ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೊಳುವಾರರ 'ಮುತ್ತುಪ್ಪಾಡಿ'ಯಲ್ಲಿ ಕಂಡ ಕೊಂಕಣಿ ಸಾರಸ್ವತರು

ಮುತ್ತುಪ್ಪಾಡಿಯ ಕೊಂಕಣಿ ಸಾರಸ್ವತರು

ಗುರು ಬಾಳಿಗಾ

ಮುತ್ತುಪ್ಪಾಡಿಯೆಂಬ ಪುಟ್ಟ ಕಾಲ್ಪನಿಕ ಗ್ರಾಮದ ಪರಿಚಯವು ಕನ್ನಡ ಸಾಹಿತ್ಯ ಲೋಕದಲ್ಲಿ ಬಹಳ ವರ್ಷಗಳ ಹಿಂದೆಯೇ ಆಗಿದ್ದರೂ ಅದರ ಸಮಗ್ರ ಹರಹು ಮತ್ತು ಆಯಾಮಗಳು ಬೊಳುವಾರು ಅವರ ಸ್ವಾತಂತ್ರ್ಯದ ಓಟ ಎಂಬ ಬೃಹತ್ ಕಾದಂಬರಿಯಲ್ಲಿ ಅನಾವರಣಗೊಂಡಿವೆ. ಇದ್ದರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಆಸುಪಾಸಿನಲ್ಲೆಲ್ಲೋ ಇರಬೇಕಾದ ಈ ಗ್ರಾಮವು ಸ್ವಾತಂತ್ರ್ಯೋತ್ತರ ಭಾರತದ ಕೋಟ್ಯಂತರ ಹಳ್ಳಿಗಳ ಒಂದು ಪ್ರಾತಿನಿಧಿಕ ರೂಪವಷ್ಟೇ ಆಗಿದ್ದು, ಬೊಳುವಾರು ಅವರ ಕಥನಕ್ರಿಯೆಯಲ್ಲಿ ಆ ಗ್ರಾಮದ ಮುಸ್ಲಿಂ ಅಥವಾ ಬ್ಯಾರಿ ಜನಾಂಗವನ್ನು ಕೇಂದ್ರವಾಗಿಟ್ಟುಕೊಂಡು ಅನಾವರಣಗೊಳ್ಳುತ್ತದೆ.
ನಾನು ಜಾತಿಯನ್ನು ಬಿಟ್ಟೂ ಬಿಡಲಾಗದ ಸಂಧಿಗ್ದದಲ್ಲಿರುವ ಒಬ್ಬ ಸಾಮಾನ್ಯ ಓದುಗ. ಆದುದರಿಂದ ಈ ಕಾದಂಬರಿಯು ಎಷ್ಟು ಬ್ಯಾರಿಗಳ ಬದುಕನ್ನು ತೆರೆದಿಡುವ ಕತೆಯೋ ಅಷ್ಟೇ ಕೊಂಕಣಿ ಸಾರಸ್ವತರ ಬದುಕಿನ ಒಂದು ಮುಖವನ್ನೂ ತೆರೆದಿಡುವ ಕತೆಯಾಗಿದೆ ಅಂತಲೇ ನನಗೆ ಕಾಣುತ್ತದೆ. ಮುತ್ತುಪ್ಪಾಡಿಯು ದಕ್ಷಿಣಕನ್ನಡದ ಒಂದು ಪೇಟೆಯಾಗಿದ್ದರೆ, ಮತ್ತು ಆ ಪೇಟೆಯಲ್ಲಿ ಬ್ಯಾರಿಗಳ ಸಂಖ್ಯೆ ಸಾಕಷ್ಟು ಇದ್ದಿದ್ದಾದರೆ ಅಲ್ಲಿ ಕೊಂಕಣಿ ಸಾರಸ್ವತರ ಸಂಖ್ಯೆಯೂ ಹೆಚ್ಚೇ ಇರಬೇಕಾಗುತ್ತದೆ. ಅಂತೆಯೇ ಸ್ವಾತಂತ್ರ್ಯದ ಓಟ ಕಾದಂಬರಿಯಲ್ಲೂ ಕಾಣಿಸಿಕೊಳ್ಳುವ ಪ್ರಮುಖ ಪಾತ್ರಗಳ ಪೈಕಿ ಕೊಂಕಣಿ ಸಾರಸ್ವತರ ಪಾತ್ರಗಳು ಉಳಿದ ಜಾತಿಗಳ ಪಾತ್ರಗಳಿಗಿಂತ ಹೆಚ್ಚು ಕಸುವಿನಿಂದ ಬ್ಯಾರಿಗಳ ಬದುಕಿನೊಳಗೆ ಪ್ರವೇಶಗೊಳ್ಳುವ ಪಾತ್ರಗಳಾಗಿವೆ.

ಕಳೆದ ನಾಲ್ಕು ಶತಮಾನಗಳ ಇತಿಹಾಸವನ್ನು ಗಮನಿಸಿದಾಗ ಹಲವು ರಾಜಕೀಯ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಕನ್ನಡ ಕರಾವಳಿಯ ವ್ಯಾಪಾರದಲ್ಲಿ ನೇರಮುಖಾಮುಖಿಯೆಂದು ಆಗಿದ್ದಾದರೆ ಅದು ಬ್ಯಾರಿಗಳಿಗೂ ಕೊಂಕಣಿ ಸಾರಸ್ವತರಿಗೂ ಮಾತ್ರ. ದಕ್ಷಿಣ ಕನ್ನಡದಲ್ಲಿ ವ್ಯಾಪಾರದ ಪೇಟೆಗಳನ್ನು ಕಟ್ಟಿದವರೇ ಬ್ಯಾರಿಗಳು ಮತ್ತು ಕೊಂಕಣಿ ಸಾರಸ್ವತರು. ಆಕಾರಣದಿಂದ ನನ್ನ ಮತ್ತು ಅದಕ್ಕಿಂತ ಹಿಂದಿನ ತಲೆಮಾರುಗಳ ದಕ್ಷಿಣ ಕನ್ನಡದ ಹದಿನೆಂಟು ಪೇಟೆಗಳ ಕೊಂಕಣಿಗಳ ಮಕ್ಕಳು ಬುದ್ಧಿ ಬೆಳೆದಾಗ ಅವರ ಕಣ್ಣಿಗೆ ಮೊದಲು ಬೀಳುವ ಹೊರಜಾತಿಯವರೆಂದರೆ ಬ್ಯಾರಿಗಳು. ಸಾರಸ್ವತರ ಕೊಂಕಣಿಯನ್ನು ನಿರರ್ಗಳವಾಗಿ ಮಾತನಾಡುವ ಅಸಂಖ್ಯ ಬ್ಯಾರಿಗಳು ಆ ಕಾಲದಲ್ಲಿದ್ದರು. ಅಂತೆಯೇ ಪ್ರತಿಯೊಬ್ಬ ಅಂಗಡಿ ಕೊಂಕಣಿಯೂ ಬ್ಯಾರಿಭಾಷೆಯನ್ನು ಕೊಂಕಣಿಯಷ್ಟೇ ನಿರರ್ಗಳವಾಗಿ ಮಾತನಾಡಬಲ್ಲವರಾಗಿದ್ದರು. ಆದಕಾರಣ ಈ ಎರಡೂ ಸಮುದಾಯಗಳೂ ಬ್ಯಾರಿಬುದ್ಧಿ ಮತ್ತು ಕೊಂಕಣಿ ಬುದ್ಧಿಯೆನ್ನುವ ಪರಸ್ಪರರ ಸಾಂಸ್ಕೃತಿಕ ಅನನ್ಯತೆಯನ್ನು ಕರಾರುವಾಕ್ಕಾಗಿ ಗುರುತಿಸಿಕೊಂಡು ಪರಸ್ಪರರನ್ನು ಸಹಿಸಿಕೊಳ್ಳುತ್ತಾ ವಿಕಾಸವಾದವುಗಳು.
ಸ್ವಾತಂತ್ರ್ಯದ ಓಟ ಕಾದಂಬರಿಯಲ್ಲಿ ಮೊದಲ ತಲೆಮಾರಿನ ಗಣೇಶ ಕಾಮತರು ಮತ್ತು ಜನ್ನತ್ ಹಾಜಿಯವರು ವ್ಯಾಪಾರ, ದಗಲ್ಬಾಜಿ, ವಕಾಲತು, ಆಸ್ತಿ ಇತ್ಯಾದಿಗಳಲ್ಲೆಲ್ಲಾ ಪಾಲುದಾರಿಕೆಯಿಂದ ಪ್ರಾರಂಭವಾಗುವ ಮುತ್ತುಪ್ಪಾಡಿಯ ಬ್ಯಾರಿ-ಕೊಂಕಣಿ ವ್ಯಾಪಾರದ ಪೊಲಿಟಿಕಲ್ ಇಕಾನಮಿ ಜವುಳಿ ಅಂಗಡಿ ಅಪ್ಪಣ್ಣ ನಾಯ್ಕರೂ, ಗಫುರ್ ಸಾಹೇಬರೂ ತಮ್ಮ ವ್ಯಾಪಾರದ ಪೈಪೋಟಿಯಲ್ಲಿ ಕೇಸರಿ ಹಾಗೂ ಹಸಿರು ಬಣ್ಣದ ಲುಂಗಿಗಳ ಸ್ಕೀಮ್ ಪ್ರಾರಂಬಿಸಿ ರಾಡಿಯೆಬ್ಬಿಸುವುದರವರೆಗೆ ವಿಕಾಸವಾಗುತ್ತದೆ.
ಗಣೇಶ ಕಾಮತರು ಯಾವ ರಾಜಕೀಯಕ್ಕೂ ಕೈ ಹಾಕದೇ ನಾಜೂಕಾಗಿ ವ್ಯಾಪಾರದಲ್ಲಿ ತೊಡಗಿಕೊಳ್ಳುವ ಸಲಹೆಗಳನ್ನು ಕಾಲಕಾಲಕ್ಕೆ ಜನ್ನತ್ ಹಾಜಿಯವರಿಗೆ ನೀಡುತ್ತಾ ಬರುತ್ತಾರೆ. ಇಂದಿರಾಗಾಂಧಿಯ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಚಾಂದ್ ಅಲಿಯ ಮಗ ರೋಷನ್ ಅಲಿ ಭಗತ್ ಶೆಣೈಯಂತಹ ಜನಸಂಘದವರೊಂದಿಗೆ ಜೈಲಿಗೆ ಹೋದಾಗ ಬ್ಯಾರಿಗಳು ಕಾಂಗ್ರೆಸ್ಸಿಗೆ ನಿಷ್ಟರಾಗಿರಬೇಕಲ್ಲದೇ ದೀಪದ ಪಾರ್ಟಿಗಲ್ಲ ಎನ್ನುವ ಸೂಚನೆಯನ್ನು ನೀಡುತ್ತಾರೆ. ಅಂತೆಯೇ ಚಾಂದ್ ಅಲಿಯ ಮಾವ ಲತೀಫ್ ಮಾಸ್ತರು ಜಮಾತೆ ಇಸ್ಲಾಮಿ ಹಿಂದ್ ಎನ್ನುವ ಕಾರಣದಿಂದಾಗಿ ಜೈಲಿಗೆ ಹೋಗುವಾಗಲೂ. ಇದು ಮೊದಲ ತಲೆಮಾರಿನ ವ್ಯಾಪಾರೀ ಗುಂಪಿನ ಯಾವುದೂ ಅತಿಯಾಗದಂತೆ ನಡುಮಾರ್ಗವನ್ನೇ ಕಾಯ್ದುಕೊಳ್ಳಬೇಕು ಎನ್ನುವ ನಿಲುವು. ಸದಾಕಾಲ ತಾನು ಪಾಕಿಸ್ತಾನದವನೋ ಹಿಂದುಸ್ತಾನದವನೋ ಎನ್ನುವ ಗೊಂದಲದಲ್ಲಿಯೇ ಇರುವ ಚಾಂದ್ ಅಲಿಯ ಪಾತ್ರ ಈ ಎರಡೂ ಸಂದರ್ಭಗಳಲ್ಲಿ ಇಂತಹ ನಿಲುವಿನ ಜನ್ನತ್ ಹಾಜಿಯವರ ಪ್ರವೇಶವನ್ನು ಅಸಹನೆಯಿಂದಲೇ ನೋಡುತ್ತದೆ.

ಅಯೋಧ್ಯೆಗೆ ಹೋಗಿಯೂ ಹೋಗದೇ ಒಂದು ತುಂಡು ಗೋಡೆಯನ್ನು ತರುವ ಚಿನ್ನದ ವ್ಯಾಪಾರಿ ಚಂದ್ರಣ್ಣನಂತಹವನ ಎಲ್ಲಾ ವರ್ತನೆಗಳಿಗೂ ಅಂಗಡಿ ಕೊಂಕಣಿ ಅಪ್ಪಣ್ಣ ನಾಯ್ಕರ ಪ್ರಭಾವವೇ ಕಾರಣವಾಗುವುದು. ಗೋಡೆಯ ತುಂಡನ್ನು ತಂದುದನ್ನು ಊರವರಿಗೆ ಹೇಳುವುದೋ, ಹೇಳದಿರುವುದೋ, ಅಡಗಿಸಿಡುವುದೋ, ತೋರಿಸುವುದೋ ಎನ್ನುವ ಗೊಂದಲವು ಚಂದ್ರಣ್ಣನಂತಹ ಆ ತಲೆಮಾರಿನ ವ್ಯಾಪಾರಿಗಳು ಮೊದಲ ತಲೆಮಾರಿನ ವ್ಯಾಪಾರಿಗಳಷ್ಟು ಸ್ಪಷ್ಟ ವ್ಯಾಪಾರಿ ನಿಲುವನ್ನು ಹೊಂದಿರದಿರುವುದನ್ನು ತೋರಿಸುತ್ತದೆ. ಅಯೋಧ್ಯೆಯವರೆಗೆ ಹೋಗದೇ ಇರುವುದನ್ನು ಹೇಳಬಾರದು ಆದರೆ ಗೋಡೆಯ ತುಂಡನ್ನು ಅಡಗಿಸಿಡಬೇಕು ಮತ್ತು ಕೊನೆಗೆ ಬೊಂಬಾಯಿಯಲ್ಲಿ ಬಾಂಬು ಸಿಡಿದ ತಕ್ಷಣಕ್ಕೆ ಪ್ಲೇಟು ಬದಲಿಸಿ ಅಯೋಧ್ಯೆಗೆ ಹೋಗಲೇ ಇಲ್ಲ ಎಂದು ಹೇಳು ಎಂದೆಲ್ಲಾ ಚಂದ್ರಣ್ಣನನ್ನು ಪೂರ್ತಿಯಾಗಿ ಕನ್ಫ್ಯೂಸ್ ಮಾಡುವ ಅಪ್ಪಣ್ಣನಾಯ್ಕರ ವ್ಯಕ್ತಿತ್ವ ಮೊದಲ ತಲೆಮಾರಿನ ಗಣೇಶ ಕಾಮತರಷ್ಟೇ ಚಾಲಾಕಿತನದಿಂದ ಕೂಡಿದ್ದರೂ ಚಂದ್ರಣ್ಣನಿಗೆ ಪುಕ್ಕಲುತನದಂತೇ ಕಾಣುತ್ತದೆ.
ಇಡೀ ಕಥನದುದ್ದಕ್ಕೂ ಸಂತನಂತೇ ಕಾಣುವ ಸೋಡಾ ಅಂಗಡಿಯ ಚಡ್ಡಿ ಅನಂತಣ್ಣನೂ ಸಂಘದ ಮೊದಲ ತಲೆಮಾರಿನ ಕಾರ್ಯಕರ್ತನೇ ಆಗಿದ್ದು ಮಿಠಾಯಿ ಅವುಲಿಯಾರ ಪ್ರಭಾವದಿಂದ ಚಡ್ಡಿ ತೊರೆದು ಬಿಳಿಯ ಮುಂಡು ತೊಡುವುದರಿಂದಲೋ ಏನೋ ಕಥಾನಕಕ್ಕೆ ಸಹ್ಯವೋ ಎಂಬಂತೆ ಭಾಸವಾಗುತ್ತಾನೆ. ಇನ್ನು ಉಳಿದಂತೆ ಬ್ಯಾರಿ ಹುಡುಗನೊಬ್ಬ ಕೊಂಕಣಿ ಸುಬ್ರಾಯ ಭಟ್ಟರ ಮಗಳು ಶಾಲಿನಿಯನ್ನು ಪ್ರೀತಿಸುವ ಪರಿಣಾಮಗಳು, ಪುತ್ತೂರಿನ ಪರಿಸರದಲ್ಲಿ ಹಿಂದೆ ನಡೆದ ಅಂತಹ ಒಂದು ನೈಜ ಘಟನೆಯನ್ನು ಆಧರಿಸಿರಬಹುದು. ಹೀಗೆ ಕಾದಂಬರಿಯುದ್ದಕ್ಕೂ ಅನೇಕ ಪಾತ್ರಗಳ ಮೂಲಕ ಬೊಳುವಾರು ಕೊಂಕಣಿ ಸಾರಸ್ವತರ ಅನನ್ಯತೆಯನ್ನು ವಿವರಿಸಲು ಪ್ರಯತ್ನಿಸಿದ್ದಾರೆ.
ಓದುತ್ತಿರುವ ಮನಕ್ಕೆ ಹಠಾತ್ತನೆ ಪ್ರಶ್ನೆಗಳನ್ನೆಸೆದು ಗಲಿಬಿಲಿಗೊಳಿಸುವುದು ಬೊಳುವಾರು ಸಹಜ ಶೈಲಿ. ನನಗೆ ಮುಖ್ಯವೆನಿಸುವ ಪ್ರಶ್ನೆಗಳಲ್ಲಿ ಸೋಡಾ ಅಂಗಡಿಯ ಚಡ್ಡಿ ಅನಂತಣ್ಣನವರಿಗೆ ಚಾಂದಜ್ಜ ಎಸೆಯುವ ಹಾಗಾದ್ರೆ ನೀವು ಕೊಂಕಣಿಯಾ? ಹಿಂದೂ ಅಲ್ವಾ !? ಎನ್ನುವ ಪ್ರಶ್ನೆ ಕೊಂಕಣಿ ಸಾರಸ್ವತರ ಬಗ್ಗೆ ಬೊಳುವಾರು ಅವರಿಗಿರುವ ಅದಮ್ಯ ಸಿಟ್ಟಿನಂತೇ ನನಗೆ ಕಾಣುತ್ತದೆ.
ಪ್ರತ್ಯೇಕತೆ ಮತ್ತು ಅನನ್ಯತೆಗಳು ಕೇವಲ ಮುಸ್ಲಿಮರಿಗೆ ಸೀಮಿತವಲ್ಲ ಅದು ಭಾರತದ ಉಳಿದ ಎಲ್ಲಾ ಸಮುದಾಯಗಳಿಗೂ ಇವೆ. ಆದರೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮುಖ್ಯವಾಹಿನಿ ಯಿಂದ ಪ್ರತ್ಯೇಕತೆಯನ್ನು ಕಾಯ್ದುಕೊಂಡ ಆರೋಪವನ್ನು ಅತೀ ಹೆಚ್ಚು ಎದುರಿಸಿದವರು ಮುಸ್ಲಿಮರೇ. ದಕ್ಷಿಣ ಕನ್ನಡದಲ್ಲಿ ಸ್ಥಳೀಯ ಮುಖ್ಯವಾಹಿನಿಯಿಂದ ಪ್ರತ್ಯೇಕ ಎನಿಸುವ ಸಮುದಾಯಗಳಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರನ್ನು ಬಿಟ್ಟರೆ ಕೊಂಕಣಿ ಸಾರಸ್ವತರೇ ಪ್ರಮುಖ. ಹದಿನಾರನೇ ಶತಮಾನದಲ್ಲಿ ಗೋವಾದ ಮೇಲೆ ಪೋರ್ಚುಗೀಸರ ಆಕ್ರಮಣದ ಕಾರಣದಿಂದಾಗಿ ದಕ್ಷಿಣದ ಕಡೆಗೆ ವಲಸೆ ಬಂದ ಈ ಸಮುದಾಯ ತಮ್ಮದೇ ಆದ ಪೇಟೆಗಳನ್ನು, ದೇವಾಲಯಗಳನ್ನು ಕಟ್ಟಿ ಸ್ಥಳೀಯ ತುಳುವರು ಮತ್ತು ಇತರ ಬ್ರಾಹ್ಮಣ ವರ್ಗದಿಂದ ಪ್ರತ್ಯೇಕತೆಯನ್ನು ಕಾಯ್ದುಕೊಂಡಿರುವವರು. ಬೊಳುವಾರು ಅವರ ಪ್ರಶ್ನೆ ಈ ಮೂಲದ್ದು.
ಕಾಲ ಬದಲಾಗಿದೆ. ಹದಿನೆಂಟು ಪೇಟೆಗಳಲ್ಲಿನ ಕೊಂಕಣಿ ಸಾರಸ್ವತರ ಅಂಗಡಿಗಳನ್ನು ಅವರೇ ಬ್ಯಾರಿಗಳಿಗೆ ಮಾರುವ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದೆ. ಕೊಂಕಣಿ ಸಾರಸ್ವತರ ಹೊಸ ತಲೆಮಾರು ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನಲ್ಲಿ ಸಾಫ್ಟವೇರ್ ಕೋಡ್ ಬರೆಯುತ್ತಿದೆ. ಹೊಸನೆಲೆಯತ್ತ ವಲಸೆ ಪ್ರಾರಂಭವಾಗಿದೆ. ಒಂದಂತೂ ಸತ್ಯ, ಇನ್ನು ಮುತ್ತುಪ್ಪಾಡಿಯ ಮುಂದಿನ ಓಟವನ್ನು ಯಾರಾದರೂ ಬರೆದರೆ ಅದರಲ್ಲಿ ಕೋಮು ಗಲಭೆ ಶುರುಹಚ್ಚಲು ಕೊಂಕಣಿ ವ್ಯಾಪಾರಿಗಳು ಇರುವುದಿಲ್ಲ.

‍ಲೇಖಕರು G

31 August, 2013

5 Comments

  1. P Bilimale

    Thanks for the enlightening analysis. The end lines are eye opening . Being a Coastal Kannadiga, still I am trying to understand the roll of Konkanis in that area. Most of us were prejudiced!

  2. sanath K

    Thanks for this analysis.its nicely written. This shows how a section is generally looked by other communities in their own point of view. Last line is true , perhaps for most of the castes in coastal Karnataka, as we are one of the largest source for the people working in “software” .

  3. boluwaru

    Pritiya Baaliga Mam..,
    Nanna Byari buddiyannu sariyagi grahisida nimma Konkani buddige sharanagiddene.
    -boluwaru

  4. ನಂದೀಶ್ ಬಂಕೇನಹಳ್ಳಿ

    ಈ ಕಾದಂಬರಿಯನ್ನು ಪ್ರತಿಸಾರಿ ಓದಿದಾಗಲು ಹೊಸ ಹೊಸ ಹೊಳಹುಗಳನ್ನು ಅರಳಿಸುತ್ತದೆ.ಸ್ವಾತಂತ್ರ್ಯದ ಓಟ ಒಳ್ಳೆಯ ಕಾದಂಬರಿ,ಮುತ್ತುಪಾಡಿಯ ಜನಗಳ ಹಾಗೇ…………

    • boluwaru

      danyavadagalu nandisha

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading