ಕನ್ನಡದ ಹಾಸ್ಯ ಕಲಾವಿದೆಯರಲ್ಲಿ ಉಮಾಶ್ರೀ ನಂಬರ್ ಒನ್ : ಸರಿಗಮ ವಿಜಿ
ಸಂಸಾರದಲ್ಲಿ ಸರಿಗಮ ನಾಟಕದಲ್ಲಿ ತಲೆ ತುಂಬಾ ಸೇವಂತಿಗೆ ಹೂ ಮುಡಿದು, ವಡವೆ ಹಾಕ್ಕೊಂಡು ರಂಗದ ಮೇಲೆ ಬಂದ ಹಳ್ಳಿ ಪೆದ್ದು ಹುಡಿಗಿ ಮಾಡ್ರನ್ ಆಗುವ ಹೆಂಡತಿಯ ಪಾತ್ರ ಉಮಾಶ್ರೀ ಅವರದ್ದು. ನವಿರು ಹಾಸ್ಯ ಮತ್ತು ಹೊಟ್ಟೆ ಹಿಂಡುವಷ್ಟು ನಗು ತರಿಸುವ ಸಂಭಾಷಣೆಯಿಂದ ಪ್ರೇಕ್ಷಕರ ಮನಗೆದ್ದ ನಾಟಕ ಸಂಸಾರದಲ್ಲಿ ಸರಿಗಮ. 1983 ರಲ್ಲಿ ನಾಟಕ ಸಂಸಾರದಲ್ಲಿ ಸರಿಗಮ ಶುರುವಾಗಿ ಇದುವರೆಗೂ ಕಂಡ ಒಟ್ಟು ಪ್ರದರ್ಶನಗಳ ಸಂಖ್ಯೆ 1398. ಅದರಲ್ಲಿ ಉಮಾಶ್ರೀ ಅವರು ಅಭಿನಯಿಸಿದ್ದು 460 ಪ್ರದರ್ಶನಗಳಲ್ಲಿ. ರಂಗಭೂಮಿಯ ಇತಿಹಾಸದಲ್ಲಿ ತನ್ನ ಛಾಪನ್ನು ಮೂಡಿಸಿದ ನಗೆ ನಾಟಕವಿದು.
ಜಾಗತೀಕರಣದ ಸುಳಿಗಳು ಬಿಚ್ಚಿಕೊಳ್ಳುತ್ತಾ ನಗರ ಸಂಸ್ಕೃತಿ ಗ್ರಾಮೀಣ ಸಂಸ್ಕೃತಿಯನ್ನು ಸೆಳೆಯುವ ಮತ್ತು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಬಗೆಗೆ ಮಾಧ್ಯಮ ಮತ್ತು ಸಿನೆಮಾ ಹಾಗೂ ನಾಟಕಗಳು ಬರುತ್ತಿದ್ದ ಶುರುವಾತಿನ ಕಾಲ. ‘ಆಚೆ ಮನೆಯವಳು ವಾಲೆ ತೊಟ್ಟರೆ ಈಚೆ ಮನೆಯವಳು ಕಿವಿ ಕಿತ್ತುಕೊಳ್ಳುವುದು’ ಅನ್ನುವಂತೆ, ಒಂದು ಸಂಸಾರದಲ್ಲಿ ಗಂಡ ಹೆಂಡಿರ ನಡುವೆ ಇರುವ ನವಿರು ಹಾಸ್ಯದ ಕಥಾ ಹಂದರದ ಮೇಲೆ ಕಟ್ಟಿದ ನಾಟಕ ಸಂಸಾರದಲ್ಲಿ ಸರಿಗಮ. ಆಧುನೀಕತೆಯ ಸೆಳಕು ಒಬ್ಬ ಹಳ್ಳಿಗ ಹೆಣ್ಣು ಮಗಳ ಮೇಲೆ ಪರಿಣಾಮ ಬೀರುವ ಮತ್ತು ಆ ಮೂಲಕ ಮಧ್ಯಮವರ್ಗದ ಪ್ರೇಕ್ಷಕನೂ ಇದು ತನ್ನದೇ ಕಥೆ ಎಂಬಂತೆ ನಗುವಿನಲ್ಲೇ ಹುಡುಕಾಟ ಮಾಡಿಕೊಳ್ಳಲು ಅನುವು ಮಾಡಿಕೊಟ್ಟ ನಾಟಕ ಸಂಸಾರದಲ್ಲಿ ಸರಿಗಮ ನಾಟಕ. ಸಂಸಾರದಲ್ಲಿ ಸರಿಗಮ ನಾಟಕದ ಮೂಲಕ ದಾಖಲೆಯನ್ನು ನಿರ್ಮಿಸಿದ ಸರಿಗಮ ನಾಟಕದ ನಾಯಕ ಕಿರುತೆರೆ ಹಿರಿತೆರೆ ಕಲಾವಿದ ಸರಿಗಮ ವಿಜಿ ಅವರು ಉಮಾಶ್ರೀ ಅವರ ಬಗೆಗೆ ಹಂಚಿಕೊಂಡ ಮಾತುಗಳು ಈ ಹೊತ್ತಿನ ಬರಹದಲ್ಲಿ
****
“ ಉಮಾಶ್ರೀ ನನಗೆ ಪರಿಚಯವಾದದ್ದು ಪ್ರಮೀಳ ಜೋಷಾಯ್ ಅನ್ನುವ ಕಲಾವಿದೆಯಿಂದ. ಮೊದಲು ಉಮಾಶ್ರೀ ಅವರು ಮಾಡುತ್ತಿದ್ದ ಪಾತ್ರವನ್ನು ಬೇರೆ ಕಲಾವಿದೆ ಮಾಡುತ್ತಿದ್ದರು. ನಾನು ಒಮ್ಮೆ ನಾಟಕ ನೋಡಿ ನಿಮಗೆ ಇಷ್ಟ ಆದಲ್ಲಿ ಆ ನಾಟಕದಲ್ಲಿ ಹೀರೋಯಿನ್ ಪಾತ್ರ ಮಾಡಿ ಅಂದೆ. ಅದಕ್ಕವರು ಒಪ್ಪಿ ನಾಟಕ ನೋಡಿ ನನ್ನ ನಾಟಕದ ಮಹಾಶಕ್ತಿ ಆಗಿಬಿಟ್ಟರು. ಭವ್ಯ, ಆಶಾಲತಾ, ರೇಖಾದಾಸ್, ಮಂಜುಳಾ, ಸಿಹಿಕಹಿ ಗೀತಾ, ಪ್ರಮೀಳಾ ಜೋಷಾಯ್, ಸುಧಾ ನರಸಿಂಹ ರಾಜು, ಸುನಂದಾ, ಶ್ರೀದೇವಿ ಹೀಗೆ ಹಲಾವರು ಕಲಾವಿದೆಯರು ಇದೇ ನಾಟಕದಲ್ಲಿ ಅಭಿನಯಿಸಿದ್ದಾರೆ. ಆದರೆ ಉಮಾಶ್ರೀ ಅವರ ಅಭಿನಯದ ಶೈಲಿ ಮತ್ತು ಅವರು ನಾಟಕದಲ್ಲಿ ತೊಡಗಿಸಿಕೊಳ್ಳುತ್ತಿದ್ದ ರೀತಿಯೇ ಭಿನ್ನವಾದುದು. ಉಮಾಶ್ರೀ ಅವರಿಗೆ ಉಮಾಶ್ರೀ ಅವರೇ ಸಾಟಿ.
ಉಮಾಶ್ರೀ ಅವರು ನಾಟಕ ಮಾಡುವ ಸಮಯದಲ್ಲೇ ತುಂಬಾ ಇಮ್ಪ್ರೂವೈಸ್ ಮಾಡುತ್ತಿದ್ದರು. ಸ್ಕ್ರಿಪ್ಟ್ ಮೀರಿ ನಾಟಕವನ್ನು ಬೆಳೆಸುತ್ತಿದ್ದರು. ಒಂದೂ ಕಾಲು ಗಂಟೆ ಇದ್ದ ನಾಟಕ ಒಮ್ಮೊಮ್ಮೆ ಅದು ಎರಡೂವರೆ ಗಂಟೆ ಹೋಗಿದ್ದೂ ಕೂಡ ಉಂಟು. ಉಮಾಶ್ರೀ ರಂಗದ ಮೇಲೆ ಬಂದಾಗ ಮತ್ತು ಅವರು ಡೈಲಾಗ್ ಡೆಲಿವರಿ ಮಾಡುವಾಗ ಜನರೆಲ್ಲಾ ಓಓ ಅನ್ನೋರು. ಒಬ್ಬ ಕಲಾವಿದನಿಗೆ ಜನರ ಚಪ್ಪಾಳೆ ಅನ್ನೋದು ಹುಮ್ಮಸ್ಸು ಮತ್ತು ಶಕ್ತಿ ಎರಡನ್ನು ತಂದು ಕೊಡುತ್ತದೆ. ಆ ವಿಷಯದಲ್ಲಿ ಉಮಾಶ್ರೀ ಅವರು ಅಭಿನಯ ಮಾಡಿದ ಎಲ್ಲಾ ಷೋಗಳು ಹೌಸ್ ಫುಲ್, ಚಪ್ಪಾಳೆಗಳ ಸುರಿಮಳೆ. ಜೊತೆಗೆ ಪ್ರೇಕ್ಷಕರ ರಿಪ್ಲೈನಿಂದ ನಮ್ಮ ಇಬ್ಬರ ಅಭಿನಯಕ್ಕೆ ಇನ್ನಷ್ಟು ಕಳೆ ಕಟ್ತುತಿತ್ತು. ಉಮಾಶ್ರೀ ಅವರು ನಾಟಕವನ್ನು ಹೇಗೆ ಬೆಳೆಸುತ್ತಿದ್ದರು ಅನ್ನೋದಕ್ಕೆ ಒಂದು ಉದಾಹರಣೆ ಹೇಳುವೆ ಅದೇನೆಂದರೆ, ನಾಟಕದಲ್ಲಿ ಉಮಾಶ್ರೀ ಪೇಪರ್ ಓದುವ ಒಂದು ದೃಶ್ಯವಿತ್ತು. ಅವತ್ತು ಪ್ರಜಾಮತ ಪೇಪರ್ ನಾಟಕದ ಪ್ರಾಪರ್ಟಿಯಾಗಿ ಇಟ್ಟಿದ್ದೆವು. ಆ ಪೇಪರ್ನಲ್ಲಿ ಬೆಳಗೊಳದ ಗೊಮ್ಮಟೇಶನಿಗೆ ಮಹಾಮಸ್ತಕಾಭಿಷೇಕ ಆಗುತ್ತಿರುವ ಛಾಯಾಚಿತ್ರವಿತ್ತು. ಅದನ್ನು ನೋಡಿದ ಉಮಾಶ್ರೀ ಅವರು ‘ರೀ ನೋಡ್ರಿ ಗೊಮ್ಮಟೇಶ್ವರನ ಚಿತ್ರ ಎಷ್ಟು ಚೆನ್ನಾಗಿದೆ’ ಎಂದು ನಾಟಕದಲ್ಲಿ ಇಲ್ಲದ ಡೈಲಾಗ್ ಹೊಡೆದು ಬಿಟ್ರು. ಸಿಕ್ಕಿದ್ದೇ ತಡ ನಾನೂ ಕೂಡ ಹೊಸ ಡೈಲಾಗ್ ಪಂಚ್ ಮಾಡಿಬಿಟ್ಟೆ. ಉಮಾಶ್ರೀ ಅವರು ಗೊಮ್ಮಟೇಶನ ಚಿತ್ರ ನೋಡ್ರೀ ಅಂದಿದ್ದಕೆ ನಾನು ಪ್ರತಿಯಾಗಿ ‘ಅಲ್ಲವೇ ಎಲ್ಲಾ ಹೆಣ್ಣು ಮಕ್ಕಳು ಪೇಪರಿನಲ್ಲಿ ಶಾರುಕ್ ಖಾನ್ ಅಮೀರ್ ಖಾನ್ ಚಿತ್ರ ನೋಡಿದ್ರೆ ನೀನೇನೆ ಗೊಮ್ಮಟೇಶ್ವರನ ಚಿತ್ರ ನೋಡ್ತಿದ್ದೀಯಲ್ಲೇ’ ಅಂದೆ. ಪ್ರೇಕ್ಷಕರಿಂದ ಬಂದ ಚಪ್ಪಾಳೆ ಮತ್ತು ಮೆಚ್ಚುಗೆ ಬಹಳ ದೊಡ್ಡ ಪ್ರಮಾಣದ್ದು ಆಗಿತ್ತು. ಅಂದಿನಿಂದ ಆ ಸಂಭಾಷಣೆಯನ್ನು ನಾಟಕದಿಂದ ಕೈ ಬಿಡಲೇ ಇಲ್ಲ. ಹೀಗೆ ನಾಟಕದ ಅನೇಕ ಕಡೆ ಸಂಭಾಷಣೆಯನ್ನು ಇಂಪ್ರೂ ಮಾಡಿ ನಾಟಕವನ್ನು ಬೆಳೆಸಿದ್ದಾರೆ. ತಕ್ಷಣ ಹೀಗೆ ಹೊಸ ಹೊಸ ರೂಪಗಳನ್ನು ನಾಟಕಕ್ಕೆ ಕೊಟ್ಟು ಜನರ ಮೆಚ್ಚುಗೆ ಪಡೆಯಲು ದಾರಿ ಮಾಡಿ ಕೊಡುತ್ತಿದ್ದುದು ಉಮಾಶ್ರೀ ಅವರು.
ಅಷ್ಟೇ ಅಲ್ಲದೇ ನಾವು ನಾಟಕ ಮಾಡುತ್ತಿದ್ದ ಜಾಗ ಮತ್ತು ಸಮಕಾಲೀನ ಘಟನೆಗಳನ್ನು ರಂಗದ ಮೇಲೆ ಬೆಳೆಸಿ ನಾಟಕದ ಜನಪ್ರಿಯತೆ ಹೆಚ್ಚುವಂತೆ ಮಾಡಿದವರೂ ಕೂಡ ಉಮಾಶ್ರೀ ಅವರೆ. ಸಾವಿರಾರು ಷೋಗಳಲ್ಲಿ ಪ್ರಯೋಗದಿಂದ ಪ್ರಯೋಗಕ್ಕೆ ಸ್ಕ್ರಿಪ್ಟ್ ಗೊತ್ತಿಲ್ಲದಂತೆ ಬದಲಾಗಿ ನಾಟಕ ಮಾಡುತ್ತಿದ್ದರೆ ಅದರ ಮಜಾ ನಿಜಕ್ಕೂ ಖುಷಿ ಕೊಡುತ್ತಿತ್ತು. ಉಳಿದ ಕಲಾವಿದೆಯರು ಈ ತರಹ ಇಮ್ಪ್ರೂವೈಸ್ ಮಾಡುತ್ತಿರಲಿಲ್ಲ. ಕೊಟ್ಟಂತಹ ಸ್ಕ್ರಿಪ್ಟ್ ಅಚ್ಚುಕಟ್ಟಾಗಿ ಅಭಿನಯಿಸಿ ಹೋಗುತ್ತಿದ್ದರು. ಆದ್ರೆ ಉಮಾಶ್ರೀ ಅವರಿಗೆ ಮಾತ್ರ ಈ ಶಕ್ತಿ ಇದ್ದದ್ದು. ಹೀಗೆ ಸಂಸಾರದಲ್ಲಿ ಸರಿಗಮ ಅನ್ನುವ ನಾಟಕ ಇಂದಿಗೂ ಬೆಳೆಯುತ್ತಿರುವ ನಾಟಕ. ಏಕೆಂದರೆ ಕಾಲ ಕಾಲಕ್ಕೆ ನನಗೂ ಹೊಸದಾಗಿ ಯೋಚಿಸಿ ನಾಟಕವನ್ನು ಕಾಂಟೆಂಪರರಿ ಮಾಡಲು ಸಾಕಷ್ಟು ಅನುಕೂಲ ಕೂಡ ಆಗಿದೆ.

ಉಮಾಶ್ರೀ ಅವರು ರಂಗಕ್ಕೆ ಬರಬೇಕೆಂದರೆ ಮೇಕಪ್ಪು ಉಡಿಗೆ ತೊಡಿಗೆ ಎಲ್ಲವೂ ಸರಿ ಇರಬೇಕಿತ್ತು. ಕೊಂಚವೂ ಏರು ಪೇರಾಗುವಂತಿರಲಿಲ್ಲ. ಅವರಿಗೆ ಬೇಕಾದ ಕಾಸ್ಟ್ಯೂಮ್ ಅವರೇ ಹೊಂದಿಸಿಕೊಳ್ಳುತ್ತಿದ್ದರು. ಸರಿಗಮ ನಾಟಕದಲ್ಲಿ ಅವರು ಚಿಟಿಕೆ ಹೊಡೆಯುವುದರಲ್ಲಿ ತಮ್ಮ ಉಡುಗೆ ಬದಲಿಸಿಕೊಂಡು ಬಂದು ಪ್ರೇಕ್ಷಕರಲ್ಲಿ ಅಚ್ಚರಿ ಉಂಟು ಮಾಡುತ್ತಿದ್ದರು. ಮೊದಲು ಒಳಗೆ ಒಂದು ಸ್ಕರ್ಟ್, ಆಮೇಲೆ ಒಂದು ಗೌನ್, ಅದರ ಮೇಲೆ ಸೀರೆ ಉಡುತ್ತಿದ್ದರು. ಅಷ್ಟೇ ಅಲ್ಲ ಅವುಗಳಿಗೆ ಮ್ಯಾಚಿಂಗ್ ವಡವೆ ಚಪ್ಪಲಿ ಹೀಗೆ ಎಲ್ಲವನ್ನೂ ಒಂಚೂರು ಗೊಂದಲ ಆಗದ ಹಾಗೇ ತೊಟ್ಟಿರುತ್ತಿದ್ದರು. ಲೈಟ್ ಆಫ್ ಆಗಿ ಆನ್ ಆಗುವ ಹೊತ್ತಿಗೆ ಬಟ್ಟೆ ಬದಲಿಸಿ ರಂಗದ ಮೇಲೆ ಹಾಜರಿರುತ್ತಿದ್ದರು. ಆ ರೀತಿ ತಕ್ಷಣ ಬಟ್ಟೆ ಬದಲಿಸಲು ಅನುಕೂಲ ಆಗುವ ಹಾಗೇ ಅವರೇ ವಿನ್ಯಾಸವನ್ನು ಮಾಡಿಕೊಂಡಿರುತ್ತಿದ್ದರು. ಅದಕ್ಕೆ ಹೊಂದಿಕೆ ಆಗುವಂತಹ ವಡವೆ ವಸ್ತ್ರಗಳನ್ನು ಧರಿಸುತ್ತಿದ್ದರು ಕೂಡ. ಬಟ್ಟೆ ಬದಲಿಸಲು ಗ್ರೀನ್ ರೂಂಗೆ ಹೋಗಬೇಕಂತಲೇ ಏನಿಲ್ಲ. ನಾಟಕದ ಓಟಕ್ಕೆ ಯಾವುದೇ ತೊಂದರೆ ಆಗದಂತೆ ಕೆಲವೊಮ್ಮೆ ಸೈಡ್ ವಿಂಗ್ ನಲ್ಲೆ ಎಷ್ಟೋ ಸಲ ಸರಿಗಮ ನಾಟಕದಲ್ಲಿ ಬಟ್ಟೆ ಕಾಸ್ಟ್ಯೂಮ್ ಚೇಂಜ್ ಮಾಡಿದ ಉದಾಹರಣೆಗಳೂ ಉಂಟು.
ಅಯ್ಯೋ ಯಾರದ್ರೂ ನೋಡಿದ್ರೆ ಅನ್ನುವ ಯಾವ ಸೋಫೆಸ್ಟೀಕೆಟೆಡ್ ಭಾವನೆ ಇಲ್ಲದ ನಟಿ ಅವರು. ಹೇಗಾದರೂ ಮಾಡಿ ನಾಟಕದ ಪಾತ್ರಕ್ಕೆ ನ್ಯಾಯ ಒದಗಿಸಬೇಕು, ನಂಬಿ ಬಂದ ಪ್ರೇಕ್ಷಕನಿಗೆ ಸಂತಸವನ್ನು ಕೊಡಬೇಕು ಅನ್ನುವುದು ಒಟ್ಟು ಉಮಾಶ್ರೀ ಅವರ ಗುರಿಯಾಗಿರುತ್ತಿತ್ತು. ಹೀಗೆ ವೇಷ ಭೂಷ ಎಲ್ಲ ಸರಿ ಇದ್ದು ಪ್ರೇಕ್ಷಕರು ತುಂಬಿದ ರಂಗ ಮಂದಿರವಿದ್ದರೆ ಆಯಮ್ಮನಿಗೆ ಮೂಡ್ ಕ್ರಿಯೇಟ್ ಆಗಿ ಅಭಿನಯಿಸಲು ಶುರು ಮಾಡಿದ್ರೆ ಉಮಾಶ್ರೀ ಅವರನ್ನು ರಂಗದ ಮೇಲೆ ನೋಡಲು ಎರಡು ಕಣ್ಣುಗಳು ಸಾಲುತ್ತಿರಲಿಲ್ಲ. ಅಷ್ಟೇ ಅಲ್ಲ ಅವರ ಜೊತೆ ಅಭಿನಯಿಸುವ ಕೋ ಆರ್ಟಿಸ್ಟ್ ಗಳಿಗೂ ಪಾತ್ರಕ್ಕೆ ಜೀವ ತುಂಬಲು ಅವಕಾಶ ಆಗುತ್ತಿತ್ತು. ಇದೆಲ್ಲವನ್ನು ಬೇರೆ ಯಾವ ಕಲಾವಿದೆಯರಿಂದ ನಾನು ನೋಡಿಯೇ ಇಲ್ಲ. ಅವರಿಗಿರುವ ರಂಗಪ್ರಜ್ಞೆ ಮತ್ತು ಸಮಯಕ್ಕೆ ಸರಿಯಾಗಿ ಏನು ಬೇಕೋ ಅದನ್ನೇ ಅಭಿನಯಿಸುವ ಗುಣ ಮಾತ್ರ ಸದಾ ಎಲ್ಲರ ಮನದಲ್ಲಿ ಅಚ್ಚಳಿಯದೇ ಉಳಿಯುವಂಥದ್ದು. ನಿಜಕ್ಕೂ ಉಮಾಶ್ರೀ ಒಬ್ಬ ಕನ್ನಡ ಶ್ರೇಷ್ಠ ರಂಗ ನಾಯಕಿ.
ಎದುರು ಮನೆ ಯಶೋಧ ಅನ್ನುವ ಇನ್ನೊಂದು ನಾಟಕವನ್ನು ಮಾಡಿದ್ವಿ. ಅದರಲ್ಲಿ ಉಮಾಶ್ರೀ ಅವರದ್ದು ಯಶೋಧಳ ಪಾತ್ರ. ಅಲ್ಲೂ ಉಮಾಶ್ರೀ ಅವರೇ ಹೀರೋಯಿನ್. ಆ ನಾಟಕದಲ್ಲೂ ಅತ್ಯದ್ಭುತ ಅಭಿನಯ ಮಾಡಿದರು. ಆ ನಾಟಕ ಕಂಡ ಯಶಸ್ಸು ಕೂಡ ದೊಡ್ಡದೇ. ಕೆಲವು ಪ್ರದರ್ಶನಗಳು ಆ ನಾಟಕವೂ ಕಂಡಿತು. ಆದ್ರೆ ಸೆಟ್ ಮತ್ತು ಪ್ರಾಪರ್ಟಿ ದೊಡ್ಡ ಮಟ್ಟದ್ದು ಆಗಿತ್ತು. ಕಲಾಕ್ಷೇತ್ರ ಬಿಟ್ಟರೆ ಬೇರೆ ಎಲ್ಲ ಕಡೆ ನಾಟಕ ಮಾಡಲು ಸಾಧ್ಯವಾಗದೇ ಆ ನಾಟಕವನ್ನು ಮುಂದುವರೆಸಲಾಗಲಿಲ್ಲ. ಆದ್ರೆ ಆ ನಾಟಕದಲ್ಲಿನ ಉಮಾಶ್ರೀ ಅವರ ಅಭಿನಯವನ್ನು ಪ್ರೇಕ್ಷಕರೂ ಇಂದಿಗೂ ಮರೆತಿಲ್ಲ.
ನಾಟಕದಲ್ಲಿ ಪಾರ್ಟು ಮಾಡಿದ್ದಕ್ಕೆ ಇಂತಿಷ್ಟೇ ಅಂತ ದುಡ್ಡು ಕೇಳುತ್ತಿರಲಿಲ್ಲ. ಮೊದ ಮೊದಲು ಹೆಚ್ಚಿಗೆ ಹಣ ಕೊಡಲು ನಮಗೂ ಕೂಡ ಆಗುತ್ತಿರಲಿಲ್ಲ. ಆದ್ರೆ ಉಮಾಶ್ರೀ ಅವರು ಇದಕ್ಕೆಲ್ಲಾ ಹೊಂದಿಕೊಂಡು ಪಾತ್ರ ಮಾಡುತ್ತಿದ್ದರು. ಎಷ್ಟೋ ಸಲ ನಾಟಕ ಮುಗಿಸಿದ ಮೇಲೆ ಬಜಾಜ್ ವೆಸ್ಪಾದಲ್ಲಿ ಕರೆದುಕೊಂಡು ಮನೆಗೆ ಹೋಗಿ ಬಿಟ್ಟು ಬರುತ್ತಿದ್ದೆವು. ಒಮ್ಮೆ ಕಲಾಕ್ಷೇತ್ರದಲ್ಲಿ ಸಂಸಾರದಲ್ಲಿ ಸರಿಗಮ ನಾಟಕ ಇತ್ತು. ಉಮಾಶ್ರೀ ಅವರ ಬದಲು ಬೇರೆ ನಟಿ ಅವತ್ತು ಪಾತ್ರ ಮಾಡಿದ್ದರು. ಅದನ್ನು ತಿಳಿದ ಉಮಾಶ್ರೀ ಅವರು ಶರ್ಟು ಪಟ್ಟಿ ಹಿಡಿದು ಕೇಳಿದ್ರು ‘ ನನನ್ನು ಬಿಟ್ಟು ಅವಳಿಗೆ ಏಕೆ ಪಾರ್ಟ್ ಕೊಟ್ಟೆ. ನಾ ಚೆನ್ನಾಗಿ ಮಾಡಲ್ವಾ ? ಇನ್ನೊಂದು ಸಲ ಹೀಗೆ ಮಾಡಿದ್ರೆ ನಾ ಸುಮ್ಮನಿರಲ್ಲ ‘ ಎಂದು ದಬಾಯಿಸಿ ಕಿರುಚಾಡಿದ್ದರು. ಈ ರೀತಿಯಾದ ನಡವಳಿಕೆ ಅವರ ನಾಟಕ ಪ್ರೇಮವನ್ನು ತೋರುತ್ತಿತ್ತೇ ಹೊರತು ದ್ವೇಷವನ್ನಲ್ಲ. ಹೀಗೆ ಕೇಳುವ ಹಿನ್ನೆಲೆಯ ಒಳಗೂ ಇರುತ್ತಿದದು ಪ್ರೀತಿ ವಿಶ್ವಾಸ ಅನ್ನೋದನ್ನು ಮರೆಯೋ ಹಾಗಿಲ್ಲ. ಅವರ ಅಭಿನಯ ಕಂಡ ರಂಗಭೂಮಿ ಈ ಹಕ್ಕನ್ನು ಉಮಾಶ್ರೀ ಅವರಿಗೆ ಕೊಟ್ಟಿತ್ತು. ಅವರಿಗೆ ಒಟ್ಟಾರೆ ತನ್ನದು ಅಂದುಕೊಂಡ ಮೇಲೆ ಉಮಾಶ್ರೀ ಅದನ್ನು ಜೀವಕ್ಕಿಂತ ಹೆಚ್ಚಿಗೆ ಪ್ರೀತಿಸುತ್ತಿದ್ದರು. ಲೈಟ್ ಬಾಯ್ ಮೊದಲುಗೊಂಡು ಎಲ್ಲರನ್ನೂ ಪ್ರೀತಿ ವಿಶ್ವಾಸಗಳಿಂದ ಕಾಣುವ ಗುಣ ಅವರದ್ದು.
ಸಂಸಾರದಲ್ಲಿ ಸರಿಗಮ ನಾಟಕದ ಬ್ಯಾನರ್, ಪೋಸ್ಟರ್ ಮತ್ತು ಪಾಂಪ್ಲೆಟ್ಗಳನ್ನ ಪ್ರಚಾರಕ್ಕೆಂದು ಕಲಾಕ್ಷೇತ್ರದ ಆವರಣದಲ್ಲಿ ಉಪಯೋಗಿಸಿದಾಗ ಸಾಕಷ್ಟು ಅವಮಾನಗಳು ಆಗಿವೆ ನಮ್ಮ ನಾಟಕ ತಂಡಕ್ಕೆ. ನಮ್ಮ ಪೋಸ್ಟರ್ ಕಣ್ಣೆದುರೇ ಕಿತ್ತು ಹಾಕೋರು. ಪಾಂಪ್ಲೆಟ್ ನಮ್ಮಗಳ ಎದುರು ಕೈ ಒರೆಸಿಕೊಂಡು ಉಂಡೆ ಮಾಡಿ ಎಸೆದು ಬಿಡೋರು. ಉಮಾಶ್ರೀ ಮತ್ತು ಸರಿಗಮ ವಿಜಿ ಮಾಡುವ ನಾಟಕ ಡಬ್ಬಲ್ ಮೀನಿಂಗ್ ನಾಟ್ಕ. ಅದರಲ್ಲೇನು ಇದೆ ಮಣ್ಣು ಅಂತ ವ್ಯಂಗ್ಯ ಮಾಡೋದು ಅಲ್ಲದೇ ಕೆಟ್ಟ ನಾಟಕ ಎಂದು ಅಪ ಪ್ರಚಾರ ಮಾಡುತ್ತಿದ್ದರು. ಇದಕ್ಕೆಲ್ಲಾ ಉಮಾಶ್ರೀ ಅವರೂ ಉಪ್ಪೂ ಹಾಕುತ್ತಿರಲಿಲ್ಲ ಸೊಪ್ಪು ಹಾಕುತ್ತಿರಲಿಲ್ಲ. ಪ್ರೇಕ್ಷಕರು ಬಯಸಿದ್ದನ್ನು ಕೊಡೋಣ ಎಂದು ನಗಿಸುವ ಡೈಲಾಗ್ ಹೇಳುತ್ತಿದ್ದರು. ನಾಟಕಕ್ಕೆ ಬಂದ ಯಾವ ಪ್ರೆಕ್ಷಕ ಬೇಸರ ಮಾಡಿಕೊಳ್ಳದೇ ನಕ್ಕು ನಲಿದು ಮನಸನ್ನು ಹಗುರ ಮಾಡಿಕೊಂಡು ರಂಗ ಮಂದಿರದಿಂದ ತೆರಳುಬೇಕು ಅನ್ನುವದು ನಮ್ಮ ನಾಟಕದ ಉದ್ದೇಶ ಆಗಿತ್ತು. ಯಾರೂ ಏನೇ ಅನ್ನಲಿ ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೇ ಕಾಯಕ ನಿಷ್ಟರಾಗಿ ದುಡಿಯುತ್ತಿದ್ದ ಕಲಾವಿದೆ ಅಂದ್ರೆ ನಿಜಕ್ಕೂ ಉಮಾಶ್ರೀ ಅವರೇ.
ಗಣೇಶ ಹಬ್ಬ ಮತ್ತು ರಾಜ್ಯೋತ್ಸವ ಬಂದ್ರೆ ನಮಗೆಲ್ಲಾ ಹಬ್ಬ. ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಕರ್ನಾಟಕದ ಬೇರೆ ಬೇರೆ ಊರುಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ಪಡೆದು ನಾಟ್ಕ ಮಾಡಿದ್ದೇವೆ. ಇಂದು ಅದೇ ಕನ್ನಡ ಸಂಸ್ಕೃತಿ ಇಲಾಖೆಯ ಮಂತ್ರಿ ಆಗಿರುವುದು ಹೆಮ್ಮೆಯ ವಿಷಯ. ಹಳೆಯದ್ದೆಲ್ಲಾ ನೆನಪಾದರೆ ತುಂಬಾ ಖುಷಿ ಆಗುತ್ತದೆ. ಕಷ್ಟದಿಂದ ಬಂದ ಹೆಣ್ಣುಮಗಳು ಈ ಎತ್ತರಕ್ಕೆ ಬೆಳೆಯಲು ಆಕೆಯ ಶ್ರಮ ಮತ್ತು ಕಮಿಟ್ಮೆಂಟ್ ಕಾರಣ. ಕರ್ನಾಟಕದಲ್ಲಿ ಹಾಸ್ಯ ಕಲಾವಿದೆಯರಲ್ಲಿ ಉಮಾಶ್ರೀ ನಂಬರ್ ಒನ್ ಎಂದು ಒಬ್ಬ ಹಾಸ್ಯ ಕಲಾವಿದನಾಗಿ ಹೇಳಲು ಹೆಮ್ಮೆ. ಹಾಸ್ಯ ಮಾತ್ರ ಅಲ್ಲ ಯಾವ ಪಾತ್ರ ಕೊಟ್ಟರೂ ಜೀವ ತುಂಬುವ ಅಭಿಜಾತ ಕಲಾವಿದೆ ಉಮಾಶ್ರೀ. ಇತ್ತೀಚಿಗೆ ಬಂದ ಸಂಗೊಳ್ಳಿ ರಾಯಣ್ಣ ಮತ್ತು ಭೀಮಾ ತೀರದಲ್ಲಿ ಅವರ ಅಭಿನಯ ನೋಡಿದ್ರೆ ಮೈಯೆಲ್ಲಾ ಜುಮ್ಮನದೇ ಇರುವುದಿಲ್ಲ. ಇನ್ನೊಬ್ಬ ಉಮಾಶ್ರೀ ರೀತಿಯ ಕಲಾವಿದೆಯನ್ನು ಕನ್ನಡ ನಾಡು ಕಾಣಲಿಲ್ಲ. ಮುಂದೆ ಹುಟ್ಟುತ್ತಾರ ನೋಡಬೇಕು.” ಎಂದು ಸರಿಗಮ ವಿಜಿಯವರು ಉಮಾಶ್ರೀ ಅವರ ಬಗ್ಗೆ ಮಾತಾಡುತ್ತಾ ಹೆಮ್ಮೆ ಪಡುತ್ತಾರೆ.
****
ಅಭಿನಯ ಅನ್ನುವುದು ತನ್ನ ಪರಿಧಿಯನ್ನು ದರ್ಶನದ ಮಟ್ಟಿಗೆ ಕೊಂಡೊಯ್ದಾಗ ಮಾತ್ರ ಅದು ಕೊಡಬೇಕಾದ ಅನುಭವವನ್ನು ಎದುರಿಗಿರುವ ರಸಿಕರಿಗೆ ಕೊಡುತ್ತದೆ. ಇಲ್ಲವೇ ಗುರಿಯಿಲ್ಲದೇ ಸುಮ್ಮನೆ ನಡೆಯುವ ಒಂದು ಆಟ ಅಷ್ಟೇ. ಜನಪದರ ಅನುಭವ ಲೋಕವೂ ಹೀಗೆ. ಬದುಕು ತನಗೆ ಕೊಟ್ಟ ಬಹಳ ದೊಡ್ಡ ಲೋಕಾನುಭವವನ್ನು ಅಭಿವ್ಯಕ್ತಿಸಿದ್ದು ಮತ್ತೆ ಮತ್ತೆ ಬದಲಾಗಬಹುದಾದ ಟೆಕ್ಸ್ಟ್ ಗಳಿಂದಲೇ. ರಂಗಭೂಮಿಯೂ ಹೀಗೆ ಪ್ರಯೋಗದಿಂದ ಪ್ರಯೋಗಕ್ಕೆ ಬದಲಾಗುವ ಟೆಕ್ಸ್ಟ್. ಆದರೆ ಅಭಿನಯ ಮತ್ತು ಪ್ರಸ್ತುತಿಯಲ್ಲಿ ಬದಲಾಗುವ ಸಾಧ್ಯತೆಗಳಿದ್ದರೂ ಅದರ ಸ್ಕ್ರಿಪ್ಟ್ ಮಾತ್ರ ಬದಲಾಗುತ್ತಿರಲಿಲ್ಲ ಹವ್ಯಾಸಿ ಮತ್ತು ಪ್ರಾಯೋಗಿಕ ನಾಟಕಗಳಲ್ಲಿ. ಆದರೆ ನಗೆ ನಾಟಕಗಳು ಮತ್ತು ಕಂಪನಿ ನಾಟಕಗಳಲ್ಲಿ ಪರಯೋಗದಿಂದ ಪ್ರಯೋಗಗಕ್ಕೆ ಸ್ಕ್ರಿಪ್ಟ್ ಕೂಡಾ ರಂಗದ ಮೇಲೆ ಬದಾಗಿ ಬಿಡುವ ಸಾಧ್ಯತೆ ಹೆಚ್ಚು. ಅದು ಆ ಕ್ಷಣ ಪ್ರೇಕ್ಷಕ ಪ್ರಭು ಒತ್ತಾಯಿಸುವ ಮತ್ತು ನಾಟ್ಕ ನಡೆಯುವ ವಾತಾವರಣವನ್ನು ಅವಲಂಭಿಸಿರುತ್ತದೆ. ಒಂದು ಬರಹಕ್ಕೆ ಈ ಬಗೆಯ ನಾಟಕಗಳು ನಿಷ್ಠ ಆಗಿರುವದಿಲ್ಲ ಎನ್ನುವುದನ್ನು ರಂಗ ಪರಂಪರೆ ತೋರಿದೆ. ಈ ರೀತಿಯ ಸಾಮಾಜಿಕ ನಗೆ ನಾಟಕ ಪ್ರಯೋಗಳು ಜನಪದದಂತೆ. ಇವಕ್ಕೆ ಸದಾ ಹೊಸದಾಗಲು ಚಲನ ಶೀಲತೆ ಉಂಟಾಗುವದು ಕಲಾವಿದರಿಂದ. ರಂಗದ ಮೇಲೆ ಒಬ್ಬ ಕಲಾವಿದನಿಂದ ಕಾಣುವ ಟೆಕ್ಸ್ಟ್ ಬರಹವನ್ನೂ ಮೀರಿದ ಶಕ್ತಿಯಾಗಿ ನಿಂತು ಬಿಡುತ್ತದೆ. ಎಷ್ಟೋ ಸಲ ನಾಟಕದಲ್ಲಿ ಬರವಣಿಗೆ ತನ್ನ ಮೂಲ ರೂಪವನ್ನು ರಂಗದ ಮೇಲೆ ಕಳೆದು ಕೊಂಡುಬಿಡುತ್ತದೆ. ಒಬ್ಬ ಕಲಾವಿದ ನಿರ್ದೇಶಕನನ್ನು ಮತ್ತು ನಾಟಕಕಾರರನ್ನು ಮೀರಿ ಕಲಾವಿದ ಇನ್ನೊಂದು ಲೋಕವನ್ನೇ ರಂಗದ ಮೇಲೆ ಸೃಷ್ಟಿಸಿಬಿಡುತ್ತಾನೆ. ಉಮಾಶ್ರೀ ಅವರೂ ಕೂಡ ಹೀಗೆ ರಂಗಪಟ್ಯಗಳನ್ನೂ ವಿಸ್ತರಿಸಲು ತನ್ನ ವ್ಯಕ್ತಿತ್ವ ಮತ್ತು ಅನುಭವ ಲೋಕವನ್ನು ಜೊತೆಗೆ ತಂದುಕೊಂಡುಬಿಡುತ್ತಾರೆ. ಆಗ ನಾಟಕ ಕೃತಿಯ ಅರ್ಥವೂ ಕೂಡ ತನ್ನ ಪರಿಧಿಯನ್ನು ಹಿಗ್ಗಿಸಿಕೊಂಡು ಬಿಡುತ್ತದೆ. ಒಮ್ಮೊಮ್ಮೆ ಕುಗ್ಗುವ ಅಪಾಯಗಳೂ ಉಂಟು. ಈ ರೀತಿ ಕುಗ್ಗಿದ್ದಕ್ಕೂ ರಂಗ ಚರಿತ್ರೆಯಲ್ಲಿ ಸಾಕಷ್ಟು ಉದಾಹರಣೆಗಳು ಉಂಟು. ಹೀಗೆ ಪ್ರಯೋಗದಿಂದ ಪ್ರಯೋಗಕ್ಕೆ ಹೊಸದಾಗಿ ಬೆಳೆದ ಹೊಸ ಹೊಸ ರೂಪಗಳನ್ನು ಪಡೆದ ನಾಟಕ ಸಂಸಾರದಲ್ಲಿ ಸರಿಗಮ. ಉಮಾಶ್ರೀ ಅವರು ನಾಟಕದಲ್ಲಿ ಸ್ಪಾಂಟೇನಿಯಸ್ ಆಗಿ ಬೆಳೆಸುತ್ತಿದ್ದ ಸಂಭಾಷಣೆಗಳು ಮತ್ತು ದೃಶ್ಯಗಳು ಜನಪದದಂತೆ ಬೆಳೆದವುಗಳು. ಬದುಕು ಕಟ್ಟಿಕೊಳ್ಳುವ ಪ್ರತಿಯೊಬ್ಬ ಮಹತ್ವಾಕಾಂಕ್ಷಿಯೂ ಲೋಕವನ್ನು ಸೂಕ್ಷ್ಮವಾಗಿ ಗಮನಿಸಿ ಲೋಕದಲ್ಲಿ ಕಂಡದ್ದನ್ನು ಕಲಾಕೃತಿ ಹೀಗೆಯೇ ಮಾಡುತ್ತಾನೆ ಅನ್ನೋದು ಕೂಡ ಸತ್ಯ. ಕವಿ ಕಲಾವಿದ ಪ್ರತಿಯೊಬ್ಬನೂ ಆಕೃತಿಯನ್ನು ಕಲಾಕೃತಿಯನ್ನಾಗಿ ಮಾಡುವುದು ಈ ಕ್ರಮದಿಂದಲೇ ಅನ್ನುವುದು ನನ್ನ ನಂಬಿಕೆ







Umashree avarige avare saati… obba naija kalaavide.. sahaja abhinaya avarige jeevana kalisikotta paata annisitte… Amma u r great..!!!!
ಅದ್ಭುತವಾದ ಬರಹ,
ಒಬ್ಬ ಪ್ರತಿಭಾನ್ವಿತ ಕಲಾವಿದೆಯ ಜೀವನದ ಪುಟಗಳನ್ನು ದಾಖಲಿಸುತ್ತಿರುವ ನಿನ್ಮ ಕಾರ್ಯ ಶ್ಲಾಘನೀಯವಾದದ್ದು ಸರ್.
ಉಮಾಶ್ರಿಯವರಂತಹ ಒಬ್ಬ ಶ್ರೇಷದಟ ಕಲಾವಿದೆ ಬೇರೋಬ್ಬರಿಲ್ಲ. ಅವರು ಹಾಸ್ಯಕ್ಕು ಸೈ ದುಖ:ಕ್ಕು ಸೈ ಪೋಷಕ ಪಾತ್ರಕ್ಕು ಸೈ, ಅವರಲ್ಲಿ ಕಲೆಯು ಕಲಾತ್ಮಕವಾಗಿಯೇ ಮನೆಮಾಡಿಕೊಂಡಿದೆ.
ಅವರ ಹಾಸ್ಯಮಯವಾದ ಚಿತ್ರ ಕೋತಿಗಳು ಸಾರ್ ಕೋತಿಗಳು ಚಿತ್ರದಲ್ಲಿ ದೆವ್ವದ ಪಾತ್ರ ನೋಡಿ ಹೃದಯಹುಣ್ಣಾಗುವಂತೆ ನಕ್ಕಿದ್ದು ಮರೆಯೋಕಾಗಲ್ಲ ಇದೆ ಹಾಸ್ಯವನ್ನು ಮಕ್ಕಳಿಗೂ ಉಣಿಸಿರೋದು ನಾನು. ಹಾಗೆಯೇ ಪುಟ್ನಂಜ ಪಾತ್ರದ ಪಾತ್ರವನ್ನು ಬೇರೆಯಾರಿಗೂ ಮಾಡಲು ಸಾದ್ಯವೇ ಇಲ್ಲ ಅನ್ನೊವಷ್ಟು ತಲ್ಲಿನತೆಯಿಂದ ಅಭಿನಯಿಸಿದ್ದಾರೆ, ಹಾಗೆಯೆ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಂತು ಅವರ ಅಭಿನಯ ಸೂಪರ್ಬ. ನಾನು ಆ ಚಿತ್ರ ನೋಡೋಕ ಹೋದಾಗ ಶಾಲೆಯ ಮಕ್ಕಳು ನನ್ ಮುಂದೆ ಕೂತಿದ್ರು ಅವರು ಉಮಾಶ್ರಿಯವರಕುರಿತು ಅಂದ ಮಾತು ಇನ್ನು ನೆನಪಿದೆ ಅವರ ಅಭಿನಯಕ್ಕೆ ಎಷ್ಟು ಶಕ್ತಿ ಇದೆ ಅನ್ನೊದು ಅರಿವಾಗತ್ತೆ. ಕಡಿಮೆಯಂದರೆ ಹತ್ತನೇತರಗತಿಯ ಹುಡುಗಿ ಇರಬೇಕು ಉಮಾಶ್ರಿಯವರು ಬೆನ್ನಮೇಲೆ ಬೀಸುಕಲ್ಲನ್ನು ಹೊತ್ತುಕೊಂಡು ನಿಂತು ಆಡುವ ಮಾತುಗಳನ್ನು ಅವರ ಅಭಿನಯವನ್ನು ಭಾವವನ್ನು ನೋಡಿ ಆ ಹುಡುಗಿ ಅಳೋಕೆ ಶುತುಮಾಡಿದ್ಲು ಇದು ನಾನು ಅವರ ಅಭಿನಯ ನೋಡುಗರ ಮನವನ್ನು ಹೊಕ್ಕುನಿಲ್ಲುತ್ತದೆ ಅನ್ನೊದಕ್ಕೆ ಕಣ್ಣಾರೆ ಕಂಡ ಸಾಕ್ಷಿ.
ತೆರೆಯಮೇಲಿರುವ ತಾರೆ
ನಿಜಬದುಕಿನಲೂ ತಾವರೆ
ನಗಿಸುವ ಚತುರೆ
ನಿಮಗಿದೋ ನ್ನದೊಂದು ಸೆಲ್ಯೂಟ್ ಅಮ್ಮಾವರೇ.
ಹ್ರದಯ ಸ್ಪಂದನ ಲೇಖನ.
ಸೂಫರ್ ಸರ್
Madam is great actress n also great politician.god bless u madam
Great…*
ಉಮಾಶ್ರೀಗೆ ಉಮಾಶ್ರೀಯೇ ಸಾಟಿ.
ಅನುಭವದ ಯೌವನ ಪಾತ್ರ
ಸ್ವಾಭಿಮಾನದ ದ್ವಂದ್ವ ಸಂಭಾಷಣೆ ಪಾತ್ರ
ಗೋಲಮಾಲ್ ನ ಹಾಸ್ಯ ಪಾತ್ರ
ತುಂಬಿದ ಮನೆಯ ತಾಯಿ ಪಾತ್ರ
ಪುಟ್ನಂಜ ದ ಪುಟ್ಮಲ್ಲಿ ಪಾತ್ರ
ಗುಲಾಬಿ ಟಾಕಿಸ್ ನ ಗುಲಾಬಿ ಪಾತ್ರ ಇವರ ನಟನೆಯ ಬೆರಳೆಣಿಕೆ ಚಿತ್ರಗಳ ಉದಾಹರಣೆ ಮಾತ್ರ.
ಅವರ ನಟನೆಯ ಮ್ಯಾನರಿಸಂ ಬೇರಯವರಿಗೆ ಇದುವರೆಗೆ ಬಂದಿಲ್ಲ ಬರುವುದು ಇಲ್ಲ.
ಚಿತ್ರರಂಗ ಮತ್ತು ರಂಗಭೂಮಿಗೆ ಇವರ ಸೇವೆ ಇನ್ನೂ ಬೇಕಾಗಿದೆ.
ರಘುನಂದನ್ ರವರೆ ನಿಮಗೆ ಅಭಿಮದನೆಗಳು. ಉಮಾಶ್ರೀ ರವರ ಜೊತೆಗಿನ ಇನ್ನೂ ಇತರರನ್ನು ಸಂದರ್ಶಿಸಿ ಬರೆಯಿರಿ.
Lekhana adbhutavagide Avara bbaduku innoo adbhutavagide. Barahakke sampoornavagi sigalaradu avara badukinante.