ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭರವಸೆಗಳ ನಾಳೆಯ ಇದಿರು ನೋಡುತ್ತಾ…

ಸಂತೋಷ್ ಅನಂತಪುರ

ಬದುಕಿನ ಮೂಲ ಸೆಲೆಯೇ ಭರವಸೆ. ಆಕಸ್ಮಿಕವಾದ ಹುಟ್ಟಿನೊಂದಿಗೆ ಬೆಳೆದು ಭರವಸೆಯ ನಾಳೆಯತ್ತ ಹೆಜ್ಜೆ ಹಾಕುತ್ತ ನಡೆಯುವಾಗ ಇನ್ನೇನೆಲ್ಲ ಕಾದಿದೆ ಎಂಬ ಆತಂಕದ ಕುತೂಹಲಕರ ಪಯಣವೇ ಬದುಕು. ಹಾಗಂತ ಅರಸಿ, ಆರಿಸಿಕೊಂಡು ಬಂದದ್ದಂತೂ ಅಲ್ಲವೇ ಅಲ್ಲವಲ್ಲ ಬದುಕು. ಕೊನೆ ಕಾಣದ ಯಾತ್ರೆಯ ಆರಂಭವು ತೊಡಗಿದ್ದಲ್ಲಿಂದಲೇ ಶುರುವಾಗುವ ಬಾಳಲ್ಲಿ ಇರುವಲ್ಲಿಯೇ ಬೆಳೆಯುತ್ತ, ಏನನ್ನೂ ಬಯಸದ ಪ್ರೀತಿಯ ನೆರಳಾಗುವ ವೃಕ್ಷದಂತೆ ಬಾಳುವ ಸುಯೋಗ ಎಲ್ಲರಿಗೂ ದಕ್ಕುವುದಿಲ್ಲವಲ್ಲ. ಅಂತಹ ಪ್ರೀತಿಯ ಒಲುಮೆಯನ್ನು ‘ನಾಳೆ ಇನ್ನೂ ಕಾದಿದೆ’ ನಿಮ್ಮ ಆತ್ಮಕಥನವು ಅದ್ದಿಸಿಕೊಂಡಿದೆ.

ಹನಿದುಳಿದ ಸಮುದಾಯವೊಂದರ ಪುಟ್ಟ ಕುಟು೦ಬದ ಅಷ್ಟೂ ಸದಸ್ಯರ ಬಾಂಧವ್ಯವನ್ನು ಹಿಡಿದಿಟ್ಟು, ಇತಿಹಾಸಕ್ಕೆ ಮುಖಮಾಡಿ ಒಂದೊಂದೇ ಬಂಧದ ನಾರನ್ನು ಎತ್ತಿ ಮಮಕಾರದ ಬುಟ್ಟಿಯನ್ನು ಹೆಣೆದಿರಿ. ಸುಲಭವೆಂದು ತೋರುವ ಕಷ್ಟದ ಕೆಲಸವನ್ನು ಒಪ್ಪ ಓರಣವಾಗಿಸಿದಿರಿ. ಪ್ರತೀ ಬಂಧಗಳ, ಮತ್ತು ಆ ಬಂಧಗಳು ಉಣಿಸಿದ ಪ್ರೀತಿ ಮತ್ತು ಕಟ್ಟಿಕೊಟ್ಟ ವಾತ್ಸಲ್ಯಗಳು ನಿಮ್ಮ ಭಾವುಕ ಲೋಕದಲ್ಲಿ ಒಂದೊಂದೇ ಪಾತ್ರಗಳಾಗಿ ಹಿಗ್ಗುತ್ತಾ ನಡೆಯುತ್ತವೆ. ಇಂತವರೇ ಅಂತ ಇಲ್ಲದ, ನಿಮ್ಮ ಬಾಳನ್ನು ಪ್ರವೇಶಿಸಿದ ಪ್ರತಿಯೊಬ್ಬರನ್ನೂ ನೆನೆದು ಅವರಿತ್ತ ಪ್ರೀತಿಯನ್ನು ಸ್ಮರಿಸುವುದು ವರ್ತಮಾನದ ಬಹುದೊಡ್ಡ ವಿಶೇಷವೇ ಸರಿ.

ಚರಾಚರ ವಸ್ತುಗಳನ್ನು, ಉಸಿರಾಡುವ ಜೀವಗಳನ್ನು ಅದೆಷ್ಟು ಮಮಕಾರದಿಂದ ನೀವು ಕಾಣುತ್ತೀರಿ! ನಿಮ್ಮ ಬದುಕಲ್ಲಿ ಬಂಧಗಳು ಕಹಿಯನ್ನು ಉಣಿಸಿಯೇ ಇಲ್ಲವೇನೋ ಎನ್ನುವಂತೆ ಉಂಡ ಸಿಹಿಯನ್ನೆಲ್ಲಾ ಹಂಚುತ್ತಾ ಹೋದಿರಿ. ಅದಕ್ಕೂ ಭಾಗ್ಯ ಬೇಕು. ಸುಖಾಸುಮ್ಮನೆ ಒಲಿದು ಬರುವುದಲ್ಲವಲ್ಲ ಭಾಗ್ಯ. ಮುತುವರ್ಜಿಯಿಂದ, ಕಲಾತ್ಮಕವಾಗಿ ಜೇಡ ಬಲೆಯನ್ನು ನೇಯುವಂತೆ ನೀವು ಕೂಡ ಒಂದೊಂದು ಬಂಧಗಳನ್ನು ಆಪ್ತವಾಗಿ ನೇಯ್ದು ತಮಗೊದಗಿದ ನಿಮಗೊದಗಿದ ಪ್ರೀತಿಯ ಹನಿಗಳನ್ನು ಪೋಣಿಸುತ್ತಾ ಹೋದಿರಿ.

ಇದ್ದದ್ದನ್ನು ಇದ್ದ ಹಾಗೆ ಬರೆಯುವುದು ಸುಲಭವಲ್ಲ. ಒಂದಿಷ್ಟು ಅತ್ತಿತ್ತ ವಾಲಿದರೂ ನೀವು ನೀವಾಗಿರದೆ ಇನ್ಯಾರೋ ಆಗಿಬಿಡುವ ಅಪಾಯವಿದೆ. ಅಲ್ಲದೆ ಬರೆಯುವ ಮನಸ್ಸೂ ಅದನ್ನು ಒಪ್ಪಲಾರದು ಎನ್ನುವುದು ನನ್ನ ಅನಿಸಿಕೆ. ದೃಢ ಚಿತ್ತ ಮುಖ್ಯ. ಆದರೆ ನೀವಿಲ್ಲಿ ಯಾವುದೇ ಸಂಕೋಚಗಳಿಲ್ಲದೆ ಇರುವುದನ್ನು ಇರುವ ಹಾಗೆಯೇ ಇಟ್ಟುಕೊಂಡು ಪುಟಗಳನ್ನು ಅಂದವಾಗಿಸಿದ ಬಗೆ ಅನನ್ಯ. ಕಾಡ ಸುಮ ತನ್ನಷ್ಟಕ್ಕೇ ಅರಳಿದಂತೆ.

ಗುಡ್ಡೆಮನೆ, ತಲಬಾಡು ಮನೆ, ಒಂದಷ್ಟು ವಿಲಾಸಗಳು ಮತ್ತಲ್ಲಿಯ ಪ್ರಿಯ ಜೀವಗಳು ನಿಮ್ಮೊಳಗೆಬ್ಬಿಸಿದ ನಲುಮೆಯ ತರಂಗಗಳಿಂದ ಮಧುರ ಸಂಗೀತವನ್ನೇ ಹೊಮ್ಮಿಸಿದಿರಿ. ಮಂಗಳೂರು ಎಂಬ ಊರಿನ ಸುಖವನ್ನು ಕಣ್ಣಿಗೆ ಕಟ್ಟಿಕೊಟ್ಟಿರಿ. ನೀವು ಬಾಳಿದ ಮಂಗಳೂರಿಗೂ, ನಾನು ಕಂಡ ಮಂಗಳೂರಿಗೂ ಅಜಗಜಾಂತರ ವ್ಯತಾಸವಿದೆ. ಆದರೂ ನಿಮ್ಮ ಅಂದಿನ ಮಂಗಳೂರನ್ನು ಅನುಭಾವಿಸಿಕೊಂಡೆ. ನೇತ್ರಾವತಿಯಲ್ಲಿ ಕಾಲಾನುಕಾಲಕ್ಕೆ ನೀರು ಹರಿದು ಹೋದಂತೆ ಅದೆಷ್ಟೋ ಬದಲಾವಣೆಗಳು ಮಂಗಳೂರನ್ನು ತಟ್ಟಿ ಹಾದು ಹೋಗಿವೆ. ಇನ್ನಷ್ಟು ಮತ್ತಷ್ಟು ಬರುತ್ತಲೇ ಇವೆ. ಸ್ವೀಕರಿಸುವುದು, ತಿರಸ್ಕರಿಸುವುದು ಆಯಾ ಕರಗಳಿಗೆ ಬಿಟ್ಟ ವಿಚಾರ. ಆದರೆ ನಮ್ಮೊಳಗಿನ ನಿಜದ ಬಣ್ಣ ಮಾತ್ರ ಮಾಸಬಾರದಷ್ಟೆ. ಇಂದಿನವುಗಳು ಬೇಕಿದ್ದೋ ಬೆಕ್ಕಿಲ್ಲದೆಯೋ ನಮ್ಮೊಳಗಿಳಿದುಕೊಂಡಿವೆ ಎನ್ನುವುದು ಸತ್ಯವಷ್ಟೇ.

ಕಾಂಕ್ರೀಟು ಹೊದ್ದುಕೊಂಡು ನಿಂತ ಹೊಸ ಮನೆಯಿದ್ದರೂ ನಿಮ್ಮ ಮನಸ್ಸು ಇಂದಿಗೂ ಓಡುವುದು ಅದೇ ಹಳೆಯ ಗುಡ್ಡೆ ಮನೆಗೆ. ಹಳೆಯದ್ದು ಯಾವತ್ತೂ ಹಾಗೆಯೇ. ಇದ್ದದ್ದನ್ನು ಛೇ… ಎನ್ನುತ್ತಾ ಹೊಸತಿನತ್ತ ಮುಖವೊಡ್ಡುವಾಗ ಮತ್ತೆ ಮತ್ತೆ ಅಪ್ಯಾಯಮಾನವೆನಿಸುವುದು ಅದೇ ಹಳೆಯ ನೆನಪುಗಳೇ. ಹಾಗಾಗಿ ಪ್ರಸಕ್ತ ಕಾಲದೊಳಗೆ ಹಳೆಯದ್ದು ಅಂದುಕೊಳ್ಳುವ ಯಾವುದನ್ನೂ ನೀವು ಕಳೆದುಕೊಳ್ಳಲು ಬಯಸದೆ, ಅವೆಲ್ಲವನ್ನೂ ಎದೆಗೂಡಲ್ಲಿ ಜತನದಿಂದ ಇಟ್ಟುಕೊಂಡ ಪರಿ ಆಪ್ತವೆನಿಸಿತು.

ಸೋಮೇಶ್ವರ ಕಡಲ ತೀರದ ಬಗ್ಗೆ ಓದಿದಾಗಲೆಲ್ಲ ಸಂಜೆಗೂ ಬೇಸರಕ್ಕೂ ಇರುವ ನಂಟು ಮನಸ್ಸನ್ನು ಆರ್ದ್ರವಾಗಿಸಿತು. ನಂಬಿಕೆಗೆ ಭದ್ರವಾಗಿರುವ ಕೋಟೆ ವಿಷ್ಣುಮೂರ್ತಿ ದೇವಳ ಮತ್ತಲ್ಲಿಯ ಜಾತ್ರೆಯ ಗಮ್ಮತ್ತು ಎಂತವರನ್ನೂ ಹಿಂತುರುಗಿ ನೋಡುವಂತೆ ಮಾಡುತ್ತದೆ. ನಿಮ್ಮ ಸಮುದಾಯದವರ ದೂರದೃಷ್ಟಿಯಲ್ಲಿ ಹುಟ್ಟಿಕೊಂಡ ಬೋವಿ ಸಮಾಜದ ಶಾಲೆಯು ತಮ್ಮವರು ಶಿಕ್ಷಣಕ್ಕೆ ಅಂದೇ ಕೊಟ್ಟ ಪ್ರಾಧಾನ್ಯತೆಯನ್ನು ಕಂಡು ಪ್ರತಿ ಸಮುದಾಯವೂ ಹೀಗೇ ಇದ್ದಿದ್ದರೆ ಎಂಬ ಯೋಚನೆ ಮನದಲ್ಲಿ ಹಾದು ಹೋದದ್ದು ಸುಳ್ಳಲ್ಲ.

ಆ ಕಾಲದಲ್ಲೇ ನಿಮ್ಮವರು ಏರಿದ ಎತ್ತರ ನಿಜಕ್ಕೂ ಶ್ಲಾಘನೀಯ. ಅಭಿಪ್ರಾಯ ಭೇದಗಳಿದ್ದರೂ ಸಮುದಾಯದವರು ಒಬ್ಬರಿಗೊಬ್ಬರಾಗಿ ಬರುವ ಹಾದಿ ಸುಂದರ. ನಿಮ್ಮ ಒಂದು ಕವಲು ಕ್ರೈಸ್ತ ಮತಾನುಯಾಯಿಯಾದದ್ದು, ಅವರ ಜೊತೆಗೆ ನಿಮ್ಮ ಬಂಧಗಳನ್ನು ಇಂದಿಗೂ ಇರಿಸಿಕೊಂಡು ಬಂದಿರುವುದು, ಅವರೊಳಗೆ ನೀವೊಬ್ಬರಾಗಿ, ನಿಮ್ಮೊಳಗೆ ಅವರೊಬ್ಬರಾಗಿ ಪ್ರೀತಿಯ ಕೊಂಡಿಗಳನ್ನು ಸಿಕ್ಕಿಸಿಕೊಂಡದ್ದು ನಿಜದ ನವಿರಾದ ಬಂಧಗಳಿಗೆ ಸಾಕ್ಷಿಯಾಗಿದೆ. ಭಿನ್ನ ವಿಶ್ವಾಸಿಗಳೊಂದಿಗೆ ಬೆಳೆದು ಬಾಳನ್ನು ಕಟ್ಟಿಕೊಂಡ ನೀವು ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂಬ ಮಾತಿಗೆ ಪೂರಕವಾದಿರಿ.

ಅಂದಿನ ಪರಿಸರ, ಬಾಳುವ ಕ್ರಮ, ಒಬ್ಬರಿಗೊಬ್ಬರಾಗಿ ಬರುವ ತುಡಿತಗಳೆಲ್ಲವೂ ಇಂದು ಚರಿತ್ರೆಯ ಪುಟಗಳನ್ನು ಸೇರಿಕೊಂಡಿವೆಯೋ ಏನೋ? ಅವರವರ ನಂಬಿಕೆಯೊಳಗೆ ಬದುಕನ್ನು ಕಟ್ಟಿಕೊಳ್ಳುತ್ತಾ ಪರಸ್ಪರರ ಸುಖ-ದುಃಖಗಳಿಗಾಗಿ ಬರುವ ಮಾನವೀಯತೆ ಒಂದೊಮ್ಮೆ ಇತ್ತು. ನೀವು ಹೋದಲ್ಲೆಲ್ಲಾ ಅಂತಹ ಮಾನವೀಯತೆಯನ್ನು ನಿಮ್ಮ ಸೆರಗಲ್ಲಿ ಭದ್ರವಾಗಿ ಕಟ್ಟಿಕೊಂಡು ಹೋದಿರಿ. ಅಷ್ಟೇ ಯಾಕೆ ಅದನ್ನು ಹಂಚಿದಿರಿ. ಹಂಚುತ್ತಲೇ ಇದ್ದೀರಿ ಕೂಡ.

ದೇಹ-ಮನಸ್ಸಿಗೆ ಬಡಿದ ಹಲವಾರು ನೋವು, ಆಘಾತಗಳನ್ನು ಸಹಿಸಿಯೂ ಮೆಟ್ಟಿನಿಂತ ನೀವು ನಿಮ್ಮೊಳಗನ್ನು ಹರವುತ್ತಾ ನಡೆದಿರಿ. ಹಾಗೆ ನೀವು ನಡೆದಲ್ಲೆಲ್ಲ ನನ್ನನ್ನೂ ಅಲ್ಲಲ್ಲಿ ಕಂಡುಕೊಂಡೆ. ‘ಎಲೋಷಿಯಸ್ ಕಣ್ಣಪ್ಪ’ ರ ಬಗ್ಗೆ ಓದಿದಾಗ ನನ್ನ ಎಲೋಷಿಯಸ್ ದಿನಗಳು ಓಡೋಡಿ ಬಂದವು. ಸ್ವಾತಂತ್ರ್ಯ ಸಂಗ್ರಾಮಕ್ಕೆಂದು ನಿಮ್ಮ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಎತ್ತಿಕೊಟ್ಟಿದ್ದನ್ನು ಓದಿದಾಗ ನನ್ನೆಳವೆಯ ದಾನಶೂರ ಕರ್ಣನ ನೆನೆಹುಗಳು ಹಾರಿ ಬಂದವು.

ನನ್ನ ಪ್ರಾಥಮಿಕ ಶಾಲಾ ದಿನಗಳಲ್ಲಿ ಇಟಲಿಯಿಂದ ಬಂದ ದಂಪತಿಗಳಿಗೆ ನನ್ನ ಚೂಟಿತನವು ಇಷ್ಟವಾಗಲು ನನ್ನನ್ನು ದತ್ತು ತೆಗೆದುಕೊಳ್ಳುವ ಪ್ರಸ್ತಾಪವನ್ನು ಹೆಚ್.ಎಂ ಮುಂದೆ ಇಟ್ಟ ನೆನಪನ್ನು ನೀವು ಕ್ರೈಸ್ತ ಮತಕ್ಕೆ ಮಗ್ಗುಲು ಬದಲಾಯಿಸುವ ನಿಮ್ಮ ಯೋಚನೆಯು ತಂದುಕೊಟ್ಟಿತು. ನಿಮ್ಮ ಶೈಕ್ಷಣಿಕ ಯಾತ್ರೆಯು ಬಹಳಷ್ಟು ನನ್ನ ಗುರುಗಳನ್ನು ನೆನೆಯುವಂತೆ ಮಾಡಿತು. ಪುಟಗಳನ್ನು ತಿರುವುತ್ತಾ ಹೋದಂತೆ ಪ್ರೀತಿಯ ಕಟ್ಟುಗಳನ್ನು ಬಿಡಿಸಿಡುತ್ತಾ ಹೋದಿರಿ. ಓದುತ್ತ ಹೋದಂತೆ ಸೋದರತ್ತೆ, ಚಿಕ್ಕಮ್ಮ, ದೊಡ್ಡಮ್ಮರಂತಾಗಿ ನೀವು ನನ್ನವರೇ ಆಗಿಬಿಟ್ಟಿರಿ. ಒಂದೊಂದು ಬಂಧಗಳನ್ನೂ ಆಪ್ತವಾಗಿ ಕಡೆದಿಟ್ಟಿದ್ದರಿಂದಲೇ ಹೃದಯಕ್ಕೆ ಹತ್ತಿರವಾಗುತ್ತಾ ನಿಮ್ಮ ನೋವು ನಲಿವುಗಳಲ್ಲಿ ನನ್ನನ್ನೂ ಜೊತೆಯಾಗಿಸಿಕೊಳ್ಳಲು ಸಾಧ್ಯವಾಯಿತು.

ಭೌಗೋಳಿಕವಾಗಿಯೂ ನಿಮಗೆ ಮತ್ತು ನನಗಿರುವ ಸಾಮೀಪ್ಯತೆ, ಭಾಷೆಯ ಸಾಧ್ಯತೆಗಳು ನಿಮ್ಮ-ನನ್ನ ನಂಟಿಗೆ ಅಂಟಾಯಿತು. ಬೆಲ್ಯಮ್ಮ, ಮೂತಪ್ಪ-ಮೂತಮ್ಮ, ಅಚ್ಚ, ಭಾಮಾಂಟಿ, ಅಮೃತ ಸೋಮೇಶ್ವರ್, ಮೋಹನಣ್ಣ, ಬಾಂಗ್ ಆಯಿತು ಊಟ ಹಾಕಿ ಎಂದು ಹೇಳುವ ನಿಮ್ಮಿಷ್ಟದ ಜೀವ, ತಂಗಿ ಮಂಜುಳಾ, ತಮ್ಮ ಮುರಳೀಧರ, ಎಲ್ಲರ ಪ್ರೀತಿಯ ಆಟದ ಟೀಚರ್ ವಸಂತಿ ಅಮ್ಮ, ಓದು-ಶಾಲೆ ಎಂದು ತಮ್ಮ ಜೀವ ತೇಯ್ದ ತಮ್ಮ ತಂದೆಯವರು, ಮಕ್ಕಳು-ಮೊಮ್ಮಕ್ಕಳು ಹೀಗೆ ಕಥನದಲ್ಲಿ ಬರುವ ಒಂದೊಂದು ಪಾತ್ರವೂ ಮನಸ್ಸಲ್ಲಿ ಅಚ್ಚಳಿಯದೆ ಉಳಿಯುವಂತಿದೆ… ಅಫ್ ಕೋರ್ಸ್ ಮಧು ಭಾಯ್-ಲಂಬೂಜಿಯೂ ಕೂಡ. ನಿಮ್ಮ ಇತರ ಸ್ನೇಹಿತೆಯರಂತೆಯೇ ಕಾಸರಗೋಡಿನ ವೈದ್ಯ ಮಿತ್ರೆಯ ಬಗ್ಗೆಯೂ ತಿಳಿಯುವ ಕುತೂಹಲವಿದೆ. ಸಾಧ್ಯವಾದರೆ ಏಕ್ ಮುಲಕಾತ್ ಭೀ…ಎಷ್ಟಾದರೂ ಆಕೆ ನನ್ನ ಜಿಲ್ಲೆಯವರು ಜೊತೆಗೆ ನಿಮ್ಮ ಸ್ನೇಹಿತೆಯೂ.

ಇನ್ನಷ್ಟು ನಿಮ್ಮ ಕೃತಿಗಳನ್ನು ಓದುವ ತವಕ ನನಗೆ. ಹಾಗಾಗಿ ನಿಮ್ಮ ಅನುವಾದಿತ ಕೃತಿಗಳು ನನ್ನ ಸಾಹಿತ್ಯ ಸದನದಲ್ಲಿ ಬಂದು ಕುಳಿತಿವೆ. ನಿಮ್ಮ ಮೃದು ಮಾತಿನ ಸೌಮ್ಯ ಧಾಟಿಗೆ ಮಾರು ಹೋಗದವರೇ ಇಲ್ಲ. ಅದು ನನ್ನ ಅನುಭವವೂ ಹೌದು. ದಾರಿಯುದ್ದಕ್ಕೂ ನಿಮಗೆ ಬೆಳಕಾದವರನ್ನು ವಿನಮ್ರತೆಯಿಂದ ಸ್ಮರಿಸುತ್ತಾ ನಡೆದಿರಿ. ಎಲ್ಲಿಯವರೆಗೆಂದರೆ ಡೆಲ್ಲಿ ಪ್ರವಾಸದ ಗೈಡ್ ದೀಪಕ್ ಪರಾಶರ್, ನರ್ಸ್ ಬೇಬಿಯನ್ನೂ ಬಿಡದೆ. ಹೀಗೆ ಬಾಳಿನುದ್ದಕ್ಕೂ ಸುಖ-ದುಃಖದಲ್ಲಿ ಸಾಥಿಯಾದವರೆಲ್ಲರೂ ನಿಮ್ಮ ಆತ್ಮದೊಳಗೆ ಭದ್ರವಾಗಿದ್ದಾರೆ. ತುಂಟ ಅಂಬಾಡಿಯೂ ನಿಮ್ಮ ಹೃದಯ ಕಮಲದೊಳಗೇ ಇದ್ದಾನೆ. ಇನ್ನೇನು ಬೇಕು ಹೇಳಿ? ಹಾಗಂತ ನಾಳೆ ಇಲ್ಲವೆಂದಲ್ಲ. ಭರವಸೆಗಳ ‘ನಾಳೆ ಇನ್ನೂ ಕಾದಿದೆ’ ಅಂತಲೇ.

ಮುಂಬಯಿಯ ನಿಮ್ಮ ಮನೆ ಪಕ್ಕದ ಮಲೆಯಾಳಿ ಹೆಂಗಸು ಸ್ನಾನ ಮಾಡಿ ತನ್ನ ಉದ್ದದ ಕೇಶರಾಶಿಯನ್ನು ಬೆನ್ನ ಹಿಂದೆ ಹಾಕಿದ್ದರಿಂದ ತೊಟ್ಟಿಕ್ಕುವ ನೀರ ಹನಿಯನ್ನು ಕಂಡು – ಕೇಶರಾಶಿಯ ಕುರಿತಾಗಿ ನೀವು ಪ್ರಶ್ನೆ ಕೇಳಿದರೆ ‘ಒನ್ನುಮಿಲ್ಲ್ಯ ಪಚ್ಚವೆಳ್ಳಮ್…’ ಎಂದು ಸಿಕ್ಕ ಉತ್ತರದಂತೆಯೇ ‘ಪಚ್ಚವಳ್ಳಂ’ ಕುಡಿದಷ್ಟೇ ಸರಳ-ಸುಂದರವಾದ ಆತ್ಮಕಥನ ನಿಮ್ಮದು, ಬೇಬಿ ಆಂಟಿ !

‍ಲೇಖಕರು Avadhi

2 April, 2021

1 Comment

  1. Marzooq

    Beautifully written

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading