ಶಾಂತಲಾ
ನಾಗೇಶ ತಳವಾರ
ಬಾರಿಸು ಕನ್ನಡ ಡಿಂಡಿಂ ಚಂದನ ದೂರದರ್ಶನ ಅಂತ ಟಿವಿ ಹೇಳುತ್ತಿದ್ದಂತೆ ರೂಪಾ ಬಂದು ಟಿವಿ ಮುಂದ ಕುಂತ್ಳು. ಯಾಕಂದ್ರ ಅಕಿನ ಇಷ್ಟವಾದ ಭರತನಾಟ್ಯ ಕಾರ್ಯಕ್ರಮ ಪ್ರಸಾರವಾಗತಿತ್ತು. ಸಾಯಂಕಾಲ ಆರ ಆಯ್ತು ಅಂದ್ರ ಸಾಕು ರೂಪಾ ಟಿವಿ ಮುಂದ ಹಾಜರ್. ತಾನು ಒಂದು ದಿನ ದೊಡ್ಡ ಭರತನಾಟ್ಯ ಕಲಾವಿದೆ ಆಗಬೇಕು. ದೇಶ ವಿದೇಶದಲ್ಲಿ ತನ್ನ ನೃತ್ಯವ್ನನ ಪ್ರದರ್ಶನ ಮಾಡಬೇಕು. ತಾನು ಹುಟ್ಟಿ ಬೆಳದ ಊರು, ಅವ್ವನ ಹೆಸರನ್ನ ಎಲ್ಲ ಕಡೆ ಗುರುತಿಸುವಂತೆ ಮಾಡಬೇಕು. ಹಿಂಗ್ ಏನೇನೊ ಆಸೆ ಕನಸುಗಳನ್ನ ಕಣ್ಣೊಳಗ ತುಂಬಿಕೊಂಡು ಟಿವಿಯಲ್ಲಿ ಬರತ್ತಿದ್ದ ನೃತ್ಯ ನೋಡತ್ತಿದ್ದಳು ರೂಪಾ. ಅಷ್ಟರಲ್ಲಿ ಅಡಗಿ ಮನೆಯಿಂದ ಅವಳವ್ವನ ಧ್ವನಿ ಬಂದಿದ್ದು ಆಕೆಗೆ ಕೇಳಿಸಿಯೇ ಇರಲಿಲ್ಲ. ತನ್ನ ಪಾಡಿಗೆ ತಾನು ಟಿವಿ ನೋಡುತ್ತಾ, ಅದರಲ್ಲಿನ ಕಲಾವಿದರು ಹ್ಯಾಗೇ ಮೈ ಕೈ ಹೊರಳಿಸುತ್ತಾ ಕಣ್ಣು ಸನ್ನೆಯ ಮೂಲಕ ಕುಣಿಯುತ್ತದ್ದರೊ ಅದೇ ತರ ಅವಳು ಕುಳಿತಲ್ಲಿಯೇ ಮಾಡುತ್ತಿದ್ದಳು. ಮಗಳನ್ನ ಕರೆದು ಕರೆದು ಸಾಕಾಗಿ ಹೋದ ಗಂಗವ್ವ ಸಿಟ್ಟಿಲೇ ಬಂದೆ ಬಿಟ್ಟಳು. ಕೈಯಲ್ಲಿ ಬ್ಯಾರೆ ಊದುಗೊಳಿ ಹಿಡದಿದ್ದಳು. ಇನ್ನೇನು ಮಗಳಿಗೆ ಅದರಲೇನೆ ಒಂದ್ನಾಕ ಬಿಡಬೇಕು ಅಂದಕೊಂಡವಳೇ ಮಗಳು ಕುಣಿಯುತ್ತಿದ್ದಿದ್ದನ್ನ ನೋಡಿ ಸುಮ್ಮನಾದಳು. ನಟರಾಜನೇ ತನ್ನ ಮೈಯೊಳೆಗೆ ಪ್ರವೇಶಮಾಡಿದ್ದಾನೆ ಅನ್ನುವ ತರದಲ್ಲಿ ರೂಪಾ ಕುಣಿಯುತ್ತಿದ್ದಳು. ಕಾರ್ಯಕ್ರಮ ಮುಗಿತು. ಅವ್ವ ಬಂದ ನಿಂತಿದ್ದು ನೋಡಿ, ಏನವ್ವ ಇಲ್ಲಿ ಬಂದ ನಿಂತಿ, ಯಾಕ ಏನಾರ ಕೆಲ್ಸ ಇತ್ತೇನ ಅಂತ ಅವ್ವನ ಕೇಳುತ್ತಿದ್ದಳು. ಗಂಗವ್ವ ಮಾತ್ರ ಹಂಗ ಸುಮ್ಮ ಗರ ಬಡಿದವರಂಗ್ ನಿಂತಿದ್ದಳು. ರೂಪಾ ಸೆರಗ ಹಿಡ್ದ ಎಳೆದಾಗಲೇ ಎಚ್ಚಾರಗೊಂಡ ಗಂಗವ್ವ, ಮಗಳನ್ನ ತಬ್ಬಿಕೊಂಡು ಹಣಿಗೊಂದು ಮುತ್ತು ಕೊಟ್ಟಳು. ಏನ ಚೆಂದ ಕುಣಿತಿಯ ನನ್ನ ಹಡದವ್ವ, ನೀ ಕುಣಿಯಾಕತ್ರ ಆ ಶಿವಪ್ಪನೇ ಕುಣಿದಂಗ ಆಗ್ತದ ಅಂತ ಮಗಳ ಕುಣಿತಕ್ಕ ಗಂಗವ್ವ ಶಹಬ್ಬಾಸ್ಗಿರಿ ಕೊಟ್ಟಳು.
ಎವ್ವಾ ನಾನು ಅವರಂಗ್ ಭರತನಾಟ್ಯ ಕಲ್ತು ಮುಂದೊಂದು ದಿನ ನಾನು ಟಿವ್ಯಾಗ ಬರತಿನಿ. ಊರಾಗಿನ ಮಂದಿಯಲ್ಲಾ ನನ್ಗ ಟಿವಿಯಾಗ ನೋಡತಾರ ಅಂದ್ಳು. ಗಂಗವ್ವ ಕಣ್ಣೀರ ಹಾಕಕತ್ತಳು. ಯಾಕ ಎವ್ವಾ ಏನಾತು. ಏನಿಲ್ಲ ನಿನ್ನಷ್ಟು ಇದ್ದಾಗ ನನ್ನ ಎದೆಯೊಳಗ ಹೆಂತೆಂತ ಕನಸುಗಳು ಮನಿ ಮಾಡಿದ್ದವು. ಆದ್ರ ಅದಕೆಲ್ಲ ಈ ಹಾಳು ಬಡತನ ಕಲ್ಲ ಹಾಕಿತು. ಲಗ್ನ ಆದಮ್ಯಾಲಾದ್ರ ನನ್ನ ಜೀವನ ಸರಿ ಹೋಗತದಂದ್ರ, ಬದಲಾಗಲೇ ಇಲ್ಲ. ಈಗ್ಲೊ ಕಟಗಿ ತಂದು ಒಲಿ ಉರಿಸುವುದು ತಪ್ಪಲಿಲ್ಲ ನನ್ನ ಹಣಿಬರಕ್ಕ ಅಂದ್ಳು. ಎವ್ವಾ ನೀ ಏನ ಚಿಂತಿ ಮಾಡಬ್ಯಾಡ. ನಿನ್ನ ನಾ ಸಾಕತೀನಿ ಅಂದಳು ರೂಪಾ. ಮಗಳ ಮಾತ ಕೇಳಿದ ಗಂಗವ್ವ ಸಣ್ಣದೊಂದು ನಗು ಚೆಲ್ಲಿ ಕಣ್ಣಂಚಿನಲ್ಲಿ ಜಾರುತ್ತಿದ್ದ ಕಣ್ಣೀರನ್ನ ಒರಸಿಕೊಂಡು ಒಳಮನಿಗಿ ಹೋದಳು.
ಐದನೇ ತರಗತಿ ಹೋಗತ್ತಿದ್ದ ರೂಪಾ ಶಾಲಿಯಲ್ಲಿ ಹಾಕಿ ಕೊಟ್ಟಿದ್ದ ಪಾಠವನ್ನ ಗಟ್ಟಿಯಾಗಿ ಓದುತ್ತಾ, ಟಿವಿಯಲ್ಲಿ ಬರುವು ಎಲ್ಲ ಕುಣಿತಗಳನ್ನ ನೋಡುತ್ತಾ, ಕಲಿಯುತ್ತಾ ಹೋದಳು. ಗುರುವಿನ ಬಲವಿಲ್ಲದೇ ಭರತನಾಟ್ಯದ ಹಲವು ಕುಣಿತಗಳನ್ನ ಕಲಿತ್ತಿದ್ದಳು. ಶಾಲಿ, ಮನಿ ಕೆಲ್ಸ ಬಿಟ್ರ ಅವಳಿಗೆ ಇರುವುದೊಂದೆ ಕೆಲ್ಸ, ಅದು ಕುಣಿಯುವುದು. ಇದರ ನಡುವ ರೂಪಾ ಹತ್ತನೇ ತರಗತಿಗೆ ಕಾಲಿಟ್ಟದ್ದಳು. ಪರೀಕ್ಷೆ ಬ್ಯಾರೆ ಹತ್ರ ಬಂದಿದ್ರಿಂದ ಎರಡ ತಿಂಗಳಿಂದ ಕುಣಿತ ನಿಲ್ಲಿಸಿದ್ದಳು. ದೇಶ ವಿದೇಶ ಸುತ್ತಬೇಕು ಅಲ್ಲೆಲ್ಲ ಕುಣಿಬೇಕು ಅಂದ್ರ ಅಷ್ಟ ಚಂದ ಶಾಲಿ ಕಲಿಬೇಕು ಅನ್ನುವುದು ಅಟ್ಟ ಮುಖ್ಯ ಅಂತ ಅಕಿಗಿ ಗೊತ್ತಿತ್ತು. ಅದ್ಕ ಸ್ವಲ್ಪ ದಿನ ಕುಣಿತ ಬಿಟ್ಟು ಓದುತ್ತಿದ್ದಳು. ಮಗಳ ಎಲ್ಲ ಆಸೆ ಕನಸುಗಳಿಗೆ ಗಂಗವ್ವ ಹೆಗಲು ಕೊಟ್ಟಿದ್ದಳು. ಸಾಲಾ ಮಾಡಿದ್ದನ್ನ ತೀರಿಸಕ್ಕ ಆಗದ ಗಂಡ ಸತ್ತು ಹದಿನೈದು ವರ್ಷ ಆಗುತ್ತಾ ಬಂದಿತ್ತು. ಅವರಪ್ಪ ಸತ್ತಾಗ ರೂಪಾಳಿಗೆ ಬರಿ ಒಂದು ವರ್ಷ. ಆ ಮಗುವನ್ನ ತಗೊಂಡು ಊರಲ್ಲಿ ಅದು ಇದು ಕೆಲ್ಸ ಮಾಡಿ ಜೀವನ ಸಾಗಿಸುತ್ತಿದ್ದಾಳ. ತಾನಂದುಕೊಂಡಿದ್ದು ತನ್ನ ಬಾಳಿನಲ್ಲಿ ಯಾವುದೂ ಆಗಲಿಲ್ಲ. ತನ್ನ ಮಗಳ ಬಾಳಲ್ಲಾದರೂ ಅವಳು ಅಂದುಕೊಂಡಿದ್ದು ಆಗಲಿ ಅಂತ ಬಂದ ಕಷ್ಟವನೆಲ್ಲ ಅನುಭವಿಸುತ್ತಿದ್ದಳು.
ತಾಯಿ ಮಾತಿಗೆ ಯಾವುತ್ತೂ ಇಲ್ಲ ಅನ್ನದೆ ಮನಿ ಕೆಲ್ಸ ಮಾಡುತ್ತಾ ತನ್ನ ಪಾಡಿಗೆ ತಾನು ಓದು ಕುಣಿತ ಅಂತ ಇದ್ದ ರೂಪಾ ಪರೀಕ್ಷೆ ಬರಿದು ಆಗಿತ್ತು. ತಾಯಿ ಮಗಳು ಒಬ್ಬರಿಗೊಬ್ಬರು ಆಸರಾಗಿ ಕೆಲ್ಸ ಮಾಡುತ್ತಾ ಹೋಗತ್ತಿದ್ರು. ರೂಪಾಳ ಕಷ್ಟಕ್ಕ ದೇವರು ಕೈ ಹಿಡಿದಿದ್ದ. ಹತ್ತನೇ ತರಗತಿಯಲ್ಲಿ ರೂಪಾ ರಾಜ್ಯಕ್ಕೆ ಮೂರನೇ ಱಂಕ್ ಬಂದಿದ್ದಳು. ಮರು ದಿನದ ಪತ್ರಿಕೆ, ಟಿವಿಯಲ್ಲಿ ಇವಳ ಕುರಿತು ಸುದ್ದಿ ಮಾಡಿದ್ರು. ಕೆಲವು ಪತ್ರಿಕೆಯವರು ಬೆಂಕಿಯಲ್ಲಿ ಅರಳಿದ ಪ್ರತಿಭೆ ಎನ್ನುವ ಅಡಿಬರಹದಲ್ಲಿ ಅವಳ ಪಟ್ಟ ಕಷ್ಟ, ಉಂಡ ನೋವು, ತಾಯಿಯ ಸಾಥ್ ಎಲ್ಲವನ್ನು ಬರೆದಿದ್ರು. ಕೊನೆಯದಾಗಿ ನೀವು ಏನಾಗಬೇಕು ಅಂದುಕೊಂಡಿದ್ದರಿ ಎನ್ನುವ ಪ್ರಶ್ನೆಗೆ ಭರತನಾಟ್ಯ ಕಲಾವಿದೆ ಆಗಬೇಕು ಅಂದುಕೊಂಡಿದ್ದೇನೆ ಅಂತ ಉತ್ತರಿಸಿದ್ದಳು ರೂಪಾ.
ಅಲ್ಲಾ ಎವ್ವಾ ನೀಯಾರ ಅದ ಏನೇನ ಕಲಿತು ಎಲ್ಲಿಲ್ಲೊ ಸುತ್ತಬೇಕೆಂತ ಹೇಳಕತ್ತಿ. ಆದ್ರ ನಮ್ಮಹತ್ರ ತಿನ್ನಾಕ ಉಡಾಕ ಬಿಟ್ರ ಏನು ಇಲ್ಲ. ನಿನ್ನ ಲಗ್ನಕ್ಕಂತ ಅಷ್ಟಿಷ್ಟು ಕೂಡಿ ಇಟ್ಟಿನಿ. ಮುಂದ ಹ್ಯಾಂಗ ಅಂತ ಮಗಳಿಗೆ ಕೇಳಿದಳು ಗಂಗವ್ವ. ಎವ್ವಾ ನೀ ಏನ ಚಿಂತಿ ಮಾಡಬ್ಯಾಡ. ನನ್ಗ ಬಾಳ ಚಲೋ ಮಾರ್ಕ್ಸ್ ಬಂದಿದ್ದಕ್ಕ ಸರ್ಕಾರದವರೇ ನನ್ನ ಮುಂದಿನ ಓದನ್ನ ನೋಡಿಕೊಳ್ಳುತ್ತ. ಹೌದಾ? ಹೂಂ ಮತ್. ಹಂಗ್ ಭರತನಾಟ್ಯ ಜರಾಜರಾ ಕಲತಿನಿ. ಇನಾ ಕಲಿಬೇಕು. ಅದ್ಕ ಒಬ್ರು ಗುರುಗಳು ಬೇಕು. ಇಲ್ಲಂದ್ರ ನನ್ನ ಆಸೆ… ನಾ ಹ್ಯಾಂಗ್ ಮಾಡಲಿ ಎವ್ವಾ ಅಂತಾ ತಾಯಿಗಿ ಮಗಳು ಕೇಳಿದಳು. ಇದರಾಗ ನಾಯ್ಯಾರ ಏನ ಬಾಳ ಸ್ಯಾಣೇ ಇದಿನಿ, ಆ ಮೂಲಿಮನಿ ಮಲ್ಲಪ್ಪ ಆವಾಗಾವಾಗ ಬೆಂಗಳೂರು ಗಿಂಗ್ಳೂರು ಅಂತ ತಿರಗ್ಯಾಡಿ ಬರತಾನ. ಅಂವಗ ಕೇಳದ್ರ ಗೊತ್ತಾಗತದ, ಯಾಕಂದ್ರ ಅಂವನು ಏನೇನೊ ಕಲತಾನ. ಯಾವದ್ಯಾವದೊ ಭಾಷೆ ಮಾತಡ್ತಾನ ಅಂತ ಮಗಳಿಗೆ ಹೇಳತ್ತಿದ್ದಳು, ಹೊರಗಿನಿಂದ ಯಾರೊ ಒದ್ರಾಕತ್ತಿದ್ರು. ಅವ್ವ ಮಗಳು ಇಬ್ಬರು ಬಂದ್ರು. ನೋಡಿದ್ರ ಪೋಸ್ಟ್ ಮ್ಯಾನ್ ನಿಂತ್ತಿದ್ದ. ಒಬ್ಬರಿಗೊಬ್ಬರು ಮುಖ ನೋಡಕತ್ತರು. ನಾವು ಬ್ಯಾಡ ಅಂತ ಇದ್ದ ಬಿದ್ದ ಸಂಬಂಧಿಕರು ದೂರ ಕುಂತಾರ, ನಮಗ್ಯಾರ ಪತ್ರ ಬರಿತಾರ ಅಂತ ಪೋಸ್ಟ್ ಮ್ಯಾನ್ ಮುಂದ ಗಂಗವ್ವ ತನ್ನ ಪುರಾಣ ಹೇಳತ್ತಿದ್ದಳು. ಅದ ನಗೇನ ಗೊತ್ತ, ಗಂಗವ್ವ ಅಂದ್ರ ನೀನೇ ಹೌದ ಇಲ್ಲ. ಹೌದೆಪ್ಪ ಅಂದ್ಳು. ಹಂಗಂದ್ರ ಇದು ನಿನಗ ಬಂದ ಪತ್ರ ತಗೊ ಅಂತ ಹೇಳಿ ಕೊಟ್ಟು ಹೋದ.
ತಳಬುಡ ಒಂದೊ ಗೊತ್ತಾಗದ ಮಗಳ ಕೈಯಾಗ ಕೊಟ್ಟಳು. ಇಂದ ಅಂತ ಬರದಲ್ಲಿ ಶ್ಯಾಮಸುಂದರ್ ಭಾಗವತರು, ಎಂಟನೇ ಹಂತ ಮೂರನೇ ಮೈಲಿ, ಮಲ್ಲೇಶ್ವರಂ 1ಅಂತ ಬರದಿತ್ತು. ಮೊದ್ಲ ರೂಪಾಳಿಗೂ ಇದು ಯಾರದು ಅಂತ ಗೊತ್ತಾಗಲಿಲ್ಲ. ಪೂರಾ ಪತ್ರ ಓದಿದ ಬಳಿಕ ಕುಣಿಯಾಕತ್ತಳು. ಗಂಗವ್ವ ಏನ ಅದು ಯಾಕ ಹಂಗ್ ಕುಣಿಯಾಕತ್ತಿ ಅಂದ್ರು ರೂಪಾ ಕುಣಿತಾನೇ ಇದ್ದಳು. ಹುಚ್ಚಿ ಹುಡುಗಿ ಏನು ಹೇಳುವಲ್ಲದು ಬಿಡುವಲ್ಲದು ಅಂತ ಒಳಗ ಹೊಂಟಿದ್ದಳು ಎವ್ವಾ ನೋಡಿಲ್ಲಿ ಈ ಪತ್ರ ಯಾರದಂತ ಗೊತ್ತೇನ ನಿನಗ ಅಂದ್ಳು. ನನ್ಗ ಓದಕ್ಕ ಬರತಿತ್ತಂದ್ರ ನಿನ್ನ ಕೈಯಾಗ ಯಾಕ ಕೊಡತ್ತಿದ್ದನಿ. ಅದ ಏನ ಹೇಳಂತ ಅಷ್ಟೊಂತಿದ ಬಡಕೊಳ್ಳಕತ್ತಿನಿ. ನೀ ಇದನ್ನ ಕೇಳದಿ ಅಂದ್ರ ಬಾಳ ಸಂತೋಷ ಪಡತಿ. ಅದ ಏನ ಐತಿ ಹೇಳರ ಹೇಳವ ತಾಯಿ ಹಡದವ್ವ ಅಂದ್ಳು.
ಭಾಗವತರು ಅಂತಾ ಒಬ್ಬರು ಅದಾರ. ನಾ ಮಾಡತಿನಲ್ಲ ಭರತನಾಟ್ಯ, ಅದರೊಳಗ ಇವರದು ದೊಡ್ಡ ಹೆಸರು. ಟಿವಿಯ್ಯಾಗ ಬರತಾರ ಅವರು. ನನ್ಗ ಭರತನಾಟ್ಯ ಹೇಳಿಕೊಡತಾರಂತ, ದೊಡ್ಡ ಕಲಾವಿದೆ ಮಾಡತಾರಂತ. ಮುಂದಿನ ತಿಂಗಳ ಬಂದಬಿಡು ಅಂತ ಹೇಳಿ ಈ ಪತ್ರ ಬರದಾರ ಅಂತ ಹೇಳದಳು. ಇದನ್ನ ಕೇಳಿ ಗಂಗವ್ವ ಮುಖ ಅರಳಿತು. ಆದ್ರ ಮತ್ತ ಮುಖ ಸಪ್ಪಗ ಮಾಡಕೊಂಡು ನಿಂತ ಬಿಟ್ಟಳು. ಯಾಕ ಎವ್ವಾ ಏನಾತು ಅಂತ ಕೇಳಿದಳು ಮಗಳು. ಅಲ್ಲಾ ನಾವು ಯಾರೊ, ಅವರ ಯಾರೊ ಅವರಿಗಿ ನಮ್ಮ ಮನಿ ಪತ್ತಾ ಹ್ಯಾಂಗ ಸಿಕ್ಕತು. ಅದಾ, ನನ್ನ ಬಗ್ಗೆ ಪೇಪರ್ನಲ್ಲಿ ಬಂದಿತ್ತಲ್ಲ. ಆಗ ಕೇಳಗ ನನ್ನ ಹೆಸರ ಕೂಡಾ ಅಡ್ರೇಸ್ ಹಾಕಿದ್ರು. ಅದನ್ನ ನೋಡಿ ಬರದಿನಿ ಅಂತ ಹೇಳ್ಯಾರ. ಅವರೇನೊ ಬಾ ಅಂದ್ರು, ಅವರಿಗಿ ರೊಕ್ಕ ಕೊಡಬೇಕು. ನಿನ್ನ ಶಾಲಿ ಖರ್ಚ ನೋಡಕೋಬೇಕು.. ಅದು ಇದು ಅಂತ ಏನೇನೊ ಇರತದ. ನಾ ನೀನಗ ಮೊದ್ಲ ಹೇಳಿನಿ ನನ್ನ ಓದು ಊಟ ಎಲ್ಲ ಸರ್ಕಾರದವರು ನೋಡಕೊಳ್ಳತ್ತಾರಂತ. ಹಾಸ್ಟೇಲ್ ಕೊಡತಾರ. ಹಂಗ ಭಾಗವತ ಗುರುಗಳು ರೊಕ್ಕ ಕೊಡುವುದು ಬ್ಯಾಡ ಅಂತ ಹೇಳ್ಯಾರ. ನೀ ಏನು ಚಿಂತಿ ಮಾಡಬ್ಯಾಡ. ಅದೇನೊ ನನ್ಗಂತೂ ಒಂದು ತಿಳಿವಲ್ಲದು, ಅಂವ ಹೆಂಗ ನಡಸ್ತಾನ ಹಂಗ ನಡೆಯೋದು ಅಂತ ಹೇಳಿ ಒಳಗ ಹೋದಳು.
ಎಲ್ಲಾ ಚೀಲ ಬರಾಬರಿ ಅದಾವಿಲ್ಲ ನೋಡಕೊ. ಇದ್ರಾಗ ರೊಟ್ಟಿ ಇದ್ರಾಗ ಹಿಂಡಿ ಉಪ್ಪಿನಕಾಯಿ ಕಟ್ಟಿನಿ. ಅದ್ರಾಗ ಕರದಂಟ್ ಚುರುಮುರಿ ಹಾಕಿನಿ ಎಲ್ಲಾನು ಹುಷಾರಾಗಿ ತಗೊಂಡು ಹೋಗು ಅಂತ ಹೇಳುತ್ತಾ ಮಗಳಿಗೆ ಬೆಂಗಳೂರಿಗೆ ಕಳಿಸಲು ಬಂದಿದ್ದಳು ಗಂಗವ್ವ. ಅವ್ವ ಕಟ್ಟಿದ ಚೀಲದ ಕೂಡಾ ತನ್ನ ಕನಸಿನ ಮೂಟೆ ಹೊತ್ತು ಬೆಂಗಳೂರಿಗೆ ಹೊರಟು ನಿಂತಿದ್ದಳು. ಇಬ್ಬರ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಒಬ್ಬರನೊಬ್ಬರು ಬಿಟ್ಟರದ ಅವ್ವ ಮಗಳು ಈಗ ಬಿಟ್ಟಿರಬೇಕಾದ ಪರಸ್ಥಿತಿ. ಗಟ್ಟಿ ಮನಸ್ಸು ಮಾಡಿ ಗಂಗವ್ವ ಮಗಳನ್ನ ಬಸ್ಸಿಗೆ ಹತ್ತಿಸಿದಳು. ಅದು ಬುರ್ ಬುರ್ ಅಂತ ಅಂತ ಸಪ್ಪಳ ಮಾಡುತ್ತಾ ಹೊಗೆ ಉಗುಳುತ್ತಾ ಹೋಯಿತು. ಮಗಳು ತನ್ನ ಕಣ್ಣಿಂದ ಮರಿಯಾಗುವ ತನಕ ಅವಳನ್ನೇ ನೋಡುತ್ತಾ ನಿಂತಳು ಗಂಗವ್ವ. ಬಸ್ಸಿನ ಕಿಟಕಿಯಿಂದ ಅವ್ವನ ಮುಖ ನೋಡುತ್ತಾ ಹಾದಿಯೊಳಗೆ ಮರೆಯಾದಳು ರೂಪಾ…
*****
ಸಣ್ಣ ಊರಿನಲ್ಲಿದ್ದ ಹುಡುಗಿ ಬೆಂಗಳೂರೆಂಬ ಬೃಹತ್ ನಗರ ಹೊಸ ಲೋಕಕ್ಕೆ ಬಂದಿದ್ದೆನೆಂಬ ಅನುಭವ ಕೊಟ್ಟಿತ್ತು. ಸರ್ಕಾರ ನೀಡಿದ ವಸತಿ ಗೃಹದಲ್ಲಿ ಉಳಿದುಕೊಂಡ ರೂಪಾ, ಕಾಲೇಜು ಹಾಸ್ಟೇಲ್ ನಡುವಿನ ರಸ್ತೆಯನ್ನ ಅರಿತುಕೊಂಡಳು. ಭಾಗವತರನ್ನ ಹುಡುಕಿಕೊಂಡು ಮಲ್ಲೇಶ್ವರಂಕ್ಕೆ ಬಂದಳು. ತನ್ನೊರಿನ ಸಂದಿಗೊಂದಿಗಳಲ್ಲಿ ಅಡ್ಡಾಡಿದ ಪೋರಿಗೆ ಇಲ್ಲಿನ ಯಾವ ರಸ್ತೆಯು ಸರಿಯಾಗಿ ದಿಕ್ಕು ತೋರಿಸುವಂತೆ ಕಾಣಲಿಲ್ಲ. ಅವರಿವರ ಹತ್ತಿರ ಕೇಳುತ್ತಾ ಭಾಗವತರ ಮನೆ ತಲುಪಿದಳು. ಶಾಲೆಯಲ್ಲಿ ಮಕ್ಕಳು ಮನೆಗೆಲಸವನ್ನ ಬಾಯಿಪಾಠ ಮಾಡಿ ಹೇಳುವಂತೆ ತನ್ನ ಇತಿಹಾಸವನ್ನೆಲ್ಲ ಹೇಳಿದಳು. ಅದನ್ನ ಕೇಳಿಸಿಕೊಂಡ ಭಾಗವತರ ಮನೆ ಕೆಲ್ಸದಾಳು ರಾಯರು ಮೇಲಿದ್ದಾರೆ. ಹೇಳುತ್ತೇನೆ ನೀವು ಇಲ್ಲಿ ಕುಳಿತುಕೊಳ್ಳಿ ಅಂತ ಹೇಳಿ ಹೋದ.
ಕುಳಿತುಕೊಂಡಲ್ಲೇ ಮನೆಯನೊಮ್ಮೆ ಕಣ್ಣಾಡಿಸಿದಳು. ಎಲ್ಲಿ ನೋಡಿದರೂ ಭಾಗವತರ ನೃತ್ಯದ ವಿವಿಧ ಭಾವ ಭಂಗಿಗಳು. ಪಡೆದುಕೊಂಡ ಪ್ರಶಸ್ತಿ ಪುರಸ್ಕಾರಗಳು ರಾರಾಜಿಸುತ್ತಿದ್ದವು. ಅದೆಲ್ಲವನ್ನ ಕಣ್ಣತೊಂಬಿಕೊಂಡ ಅವಳು ಮೂದೊಂದು ದಿನ ತಾನು ಹಿಂಗ ಬೆಳಿಬೇಕು ಅಂತ ಅಂದುಕೊಳ್ಳುವಷ್ಟರಲ್ಲಿ ಮೇಲಿಂದ ಬಂದ ಭಾಗವತರು ತನ್ನ ಎದುರಿಗೆ ಕುಳಿತ ಹುಡುಗಿಗೂ ತಮಗೂ ಬಹಳ ವರ್ಷಗಳ ಸಂಬಂಧವಿದೆ ಎನ್ನುವ ರೀತಿಯಲ್ಲಿ ಮಾತನಾಡಲಾರಂಭಿಸಿದರು. ಆದ್ರೆ ಇವಳು ಮಾತ್ರ ಮಗುವಿನಂತೆ ತ್ವದಲುತ್ತಾ ಮಾತನಾಡುತ್ತಿದ್ದಳು. ಹೀಗೆ ಅದೂ ಇದೂ ಮಾತನಾಡಿದ ನಂತ್ರ, ನಿನ್ನ ಗುರುಗಳು ಯಾರು ಅಂತ ಕೇಳಿದ್ರು. ಇಲ್ಲ ನನಗೆ ಯಾರೂ ಗುರುಗಳು ಇಲ್ಲ. ನನ್ನ ಮನೆಯಲ್ಲಿರುವ ಕಪ್ಪು ಬಿಳುಪಿನ ಟಿವಿಯೇ ನನಗೇ ಇಲ್ಲಿಯವರೆಗೆ ಗುರುವಾಗಿತ್ತು. ಅದನ್ನು ನೋಡಿ ಅಷ್ಟೊ ಇಷ್ಟೊ ಕಲಿತುಕೊಂಡಿದ್ದೇನೆ. ಈಗ ನೀವು ನನ್ನನ್ನ ಒಂದು ಸುಂದರ ಮೂರ್ತಿ ಮಾಡಬೇಕು ಅಂತ ರೂಪಾ ಕೇಳಿಕೊಂಡಳು. ಅವಳ ನಯ, ವಿನಯ, ಮಾತಗಾರಿಕೆ ಎಲ್ಲಕ್ಕಿಂತ ಮುಖ್ಯವಾಗಿ ಸಾಧಿಸಬೇಕೆನ್ನುವ ಅವಳ ಛಲ ಭಾಗವತರಿಗೆ ಹಿಡಿಸಿತು. ಒಂದು ಸಾರಿ ನೀನು ಏನು ಕಲಿತಿರುವೆ ಅದನ್ನ ಮಾಡಿ ತೋರಿಸುವಂತೆ ಭಾಗವತರು ಹೇಳಿದ್ರು. ಇಲ್ಲಿಯವರೆಗೆ ಅವಳೊಬ್ಬಳೇ ಟಿವಿ ಮುಂದೆ ನಿಂತು ಕುಣಿಯುತ್ತಿದ್ದ ಆಕೆಗೆ, ಮಹಾನ ವ್ಯಕ್ತಿ ಮುಂದೆ ಕುಣಿಯುವುದು ಹೆಮ್ಮೆಯ ವಿಷಯವಾಗಿ ಕುಣಿಯಲು ಅಣಿಯಾದಳು. ಮೊದ್ಲು ಗುರುಗಳ ಕಾಲಿಗೆ ನಮಸ್ಕರಿಸಿ ಕುಣಿಯಲಾರಂಭಿಸಿದಳು. ಆಕರ್ಷಕ ಮೈಕಟ್ಟು, ಮುಖ ಮಂಡಲ, ಭಾವಲಯಗಳೊಂದಿಗೆ ನಿರೂಪಿಸಿದ ಶಿವಸ್ತುತಿ ಭಾಗವತರನ್ನ ಮಂತ್ರಮುಗ್ಧರನ್ನಾಗಿ ಮಾಡಿತು. ನಿನ್ನಲ್ಲಿ ನಾಟ್ಯ ಹುಟ್ಟಿನಿಂದಲೇ ಬಂದಿದೆ. ಅದು ನೀನಗೆ ದೇವರು ಕೊಟ್ಟ ವರ. ನಾನು ಅದಕ್ಕೆ ಒಂದು ರೂಪ ಕೊಡಬೇಕು ಅಷ್ಟೇ ಅಂತ ಹೇಳಿ ಅವಳನ್ನ ಶಿಷ್ಯಳನ್ನಾಗಿ ಸ್ವಿಕರಿಸಿದರು. ಮಹಡಿ ಮೇಲಿಂದ ನೋಡುತ್ತಿದ್ದ ರೋಹಿತ್, ರೂಪಾಳ ನೃತ್ಯದ ಜೊತೆಗೆ ಹೆಸರಿಗೆ ತಕ್ಕಂತೆ ಇದ್ದ ಅವಳ ರೂಪ ಲಾವಣ್ಯಕ್ಕೆ ಮನ ಸೋತು ಬಿಟ್ಟ. ಕಾಲೇಜಿನ ಸಮಯ, ತಾನು ಯಾವಾಗ ಬರಬೇಕು ಎಲ್ಲವನ್ನ ಚರ್ಚಿಸಿ ಹೊರಡಲು ಸಿದ್ಧಳಾದಳು ಅಷ್ಟರಲ್ಲಿ ರೋಹಿತ್ ಎದ್ದನೊ ಬಿದ್ದನೊ ಅಂತ ಇಳಿದ ಬಂದ. ಮಗಳೇ ಇಂವನು ನನ್ನ ಮಗ ರೋಹಿತ್. ಬಿ.ಎಸ್ಸಿ ಕಲಿತಿದಾನ. ಜೊತೆಗೆ ಇಂವನು ಸಿಂಗರ್. ಒಬ್ಬರಿಗೊಬ್ಬರು ನಮಸ್ಕಾರ ಮಾಡಿದ್ರು. ಇನ್ನು ರೂಪಾ ಹಾಸ್ಟೇಲ್ ಕಡೆ ಮುಖ ಮಾಡಿ ಹೋದಳು. ಅವಳು ಹೋಗಿ ಎಷ್ಟಹೊತ್ತಾದ್ರೂ ಇಂವನು ಮಾತ್ರ ಅವಳು ಹೋದ ಹಾದಿಯ ಕಡೆ ನೋಡುತ್ತಾ ಒಬ್ಬನೆ ನಗುತ್ತಾ ನಿಂತುಕೊಂಡ.
ಕಾಲೇಜು ನೃತ್ಯ, ನೃತ್ಯ ಕಾಲೇಜು ಎರಡರಲ್ಲೊ ರೂಪಾ ಶ್ರದ್ಧೆಯಿಂದ ಕಲೆಯಲಾರಂಭಿಸಿದಳು. ಭಾಗವತರು ಭರತನಾಟ್ಯದ ವಿವಿಧ ಪ್ರಕಾರಗಳು, ಭಂಗಿಗಳು, ಹಾವ ಭಾವ, ತಾಳಕ್ಕೆ ತಕ್ಕಂತೆ ಹ್ಯಾಗೇ ನೃತಿಸಬೇಕು. ಯಾವ ಯಾವ ನೃತ್ಯಕ್ಕೆ ಮುಖ ಭಾವ, ಕಣ್ಣು ಸನ್ನೆ, ದೇಹದ ಆಂಗಿಕ ಭಾಷೆ ಯಾವ ರೀತಿಯಲ್ಲಿರಬೇಕು ಎನ್ನುವುದೆಲ್ಲವನ್ನ ಕಲಿಸುತ್ತಾ ಹೋದ್ರು. ಇದೆಲ್ಲವನ್ನ ಕಲಿಯುತ್ತಾ ಗುರುಗಳ ಪ್ರೀತಿಯ ಶಿಷ್ಯಳಾಗಿ ಅವರ ಪ್ರೀತಿಯನ್ನ ಸಂಪಾದಿಸಿದಳು. ಶಿವರಾತ್ರಿಯ ಕಾರ್ಯಕ್ರಮದ ನಿಮಿತ್ಯ ನಡೆದ ನೃತ್ಯ ಕಾರ್ಯಕ್ರಮದ ಮೂಲಕ ರೂಪಾ ರಂಗ ಪ್ರವೇಶ ಮಾಡಿದಳು. ಇದರ ಮಧ್ಯ ರೋಹಿತ್ ಇವಳ ರೂಪಕ್ಕೆ ಮರುಳಾಗಿ ಅವಳಲ್ಲಿ ಅನುರಕ್ತನಾಗುತ್ತಾ ಹೋದ. ಬಹುಬೇಗ ತಿಳಿದುಕೊಂಡ ರೂಪಾ ಭರತನಾಟ್ಯದ ಅಂತರಂಗ ಬಹಿರಂಗ ಅರಿತಳು. ಭಾಗವತರಿಂದ ಕಥಕ್ ಮತ್ತ ಕಥಕ್ಕಳಿ ಕಲಿತು ಅನೇಕ ಕಡೆ ನೃತ್ಯ ಪ್ರದರ್ಶನವನ್ನ ನೀಡುತ್ತಾ ಬಂದಳು. ಆಕೆ ಅಂದುಕೊಂಡಂತೆ ಊರಿನ ಮಂದಿ ಅವಳನ್ನ ಟಿವಿಯಲ್ಲಿ ನೋಡುವಂತೆ ಆಯ್ತು.
ಭಾಗವತರು ಗೋವಿಂದ ಪ್ರಸಾದರೆನ್ನುವ ಇನ್ನೊಬ್ಬ ಗುರುಗಳನ್ನ ಪರಿಚಯ ಮಾಡಿಕೊಟ್ರು. ಅವರಿಂದ ಓಡಿಸ್ಸಾ ನೃತ್ಯ ಕಲಿತಳು. ಲೋಕಯ್ಯನವರಿಂದ ಕೂಚಿಪುಡಿ ಕರಗತ ಮಾಡಿಕೊಂಡಳು. ಇಂದ್ರಿಂದಾಗಿ ಆಕೆಗೆ ರಾಜ್ಯ ರಾಷ್ಟ್ರದಲ್ಲಿ ಹೆಸರು ಮಾಡುವ ಮಟ್ಟಕ್ಕೆ ಬೆಳೆದು ನಿಂತಳು. ಅವಳ ಸಾಧನೆಗೆ ಹಲವಾರ ಪ್ರಶಸ್ತಿ ಪುರಸ್ಕಾರಗಳು ಹುಡುಕಿಕೊಂಡು ಬಂದವು. ತಾನು ಏನೇ ಸಾಧಿಸಿದ್ರೂ ಅದು ನನ್ನ ತಾಯಿ ಮತ್ತು ಭಾಗವತರಂತ ಗುರುಗಳ ಆರ್ಶಿವಾದ ಅಂತ ಹೇಳುತ್ತಿದ್ದಳು. ಅವಳಿಗೆ ಗೊತ್ತಿತ್ತು ಕಲೆ ಎನ್ನುವುದು ರಂಗುರಂಗಿನ ಬದುಕಲ್ಲ ಎನ್ನುವುದು. ಹಾಗಾಗಿ ರಂಗದ ಮೇಲಿನ ರಂಗು ರಂಗಾದ ಬೆಡಗಿಗೇ ಮಾರು ಹೋಗದೇ ಕಲೆಯ್ನನ ಜೀವಂತವಾಗಿ ಇಟ್ಟುಕೊಳ್ಳಲು ಮತ್ತು ಹೆಚ್ಚಿನದನ್ನ ಕಲಿಯಲು ನಟುವಾಂಗದ ಕಲೆಯನ್ನ ಕಲಿಯಲು ಆರಂಭಿಸಿದಳು. ತಾಳವನ್ನ ಹಿಡಿದು ನಟುವಾಂಗದ ಜಗತ್ತಿನಲ್ಲಿ ಅಪರೂಪವಾದ ಯಶಸ್ಸನ್ನ ಗಳಿಸಲು ಇನ್ನಿಲ್ಲದಂತಹ ಪ್ರಯತ್ನ ಮಾಡಿ, ಅದನ್ನ ಸಾಧಿಸಿಕೊಂಡಳು. ಇದ್ರಿಂದಾಗಿ ಅವಳು ದೇಶ ವಿದೇಶದಲ್ಲಿ ಮೇಲಿಂದ ಮೇಲೆ ಪ್ರದರ್ಶನ ನೀಡುವಂತಾಯ್ತು. ತನ್ನೊರಿನ ಹೆಸರನ್ನ ಇನ್ನಷ್ಟು ಬೆಳಗುತ್ತಾ ಹೋದಳು. ಅದು ಎರಡೇ ವರ್ಷದಲ್ಲಿ ಬಹು ಎತ್ತರಕ್ಕೆ ಹೋದಳು.
ಒಂದು ಕಡೆ ಇವಳು ಇನ್ನೊಂದು ಕಡೆ ರೋಹಿತ್ ಗಾಯನದಲ್ಲಿ ಹೆಸರು ಮಾಡುತ್ತಿದ್ದ. ಇದರ ನಡುವೆ ರೋಹತ್ನ ಎದೆಯಲ್ಲಿ ಅಂದು ಚಿಗುರಿದ ಪ್ರೀತಿಯ ಬಳ್ಳಿ ಬೆಳೆಯುತ್ತಾ ಬರುತ್ತಿತ್ತು. ಎಷ್ಟೋ ಸಾರಿ ಹೇಳುವ ಪ್ರಯತ್ನ ಮಾಡಿದ. ಅದ್ಯಾಕೊ ಹೇಳಲೇ ಇಲ್ಲ. ಅವರಿಬ್ಬರ ನಡುವೆ ಸ್ನೇಹವಂತೂ ಬೆಳದಿತ್ತು.. ಆದ್ರೆ ಪ್ರೀತಿ ಮಾತನ್ನ, ಬಚ್ಚಿಟ್ಟುಕೊಂಡ ಆಸೆಯನ್ನ, ಹೇಳದೆ ಉಳಿದುಕೊಂಡಿರುವ ಪಿಸು ಮಾತುಗಳನ್ನ ಅವಳೆದುರಿಗೆ ಒಂದೇ ಉಸಿರಿನಲ್ಲಿ ಹೇಳುವ ದೈರ್ಯ ಮಾತ್ರ ಮಾಡಿರಲಿಲ್ಲ. ಒಂದು ದಿನ ಇಬ್ಬರು ಒಂದೇ ವೇದಿಕೆ ಮೇಲೆ. ಅಂವನ ಸ್ವರಕ್ಕೆ ಇವಳು ಹೆಜ್ಜೆ ಯಾಗಿದ್ದಳೊ ಅವಳ ಹೆಜ್ಜೆಗೆ ಇಂವನ ಸ್ವರವಾಗಿದ್ದನೊ ಗೊತ್ತಿಲ್ಲ. ಒಬ್ಬರನೊಬ್ಬರು ಮೀರಿಸುವಷ್ಟು ಜುಗಲ್ಬಂದಿ ನಡೆಯಿತು. ಹಿಂಗ್ ಮುಂದ ಇವರಿಬ್ಬರ ಕಾರ್ಯಕ್ರಮಗಳು ಇದೆಯಂದ್ರೆ ಸಾಕು ಕಲಾ ರಸಿಕರು ಕಾತುರದಿಂದ ಎದುರು ನೋಡುವ ಮಟ್ಟಕ್ಕೆ ಹೆಸರಾದ್ರು. ಅಂವನಲ್ಲಿ ಮೂಡಿದ್ದ ಪ್ರೀತಿ ಇವಳಲ್ಲಿಯೂ ಮೂಡಿ ಹಚ್ಚಹಸಿರಾಗಿ ಕಂಗೊಳಿಸುತ್ತಿತ್ತು. ಅಂವನನ್ನ ಬಿಗಿದಪ್ಪಿಕೊಂಡು ನಾ ನಿನ್ನ ಪ್ರೀತಿ ಮಾಡುತ್ತಿದ್ದೇನೆ ಅಂತ ಹೇಳಬೇಕು ಎನ್ನುವ ಅವಳ ಆಸೆಗೆ ತಾಯಿ ಕಟ್ಟಿದ ಜಾತಿ ಗೋಡೆ ಒಡೆಯಲಾಗದಷ್ಟು ಅಸಾಹಕಳಾಗಿದ್ದಳು. ಹೀಗಾಗಿ ಪ್ರೀತಿಯನ್ನುವುದು ಹೊರಬರಲಾಗದೇ ಅವಳೆದೆಯಲ್ಲಿ ಸಿಕ್ಕು ಒದ್ದಾಡುತ್ತಿತ್ತು. ಗುರುಗಳ ಮೇಲಿನ ಗೌರವ, ಇನ್ನೊಂದಡೆಗೆ ತಾಯಿ ಮಾತು ಅವಳ ಎಲ್ಲ ಬಂಧನಕ್ಕೊ ಕಾರಣವಾಗಿದ್ದವು.
*****
ಒಬ್ಬಳೇ ತಿರಗಾಡುವುದು ಅಂದ್ರ ರೂಪಾಳಿಗೆ ಮೊದ್ಲನಿಂದಲೂ ಹುಚ್ಚು. ಅದಕ್ಕಾಗಿ ಅವಳು ಬೆಂಗಳೂರಿನ ಗಲ್ಲಿ ಗಲ್ಲಿಗಳನ್ನ ಸುತ್ತಾಡಿದ್ದಳು. ಜನಜಂಗುಳಿ, ಅವರ ಬದುಕು, ಹೊಟ್ಟೆ ಪಾಡಿಗಾಗಿ ಬಡದಾಡುವಂತಹ ರೀತಿ, ಬಿಕ್ಷಕರ ಪಾಡು ಹೀಗೆ ಇವರೆಲ್ಲರ ನಡುವ ಅವಳದೊಂದು ಲೋಕವನ್ನ ಸೃಷ್ಟಿಸಿಕೊಂಡು ಸಾಗುತ್ತಿದ್ದಳು. ಕೆಆರ್ ಮಾರ್ಕೆಟ್ಗೆ ಕಾಲಿಟ್ಟರೇ ಸಾಕು ಅಲ್ಲಿನ ಜನ್ರ ನಡುವೆ ಏನನ್ನೊ ಹುಡುಕುವ ಪ್ರಯತ್ನ ಮಾಡುತ್ತಿದ್ದಳು. ಎಷ್ಟೋ ಸಾರಿ ಅಲ್ಲಿನ ಜನ್ರ ಬದುಕನ್ನ ರಂಗದ ಮೇಲೆ ತನ್ನ ನೃತ್ಯದ ಮೂಲಕ ಹೇಳುವ ಪ್ರಯತ್ನ ಮಾಡಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದಳು. ಒಂದು ದಿನ ಮಾರುಕಟ್ಟೆಯಲ್ಲಿ ಸುತ್ತಾಡುವಾಗ ಬೆಂಗಳೂರಿನ ಕೋಟೆ ಬಾಜು ಹೋಗುತ್ತಿದ್ದಳು. ಬದಲಾದ ಕಾಲಘಟ್ಟದಲ್ಲಿ ಇತಿಹಾಸ ಹ್ಯಾಗೇ ಮಲಗಿಕೊಂಡಿದೆ ಅಂತ ಚಿಂತಿಸುತ್ತಾ ಹೊರಟ್ಟಿದ್ದಳು. ಕೆಂಪೇಗೌಡರ ಕಾಲದಲ್ಲಿ ಕಟ್ಟಿದ ಕೋಟೆ. ಮೈಸೂರಿನ ಸುಲ್ತಾನ ಆಗಿ ಮೆರೆದ ಟಿಪ್ಪು ಆಳಿದ ಕೋಟೆ, ಬ್ರಿಟಿಷರ ಕಾಲದಲ್ಲಿ ಆಡಳಿತಕ್ಕೆ ಒಳಪಟ್ಟ ಕೋಟೆ. ಅಂದು ಇದರ ಸುತ್ತಮುತ್ತ ಕುಳಿತು ಮತ್ತು ರತ್ನಗಳೇನಾದರೂ ಮಾರಿದ್ದಾರೋ ಗೊತ್ತಿಲ್ಲ. ಆದ್ರೆ ಇಂದು ಮಾತ್ರ ದಿನದ ಹೊಟ್ಟೆ ತುಂಬಿಸಿಕೊಳ್ಳಲು ಬಟ್ಟೆ ಮಾರುವವರು, ಕಾಯಿಪಲ್ಲೆ ಮಾರುವವರು, ಚಪ್ಪಲಿ ಮಾರುವವರು, ಮೊಳಕ್ಕೆ ಹತ್ತು ರೂಪಾಯಿ ಅಂತ ಮಾರುವ ಹೂವಿನಾಕಿ ಬಳೆ ಮಾರುವವರು. ಇವರೆಲ್ಲರ ಕಿರಚಾಟ ಕೇಳಿಸಿಕೊಳ್ಳುತ್ತಾ ಅವರಲ್ಲಿ ತಾನೂ ಒಬ್ಬಳು ಆಗುತ್ತಿದ್ದಳು. ಅಲ್ಲಿಯೇ ಮಲಗಿ ಅಲ್ಲಿಯೇ ಎದ್ದು ತಿಂದು ಬದಕುವ ಅವರು ಎಲ್ಲದಕ್ಕೊ ಹೊಂದಿಕೊಂಡಿದ್ದಾರೊ ಇಲ್ಲ ಅವರಿಗೆ ಅದೇ ಹೊಂದಿಕೊಂಡಿದಿಯೊ ಅಂತ ಗೊತ್ತಾಗದೇ ಅದೇ ಯಕ್ಷಪ್ರಶ್ನೆಯನ್ನ ಮತ್ತೆ ಬೆನ್ನಿಗೆ ಕಟ್ಟಿಕೊಂಡು ಸಾಗುತ್ತಿದ್ದಳು.
ಭರತನಾಟ್ಯ. ಕಥಕ್ ಮತ್ತು ಕಥಕಳಿಯಲ್ಲಿ ಅಪಾರ ಸಾಧನೆಯನ್ನ ಮಾಡಿದ ರೂಪಾಳಿಗೆ ಸದಾ ಹೊಸದನ್ನು ಕಲಿಯಬೇಕೆಂಬ ಹಂಬಲ. ಕೂಚುಪುಡಿ ಕಲಿತಳು. ಆಂಧ್ರದಲ್ಲಿ ಪ್ರದರ್ಶನ ನೀಡಿ ಅಲ್ಲಿನ ಕಲಾವಿದರನ್ನ ಸೋಲಿಸಿ, ಅವರ ಪ್ರೀತಿಯನ್ನ ಸಂಪಾದಿಸಿದಳು. ಈ ಮೂಲಕ ಭಾರತದ ಶಾಸ್ತ್ರಿಯ ನೃತ್ಯ ಪ್ರಕಾರಗಳಲ್ಲಿ ತನ್ನದೆಯಾದಂತಹ ಹೆಜ್ಜೆ ಗುರುತುಗಳನ್ನ ಮೂಡಿಸುತ್ತಾ ಹೋದಳು. ಅದು ಕೇವಲ ಐದಾರು ವರ್ಷಗಳಲ್ಲಿ. ಓಡಿಸ್ಸಾ, ಮಣಿಪುರಿ, ಟಂಗಾಟಾ ನೃತ್ಯಗಳನ್ನ ಕೂಡಾ ಕರಗತ ಮಾಡಿಕೊಂಡಳು. ಆದ್ರ ಅವಳ ಭರತನಾಟ್ಯ ಬಿಟ್ರ ಕಥಕ್ ಮತ್ತು ಕಥಕಳಿ ಮಾತ್ರ ದೇಶ ವಿದೇಶದಲ್ಲಿ ಸಾಕಷ್ಟು ಹೆಸರು ಗಳಿಸಿತ್ತು. ಶಿಷ್ಯಳ ಅಪಾರವಾದ ಸಾಧನೆ ಕಂಡು ಮೊದಲ ಗುರುಗಳಾದ ಭಾಗವತರು ಶಾಂತಲಾ ಅಂತಾ ಅವಳಿಗೆ ಮರುನಾಮಕರಣ ಮಾಡಿದ್ರು. ಇತಿಹಾಸದ ಪುಟಗಳಲ್ಲಿ ನಾಟ್ಯ ಕಲೆಯಲ್ಲಿ ತನ್ನದೆಯಾದ ರಾಜಮುದ್ರೆಯನ್ನ ಒತ್ತಿದ ಶಾಂತಲಾ ಎನ್ನುವ ಹೆಸರು ರೂಪಾಳ ಮೈ ಮನವನ್ನ ಕಂಪಿಸಿತು.
ರೂಪಾ ರಂಗ ಪ್ರವೇಶ ಮಾಡಿದಳು ಅಂದ್ರೆ ದಾಸರ ಪದ, ಪದಾಭಿನಯ, ಮಧ್ಯಮಾವತಿ, ಮಾಂಜಿ, ರೇವತಿ ಆಹಿರ್ ಭೈರವ್, ರೂಪಮುಜೂಚಿ, ನೀಮಾವಲೇಮಾಯನೋ ಪೂರ್ವಿಕಲ್ಯಾಣಿ ಸೇರಿದಂತೆ ಯಾವುದೇ ನೃತ್ಯ ಪ್ರಕಾರವಿರಲಿ ಕುಣಿಯುತ್ತಿದ್ದಳು. ನೃತ್ಯದ ಸಂಪ್ರದಾಯಕ ಊಡುಗೆ ತೊಡುಗೆಗಳೊಂದಿಗೆ ಕಂಗಳಿಸುತ್ತಿದ್ದ ರೂಪಾ, ಇಪ್ಪತ್ತು ಅಕ್ಷರ ಕಾಲದ ಸಿಂಹ ನಂದಿನಿ ತಾಳಕ್ಕೆ ನೃತಿಸುತ್ತಾ ಕೂಚಿಪುಡಿ ನಾಟ್ಯ ಮಾಡಿದಳು ಅಂದ್ರೆ ಬಿಳಿಯ ಬಟ್ಟೆಯ ಮೇಲೆ ಸಿಂಹದ ಚಿತ್ರವನ್ನ ತನ್ನ ಪಾದ ಚಲನೆಗಳಿಂದ ರೂಪಿಸುವ ಮೂಲಕ ನೆರೆದ ಕಲಾರಸಿಕರು ಅವಳನ್ನ ಬಿಟ್ಟು ಬೇರೆ ಕಡೆ ನೋಡದಂತೆ ನೃತಿಸುತ್ತಿದ್ದಳು.
ಹೀಗೆ ರೂಪಾ ನೃತ್ಯದ ಅನೇಕ ಪ್ರಕಾರಗಳಲ್ಲಿ ಬೆಳೆಯುತ್ತಾ ಹೋದಳು. ಮಗಳ ಈ ಎಲ್ಲ ಸಾಧನೆ ನೋಡುತ್ತಿದ್ದ ತಾಯಿ, ಊರಲ್ಲಿ ತಲೆಯತ್ತಿ ತಿರುಗಾಡುತ್ತಿದ್ದಳು. ಅವಳ ಗಂಡ ಸತ್ತ ನಂತ್ರ ಅವಮಾನಿಸಿದವರ ಮುಂದ, ದುಡ್ಡಿನ ಸೊಕ್ಕಿನಿಂದ ಮಲಗಲು ಕರೆದವರ ಎದೆಗೆ ಜಾಡಿಸಿ ಒದ್ದವರಂಗ ತಿರಗುತ್ತಿದ್ದಳು. ಎರಡು ಕೋಣೆಯ ಮನಿ ಹೋಗಿ ಬಂಗಲೆ ತೆಲೆ ಎತ್ತಿತ್ತು. ಮಗಳು ಕೆಲ್ಸದವರಿಗೆ ಹೇಳುತ್ತೇನೆ ಅಂದ್ರು ಬ್ಯಾಡ ಅಂದು, ತನ್ನ ಕೆಲ್ಸ ತಾನೇ ಮಾಡುತ್ತಾ ಅದೇ ಹಳ್ಳಿಯಲ್ಲಿ ಕಾಲ ಕಳೆಯುತ್ತಿದ್ದಳು. ಅಂದು ಯಾರೂ ಬರತಿರದ ಮನಿಗಿ ಇಂದು ಹತ್ತಾರು ಜನ್ರು ಬರತ್ತಿದ್ರು. ಅವರ ಮುಂದ ಮಗಳ ಗುಣಗಾನ ಮಾಡುತ್ತಾ, ಎಲ್ಲಿಯಾದ್ರೂ ಚಲೊ ಮನಿತನದ ವರ ಇದ್ರ ಹೇಳ್ರಿ ಅಂತ ಹೇಳತ್ತಿದ್ದಳು.
*****
ಕಾದು ಕಾದು ಸಾಕಾಗಿ ಹೋದ ರೋಹಿತ್, ಒಂದು ದಿನ ರೂಪಾಳ ಎದ್ರು ತನ್ನ ಪ್ರೀತಿಯ ವಿಷಯವನ್ನೆಲ್ಲ ಹೇಳಿದ. ಇದನ್ನ ಕೇಳಿದ ರೂಪಾಳಿಗೆ ಸಾಕಷ್ಟು ಸಂತೋಷ ಆದ್ರೂ ತೋರಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ ಅವಳು. ನಾನು, ಎಂದವಳೆ ತಾಯಿ ಹೇಳಿದ ಮಾತು ನೆನಪಿಗೆ ಬಂದು ಸಮ್ಮನಾದಳು. ಹೇಳು ಏನು ಹೇಳಬೇಕೆಂದಿರುವೆ ಅದನ್ನೆಲ್ಲ ಹೇಳು ಅಂತ ರೋಹಿತ್ ಕೇಳಿದ. ಅವಳ ಉತ್ತರಕ್ಕಾಗಿ ಕಾದು ನಿಂತ. ಯಾವುದಕ್ಕೊ ಉತ್ತರ ನೀಡದೆ ಕಣ್ಣೀರು ಹಾಕುತ್ತಾ ಓಡಿ ಹೋದಳು.
ರಾತ್ರಿ ಎಷ್ಟಹೊತ್ತಾದ್ರೂ ರೂಪಾಳಿಗೆ ನಿದ್ದೆ ಬಂದಿರಲಿಲ್ಲ. ಸಮ್ಮನೆ ಹೊರಳಾಡತ್ತಿದ್ದಳು. ಹೌದು ರೋಹಿತ್ ಅಂದ್ರೆ ನನಗೆ ಇಷ್ಟ, ಅಂವನ ಬಿಟ್ಟು ಬದಕುವುದು ಕಷ್ಟದ ಮಾತು ಅಂತ ಒಂದು ಮನಸ್ಸು, ಒಂದು ವೇಳೆ ಒಪ್ಪಿಕೊಂಡಿರೆ ಪ್ರೀತಿಯಿಂದ ಕಲಿಸಿ ನನ್ನನ್ನ ಇಷ್ಟು ಎತ್ತರಕ್ಕೆ ತಂದ ಗುರುಗಳ ಗೌರವಕ್ಕೆ ಪ್ರೀತಿಗೆ ಮೋಸ ಮಾಡಿದಂತೆ ಆಗುತ್ತೆ. ತಾಯಿ ಮಾತು ಮೀರಿದಂತೆ ಆಗುತ್ತೆ ಅಂತ ಇನ್ನೊಂದು ಮನಸ್ಸು ಹೇಳುತಿತ್ತು. ಒಟ್ಟಿನಲ್ಲಿ ಯಾವುದೇ ನಿರ್ಧಾರಕ್ಕೆ ಬಾರದ ಸಂಕಟದಲ್ಲಿ ಸಿಲುಕಿ ಒದ್ದಾಡುತ್ತಿದ್ದಳು. ಮೂರು ಮುಖಗಳು ನೂರು ಪ್ರಶ್ನೆಗಳು… ಅದಾಗಲೇ ಗೋಡೆಯ ಮೇಲೆ ನೇತು ಹಾಕಿದ ಗಡಿಯಾರದ ಮುಳ್ಳು ಮೂರರ ಆಜುಬಾಜು ತೋರಿಸುತಿತ್ತು.
ರೂಪಾಳಿಗೆ ಎಚ್ಚರವಾದಗ ಮುಂಜಾನೆ ಎಂಟು ಗಂಟೆಯಾಗಿತ್ತು. ಎದ್ದವಳೇ ಲಘುಲಘು ತಯಾರಿ ಆಗಿ ಮಲ್ಲೇಶ್ವರಂ ಕಡೆ ಹೆಜ್ಜೆ ಹಾಕಿದಳು. ಅವಳಂದುಕೊಂಡತೆ ಭಾಗವತರು ಮನಿಯಲ್ಲಿದ್ರು. ಇವಳನ್ನ ನೋಡಿದ್ದೆ ತಡ ಖುಷಿಯಿಂದ ಕರೆದು ಕುಂದ್ರುಸಿ ಮಾತನಾಡಲಾರಂಭಿಸಿದ್ರು. ಹೇಗೆ ನಡಿತಿದೆ ನಿನ್ನ ನೃತ್ಯ, ಊರೂರು ಸುತ್ತಾತ ಇದಿ. ಇದರ ನಡುವ ನಿಮ್ಮ ಊರ ಕಡೆ ಹೋಗಿ ಬಂದಿಯಾ ಅಂತ ಏನೇನೊ ಕೇಳಿದ್ರು. ಯಾವುದಕ್ಕೊ ಉತ್ತರ ಕೊಡದೆ ಸುಮ್ನೆ ಕುಳಿತ್ತಿದ್ದಳು.
ಯಾಕ ಮಗಳೇ ಏನಾಯಿತು ಅಂತ ಭಾಗವತರು ಕೇಳಿದ್ರು. ಎದ್ದವಳೇ ಅವರ ಕಾಲ ಹಿಡ್ದು ನನ್ನನ್ನ ಕ್ಷಮಿಸಿ ಬಿಡಿ. ನಾ ನಿಮಗ ಮೋಸ ಮಾಡಿದಿನಿ. ನನ್ನ ಮ್ಯಾಲ ನೀವು ಇಟ್ಟ ನಂಬಿಕಿಯನ್ನ ಕಳೆದುಕೊಂಡಿದಿನಿ ಅಂತ ಹೇಳುತ್ತಾ ಅಳುತ್ತಿದ್ದಳು. ಏನಾಯಿತು ಅಂತ ಹೇಳಿದರೆ ತಾನೇ ನನಗೂ ಗೊತ್ತಾಗೊದು. ನೀ ಸಮ್ನೆ ಅಳಬ್ಯಾಡ. ನಾ ನೀನ್ನ ಜೊತೆ ಇರತಿನಿ. ಅದೇನಾಯಿತು ಹೇಳು ಅಂದ್ರು. ಒಮ್ಮೆ ಅವರ ಮುಖ ನೋಡಿ ತಲೆ ತಗ್ಗಿಸಿ ನಡೆದ ಎಲ್ಲ ಘಟನೆಯನ್ನ ತ್ವದಲುತ್ತಾ ಹೇಳಿದಳು. ಕಲೆಗೆ ಹ್ಯಾಗೇ ಕುಲ ಜಾತಿ ಧರ್ಮ ಅನ್ನುವ ಭೇದ ಭಾವ ಇಲ್ಲವೊ ಹಾಗೇ ಪ್ರೀತಿಗೊ ಯಾವುದೇ ಜಾತಿ ಎಂಬ ಭೇದವಿಲ್ಲ. ಆ ತಾಯಿ ಸರಸ್ವತಿಗೆ ಎಲ್ಲರೊ ಒಂದೇ. ಯಾರು ಅವಳನ್ನ ಶ್ರದ್ಧೆಯಿಂದ ಪೂಜಿಸಿ ಸಿದ್ಧಿಯನ್ನ ಪಡಿತಾರೇ ಅವರಿಗೆ ಅವಳು ಒಲಿಯುವಳು. ಅದ ತರ ಪ್ರೀತಿ ಅನ್ನುವುದು ಗಂಡು ಹೆಣ್ಣಿನ ನಡುವೆ ಹುಟ್ಟುವ ಆಕರ್ಷಣೆಗಿಂತ ಅವರಲ್ಲಿನ ಯಾವದೋ ಒಂದು ಗುಣ ಇಷ್ಟವಾಗಿರುತ್ತೇ. ಹಾಗಾಗಿ ಅವರು ಸದಾ ನಮ್ಮ ಜೊತೆ ಇರಬೇಕು ಎನ್ನುವ ಆಸೆ. ಅದೇ ಪ್ರೀತಿ. ಇವರಿಬ್ಬರು ಭಾವನಾತ್ಮಕವಾಗಿ ಮಿಲನವಾಗಬೇಕು. ಅಂತ ಮಗಳಿಗೆ ತಾಯಿಯಾದವಳು ಹ್ಯಾಗೇ ಹೇಳುತ್ತಾಳೋ ಆ ರೀತಿಯಲ್ಲಿ ರೂಪಾಳಿಗೆ ಭಾಗವತರು ಹೇಳಿದ್ರು. ಹಾಂ ಒಂದು ಮಾತು, ನಿಮಗಿಂತ ಮೊದ್ಲೇ ನಾನು ನಿಮ್ಮಿಬ್ಬರನ್ನ ಕರೆಯಿಸಿ ಈ ವಿಷಯದ ಬಗ್ಗೆ ಮಾತನಾಡಬೇಕೆಂದಿದ್ದೆ. ಆದ್ರೆ ನನ್ನ ಒಂದು ಆತುರದ ನಿರ್ಧಾರ ನಿಮ್ಮಿಬ್ಬರ ಭವಿಷ್ಯದ ಮೇಲೆ ಯಾವುದೇ ಪರಿಣಾಮ ಬೀರದಿರಲಿ ಎನ್ನುವ ಕಾರಣಕ್ಕೆ ಸುಮ್ಮನಾಗಿದ್ದೆ. ಈಗ ನಿನ್ನಲ್ಲಿ ಜೀವನ ಅಂದ್ರ ಏನು ಅನ್ನುವುದು ಗೊತ್ತಾಗೈಯಿತಿ. ನಿಮ್ಮ ಆಸೆ ಕನಸುಗಳಿಗೆ ನನ್ನಿಂದ ಯಾವುದೇ ತೊಂದರೆ ಇಲ್ಲ. ಆದ್ರೆ ಅವ್ವ ಏನು ಅಂತಾಳೊ ಏನೊ ಅಂತಾ ರಾಗ ತಗೆದಳು.
ಗಂಗವ್ವಳು ಮಗಳ ಮದುವೆಗೆ ಒಪ್ಪಿದಳು. ಸರಳವಾದ ಮದ್ವಿ ಆಗಿ ಹೋಯಿತು. ಆದ್ರ ಊರಾಗಿನ ಮಂದಿ ತಲೆಗೊಂದರಂತೆ ಮಾತನಾಡಲಕ್ಕೆ ಶುರು ಮಾಡಿದ್ರು. ಅಲ್ಲಾ ಎವ್ವಾ ಜಾತಿ ಅಲ್ಲಾ ಕುಲಾ ಅಲ್ಲಾ ಅದ ಹ್ಯಾಂಗ್ ಲಗ್ನ ಮಾಡಿದ್ರ ನೋಡ. ಏ ಸಂಗಿ, ಅಕಿ ಬೆಂಗಳೂರನಾಗ ಏನಾ ಮಾಡಬಾರದು ಮಾಡಿರಬೇಕು. ಅದಲ್ಲದ ಪಾರನ ಗಿರೇನ ಅಂತ ತಿರಗ್ಯಾಳ ಅಂತ ಕಾಳಿ ಅಂದ್ಳು. ನೀ ಹೇಳೋದು ಖರೆ ಐತಿ. ಈಗಿನವ್ರು ಲಗ್ನಕ್ಕಿಂತ ಮೊದ್ಲ ಎಲ್ಲ ಮಾಡಿರತಾರ. ಎ ಎವ್ವಾ ಮಾಡದವರ ಪಾಪ ಆಡದವರ ಬಾಯಲ್ಲಿ ಅಂದಗ್ ಅವರ ಮನಿ ಈಶ್ಯಾ ನಮಗ್ಯಾಗ ಬೇಕ ಹೇಳ. ಯಾರದೋ ಬಸರಿಗಿ ಯಾರದೋ ಹೆಸರ ಹೇಳೋ ಕಾಲ ಇದು ಅಂತ ತಳಾಬುಡಾ ಒಂದು ಗೊತ್ತಿರದ ನೂರೆಂಟ ಮಾತುಗಳು ಕೇಳಿ ಬರುವುದಕ್ಕ ಶುರು ಮಾಡತು. ಮತ್ತ ಗಂಗವ್ವ ಊರಿನ ಜನ್ರ ಬಾಯಿಗಿ ಆಹಾರವಾಗಿ ಹೋಗಿದ್ದಳು. ಗಂಡ ಸತ್ತಾಗ ಊರಿನ ಬರಮಪ್ಪಗೌಡನೊಂದಿಗೆ ಇದ್ದಳು ಅಂತ ಸಾಯಿಸುವುದಕ್ಕ ಬಂದ ಅಂಜನಾಪುರದ ಜನರಿಂದ ತಪ್ಪಿಸಿಕೊಂಡ ಬಂದು ಸಿಗರಹಳ್ಳಿಯಲ್ಲಿ ಇದ್ದಳು. ಈಗ ಈ ಊರಿನವರ ಮಗಳು ಹಾದರಾ ಮಾಡ್ಯಾಳ ಅಂತ ಹೇಳಾಕತ್ತಾರ, ಇನ್ನ ಯಾವ ಊರ ಹುಡಕಿಲಿ ಅಂತ ತಲಿಮ್ಯಾಲ ಕೈ ಹೊತ್ತ ಕುಂತವಳನ್ನ ಮಗಳು ಬೆಂಗಳೂರಿಗೆ ಕರೆದುಕೊಂಡು ಬಂದಳು.
ಮೆಜಿಸ್ಟಿಕ್ ಕೆಆರ್ ಮಾಕೆರ್ಟ್ ಅಂತ ಬೆಂಗಳೂರಿನ ಸಂದಿಯಲ್ಲಿ ಒಂಟಿಯಾಗಿ ತಿರಗಿದ್ದ ರೂಪಾ ಈಗ ಜೋಡಿ ಹಕ್ಕಿಯಂತೆ ಆಗಿದ್ದಳು. ಇಬ್ಬರು ಕೈ ಕೈ ಹಿಡಿದುಕೊಂಡು ಭೂತ ಭವಿಷತ್ ಕಾಲಗಳ ಬಗ್ಗೆ ಮಾತನಾಡುತ್ತಾ ಎಂಜಿ ರಸ್ತೆಯ ಮೇಲೆ ಹೆಜ್ಜಿ ಹಾಕತ್ತಿದ್ರು. ಅಲ್ಲಿಯೇ ಇದ್ದ ಕಾಪಿ ಡೇಗೆ ಹೋದ್ರು. ಕಾಫಿ ಕುಡಿಯುತ್ತಾ ಕಿಟಕಿಯಾಚೆ ಕಣ್ಣಾಡಿಸಿದಳು. ನಾಚಿಕೆ ಎನ್ನುವದಕ್ಕಿಂತ ಅಸಹ್ಯ ಹುಟ್ಟಿಸಿತ್ತು. ಹಣದ ಮತ್ತಿನ ಜೊತೆಗ ಹರೆಯದ ಹೊಸ್ತಿಲಿನಲ್ಲಿ ಕಾಲಿಟ್ಟಿದ್ದ ಎಷ್ಟೋ ಯುವ ಮುಖಗಳು ಉಬ್ಬು ತಗ್ಗುಗಳನ್ನ ತೋರಿಸುತ್ತಾ ಹಾದಿಯಲ್ಲಿಯೇ… ಕೆಆರ್ ಮಾಕೆರ್ಟ್ ಒಂದು ಕಡೆ ಎಂಜಿ ರಸ್ತೆಯನ್ನ ಒಂದು ಕಡೆ ಕಲ್ಪಸಿಕೊಂಡಳು. ಅವರ ಒಂದು ದಿನದ ಸಂಪಾದನೆ ಇವರ ತಾಸಿನ ಖರ್ಚಾಗಿತ್ತು. ಅಲ್ಲಿ ಬಡತನವಿದೆ. ಇಲ್ಲಿ ಸಿರಿತನವಿದೆ. ಅಲ್ಲಿ ಅನಕ್ಷರತೆ ಇದೆ. ಇಲ್ಲಿ… ಅಲ್ಲಿ ಕೆಲವರಿಗೆ ಉಡಲು ಬಟ್ಟೆಯಿಲ್ಲ. ಇಲ್ಲಿರವವರಿಗೆ ಬಟ್ಟೆ ಉಡಲು ಮನಸ್ಸಿಲ್ಲ. ಹೀಗೆ ಎರಡು ಮುಖಗಳ ವಿರುದ್ಧ ಹಾದಿಯ ಪಯಣ ಎನ್ನುತ್ತಿದ್ದಳು ಅಷ್ಟರಲ್ಲಿ ವೇಟರ್ ಬಂದು ಬಿಲ್ ಇಟ್ಟು. ಗ್ಲಾಸಿನ ಬಾಗಿಲು ತಳ್ಳಿ ಹೋರ ಬಂದ್ರು.
*****
ಇವರ ನೃತ್ಯ ಗಾಯನ ಅಂದ್ರೆ ಸಾಕು ಅಂದಿಗಿಂತ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಜನ್ರು ಬರುತ್ತಿದ್ರು. ಭರತನಾಟ್ಯದಲ್ಲಿ ರೂಪಾ ಒಂದು ಹೊಸ ನಕ್ಷತ್ರವಾಗಿ ಹೊಳೆಯುತ್ತಿದ್ದಳು. ವಿದೇಶದಲ್ಲಿ ಇವಳು ತೋರಿದ ಅದ್ಭುತ ಪ್ರದರ್ಶನದಿಂದ ಅದೆಷ್ಟೋ ಜನ್ರು ಭಾರತೀಯ ನೃತ್ಯ ಪರಂಪರೆಗೆ ತಲೆ ಬಾಗಿ ಶಾಸ್ತ್ರಿಯ ನೃತ್ಯ ಕಲಿಯಲು ಮುಂದಾದರು. ರೂಪಾಳ ಸಾಧನೆಗೆ ಕಲಾಶ್ರೀ, ನೃತ್ಯಸಿರಿ, ನಾಟ್ಯರಾಣಿ ಪ್ರಶಸ್ತಿ ಸೇರಿದಂತೆ ಅನೇಕ ಸನ್ಮಾನಗಳು ಅವಳನ್ನು ಹುಡುಕಿಕೊಂಡು ಬಂದವು.
ಹೀಗೆ ಬೆಳೆಯುತ್ತಾ ಹೋದ ರೂಪಾಳಿಗೆ ನಾಟ್ಯರಾಣಿ ಶಕುಂತಲಾ ಪ್ರಶಸ್ತಿ ಅರಸಿಕೊಂಡು ಬಂತು. ಆಕೆಯ ಗುರುಗಳು ಮತ್ತು ಶಕ್ತಿಯಾದ ಭಾಗವತರು ಶಕುಂತಲಾ ಪ್ರಶಸ್ತಿಯನ್ನ ನೀಡಿ ಗೌರವಿಸಿದ್ರು. ಮೈಕ್ ಮುಂದೆ ಬಂದು ನಿಂತು ಮಾತನಾಡಿದ ಅವಳು, ನಾನು ಮೊದ್ಲು ಬೆಂಗಳೂರಿಗೆ ಕಾಲಿಟ್ಟಾಗ ನನ್ನೂರ ಹೆಸರು ಕೇಳಿ ನಕ್ಕರು. ಬದಕು ಯಾವಾಗ ನಾವು ಅಂದುಕೊಂಡಂಗ ಇರುವುದಿಲ್ಲ. ಅದನ್ನ ನಮಗೆ ಬೇಕಾದ ಹಾಗೇ ಬದಲಿಸಿಕೊಳ್ಳಬೇಕು. ಆದ್ರೆ, ಆ ಬದಲಿಕಿಸಿಕೊಳ್ಳುವ ಹಠದಲ್ಲಿ ಸಾಕಷ್ಟು ನೋವು ಹತಾಸೆ ಇರುತ್ತದೆ. ಬೆಂಗಳೂರಿನಲ್ಲಿ ನಾ ಅನುಭವಿಸಿದ ನೋವು ಆ ದೇವರಿಗೆ ಪ್ರೀತಿ. ಇಲ್ಲಿ ಅದೆಲ್ಲವನ್ನ ಹೇಳುತ್ತಾ ಹೋದರೆ ನನ್ನನ್ನ ನಾನೇ ಹೊಗಳಿಕೊಂಡ ಹಾಗೇ ಆಗುತ್ತೆ ಅಂತ ಹೇಳಿದ ಅವಳು, ಇವತ್ತು ನಾನು ಇಷ್ಟು ಎತ್ತರಕ್ಕೆ ಬೆಳಯಲು ಕಾರಣ ಭಾಗವತ ಗುರುಗಳು ಅಂದ್ಳು. ನನ್ನ ಆಸೆ ಕನಸುಗಳಿಗೆ ಬಣ್ಣ ತುಂಬಿದವರು ಅವರು ಅಂತ ಹೇಳುವಾಗ ಅವಳಿಗೆ ಗೊತ್ತಿಲ್ಲದ ಹಾಗೇ ಕಣ್ಣ ಹನಿ ನೆಲಕ್ಕ ಮುತ್ತಿಕ್ಕಿತ್ತು.
ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಈ ನೆಲದಲ್ಲಿ ಕಲೆ ಎನ್ನುವುದು ನಮ್ಮ ಉಸಿರು ಇದ್ದಂತೆ. ನಮ್ಮ ಹಿರಿಯರು ಕಟ್ಟಿ ಬೆಳಸಿದ ಕಲೆ ಸಂಸ್ಕೃತಿಯನ್ನ ನಾವು ಉಳಿಸಿಕೊಂಡು ಮುಂದಿನ ಪಿಳಿಗೆಗೆ ನೀಡುತ್ತಾ ಹೋಗಬೇಕು. ಅಂದಾಗ ಮಾತ್ರ ಕಲೆ ಎನ್ನುವುದು ಸದಾ ಉಳಿಯುತ್ತೆ. ಇಂದು ನಾನೊಬ್ಬಳೇ ಬದುಕಿಲ್ಲ. ನನ್ನೂರಿನ ಪ್ರತಿಯೊಬ್ಬರು ಬದುಕಿದ್ದಾರ. ಭಾರತೀಯ ಸಂಗೀತ, ನೃತ್ಯದ ಬಗ್ಗೆ ವಿದೇಶಿಯರಿಗೆ ಸಾಕಷ್ಟು ಆಸಕ್ತಿ. ಹೀಗಾಗಿ ಇಂದು ನಮ್ಮ ದೇಶಕ್ಕೆ ಅಸಂಖ್ಯೆಯಲ್ಲಿ ವಿದೇಶಿಯರು ಸಂಗೀತ, ನೃತ್ಯ ಕಲೆಯಲು ಬರುತ್ತಾರೆ. ಅಮೆರಿಕಾ, ಸಿಂಗಾಪುರ, ಆಸ್ಟ್ರೇಲಿಯಾ, ಕೆನಡಾ ಸೇರಿದಂತೆ ಅನೇಕ ಕಡೆ ಭರತನಾಟ್ಯ ಸೇರಿದಂತೆ ಕಥಕ್ ಕಥಕ್ ಕಳಿ ಬಹು ಪ್ರಸಿದ್ಧಿ.
ನೀವು ಈಗ ನಿಮ್ಮ ಹಳ್ಳಿಲ್ಲಿ ಇದ್ದು ಭರತನಾಟ್ಯ ಕಲೆಯನ್ನ ಹೇಗೆ ಬೆಳಸುತ್ತಿದ್ದಿರಿ ಎನ್ನುವ ಪ್ರಶ್ನೆಗೆ, ಹಳ್ಳಿ ಎನ್ನುವುದು ಎಲ್ಲ ಸಂಬಂಧಗಳನ್ನ ಬೆಸೆದುಕೊಂಡಿರುವ ಸ್ವರ್ಗ. ಇಲ್ಲಿ ಅವ್ವ, ಅಪ್ಪ, ಆಯಿ, ಮುತ್ತ್ಯಾ, ಕಾಕಾ, ಮಾಂವ್, ಸ್ವಾದರತ್ತಿ ಎನ್ನುವ ಎಲ್ಲ ಸಂಬಂಧಗಳು ಇನ್ನು ಉಳಿದುಕೊಂಡಾವ. ಆ ಉಳುವಿನ ಕೂಡಾ ನನ್ನೂರು ಆರಾಮ ಐತಿ. ನನ್ನ ಗುರುಗಳ ಹೆಸರಿನಲ್ಲಿ ನನ್ನೂರಿನಲ್ಲಿ ಆರಂಭಿಸಿದ ನಾಟ್ಯ ಶಾಲೆ ನನ್ನೂರಿಗೆ ಎಲ್ಲವನ್ನ ತಂದುಕೊಟ್ಟಿದೆ. ಇಲ್ಲಿನ ಮಕ್ಕಳಲ್ಲಿರುವ ಪ್ರತಿಭೆಯನ್ನ ಗುರುತಿಸುವಂತಹ ಕೆಲಸ ಮಾಡುತ್ತಾ ಹಳೆಯ ಬೇರುಗಳನ್ನ ಗಟ್ಟಿಗೊಳಿಸುತ್ತಾ ಹೊಸ ಚಿಗುರುಗಳನ್ನ ಬೆಳಸುತ್ತಿದ್ದೇನೆ ಅಂತ ಹೇಳಿ ಹೋದಳು ಶಾಂತಲಾ ಆಗಿ ಬದಲಾದ ರೂಪಾ.
ಪತ್ರಿಕೆಯ ಮುಖಪುಟದಲ್ಲಿ…







0 Comments