ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭಾನುವಾರದ ಕಥೆ ’ಟೆಲಿಫೋನ್ ಕರೆ’

ಮಹೇಶ್ ದೇಶಪಾಂಡೆ

ಟ್ರಿನ್ ಟ್ರಿನ್………… ಟ್ರಿನ್ ಟ್ರಿನ್………… ಟ್ರಿನ್ ಟ್ರಿನ್…………. ಟ್ರಿನ್ …….ಟೆಲಿಫೋನ್ ಗಂಟೆಯ ಸದ್ದು ಗಾಢನಿದ್ರೆಯಲ್ಲಿದ್ದ ನನ್ನನ್ನು ಎಚ್ಚರ ಮಾಡಿತು. ನಿದ್ದೆಕಣ್ಣಲ್ಲಿ ರೀಸಿವರ್ ಎತ್ತಿಕೊಂಡು ಹಲೋ……….. ಹಲೋ……….. ಯಾರ್ರೀ……. ಅದು……..ಇಷ್ಟೊತ್ತಲ್ಲಿ?ಅಂತ ಗೊಣಗಿದೆ. ಆ ಕಡೆಯಿಂದ ರೀಗೋಪಾಲಯ್ಯ ನಿಮಗೊಂಚೂರೂ ಜವಾಬ್ದಾರಿ ಅನ್ನೋದು ಇಲ್ಲಲ್ರಿ………..ನಾ ಸ್ಟೇಷನ್ಗೆ ಬರೋತನಕ ಜೂನಿಯರ್ಗಳ ಮೇಲೆ ಎಲ್ಲಾ ಕೆಲಸ ಬಿಟ್ಟು ಹೊರಟು ಬಿಡಬ್ಯಾಡ್ರಿ ಅಂತ ಹೇಳಿದ್ದಿಲ್ಲೇನ್ರಿ? ರಾತ್ರಿ ಹೊತ್ನಲ್ಲಿ ಇನ್ಸ್ಪೆಕ್ಟರ್ ಹತ್ತಿರ ಮಂಗಳಾರತಿಯಾಗುತ್ತಿತ್ತು. ಈಗಿಂದೀಗಲೇ ಸ್ಟೇಶನ್ಗೆ ಹೊರಟು ಬರ್ರಿ……….. ನಾವು ತಾಬಡ ತೊಬಡ ಯಲವಿಗೆ ರೇಲ್ವೆಸ್ಟೇಷನ್ನಿಗೆ ಹೊರಡಬೇಕು. ಯಾಕೆ? ಏನು? ಅಂತ ಕೇಳುವಷ್ಟರಲ್ಲೇ ಲೈನ್ ಕಟ್ಟಾಗಿತ್ತು. ಕಣ್ಣುಜ್ಜಿಕೊಂಡು ಲೈಟ್ ಹಾಕಿ ಟೈಮ್ ನೋಡಿದೆ, ರಾತ್ರಿ12:25 ಲಗುಬಗೆಯಿಂದ ಮುಖತೊಳೆದು ಯುನಿಫಾರಂ ಹಾಕಿಕೊಂಡು ಮನೆಗೆ ಬೀಗ ಜಡಿದು ಹೊರಟೆ. ಸ್ಟೇಷನ್ಗೆ ಕೊಂಚ ಹತ್ತಿರದಲ್ಲಿ ಇದ್ದ ಪೋಲೀಸ್ ಕ್ವಾರ್ಟರ್ಸ್ ದಾಟಿಕೊಂಡು ಎಡಕ್ಕೆ ತಿರುಗಿದರೆ, ಸ್ಟೇಷನ್ 5 ನಿಮಿಷದ ದಾರಿ. ರೈಟರ್ ಕೆಲಸದಲ್ಲಿದ್ದ ನಾನು ಇಷ್ಟೋತ್ತಲ್ಲಿ ಏನು ಅರ್ಜಂಟ್ ಇದ್ದೀತು. ಅಂತ ಮನಸ್ಸಿನಲ್ಲೇ ಲೆಕ್ಕಚಾರ ಹಾಕುತ್ತ ಸ್ಟೇಷನ್ ಬಾಗಿಲು ತಲುಪಿದೆ. ಇನ್ಸ್ಪೆಕ್ಟರ್ರಿಂದ ಹಿಡಿದು ಎಲ್ಲಾ ಸಹೋದ್ಯೋಗಿಗಳು ಬಹಳ ಗಡಿಬಿಡಿಯಲ್ಲಿದ್ದರು. ಇನ್ಸ್ಪೆಕ್ಟರ್ ಪೋನಿನಲ್ಲಿ ಮಾತಾನಾಡುತ್ತಿದ್ದರು. ಬಹುಶ: ಸೀನಿಯರ್ ಆಫೀಸರ್ ಇರಬೇಕು, ಯಾವುದೋ ಅಪಘಾತದ ವಿವರಣೆ ಕೊಡುತ್ತಿದ್ದರು. ನಾನು ಅವರ ಎದುರು ನಿಂತವನೆ ಎದೆಯುಬ್ಬಿಸಿ ಸೆಲ್ಯೂಟ್ ಹೊಡೆದೆ. ನೋಡಿದರೂ ನೋಡದಂತಿದ್ದ ಅವರು ಸಿನಿಯರ್ ಆಫೀಸರ್ ಕಡೆಯಿಂದ ಆಜ್ಞೆಗಳನ್ನು ಸ್ವೀಕರಿಸುವುದು ಅವರ ಅಂಗಿಕ ಭಾಷೆಯಿಂದ ಅರ್ಥವಾಗುತ್ತಿತ್ತು. ಸಹೋದ್ಯೋಗಿ ಕಮಲಾಕರನತ್ತ ಏನು ವಿಷಯ ಎಂಬಂತೆ ತಿರುಗಿದೆ, ಅದಕ್ಕವನು. ಈಗ ಸ್ವಲ್ಪ ಹೊತ್ತಿಗೆ ಮುಂಚೆ ಹುಬ್ಬಳ್ಳಿ ಕಡೆಯಿಂದ ಬೆಂಗಳೂರಿಗೆ ಹೊರಟ ಮೇಲ್ಗಾಡಿ ಯಲವಿಗೆ ಲೆವಲ್ ಕ್ರಾಸಿಂಗ್ ಹತ್ರ ಎಕ್ಸಿಡೆಂಟ್ ಆಗೇದಂತ………..ಐದಾರು ಬೋಗಿಗಳು ಗುರುತು ಸಿಗಲಾರದಷ್ಟು ನಜ್ಜುಗುಜ್ಜಾಗಿವೆಯಂತೆ. ಏನೀಲ್ಲಾ ಅಂದ್ರೂ 100 ರಿಂದ 150 ಜನರು ಪ್ರಾಣಕಳೆದುಕೊಂಡಿರಬಹುದು ಸ್ಟೇಶನ್ ಮಾಸ್ತರನ ತಪ್ಪು ಲೆಕ್ಕಾಚಾರದಿಂದಾಗಿ ಸ್ಟೇಶನ್ನಲ್ಲಿ ನಿಂತ ಗೂಡ್ಸ್ಗಾಡಿಗೆ ಪ್ಯಾಸೆಂಜರ್ ಮೇಲ್ ಗಾಡಿ ಡಿಕ್ಕಿ ಹೊಡದದಂತ. ಮುಂದುವರೆದು ನಾವೀಗ ತುರ್ತು ರಕ್ಷಣಾ ಕಾರ್ಯಗಳ ನಿರ್ವಹಣೆಗೆ ತೆರಳುವಂತೆ ಮೇಲಿನಿಂದ ಆದೇಶ ಬಂದಿದೆ. ಹುಬ್ಬಳ್ಳಿ ಮತ್ತು ಹಾವೇರಿ ಕಡೆಯಿಂದ ಹೆಚ್ಚಿನ ಪೋಲೀಸ್ ಸಿಬ್ಬಂದಿ, ಡಾಕ್ಟರುಗಳು, ಆಂಬ್ಯುಲೇನ್ಸ್ಗಳು ತುರ್ತುಚಿಕಿತ್ಸೆಗೆ ಬೇಕಾಗುವ ಸಾಮಾನುಗಳನ್ನು ತೆಗೆದುಕೊಂಡು ಹೊರಟಾಗಿದೆಯಂತೆ. ಅಗ್ನಿಶಾಮಕದಳಕ್ಕೂ ಮಾಹಿತಿ ಹೋಗೇದ. ಒಂದೇ ಉಸಿರಿಗೆ ಗೊತ್ತಿದ್ದಎಲ್ಲಾ ಮಾಹಿತಿ ಒದರಿದೆ.
ಸ್ಟೇಶನ್ ಜೀಪಿನಲ್ಲಿ ಹೊರಟ ನಾವೆಲ್ಲ ಅಪಘಾತವಾದ ಸ್ಥಳ ತಲುಪಿದಾಗ ರಾತ್ರಿ 1:15 ಆಗಿರಬಹುದು. ನಮಗಿಂತ ಮೊದಲೇ ಊರಿನ ಕೆಲ ಜನರು ಕೈಯಲ್ಲಿ ಟಾರ್ಚ್ ಹಿಡಿದು ಆ ಗಾಢಾಂಧಕಾರದಲ್ಲಿ ಬದುಕಿರುವವರನ್ನು ಹುಡುಕುತ್ತಿರುವಂತೆ ಕಾಣುತ್ತಿತ್ತು. ನಮ್ಮ ಜೀಪ್ ನೋಡಿದ ಕೆಲವರು ತಕ್ಷಣ ನಮ್ಮ ಹತ್ತಿರ ಬಂದು ಘಟನೆ ನಡೆದ ರೀತಿಯನ್ನು ತಮಗೆ ತಿಳಿದ ರೀತಿಯಲ್ಲಿ ವರದಿಮಾಡಲು ಆರಂಭಿಸಿದರು. ವಿವರಣೆಗಳನ್ನು ಕೇಳುತ್ತ ಘಟನಾ ಸ್ಥಳದ ಪರಿಶೀಲನೆಯನ್ನು ಆ ಕತ್ತಲಲ್ಲಿ ತಕ್ಕ ಮಟ್ಟಿಗೆ ಮಾಡಿದ್ದಾಯ್ತು, ಐದಾರು ಬೋಗಿಗಳು ಗುರುತಿಸಲಾರದಷ್ಟು ಜಖಂಗೊಂಡಿದ್ದವು. ಹಿಂದಿನ ಬೋಗಿಗಳು ಹಳಿತಪ್ಪಿ ಬೆಂಕಿಪೊಟ್ಟಣದಂತೆ ಎಲ್ಲೆಂದರಲ್ಲಿ ಚಿಲ್ಲಾಪಿಲ್ಲಿಯಾಗಿದ್ದವು. ನರಳುವ, ಚೀರುವ, ಗೋಳಿಡುವ, ಆಕ್ರಂದಿಸುವ, ಬೊಬ್ಬಿಡುವ ಧ್ವನಿಗಳು ಏಕಕಾಲಕ್ಕೆ ಕೇಳಿಸುತ್ತ ವಾತಾವರಣದ ಭೀಕರತೆಯನ್ನು ಸಾರುತ್ತಿದ್ದವು. ನಾವು ಮಾಡಬೇಕಾದ ಕೆಲಸಗಳ ಬಗ್ಗೆ ಮಾಹಿತಿ ನೀಡುತ್ತ ಇನ್ಸ್ಪೆಕ್ಟರ್ ಆಜ್ಞೆ ಮಾಡುತ್ತಿದ್ದರು. ಮುಖ್ಯವಾದ ಕೆಲಸವೆಂದರೆ ಹುಬ್ಬಳ್ಳಿ ಹಾಗೂ ಹಾವೇರಿಕಡೆಯಿಂದ ಬರುವ ರಕ್ಷಣಾ ಸಿಬ್ಬಂದಿಯಜೊತೆ ಸಹಕರಿಸಿ ತೀವ್ರ ಗಾಯಗೊಂಡವರನ್ನು ಹುಬ್ಬಳ್ಳಿ ಕಡೆಗೆ ಹೋಗುವ ವ್ಯಾನಗಳಿಗೂ ಹಾಗೂ ಅಲ್ಪಸ್ವಲ್ಪಗಾಯಗೊಂಡವರನ್ನು ಹಾವೇರಿಯ ಕಡೆಗೆ ಹೋಗುವ ವ್ಯಾನುಗಳಿಗೂ ರವಾನೆ ಮಾಡುವ ಕೆಲಸಕ್ಕೆ ನಾವು ನೆರವು ನೀಡಬೇಕಾಗಿತ್ತು. ಗಾಯಾಳುಗಳು ಮಾತನಾಡುವ ಸ್ಥಿತಿಯಲ್ಲಿದ್ದರೆ, ಸಾಧ್ಯವಾದರೆ ಅವರೊಂದಿಗೆ ಮಾತನಾಡಿ ಅವರ ಬಗ್ಗೆ, ಅವರ ಸಂಬಂಧಿಕರ ಬಗ್ಗೆ ಮಾಹಿತಿ ಕಲೆ ಹಾಕುವ ಜವಾಬ್ದಾರಿಯನ್ನು ವಹಿಸಿದ್ದರು. ಸುಮಾರು 2:30 ರ ಹೊತ್ತಿಗೆ ಹುಬ್ಬಳ್ಳಿ ಹಾಗೂ ಹಾವೇರಿ ಕಡೆಯಿಂದ ವೈದಕೀಯ ಸಲಕರಣೆಗಳನ್ನು ಹೊತ್ತ ವಾಹನಗಳು ಸಿಬ್ಬಂದಿ ಸಮೇತ ಆಗಮಿಸಿದವು. ಪ್ರಥಮ ಚಿಕಿತ್ಸೆ ಕೊಡುವ ತಾತ್ಕಾಲಿಕ ಟೆಂಟನ್ನು ಕ್ಷಣಾರ್ಧದಲ್ಲಿ ನಿಮರ್ಿಸಿದರು. ಸಮರೋಪಾದಿಯಲ್ಲಿ ರಕ್ಷಣಾ ಕೆಲಸಗಳು ತುಂಬಾ ವ್ಯವಸ್ಥಿತವಾಗಿ ಜರುಗಲಾರಂಭಿಸಿದವು.

ತೀವ್ರಗಾಯಗೊಂಡು ಬದುಕುಳಿದವರನ್ನು ಹಾಗೂ ಅಲ್ಪಸ್ವಲ್ಪಗಾಯಗೊಂಡವರನ್ನು ಚಿಕಿತ್ಸೆಗಾಗಿ ಸರಕಾರಿಆಸ್ಪತ್ರೆಗೆ ರವಾನಿಸುವ ಕೆಲಸ ಅಂತು ಇಂತು ಬೆಳಗಿನ ಜಾವ ನಾಲ್ಕರ ಸುಮಾರಿಗೆ ಮುಗಿಯಿತು. ಇನ್ನು ಪ್ರಾಣಕಳೆದುಕೊಂಡಿರುವ ಪ್ರಯಾಣಿಕರನ್ನು ನಜ್ಜುಗುಜ್ಜಾದ ಬೋಗಿಗಳಿಂದ ಅಗ್ನಿಶಾಮಕದಳದ ಸಿಬ್ಬಂದಿಗಳ ನೆರವಿನಿಂದ ಹೊರತರುವ ಕೆಲಸ, ಅಂತಹ ಬೋಗಿಗಳಿಂದ ಕೂಡ ಅಲ್ಪಸ್ವಲ್ಪ ಜೀವ ಹಿಡಿದುಕೊಂಡು ನರಳುತ್ತಿರುವ ಪ್ರಾಯಾಣಿಕರನ್ನು ಗಮನಿಸುವಂತೆ ನಮಗೆ ಸೂಚನೆ ನೀಡಲಾಗಿತ್ತು.
ಅಮವಾಸ್ಯೆಯ ಆ ಕತ್ತಲಲ್ಲಿ ಒಬ್ಬರ ಮುಖ ಒಬ್ಬರಿಗೆ ಕಾಣುವುದೇ ದುಸ್ತರವಾಗಿತ್ತು. ಟಾಚರ್್ಗಳ ಬೆಳಕು ಆ ಕತ್ತಲನ್ನು ಪೂತರ್ಿಯಾಗಿ ಹೋಗಲಾಡಿಸುವಷ್ಟು ಇರಲಿಲ್ಲ. ಇನ್ನು ಎರಡು ಗಂಟೆಕಾಲ ಬೆಳಕು ಹರಿಯುತ್ತದೆ. ಆಗ ಅನಾಹುತದ ಚಿತ್ರಣ ಇನ್ನೂ ಸ್ಪಷ್ಟವಾಗುತ್ತದೆ. ಆದರೆ ನಾವು ಸಮಯವನ್ನು ಹಾಳುಮಾಡುವಂತಿರಲಿಲ್ಲ. ಸಾಧ್ಯವಾದಷ್ಟು ಗಾಯಗೊಂಡ ಪ್ರಯಾಣಿಕರನ್ನು ಗುರುತಿಸಿ ವ್ಯಾನುಗಳಿಗೆ ರವಾನಿಸಿ ಅವರಿಗೆ ಹೆಚ್ಚಿನ ಚಿಕಿತ್ಸೆ ದೊರೆಯುವಂತೆ ಮಾಡಬೇಕಾಗಿತ್ತು. ಹೀಗೆ ನಜ್ಜುಗುಜ್ಜಾದ ಬೋಗಿಗಳಲ್ಲಿ ಜೀವವಿರುವ ಪ್ರಯಾಣಿಕರನ್ನು ತಡಕಾಡುತ್ತಿರುವವಾಗ ಎಲ್ಲೆಂದರಲ್ಲಿ ಬರೀ ಹೆಣಗಳು. ಆ ಕತ್ತಲಲ್ಲಿ ನಾನು ಮತ್ತು ನನ್ನ ಸಹೋದ್ಯೋಗಿ ಇಬ್ಬರೂ ಜೀವ ಇರುವ ಪ್ರಯಾಣಿಕರ ಬೇಟೆ ಶುರುಮಾಡಿಕೊಂಡೆವು. ಅವನು ಮುಂದೆ ಮುಂದೆ ಟಾರ್ಚ್ ಬೆಳಕನ್ನು ಬೀರುತ್ತ ಸಾಗುತ್ತಿದ್ದ. ನಾನು ಕೂಡ ಕಂಡ ಕಂಡ ಪ್ರಯಾಣಿಕರನ್ನು ಅಲಿಗಾಡಿಸಿ ಜೀವವಿದೆಯೋ ಇಲ್ಲವೋ ಎಂದು ಪರೀಕ್ಷಿಸುತ್ತಿದ್ದೆ. ಜೀವವಿಲ್ಲದ್ದುಗೊತ್ತಾಯಿತು ಎಂದರೆ ತಕ್ಷಣ ಮತ್ತೇ ಹುಡುಕಾಟ ಆತುರವೋ ಆತುರ ಒಂದು ಕ್ಷಣವೂ ತಡ ಮಾಡುವಂತಿರಲಿಲ್ಲ. ಹೀಗೆ ನಮ್ಮ ಹುಡುಕಾಟ ಹೆಣಗಳ ರಾಶಿಯ ಮಧ್ಯೆ ಜೀವಹಿಡಿದುಕೊಂಡಿರುವ ಗಾಯಾಳುಗಳತ್ತ ಕೇಂದ್ರೀಕೃತವಾಗಿತ್ತು. ಕೂತಕೂತಲ್ಲೆ ಪ್ರಾಣ ಬಿಟ್ಟವರೆಷ್ಟೊ? ಏನಾಯಿತೆಂದು ತಿಳಿಯುವ ಮೊದಲೇ ಜೀವ ಕಳೆದುಕೊಂಡವರೆಷ್ಟೋ? ಲೆಕ್ಕವಿಲ್ಲ. ಎಷ್ಟೆಲ್ಲ ನೋವು ಅನುಭವಿಸರಬೇಡ! ಅಂತೆಲ್ಲ ಯೋಚಿಸುತ್ತಿರುವಂತೆ ಬೋಗಿಯ ತುಂಬ ಟಾರ್ಚ್ ಬೆಳಕನ್ನು ಒಂದೊಂದು ಮುಖದತ್ತ ಬಿಡುತ್ತ ನನ್ನ ಸಹೋದ್ಯೋಗಿ ಸಾಗುತ್ತಿದ್ದ. ಎಷ್ಟೊ ಪ್ರಾಯಣಿಕರ ಮುಖಗಳು ಗುರುತು ಸಿಗಲಾರದಷ್ಟು ಪೆಟ್ಟು ತಿಂದು ಅಸುನೀಗಿಸಿದ್ದರು.
ಮಹಿಳೆಯರ ಬೋಗಿಯತ್ತ ನಮ್ಮ ಹುಡುಕಾಟ ಆರಂಭವಾಯಿತು. ಒಂದೇ ಒಂದು ಜೀವವಿರುವ ಲಕ್ಷಣಗಳು ಕಂಡುಬರಲಿಲ್ಲ. ಒಂದೊಂದು ಹೆಣದ ಮೆಲೆ ಟಾರ್ಚ್ ಬೆಳಕು ಬೀಳುತ್ತಿದ್ದಂತೆ ಕೊರಳಿನಲ್ಲಿರುವ, ಕಿವಿಯಲ್ಲಿರುವ ಆಭರಣಗಳ ಮಿಂಚು ನನ್ನ ಬುದ್ದಿಯನ್ನು ಮಂಕಾಗಿಸಿತು. ಒಂದು ಕ್ಷಣ ಮನಸ್ಸು ವಿಚಲಿತವಾಯಿತು. ದುಷ್ಟಯೋಚನೆಯೊಂದು ಸುಳಿದಾಡಿ ಕಾರ್ಯರೂಪಕ್ಕೆ ತರುವ ಹುನ್ನಾರ ಮಾಡಿ ನನ್ನ ಸಹೋದ್ಯೋಗಿಯಿಂದ ಬೇಕುಅಂತಲೇ ಬೇರ್ಪಡೆಗೊಂಡೆ. ಒಂದೆರಡು ಹೆಣಗಳನ್ನು ತಡಕಾಡಿ ಕೊರಳಲ್ಲಿದ್ದ ಸರ ಮತ್ತು ಬಳೆಗಳನ್ನು ತೆಗೆದುಕೊಳ್ಳುವಷ್ಟರಲ್ಲಿ ನನ್ನ ಸಹೋದ್ಯೋಗಿ ನನ್ನನ್ನು ಹುಡುಕುತ್ತ ವಾಪಸ್ಸು ಬಂದ. ಏನೋ ಸಬೂಬು ಹೇಳಿ ಮತ್ತೆ ಅವನ ಜೊತೆ ಹುಡುಕಾಟಕ್ಕೆ ನಿಂತೆ. ನನ್ನ ಯೋಜನೆ ಅರ್ಧಂಬರ್ಧ ಆಗಿದ್ದಕ್ಕೆ ಅವನನ್ನು ಮನಸಿನಲ್ಲೆ ಶಪಿಸುತ್ತ ಅವನ ಜೊತೆ ಹೊರಟೆ. ತಡೆದುಕೊಳ್ಳಲಾರದಷ್ಟು ಕೋಪ ಉಕ್ಕಿ ಬರುತ್ತಿತ್ತು ಆದರೆ ನಾವಿರುವ ಆ ಪರಿಸ್ಥಿತಿಯಲ್ಲಿ ಅದಕ್ಕೆಲ್ಲ ಅವಕಾಶವಿರಲಿಲ್ಲ. ನಾನು ಕಳ್ಳತನದಲ್ಲಿ ಲಪಟಾಯಿಸಿದ ಆ ಸರ ಹಾಗೂ ಬಳೆಗಳು ನನ್ನ ಯುನಿಫಾರ್ಮ್ ಜೇಬಿನಲ್ಲಿ ಭದ್ರವಾಗಿದ್ದವು.
ಅಷ್ಟೊತ್ತಿಗಾಗಲೆ ರಕ್ಷಣಾಕಾರ್ಯದ ದಿಕ್ಕು ಬದಲಾಗಿ ಬೆಳಕು ಹರಿಯುವ ಸೂಚನೆ ನೀಡಿತ್ತು. ನಮಗೆ ವಹಿಸಿದ ಡ್ಯೂಟಿ ಮುಗಿದಿದೆಯೆಂದು ನಮ್ಮ ಮೇಲಾಧಿಕಾರಿಗಳಿಗೆ ಸೂಚಿಸಿ, ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ತೆರಳಿ ಹೊರಟರು. ಹತ್ತು ಗಂಟೆಯಷ್ಟೊತ್ತಿಗೆ ಪುನಃ ಸ್ಟೇಶನ್ನಿಗೆ ಬಂದು ಡ್ಯೂಟಿಗೆ ಹಾಜರಾಗಬೇಕೆಂದು ಆಜ್ಞೆಯಾಯಿತು. ಮನೆಗೆ ಬಂದವನೇ ಲಗುಬಗೆಯಿಂದ ಒಂದು ಬಟ್ಟೆಯಲ್ಲಿ ಸುತ್ತಿ ಹಳೆಯ ಟ್ರಂಕಿನ ಅಡಿಯಲ್ಲಿ ಭದ್ರವಾಗಿ ಆ ಸರ ಮತ್ತು ಬಳೆಗಳನ್ನು ಬಚ್ಚಿಟ್ಟೆ.
ಸ್ಟೇಶನ್ನಿಗೆ ಹೋಗಿದ್ದೆ ತಡ ಇನ್ಸ್ಪೆಕ್ಟರ್ ನನ್ನ ಎನ್ಕ್ವಾಯರಿ ಆರಂಭಿಸಿದರು. ಏನ್ರಿ, ಗೋಪಾಲಯ್ಯ ಮನೇಲಿ ನೀವೊಬ್ರೆ ಇದ್ದೀರಾ? ಮನೆಯವರನ್ನ ತವರಿಗೆ ಕಳಿಸಿದ್ದು ಹೇಳ್ಲೇ ಇಲ್ಲ? ಅಂತ ಕೇಳಿದರು ಬೆಳಗಾಗುವರೆಗೂ ನಡೆದ ರಕ್ಷಣಾಕಾರ್ಯದ ಬಗ್ಗೆ ಕೇಳೋದು ಬಿಟ್ಟು ಏನೇನೋ ಕೇಳೋಕೆ ಹೊರಟರಲ್ಲ: ಅಂತ ಯೋಚಿಸುತ್ತ ಹೌದ್ರಿ, ಸಾಹೇಬ್ರ, ಎಂಟತ್ತು ದಿನಾ ಆತು, ಇನ್ನೇನು ನಾಳೆ ನಾಡಿದ್ದು ಬರ್ತಾಳೆ, ಅಲ್ರಿ………..ಸಾಹೇಬ್ರ, ಈಗ ಇದನ್ನೆಲ್ಲಾ ಯಾಕ ಕೇಳ್ಲಿಕತ್ತೀರೀ? ಅಂತ ಅಂದೆ, ಅದಕ್ಕವರು, ನಿಮ್ಮ ಮಾವನ ಫೋನ್ ಬಂದಿತ್ತು, ನಿನಗೂ ಮಾತಾಡ್ಲಿಕ್ಕೆ ಟ್ರೈ ಮಾಡಿದ್ರಂತೆ. ಆದ್ರೆ ಆವರಿಗೆ ನಿನ್ನ ಮನೆ ಫೋನಿಂದ ಯಾವುದೇ ಉತ್ತರ ಸಿಗಲಿಲ್ಲಂತ ಅದಕ್ಕ ನಾನು ಬೆಳ ಬೆಳಗ್ಗೆ ಯಾಕಂತ್ರಿ ಫೋನ್ ಮಾಡಿದ್ದು, ಏನಾರ ಹೇಳಿದ್ರೇನ್ರೀ? ಅಂದೆ. ಅಲ್ಲಪಾ ನಿನ್ನ ಹೆಂಡ್ತಿ ನಿನ್ನೆರಾತ್ರೀನ ತವರು ಮನೆಯಿಂದ ಹೊರಟಾರಂತ, ಇಷ್ಟೊತ್ತಿಗೆಲ್ಲ ಬರಬೇಕಾಗಿತ್ತಲ್ಲ, ನೀ ನೋಡಿದ್ರ ನಾಳೆನಾಡಿದ್ದು ಅಂತ ರಾಗಾ ಎಳೀಲಿಕತ್ತೀ……..? ನನಗೇನೂ ಅರ್ಥವಾಗದೆ ಅವರ ಮುಖವನ್ನೊಮ್ಮೆ ನೋಡಿದೆ. ಅದಕ್ಕವರು ಅಲ್ಲಪಾ ಗೋಪಾಲಯ್ಯ, ನೀ ಖರೇನ ಬೇಜವಾಬ್ದಾರಿ ಮನಸ್ಯಾ ಅದೀನೊಡು, ಎರಡು ದಿನ ತಡದು ಹೊಂಟೋರು ನಿನಗೆ ಊಟಕ್ಕ ತ್ರಾಸ ಆಗ್ತದ ಅಂತ ನಿನ್ನೆ ರಾತ್ರೀನ ಹೊರಟಾರಂತಲ್ಲೋ? ಅಂದರು.
ಇನ್ನೇನೋ ಕೇಳಲು ಹೊರಟೋನು ಸ್ಟೇಶನ್ ಕಂಪೌಂಡ ಹತ್ತಿರ ನನ್ನ ಅತ್ತಿಮಾವನ್ನ ನೋಡಿ ದಿಗಿಲಾಯಿತು. ನಾನು ಸಾಹೇಬ್ರ ಮುಖನೋಡಿದೆ. ಅಷ್ಟೊತ್ತಿಗಾಗಲೆ ಸ್ಟೇಶನ್ ಒಳಗೆ ಬಂದ ಅವರು ನನ್ನನ್ನು ನೋಡುತ್ತಲೇ ಅಳಿಯಂದ್ರೇ, ಘಾತ ಆತ್ರಿ ಅನಾಹುತ ಆತ್ರಿ…….. ಅಂತ ಒಂದ ಸುಮನ ಬಡಕೊಳೀಕತ್ತಿದ್ದ್ರು. ಮೊದಲೆ ತಲೆಕೆಟ್ಟ ನಾನು ಅವರ ಮೇಲೆ ರೇಗಿದೆ, ‘ರೀ ಮಾವಂದ,್ರ ಏನ್ವಿಷ್ಯಾ ಅಂತ ಬರೋಬರಿ ಹೇಳ್ರಿ, ಹೀಂಗ ಘಾತ ಆತು……..ಅನಾಹುತ ಆತುಅಂದ್ರ, ನಾ ಏನ್ ತಿಳ್ಕೊಳ್ಳಿ? ಮಾತನಾಡಲು ಒದ್ದಾಡುತ್ತಿದ್ದ ಅವರು ಕುಚರ್ಿಯಲ್ಲಿ ಕುಸಿದು ಕುಳಿತರು. ಈ ಮಧ್ಯ ಬಾಯಿ ಹಾಕಿದ ಸಾಹೇಬ್ರು, ರೀ ಗೋಪಾಲಯ್ಯ, ಸುಮ್ಮಸುಮ್ಮನ ಅವರ ಮ್ಯಾಲ ಯಾಕ ರೇಗ್ತೀರಿ? ಇರೋ ವಿಷ್ಯಾ ಹೇಳ್ತೇನಿ ಕೇಳಿ, ನಿಮ್ಮ ಅತ್ತೆಮಾವಗ ಇಲ್ಲಿಗೆ ಬಲರ್ಿಕ್ಕೆ ಹೇಳಿದ್ದು ನಾನು, ನಿನ್ನ ಹೇಂಡ್ತಿ ನಿನ್ನೆ ರಾತ್ರಿ ತವರು ಮನೀಂದ……..ಹೊರಟಾರಂತ ಹೇಳಿದ್ನಲ್ಲ, ಅವರು ನಿನ್ನೆ ಅಪಘಾತಕ್ಕಿಡಾದ ಟ್ರೇನಿನ್ಯಾಗ ಹೊಂಟಿದ್ರಂತ. ನಿಮ್ಮ ಮಾವ ಬೆಳಗಿನ ವಾರ್ತೆ ಕೇಳಿ ನಿನಗೆ ಫೋನ್ ಮಾಡಿದ್ರು. ಸಿಡಿಲು ಹೊಡೆದಂತಾಗಿ ನಾನು ಕುಸಿದು ಕುಳಿತೆ ಮುಂದೇನು ಮಾಡೋದು ಅಂತ ಸಾಹೇಬ್ರ ಮುಖ ನೋಡಿದೆ. ನೋಡು ಗೋಪಾಲಯ್ಯ, ಧೈರ್ಯ ತೋಗೊ ನೀನ ಹೀಂಗ ಗಾಭರಿಯಾದ್ರ ವಯಸ್ಸಾದ ನಿಮ್ಮ ಅತ್ತಿಮಾವರ ಏನು ಮಾಡ್ಯಾರು? ಈಗ ನಾ ಹೇಳೋದು ಕೇಳು, ಇವರನ್ನು ಕರಕೊಂಡು ಹುಬ್ಬಳ್ಳಿಗೆ ಆಫೀಸ್ ಜೀಪ್ ತೊಗೊಂಡು ಹೋಗು. ಜತಿಗೆ ಒಬ್ಬನ್ನ ಕಳಿಸ್ತಿನಿ. ದಾವಾಖಾನಿವಳಗ ಹುಡುಕೊ ಕೆಲಸ ಮಾಡ್ರಿ ಅಂದರು.
ಹುಬ್ಬಳ್ಳಿ ಸರ್ಕಾರಿ ದವಾಖಾನಿ ತಲುಪಿ ಇರೋ ಬರೋ ವಾರ್ಡ ಎಲ್ಲ ಹುಡುಕಿದರೂ ಏನೂ ಪತ್ತೆ ಆಗಲಿಲ್ಲ. ನನ್ನ ಜೊತೆಗೆ ಬಂದ ಸಹೋದ್ಯೋಗಿ, ಏನೂ ತಪ್ಪ ತಿಳ್ಯಂಗಿಲ್ಲ ಅಂದ್ರ ಒಂದ ಮಾತ ಹೇಳ್ತೇನ್ರಿ ಅಂದ. ಏನು? ಎಂಬಂತೆ ಅವನತ್ತ ನೋಡಿದೆ. ಕಡೆ ಪ್ರಯತ್ನ ಅಂತ ಶವಾಗಾರ ಒಂದಸರ್ತಿ ನೋಡಿಬರೋಣ ಅಂದ. ನನ್ನ ಜಂಘಾಬಲವೇ ಉಡುಗಿ ಹೋಯಿತು. ನನ್ನ ಅತ್ತೆಮಾವನಿಗೆ ಅವನೇ ಸಮಧಾನ ಪಡಿಸಿ, ಒಪ್ಪಿಸಿ, ಶವಾಗಾರದ ಒಳಗೆ ಹೋಗಿ ಹುಡುಕಲು ಪ್ರಾರಂಭಿಸಿದೆವು. ಎಲ್ಲಿಂದ ನೋಡೋದು………..ಎಲ್ಲಿಂದ ಬಿಡೋದು………..ಹೆಣಗಳ ರಾಶಿಯೆ ರಾಶಿ………..! ಪೋಸ್ಟಮಾರ್ಟಂ ಮುಗಿಸಿದ ಹೆಣಗಳು, ಪೋಸ್ಟಮಾರ್ಟಂ ಕ್ಯೂನಲ್ಲಿರುವ ಹೆಣಗಳು………..ಎಲ್ಲಾ ಅಸ್ತವ್ಯಸ್ತ! ಭೀಕರ ನಿರವತೆ ಒಂದುಕ್ಷಣ ತಲೆತಿರುಗಿದಂತಾಯ್ತು. ಒಂದು ಕಡೆಯಿಂದ ನಾನು ಹಾಗೂ ನನ್ನ ಸಹೋದ್ಯೋಗಿ ಹುಡುಕಲು ಆರಂಭಿಸಿದೆವು. ಇನ್ನೊಂದು ಕಡೆಯಿಂದ ನನ್ನ ಅತ್ತಿಮಾವ ಹುಡುಕಲು ಆರಂಭಿಸಿದರು, ಒಂದೈದು ನಿಮಿಷಗಳಲ್ಲೆ ನನ್ನತ್ತಿ ಜೋರಾಗಿ ಕಿರಿಚಿಕೊಂಡರು. ಹೋಗ್ಬಿಟ್ಟಲ್ಲೇ………..ನಮ್ಮನ್ನೆಲ್ಲ ಬಿಟ್ಟು……….. ಇನ್ನ ನಾವಿದ್ರ ಎಷ್ಟು………..?ಹೋದ್ರ ಎಷ್ಟು? ಅಳಿಯಂದ್ರೇ………..? ಅಂದವರೇ ಪ್ರಜ್ಞೆತಪ್ಪಿದ್ದರು. ನಾನು ಅವರಿದ್ದ ಕಡೆ ಓಡಿಬರುವಷ್ಟರಲ್ಲಿ ಇಷ್ಟೆಲ್ಲ ನಡೆದುಹೋಯಿತು. ಕೈಲಿದ್ದ ನೀರಿನ ಬಾಟಲಿನಿಂದ ನನ್ನ ಸಹೋದ್ಯೋಗಿ ಅತ್ತಿಯವರ ಮುಖಕ್ಕೆ ಸ್ವಲ್ಪ ನೀರನ್ನು ಎರಚಿದರು. ನಮ್ಮ ಪಾಲಿಗೆ ಇನ್ನು ಇವಳು ನೆನಪು ಮಾತ್ರ………..ಅಳಿಯಂದ್ರೇ..! ಮಾವ ವಿಷಾದ ನೋಟ ಬೀರಿದರು. ಉಟ್ಟಸೀರೆಯ ಗುರುತು ಹಿಡಿದು ಅತ್ತೆಯವರು ಕಿರುಚಿದರೆಂದು ಆಗ ಅರ್ಥವಾಯಿತು. ಗುರುತು ಸಿಗಲಾರದಷ್ಟು ಮುಖ ಗಾಯಗೊಂಡು ರಕ್ತಸಿಕ್ತವಾಗಿ ವಿಕಾರಗೊಂಡಿತ್ತು. ಹಬ್ಬಕ್ಕೆ ಕೂಡಿಸಿದ ಸೀರೆ ಉಟಗೊಂಡ ಹೊರಟಿದ್ಲು, ಅಳಿಯಂದ್ರೆ……….. ಏಕಾಏಕಿ ಹೊರಟನಿಂತು ನಿಮಗೆ ಸರ್ಪ್ರೈಸ್ ಕೊಡ್ತಿನಿ ಅಂತೆಲ್ಲ ಹೇಳಿದ್ಲು………..ಆದ್ರ, ಈ ವಿಧಿ ಈಗ ನಮಗ ಈ ರೀತಿ ಸರ್ಪ್ರೈಸ್ ಕೊಟ್ಟದ ನೋಡ್ರಿ. ದುಃಖ ತಡೆಯಲಾರದೆ ಬಿಕ್ಕಳಿಸಹತ್ತಿದ್ದರು. ನಿಧಾನವಾಗಿ ಕಣ್ಣುಬಿಟ್ಟ ಅತ್ತೆಯವರು ಗರಬಡಿದವರಂತೆ ಕುಳಿತುಬಿಟ್ಟರು. ಮಾತಿಲ್ಲ ಕತೆಯಿಲ್ಲ ನಾನು ಅತ್ತೆಯವರೆ, ಆಗಿದ್ದು ಆತು, ಸಮಾಧಾನ ಮಾಡ್ಕೋರಿ, ಏನಾರ ಮಾತಾಡ್ರಿ, ಹಾಗೆ ದುಃಖ ಒಳಗ ಇಟಗೊಂಡು ಕೊರಗಬಾಡ್ರಿ, ಎಲ್ಲಾ ಹೊರಗ ಹಾಕ್ರಿ, ಮನಸ್ಸಿನ ಭಾರ ಕಡ್ಮಿ ಮಾಡ್ಕೋರಿ. ಅಂತ ಏನೇನೋ ಬಡಬಡಿಸಿದೆ.
ಯಾವನೋ ನೀಚ, ನನ್ನ ಮಗಳ ಕೊಳ್ಳಾಗಿನ ಸರ, ಕೈಯ್ಯಾಗಿನ ಬಳಿ ಸೈತ ಬಿಟ್ಟಿಲ್ಲ. ………..ಹಾಳಾಗಿ ಹೋಗ……….. ಅಂತ ಲಟಿಕೆ ಮುರಿದು ಶಪಿಸುತ್ತಿದ್ದಂತೆ ನನಗೆ ಸಾವಿರ ಚೇಳುಗಳು ಒಂದೇ ಸಲ ಕುಟುಕಿದ ಹಾಗಾಯ್ತು. ಒಂದು ಕ್ಷಣದ ಚಿತ್ತಚಂಚಲತೆ ನನ್ನನ್ನು ದುರಂತ ಕೂಪದಲ್ಲಿ ಬೀಳಿಸಿ, ಆ ನೀಚ ಕೆಲಸಕ್ಕೆ ಕೈ ಹಾಕಿದ್ದು ಆತ್ಮ ಸಾಕ್ಷಿಯನ್ನು ಕೆಣಕಿದಂತಿತ್ತು. ನನ್ನ ಈ ವರ್ತನೆಯನ್ನು ಯಾರೂ ಕ್ಷಮಿಸಲಾರರು. ಅವತ್ತು ಕಾಡಿದ ಆ ನೋವು ನಾನು ಕೊನೆವರೆಗೂ ಒಂಟಿಯಾಗಿರುವ ಶಿಕ್ಷೆ ನೀಡಿತ್ತು. ನನ್ನ ಹೆಂಡತಿಯಿಂದ ಕಿತ್ತುಕೊಂಡ ಆ ಕಾಣಿಕೆಗಳು ಇನ್ನೂ ನನ್ನ ಹತ್ರ ಭಧ್ರವಾಗಿದೆ. ಯಾರ ಹತ್ರಾನೂ ಹೇಳಿಕೊಳ್ಳಲಾಗದ, ಸಂಭ್ರಮಿಸಕೊಳ್ಳದ ಆ ಕಾಣಿಕೆಗಳು ಈಗಲೂ ನನ್ನನ್ನು ಕುಟುಕುತ್ತಿವೆ. ಆ ಕ್ಷಣದ ದುರಾಸೆ ನನ್ನ ನೈತಿಕತೆಯನ್ನು ಪ್ರಶ್ನೆಮಾಡಿ ಪ್ರಪಾತಕ್ಕೆ ತಳ್ಳಿಬಿಟ್ಟಿತ್ತು. ಹೊಟ್ಟೆಪಾಡಿಗಾಗಿ ನೌಕರಿ ಮಾಡುತ್ತ ಹಾಗೂ ಹೀಗೂ 28 ವರ್ಷ ನಿಷ್ಠೆಯಿಂದ ಸೇವೆ ಸಲ್ಲಿಸಲು ಪ್ರಯತ್ನ ಪಟ್ಟೆ.
ಟ್ರಿನ್ ಟ್ರಿನ್……….. ಟ್ರಿನ್ ಟ್ರಿನ್……….. ಟ್ರಿನ್……….. ಸರ್, ಗುಡ್ ಮಾರ್ನಿಂಗ್………..ನಿಮ್ಮದು ಇವತ್ತು ಡ್ಯೂಟಿ ಕಡೆ ದಿನ ……….. ಹಂಗ……….. ನಿಮಗೊಂದು ಫೇರವೆಲ್ ಪಾರ್ಟಿ ಸಣ್ಣದಾಗಿ ನಮ್ಮ ಕಡೆಯಿಂದ ಇಟ್ಗೊಂಡೆವ್ರಿ. ನಿಮ್ಮ ಸೇವಾವಧಿವಳಗ ಯಾವ ಯಾವ ಊರೊಳಗೆ ಏನೇನು ಸರ್ವೀಸು ಮಾಡಿದ್ರಿ, ಸಮಾಜಕ್ಕೆ ಅದರಿಂದ ಏನೇನು ಉಪಯೋಗ ಆಗೇದ ನಿಮ್ಮಿಂದ ಡಿಪಾರ್ಟಮೆಂಟ್ಗೆ ಎಷ್ಟೆಷ್ಟು ಸಹಾಯ ಆಗೇದ, ಅಂತೆಲ್ಲ ನಾವೆಲ್ಲ ಸಹೋದ್ಯೋಗಿಗಳು ಸೇರಿ ಮಾತನಾಡೋರಿದ್ದೇವೆ. ಲಗೂನ ಬಂದ್ರ ಬಿಡ್ರಿ……….. ಸಾಹೇಬ್ರ ಅಂತ ಸ್ಟೇಶನ್ನಿನಿಂದ ಫೋನ್ ಬಂದಿತ್ತು.
ಹೊಗಳಿಕೆ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ನನಗೆ ಶೂಲದಲ್ಲಿ ಇರಿದಂತಾಗಿ ಕಣ್ಣುಕತ್ತಲಾಯಿತು. ಅಂದು ರಿಂಗಣಿಸಿದ ಟೆಲಿಫೋನ್ಗಂಟೆ ಒಂಟಿತನದ ಶಾಪಕೊಟ್ಟಿದ್ದರೆ, ಇಂದು ರಿಂಗಣಿಸಿದ ಟೆಲಿಫೋನ್ಗಂಟೆ ಪಾಪದ ಹೊರೆ ಹೊರೆಸಿದ ಹಾಗಿತ್ತು. ಟ್ರಂಕಿನ ಮೂಲೆಯಲ್ಲಿದ್ದ ಸರ ಹಾಗೂ ಬಳೆಗಳು ನನ್ನನ್ನು ನೋಡಿ ಅಣಗಿಸಿ ನಕ್ಕಂತಾಯ್ತು.
ಆದರೆ ಒಂಟಿತನದ ಶಾಪ ಮತ್ತು ಪಾಪಪ್ರಜ್ಞೆಯು ಕೂಪದ ವಿಮೋಚನೆ ಎಂದಿಗೋ………..! ಸಿಗಲಾರದ ಉತ್ತರಕ್ಕೆ ತಲೆಕೊಡವಿಕೊಂಡು ಭಾರವಾದ ಹೃದಯದಿಂದ ನಿಧಾನವಾಗಿ ಆಫೀಸಿನತ್ತ ಹೆಜ್ಜೆ ಹಾಕಿದೆ.
ಸೌಜನ್ಯ : ಮಯೂರ
 
 
 
 

‍ಲೇಖಕರು G

10 August, 2014

2 Comments

  1. umesh desai

    ಎಲವಿಗಿಯಲ್ಲಿ ಖರೇನ ಅಪಘಾತ ಆಗಿತ್ತು..ಕತಿ ಛಂದಅದ..

  2. prateek

    ಬಹಳ ಚನ್ನಾಗಿದೆ !!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading