ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೌದ್ಧಧಮ್ಮ ತತ್ವ ಚಿಂತನೆಗಳ ಪಥದಲ್ಲಿ..

ಪ್ರೊ ಎಚ್ ಟಿ ಪೋತೆ ಕಲಬುರ್ಗಿ ವಿಶ್ವವಿದ್ಯಾಲದ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥರು. ಮಲ್ಲಿಕಾರ್ಜುನ ಖರ್ಗೆ ಅವರ ಅನುಭವ ಕಥನವನ್ನು ಅವರು ಬರೆದಿದ್ದು ೨೧ರಂದು ಬಿಡುಗಡೆಯಾಗುತ್ತಿದೆ.

ಬೆಂಗಳೂರಿನ ಗಾಂಧಿ ಭವನದಲ್ಲಿ ಬಿಡುಗಡೆಯಾಗಲಿರುವ ‘ಬಾಬಾಸಾಹೇಬರೆದೆಗೆ’ ಕೃತಿಯ ಆಯ್ದ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ-

ಪ್ರೊ ಎಚ್ ಟಿ ಪೋತೆ

Great leaders have three things; inner light, inner vision and inner strength. – Dr. Amit Ray

ಪ್ರಾಯಶಃ ವರ್ತಮಾನದ ಭಾರತೀಯ ರಾಜಕಾರಣದ ಸಂದರ್ಭದಲ್ಲಿ ಈ ಬಗೆಯ ತ್ರಿಗುಣಗಳನ್ನುಳ್ಳ ವಿರಳಾತಿವಿರಳ ರಾಜಕೀಯ ನಾಯಕರಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಒಬ್ಬರು. ದಟ್ಟ ಜೀವನಾನುಭವ; ಸಾಮಾಜಿಕರೊಂದಿಗಿನ ನಿರಂತರ ಒಡನಾಟ; ದಮನಿತರ ಪರವಾದ ಕಾರುಣ್ಯ; ದೇಶದ ಏಳ್ಗೆಯ ಕುರಿತ ಚಿಂತನೆ; ನಾಡು-ನುಡಿಯ ಬಗೆಗಿನ ಪ್ರೀತಿ; ಸರ್ವರ ಬದುಕೂ ಸಶಕ್ತಗೊಳ್ಳಬೇಕೆನ್ನುವ ಸರ್ವೋದಯ ಮನಸ್ತತ್ವ; ರಾಜಕೀಯ ನಿಷ್ಠತೆ; ಸಾಮಾಜಿಕ ಬದ್ಧತೆ; ಶಿಕ್ಷಣದ ಬಗೆಗಿನ ತಿಳುವಳಿಕೆ; ನಡೆ ಮತ್ತು ನುಡಿಯಲ್ಲಿನ ಸಮತೋಲನತೆ; ದೂರದೃಷ್ಟಿಯುಳ್ಳ ಚಿಂತನಶೀಲತೆ… ಮುಂತಾದ ವಿಶಿಷ್ಟ ಗುಣಗಳಿಂದ ಮೌಲ್ಯಯುತ ವ್ಯಕ್ತಿತ್ವವನ್ನು ರೂಪಿಸಿಕೊಂಡಿರುವ ಅಪರೂಪರಲ್ಲಿ ಅಪರೂಪರು ಮಾನ್ಯ ಶ್ರೀ ಖರ್ಗೆಜಿಯವರು.

ವರ್ತಮಾನದ ರಾಜಕೀಯವು ಅನೇಕ ಬಗೆಯ ತಲ್ಲಣಗಳಿಂದ ಕೂಡಿದೆ. ಇಂದಿನ ರಾಜಕೀಯವು ಬಹುಸಂಸ್ಕೃತಿಯ ಮನೋಭಾವನೆಯನ್ನು ಸಂಕುಚಿತಗೊಳಿಸುತ್ತಿದೆ. ಏಕಸಂಸ್ಕೃತಿ ನಿಷ್ಠೆ ಮುನ್ನೆಲೆಗೆ ಬಂದು ಸಮಗ್ರತೆಯ ಬದ್ಧತೆಗಿಂತ ‘ಏಕ’ ಎನ್ನುವುದು ಪ್ರತಿಷ್ಠೆಯ ವಿಷಯವಾಗಿದೆ. ಅದುವೇ ಅಭಿವೃದ್ಧಿಗೆ ಮೂಲಮಂತ್ರ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಜೊತೆಗೆ ಇದೊಂದು ರಾಜಕೀಯ ಪಕ್ಷದ ಗುತ್ತಿಗೆಯಂತೆ ಆಗಿಬಿಟ್ಟಿದೆ.

ವಿಭಿನ್ನ ಸಾಂಸ್ಕೃತಿಕ ವಿನ್ಯಾಸದ ಸ್ವರೂಪವಾದ ಅಭಿವೃದ್ಧಿಯ ಪಥವು ಇದರಿಂದ ಅನೇಕ ರೀತಿಯಲ್ಲಿ ಅಪಾಯಕ್ಕೊಳಗಾಗಿದೆ. ಅದಕ್ಕೂ ಮುಖ್ಯವಾಗಿ ದೇಶಭಕ್ತಿಯನ್ನು ಧಾರ್ಮಿಕ ಮಾನದಂಡದಿಂದ ಅಳೆಯುವ ಪರಿಕಲ್ಪನೆ ಅಪಾಯಕಾರಿ ಮಟ್ಟದಲ್ಲಿ ಬೆಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ವೈವಿಧ್ಯತೆಯಲ್ಲಿ ಏಕತೆ ಎನ್ನುವ ಮೂಲಮಂತ್ರವನ್ನು ಅನುಸರಿಸಿಕೊಂಡು ಹೋಗುವ ಪ್ರಬುದ್ಧ ನಾಯಕರು ದೇಶಕ್ಕೆ ಅಗತ್ಯವಾಗಿ ಬೇಕಾಗಿದ್ದಾರೆ. ಅಂತಹ ವಿರಳ ರಾಜಕಾರಣಿಗಳಲ್ಲಿ ಮಲ್ಲಿಕಾರ್ಜುನ ಖರ್ಗೆಜಿಯವರು ಒಬ್ಬರು.

ಸುಮಾರು ಐದು ದಶಕಗಳಿಂದಲೂ ಈ ದೇಶದ ಸಾಂಸ್ಕೃತಿಕ ಪಲ್ಲಟಗಳನ್ನು ಸೂಕ್ಷ್ಮವಾಗಿ ಗ್ರಹಸುತ್ತಾ ಬಂದಿರುವ ಖರ್ಗೆಜಿಯವರು ದೇಶವನ್ನು ಸಮಗ್ರ ನೆಲೆಯಲ್ಲಿ ಮುಂದೆಕೊಂಡೊಯ್ಯಲು ನಿಜವಾದ ಅರ್ಹತೆಯನ್ನು ಹೊಂದಿರುವ ವ್ಯಕ್ತಿ. ಈ ನಿಟ್ಟಿನಲ್ಲಿ ಅವರು ಈಗಾಗಲೇ ತಮ್ಮ ಆಲೋಚನೆಗಳನ್ನು ಸಾಧ್ಯವಾದಾಗಲೆಲ್ಲ ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ, ಮಾಡುತ್ತಿದ್ದಾರೆ. ಇಂತಹ ಧೀಮಂತ ವ್ಯಕ್ತಿ ವರ್ತಮಾನದ ಭಾರತೀಯ ಸಮಾಜೋ ರಾಜಕೀಯಕ್ಕೆ ತಕ್ಕವರು ಎನ್ನುವುದು ನನ್ನ ನಿಚ್ಚಳ ಅಭಿಪ್ರಾಯ.

ಬುದ್ಧನ ಚಿಂತನೆಗಳಿಗೆ ಆಕರ್ಷಿತರಾಗಿ, ಅಂಬೇಡ್ಕರ್ ಆಲೋಚನೆಗಳಿಂದ ಪ್ರೇರಿತರಾಗಿ ತಮ್ಮದೇ ಆದ ತಾತ್ತಿ÷್ವಕ ಮಾರ್ಗವನ್ನು ನಿರ್ಮಿಸಿಕೊಂಡಿರುವ ಖರ್ಗೆಯವರು ಬಿರುಬಿಸಿಲು ನಾಡಿನ ಮಾನವೀಯ ಕಳಕಳಿಯ ವ್ಯಕ್ತಿತ್ವದವರು. ರಾಜಕಾರಣದಲ್ಲಿ ಸದಾ ಕ್ರಿಯಾಶೀಲರಾಗಿ ಈ ನಾಡಿನ ರಾಜಕೀಯ ಚರಿತ್ರೆಯಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆದಿದ್ದಾರೆ. ಅವರ ಮುತ್ಸದ್ದಿತನ, ಗಂಭೀರತೆ, ಸರಳತೆ, ನಿಃಸ್ವಾರ್ಥಪರತೆ, ದಯಾಪರತೆ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದೆ. ತಮ್ಮ ನೇರ ನುಡಿಯ ಮೂಲಕ ಇದ್ದುದ್ದನ್ನು ಇದ್ದಂತೆಯೇ ಹೇಳುವ ಸ್ವಭಾವ ಅವರದು.

They cannot make history, who forget history ಎಂಬ ಅಂಬೇಡ್ಕರ್ ಅವರ ಮಾತಿನಂತೆ, ಅಂಬೇಡ್ಕರೋತ್ತರ ಭಾರತದಲ್ಲಿ ದನಿಯಿಲ್ಲದ ಸಮುದಾಯದ ದನಿಯಾಗಿ, ಅವರಿಗೊಂದು ಶಕ್ತಿಯಾಗಿ ನಿಂತವರು ಮಲ್ಲಿಕಾರ್ಜುನ ಖರ್ಗೆಯವರು. ತಮ್ಮ ಕಾರ್ಯದಕ್ಷತೆ, ಶ್ರಮಸಾಧ್ಯತೆಗಳಿಂದಲೇ ದೇಶದುದ್ದಕ್ಕೂ ಹೆಸರು ಮಾಡಿದವರು ಮಲ್ಲಿಕಾರ್ಜುನ ಖರ್ಗೆಜೀ. ಅವರಲ್ಲಿರುವ ಬದ್ಧತೆಯೇ ಅವರನ್ನು ಹನ್ನೊಂದು ಬಾರಿ ಚುನಾಣೆಯಲ್ಲಿ ಗೆಲ್ಲಿಸಿದೆ. ಪ್ರಸ್ತುತದಲ್ಲಿ ರಾಜ್ಯಸಭೆಯ (ಸದಸ್ಯರಾಗಿ) ವಿರೋಧಪಕ್ಷದ ನಾಯಕರಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ರಾಜಕೀಯ ನೆಲೆಯ ಸೃಜನಶೀಲ ವ್ಯಕ್ತಿತ್ವದ ಖರ್ಗೆಜೀ ಅಪರೂಪದ ಜನನಾಯಕರಾಗಿದ್ದಾರೆ.

ಬಸವಾದಿ ಶರಣರ ಪ್ರಭಾವವು ಖರ್ಗೆಜಿಯವರ ಮೇಲಾಗಿರುವುದು ಸ್ಪಷ್ಟ. ಕಾಯಕದ ವಿಷಯದಲ್ಲಿ ಅವರು ಇಟ್ಟುಕೊಂಡಿರುವ ಶ್ರದ್ಧೆಯೇ ಇದಕ್ಕೆ ಉತ್ತಮ ನಿದರ್ಶನ. ‘ಮಲ್ಲಿಕಾರ್ಜುನ ಖರ್ಗೆಯವರೆಂದರೆ ಕಾಯಕ, ಕಾಯಕವೆಂದರೆ ಮಲ್ಲಿಕಾರ್ಜುನ ಖರ್ಗೆಯವರು’ ಎನ್ನುವಷ್ಟರ ಮಟ್ಟಿಗೆ ಕಾಯಕಕ್ಕೆ ಅಂಟಿಕೊಂಡವರು. ಹಾಗೆಯೇ ಖರ್ಗೆಯವರ ದೃಷ್ಟಿಯಲ್ಲಿ ರಾಜಕೀಯ ಅಧಿಕಾರವೆಂದರೆ ಅದರ ಅರ್ಥವೇ ಬೇರೆ. ‘ರಾಜಕೀಯವೆಂದರೆ ಅದು ಉದ್ಯೋಗವಲ್ಲ, ಅದು ಸೇವೆ,’ ಬರೀ ಸೇವೆಯಲ್ಲ ಪ್ರಾಂಜಲವಾದ ಸೇವೆ.

ಕನ್ನಡನಾಡಿನ ಹಿಂದುಳಿದ, ದಲಿತ ಚಳವಳಿಗಳ ತಾತ್ವಿಕತೆ ರಾಜಕೀಯ ಅಧಿಕಾರಕ್ಕೆ ಎಂತಹ ನಿರ್ವಚನವನ್ನು ಕೊಡುತ್ತದೆಯೋ ಅಂತಹ ನಿರ್ವಚನವನ್ನೇ ಖರ್ಗೆಯವರೂ ಕೊಟ್ಟಿದ್ದಾರೆ. ಬಡವರ, ನೊಂದವರ, ದಲಿತರ, ಮಹಿಳೆಯರ ಹಾಗೂ ಅಲ್ಪಸಂಖ್ಯಾತರ ಬವಣೆಗಳಿಗೆ ಸ್ಪಂದಿಸುವುದು ರಾಜಕೀಯ ಅಧಿಕಾರ. ಸಂವಿಧಾನದ ಆಶಯಕ್ಕನುಗುಣವಾಗಿ ನಡೆದುಕೊಳ್ಳುವುದು, ಆರಿಸಿದವರಿಂದ, ‘ಆರಿಸಿದವರಿಗಾಗಿ, ಆರಿಸಿದವರಿಗೋಸ್ಕರ’ ಮಿಡಿಯುವ, ದುಡಿಯುವ ಮನಸ್ಸುಳ್ಳವರು. ಅವರ ಈ ರಾಜಕೀಯ ಅಧಿಕಾರದ ಕ್ರಿಯಾಶೀಲತೆಯೇ ಅವರನ್ನು ಶ್ರೇಷ್ಠ ಅಂಬೇಡ್ರ‍್ವಾದಿಯೆಂದು ಗುರುತಿಸುವಂತಾಗಿದೆ. ಅಷ್ಟೇ ಅಸಂಖ್ಯಾತ ದಲಿತರನ್ನು ಅಂಬೇಡ್ಕರ್ ರೂಪದಲ್ಲಿ ಪೂಜಿಸುವಂತೆ ಮಾಡಿದೆ.

ಇಂಥ ವ್ಯಕ್ತಿತ್ವದ ಮಲ್ಲಿಕಾರ್ಜುನ ಖರ್ಗೆಯವರು ಶಿಕ್ಷಣ ತಜ್ಞರಾಗಿ, ಸಮಾಜ ಸುಧಾರಕರಾಗಿ, ಶ್ರೇಷ್ಠ ರಾಜಕೀಯ ತಜ್ಞರಾಗಿ, ಕಾನೂನು ಪಂಡಿತರಾಗಿ, ಹೊರಾಟಗಾರರಾಗಿ ಇಂದು ನಮ್ಮ ಮುಂದಿದ್ದಾರೆ. ಇದಲ್ಲದೆ ಧಾರ್ಮಿಕ ನೆಲೆಯಲ್ಲಿ ಬುದ್ಧನೆಡೆಗೆ ನಡೆದು ಅವರು ಅನುಸರಿಸಿದ್ದು ಅಂಬೇಡ್ಕರ್ ಮಾರ್ಗವನ್ನು.

ಹೀಗಾಗಿ ಅಂಬೇಡ್ಕರೋತ್ತರದಲ್ಲಿ ಅಂಬೇಡ್ಕರ್ ಅವರ ಎಲ್ಲ ಆಲೋಚನೆಗಳಿಗೆ ಜೀವ ತುಂಬಿ ನಡೆನುಡಿಗಳಲ್ಲಿ ಅಂಬೇಡ್ಕರ್ ಅವರ ತಾತ್ವಿಕ ರೂಪವೇ ಆದ ಮಲ್ಲಿಕಾರ್ಜುನ ಖರ್ಗೆಯವರು ವಿಭಿನ್ನ ಮನೋಭಾವದ ರಾಜಕಾರಣಿಗಳು. ಅವರ ಅಭಿಮಾನಿಯಾಗಿ ಸುಮಾರು ಮೂರುವರೆ ದಶಕಗಳಿಂದ ಅವರ ನಡೆ, ನುಡಿ, ಕಾರ್ಯಕ್ಷಮತೆ, ಆಚಾರ-ವಿಚಾರಗಳನ್ನು ಬಲ್ಲ ನಾನು ಅವರಲ್ಲಿರುವ ಸಮಾಜೋ ಸಾಂಸ್ಕೃತಿಕ ಮುತ್ಸದ್ದಿತನಕ್ಕೆ ಬೆರಗಾಗಿದ್ದೇನೆ, ಅವರ ಆಲೋಚನೆಗಳಿಂದ ಪ್ರಭಾವಿತನಾಗಿದ್ದೇನೆ. ನನ್ನಂತೆ ಅನೇಕ ಚಿಂತಕರು, ಬರೆಹಗಾರರು, ವಿಚಾರವಾದಿಗಳು ಅವರ ಆಲೋಚನೆಗಳಿಗೆ ಮಾರುಹೋಗಿದ್ದಾರೆ.

ದೇಶದಲ್ಲಿ ಕಳೆದ ಏಳೆಂಟು ವರ್ಷಗಳಿಂದ ಜಾತ್ಯತೀತ ನೆಲೆಯ ಚಿಂತನೆ ಮತ್ತು ಅದನ್ನು ಪ್ರತಿಪಾದಿಸುವ ರಾಜಕೀಯ ಪಕ್ಷಗಳಿಗೀಗ ಒಂದರ್ಥದಲ್ಲಿ ಸಂಕ್ರಮಣ ಕಾಲ. ಮೂಲಭೂತವಾದಿಗಳು ತಮ್ಮ ಕಬಂಧ ಬಾಹುಗಳನ್ನು ಚಾಚಿಕೊಂಡು ಜಾತ್ಯತೀತ ನಿಲುವುಗಳನ್ನು ಗುಡಿಸಿ ಗುಂಡಾಂತರ ಮಾಡುತ್ತಿದ್ದಾರೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿಯೂ ಮಲ್ಲಿಕಾರ್ಜುನ ಖರ್ಗೆಯವರು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕರಾಗಿದ್ದು ವಿರೋಧಪಕ್ಷದ ನಾಯಕನ ಜವಾಬ್ದಾರಿಯನ್ನು ದಕ್ಷ ಮತ್ತು ದಿಟ್ಟತನದಿಂದ ನಿಭಾಯಿಸಿದ್ದಾರೆ. ಜಾತಿವಾದವನ್ನೇ ಬಂಡವಾಳ ಮಾಡಿಕೊಂಡ ಮನುವಾದಿ ಚಿಂತನೆಯ ಸರಕಾರಕ್ಕೊಂದು ಅಂಕುಶದಂತಿದ್ದಾರೆ.

ಸಂವಿಧಾನದ ಜೀವಶಕ್ತಿಯೆಂಬಂತೆ ಜಾತ್ಯತೀತ ನೆಲೆಗೆ ಆಸರೆಯಾಗಿ ದುಡಿಯುತ್ತಿದ್ದಾರೆ. ಲೇಖಕರು, ಕಲಾವಿದರು ಹಾಗೂ ವಿಚಾರವಾದಿಗಳು ಪ್ರಭುತ್ವವನ್ನು ಪ್ರಶ್ನಿಸುವುದು, ವಿಮರ್ಶೆ ಮಾಡುವುದು ದೇಶದ್ರೋಹವೆಂಬಂತೆ ಪ್ರಭುತ್ವ ಬಿಂಬಿಸುತ್ತಿದೆ. ಲೇಖಕ ಅಥವಾ ವಿಚಾರವಾದಿಗಳ ಕೆಲಸವೆಂದರೆ ಸಾಮಾಜಿಕ ಅರೆಕೊರೆಗಳನ್ನು ಎತ್ತಿತೋರಿಸುವುದೇ ಆಗಿದೆ. ಹಾಗಿದ್ದು ಪ್ರಸ್ತುತದಲ್ಲಿರುವ ಪ್ರಭುತ್ವ ಜಾತ್ಯತೀತ ನಿಲುವುಳ್ಳ ಲೇಖಕರ ದನಿಯನ್ನು ಕಟ್ಟಿ ಹಾಕುವ ಪ್ರಯತ್ನದಲ್ಲಿದೆ. ಇದು ಆರೋಗ್ಯಕರ ಸಮಾಜಕ್ಕೆ ಮಾರಕವಾದುದು. ಆದಾಗ್ಯೂ ನೀವು ನಿಮ್ಮ ಕಾರ್ಯವನ್ನು ಹೆದರದೆ ಮಾಡಿ ನಾವೆಲ್ಲ ನಿಮ್ಮೊಂದಿಗಿದ್ದೇವೆ, ಎಂದು ಮಲ್ಲಿಕಾರ್ಜುನ ಖರ್ಗೆಯವರು ಲೇಖಕರ ಬೆಂಬಲಕ್ಕೆ ನಿಂತಿದ್ದಾರೆ.

ಕಲ್ಯಾಣ ಕರ್ನಾಟಕವು ಬೌದ್ಧ, ಜೈನ, ದಾಸ ಹಾಗೂ ತತ್ವಪದ ಪರಂಪರೆಯ ನೆಲವಾಗಿದೆ. ‘ಕಲ್ಯಾಣದ ನಾಡಿನಿಂದ ಬುದ್ಧ, ಕಬೀರನ ನೆಲದೆಡೆಗೆ’ ಸಾಗಿ ಭಾರತದ ಅತ್ಯುಚ್ಚ ಆಡಳಿತ ಕೇಂದ್ರ (ದೆಹಲಿ) ಶಕ್ತಿಸ್ಥಳದಲ್ಲಿ ಸಂವಿಧಾನದ ರಕ್ಷಕರಾಗಿ, ಬಡವರ, ಸಮಗ್ರ ಭಾರತೀಯರ ಪ್ರತಿನಿಧಿಯಾಗಿ ನಿಂತವರು ಖರ್ಗೆಯವರು. ಬಹುಮುಖ ಪ್ರತಿಭೆಯ ಮಲ್ಲಿಕಾರ್ಜುನ ಖರ್ಗೆಯವರಂತಹ ವ್ಯಕ್ತಿತ್ವದ ಇನ್ನೊಬ್ಬರು ನಮ್ಮ ಸಮಕಾಲೀನರಲ್ಲಿ ದೊರೆಯುವುದು ವಿರಳ. ಈ ನೆಲದ ಸ್ವಾತಂತ್ರೋತ್ತರದಲ್ಲಿ ಬೌದ್ಧಧಮ್ಮ, ತತ್ವಚಿಂತನೆಗಳನ್ನು ಬೆಳಗುವಲ್ಲಿ ಖರ್ಗೆಯವರ ಪಾತ್ರ ಬಹÅದೊಡ್ಡದು.

ಕರ್ನಾಟಕದಲ್ಲಿ ಬೌದ್ಧ ಧಮ್ಮದ ಹೆಚ್ಚಿನ ಪ್ರಸಾರ ಪ್ರಾರಂಭವಾದುದು ಮೌರ್ಯ ಸಾಮ್ರಾಟ ಅಶೋಕನ ಕಾಲದಲ್ಲಿ. ಅಶೋಕನ ಶಿಲಾಶಾಸನಗಳು ದಕ್ಷಿಣ ಭಾರತವೂ ಸೇರಿದಂತೆ ಕರ್ನಾಟಕದ ಕೇಲವೆಡೆ ದೊರೆತಿವೆ. ಅವುಗಳಲ್ಲಿ ಮಸ್ಕಿ (ರಾಯಚೂರು ಜಿಲ್ಲೆ) ಪಾಲ್ಕಿಗುಂಡ, ಗವೀಮಠ (ಕೊಪ್ಪಳ ಜಿಲ್ಲೆ) ಉದಂಗೋಳ, ನಿಟ್ಟೂರ (ಬಳ್ಳಾರಿ ಜಿಲ್ಲೆ) ಬ್ರಹ್ಮಗಿರಿ, ಜಟಿಂಗರಾಮೇಶ್ವರ (ಚಿತ್ರದುರ್ಗ ಜಿಲ್ಲೆ) ಸನ್ನತಿ, (ಕಲಬುರಗಿ ಜಿಲ್ಲೆ) ಅದರಂತೆ ಏವೂರ, ಜೇವರಗಿ ಅವರಾದಿ ಮುಂತಾದೆಡೆಗಳಲ್ಲಿ ತ್ರುಟಿತ ಶಾಸನಗಳು ದೊರಕಿವೆ.

ಈ ಕಾಲದಲ್ಲಿ (ಕ್ರಿ.ಪೂ. ೨೭೪-೨೩೩) ಈ ಪ್ರದೇಶದಲ್ಲಿ ಬೌದ್ಧಧರ್ಮ ತುಂಬಾ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ರಾಯಚೂರು ಜಿಲ್ಲೆ ‘ಮಸ್ಕಿ’ ಕ್ರಿ.ಪೂ.ದಲ್ಲಿ ಒಂದು ಪ್ರಮುಖ ಬೌದ್ಧ ಸಂಘ ಹೊಂದಿದ್ದ ಸ್ಥಳವಾಗಿತ್ತು. ಮಸ್ಕಿಯ ಪ್ರಾಚೀನ ರೂಪ ‘ಮಹಾಸಂಘ’ ಎಂಬುದು ಅದು ಕಾಲಾನಂತರದಲ್ಲಿ ಮಾಸಂಗಿ, ಮಾಸಗಿ, ಮಸ್ಕಿ ಎಂದು ಆಗಿದೆ.

ಭಾರತದೆಲ್ಲೆಡೆ ದೊರೆತ ಅಶೋಕನ ಶಾಸನಗಳಲ್ಲಿ ಕೇವಲ ‘ದೇವನಾಂಪ್ರಿಯ’ ಎಂಬ ಒಕ್ಕಣಿಕೆಯನ್ನು ಮಾತ್ರ ಕಾಣುತ್ತೇವೆ. ಇದು ಅಶೋಕನಿಗಿರುವ ಬಿರುದು. ಆದರೆ, ಮಸ್ಕಿ ಶಾಸನವು ‘ದೇವನಾಂಪ್ರಿಯ ಅಶೋಕ’ ಎಂದು ಹೇಳುವುದರ ಮೂಲಕ ದೇವನಾಂಪ್ರಿಯ ಎಂಬುದು ಅಶೋಕನಿಗೆ ಇರುವಂತಹದ್ದು ಎಂಬುದನ್ನು ತಿಳಿಸಿಕೊಟ್ಟಿದೆ. ಈ ಮಸ್ಕಿ ಶಾಸನದ ಮೂಲಕ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ ಶಾಸನದಲ್ಲಿ ‘ಇಸಿಲ’ ಮತ್ತು ಸುವರ್ಣಗಿರಿ’ ಎಂಬ ಹೆಸರುಗಳ ಉಲ್ಲೇಖ ಕಾಣುತ್ತೇವೆ.

ಆ ಕಾಲಕ್ಕೆ ಇಸಿಲ ಎಂಬ ಕೋಟೆಯುಕ್ತ ನಗರ ಕರ್ನಾಟಕದಲ್ಲಿತ್ತು. ಅಲ್ಲಿ ಅಶೋಕನ ಪ್ರತಿನಿಧಿಯಾಗಿ ಅಮಾತ್ಯನು ಅಧಿಕಾರ ನಡೆಸುತ್ತಿದ್ದನು. ಇಸಿಲವು ಸುವರ್ಣಗಿರಿ ಅಧೀನಕ್ಕೆ ಒಳಪಟ್ಟಿತ್ತು ಸುವರ್ಣಗಿರಿಯನ್ನು ಇಂದಿನ ಸನ್ನತಿ ಆಗಿತ್ತೆಂದು ಅನೇಕ ವಿದ್ವಾಂಸರು ಒಪ್ಪಿದ್ದಾರೆ. ಇದು ಅಶೋಕನ ದಕ್ಷಿಣ ಪ್ರಾಂತದ ರಾಜಧಾನಿಯಾಗಿದ್ದು, ರಾಜಪುತ್ರನು ಇಲ್ಲಿಂದ ಆಡಳಿತ ನಡೆಸುತಿದ್ದನು.

ತಕ್ಷಶಿಲಾದಿಂದ ಬಂದ ಶಾಸನಕರ್ತ ಚಡಪನು ಈ ಸುವರ್ಣಗಿರಿಗೆ ಭೆಟ್ಟಿ ಕೊಟ್ಟಿದ್ದನು ಎಂದು ಹೇಳಲಾಗುತ್ತದೆ. ಮೇಲೆ ಹೆಸರಿಸಿದ ಸ್ಥಳಗಳಲ್ಲಿ ಅಶೋಕನು ಪಾಳಿ ಭಾಷೆಯ ಬ್ರಾಹ್ಮಿಲಿಪಿಯಲ್ಲಿ ಬೌದ್ಧ ಧರ್ಮದ ಸಂದೇಶಗಳನ್ನು ಕೆತ್ತಿಸಿದನು. ಇದನ್ನು ನೋಡಿದರೆ, ಆಗಿನ ಕಾಲಕ್ಕೆ ಕರ್ನಾಟಕದ ಇಲ್ಲಿನ ಜನರಿಗೆ ಪಾಳಿ ಭಾಷೆಯ ಪರಿಚಯವಿತ್ತು ಎನ್ನಬೇಕಾಗುತ್ತದೆ. ಅಷ್ಟೇ ಅಲ್ಲದೆ ಸನ್ನತಿ ಏವೂರ, ಅವರಾದ, ಜೇವರಗಿ ಶಾಸನಗಳಲ್ಲಿ ಸ್ಥಳೀಯ ಊರುಗಳ ವ್ಯಕ್ತಿಗಳ ದಿಕ್ಕುಗಳ ಹೆಸರು ಬಂದಿರುವುದು ವಿಶೇಷವಾದುದು.

ಇಷ್ಟಲ್ಲದೆ ಬೌದ್ಧ ಪಾಲಿ ಸಾಹಿತ್ಯದಲ್ಲಿ ‘ತಗರ ಶಿಖಿನ್’ ಎಂಬ ಗುರುವಿನ ಹೆಸರು ಉಲ್ಲೇಖಗೊಂಡಿದೆ. ಇವನು ತಗರ ನಾಡಿನವನು ಎಂದು ಹೇಳಲಾಗುತ್ತದೆ. ವಿನಯ ಪಿಟಕದ ಡೂಲವಗ್ಗದಲ್ಲಿ ಎರಡನೆಯ ಬೌದ್ಧ ಸಂಗೀತಿಯ ವಿವರಗಳು ಸಿಗುತ್ತವೆ. ಅಲ್ಲಿ ದಕ್ಷಿಣಾಪಥದ ಉಲ್ಲೇಖಗಳಿವೆ. ಯಶ ಎಂಬಾತ ವೈಶಾಲಿಯಲ್ಲಿ ಕೂಡಿಸಿದ ಬೌದ್ಧ ಸಂಗೀತಿಗೆ ದಕ್ಷಿಣಾಪಥದಿಂದಲೂ ಭಿಕ್ಖುಗಳು ಆಗಮಿಸಿದ ವಿವರಗಳಿವೆ. ಹೀಗೆ ಬೌದ್ಧ ಸಂಗೀತಿಗೆ ಹೋದ ಭಿಕ್ಖು ಈ ತಗರಶಿಖನ ಪ್ರದೇಶದವನು, ತಗರ ಎಂಬುದು ಇಂದಿನ ಯಾದಗಿರಿ ಜಿಲ್ಲೆಯ ಶಹಾಪೂರದ ‘ಸಗರ’ ನಾಡು ಆಗಿದ್ದಿದೆ. ವಿನಯ ಪಿಟಿಕದಲ್ಲಿ ತಗರ ಅಥವಾ ಥೇರ್ ಉಲ್ಲೇಖವಿದೆ.

ವಿದ್ವಾಂಸರ ಪ್ರಕಾರ ಈ ಪ್ರದೇಶ ಬೀದರ ಜಿಲ್ಲೆಯಾಚೆ ಮಹಾರಾಷ್ಟçದ ಉಸ್ಮಾನಬಾದ ಜಿಲ್ಲೆ ಇರಬಹುದು ಎನ್ನಲಾಗುತ್ತಿದೆ. ಆದರೆ, ಬೌದ್ಧಧಮ್ಮ ಸಾಹಿತ್ಯ ಕುರಿತು ವಸಂತಕುಮಾರ ತಾಳ್ತಜೆಯವರು ಹೇಳಲಾದ ತಗರ ಉತ್ತರ ಕನ್ನಡ ಜಿಲ್ಲೆಯ ತೊರ್ಕೆ ಎನ್ನುವರು. ಆದರೆ, ಈ ತಗರ ನಾಡು ಎಂಬುದೇ ಇಂದಿನ ಸಗರ ನಾಡು, ಏಕೆಂದರೆ ದ್ರಾವಿಡ ಭಾಷೆ ಹಾಗೂ ಕನ್ನಡ ಭಾಷೆಯಲ್ಲಿ ತುಸ ಆಗಿ ಪರಿವರ್ತನೆಗೊಳ್ಳುವುದು ಸಹಜ ಹಾಗಾಗಿ ತಗರನಾಡು ಅದು ಸಗರನಾಡು ಇದು ಒಪ್ಪಿತವಾದರೆ ಸಗರನಾಡಿನಲ್ಲಿ ಎರಡು ಸಾವಿರ ವರ್ಷಗಳ ಹಿಂದೆ ಇಲ್ಲಿ ಬೌದ್ಧಧಮ್ಮ ಪುನರುಜ್ಜೀವನ ಹೊಂದಿತ್ತು ಎಂದು ಹೇಳಬಹುದು. ಮತ್ತೊಬ್ಬ ಬೌದ್ಧ ಮಹಾಭಿಕ್ಖು ಬಾವರಿ ಎಂಬ ಬೀದರ ಜಿಲ್ಲೆಯ ಮೇಲಿನ ಗೋದಾವರಿ ತೀರದಲ್ಲಿ ಸಂಘವನ್ನು ಸ್ಥಾಪಿಸಿದ್ದನು ಎನ್ನಲಾಗುತ್ತಿದೆ. ಅಂದರೆ ಮೌರ್ಯರ ನಂತರದಲ್ಲಿ ಶಾತವಾಹನರ ಕಾಲಕ್ಕೆ ಇಲ್ಲಿ ಬೌದ್ಧ ಸ್ಥೂಪಗಳು, ವಿಹಾರಗಳು, ಸಂಘಾರಾಮಗಳು ಶಿಲ್ಪಗಳು, ಶಾಸನಗಳು ರಚನೆಯಾಗಿದ್ದವು ಎನ್ನಬೇಕು.

ಕಲಬುರಗಿ ಜಿಲ್ಲೆಯ ಸನ್ನತಿ ಅಶೋಕನ ಕಾಲದ ಒಂದು ಪ್ರಾಚೀನ ಬೌದ್ಧವಿಹಾರ. ಈ ಭಾಗದ ಬೌದ್ಧ ಧಮ್ಮ ಉತ್ತೇಜನ ನೀಡುವ ಪ್ರಮುಖ ಕೇಂದ್ರವಾಗಿತ್ತು. ಬಾಬಾಸಾಹೇಬ ಅಂಬೇಡ್ಕರ್ ಅವರು ನಾಗಪೂರದಲ್ಲಿ ಆಧುನಿಕ ಬೌದ್ಧವಿಹಾರ ನಿರ್ಮಾಣಕ್ಕೆ ಕಾರಣರಾದರು. ಅದರಂತೆ ದೇಶದ ವಿವಿಧ ಸ್ಥಳಗಳಲ್ಲಿ ಬೌದ್ಧ ವಿಹಾರಗಳು ತಲೆಎತ್ತಿವೆ. ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಕೂಡ ಬೌದ್ಧವಿಹಾರಗಳು ನಿರ್ಮಾಣಗೊಂಡಿವೆ. ಅದೇ ಮಾದರಿಯಲ್ಲಿ ಕಲಬುರಗಿಯಲ್ಲಿ ಸಿದ್ಧಾರ್ಥವಿಹಾರ ಟ್ರಸ್ಟಿನ್ ವತಿಯಿಂದ ಶ್ರೀಮಾನ್ ಮಲ್ಲಿಕಾರ್ಜುನ ಖರ್ಗೆಯವರು ಸಿದ್ಧಾರ್ಥ ಬುದ್ಧವಿಹಾರ ನಿರ್ಮಾಣ ಮಾಡಿದ್ದು, ಒಂದು ಇತಿಹಾಸ.

ದಕ್ಷಿಣ ಭಾರತದಲ್ಲಿಯೇ ಬೃಹತ್ತಾದ ವಿಹಾರವಾಗಿದೆ. ಸಿದ್ಧಾರ್ಥ ಬುದ್ಧವಿಹಾರದಲ್ಲಿ ಬೌದ್ಧಧಮ್ಮ ಸಂದೇಶಗಳನ್ನು ಬೋಧಿಸಲಾಗುತ್ತದೆ. ಪ್ರತಿ ಹುಣ್ಣಿಮೆಗೆ ಹೆಸರಾಂತ ತಜ್ಞರನ್ನು ಕರೆಯಿಸಿ ಬೌದ್ಧಧಮ್ಮ ಉಪನ್ಯಾಸ ಏರ್ಪಡಿಸಲಾಗುತ್ತದೆ. ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬೌದ್ಧಧಮ್ಮ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯ ನಿರಂತರ ಮಾಡಲಾಗುತ್ತಿದೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ‘ಬುದ್ಧ ಮತ್ತು ಆತನ ಧಮ್ಮ’ ಕೃತಿಯ ಸರಣಿ ಓದು ಕಾರ್ಯಕ್ರಮ ನಡೆಯುತ್ತಿದೆ.

ಬೌದ್ಧಧರ್ಮದ ತ್ರಿಪಿಟಕಗಳ ವಿಷಯಗಳನ್ನು ಬೋಧಿಸುವ ಸಲುವಾಗಿ ಸನ್ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರು ಪಾಲಿ ಸಂಸ್ಥೆಯನ್ನು ಪ್ರಾರಂಭಿಸಿದರು. ಏಕೆಂದರೆ ಬುದ್ಧನ ಸಂದೇಶಗಳು ಮತ್ತು ವಿಚಾರಧಾರೆಗಳು ತ್ರಿಪಿಟಕಗಳಲ್ಲಿವೆ. ತ್ರಿಪಿಟಕಗಳು ಪಾಲಿ ಭಾಷೆಯಲ್ಲಿವೆ. ಅನೇಕ ಭಾಷೆಗಳಿಗೆ ತ್ರಿಪಿಟಕಗಳು ತರ್ಜುಮೆಗೊಂಡಿವೆ. ಆದರೆ, ಪಾಲಿ ಭಾಷೆಯಲ್ಲಿ ಬುದ್ಧನ ಮೂಲ ವಿಚಾರಧಾರೆಗಳಿರುವುದರಿಂದ, ಅವುಗಳ ಅಧ್ಯಯನಕ್ಕೆ ಖರ್ಗೆಜಿಯವರು ಮಹತ್ವ ಕೊಟ್ಟು ಸಿದ್ಧಾರ್ಥ ವಿಹಾರ ಟ್ರಸ್ಟ್ ವತಿಯಿಂದ ಪಾಲಿ ಸಂಸ್ಥೆಯನ್ನು ೨೦೧೫ರಲ್ಲಿ ಪ್ರಾರಂಭಿಸಿದರು. ಪಾಲಿ ಭಾಷೆ ಭಾರತದ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದೆ. ಅಲ್ಲದೆ, ಇದೊಂದು ಆ ಕಾಲದ ಜನಪದ ಭಾಷೆ ಕೂಡ. ಗೌತಮಬುದ್ಧ ಜನಸಾನ್ಯರಿಗೆ ಅರ್ಥವಾಗಲಿ ಎಂದು ತನ್ನ ಬೋಧನೆಗಳನ್ನು ಪಾಲಿ ಭಾಷೆಯಲ್ಲಿ ಬೋಧಿಸಿದ.

ಪಾಲಿ ಇನ್‌ಸ್ಟಿಟ್ಯೂಟ್ ಕಲಬುರಗಿ : ೨೦೧೫ರಲ್ಲಿ ಪ್ರಾರಂಭವಾದ ‘ಪಾಲಿ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್, ಸಂಸ್ಕೃತ ಆ್ಯಂಡ್ ಫಿಲಾಸೊಫಿಕಲ್ ಕಂಪ್ಯಾರಿಟಿವ್ ಸ್ಟಡಿ’ ಸಂಸ್ಥೆಯು ಈಗ ೬ ವಸಂತಗಳನ್ನು ಪೂರೈಸಿ ನೂರಾರು ವಿದ್ಯಾರ್ಥಿಗಳಿಗೆ ಪಾಲಿ ಅಭ್ಯಾಸ ಮಾಡಿಸಿದ ಶ್ರೇಯಸ್ಸು ಪಡೆದಿದೆ. ಈ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಾಹುಲ್ ಖರ್ಗೆಯವರ ಆಸಕ್ತಿ, ಕಾರ್ಯದರ್ಶಿಗಳಾದ ಶ್ರೀ ರಾಧಾಕೃಷ್ಣ ಅವರ ಕಾಳಜಿ, ಗೌರವ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ಸತತ ಪರಿಶ್ರಮದಿಂದ ಈ ಸಂಸ್ಥೆ ಈಗ ನಾಡಿನಾದ್ಯಂತ, ರಾಷ್ಟ್ರದಾದ್ಯಂತ ಹೆಸರು ಮಾಡುತ್ತಿದೆ.

ಪ್ರೊ. ಮಲ್ಲೇಪುರಂ ಅವರು ಕರ್ನಾಟಕದಾದ್ಯಂತ ಸಂಚರಿಸಿ ಪಾಲಿ ಭಾಷೆ ಬಗ್ಗೆ ಹಾಗೂ ‘ಬುದ್ಧ ಮತ್ತು ಆತನ ಧಮ್ಮ’ ಕೃತಿಯ ಕುರಿತು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಕಾರ್ಯಾಗಾರಗಳನ್ನು ಏರ್ಪಡಿಸಿ ಬೌದ್ಧಧಮ್ಮ ಕುರಿತು ಅರಿವು ಮೂಡಿಸುವಲ್ಲಿ ಶ್ರಮಿಸುತ್ತಿದ್ದಾರೆ. ಪಾಲಿ ಇನ್‌ಸ್ಟಿಟ್ಯೂಟ್ ಇಂಥ ಶೈಕ್ಷಣಿಕ ಚಟುವಟಿಕೆಗಳು ಒತ್ತಾಸೆಯಾಗಿ ನಿಂತಿದೆ. ಆರು ತಿಂಗಳ ಅವಧಿಯ ಸರ್ಟಿಪಿಕೇಟ್ ಕೋರ್ಸ್, ಒಂದು ವರ್ಷದ ಡಿಪ್ಲೊಮಾ ಕೋರ್ಸ್ಗಳನ್ನು ಪಾಲಿ ಸಂಸ್ಥೆ ನಡೆಸುವುದರೊಂದಿಗೆ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ತಿಂಗಳಿಗೆ ೭೫೦ ರೂಪಾಯಿಗಳು ಶಿಷ್ಯವೇತನ ನೀಡುತ್ತಿರುವುದು ಪಾಲಿ ಭಾಷೆಯ ಬೆಳವಣಿಗೆಗೆ ಉತ್ತೇಜನ ನೀಡುವಂತದ್ದಾಗಿದೆ.

ಶೈಕ್ಷಣಿಕ ಚಟುವಟಿಕೆಗಳಷ್ಟೇ ಅಲ್ಲದೆ ಸಂಶೋಧನ ಚಟುವಟಿಕೆಗಳಿಗೂ ಕೂಡಾ ಅಷ್ಟೇ ಮಹತ್ವ ನೀಡುತ್ತಾ ಬಂದಿದೆ. ಅನೇಕ ಪುಸ್ತಕಗಳನ್ನು ಮುದ್ರಿಸಿ ಓದುಗರಿಗೆ ಕಡಿಮೆ ಬೆಲೆಯಲ್ಲಿ ಒದಗಿಸುತ್ತಿದೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ‘ಬುದ್ಧ ಮತ್ತು ಆತನ ಧಮ್ಮ’ ಇಂಗ್ಲಿಷಿನ ಕೃತಿಯನ್ನು ಡಾ. ಜಗದೀಶ ಎನ್. ಕೊಪ್ಪ ಅವರು ಅನುವಾದಿಸಿದ್ದಾರೆ. ‘ಪಾಲಿ ಶಬ್ದಕೋಶ’ ಹಾಗೂ ‘ಸಂಕ್ಷಿಪ್ತ ಪಾಲಿ ಕನ್ನಡ ನಿಘಂಟು’ ಇವೆರಡು ಪ್ರೊ. ಮಲ್ಲೇಪುರಂ ಅವರ ಮಹತ್ವದ ಕೃತಿಗಳಾಗಿವೆ.

ಕನ್ನಡದಲ್ಲಿ ಇದುವರೆಗೆ ಪಾಲಿ ನಿಘಂಟುಗಳೇ ಇರಲಿಲ್ಲವೆನ್ನುವ ಕೊರಗು ಅವರು ನೀಗಿಸಿದ್ದಾರೆ. ಈ ಕಾರ್ಯದಲ್ಲಿ ಧಮ್ಮದೀಪ ವಾಂನಖೆಡೆ ಮತ್ತು ಎಂ.ಬಿ. ಕಟ್ಟಿ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬೋಧನೆ ಸಂಶೋಧನೆ ಮುದ್ರಣ ಹೀಗೆ ಹಲವಾರು ಚಟುವಟಿಕೆಗಳಲ್ಲಿ ಪಾಲಿ ಸಂಸ್ಥೆ ಗುರುತರವಾದ ಹೆಜ್ಜೆಗಳನ್ನಿಡುತ್ತಲಿದೆ. ಈ ಸಂಸ್ಥೆಯ ಹಿತಾಸಕ್ತಿಗೋಸ್ಕರ ಅನೇಕ ಶಿಕ್ಷಣ ಸಂಸ್ಥೆಗಳು ಪಾಲಿ ಸಂಸ್ಥೆಯ ಬೆಳವಣಿಗೆಯಲ್ಲಿ ಕೈಜೋಡಿಸಿವೆ.

ಗುಲಬರ್ಗಾ ವಿಶ್ವವಿದ್ಯಾಲಯ, ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಂತಹ ಪ್ರಮುಖ ಸಂಸ್ಥೆಗಳನ್ನು ಇಲ್ಲಿ ಸ್ಮರಿಸಲೇಬೇಕು. ಹಾಗೆಯೇ ಗುಲಬರ್ಗಾ ವಿಶ್ವವಿದ್ಯಾಲಯದ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ ಹಾಗೂ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ರಾದ ಎಚ್.ಟಿ. ಪೋತೆ, ಎಚ್.ಎಂ. ಮಹೇಶ್ವರಯ್ಯ, ಎಂ.ವಿ ಅಳಗವಾಡಿ, ಪದ್ಮಾಶೇಖರ, ಪ್ರಕಾಶ ಪಾಗೋಜಿ, ಶ್ರೀನಿವಾಸ ವರಖೇಡಿ, ಗೀರಿಶ್ಚಂದ್ರ. ಜಿ.ಆರ್. ನಾಯಕ, ದಯಾನಂದ ಅಗಸರ್, ಜೆ. ಶ್ರೀನಿವಾಸಮೂರ್ತಿ, ಕಣ್ಣನ್, ಮೂಡ್ನಾಕೂಡು ಚಿನ್ನಸ್ವಾಮಿ, ರಮೇಶ ಬೇಗಾರ ಶ್ರೀಶೈಲ ನಾಗರಾಳ ಸಂಗಪ್ಪ ಹೊಸಮನಿ, ಸೂರ್ಯಕಾಂತ ಸುಜ್ಯಾತ ಮುಂತಾದವರು ಸಂಸ್ಥೆಯ ಜೊತೆಗಿದ್ದು ನಿರಂತರ ಸೇವೆಗೆ ಸದಾ ಸಿದ್ಧರಿದ್ದಾರೆ.

ಇಂತಹ ಚಾರಿತ್ರಿಕ ಸಂಸ್ಥೆಯ ಕಲ್ಪನೆಯನ್ನು ವಾಸ್ತವೀಕರಣಗೊಳಸಿದ ಕೀರ್ತಿ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆಯವರಿಗೆ ಸಲ್ಲುತ್ತದೆ. ಜೊತೆಗೆ ಪಾಲಿ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷರಾದ ಶ್ರೀ ರಾಹುಲ್ ಖರ್ಗೆ ಅವರು, ಕಾರ್ಯದರ್ಶೀಗಳಾದ ಶ್ರೀ ರಾಧಾಕೃಷ್ಣ ದೊಡ್ಡಮನಿ ಅವರು ಇಂತಹ ಸಂಸ್ಥೆಯ ಐತಿಹಾಸಿಕ ಚಲನೆಗೆ ಕಾರಣೀಭೂತರಾಗಿದ್ದಾರೆ. ಶ್ರೀ ಮಲ್ಲಿಕಾರ್ಜುನ ಖರ್ಗೆಯವರ ಈ ಮಹತ್ವಾಕಾಂಕ್ಷೆಯ ಸಂಸ್ಥೆ ಅಂಬೇಡ್ಕರ್ ಅವರು ಕಂಡ ಕನಸನ್ನು ನನಸು ಮಾಡುವಲ್ಲಿ ಶ್ರಮಿಸುತ್ತದೆ.

ಎಂ.ಕೆ. ಟ್ರಸ್ಟ್ : ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ : ಮಲ್ಲಿಕಾರ್ಜುನ ಖರ್ಗೆಯವರ ಸಾಮಾಜಿಕ ಸೇವೆ ಬಹುಮುಖ ನೆಲೆಯನ್ನು ಪಡೆದಿದೆ. ಕರ್ನಾಟಕದ ಇತರೆ ಪ್ರದೇಶಗಳಲ್ಲಿ ಮಾತ್ರ IAS, IPS, KAS ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಗಳಿವೆ. ಇಂಥ ಸೌಲಭ್ಯ ನಮ್ಮ ಪ್ರದೇಶದಲ್ಲಿ ಇಲ್ಲವಲ್ಲ; ಹೀಗಿರುವಾಗ ಈ ಪ್ರದೇಶದ ಮಕ್ಕಳು ಆಡಳಿತಾತ್ಮಕ ಪರೀಕ್ಷೆ ತರಬೇತಿಗಾಗಿ ಬೇರೆ ಬೇರೆ ಪ್ರದೇಶಗಳಿಗೆ ಹೋಗುತ್ತಿರುವುದನ್ನು ಕಂಡು ಇಲ್ಲಿಯೂ ಇಂತಹದೊಂದು ಸಂಸ್ಥೆಯನ್ನು ಪ್ರಾರಂಭ ಮಾಡಬಹುದಲ್ಲವೆಂದು ನಿರ್ಧರಿಸಿ ತಮ್ಮ ತಂದೆ ಮಾಪಣ್ಣ ಖರ್ಗೆಯವರ ಸ್ಮರಣಾರ್ಥ ಎಂ.ಕೆ. ಟ್ರಸ್ಟ್ ಪ್ರಾರಂಭ ಮಾಡಿದರು.

‘ನನ್ನಪ್ಪ ನನ್ನನ್ನು ವಿದ್ಯಾವಂತನನ್ನಾಗಿ ಮಾಡಲು ತುಂಬಾ ಶ್ರಮಿಸಿದರು. ಪ್ರತಿದಿನವು ನನ್ನನ್ನು ಜೊತೆಯಲ್ಲಿ ಕೂಡಿಸಿಕೊಂಡು ಊಟ ಮಾಡೋರು, ಶಾಲೆಗೆ ಕರಕೊಂಡೊಯ್ದು ಬಿಡೋರು, ಶಾಲೆಬಿಟ್ಟ ಮೇಲೆ ಕರಕೊಂಡು ಬರೋರು. ಅಂಥ ಅಪ್ಪನ ಕಾರಣದಿಂದ ನಾನೀಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಆದ್ದರಿಂದ ಎಲ್ಲಾ ಮಕ್ಕಳಿಗೂ ನನ್ನ ಅಪ್ಪನಂತ ಅಪ್ಪಸಿಗಲಿ’ ಎನ್ನುವ ಭಾವ ಸಂಸ್ಥೆಯದಾಗಿದೆ. ಅದರ ಅಡಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕೆಲಸ ಕಳೆದ ಐದಾರು ವರ್ಷಗಳಿಂದ ನಡೆಯುತ್ತಿದೆ.

೨೦೧೭ರ ಸಾಲಿನಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿತು. ಎಂ.ಕೆ. ಟ್ರಸ್ಟ್ ಮೂಲಕ ಮುಕ್ತವಾಗಿ ತರಬೇತಿ ಪಡೆದವರಲ್ಲಿ ಸುಮಾರು ೧೨ ಜನರು KAS ಪರೀಕ್ಷೆಯನ್ನು ಪಾಸು ಮಾಡಿ ಆಡಳಿತ ಮಾಡುತ್ತಿದ್ದಾರೆ. ಇಂತಹದೊಂದು ಮಹತ್ವದ ಹಾಗೂ ಗುರುತರ ಜವಾಬ್ದಾರಿಯನ್ನು ನಿಭಾಯಿಸಿದವರು ಮಲ್ಲಿಕಾರ್ಜುನ ಖರ್ಗೆಯವರು ಎಂಬುದನ್ನು ಹೆಮ್ಮೆಯಿಂದ ಹೇಳಬೇಕು.

Karnataka People Education Society :ಭಾರತೀಯ ಸಮಾಜಕ್ಕೆ ಅಂಟಿಕೊಂಡ ಜಾತಿಭೂತವನ್ನು ಅಡಗಿಸಲು ಶಿಕ್ಷಣದಿಂದ ಮಾತ್ರ ಸಾಧ್ಯವೆಂದು ನಂಬಿದ ಮಲ್ಲಿಕಾರ್ಜುನ ಖರ್ಗೆಯವರು ಕರ್ನಾಟಕ ಜನತಾ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದಾರೆ. ಅಂಬೇಡ್ಕರ್ ಅವರು ನಂಬಿದ ತತ್ತ್ವ ಸಿದ್ಧಾಂತಗಳನ್ನು ಖರ್ಗೆಯವರು ಚಾಚೂತಪ್ಪದೆ ಬದುಕಿನಲ್ಲಿ ಪಾಲಿಸುತ್ತಿದ್ದಾರೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು People Education Society ಸ್ಥಾಪಿಸಿ ಮಹಾರಾಷ್ಟ್ರದಾದ್ಯಂತ ಶಾಲಾ ಕಾಲೇಜುಗಳನ್ನು ಪ್ರಾರಂಭಿಸಿ ದಲಿತ-ಶೋಷಿತರ ಶೈಕ್ಷಣಿಕ ಸಾಮಾಜಿಕ ಅಭ್ಯದಯಕ್ಕೆ ನೆರವಾದಂತೆಯೇ, ಮಲ್ಲಿಕಾರ್ಜುನ ಖರ್ಗೆಯವರು Karnataka People Education Society ಅಡಿಯಲ್ಲಿ ಅನೇಕ ಶಾಲಾ ಕಾಲೇಜುಗಳನ್ನು ತೆರೆದುದಷ್ಟೆ ಅಲ್ಲದೆ; ಅವರ ಶಾಲಾ ಕಾಲೇಜುಗಳಿಗೆ ಅನೇಕ ಸಮಾಜ ಸುಧಾರಕರ ಹೆಸರುಗಳನ್ನು ಇಡುವುದರ ಮೂಲಕ ಅವರ ಸ್ಮರಣೆಗೆ, ತತ್ತ್ವಾಚರಣೆಗೆ ಪರೋಕ್ಷವಾಗಿ ಕಾರಣರಾಗಿದ್ದಾರೆ.

ಬೌದ್ಧನೆಲೆಯ, ಅಂಬೇಡ್ಕರ್ ಚಿಂತನೆಗಳನ್ನು ಸಾರುವ ಹೆಸರುಗಳನ್ನು ಶಾಲಾ, ಕಾಲೇಜುಗಳಿಗೆ ಇಡುವುದರ ಮೂಲಕ ಅಂಬೇಡ್ಕರ್ ಅವರನ್ನು ಅನುಸರಿಸುತ್ತಿದ್ದಾರೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬುದ್ಧನ ತಾತ್ತ್ವಿಕತೆಗೆ ಮರುಳಾಗಿ ಬುದ್ದನಿಗಾಗಿ ನಾಗಪುರದಲ್ಲಿ ನಿರ್ಮಿಸಿದ ಬುದ್ಧವಿಹಾರದಂತೆ ಮಲ್ಲಿಕಾರ್ಜುನ ಖರ್ಗೆಯವರು ಕಲಬುರಗಿಯಲ್ಲಿ ಬೌದ್ಧವಿಹಾರವನ್ನು ನಿರ್ಮಾಣ ಮಾಡಿದರು. ಇದು ಏಷ್ಯಾದಲ್ಲಿಯೇ ದೊಡ್ಡದು ಎಂಬ ಮಾತಿದೆ.

ಶಿಕ್ಷಣ ಸಂಸ್ಥೆಗಳಿಗೆ ಬೌದ್ಧ ಸಂಸ್ಕೃತಿಯ ಸಿಂಚನ : ಪ್ರಜ್ಞಾ ಹೈಸ್ಕೂಲ್, ರಮಾಬಾಯಿ ಪ್ರಾಥಾಮಿಕ ಶಾಲೆ, ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯ, ಸಿದ್ಧಾರ್ಥ ಕಲಾ, ವಾಣಿಜ್ಯ ಮಹಾವಿದ್ಯಾಲಯ, ಬಿ. ಶ್ಯಾಮಸುಂದರ್ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ಆನಂದ ಹೈಸ್ಕೂಲ್, ನಾಗಚಂದ್ರ ಹೈಸ್ಕೂಲ್, ಮಿಲಿಂದ ಹೈಸ್ಕೂಲ್, ಮಿಲಿಂದ ಪದವಿಪೂರ್ವ ಮಹಾವಿದ್ಯಾಲಯ, ಡಾ. ಬಿ.ಆರ್. ಅಂಬೇಡ್ಕರ್ ಪದವಿ ಮಹಾವಿದ್ಯಾಲಯ. ಮುಂತಾದವುಗಳು.

ನಲಂದವು ಆಗಿನ ಕಾಲದ ಶ್ರೇಷ್ಠ ಮಟ್ಟದ ಅಂತಾರಾಷ್ಟ್ರೀಯ ಬೌದ್ಧ ವಿಶ್ವವಿದ್ಯಾಲಯವಾಗಿತ್ತು. ‘ನಲಂದ’ ಎಂಬ ಪ್ರಸಿದ್ಧ ಸ್ಥಳದ ಸ್ಮರಣೆಗಳಿಗೆ ನಾಲಂದ ಪದವಿಪೂರ್ವ ಮಹಾವಿದ್ಯಾಲಯವನ್ನು ಬೆಂಗಳೂರಿನಲ್ಲಿ ಪ್ರಾರಂಭ ಮಾಡಿದ್ದಾರೆ. ಇದು ಖರ್ಗೆಯವರ ಧಮ್ಮತತ್ವ ಪ್ರಚಾರದ ಕಾರ್ಯವಾಗಿದೆ. ಕರ್ನಾಟಕದಲ್ಲಿ ಬೌದ್ಧತತ್ವ ಚಿಂತನೆಯ ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರಲ್ಲಿ ಮಾನ್ಯ ಮಲ್ಲಿಕಾರ್ಜುನ ಖರ್ಗೆ ಪ್ರಮುಖರು. ಅಷ್ಟೇ ಅಲ್ಲದೆ ಇಂದಿರಾ ಗಾಂಧಿಯವರ ಸ್ಮರಣೆಗಾಗಿ ಪ್ರೀಯದರ್ಶಿನಿ ಕಾಲೇಜು ಪ್ರಾರಂಭ ಮಾಡಿದ್ದಾರೆ.

ರವೀಂದ್ರನಾಥ ಠ್ಯಾಗೋರರ ಸ್ಮರಣೆಗೋಸ್ಕರ ಶಾಂತಿನಿಕೇತನ ಹಿರಿಯ ಪ್ರಾಥಮಿಕ ಶಾಲೆಯೊಂದನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ಹೀಗೆ ಬುದ್ಧ ಹಾಗೂ ಬೌದ್ಧತತ್ವದ ಮೂಲಕ ಶಾಂತಿ, ಸೌಹಾರ್ದತೆಯ ಸಮಾಜ ಕಟ್ಟುವಲ್ಲಿ ಶ್ರಮಿಸುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರಂತೆ ಸಮಾಜೋ-ಶೈಕ್ಷಣಿಕ ಧಾರ್ಮಿಕ ಕೆಲಸವನ್ನು ನಮ್ಮ ನೆಲದ ಪ್ರತಿಯೊಬ್ಬ ರಾಜಕಾರಣಿ ಮಾಡಿದ್ದರೆ ದೇಶದಲ್ಲಿ ಬಡತನ, ಅನಕ್ಷರತೆ, ಅಸ್ಪೃಶ್ಯತೆ ಎಂದೋ ನಿಂತು ಹೋಗುತ್ತಿತ್ತು. ಆದರೆ, ಅದು ಸಾಧ್ಯವಾಗಿಲ್ಲವೆನ್ನುವುದು ಬೇಸರದ ಸಂಗತಿಯಾಗಿದೆ.

ಇನ್ನು ಮುಂದಾದರೂ ಬುದ್ಧ, ಬಸವ ಹಾಗೂ ಬಾಬಾಸಾಹೇಬರನ್ನು ಖರ್ಗೆಯವರು ಅನುಸರಿಸಿದಂತೆ, ಸಾಮಾಜಿಕ ಬದಲಾವಣೆಯಲ್ಲಿ ನಂಬಿಕೆ ಇಟ್ಟುಕೊಂಡ ರಾಜಕೀಯ ನಾಯಕರು ಸಹ ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶನ ಮಾಡಬೇಕಾಗಿದೆ.

‍ಲೇಖಕರು Admin

19 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading