
ಡಾ ಟಿ ಗೋವಿಂದರಾಜು
ಕನ್ನಡದ ಸಂದರ್ಭದಲ್ಲಿ, ಅಪವಾದಗಳನ್ನು ಹೊರತುಪಡಿಸಿ ಮಹಿಳಾ ಸಾಹಿತಿಗಳನ್ನು ಗಂಭೀರವಾಗಿ ಓದುವುದು, ವಿಮರ್ಶೆಗೆ ತೆಗೆದುಕೊಳ್ಳುವುದು ತೀರಾ ಅಪರೂಪ. ಅದೂ, ‘ಜನಪ್ರಿಯ’ ಬರಹಗಾರ್ತಿ ಎಂಬ ಹಣೆ ಪಟ್ಟಿ ಅಡಿ ಬಂದರಂತೂ ಮುಗಿಯಿತು. ಅರವತ್ತು-ಎಪ್ಪತ್ತರ ದಶಕದಲ್ಲಂತೂ ಕನ್ನಡದಲ್ಲಿ ಕಾದಂಬರಿಕಾರ್ತಿಯರ ದೊಡ್ಡ ದಂಡೇ ಕಾಣಿಸಿಕೊಂಡರೂ, ಸಾಹಿತ್ಯಿಕ ನೆಲೆಯಲ್ಲಿ ಮಾನ್ಯರಾದವರು ಬೆರೆಳೆಣಿಕೆಯಲ್ಲಷ್ಟೇ. ಕೃತಿಯೊಂದು ತನ್ನ ಉತ್ತಮ ಗುಣಗಳಿಂದ ‘ಜನಪ್ರಿಯ’ ಆದರೆ ತಪ್ಪೇನೂ ಅಲ್ಲ; ಜನಪ್ರಿಯ ಲೇಖಕಿಯರನ್ನೆಲ್ಲಾ ಕೇವಲ ‘ಜನರಂಜನೆ’ಯ ಬರಹಗಾರರ ಗುಂಪಿಗೆ ಸೇರಿಸುವ ತಪ್ಪು ಮಾಡಬಾರದಲ್ಲವೇ?
ಕೃತಿಯೊಂದನ್ನು ಕೇವಲ ಸಾಹಿತ್ಯಕ ವಿಮರ್ಶಾ ಮಾನದಂಡದಲ್ಲಿ ಮೌಲ್ಯಮಾಪನಕ್ಕೊಳಪಡಿಸುವ ಪರಿಪಾಠ ಹೆಚ್ಚಾದದ್ದು ಇದಕ್ಕೆ ಮುಖ್ಯ ಕಾರಣ ಎನ್ನಬಹುದು. ಯಾವುದೇ ಸಾಹಿತ್ಯ ಕೃತಿ ಕೇವಲ ವಿಮರ್ಶೆಯ ಅಳತೆಗೋಲಿಗೆ ತಕ್ಕಂತೆ ಇದ್ದಾಗಲಷ್ಟೇ ಅದಕ್ಕೆ ಮಾನ್ಯತೆ ಇರಬೇಕೆ? ಸಾಮಾಜಿಕ, ಚಾರಿತ್ರಿಕ, ಸಾಂಸ್ಕೃತಿಕ ನೆಲೆಗಳಲ್ಲಿ ಬೇರೆ ಏನನ್ನೋ ವಿಶೇಷವಾದುದನ್ನು ಹೇಳುತ್ತಿರುವಾಗಲೂ ಅದಕ್ಕೆ ‘ಬೆಲೆ’, ‘ಗಮನ’ ಕೊಡಬಾರದೇ?

ಪ್ರಕಟಗೊಳ್ಳುವ ಎಲ್ಲಾ ಕೃತಿಗಳನ್ನು ಎಲ್ಲರೂ ಗಮನಿಸಲು, ಓದಲು ಆಗುವುದಿಲ್ಲ, ನಿಜ. ‘ಫ್ರಮ್ ದ ಹಾರ್ಸ್ ಮೌತ್’ ಎಂಬಂತೆ ಪ್ರತಿಷ್ಠಿತರು ಯಾವುದಾದರೂ ಕೃತಿ, ಲೇಖಕರ ಬಗ್ಗೆ ಒಂದು ಮಾತು ಹೇಳಿದರೂ ನೂರಾರು ಜನ ಸಾಹಿತ್ಯಾಸಕ್ತರ ಗಮನ, ಓದು ಅತ್ತ ಕಡೆ ಹರಿಯುತ್ತದೆ. ಹೀಗೆ ಗುರುತಿಸಿ ಹೇಳುವವರ ಕಣ್ಣಿಗೆ ಬೀಳಲಾರದ ಅಪ್ರಸಿದ್ಧ ಲೇಖಕ ಅದೆಷ್ಟೇ ವಿಭಿನ್ನ ಮೌಲಿಕ ಕೃತಿ ರಚಿಸಿ, ಶ್ರಮ ಪಟ್ಟು ಪ್ರಕಟಿಸಿದ್ದರೂ ಅದು ಸಾರ್ವಜನಿಕರ ಗಮನಕ್ಕೇ ಬರುವುದಿಲ್ಲ. ಎಷ್ಟೋ ಬಾರಿ ಉತ್ತಮ ಕೃತಿಗಳೂ ಪತ್ರಿಕೆಗಳ ಸಾದರ ಸ್ವೀಕಾರ- ಪರಿಚಯ ಕಾಲಂನಲ್ಲಿಯೂ ಲಿಸ್ಟ್ ಆಗದೇ ಹೋಗಿಬಿಡುತ್ತವೆ. ಬದುಕಿದ್ದಾಗ ಮಾನ್ಯರಾಗದ ಕೆಲವು ಲೇಖಕರಿಗೆ ‘ಜೀವ’ ಬಂದದ್ದು ಅವರ ಕೃತಿಗಳು ಫುಟ್ಪಾತ್ ಅಂಗಡಿಯಲ್ಲಿ ತಬ್ಬಲಿ ಮಗುವಂತೆ ಬಿದ್ದು, ಕೈ ಕಾಲು ಹರಿದು ಯಾರೋ ಸಹೃದಯನ ಕಣ್ಣಿಗೆ ಬಿದ್ದಾಗಲೇ.
ತೊಂಬತ್ತರ ದಶಕದ ಆದಿಯಲ್ಲೊಂದು ದಿನ ಬೆಂಗಳೂರಿನ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ಯಾರದೋ ಕೃತಿ ಬಿಡುಗಡೆ ಸಮಾರಂಭ; ಪ್ರಸಿದ್ಧರಾದ ಪ್ರೊ. ಜಿ.ಎಸ್.ಎಸ್. ಮೊದಲಾಗಿ ಆ ಹೊತ್ತಿನ ಹಿರಿ-ಕಿರಿಯ ಪ್ರಾಧ್ಯಾಪಕರು, ವಿಮರ್ಶಕರು, ಲೇಖಕರನೇಕರು ಅಲ್ಲಿ ಸಮಾಗಮಿಸಿದ್ದರು. ಹೊಸ ಕೃತಿಯ ಬಿಡುಗಡೆ ಕಾರ್ಯಕ್ರಮ ಎಂದರೆ ಹೊಸ ಜೀವದ ಸಂಭ್ರಮದ ಸ್ವಾಗತ ಸಮಾರಂಭ ಇದ್ದಂತೆ. ‘ಕನ್ನಡದಲ್ಲಿ ಈಚೆಗೆ ಹೊಸ ಬಗೆಯ ಕಾವ್ಯವೇ ಹುಟ್ಟುತ್ತಿಲ್ಲ; ಅಂತಹದ್ದರಲ್ಲಿ ಈ ಕೃತಿ ಗಮನ ಸೆಳೆಯುತ್ತದೆ. ಆಪ್ತರಾದ ‘ಶ್ರೀ’ಯವರು ಈ ಬಗ್ಗೆ ನನಗೆ ಹೇಳದಿದ್ದರೆ, ನಾನೂ ಇದರ ಓದಿನಿಂದ ವಂಚಿತನಾಗುತ್ತಿದ್ದೆ’ ಎಂದು ಪ್ರಸಿದ್ಧ ವಿಮರ್ಶಕರೊಬ್ಬರು ಆ ಕೃತಿ ತೋರಿಸಿ ಸಭೆಗೆ ಅರುಹಿದರು.
ಪ್ರೇಕ್ಷಕರ ಸಾಲಿನಲ್ಲಿ ಹಿಂಬದಿ ಕುಳಿತಿದ್ದ ನನಗೆ ‘ಪಿಚ್’ ಅನ್ನಿಸಿತು. ಸಮಯ ನೋಡಿ, ಎದ್ದು ನಿಂತು ಹೇಳಿಬಿಟ್ಟೆ: ‘ಹೊಸ ಕಾವ್ಯ ಹುಟ್ಟುತ್ತಿಲ್ಲ’ ಎಂದು ಎಲ್ಲರೂ ಹೇಳುತ್ತಿದ್ದೀರಿ; ಆದರೆ ಪ್ರಕಟಿತ ಎಲ್ಲಾ ಕೃತಿಗಳನ್ನು ಸ್ವತಃ ಗಮನಿಸುವವಕಾಶ ಇದ್ದಂತಿಲ್ಲ; ಆ ಇನ್ನೊಬ್ಬ ಆಪ್ತರು ಹೇಳಿದ್ದರಿಂದಷ್ಟೇ ಈ ಕೃತಿ ಗಮನಕ್ಕೆ ಬಂತು ಎನ್ನುವುದಾದರೆ, ಆ ‘ಆಪ್ತ’ರೂ ಹೇಳದ ಎಷ್ಟೋ ಕೃತಿಗಳು ತಮ್ಮಂತಹ ಗಣ್ಯರ ಗಮನಕ್ಕೇ ಬಾರದೇ ಹೋಗಿಬಿಡುತ್ತವೆಯಲ್ಲವೇ? ನನ್ನಂತಹ ಅಪ್ರಸಿದ್ಧರ ಬರಹಗಳನ್ನು ಗಮನಿಸುವವರು ಯಾರು?’
ಎಲ್ಲರೂ ಮುಖ ಮುಖ ನೋಡಿಕೊಂಡರು. ಕೃತಿಯೊಂದರ ವಿಶೇಷತೆ ಮುಂದೆಂದೋ, ಎಲ್ಲಿಯೋ, ಯಾರಿಂದಲೋ ಸಾರ್ವಜನಿಕರ ಮುಂದೆ ಬಹಿರಂಗಗೊಳ್ಳಬಹುದು; ಮಾನ್ಯವಾಗಬಹುದು (ಆಗದೆಯೂ ಇರಬಹುದು); ಆದರೆ, ಕರ್ತೃವಿನ ಕಾಲದಲ್ಲೇ- ಕಣ್ಣೆದುರಲ್ಲೇ ಆದರೆ ಅದಕ್ಕೊಂದು ಸಾರ್ಥಕ್ಯ ಒದಗುತ್ತದೆ; ಲೇಖಕನಿಗೂ ನ್ಯಾಯ ದೊರೆಯುತ್ತದೆ.
ಹಿರಿಯ ಕಾದಂಬರಿಕಾರ್ತಿ, ‘ಬೇಡಿ ಬಂದವಳು’ ಕೃತಿಯ ಲೇಖಕಿ ಶ್ರೀಮತಿ ನೀಳಾದೇವಿ ಅವರೂ ಸ್ವತಃ ಊಹಿಸಲಾರದ, ನಿರೀಕ್ಷಿಸಿರದ ಸಂಭ್ರಮ ಅವರ ಬದುಕಿನ ಈ ಇಳೀ ವಯಸ್ಸಿನಲ್ಲಿ ಬಂದೊದಗಿದೆ. ಇದು ಸಾಧ್ಯವಾದದ್ದು ದೂರದ ಪೋಲೆಂಡಿನ ಭಾರತ ಶಾಸ್ತ್ರಜ್ಞ , ಅಧ್ಯಯನಕಾರ ಉಲ್ರಿಷ್ ತಿಮ್ ಕ್ರಾಗ್ ಅವರು ನಮ್ಮ ಹಿರಿಯ ವಿದ್ವಾಂಸ ಪ್ರೊ. ವಿವೇಕ ರೈ ಅವರನ್ನು ಸಂಪರ್ಕಿಸಿ ಕನ್ನಡದಲ್ಲೊಂದು ಇಂತಹ ಮಹತ್ವದ ಕೃತಿ ಇದೆ ಎಂದು ಹೇಳಿದಾಗ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರದ ಹುಡುಕಾಟಕ್ಕಿಳಿದ ಮಂಗಳೂರಿನ ಪ್ರೊ| ರೈ ಅವರಿಗೆ ಬೆಂಗಳೂರಿನ ಲೇಖಕಿಯೂ ಸಿಕ್ಕರು; ಅಂಗಡಿಗಳಲ್ಲಿ ‘ಅಲಭ್ಯ’ ಎನಿಸಿದ್ದ ಕೃತಿಯೂ ಸಿಕ್ಕಿತು; ಅದರ ಚರಿತ್ರೆ ಬಿಚ್ಚಿಕೊಂಡಿತು. ಪ್ರೊ| ರೈ ಅವರಿಗೆ ಈ ಅವಕಾಶ ಒದಗಿದ್ದರಿಂದಲೇ ಲೇಖಕಿಗೆ ಅವರ ೮೯ನೇ ವಯಸಿನಲ್ಲಿ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟ ಸಂಸ್ಮರಣ ಪ್ರಶಸ್ತಿ -೨೦೨೧ ಹೆಸರಿನ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಯೂ ಹುಡುಕಿ ಬಂದಿತು. ‘ಬೇಡಿ ಬಂದವಳು’ ಕಾದಂಬರಿಗೆ ‘ಬೇಡದೆಯೆ ಬಂದ’ ದೊಡ್ಡ ಗೌರವ ಇದು. ಈ ಪ್ರಕ್ರಿಯೆಯಲ್ಲಿ ನನ್ನದೂ ಒಂದು ‘ಸಣ್ಣ’ ‘ಪಾತ್ರ’ವಿದೆ ಎಂಬುದೇ ನನ್ನ ಹೆಮ್ಮೆ.

ಶ್ರೀಮತಿ ನೀಳಾದೇವಿಯವರನ್ನು ದಶಕಗಳ ಹಿಂದೆ ಒಂದೆರಡು ಬಾರಿ ಸಾಹಿತ್ಯ ಪರಿಷತ್ತು ಗ್ರಂಥಾಲಯದಲ್ಲಿ ಕಂಡಿದ್ದೆ; ಮಾತನಾಡಿದ್ದೆ. ಅವರು ಮಕ್ಕಳ ಕೃತಿಗಳನ್ನೂ ರಚಿಸಿದ್ದಾರೆ. ಅದೆಲ್ಲವೂ ನೆನಪಿಗೆ ಬಂದಿದೆ. ‘ಹೇಗಾದರೂ ಮಾಡಿ ನನಗೆ ಈ ಪುಸ್ತಕ ತಕ್ಷಣವೇ ಒದಗಿಸಿ ಕೊಡಿ’ ಎಂದು ‘ಗುರು’ಗಳು ಮತ್ತೆ ಮತ್ತೆ ಹೇಳಿದ್ದು ನನಗೊಂದು ವಿಶ್ವಾಸದ -ಬಹು ತುರ್ತಿನ ಆಣತಿಯಾಗಿತ್ತು.
ಕನ್ನಡದ ಕೃತಿಯೊಂದಕ್ಕೆ ಹೀಗೊಂದು ಜಾಗತಿಕ, ಚಾರಿತ್ರಿಕ ಮಹತ್ವ ಇದೆ ಎಂದಾಗ ‘ಹನುಮನಂತೆ’ಯೇ ನಾನು ಸಂಭಾವ್ಯ ಎಡೆಗಳಲ್ಲಿ ಹುಡುಕಿದ್ದಾಯಿತು; ಹಲವರನ್ನು ಕೇಳಿದ್ದಾಯಿತು. ಕೊನೆಗೆ ‘ಅನುಮತಿ ಕೊಟ್ಟರೆ, ಲೇಖಕಿಯ ಮನೆಯನ್ನೇ ಹುಡುಕಿ ಕೃತಿಗಾಗಿ ವಿನಂತಿಸುತ್ತೇನೆ’- ಎಂದೆ; ರೈ ಅವರು ‘ಇಳಿ ವಯಸ್ಸಿನಲ್ಲಿ ಅವರಿಗೇಕೆ ತೊಂದರೆ’ ಎಂದರೂ, ಮತ್ತೆಲ್ಲೂ ತಕ್ಷಣಕ್ಕೆ ಸಿಗಲಾರದು ಅನ್ನಿಸಿದ್ದರಿಂದ ಅನಿವಾರ್ಯವಾಗಿ ಒಪ್ಪಿದರು. ಪರಿಚಿತ ಡಾ| ಸಂಧ್ಯಾರೆಡ್ಡಿ ಅವರಲ್ಲಿ ನಂಬರ್ ಸಿಗಬಹುದೆಂದು ಕೇಳಿದೆ; ಕೊಟ್ಟರು. ಲೇಖಕಿ ಜೊತೆ ಮಾತಾಡಿದೆ. ಅವರಿಗೆ ವಿಷಯದ ಮಹತ್ವ ಮನವರಿಕೆ ಮಾಡಿದೆ. ಅದು ಅವರಿಗೂ ಸಂಭ್ರಮದ್ದೆನಿಸಿತು.
ಕೋವಿಡ್ ಕಾರಣದಿಂದಾಗಿ ಯಾರಾರೋ ಮನೆಗೆ ಬರುವುದು ಅವರಿಗೆ ಆತಂಕದ್ದೆನಿಸಿದ್ದು ಮಾತಿನಲ್ಲಿ ಅರಿವಾಯಿತು. ‘ರಸ್ತೆಯಲ್ಲೇ ಗೇಟಿನ ಬಳಿ ನಿಲ್ಲುತ್ತೇನೆ; ನೀವು ದೂರದಿಂದ ಕೊಟ್ಟರಾಯಿತು’- ಎಂದು ಧೈರ್ಯ ತುಂಬಿದೆ. ಮಲ್ಲೇಶ್ವರದ ವಿಳಾಸ ಹೇಳಿದರು. ‘ತಕ್ಷಣ ಝೆರಾಕ್ಸ್ ಮಾಡಿಸಿ ಮೂಲ ಪುಸ್ತಕ ವಾಪಸ್ಸು ಕೊಟ್ಟುಬಿಡಿ; ನನ್ನಲ್ಲಿ ಬೇರೆ ಪ್ರತಿಗಳೇ ಇಲ್ಲ’ ಎಂದೂ ಪದೇ ಪದೇ ಎಚ್ಚರಿಸಿದರು. ರೈ ಅವರಿಗೂ ನಂಬರ್ ಕಳಿಸಿ, ‘ನೀವೂ ಒಮ್ಮೆ ಮಾತಾಡಿ; ಝೆರಾಕ್ಸ್ಗಿಂತ ಮೇಡಂ ಒಪ್ಪಿದರೆ ಹಣ ಕೊಟ್ಟೇ ಖರೀದಿಸಿ ನಿಮಗೆ ಕಳಿಸುತ್ತೇನೆ’ ಎಂದಿದ್ದೆ.
ಪ್ರೊ| ರೈ ಅವರಂತಹ ಹಿರಿಯ, ಸಂಭಾವಿತ ವಿದ್ವಾಂಸ ಸ್ವತಃ ಈ ಕೃತಿಯ ಮಹತ್ವದ ಬಗ್ಗೆ ಹೇಳಿದ್ದು ಕೇಳಿ ಲೇಖಕಿಯೂ ಆಂತರ್ಯದಲ್ಲಿ ಸಂಭ್ರಮಪಟ್ಟರೂ ಹೆಚ್ಚು ತೋರಿಸಿಕೊಳ್ಳದೇ ‘ಪುಸ್ತಕವನ್ನು ಅವರಿಗೆ ಕಳುಹಿಸಿ ಬಳಿಕ ನೀವೇ ವಾಪಸ್ಸು ಪಡೆದು ಕೊಡಬೇಕು’ ಎಂಬ ಷರತ್ತು ವಿಧಿsಸಿದ್ದಕ್ಕೂ ಸಧ್ಯ ಪುಸ್ತಕ ಸಿಕ್ಕರೆ ಸಾಕೆಂದು ಅದೆಲ್ಲಕ್ಕೂ ಒಪ್ಪಿದೆ. ಈ ಕಾದಂಬರಿ ಅದೇ ಹೆಸರಿನಲ್ಲಿ ಸಿನಿಮಾ ಆಗಿದ್ದು (೧೯೬೮) ನೆನಪಾಯಿತು. ಆದರೆ ಸಿನಿಮಾ ನೋಡಿರಲಿಲ್ಲ; ಕಾದಂಬರಿಯನ್ನೂ ಓದಿರಲಿಲ್ಲ. ಆ ಕಾಲದ ‘ವಿಮರ್ಶಾ ಪಾಠ’ಗಳನ್ನು ಕಲಿತ ನನ್ನಂತಹ ವಿದ್ಯಾರ್ಥಿಗಳು ಇಂಥಾ ಕಾದಂಬರಿಗಳನ್ನು ಓದಿ ಸಮಯ ‘ಹಾಳು’ ಮಾಡುವುದು ಬುದ್ಧಿವಂತಿಕೆಯದಾಗಿರಲಿಲ್ಲ.
ಈಗ ಇದನ್ನು ಓದಿಬಿಡಬೇಕೆಂದು, ಸಂಜೆ ಪುಸ್ತಕ ಕೈಗೆ ಸಿಕ್ಕು, ಬಸ್ನಲ್ಲಿ ಕೂತಕೂಡಲೇ ಓದತೊಡÀಗಿದೆ; ರಾತ್ರಿಯೂ ಬಹು ಹೊತ್ತು ಓದಿ, ಬೆಳಿಗ್ಗೆಯೂ ಮುಂದುವರೆಸಿ, ಮಧ್ಯಾಹ್ನದ ಹೊತ್ತಿಗೆ ಮುಗಿಸಿ, ಪ್ಯಾಕ್ ಮಾಡಿ, ಅಂಚೆ ಕಚೇರಿಗೆ ಹೋಗಿ ಸ್ಪೀಡ್ ಪೋಸ್ಟ್ನಲ್ಲಿ, ಕಳಿಸಿಯೇಬಿಟ್ಟೆ. ಪುಸ್ತಕ ಸಿಕ್ಕಿದ ಮೇಲೆ ನೀವೊಮ್ಮೆ ಲೇಖಕರಿಗೆ ಹೇಳಿಬಿಡಿ- ಎಂದಿದ್ದೆ. ಸರ್ ಮಾತಾಡಿದಾಗ ಲೇಖಕರಿಗೆ ಮತ್ತೂ ವಿಶ್ವಾಸ ಬೆಳೆದಿದೆ. ‘ಪುಸ್ತಕ ನೀವೇ ಇಟ್ಟುಕೊಳ್ಳಿ’ ಎಂದು ಒಪ್ಪಿದ್ದರಂತೆ. ರೈ ಅವರು ಈ ಮಾಹಿತಿ ನನಗೆ ನೀಡಿದಾಗ ನಾನೂ ನಿರಾಳವಾದೆ. ‘ಕೃತಿಯ ಬಗ್ಗೆ ನಿಮ್ಮ ತೌಲನಿಕ ಅಧ್ಯಯನದ ಮಾತುಗಳನ್ನು ಓದುವ ಕುತೂಹಲವಿದೆ, ಸರ್’, ಎಂದೂ ಹೇಳಿದ್ದೆ. ಮುಂದೆ, ಫೇಸ್ಬುಕ್ ಲೈವ್ನಲ್ಲಿ ಅದರ ಕೆಲ ಸಂಗತಿಗಳನ್ನು ಹಂಚಿಕೊAಡರು.
ಇದೊಂದು ಸ್ವಾಭಿಮಾನಿ ಮಹಿಳೆಯ ಕಥನ. ‘ಗೃಹಿಣಿ’ಯಾಗಲು ಎಲ್ಲಾ ಅರ್ಹತೆ, ಸಾಧ್ಯತೆಗಳಿದ್ದಾಗಲೂ ಸಾಂಪ್ರದಾಯಿಕವಾಗಿ ಪೂರ್ಣ ಅರ್ಥದಲ್ಲಿ ‘ಗಂಡ- ಮಕ್ಕಳನ್ನೊಳಗೊಂಡ’ ಗೃಹಿಣಿಯಾಗಿ ಬಾಳಲಾಗದವಳ ಕಥನ. ಒಂದು ರೀತಿ ರಾಮಾಯಣದ ಸೀತೆಯಂತೆ; ಅಲ್ಲಿ ಗಂಡ ಇದ್ದ; ಇದ್ದೂ ಇಲ್ಲದೇ ಇದ್ದ ಸಂಸಾರ ಆಕೆಯದು. ಇಲ್ಲಿ ಯಾರಾದರೂ ‘ಗಂಡ’ ಆಗಬಹುದಾಗಿದ್ದರೂ ತನ್ನದೇ ಕಾರಣಗಳಿಗಾಗಿ ಅವರೆಲ್ಲರನ್ನೂ ನಿರಾಕರಿಸಿಯೂ, ‘ಸಂಸಾರ’ ನಿರ್ವಹಣೆ ಮಾಡಿದವಳು ಈ ಕಥಾನಾಯಕಿ.
ಜಗತ್ತಿನ ‘ಮಾತಾಪಿತ’ರೆನಿಸಿ ಮಾನ್ಯರಾದ ಶಿವ-ಪಾರ್ವತಿಯರ ಪುರಾಣದಲ್ಲಾದರೂ ಇರುವುದೇನು! ಒಲಿದು ದಂಪತಿಗಳಾದರೂ ಪಾರ್ವತಿ, ಗಂಡನೊಡನೆ ನೆಮ್ಮದಿಯಾಗಿ ದಾಂಪತ್ಯ ಮಾಡಲಾಗದೇ ಮತ್ತೆ ಮತ್ತೆ ವಿಯೋಗಕ್ಕೆ ಒಳಗಾದದ್ದನ್ನೇ ಪುರಾಣಗಳು ಬಹು ಬಗೆಯಾಗಿ ಕಥಿಸುತ್ತವೆಯಲ್ಲ! ಈ ಭಾರತೀಯ ಪುರಾಣಗಳು ಕಥಿಸುವುದಾದರೂ ಏನನ್ನು? ಕಂಡಿರಿಸಿರುವುದಾದರೂ ಏನನ್ನು! ಸಂಯೋಗ- ವಿಯೋಗಗಳು ಜಗತ್ತಿನ ಸ್ತ್ರೀ ಸಂಕುಲದ ಬದುಕಿನಲ್ಲಿ ಸಾಮಾನ್ಯ ವಿದ್ಯಮಾನವೇ? ಹಾಗಿದ್ದರೆ, ಅವರು ಈ ಅನಿವಾರ್ಯತೆಗಳನ್ನು ಹೇಗೆ ನಿಭಾಯಿಸುತ್ತಾರೆ, ಬದುಕು ಕಂಡುಕೊಳ್ಳುತ್ತಾರೆ ಎಂಬುದೇ ಒಬ್ಬೊಬ್ಬರ ‘ಭಿನ್ನ’ ಕಥಾ ಮಾದರಿಗಳಾಗಿ ರೂಪುಗೊಂಡಿವೆ.
ಎಲ್ಲಿಯೂ ತಲೆಗೆ ಹೆಚ್ಚಿನ ಕೆಲಸಕೊಡದಂತೆ ಕುತೂಹಲದಿಂದ ಓದಿಸಿಕೊಂಡು ಹೋಗುವುದು ಈ ಕಾದಂಬರಿಯ ಮುಖ್ಯ ಗುಣ. ಕಥಾನಾಯಕಿಗೆ ಇರಬೇಕಾದುದೆಲ್ಲಾ ಇದೆ. ಆದರೆ, ಸಿಗಬೇಕಾದುದೇನೂ ಸಿಗಲಿಲ್ಲ. ಗುಡ್ಡದಿಂದ ಧುಮ್ಮಿಕ್ಕಿದ ನೀರು ಸುತ್ತೀ ಬಳಿಸಿ ಹರಿದೂ ಹರಿದೂ ಎಲ್ಲೋ ಒಂದು ಕಡೆ ನಿಂತು, ಕೊಳವಾಗಿ ಬದುಕು ಕಟ್ಟಿಕೊಳ್ಳುತ್ತೆ ಅನ್ನೋವಾಗ್ಗೆ ಮತ್ತೆತ್ತಲೋ ಜಾರಿ ಓಡಿಬಿಡುತ್ತೆ. ಹೀಗಾಗಿ ಕಥಾನಾಯಕಿಯ ‘ಆಯನ’ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತಿರುತ್ತೆ. ಒಂದು ರೀತಿ ‘ಪತ್ತೇದಾರಿ’ ಕಾದಂಬರಿಯಂತಹ ನಿರೂಪಣೆಯೂ ಇದೆ; ಇದಕ್ಕೆ ಪೂರಕವಾಗಿ ಅಲ್ಲಲ್ಲಿ ಕೆಲವು ‘ಸಸ್ಪೆನ್ಸ್’ ಅಂಶಗಳನ್ನೂ ಅಳವಡಿಸಲಾಗಿದೆ. ಮುಂದೇನಾದೀತು ಅನ್ನುವುದೇ ಹೆಚ್ಚಿನ ಕಥನವಾಗಿ ಬೆಳೆಯುತ್ತದೆ.
ಇದೊಂದು ವಿದೇಶಿ ಮೂಲದ ಕಥನ ಎನ್ನುವುದನ್ನೇ ಮರೆಸಿ, ೧೯ನೇ ಶತಮಾನದ ಆದಿ ಭಾಗದಲ್ಲಿ ಘಟಿಸಿದ, ಮೈಸೂರು ಭಾಗದ- ವಿಶೇಷವಾಗಿ ನಂಜನಗೂಡು ಪರಿಸರದ- ಗ್ರಾಮೀಣ ಚಿತ್ರಣವಿದ್ದಂತೆ ಸಹಜವಾಗಿದೆ. ಲೇಖಕಿ, ಆ ಭಾಗದಲ್ಲಿ ಸುತ್ತಾಡಿದ್ದರಂತೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟ ಪರಿಸರದ ಚಿತ್ರಣವೂ ಮನದಲ್ಲಿ ಉಳಿಯುತ್ತದೆ. ಆದರೆ, ಇದನ್ನೆಲ್ಲಾ ‘ಕತೆ’ಯಾಗಿಯೇ ಅನುಭವಿಸಬೇಕು; ಅಳತೆ ಪಟ್ಟಿ ಹಿಡಿಯಬಾರದು ಎಂಬುದು ಸಾಹಿತ್ಯದ ನಿಯಮ. ಆಂಜನೇಯ ಸಮುದ್ರ ಹಾರಿದ ಎಂಬುದು ಕಾವ್ಯ ಸತ್ಯ. ಹಾಗೇ, ಕಥಾನಾಯಕಿ ಬಹು ಎತ್ತರದ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ನೆತ್ತಿಯಿಂದ ಆ ಸಂಜೆಗತ್ತಲಲ್ಲಿ ಒಬ್ಬಳೇ ಇಳಿದು ನಡೆದು ಬಂದು ಅರ್ಚಕರ ಮನೆ ಸೇರಿದಳು ಎಂಬ ಸಾಹಸ ರಮ್ಯತೆಯನ್ನು ಕಥೆಯಾಗಿ ಒಪ್ಪಬೇಕು. ಅದು ಸಾಧ್ಯವೇ? ಅಸಂಖ್ಯ ಆನೆ, ಹುಲಿಯಂತಹ ವನ್ಯ ಜೀವಿಗಳಿರುವ ಆ ಕಾಡಿನಲ್ಲಿ ಒಂದೂ ಮದಗಜ ಎದುರಾಗಲಿಲ್ಲವೇ? ಎಂಬ ಪ್ರಶ್ನೆ ಬಂದರೂ ಕೇಳಬಾರದು (ನಾನು ಕುತೂಹಲಕ್ಕೆ ಲೇಖಕಿಯನ್ನು ಕೇಳಿಬಿಟ್ಟೆ; ‘ಓಹ್,ನಾನು ಆ ಬೆಟ್ಟಕ್ಕೆ ಹೋಗಿರಲಿಲ್ಲ’ ಎಂದರು). ತನ್ನ ಹತ್ತೊಂಬತ್ತನೇ ವಯಸ್ಸಿಗೇ (ಜನನ: ೧೯೩೨) ಇಂಗ್ಲಿಷ್ ಮೂಲದ ಕಾದಂಬರಿ ಓದಿ, ಇಪ್ಪತ್ತೆರಡನೇ ವಯಸ್ಸಿಗೇ ಅದನ್ನು ಕನ್ನಡದ ಕಾದಂಬರಿಯಾಗಿಸಿದ(ಪ್ರಕಟವಾದದ್ದು ತುಸು ತಡವಾಗಿ-೧೯೫೯ರಲ್ಲಿ) ಪ್ರೌಢಿಮೆ ಸಾಮಾನ್ಯದ್ದೇನಲ್ಲ. ಶಾಲೆಟ್ ಬ್ರಾಂಟೆಯ ‘ಜೇನ್ ಏರ್’ ಎಂಬ ಇಂಗ್ಲಿಷ್ ಕಾದಂಬರಿ ಕನ್ನಡದಲ್ಲಿ ‘ಬೇಡಿ ಬಂದವಳು’ ಆಯಿತು; ‘ಸುಧಾ’ದಲ್ಲಿ ಧಾರವಾಹಿಯಾಗಿ ಪ್ರಕಟವಾಗಿ, ಕನ್ನಡದಲ್ಲಿ ಓದುವಾಗ ಇದಾವುದೋ ಅನ್ಯ ದೇಸೀ ಮೂಲದ್ದು ಅನ್ನಿಸುವುದೇ ಇಲ್ಲ; ಇದು ಯುವ ಲೇಖಕಿಯ ಮೊದಲ ಬರಹ ಎಂದಾಗಲೀ, ಇನ್ನೊಂದರ ಪ್ರೇರಣೆ ಎಂಬ ಅನುಮಾನವಾಗಲೀ ಬರದಷ್ಟು ರೀತಿಯಲ್ಲಿ ಸ್ಥಳೀಯವಾಗಿ ಮರು ಹುಟ್ಟು ಪಡೆದಿದೆ. ಇದು ವಿದೇಶಿ ಮೂಲದ್ದು ಎಂಬುದು ಗೊತ್ತಾದಾಗ ಮಹಿಳೆಯ ಬದುಕು ವಿದೇಶದಲ್ಲೂ ಹೀಗೇ ಇದೆಯೇ ಎಂಬ ಅನುಕಂಪವೂ ಮೂಡುತ್ತದೆ; ಹಾಗೆಯೇ ಇಂಗ್ಲಿಷ್ ಪರಿಸರದಲ್ಲಿ ಇದು ಹೇಗೆ ಚಿತ್ರಿತ ಗೊಂಡಿರಬಹುದು ಎಂಬ ಕುತೂಹಲವೂ ಉಂಟಾಗುತ್ತದೆ.

ಪ್ರೊ. ರೈ ಹೇಳಿದ್ದರ ಪ್ರಕಾರ, ಇಂಗ್ಲಿಷ್ಮೂಲದ ಕೃತಿಯನ್ನು ಕನ್ನಡವು ಭಾರತೀಯ ಭಾಷೆಗಳಲ್ಲಿ ಎರಡನೆಯದಾಗಿ ತನ್ನದಾಗಿಸಿಕೊಳ್ಳುವ ಮೂಲಕ ಒಂದು ಜಾಗತಿಕ ದಾಖಲೆ ಮಾಡಿದಂತಾಗಿದೆ. ಜಗತ್ತಿನ ಅನೇಕ (ಸು ೫೭)ಭಾಷೆಗಳಲ್ಲಿಯೂ ಅನುವಾದವೋ ರೂಪಾಂತರವೋ, ಪ್ರೇರಣೆಯೋ ಆಗಿ ಅವತಾರ ತಾಳಿದೆಯಂತೆ. ಹಾಗಾದರೆ ಈ ಕೃತಿಯ ಜೀವ ದ್ರವ್ಯದ ತುಡಿತ, ಸೆಳೆತ ಏನು? ಬೇರೆ ಬೇರೆ ಪ್ರದೇಶ, ಸಂಸ್ಕೃತಿಗಳಲ್ಲಿ ಇದು ತನ್ನನ್ನು ಹೇಗೆ ಗುರುತಿಸಿಕೊಂಡಿದೆ? ಸಿನಿಮಾದಂತಹ ವಿಭಿನ್ನ ಮಾಧ್ಯಮದಲ್ಲಿ ಬಂದಾಗ ಅದರ ಪರಿಸ್ಥಿತಿ ಏನಾಗಿದೆ? ಇವೆಲ್ಲಾ ಸಾಮಾಜಿಕ, ಸಾಂಸ್ಕೃತಿಕ, ಕಲಾತ್ಮಕ ನೆಲೆಗಳಲ್ಲಿ ಒರೆಗೆ ಹಚ್ಚಿ ನೋಡಬೇಕಾದ ಸಂಗತಿಗಳು. ಪೋಲೆಂಡಿನ ಉಲ್ರಿಷ್ ತಿಮ್ ಕ್ರಾಗ್ ಅವರ ನೆರವಿನಲ್ಲಿ ನಮ್ಮ ಪ್ರೊ| ರೈ ಅವರು ಈ ಕೃತಿ ಕುರಿತು ತೌಲನಿಕ ಅಧ್ಯಯನವನ್ನು ಮಾಡುತ್ತಿದ್ದಾರೆ. ಕಳೆದ ಅರ್ಧ ಶತಮಾನದುದ್ದಕ್ಕೆ ಮರೆತೇ ಹೋದಂತಿದ್ದ ಈ ಕಾದಂಬರಿಯ ಜಾಗತಿಕ, ಚಾರಿತ್ರಿಕ ಹಾಗೂ ಸಾಹಿತ್ಯಿಕ ಮಹತ್ವವನ್ನು ಶೋಧಿಸ ಹೊರಟಿದ್ದಾರೆ.
ಕೃತಿಯ ಶೀರ್ಷಿಕೆ ‘ಬೇಡಿ ಬಂದವಳು’ ಸಹ ಗಮನಾರ್ಹ. ತಬ್ಬಲಿಯಾಗಿ ಬೆಳೆದ ಆಕೆ ಬದುಕಿಗಾಗಿ ಯಾರನ್ನಾದರೂ ಆಶ್ರಯಿಸಬೇಕೆಂದು ಹೊರಟವಳು. ಅವಳಿಗೆ ಆಸರೆಯಾಗಿ ತಮ್ಮ ಬದುಕನ್ನೂ ಕಟ್ಟಿಕೊಳ್ಳಬಹುದೆಂದು ಕೆಲವರು ಮುಂದಾದರೂ ಆ ಒಂದೊಂದನ್ನೂ ಇವಳೇ ನಿರಾಕರಿಸುತ್ತಾಳೆ; ವಿಶೇಷವೆಂದರೆ, ಕೊನೆಯಲ್ಲಿ ವಿವಾಹದ ಚಿಂತೆಯನ್ನೇ ದೂರ ಮಾಡಿ, ತುಂಬಾ ಅಸಹಾಯಕ ಸ್ಥಿತಿಯಲ್ಲಿದ್ದ ಪರಿಚಿತನ ಕೇವಲ ಸೇವೆಗಾಗಿ ದಾದಿಯಂತೆ ಇರಲು ತೀರ್ಮಾನಿಸುತ್ತಾಳೆ. ‘ಆಶ್ರಯ ಬೇಡಿ ಬಂದವಳು’ ಉದಾರವಾಗಿ ಇನ್ನೊಬ್ಬರಿಗೆ ಸ್ವತ: ‘ಆಸರೆ’ಯಾಗಿ ನಿಲ್ಲುತ್ತಾಳೆ. ಕೊನೆಯಲ್ಲಿ ಆಕೆಯನ್ನು ಹುಡುಕಿ ಬಂದ ಅವಳ ಅವಳ ಕುಟುಂಬದ ಅಪಾರ ಆಸ್ತಿಯನ್ನೂ ತ್ಯಾಗ ಮಾಡಿ ನಿಜದ ಅರ್ಥದಲ್ಲಿ ತ್ಯಾಗಮಯಿ ಅನ್ನಿಸಿಕೊಳ್ಳುತ್ತಾಳೆ; ಸ್ತ್ರೀತ್ವದ, ತಾಯ್ತನದ ಮತ್ತೊಂದು ಆದರ್ಶಕ್ಕೂ ಮಾದರಿಯಾಗಿ ಉಳಿಯುತ್ತಾಳೆ. ಇಷ್ಟೊಂದು ತ್ಯಾಗ ಅಗತ್ಯವೇ ಎಂದು ಯಾರಾದರೂ ಪ್ರಶ್ನಿಸಿದರೆ, ಅದು ಆಕೆಯಲ್ಲಿನ ಕಡು ಸ್ವಾಭಿಮಾನ ಎಂದೂ ಉತ್ತರಿಸಬಹುದು; ಮದುವೆ, ದಾಂಪತ್ಯ ಎಂಬುದು ಇಲ್ಲದೆಯೂ ಸಮಾಜಮುಖಿಯಾಗಿ ಬದುಕಬಹುದು ಎಂದು ಆಕೆ ತೋರಿಸಿಕೊಟ್ಟಿದ್ದಾಳೆ. ಸಿಗಬೇಕಾದ್ದು ಸಕಾಲದಲ್ಲಿ ಸಿಗದಾಗ ಅದರ ಮೋಹ ದೂರಾಗುತ್ತದೆ. ಹಾಗೆಂದು, ಜೀವಪರ ಬದುಕನ್ನೇ ದೂರ ಮಾಡಿಕೊಳ್ಳಬಾರದೆಂಬ ತತ್ವಕ್ಕೆ ಆಕೆ ಉದಾಹರಣೆಯಾಗಿದ್ದಾಳೆ (ಈ ಲೇಖನ ಬರೆವ ಹೊತ್ತಲ್ಲಿ ಸಿನಿಮಾ ನೋಡಿದೆ; ಸಾಕಷ್ಟು ಬದಲಾವಣೆಗಳಾಗಿವೆ. ಕಾದಂಬರಿಯ ಓದಿನ ದಟ್ಟ ಅನುಭವ ಬೇರೆಯದೇ ಆಗಿದೆ. ಅದರ ತೌಲನಿಕ ಅಧ್ಯಯನಕ್ಕೆ ಪ್ರತ್ಯೇಕ ಸ್ಥಳವೇ ಬೇಕಾಗುತ್ತದೆ).
ಮಹಿಳಾ ಪರ ಆಲೋಚನೆಯ ಇಂಥಾ ಕಾದಂಬರಿಯನ್ನು ಕನ್ನಡಕ್ಕೆ ತಂದ ಲೇಖಕಿ, ಈ ಕೃತಿ ವಿಶೇಷದ ಬಗ್ಗೆ ಗಮನ ಸೆಳೆದ ಪೋಲೆಂಡಿನ ಉಲ್ರಿಷ್ ತಿಮ್ ಕ್ರಾಗ್ ಹಾಗೂ ಇದೀಗ ಈ ಕೃತಿಯನ್ನು ಮುನ್ನೆಲೆಗೆ ತಂದ ಪ್ರೊ.ವಿವೇಕ ರೈ ಇವರೆಲ್ಲಾ ಅಭಿನಂದನೀಯರು.






0 Comments