ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭಟ್ಟ ಹಾಕಿದ ಉಪ್ಪು, ಶಿಕ್ಷಕ ಮಾಡಿದ ತಪ್ಪು..

ಕಾಣದ ಕಡಲಿಗೆ ಹಂಬಲಿಸಿದೆ ಮನ..

ಹೆಜ್ಜೆ 20

       ಚೇಳಿನ ಗುಡ್ಡ       

avadhi-column-rahul bw-edited2                                                                                        

ಬೆಳಿಗ್ಗೆ ಐದಕ್ಕೆ ಎದ್ದು ಹುಡುಗರು ಗಲಾಟೆ ಶುರುಮಾಡಿದ್ದರು. ನನಗೆ ಆ ದಿನ ಯಾವ ಉಪನ್ಯಾಸವೂ ಬೇಡವೆನಿಸಿತ್ತು. 7:30 ತನಕ ಹಾಗೆ ಹೊದಿಕೆ ಹೊದ್ದುಕೊಂಡು ಮಲಗಿದ್ದೆ. ಸುಮ್ಮನೆ ಮಲಗಿದ್ದರೆ ಇಡೀ ದಿನ ಅದೇ ಮನಸ್ಥಿತಿಯಲ್ಲಿ ಮುಳುಗಿರಬೇಕಾಗುತ್ತದೆ ಎಂದು ತಿಳಿದು, ಮುಖ ತೊಳೆದು, ಕೆಲವು ವಸ್ತುಗಳನ್ನು ಕೊಠಡಿಯಲ್ಲೇ ಬಿಟ್ಟು, ಬ್ಯಾಗಿನ ತೂಕ ಕಡಿಮೆ ಮಾಡಿಕೊಂಡು ಅಲ್ಲಿಂದ ಮೋಟೆಬೆನ್ನೂರಿನ ಕಡೆಗೆ ನಡೆಯಲು ಶುರುಮಾಡಿದೆ.

ತಿಂಡಿ ತಿನ್ನುವ ಮನಸ್ಸಾಗಲಿಲ್ಲ. ಭಟ್ಟ ಒತ್ತಾಯ ಮಾಡಿಕೊಟ್ಟ ಎರಡು ಬಾಳೇ ಹಣ್ಣನ್ನು ತಿಂದು ಹೊರಟೆ. ಶನಿವಾರವಾದ್ದರಿಂದ ಮುಂಜಾನೆಯೇ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳು ದಾರಿಯಲ್ಲಿ ಸಿಕ್ಕ ನನ್ನನ್ನು ಗುರುತಿಸಿ ಮಾತನಾಡಿಸಿದರು. ಮೂರು ಮೈಲು ನಡೆದು ಹೆದ್ದಾರಿ ಹಿಡಿದು, ಎಡಕ್ಕೆ ತಿರುಗಿದರೆ ಮೋಟೆಬೆನ್ನೂರು. ದೊಡ್ಡದಾದ ಊರು. ಉಳಿದ ಊರಿನಂತೆ ಸ್ವಚ್ಛತೆಯಲ್ಲಿ ಹಿಂದೆ ಬಿದ್ದಿತ್ತು. ದಾರಿಯಲ್ಲಿ ಸಿಕ್ಕ ನವೋದಯ ಖಾಸಗಿ ಶಾಲೆಯಲ್ಲಿ ಹೋಗಿ ವಿಚಾರಿಸಿದೆ. ಅವಕಾಶ ಸಿಗಲಿಲ್ಲ.

avadhi- column- rahul- low res- editedಅಲ್ಲಿಂದ ಮೈಲಾರ ಪ್ರೌಢಶಾಲೆಗೆ ಹೋಗಿ ವಿಚಾರಿಸಿದೆ. ಯೋಚಿಸಿ ಕ್ಯಾತೆ ತೆಗೆದು 10:00ಕ್ಕೆ ಬಂದು ಉಪನ್ಯಾಸ ಕೊಡುವಂತೆ ಅವಕಾಶ ಮಾಡಿಕೊಟ್ಟರು. ಒಂದು ಗಂಟೆಗೂ ಮೇಲೆ ಸಮಯವಿದ್ದರಿಂದ ಚಹಾ ಕುಡಿದು, ಸಾರಿಗೆ ತಂಗುದಾಣದಲ್ಲಿ ಬಂದು ಕುಳಿತೆ. ನಮ್ಮ ಕುಟುಂಬಗಳು ಹೇಗೆ ಎಂದರೆ. ದಿನಪತ್ರಿಕೆಗಳಲ್ಲೋ ಅಥವಾ ದೂರದರ್ಶನದಲ್ಲೋ ವಿವಿಧ ಸಮಾಜ ಸೇವೆಯಲ್ಲಿ ತೊಡಗಿರುವ ಸಾಧಕರ ಬಗ್ಗೆ ತೋರಿಸಿದರೆ, ಚಪ್ಪಾಳೆ ತಟ್ಟಿ ಶಹಬಾಷ್‍ಗಿರಿ ಕೊಡುತ್ತಾರೆ. ಆದರೆ ತಮ್ಮ ಮನೆಯಲ್ಲಿ ಯಾರಾದರೂ ಅಂತಹ ಕೆಲಸದಲ್ಲಿ ತೊಡಗಿಕೊಂಡರೆ, ಸ್ವಾರ್ಥತೆ ಬೆಳೆದು ಅವರ ಕೆಲಸಗಳಿಗೆ ಬೆನ್ನಲುಬಾಗಿ ನಿಲ್ಲುವುದಿಲ್ಲ.

ಜೀವನ ಕೊಟ್ಟ ಸಮಾಜಕ್ಕೆ, ನೀ ಏನು ಕೊಟ್ಟೆ?

ಚರ್ಚೆಗಳ ವೇದಿಕೆಯಾಯಿತಷ್ಟೇ ಊರಿನ ಅರಳೀಕಟ್ಟೆ.

ಪರಿಹಾರ ಕೊಡದ ಸಮಸ್ಯೆಗಳ ಪಟ್ಟಿ,

ಊಟ ಬಡಿಸದ ಖಾಲಿ ತಟ್ಟೆ.

ಅವ ಮಾಡಲಿ, ಇವ ಮಾಡಲಿ ಎನ್ನದೆ,

ನೀ ಏನು ಮಾಡಬಲ್ಲೆ ಎಂಬುದ ನಿನ್ನ ವಿವೇಚನೆಗೇ ಬಿಟ್ಟೆ.

ಶಾಲೆಗೆ ಹೊರಡುವ ಮುಂಚೆ, ಸಾರಿಗೆ ತಂಗುದಾಣದಲ್ಲಿದ್ದ ಸಾರ್ವಜನಿಕ ಶೌಚಾಲಯಕ್ಕೆ ಭೇಟಿಕೊಟ್ಟು ನೋಡಿದರೆ, ನಾಯಿಗಳೂ ಕೂಡ ಕಾಲೆತ್ತಿ ಮೂತ್ರ ವಿಸರ್ಜಿಸಲು ಹೆದರುವಂತಹ ಪರಿಸ್ಥಿತಿ. ಹೇಸಿಗೆಯಾಗಿ ನನ್ನ ಕೆಲಸವ ಮುಗಿಸದೆ, ವಾಪಸ್ಸು ಶಾಲೆಯ ಕಡೆಗೆ ಹೊರಟೆ. ಮಕ್ಕಳನ್ನು ಸೇರಿಸಿ, ದ್ವನಿವರ್ಧಕ ಇಟ್ಟು ಸಹಕರಿಸಿದರು. ಮಕ್ಕಳಲ್ಲಿ ಅಷ್ಟಾಗಿ ಶಿಸ್ತು ಕಾಣಲಿಲ್ಲ. ಸುತ್ತ ಮೂಕ ಪ್ರೇಕ್ಷಕರಂತೆ ಕುಳಿತಿದ್ದ ಶಿಕ್ಷಕರಿಗೆ ವಿದ್ಯಾರ್ಥಿಗಳನ್ನು ಹದ್ದುಬಸ್ತಿನಲ್ಲಿ ಇಡಲಾಗಲಿಲ್ಲ. ಶಿಕ್ಷಕರಲ್ಲಿ ಶಿಸ್ತು ಇದ್ದರೇ ತಾನೇ? ಶಾಲೆಗೆ ಆಗಮಿಸಿ ಉಪನ್ಯಾಸ ಕೊಟ್ಟ ಅತಿಥಿಗಳಿಗೆ ಅಭಿನಂದಿಸಬೇಕೆಂಬ ಸಾಮಾನ್ಯ ಪ್ರಜ್ಞೆಯೂ ಅವರಿಗಿರಲಿಲ್ಲ. ಮೈಲಾರ ಮಹದೇವಪ್ಪರಂತಹ ಸ್ವಾತಂತ್ಯ್ರ ಹೋರಾಟಗಾರರ ಹೆಸರಿನಲ್ಲಿ ತೆರೆದಿರುವ ಶಾಲೆಯಲ್ಲಿ ಆ ಮಹಾನ್ ವ್ಯಕ್ತಿಯ ಹೆಸರನ್ನು ಎತ್ತಿಹಿಡಿಯುವಂತಹ ವಿದ್ಯಾರ್ಥಿಗಳನ್ನು ತಯಾರಿಸುವಂತಾಗಬೇಕು.

ಪಾಕಶಾಲೆಯ ವಾತಾವರಣ, ಅಡುಗೆಯ ರುಚಿ ನಿರ್ಧರಿಸಿತು.

ಪಾಠಶಾಲೆಯ ವಾತಾವರಣ, ಸಮಾಜದ ಶುಚಿ ನಿರ್ಧರಿಸಿತು.

ಭಟ್ಟ ಹಾಕಿದ ಉಪ್ಪು, ಶಿಕ್ಷಕ ಮಾಡಿದ ತಪ್ಪು,

ಎರಡಕ್ಕೂ ಭವಿಷ್ಯ ನಿರ್ಧರಿಸುವ ಶಕ್ತಿಯಿಲ್ಲವೇ? ಓ ಪ್ರಕೃತಿ

ವಾಪಸ್ಸು ಬರುವಾಗ ಬೆನ್ನಿನ ಒಳಗೆ ಯಾರೋ ಕೈ ಹಾಕಿ ಹಿಸುಕಿದಂತೆ ನೋವುತ್ತಿತ್ತು. ಬೆನ್ನಿನ ಮೇಲೆ ಹೊತ್ತಿದ್ದ ಚೀಲವನ್ನು ಮುಂದಕ್ಕೆ ಎಳೆದು ಹೊಟ್ಟೆಯ ಮೇಲೆ ಏರಿಸಿ ನಡೆಯತೊಡಗಿದೆ. ಬೇಜಾರಿನಲ್ಲೆ ವಾಪಸ್ಸು ಬಂದು ಊಟ ಮಾಡದೆ ಮಲಗಿಕೊಂಡೆ, ಅಷ್ಟರಲ್ಲಿ ಪೂಜಾ ಎರಡು ಸಲ ಭಟ್ಟರಿಗೆ ಕರೆ ಮಾಡಿ ವಿಚಾರಿಸಿದ್ದಳು. ನಾನು ವಿಶ್ರಾಂತಿ ಪಡೆಯುತ್ತಿದ್ದರಿಂದ, ನನ್ನನ್ನು ಏಳಿಸಲಿಲ್ಲ. ಎದ್ದು ಊಟ ಮಾಡಿ, ಪೂಜಾಳಿಗೆ ಕರೆಮಾಡಿ ಮಾತನಾಡಿದೆ. ಅಪ್ಪ ಮತ್ತು ಪೂಜ ತಮಾಷೆಯಿಂದ ಮಾತಾಡಿದ್ದರಿಂದ ಮನಸ್ಸು ತಿಳಿಯಾಯಿತು. ನಂತರ ಶಾಲೆಗೆ ಹೋಗಿ ಹುಡುಗರ ಜೊತೆ ತ್ರೋಬಾಲ್ ಆಟವಾಡಿಕೊಂಡು ಬಂದ ನಂತರ ಕೊಠಡಿಯ ಬೋರ್ಡಿನ ಮೇಲೆ ಮರಕ್ಕೆ ಜೀವವಿರುವಂತೆ ಚಿತ್ರ ಬಿಡಿಸಿ, “ಉಳಿಸಿ-ಬೆಳಿಸಿ” ಎಂಬ ಪೀಠಿಕೆ ಕೊಟ್ಟೆ. ನಾಳೆ ಭಾನುವಾರವಾದ್ದರಿಂದ ಬೆಳಿಗೆ ಹುಡುಗರ ಜೊತೆಗೂಡಿ ಚೇಳಿನ ಗುಡ್ಡ ಸುತ್ತಿ ಬರುವ ಯೋಜನೆಯನ್ನು ಸಿದ್ಧಮಾಡಿ ಮಲಗಿಕೊಂಡೆ.

ಬೆಳಗಿನ ಜಾವ ಎಚ್ಚರವಾದಾಗ, ಹುಡುಗರು ಭಟ್ಟನ ಜೊತೆ ಲೋಕಾರೂಢಿ ಮಾತನಾಡುತ್ತಿದ್ದರು. ನನ್ನ ಮೇಲೆ ಅನುಕಂಪದ ಮಾತುಗಳನ್ನು ಆಡಿ ಮುಗಿಸುತ್ತಿದ್ದಂತೆ, ನಾನು ಎಚ್ಚರಗೊಂಡಂತೆ ನಾಟಕವಾಡಿ, ಎಲ್ಲರಿಗೂ ಮಲಗುವಂತೆ ಸೂಚಿಸಿ ನಾನು ಕೂಡ ನಿದ್ರೆಗೆ ಜಾರಿದೆ. ಹತ್ತನೆಯ ತರಗತಿಯ ವಿದ್ಯಾರ್ಥಿಗಳ ಜೊತೆಗೂಡಿ ಚೇಳಿನಗುಡ್ಡಕ್ಕೆ ಹೊರೆಟೆವು. ಊರನ್ನು ಬಿಟ್ಟು ಹೊಲಗಳ ಮೇಲಿನ ಕಾಲುದಾರಿಯಲ್ಲಿ ಸಾಗಿ, ಕಾಡನ್ನು ಹೊಕ್ಕಿ ಮೊದಲ ಗುಡ್ಡವನ್ನು ಪ್ರವೇಶಿಸಿದೆವು.

ಆ ಗುಡ್ಡದಲ್ಲಿ ಅಷ್ಟೇನು ಚೇಳುಗಳಿರಲಿಲ್ಲ. ಅಲ್ಲೊಂದು ಇಲ್ಲೊಂದು ಚೇಳು ಕಾಣಿಸಿಕೊಳ್ಳುತ್ತಿದ್ದವು. ಮೊದಲ ಗುಡ್ಡವನ್ನು ದಾಟಿ, ಎರಡನೆ ಗುಡ್ಡವನ್ನು ಏರುತ್ತಾ ಹೋದಂತೆ ಚೇಳುಗಳ ಸಂಖ್ಯೆಯೂ ಜಾಸ್ತಿಯಾಯಿತು. ಮೇಲೆ ಹೋದರೆ ನೋಡಿದ ದಿಕ್ಕಿನಲ್ಲೆಲ್ಲಾ ಬಗೆಬಗೆಯ ಚೇಳುಗಳು ಕಾಣಿಸಿಕೊಂಡವು. ನನ್ನ ಮೈ ಜುಮ್ಮೆಂದಿತು. ಕಾಲನ್ನು ನೆಲದ ಮೇಲೆ ಇಡಲಾಗದೆ ಥಕಥೈ ಥಕಥೈ ಎಂದು ಕುಣಿದಾಡಿದೆವು. ಓಡಿ ಹೋಗಿ ಒಂದು ದೊಡ್ಡ ಬಂಡೆ ಮೇಲೇರಿ ಕುಳಿತೆ. ನನ್ನಂತೆ ಹೆದರಿದ ಕೆಲ ಹುಡುಗರು ಕೂಡ ಹಾಗೇ ನಿಂತಲ್ಲಿ ನಿಲ್ಲಲಾರದೆ, ಕುಳಿತಲ್ಲಿ ಕುಳಿತಿರಲಾರದೆ ಪರದಾಡುತ್ತಿದ್ದರು. ಈ ಗುಡ್ಡಕ್ಕೆ ಬಹಳ ಸಲ ಬಂದು ಅನುಭವ ಹೊಂದಿದ್ದ ಇನ್ನು ಕೆಲ ಹುಡುಗರು, ಚಲನಚಿತ್ರ ನಾಯಕರಂತೆ ಸೋಗು ಹಾಕಿಕೊಂಡು ನಮ್ಮನ್ನು ಹೀಯಾಳಿಸುತ್ತಿದ್ದರು.

ಒಂದಷ್ಟು ಒಣಗಿದ ಕಟ್ಟಿಗೆ ಕೂಡಿ ಹಾಕಿ, ಬೆಂಕಿ ಹಚ್ಚಿ ಚೇಳುಗಳನ್ನು ಸುಟ್ಟು ತಿಂದರು. ನಾನು ತಂದಿದ್ದ ಬಾಳೆಹಣ್ಣು  ತಿಂದು, ನೀರು ಕುಡಿದು ತೃಪ್ತಿಪಡುವಷ್ಟರಲ್ಲೇ ಚೆನ್ನ ನನ್ನತ್ತ ಭಯದಿಂದ ನೋಡುತ್ತಿರುವುದನ್ನು ಗಮನಿಸಿದೆ. ಅವನು ಮಾಡಿದ ಸನ್ನೆಗಳನ್ನು ನನ್ನ ಮೆದುಳು ಅರಿತು ಅರ್ಥ ಮಾಡಿಕೊಳ್ಳುವಷ್ಟರಲ್ಲೇ, ಮೂರ್ನಾಲ್ಕು ಚೇಳುಗಳು ನನ್ನ ಹಿಂದಿನಿಂದ ಬಂದು ಬೆನ್ನಿನ ಮೇಲೆ ಹತ್ತ ತೊಡಗಿದ್ದವು. ಒಂದು ಚೇಳು ನನ್ನ ಕತ್ತಿನ ಮೇಲೆ ಹರಿದಾಡಿ, ಕಿವಿಯ ಕಡೆಗೆ ದಾಳಿ ಇಟ್ಟಿತು. ಕೆಲವೇ ಕ್ಷಣಗಳಲ್ಲಿ ನಡೆದ ಈ ಘಟನೆಯಿಂದ ದಿಗ್ಭ್ರಮೆಗೊಂಡ ನಾನು ಕಿಟಾರನೆ ಕಿರುಚಿಕೊಂಡು ನಿದ್ರೆಯಿಂದ ಎಚ್ಚರಗೊಂಡೆ.

ಹುಡುಗರೆಲ್ಲಾ ದುಗುಡಗೊಂಡು ನನ್ನತ್ತ ಓಡಿಬಂದರು. ನಾನು ಧರಿಸಿದ್ದ ಬಟ್ಟೆಯಲ್ಲಾ ಬೆವರಿನಿಂದ ಒದ್ದೆಯಾಗಿತ್ತು. ನನ್ನನ್ನು ಸಮಾಧಾನಪಡಿಸಿ ನೀರು ಕುಡಿಸಿದರು. ನಾ ಕಂಡ ಭಯಾನಕ ಕನಸನ್ನು ವಿವರಿಸಿದಾಗ ಅದು ನಗೆಪಾಟಲಾಯಿತು. ಸಮಯ 9:30 ಆಗಿತ್ತು. ವಸತಿ ನಿಲಯದ ಮೇಲ್ವಿಚಾರಕರು ಆಗಮಿಸಿ ನನ್ನನ್ನು ಅಭಿನಂದಿಸಿ, ನನ್ನ ಕೆಲಸವನ್ನು ಶ್ಲಾಘಿಸಿದರು. ಪೂಜಾ ಭಟ್ಟನಿಗೆ ಕರೆ ಮಾಡಿ ನನ್ನ ಜೊತೆ ಮಾತಾಡಿ, ನನ್ನ ಸ್ನೇಹಿತರ ವಿಚಾರಗಳನ್ನು ತಿಳಿಸಿದಳು. ನಿಧಾನವಾಗಿ

ಭಾನುವಾರವಾದ್ದರಿಂದ ವಿಶೇಷ ಸಿಹಿ ಊಟವನ್ನು ಮುಗಿಸಿ ಹತ್ತನೆಯ ತರಗತಿಯ ವಿದ್ಯಾರ್ಥಿಗಳ ಜೊತೆಗೂಡಿ ಚೇಳಿನಗುಡ್ಡಕ್ಕೆ ಹೊರೆಟೆವು. ಕನಸಿನಲ್ಲಿ ಕಂಡ ಭಯಾನಕ ದೃಶ್ಯಗಳೇ ನನ್ನ ಮನಸ್ಸಿನಲ್ಲಿ ಹರಿದಾಡುತ್ತಿದ್ದವು. ಆದರೆ ಬೆಟ್ಟವನ್ನು ಏರಿದ ಮೇಲೆ ಗೊತ್ತಾಯಿತು, ಅದು ಬರೀ ಬೋಳಾದ ಗುಡ್ಡ ಎಂದು. ಅಲ್ಲಿ ಇಲ್ಲಿ ಹುಡುಕಿದಾಗ ಒಂದೆರಡು ಚೇಳುಗಳನ್ನು ನೋಡಿದ್ದು ಬಿಟ್ಟರೆ ಅಂತಹ ವಿಶೇಷವೇನೂ ಇರಲಿಲ್ಲ. ಬೆಟ್ಟ ಇಳಿದು ಬಲಕ್ಕೆ ತಿರುಗಿ ಅರ್ಧ ಮೈಲು ನಡೆದರೆ ಒಂದು ಕೆರೆ ಸಿಕ್ಕಿತು. ಎಲ್ಲರೂ ನೀರಿನಲ್ಲಿ ಮಿಂದು ಖುಷಿಪಟ್ಟೆವು.

scorpion-tattoo-sಹುಡುಗರ ಜವಾಬ್ದಾರಿ ನನ್ನ ಮೇಲಿದ್ದರಿಂದ ಕೆರೆಯ ದಡವನ್ನು ಬಿಟ್ಟು ದೂರ ಹೋಗದಿರಲು ನಿಷೇಧಾಜ್ಞೆ ಹೊರಡಿಸಿದ್ದೆ. ವಾಪಸ್ಸು ಬರುತ್ತಾ ಕದಂಬರ ಒಂದು ಪುಟ್ಟ ಕೋಟೆಯನ್ನು ನೋಡಿಕೊಂಡು, ಹಾಗೇ ಹತ್ತಿ, ಹೀರೆ, ಚೆನ್ಮಲ್ಲಿಗೆ, ಬಾಳೆ, ಕೋಸು, ಮೆಣಸಿನಕಾಯಿ, ಟೊಮಾಟೊ ಬೆಳೆದಿದ್ದ ಹೊಲಗಳನ್ನು ದಾಟಿ ವಸತಿ ಶಾಲೆ ಸೇರಿದೆವು. ಚೇಳಿನ ಬೆಟ್ಟ ಒಂದು ಅದ್ಭುತ ಅನುಭವವನ್ನು ಕೊಟ್ಟಿತು. ಎಂಟನೇ ಮತ್ತು ಒಂಬತ್ತನೇ ತರಗತಿ ಮಕ್ಕಳಿಗೆ ನಮ್ಮ ಜೊತೆ ಬರುವ ಭಾಗ್ಯವಿರಲಿಲ್ಲ. ಹಾಗಾಗಿ ನಾನು ವಾಪಸ್ಸು ಬಂದ ಮೇಲೆ ಗುಡ್ಡದ ಕಥೆ ಹೇಳಿ ಅವರನ್ನು ತೃಪ್ತಿಪಡಿಸಬೇಕಾಯಿತು.

ಗುಂಡೇನಹಳ್ಳಿಯ ಇನ್ನೊಂದು ವಿಶೇಷವೇನೆಂದರೆ, ಲಂಬಾಣಿ ಜನಾಂಗದವರು. ನಾನು ಇದುವರೆಗೂ ಲಂಬಾಣಿ ಜನಾಂಗದವರನ್ನು ಒಂದೇ ಕಡೆ ವಾಸವಿರುವುದನ್ನು ನೋಡೇ ಇರಲಿಲ್ಲ. ಅವರನ್ನು ಊರೂರು ತಿರುಗುವ ಹಕ್ಕಿಪಿಕ್ಕಿ ಜನಾಂಗದವರು ಎಂದು ತಿಳಿದಿದ್ದೆ. ಲಂಬಾಣಿ ಜನಾಂಗದ ವೇಷ ಭೂಷಣ, ಸಂಸ್ಕಾರ, ಕೃಷಿ, ಮಾತು ಎಲ್ಲವೂ ವಿಭಿನ್ನ. ಲಂಬಾಣಿ ಜನಾಂಗದ ಒಬ್ಬ ಹುಡುಗ ವಸತಿ ನಿಲಯದಲ್ಲಿ ವಾಸಿಸುತ್ತಿದ್ದ. ಸಂದೀಪ ಅವನ ಹೆಸರು. ಹತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದ ಅವನು ನನ್ನನ್ನು ತುಂಬಾ ಹಚ್ಚಿಕೊಂಡು, ಅಕ್ಕರೆಯಿಂದ ಕಾಣುತ್ತಿದ್ದ. ನನ್ನನ್ನು ಸತ್ಕರಿಸಿಸುವುದು ಎಂದರೆ ಅವನಿಗೆ ಇಷ್ಟ.

ನನ್ನ ಕೊಡೆ ಮುರಿದು ಹೋಗಿ ಅದರ ಆಯಸ್ಸು ಮುಗಿಯಿತೇನೋ ಎಂದುಕೊಳ್ಳುವಷ್ಟರಲ್ಲಿ, ಅದನ್ನು ತೆಗೆದುಕೊಂಡು ಹೋಗಿ ಹೊಸದರಂತೆ ರಿಪೇರಿ ಮಾಡಿಕೊಂಡು ಬಂದ. ಅವನಿಗೆ ಯಾವುದೇ ಸಹಾಯ ಬೇಕಾದರೂ ನನ್ನನ್ನು ಸಂಪರ್ಕಿಸುವಂತೆ ತಿಳಿಸಿ ನನ್ನ ದೂರವಾಣಿ ಸಂಖ್ಯೆಕೊಟ್ಟೆ. ನಂತರ ಸಂದರ್ಶಕರ ಪುಸ್ತಕದಲ್ಲಿ ಕೂಲಂಕುಷವಾಗಿ ವಸತಿ ನಿಲಯ ಆಚಾರ ವಿಚಾರ ಬಗ್ಗೆ ಕೆಲವು ಅನಿಸಿಕೆ ಮತ್ತು ಸೂಚನೆಗಳೊಂದಿಗೆ, ನನಗೆ ವಾಸ್ತವ್ಯ ಕಲ್ಪಿಸಿದ್ದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದೆ. ರಾತ್ರಿ ಭಟ್ಟರು, ಹುಡುಗರ ಜೊತೆ ಮಾತಾಡಿಕೊಂಡು ಮಲಗಿದೆವು.

[ಇಲ್ಲಿಯತನಕ ನಡಿಗೆಯಲ್ಲಿ ಕ್ರಮಿಸಿದ ಅಂದಾಜು ದೂರ = 146 ಮೈಲುಗಳು]

 

‍ಲೇಖಕರು admin

3 July, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading