತುರಿಯಲ್ಲಿ ಕಾರ್ಯಾಚರಣೆಗೆ ಇಳಿದಿದ್ರು.
ತೋಟದ ಮಧ್ಯದಲ್ಲಿರೋ ಜಾಗದಲ್ಲಿ ಗ್ರಿಲ್ಗಳಿಂದ ಮುಚ್ಚಿದ ಸುಮೋವೊಂದರಲ್ಲಿ ಡ್ರೈವರ್ ಹಾಗು ತ್ಯಾವರೆಕೊಪ್ಪ ಸೀನಾ ಹೊರಟ್ರು, ಕೈಯಲ್ಲಿ ಸಿರೆಂಜ್ ಲೋಡ್ ಆಗಿದ್ದ ಬಂದೂಕು, ಸಿದ್ಧವಾಗಿತ್ತು. ನೂರು ಹೆಜ್ಜೆ ಸಾಗಿದ್ರೆ ಹುಲಿ ಇರುವಿಕೆ ಪತ್ತೆಯಾಗಬಹುದು. ಅವಕಾಶ ನೋಡ್ಕೊಂಡು ಶೂಟ್ ಮಾಡಬೇಕು. ಮಿಸ್ ಆಗೋ ಹಾಗೆ ಇರಲಿಲ್ಲ. ಆದ್ರೆ ಕಾರ್ಯಾಚರಣೆಗೆ ಎಳ್ಳುನೀರು ಬಿಡಬೇಕಿತ್ತು. ಧೈರ್ಯ ಮಾಡಿ ಸೀನಾ ತೋಟದ ಸಂದಿಯನ್ನೆಲ್ಲಾ ಸುಮೋದೊಳಗಿನಿಂದಲೇ ನೋಡಿದ, ಅವನ ಆದೇಶದಂತೆ ಸುಮೋಚಲಾಯಿಸುತ್ತಿದ್ದ ಡ್ರೈವರ್. ಇನ್ನೇನು ಬೇಲಿ ಅಂಚಿಗೆ ಸುಮೋ ತಲುಪುವ ಹೊತ್ತಿಗೆ ಘುರ್ ಅಂದ ಸದ್ದು ಕೇಳಿತು. ಅಲ್ಲಿಯವರೆಗೂ ತೋಟದ ಬೇಲಿ ಬದಿಗಷ್ಟೆ ದೃಷ್ಟಿ ಹರಿಸಿದ್ದ ಹುಲಿ, ತೋಟದ ಮಧ್ಯದಲ್ಲಿ ಬರುತ್ತಿದ್ದ ಸುಮೋವನ್ನ ತಾನು ಕಾಣದ ಯಾವುದೋ ಪ್ರಾಣಿಯಂತೆ ಕಂಡಿತು ಮತ್ತು ಎಲ್ಲದಕ್ಕೂ ತಯಾರಾಗಿ ಗಡಿಯಲ್ಲಿ ನಿಂತ ಸೈನಿಕನಂತೆ , ಸುಮೋ ಮೇಲೆರಲೂ ಸಿದ್ದವಾಯಿತು. ಇತ್ತ ಎದೆಯಲ್ಲಿ ಡವ ಡವ ಏರುತೀತ್ತಾದ್ರೂ, ಸುಧಾರಿಸಿಕೊಂಡ ಸೀನಾ ಗ್ರಿಲ್ನಡುವೆ ಇರುವ ಚಿಕ್ಕ ಜಾಗದಲ್ಲೇ ನಳಿಕೆ ತೂರಿ ಮೊದಲ ಫೈರ್ ಮಾಡಿಯೇ ಬಿಟ್ಟ.ಕಣ್ಣದೃಷ್ಟಿಯ ಸಮೀಪದಲ್ಲೆ ಹುಲಿ ಇತ್ತಾದರೂ, ಫೈರ್ ಆದ ಸಿರಂಜ್ ಹುಲಿಯ ಸಮೀಪಕ್ಕೂ ತಾಗಲಿಲ್ಲ.
ಸೀನ ತ್ಯಾವರೆ ಕೊಪ್ಪದ ಹುಲಿಗಳಿಗೆ, ಸಿಂಹಗಳಿಗೆ ಊಟ ಹಾಕುತ್ತ. ಅವುಗಳ ಮರಿಗಳನ್ನ ಮಡಿಲಿಟ್ಟುಕೊಂಡು ಹಾಲು ಕುಡಿಸಿ ಬೆಳಸುತ್ತ, ಆಗಾಗ ಮಾತು ಕೇಳದ ಪ್ರಾಣಿಗಳನ್ನ ಬೋನಿನೊಳಗೆ ಕಟ್ಟಿ ಶಿಕ್ಷೆ ಕೊಡುತ್ತ, ನನ್ನ ಹುದ್ದೆ ಪರ್ಮನೆಂಟ್ ಮಾಡಿಸಿಕೊಳ್ಳುವುದಕ್ಕೆ ಹೋರಾಡುತ್ತಿದ್ದವ. ಅಲ್ಲೊಮ್ಮೆ ಇಲ್ಲೊಮ್ಮೆ ಗುರಿಯಿಟ್ಟು ಫೈರ್ ಮಾಡಿದ್ದನಾದ್ರೂ ಅದರಲ್ಲಿ ಪಳಗಿದವನಾಗಿರಲಿಲ್ಲ. ಆದ್ರೆ ಈ ಸನ್ನಿವೇಶದಲ್ಲಿ ಅವನೊಬ್ಬ ಅನುಭವಸ್ಥನಂತಲ್ಲದಿದ್ದರೂ ದೈರ್ಯಶಾಲಿಯಾಗಿ ಅಧಿಕಾರಿಗಳಿಗೆ ಕಂಡಿದ್ದ.
ಮೊದಲ ಫೈರಿಂಗೇ ಮಿಸ್ ಆಗಿದೆ. ಇನ್ನುಳಿದಿರೋದು ಎರಡೇ ಇಂಜಕ್ಷನ್, ಉಳಿದದ್ದು ಮೊದಲಿನಂಗೆ ಆದ್ರೆ ಪರಮ್ನೆಂಟ್ ಅಲ್ಲದ ಕೆಲಸ ಕೂಡ ಶಾಶ್ವತವಾಗಿ ಕಳೆದುಕೊಳ್ಳಬೇಕಾಗುತ್ತೆ ಅನ್ನೊದನ್ನ ತಿಳಿದ ಸೀನಂಗೆ ದಿಗಿಲು ಹತ್ತಿತ್ತು. ಹಂಗಂತ ತಲೆ ಕೆಡಿಸಿಕೊಳ್ಳುವ ಹಾಗಿರಲಿಲ್ಲ, ಹುಲಿಬೇಟೆ ಕ್ಲೈಮಾಕ್ಸ್ನಲ್ಲಿತ್ತು . ಏನಾದ್ರೂ ಅಂತ್ಯ ಕಾಣಲೇ ಬೇಕಿತ್ತು. ಇಂತಹ ಸಂದಿಗ್ದತೆಯನ್ನ ಸೀನ ಎಣಿಸಿಯೇ ಇರಲಿಲ್ಲ. ಇದಕ್ಕು ಮೊದಲು ಅನುಭವಕ್ಕೂ ಬಂದಿರಿಲ್ಲ. ಎನಾದ್ರೂ ಆಗಲಿ ಧೈರ್ಯ ಮಾಡಿ ಎರಡನೇ ಫೈರಿಂಗ್ಗೆ ಅಣಿಯಾದ..
ಈ ಭಾರಿ ಹುಲಿ ಇನ್ನಷ್ಟು ಹುಷಾರಾಗಿತ್ತು ತನಗೇನೋ ಕಾದಿದೆ ಅನ್ನೋ ಅನುಮಾನ ಅದಕ್ಕೂ ಬಂದಿರಬೇಕು. ಹೀಗಾಗಿ ತೋಟದ ಮಧ್ಯೆ ನಿಂತಿದ್ದ ಸುಮೋವನ್ನೇ ದಿಟ್ಟಿಸುತ್ತ ಬಾಳೆದಿಂಡಿನ ಮರೆಯಲ್ಲಿ ಅಡಗಿಕೊಂಡಿತು. ಎದುರಾಗಿ ಕೂತಿದ್ದರಿಂದ ಅರವಳಿಕೆ ಮದ್ದನ್ನ ಶೂಟ್ ಮಾಡೋದು ಕಷ್ಟ , ಸುಮೋ ಹುಲಿಯ ಪಕ್ಕ ತಿರುಗಿಸುವಂತೆ ಡ್ರೈವರ್ಗೆ ಸೂಚಿಸಿದ ಸೀನ. ಅದರಂತೆ , ಸುಮೋವನ್ನ ಕೊಂಚಕ್ಕೆ ಮುಂದಕ್ಕೆ ಸಾಗಿಸಿದ ಡ್ರೈವರ್ ,ಕೊರಕಲು ಹಾದಿಯಲ್ಲಿ, ಹುಲಿ ಬೆನ್ನ ಕಾಣುವಂತಹ ಜಾಗದಲ್ಲಿ ನಿಲ್ಲಿಸಿದ. ಅವಕಾಶ ಸಿಕ್ಕಿತು ಅಂದುಕೊಂಡ ಸೀನ ಮತ್ತದೇ ಗ್ರಿಲ್ ಸಂದೀಲಿ ಶೂಟ್ ಮಾಡಲು ತಯಾರಾದ. ಡ್ರೈವರ್ ಇನ್ನು ಗಾಡಿಯನ್ನ ಸ್ಟಾರ್ಟ್ನಲ್ಲೇ ಇಟ್ಟಿದ್ದ. ಸೀನನ ತಯಾರಿ ನೋಡಿ ಡ್ರೈವರ್ ಗಾಡಿನಿಲ್ಲಿಸೋದಕ್ಕೂ, ಸೀನ ಶೂಟ್ ಮಾಡೋದಕ್ಕೂ ಸರಿಹೋಯ್ತು. ಮತ್ತೆ ಹುಲಿಯತ್ತ ಸಿರಂಜ್ ಹಾರದೆ ಮತ್ತೆಲ್ಲೋ ಹೋಯಿತು..
ಬೇಲಿಯ ಸುತ್ತ ಇದನ್ನೇಲ್ಲ ಮುಗುಮ್ಮಾಗಿ ನೋಡುತ್ತಿದ್ದ ಜನರ ಮನಸ್ಸಲ್ಲಿ ಸಿಟ್ಟು ಹೆಡೆಯೇರಿಸುತಿತ್ತಾದ್ರೂ, ಕತ್ತಲಾದ್ರೆ ಹುಲಿ ಊರ ಮೇಲೆ ದಾಳಿ ಇಡುವ ಸಾದ್ಯತೆಗೆ ಹೆದರಿ ಸುಮ್ಮನಿದ್ರು. ಮತ್ತೊಂದೆಡೆ ಮಿಸ್ಸಾದ ಸಿರಂಜ್ಗಳಿಂದಾಗಿ ಮೇಲಾಧಿಕಾರಿಗಳು ಕುದ್ದು ಹೋದ್ರು. ಆದ್ರೆ ಸೀನ ಕಾರ್ಯಾಚರಣೆ ನಿಲ್ಲಿಸಿದ್ರೆ ಮತ್ಯಾರೂ ಅಲ್ಲಿಗೆ ಹೋಗೋಕೆ ಸಿದ್ದರಿಲ್ಲದ ಕಾರಣ ಸುಮ್ಮನಿದ್ರು. ಇದೀಗ ಇದ್ದುದ್ದೇ ಲಗಾನ್ ಫಿಚ್ಚರ್ನ ಕೊನೆಬಾಲ್ನಂತಹ ಸನ್ನಿವೇಶ..
ಸೀನನಿಗೋ ಖಾತರಿಯಾಗಿತ್ತು. ಮೂರನೆಯದೂ ಗುರಿತಪ್ಪಿ, ಕೆಲಸ ಕೆಳೆದುಕೊಳ್ಳುವುದು ಖಾಯಂ ಅನ್ನೋದನ್ನ ಮನಸ್ಸಿಗೆ ಸಮಾಧಾನ ಹೇಳುವಂತೆ ತನಗೆ ತಾನೆ ಹೇಳಿಕೊಳ್ಳುತ್ತಿದ್ದ. ಅಲ್ಲದೆ ಎರಡನೆಯ ಗುರಿಯಲ್ಲಿ ಹುಲಿಹೊಡೆಯಬಹುದಿತ್ತು. ನಿನ್ನಿಂದಲೇ ಹಾಳಾಯ್ತು ಅಂಥ ಡ್ರೈವರ್ಗೆ ಒಂಚೂರು ಹೆಚ್ಚೇ ದಭಾಯಿಸಿದ.. ಅಲ್ಲಿಯವರೆಗೂ ಸುಮ್ಮನಿದ್ದ ಪಾತ್ರಧಾರಿ ಡ್ರೈವರ್ ಮೆಲ್ಲ ದ್ವನಿ ಎತ್ತಿದ. ಎಂತ ಮಾಡೋದು ಇಲ್ಲಿ ನೆಲನೂ ಡೊಂಕು, ಕುಣಿಯೋರಿಗೂ ಕುಣಿತ ಬರಂಗಿಲ್ಲ. ನನ್ನ ಮೇಲ್ಯಾಕೆ ರೇಗಾಡ್ತಿ ನಾನ್ ಮನಸ್ಸ್ ಮಾಡಿದ್ರೆ ಹುಲಿ ಯಾವ ಲೆಕ್ಕ ಅಂದುಬಿಟ್ಟ. ಸಮರ್ಥನೆ ಹೇಳಿದ್ದನ್ನೆ ಸೀರಿಯಸ್ ಆಗಿ ತಗೋಂಡ ಸೀನ ತಗೋ ಹಂಗಾರೆ , ಶೂಟ್ ಮಾಡು ಅಂತ ಗನ್ ಕೈಗಿಟ್ಟ.
ಆಡಿದ್ದೂ ಬಾಯಿ ಮಾತು ಮರಾಯ ಅಂದ್ರೆ ಸೀನ ಕೇಳುವ ಹಾಗಿಲ್ಲ. ಅವನಿಗೋ ಗನ್ ಧಾಟಿಸಿದ್ರೆ ಸಾಕಾಗಿತ್ತು. ಹೆಂಗೂ ಕೊಚ್ಚಕೊಂಡಿದ್ದಾನೆ , ಶೂಟ್ ಮಾಡೋದು ಅಷ್ಟ್ರಲ್ಲೇ ಇದೆ . ಎನಾದ್ರೂ ಹೇಳಿ ತಾನು ಬಚಾವ್ ಆಗಬಹದು ಅನ್ನೋದು ಸೀನನ ಲೆಕ್ಕಚಾರ. ಡ್ರೈವರ್ ಬಾಬುಗೆ ಶೂಟಿಂಗ್ನ ಅನುಭವಿತ್ತು. ಅವನು ಪೋಲಿಸ್ ಇಲಾಖೆಯವನಾಗಿದ್ದರಿಂದ ಟ್ರೈನಿಂಗ್ನಲ್ಲಿ ಹಲವಾರು ಭಾರಿ ಫೈರಿಂಗ್ ನಡೆಸಿದ್ದ. ಆದ್ರೆ ಹುಲಿ ಹೊಡೆಯೋದು ಸಾಧ್ಯನಾ ? ಅನ್ನೋದು ಅವನಿಗೂ ಗೊತ್ತಿರಲಿಕ್ಕಿಲ್ಲ. ಸಾಲದಕ್ಕೆ ಸೀನಗಿದ್ದ ಅವಕಾಶವೂ ಅವನಿಗಿರಲಿಲ್ಲ. ಮಾಡು ಇಲ್ಲವೇ ಮಡಿ ಅನ್ನುವಂತೆ ಹೊಡದ್ರೆ ಒಂದೇ ಗುರಿಯಲ್ಲಿ ಹೊಡೆದು ಬಿಡಬೇಕು. ಇದಕ್ಕೆ ಸಿದ್ದನಿರದ ಬಾಬು ಸೀನನ ಹತ್ತಿರ ಕ್ಷಮೆ ಕೇಳೋಕೆ ಮುಂದಾದ, ಸೀನ ಮಾತ್ರ ನೀನೆ ಮಾಡು ಅಂದ, ಸುಮೋಗೂ ಅಧಿಕಾರಿಗಳೂ ನಿಂತಿದ್ದ ಸ್ಥಳಕ್ಕೂ ಅಂತರವಿದ್ದರಿಂದ ಇಲ್ಲಿ ನಡೆಯುತ್ತಿದ್ದ ದೃಶ್ಯ ಮಾತ್ರ ಕಾಣುತ್ತಿತ್ತು. ಆಡಿಯೋ ಮ್ಯೂಟ್ ಆಗಿದ್ದರಿಂದ ಇವರಿಬ್ಬರ ವಾಗ್ವಾದ ಯಾರಿಗೂ ಕೇಳಲಿಲ್ಲ..
ಈ ಮಧ್ಯೆ ಹಿಂದೊಮ್ಮೆ ಎಸ್ಪಿ ಸಾಹೇಬರ ಜೊತೆ ಸೇರಿ ಕಳ್ಳರ ಗ್ಯಾಂಗಿನೊಟ್ಟಿಗೆ ಶೂಟೂಟ್ ನಡೆಸಿದ್ದ ಘಟನೆಯನ್ನ ನೆನಸಿಕೊಂಡ ಬಾಬು, ಎನಾದ್ರಾಗಲಿ ಒಂದು ಕೈ ನೋಡೋಣ ಅಂತ ಅಳುಕಿನಿಂದಲೇ ಅಂದುಕೊಂಡ. ಅಷ್ಟರಲ್ಲಾಗಲೇ ಸೀನ ಕೈಯಲ್ಲಿದ್ದ ಬಂದೂಕು ಬಾಬು ಕೈಯಗೆ ಹಸ್ತಾಂತರ ಗೊಂಡಿತ್ತು. ಹುಲಿ ಕೂಡ ಅಲ್ಲೆ ಅಡಗಿತ್ತು.
ಸರಿ ಇಬ್ಬರಲೊಬ್ಬರು , ಇಲ್ಲವೇ ಇಬ್ಬರೂ ಕೆಲಸ ಕಳೆದುಕೊಳ್ಳೋದು ಗ್ಯಾರಂಟಿ. ಕೊನೆ ಪ್ರಯತ್ನ ಮಾಡಿಯೇ ಬಿಡೋಣ. ಏನಾದ್ರಾಗಲಿ ಅಂದು ಕೊಂಡೋನೇ, ಹುಲಿ ದೃಷ್ಟಿಯನ್ನ ಕದಲಿಸದಂತೆ ನೋಡಿಕೋ ಅಂತ ಹೇಳಿ, ಸದ್ದು ಮಾಡದೇ ಡೋರು ತೆಗೆದು ಕೆಳಗಿಳಿದ. ಗುಂಡು ಹೊಡೆಯುತ್ತಾನೋ ಬಿಡುತ್ತಾನೋ ಆದ್ರೂ ಹತ್ತು ಗಜ ದೂರವಿರುವ ಹುಲಿ ಎದುರು ಸುಮೋದಿಂದ ಕೆಳಗಿಳಿದ ಬಾಬುವನ್ನ ಕಂಡು ಜನ್ರು ದಂಗಾದ್ರು ಮೇಲಾಧಿಕಾರಿಗಳು ತಮ್ಮ ಪ್ಲಾನ್ ಉಲ್ಟಾಗಿರೋದನ್ನ ನೋಡಿ ನಟಿಕೆ ಮುರಿಯೋಕೆ ಶುರುವಿಟ್ಟುಕೊಂಡ್ರು. ಇದ್ಯಾವುದದರ ಪರಿಣಾಮ ಬಾಬುವಿನ ಮೇಲಾಗಲಿಲ್ಲ. ಯಾಕಂದ್ರೆ ಅವನ ನೋಟವೇಲ್ಲ ಹುಲಿಯ ಮೇಲಿತ್ತು. ಹುಲಿಯ ಕಣ್ಣು ಸುಮೋದಲ್ಲಿದ್ದ ಸೀನನ ಮೇಲಿತ್ತು. ಇದೆ ಸರಿಯಾದ ಸಮಯ ಅಂದುಕೊಂಡು ಬ್ಯಾನೆಟ್ ಬಳಸಿ ಮೇಲ್ಲ ಮುಂದೆ ಬಂದು ಹುಲಿಯ ಸೊಂಟಕ್ಕೆ ಗುರಿಯಿಟ್ಟು ಬಂದೂಕಿನ ಟ್ರೀಗಾರ್ ಎಳೆದೇ ಬಿಟ್ಟ.
ಗುರಿ ತಲುಪಿತೋ ಇಲ್ವಾ ಅನ್ನೋದನ್ನೂ ನೋಡದೆ ಕಾಲ್ಕಿತ್ತ ಬಾಬು ಕಣ್ಣುಬಿಟ್ಟು ತೆಗೆಯೋದರೊಳಗೆ ಸುಮೋ ಹತ್ತಿ ಕುಳಿತು ಗಾಡಿ ಸ್ಟಾರ್ಟ್ ಮಾಡಿದ. ಸುಮೋದೊಳಿಗಿದ್ದ ಸೀನನಿಗೆ ಆರ್ಶಯ ಕೊನೆಯ ಅರವಳಿಕೆ ಮದ್ದು ಹುಲಿಯ ತೊಡೆಯಿಂದ ಸ್ವಲ್ಪ ಮೇಲ್ಗಡೆ ಚುಚ್ಚಿಕೊಂಡಿತ್ತು. ಬಾಬುವಿನ ಶೂಟ್ ಗುರಿ ತಲುಪಿತ್ತು. ಸಿರಂಜ್ನ ಚುಚ್ಚುವಿಕೆಯಿಂದ ಕೆರಳಿದ ಹುಲಿ ಆರ್ಭಟಿಸುತ್ತ ಸುಮೋ ಮೇಲೆರಗಿತು. ಅಷ್ಟರಲ್ಲಿ ಬಾಬು ಡೋರೋಳಗೆ ಬಂದು ಬಾಗಿಲು ಭದ್ರಪಡಿಸಿಕೊಂಡಿದ್ದ. ತನ್ನ ಶಕ್ತಿಯನ್ನೆಲ್ಲ ಹಾಕಿ ಹುಲಿ ಆರ್ಭಟಿಸುತ್ತಿತ್ತು. ಮಂಪರು ಕೆಲಸ ಮಾಡುತ್ತಿತ್ತು ಅನ್ನೋದು ಅದರ ವರ್ತನೆಯಲ್ಲೆ ಗೊತ್ತಾಗಿತ್ತು. ಇನ್ನೇನು ಕೆಲವೆ ಕ್ಷಣದಲ್ಲಿ ಅದು ಮೂರ್ಛೆ ತಪ್ಪಲಿತ್ತು. ಕ್ಲೈಮಾಕ್ಸ್ನ ಈ ದೃಶ್ಯ ಆತಂಕ , ಕುತೂಹಲದಲ್ಲಿದ್ದ ಗುಂಪಿನಲ್ಲಿ ವಿಜಯದ ನಗೆ ಹುಟ್ಟಿಸಿತು. ಎಲ್ಲರು ಬೇಲಿ ಹಾರಿ ಹತ್ತಿರದಿಂದ ಹುಲಿನೋಡಲು ಮುಂದಾದ್ರು. ನ್ಯೂಸ್ ಚಾನೆಲ್ನ ಕ್ಯಾಮೆರಾಗಳಂತೂ ಜೂಮ್ ಶಾಟ್ ಬೇಕು ಅಂತ , ಹುಲಿಯ ಕಾಲು ಬುಡಕ್ಕೆ ಬಂದು ಶೂಟ್ ಮಾಡಲು ಶುರುವಿಟ್ಟುಕೊಂಡ್ರು. ಎಲ್ಲವನ್ನ ಮಂಪರಲ್ಲೇ ನೋಡುತ್ತಿದ್ದ ಹುಲಿ ಒಮ್ಮಲೇ ಘರ್ಜಿಸಿ ಮೂರು ಹೆಜ್ಜೆ ಮುಂದೆ ಬಂದು ಶಕ್ತಿಯಿಲ್ಲದೆ ನೆಲಕ್ಕುಳಿರತು. ಹುಲಿಯ ಹತ್ತಿರದ ದೃಶ್ಯ ಕ್ಯಾಮೆರಾಗೆ ಸಿಕ್ಕಿತಾದ್ರೂ, ಕ್ಯಾಮೆರಾ ಮೆನ್ಗಳ ಜೀವ ಬಾಯಿಗೆ ಬಂದಿತ್ತು..
ಟ.ವಿಯಲ್ಲಿ ಕೊನೆಯ ಬ್ರೆಕಿಂಗ್ ದಪ್ಪಾಕ್ಷರಗಳಲ್ಲಿ ಬರುತ್ತಿತ್ತು. ಮಂಪರು ಬಿದ್ದ ಹುಲಿಯನ್ನ ಬೋನಿಗೆ ಹಾಕಿ, ತ್ಯಾವರೆ ಕೊಪ್ಪಕ್ಕೆ ಸಾಗಿಸಲಾಯಿತು. ಕೊನೆಗೂ ಹುಲಿಯ ಬೇಟೆ ಮುಗಿಯಿತೆಂಬ ಸಮಾಧಾನದಿಂದ ಊರವರೂ ಮನೆಯತ್ತ ತೆರಳಿದ್ರು. ಅಧಿಕಾರಿಗಳು ಸಿಬ್ಬಂಧಿಗಳ ಜೊತೆ ಮೀಡಿಯಾಕ್ಕೊಂದು ಬೈಟ್ ಕೊಟ್ಟು ಸಾಹಸಗಾಥೆಯ ಕೊನೆ ಸಾಲು ಬರೆದ್ರು. ಅಲ್ಲಿಯವರೆಗೂ ತಣ್ಣಗಿದ್ದ ತೋಟದ ಮಾಲೀಕ ಮೆಲ್ಲಗೆ ಎಂಟ್ರಿಕೊಟ್ಟು, ಸ್ವಾಮಿ ಹುಲಿಯನ್ನೇನೋ ಹೊಡೆದ್ರಿ, ಹುಲಿ ಹೋಡೆಯೋ ಸಿನಿಮಾದಲ್ಲಿ ಬುಕುಣಿಯಾಗಿರೋ ನನ್ನ ತೋಟದ ಕಥೇಯೇನು ಅಂತ ಖ್ಯಾತೆ ತೆಗೆದ. ಅವನ ಹಿಂಬಂದಿಯಲ್ಲೇ ಜನ ತುಳಿದು ಹಾಳು ಮಾಡಿದ ನಮ್ಮ ಹೊಲಕ್ಕೇನೂ ಪರಿಹಾರ ಅನ್ನೋ ದ್ವನಿಗಳು ಕೇಳಿಬಂದ್ವು.. ಅಧಿಕಾರಿಗಳು ಹುಲಿಯಿಲ್ಲದ ತೋಟ ಹೊಲದತ್ತ ದೃಷ್ಟಿ ಹಾಯಿಸಿದ್ರು. ಉತ್ತರಕ್ಕಾಗಿ ತಡಕಾಡಿದ್ರು,
 
 
 

‍ಲೇಖಕರು G

6 July, 2014

1 Comment

  1. ashadeepa

    Kanmunde drusyagalu suliyutive anistide
    Chngide
    Papa koege thota sari madikodlila

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading