ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ರೇಕಿಂಗ್ ನ್ಯೂಸ್: ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕೋ ಚೆನ್ನಬಸಪ್ಪ ಆಯ್ಕೆ

ಬಿಜಾಪುರದಲ್ಲಿ ಜರುಗುವ ೭೯ ನೆಯ

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ

ಕೋ ಚನ್ನಬಸಪ್ಪ

ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಜರುಗಿದ ಸಭೆಯಲ್ಲಿ ಎಂ ಎಂ ಕಲ್ಬುರ್ಗಿ , ಪ್ರೊ ಹಂಪ ನಾಗರಾಜಯ್ಯ, ಎಂ ಚಿದಾನಂದ ಮೂರ್ತಿ ಅವರ ಹೆಸರುಗಳು ಪ್ರಸ್ತಾಪವಾದವು. ಕಳೆದ ಸಮ್ಮೇಳನದಲ್ಲೂ ಕೋ ಚೆನ್ನಬಸಪ್ಪ ಅವರ ಹೆಸರು ಪ್ರಸ್ತಾಪವಾಗಿ ಕೊನೆಗೆ ಅಧ್ಯಕ್ಷ ಸ್ಥಾನ ಸಿ ಪಿ ಕೆ ಅವರ ಪಾಲಾಗಿತ್ತು.
ಈ ಆಯ್ಕೆಯ ಸಂದರ್ಭದಲ್ಲಿ ‘ಅವಧಿ’ ಕೋ ಚೆನ್ನಬಸಪ್ಪ ಅವರನ್ನು ಅಭಿನಂದಿಸುತ್ತದೆ
ಕೋ ಚೆನ್ನಬಸಪ್ಪ ಅವರ ಪರಿಚಯ, ‘ಸಂಡೆ ಇಂಡಿಯನ್’ ಈ ಹಿಂದೆ ಪ್ರಕಟಿಸಿದ್ದ ಕೋ ಚೆನ್ನಬಸಪ್ಪ ಅವರ ಸಂದರ್ಶನ ಇದರೊಂದಿಗಿದೆ.

ನ್ಯಾ.ಕೋ. ಚನ್ನಬಸಪ್ಪ

೨೭-೨-೧೯೨೨
ಕೃಪೆ: ಕಣಜ

ನಿವೃತ್ತ ನ್ಯಾಯಾಧಿಶರಾದ ಕೋ. ಚೆನ್ನಬಸಪ್ಪನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಆಲೂರಿನ ಸಮೀಪದ ಕಾನಮಡುಗು. ತಂದೆ ವೀರಣ್ಣ. ತಾಯಿ ಬಸಮ್ಮ. ಪ್ರೈಮರಿ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಕಾನಮಡುಗು ಹಳ್ಳಿಯಲ್ಲಿ. ನಂತರ ಪ್ರೌಢಶಾಲೆಗೆ ಬಳ್ಳಾರಿ. ಕಾಲೇಜು ವಿದ್ಯಾಭ್ಯಾಸ ಅನಂತಪುರ. ಆಗ ದೇಶಕ್ಕೆ ಹಬ್ಬಿದ್ದ ಸ್ವಾತಂತ್ರ್ಯದ ಬಿಸಿ. ಕ್ವಿಟ್ ಇಂಡಿಯಾ ಚಳವಳಿಯಲ್ಲಿ  ವಿದ್ಯಾರ್ಥಿ ಮುಖಂಡರಾಗಿ ಭಾಗಿ. ಬಂಧನ, ಸೆರೆಮನೆವಾಸ. ಬಿಡುಗಡೆಯ ನಂತರ ಬಿ.ಎ. ಪದವಿ. ಬೆಳಗಾವಿ ಕಾಲೇಜಿನಿಂದ ಲಾ ಪದವಿ. ಚರಿತ್ರೆ ಮತ್ತು ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ.

೧೯೪೬ರಲ್ಲಿ ಮುಂಬಯಿ ಹೈಕೋರ್ಟಿನಲ್ಲಿ ವಕೀಲರಾಗಿ ನೋಂದಣಿ. ಬಳ್ಳಾರಿ ಡಿಸ್ಟ್ರಿಕ್ಟ್ ಕೋರ್ಟಿನಲ್ಲಿ ವಕೀಲಿ ವೃತ್ತಿ ಆರಂಭ. ೧೯೬೫ರಲ್ಲಿ ಡಿಸ್ಟ್ರಿಕ್ಟ್ ಸೆಷನ್ ಜಡ್ಜ್ ಆಗಿ ನೇಮಕ. ನಿವೃತ್ತಿಯ ನಂತರ ಪುನಃ ಕರ್ನಾಟಕ ಹೈಕೋರ್ಟಿನಲ್ಲಿ  ವಕೀಲಿ ವೃತ್ತಿ. ಹಲವಾರು ಕಾರ್ಮಿಕ ಸಂಘಗಳ, ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಅಧ್ಯಕ್ಷರ ಜವಾಬ್ದಾರಿ.
೧೯೭೧ರ ಸುಮಾರಿನಲ್ಲೆ ಅರವಿಂದಾಶ್ರಮದ ಒಡನಾಟ. ಕರ್ನಾಟಕ ವಿಭಾಗದ ಅರವಿಂದಾಶ್ರಮ ಪ್ರಾರಂಭ. ಅಮೆರಿಕದಲ್ಲಿ ನಡೆದ ವೀರಶೈವ ವಾರ್ಷಿಕ ಅವೇಶನ, ಅರವಿಂದಾಶ್ರಮದ ಕಾರ‍್ಯಕ್ರಮಗಳಲ್ಲಿ ಪ್ರಮುಖ ಪಾತ್ರ.
ಸಾಹಿತ್ಯದ ಗೀಳು ಹಚ್ಚಿಕೊಂಡ ಇವರು ನಾಡಿನ ಪ್ರಮುಖ ಪತ್ರಿಕೆಗಳಿಗೆಲ್ಲಾ ಬರೆದ ಅಪಾರ ಬರಹ. ಕನ್ನಡಪ್ರಭ ಪತ್ರಿಕೆಯಲ್ಲಿ ನ್ಯಾಯಾಧಿಶರ ನೆನಪುಗಳು ಮತ್ತು ಪ್ರಜಾಮತ ವಾರಪತ್ರಿಕೆಯಲ್ಲಿ ನ್ಯಾಯಾಲಯದಲ್ಲಿ  ಸತ್ಯ ಕಥೆಗಳು ಪ್ರಕಟಿತ.
ಪ್ರಕಟಿತ ಕೃತಿಗಳೇ ಸುಮಾರು ೮೦ಕ್ಕೂ ಮಿಕ್ಕು. ಸ್ವಾತಂತ್ರ್ಯ ಮಹೋತ್ಸವ, ಪ್ರಾಣಪಕ್ಷಿ, ಜೀವತೀರ್ಥ ಮೊದಲಾದ ೫ ಕವನ ಸಂಕಲನಗಳು. ಗಡಿಪಾರು, ನಮ್ಮೂರ ದೀಪ, ಗಾಯಕನಿಲ್ಲದ ಸಂಗೀತ ಮುಂತಾದ ೬ ಕಥಾ ಸಂಕಲನಗಳು. ಹಿಂದಿರುಗಿ ಬರಲಿಲ್ಲ, ನೊಗದ ನೇಣು, ರಕ್ತತರ್ಪಣ, ಬೇಡಿ ಕಳಚಿತು-ದೇಶ ಒಡೆಯಿತು ಮೊದಲಾದ ೯ ಕಾದಂಬರಿಗಳು. ಶ್ರೀ ಅರವಿಂದರು, ಶ್ರೀ ಮಾತಾಜಿ, ಶ್ರೀ ಮೃತ್ಯುಂಜಯಸ್ವಾಮಿಗಳು ಮೊದಲಾದ ೮ ಜೀವನಚರಿತ್ರೆಗಳು. ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ, ದೃಢಪ್ರತಿಜ್ಞೆ, ಕುವೆಂಪು ವೈಚಾರಿಕತೆ ಮೊದಲಾದ ವಿಮರ್ಶಾ ಗ್ರಂಥಗಳು. ರಕ್ಷಾಶತಕಂ, ಶ್ರೀ ಕುವೆಂಪು ಭಾಷಣಗಳು, ಬಿನ್ನವತ್ತಳೆಗಳು ಸಂಪಾದಿತ ಕೃತಿಗಳು.
ಸಂದ ಪ್ರಶಸ್ತಿಗಳು-ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಸ.ಸ.ಮಾಳವಾಡ ಪ್ರಶಸ್ತಿ, ಚಿಂತನಶ್ರೀ ಪ್ರಶಸ್ತಿ, ಸಂ.ಶಿ. ಭೂಸನೂರ ಮಠ ಪ್ರಶಸ್ತಿ, ಕನ್ನಡಶ್ರೀ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ ಮುಂತಾದವು.

ಕೋ ಚನ್ನಬಸಪ್ಪ

ಕೃಪೆ: ವಿಕಿಪೀಡಿಯಾ

ಕೋ.ಚೆನ್ನಬಸಪ್ಪನವರು ೧೯೨೨ ಫೆಬ್ರುವರಿ ೨೧ರಂದು ಬಳ್ಳಾರಿ ಜಿಲ್ಲೆಯ ಆಲೂರು ಮಜರಾಕಾನಾ ಮಡುವಿನಲ್ಲಿ ಜನಿಸಿದರು. ತಾಯಿ ಬಸಮ್ಮ ; ತಂದೆ ಕೋಣನ ವೀರಣ್ಣ.

ವೃತ್ತಿ

ನ್ಯಾಯವಾದಿಗಳಾಗಿ ವೃತ್ತಿ ಪ್ರಾರಂಭಿಸಿದ ಚನ್ನಬಸಪ್ಪನವರು ನ್ಯಾಯಮೂರ್ತಿಗಳಾಗಿ ನಿವೃತ್ತರಾದರು.

ಕೃತಿಗಳು

  • ಖಜಾನೆ
  • ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ
  • ರಕ್ತತರ್ಪಣ
  • ಹಿಂದಿರುಗಿ ಬರಲಿಲ್ಲ
  • ನ್ಯಾಯಾಲಯದ ಸತ್ಯಕಥೆಗಳು
  • ಗಡಿಪಾರು
  • ನಮ್ಮೂರ ದೀಪ
  • ಪ್ರಾಣಪಕ್ಷಿ
  • ಹೃದಯ ನೈವೇದ್ಯ
  • ದಿವಾನ್ ಬಹಾದ್ದೂರ್
  • ಶ್ರೀ ಮೃತ್ಯುಂಜಯ ಸ್ವಾಮಿಗಳು
  • ಶ್ರೀ ಅರವಿಂದರು
  • ಶ್ರೀ ಅರವಿಂದರು ಮತ್ತು ಅವರ ಆಶ್ರಮ
  • ಶ್ರೀ ರಾಮಕೃಷ್ಣ ಲೀಲಾ ನಾಟಕ
  • ರಾಮಕೃಷ್ಣರ ದೃಷ್ಟಾಂತ ಕಥೆಗಳು
  • ಬೆಳಕಿನೆಡೆಗೆ
  • ನಮಗೆ ಬೇಕಾದ ಸಾಹಿತ್ಯ
  • ನನ್ನ ಮನಸ್ಸು
  • ನನ್ನ ನಂಬುಗೆ
  • ಗಾಯಕನಿಲ್ಲದ ಸಂಗೀತ
  • ಆ ಮುಖ ಈ ಮುಖ
  • ಈ ರಾಜ್ಯದೊಡೆಯ ರೈತ

ಪುರಸ್ಕಾರ

  • “ಖಜಾನೆ”ಗೆ ಭಾರತ ಸರಕಾರದ ನೂತನ ಅಕ್ಷರಸ್ಥರ ಸಾಹಿತ್ಯಸ್ಪರ್ಧೆಯಲ್ಲಿ ಬಹುಮಾನ ದೊರಕಿದೆ
  • “ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ”ಗೆ ಕುವೆಂಪು ವಿದ್ಯಾವರ್ಧಕ ಟ್ರಸ್ಟಿನ ಪುರಸ್ಕಾರ ಲಭಿಸಿದೆ.
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪಡೆದಿದ್ದಾರೆ.

 

ಸಾಧನೆಯೆಂಬುದು ಸುಳ್ಳಿನ ಸಮುದ್ರ


ಕೋ. ಚೆನ್ನಬಸಪ್ಪ, (ನಿವೃತ್ತ ನ್ಯಾಯಾಧೀಶರು, ಸ್ವಾತಂತ್ರ್ಯ ಹೋರಾಟಗಾರರು |
ನಿರೂಪಣೆ: ದೊಡ್ಡಿಪಾಳ್ಯ ನರಸಿಂಹಮೂರ್ತಿ
ಮನುಷ್ಯ ಜೀವಿಸಬೇಕೆಂದರೆ ಗಾಳಿ, ನೀರು, ಆಹಾರ ಅತ್ಯವಶ್ಯಕ. ಆಹಾರವಿಲ್ಲದಿದ್ದರೂ ವಾರಗಟ್ಟಲೆ ಬದುಕಬಹುದು. ಅದರೆ ನೀರು ಇಲ್ಲದೆ ಒಂದೆರಡು ದಿನವೂ ಬದುಕುಳಿಯುವುದು ಕಷ್ಟ. ಹೀಗೆ ಅತ್ಯಂತ ಅವಶ್ಯವಾಗಿರುವ ಕುಡಿಯುವ ನೀರು ಒದಗಿಸುವ ವ್ಯವಸ್ಥೆ ಹೇಗಿದೆ ಎಂದು ನೋಡಿದರೆ ಸರ್ಕಾರಗಳ ಸಾಧನೆ ನಮಗೆ ಅರ್ಥವಾಗುತ್ತದೆ. ಬೆಂಗಳೂರನ್ನು ಅಂತರರಾಷ್ಟ್ರೀಯ ದರ್ಜೆಗೇರಿಸುತ್ತೇವೆಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಸಂದರ್ಭದಲ್ಲೇ ಜನರು ಖಾಲಿ ಕೊಡ ಹಿಡಿದು ಸರತಿ ನಿಲ್ಲುತ್ತಿದ್ದಾರೆ. “ನಮ್ಮೂರು ಬೆಂಗಳೂರು- ವಾರಕ್ಕೊಮ್ಮೆ ಕುಡಿಯೋ ನೀರು” ಎಂಬ ಸ್ಥಿತಿ ಇಲ್ಲಿದೆ.
ಈ ಸರ್ಕಾರ “ಕುಡಿಯುವ ನೀರು ಸಮರ್ಪಕವಾಗಿ ಸರಬರಾಜು ಮಾಡುತ್ತೇವೆ, ಬಡಜನರಿಗೆ 2 ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ಕೊಡುತ್ತೇವೆ” ಎಂಬಿತ್ಯಾದಿ ಆಶ್ವಾಸನೆ ಮೇರೆಗೆ ಆಯ್ಕೆಯಾಗಿ ಬಂದದ್ದು. ಅದನ್ನೆಲ್ಲಾ ಬಿಟ್ಟು ಈಗ ಶಿವರಾತ್ರಿ ದಿನ ಗಂಗಾಜಲ ಕೊಡುತ್ತೇವೆ ಎನ್ನುತ್ತಾರೆ; ಗಂಗಾಜಲ ಕೊಟ್ಟರೆ ಜನರ ನೀರಿನ ಬವಣೆ ತೀರಿಹೋಗುತ್ತದೆಯೇ?
ಈ ಸರ್ಕಾರದ ಯೋಜನೆಗಳು ಕಾಗದದ ಮೇಲೆ ಜಾರಿಯಾಗಿವೆ. ಖಜಾನೆಯಿಂದ ಹಣ ಕೂಡ ಖರ್ಚಾಗಿದೆ. ಆದರೆ ಎಷ್ಟು ಯೋಜನೆಗಳು ಕಾರ್ಯರೂಪಕ್ಕೆ ಬಂದಿವೆ ಎಂಬುದು ಮುಖ್ಯ. ಉದಾಹರಣೆಗೆ ಒಂದೇ ರಸ್ತೆಗೆ ಡಾಂಬರು ಹಾಕಲು ಆರು ಬಾರಿ ಹಣ ಮಂಜೂರಾಗಿದೆ. ದಾಖಲೆಗಳ ಪ್ರಕಾರ ಡಾಂಬರೀಕರಣವೂ ಆಗಿದೆ. ಆದರೆ ರಸ್ತೆ ಮಾತ್ರ ಅದೇ ದುಸ್ಥಿತಿಯಲ್ಲಿದೆ. ಇಂಥ ಹಗರಣಗಳು ಆಗಾಗ್ಗೆ ಬಯಲಾಗುತ್ತಲೇ ಇವೆ.
ಶಾಲಾ ಮಕ್ಕಳಿಗೆ ಉಚಿತ ಸೈಕಲ್ ಕೊಡುವ ಯೋಜನೆ ಮಾಡಿದರು. ಇದರಲ್ಲಿ ಯಡಿಯೂರಪ್ಪ ಅವರ ಮಕ್ಕಳೇ ಕೋಟ್ಯಂತರ ಹಣ ನುಂಗಿ ಹಾಕಿದರು ಎಂಬ ಇನ್ನೊಂದು ಹಗರಣ ಹೊರಬಿತ್ತು. ಇದು ಯಾರ ಅಭಿವೃದ್ಧಿ? ಯಾವ ಥರದ ಅಭಿವೃದ್ಧಿ?
“ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೋಡಿ ಸಹಿಸಲಾಗದೆ ವಿರೋಧ ಪಕ್ಷದವರು ನಮಗೆ ಕಿರುಕುಳ ಕೊಡುತ್ತಿದ್ದಾರೆ” ಎಂದು ಮುಖ್ಯಮಂತ್ರಿಗಳು ಹೋದ ಕಡೆಯೆಲ್ಲಾ ಗೋಳಾಡುತ್ತಾರೆ. ನೀವು ಶಾಲೆ ಕಟ್ಟಿಸಿದರೆ, ಆಸ್ಪತ್ರೆ ಕಟ್ಟಿಸಿದರೆ ರಸ್ತೆ ಮಾಡಿಸಿದರೆ ಯಾರು ಬೇಡ ಎನ್ನುತ್ತಾರೆ? ಹಗರಣಗಳನ್ನು ಮಾಡಬೇಡಿ ಎಂದು ಹೇಳುವುದೂ ತಪ್ಪೇ ಹಾಗಾದರೆ? ವಿರೋಧ ಪಕ್ಷಗಳು ಸರ್ಕಾರದ ತಪ್ಪನ್ನು ಎತ್ತಿ ತೋರಿಸಬಾರದು ಎಂದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಥವೇನು?
ಈ ಮೂರು ವರ್ಷದ ಉದ್ದಕ್ಕೂ ಆಪರೇಷನ್ ಕಮಲ-ಶಾಸಕರ ಖರೀದಿ, ಹಗರಣಗಳು, ರೆಸಾರ್ಟ್ ರಾಜಕೀಯ, ಆಂತರಿಕ ಕಚ್ಚಾಟ ಇತ್ಯಾದಿಗಳಲ್ಲೇ ಮುಳುಗಿ ಹೋಗಿದ್ದಾರೆ. ಹೀಗಿರುವಾಗ ಅಭಿವೃದ್ಧಿ ಹೇಗಾಗಬೇಕು?
ಇನ್ನು ಅಭಿವೃದ್ಧಿಯ ಬಗ್ಗೆ ಇವರ ಆದ್ಯತೆಗಳನ್ನು ಗಮನಿಸೋಣ. ಬಳ್ಳಾರಿ ಹತ್ತಿರ ವಿಮಾನ ನಿಲ್ದಾಣ ಮಾಡುತ್ತೇವೆ ಎಂದು ಹೊರಟಿದ್ದಾರೆ. ಅದೂ ಅಂತರರಾಷ್ಟ್ರೀಯ ದರ್ಜೆಯದ್ದು. ಅದಕ್ಕಾಗಿ ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹೊರಟಿದ್ದಾರೆ. ಅದನ್ನು ಬಂಜರು ಭೂಮಿ ಎಂದು ಅಧಿಕಾರಿಗಳು ಪ್ರಮಾಣಪತ್ರ ಕೊಡುತ್ತಾರೆ. ಜನಾರ್ದನ ರೆಡ್ಡಿಯಂತಹವರಿಗೆ ಇಂಥ ಅಭಿವೃದ್ಧಿ ಬೇಕಾಗಿದೆ. ಆದರೆ ಅಲ್ಲಿನ ರೈತರು ಇದರ ವಿರುದ್ಧ ತೀವ್ರ ಪ್ರತಿಭಟನೆ ಮಾಡುತ್ತಿದ್ದಾರೆ.
ನೈಸ್ ಯೋಜನೆಯ ಉದಾಹರಣೆ ನೋಡೋಣ. ಬೆಂಗಳೂರಿನಿಂದ ಮೈಸೂರಿಗೆ ಎಕ್ಸ್‌ಪ್ರೆಸ್ ಹೆದ್ದಾರಿ ಮಾಡಲು 6900 ಎಕರೆ ಭೂಮಿ ಬೇಕು. ಆದರೆ ನೋಟಿಫೈ ಆಗಿರುವ ಜಮೀನು ೨೧,೦೦೦ ಎಕರೆಗಳಷ್ಟು! ಏಕೆ ಎಂದು ಕೇಳಿದರೆ ಟೌನ್‌ಶಿಪ್ ಮಾಡುತ್ತಿದ್ದೇವೆ ಎಂಬ ಕಾರಣ ನೀಡುತ್ತಾರೆ. ಟೌನ್‌ಶಿಪ್ ಎಂದರೆ ರಿಯಲ್ ಎಸ್ಟೇಟ್ ದಂಧೆ.
ಉತ್ತರ ಕರ್ನಾಟಕದ ಪ್ರವಾಹ ಪೀಡಿತರಿಗೆ 50,000 ಮನೆ ನಿರ್ಮಿಸಿ ಕೊಡುತ್ತೇವೆ ಎಂದು ಪ್ರಚಾರ ಮಾಡಿದರು. ಆದರೆ ಜನರು ಈಗಲೂ ಬೀದಿಗಳಲ್ಲೋ, ತಗಡಿನ ಶೆಡ್‌ಗಳಲ್ಲೋ ಪರದಾಡುತ್ತಿದ್ದಾರೆ. ಶಿಕ್ಷಣ ಒಂದು ಮೂಲಭೂತ ಹಕ್ಕು. ಆದರೆ ಇಂದಿನ ಸ್ಥಿತಿ ಹೇಗಿದೆ ಎಂದರೆ ಎಲ್ಲೆಡೆ ಖಾಸಗಿ ಶಾಲೆಗಳು. ಕೂಸು ಹುಟ್ಟುವ ಮುನ್ನ ಶಾಲೆಗಳಲ್ಲಿ ದಾಖಲಾತಿಗೆ ಅರ್ಜಿ ಗುಜರಾಯಿಸಿ ಸ್ಥಾನ ಕಾದಿರಿಸಬೇಕು. ಇದೆಲ್ಲಾ ಯಾವ ಮಾದರಿಯ ಅಭಿವೃದ್ಧಿ?
ಸರ್ಕಾರದ ಸಾಧನೆ ಬಗ್ಗೆ ಜಾಹಿರಾತುಗಳನ್ನು ಕೊಡುತ್ತಾರೆ. ಅಬ್ಬರದ ಪ್ರಚಾರ ಮಾಡುತ್ತಾರೆ. ಇದು ಗೋಬೆಲ್ಸ್ (ಹಿಟ್ಲರ್‌ನ ಪ್ರಚಾರ ಮಂತ್ರಿ) ಸಿದ್ಧಾಂತ ‘ಒಂದು ಸುಳ್ಳನ್ನು ನೂರು ಬಾರಿ ಪ್ರಚಾರ ಮಾಡಿದರೆ ಅದನ್ನು ಸತ್ಯ ಎಂದು ಜನ ನಂಬಿಬಿಡುತ್ತಾರೆ’ ಎಂಬುದರ ಆಚರಣೆ. ಸರ್ಕಾರದ ಸಾಧನೆ ಎಂಬುದು ಸುಳ್ಳಿನ ಸಮುದ್ರ.
 

‍ಲೇಖಕರು G

4 January, 2013

ನಿಮಗೆ ಇವೂ ಇಷ್ಟವಾಗಬಹುದು…

4 Comments

  1. ಅರುಣ್ ಜೋಳದಕೂಡ್ಲಿಗಿ

    ನಿಜಕ್ಕೂ ಕೋಚೆ ಅವರು ಅಧ್ಯಕ್ಷರಾಗಿದ್ದು ವಯಕ್ತಿಕವಾಗಿ ಸಂತಸದ ಸಂಗತಿ. ಕಳೆದ ವರ್ಷ ಕೋಚೆ ಅವರೆ ಅಧ್ಯಕ್ಷರಾಗಬೇಕೆಂದು ವಾಚಕರವಾಣಿಗೆ ಪತ್ರ ಬರೆದಿದ್ದೆವು. ಅದು ಈ ವರ್ಷ ನಿಜವಾಗಿದೆ. ಒಳ್ಳೆಯ ಆಯ್ಕೆ. ಸಂಭ್ರಮಿಸಲು ಹಲವು ಕಾರಣಗಳಿವೆ. ಹಿರಿಯ ಜೀವ ಕೋಚೆಯವರಿಗೆ ಅಭಿನಂದನೆ.
    -ಅರುಣ್ ಜೋಳದಕೂಡ್ಲಿಗಿ

  2. VITHAL DALAWAI

    KO. CHENNABASAPPANAVARU HIRIYA VIDVAMSARU. SAMMELANADA ADYAKSHATEGE SARIYADA AAYKE.
    -VITHAL DALAWAI

  3. Jayalaxmi Patil

    ಸರಿಯಾದ ಆಯ್ಕೆ. ಅಭಿನಂದನೆ ಹಿರಿಯರಿಗೆ. ನನ್ನೂರಲ್ಲಿ ಈ ವರ್ಷದ ಸಾಹಿತ್ಯ ಸಮ್ಮೇಳನ! ಖುಷಿಯಾಗ್ತಿದೆ. 🙂

  4. hemaltha vastrad

    ಪ್ರಥಮ ಕವನಸಂಕಲನ ಬಿಡುಗಡೆಯಾದ ಊರಲ್ಲಿಯೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವುದು ಅವಿಸ್ಮರಣೀಯ.ಅಭಿನಂದನೆಗಳು ಸರ್.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading