ಗೋಪಾಲ ವಾಜಪೇಯಿ
ದೊಡ್ಡವರು ಚಿಕ್ಕವರು ಗೊತ್ತಿರೋರು ಗೊತ್ತಿಲ್ಲದೇ ಇರೋರು ಎಲ್ಲರಿಗೂ ಇವರು ಕಾಕಾ ಅಂತಾನೆ ಪರಿಚಯ. ವಾಜಪೇಯಿ ಕಾಕಾ.
ಪ್ರಸಿದ್ಧ ನಾಟಕಕಾರ, ಸಿನೆಮಾ ಸಾಹಿತಿ, ರಂಗಭೂಮಿಯ ಎಲ್ಲಾ ಹಿಕ್ಮತ್ ಗಳನ್ನೂ ಬಲ್ಲವರು.
ಏನೇ ಬರೆದರೂ ಮೊದಲು ‘ಅವಧಿ’ಗೆ ಎನ್ನುವಷ್ಟು ಪ್ರೀತಿ ಉಳ್ಳವರು.
‘ಅವಧಿ’ಯಲ್ಲಿ ಅವರು ಬರೆದ ರಂಗಭೂಮಿ ಕುರಿತ ಅಂಕಣ ‘ರಂಗದ ಒಳ ಹೊರಗೆ’ ಹೆಸರಿನಲ್ಲಿ ಈಗ ಪುಸ್ತಕದ ಅಂಗಡಿಗಳಲ್ಲಿದೆ.
ಒಮ್ಯಾರೋ ಜರ್ನಾಲಿಸ್ಟ್ ಹುಡಗಾ, ”ನಿಮ್ಮಿಂಟರವ್ಯೂ ಮಾಡತೀನಿ,” ಅಂತ ಬೇಂದ್ರೆಯವರ ಹತ್ರ ಬಂದಾ.
”ಏನಪಾ ಹಂಗಂದ್ರs?” ಅಂತ ಕೇಳೀದ್ರು ಬೇಂದ್ರೆ.
”ಅಂದ್ರs, ನಿಮ್ಮ ಸಂದರ್ಶನಾರೀ ಸsರs,” ಅಂತ ಆ ಹುಡಗಾ.
”ಅದಕ್ಕs ಏನು ಈ ಸುದರ್ಶನಾ?” ಅಂತ ನಕ್ರು ಅಜ್ಜಾ. ಹುಡಗಾ ಗಾಬರೀಲೆ ಗಡಬಡಿಸಿದಾ.
”ನೀವೇನಂದ್ರಿ ಅಂತ ಗೊತ್ತಾಗಲಿಲ್ರಿ,” ಅಂದಾ.
”…’ಸುದರ್ಶನಾ’ ಅನ್ನೋ ಶಬ್ದದ ಅರ್ಥಾನs ಗೊತ್ತಿಲ್ಲದಾವ ನೀ. ಮದಲ ಅದರ ಅರ್ಥಾ ತಿಳಕೋ. ‘ಸುದರ್ಶನಾ’ ಅಂದ್ರ ನೀ ಕಣ್ಣಿಗೆ ಹಾಕ್ಕೊಂಡೀ ನೋಡು ಅದು. ಚಾಳೀಸು,” ಅಂದು ಒಂದರೆಕ್ಷಣ ಸುಮ್ಮನಿದ್ದು, ”ಹ್ಞೂ ಗೊತ್ತು ಮಾಡಿಕೋಬೇಕಾದದ್ದು ಭಾsಳದನೋ ಹುಡಗಾ ನೀನು… ಮದಲ ‘ನಿನ್ನ’ ನೀ ಗೊತ್ತು ಮಾಡಿಕೋ. ಆಮ್ಯಾಲ ‘ಬೇಂದ್ರೆ’ನ್ನ ಅರ್ಥಾ ಮಾಡಿಕೋ. ಅಂದ್ರs ನನ್ನ ‘ದರ್ಶನಾ’ನೂ ಆಗ್ತದ, ‘ಸಂದರ್ಶನಾ’ನೂ ಆಗ್ತದ… ಹೂಂ, ಸಕ್ರಿ ಹಿಡಿ…” ಅಂದು ಆತನ ಕೈಗೆ ಸಕ್ಕರೆ ಹಾಕಿ ಬೀಳ್ಕೊಟ್ಟರಂತೆ…
ಮತ್ತೊಮ್ಯಾರೋ ಜರ್ನಾಲಿಸ್ಟ್ ಹುಡಗಾ, ”ನಿಮ್ಮಿಂಟರವ್ಯೂ ಮಾಡತೀನಿ,” ಅಂತ ಬೇಂದ್ರೆಯವರ ಹತ್ರ ಹೋದಾ.
ಚೊಲೊ ಮೂಡಿನ್ಯಾಗ ಇದ್ದ ಬೇಂದ್ರೆಯವರು ಪ್ರೀತೀಲೇ ”ಕೂಡು,” ಅಂದ್ರು.
ಅಂವಾ ಕೂತಾ. ಬಗಲಚೀಲದಿಂದ ಪೆನ್ನು-ಪ್ಯಾಡು ತಗದಾ.
”ಎಲ್ಲಿಂದ ಸುರೂ ಮಾಡೂಣ್ರೀ ಸsರs ಸಂದರ್ಶನಾನs…?” ಅಂತ ಕೇಳಿದಾ.
”ಉಂಡೀ ಎಲ್ಲಿಂದ ತಿನಲಿಕ್ಕೆ ಸುರೂ ಮಾಡ್ಲೀ ಅಂತ ಎಂದಾರೇ ಕೇಳತೀ ಏನು? ಇಲ್ಲಲs…? ಎಲ್ಲಿಂದಾದ್ರೂ ಸುರೂ ಮಾಡು,” ಅಂತ ತಯಾರಾಗಿ ಕೂತರಂತೆ ಅಜ್ಜ.
ಬೇಂದ್ರೆ ಅಜ್ಜನ ಪೇಂಟಿಂಗ್ ಗಳು: ಮಧು ದೇಸಾಯಿ ಅವರ ಕಲಾ ಶಾಲೆಯಿಂದ
ಮನೆಯಲ್ಲಿ ಬೇಂದ್ರೆ ಅಜ್ಜ ಫೋಟೋ: ವಾರ್ತಾ ಇಲಾಖೆ ಸಂಗ್ರಹದಿಂದ
ಗೋಪಾಲ ವಾಜಪೇಯಿ ಅವರ ಫೋಟೋ: ಪ್ರಕಾಶ ಹೆಗ್ಡೆ
ಗೋಪಾಲ ವಾಜಪೇಯಿಯವರ “ಬೇಂದ್ರೆ ಅಜ್ಜ and the Journalist” ಬರಹ ಓದಿ ಈ ಘಟನೆ ನೆನಪಾಯ್ತು. 1970-71ರಲ್ಲಿ ಕುಕನೂರಿನ ವಿದ್ಯಾನಂದ ಗುರುಕುಲದಲ್ಲಿ ಬೇಂದ್ರೆಯವರಿಗೆ 75ವರ್ಷ ತುಂಬಿದ್ದಕ್ಕಾಗಿ ಸತ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಆಗ ಆ ಕಾಲೇಜಿನಲ್ಲಿ ಪಿ.ಯು.ಸಿ.ವಿದ್ಯಾರ್ಥಿಯಾಗಿದ್ದ ನಾನು ವರಕವಿಗಳ ಬಗ್ಗೆ ಬರೆದ ಕವನ ವಾಚಿಸಿದೆ. ಆ ಮಹಾಕವಿಗಳು ಮೆಚ್ಚಿಕೊಂಡು “ಪಾಪು ಬಾ ಇಲ್ಲಿ” ಎಂದು ಬಳಿಕರೆದು ನನ್ನ ತಲೆ ನೇವರಿಸಿ ಬೆನ್ನು ಚಪ್ಪರಿಸಿ “ಭಾಳಾ ಚಮತ್ಕಾರಿಕವಾಗಿ ಛಂದಾಗಿ ಕವಿತಾ ಬರಿದೀಯಲ್ಲೋ” ಎನ್ನುತ್ತಾ ಸ್ವಾಗತ ಮಾಡುವಾಗ ಅವರಿಗೆ ಅರ್ಪಿಸಿದ್ದ ಹೂಮಾಲೆಯನ್ನು ನನ್ನ ಕೊರಳಿಗೆ ಹಾಕಿ ಆಶೀರ್ವದಿಸಿದ್ದರು. ವಿಶೇಷ ಆವರಣ ಹಾಕಿರುವ ಶಬ್ದಗಳು ಅವರ ಕವನ ಸಂಕಲನಗಳಾಗಿವೆ. ಅವರ ಕೆಲವು ಕವನಗಳ ಸಾಲು ಮತ್ತು ಅವರ ಕವನ ಸಂಗ್ರಹಗಳು, ಪ್ರಬಂಧಗಳು, ನಾಟಕಗಳು, ವಿಮರ್ಶಾಗ್ರಂಥಗಳ ಶೀರ್ಷಿಕೆಗಳನ್ನು ಬಳಸಿಕೊಂಡೇ ಆ ಮಹಾಕವಿಗಳ ಬಗ್ಗೆ ರಚಿಸಿದ ಆ ಕವನವನ್ನು “ಅವಧಿ” ಓದುಗರಿಗಾಗಿ ಇಲ್ಲಿ ಮಿಂಚಂಚಿಸುತ್ತಿದ್ದೇನೆ.
———————–
ವರಕವಿ ದ.ರಾ.ಬೇಂದ್ರೆ
———————–
“ತನುವೆಂಬ ವನದಲ್ಲಿ ಮನದ ಮಾಮರದಲ್ಲಿ”
ಇನಿದು ಸರದಿಂದುಲಿವ ಕೋಗಿಲೆಯು ನೀನು ಧಾರವಾಡದ ತಪೋಭೂಮಿ ‘ಸಾಧನಕೇರಿ’
‘ಶ್ರೀಮಾತಾ’ ಸನ್ನಿಧಿಯ ಚಿರವಾಸಿ ನೀನು-1
ಕುಳಿತು “ಚೈತ್ಯಾಲಯ”ದಿ ಹಿಡಿದು “ಕಾವ್ಯೋದ್ಯೋಗ”
ತಂದೆ ಕವಿ “ಸಂಚಯ”ಕೆ ನವ “ಜೀವ ಲಹರಿ”
“ಬಾಲ ಬೋಧೆ”ಯ ಕಲಿಸಿ “ಚತುರೋಕ್ತಿ” ನೀನುಲಿಯೆ
“ಸಖೀಗೀತ” ಹಾಡಿದಳು “ಕೃಷ್ಣಾಕುಮಾರಿ”-2
“ಗರಿ”ಗೆದರಿ ನರ್ತಿಸಿತು ನಲಿದು ನಾದ ಮಯೂರ
ನಾಡ ಮೂಡಲ ಮನೆಯ ಹೊಸಬೆಳಗು ಕಂಡು
ಗಂಧರ್ವರಾ ಸೀಮೆಯಾಯ್ತು ಕಾಡಿನ ನಾಡು
ಗಿಡಗಂಟೆ ಕೊರಳುಲಿಯೆ ಹಕ್ಕಿಗಳ ಹಾಡು-3
“ಮೇಘದೂತ”ನು ತಾನೆ ಇದು “ನಭೋವಾಣಿ”ಯೆನೆ
“ಆ ಥರಾ… ಈ ಥರಾ…” ಹೊಸ “ಹಾಡು-ಪಾಡು”
ನವ “ಕಾವ್ಯ ವೈಖರಿ”ಯ “ನಾದಲೀಲೆ”ಯ ಶ್ರುತಿಗೆ
“ನೂರೊಂದು ಕವನ”ಗಳು ಹೊಮ್ಮಿದವು ನೋಡು-4
ಅನುಪಮ “ನಿರಾಭರಣ ಸುಂದರಿ”ಗೆ ಮನಸೋತು
“ಮುಕ್ತಕಂಠ”ದಿ ಹಾಡಿದೀ ಜಯ “ಪರಾಕಿ”
“ಯಕ್ಷ ಯಕ್ಷಿ”ಯು ಹೆಣೆಯೆ “ಮುಗಿಲ ಮಲ್ಲಿಗೆ” ಮಾಲೆ
ಮತ್ತೆ “ಶ್ರಾವಣ ಬಂತು”-“ಉಯ್ಯಾಲೆ” ಜೀಕಿ-5
“ಉತ್ತರಾಯಣ”ದಲ್ಲಿ ಉಕ್ಕಿ “ಹೃದಯ ಸಮುದ್ರ”
ರವಿಯ ಕಿರಣಕೆ ಅರಳುವುದು “ಸೂರ್ಯಪಾನ”
ಅಮಿತ ಆರಾಧನೆಗೆ ಅನವರತ ಸಾಧನೆಗೆ
ಕವಿ ಭಗೀರಥಗೊಲಿದು “ಗಂಗಾವತರಣ”-6
“ಮೂರ್ತಿ….”, “ತಾ..ಲೆಕ್ಕಣಿಕಿ ತಾ..ದೌತಿ” ಎಂದೊರೆದ
ಅನುಭಾವಿ ಕವಿ ನಿನ್ನ “ಮಾತೆಲ್ಲ ಜ್ಯೋತಿ”
ಕನ್ನಡದ “ಉದ್ಧಾರ” ಕೈಕೊಂಡ ಹರಿಕಾರ
ನಾಡ ವರಕವಿ ಎನಿಸಿ ನೀ ಪಡೆದೆ ಖ್ಯಾತಿ-7
ಹರಟೆ-ನಾಟಕ-ಕವನ-ಸಂಖ್ಯೆ-ದರ್ಶನ-ವಚನ
ಕಥೆ-ವಿಮರ್ಶೆ-ಪ್ರಬಂಧ ಏನೆಲ್ಲ ಬರೆದೆ
ರನ್ನನೊಲು ಸರಸತಿಯ ನಿಧಿಮುದ್ರೆ ನೀನೊಡೆದು
“ಸಾಹಿತ್ಯದ ವಿರಾಟ್ ಸ್ವರೂಪ”ವನು ತಿಳಿದೆ-8
ಪದ್ಮಶ್ರೀ-ಫೆಲೋ-ಕರ್ಣಾಟ ಕವಿ ಕುಲ ತಿಲಕ
ಸಾಹಿತ್ಯ ಆಚಾರ್ಯ “ಮರ್ಯಾದೆ” ಪಡೆದೆ
‘ರುದ್ರ ವೀಣೆ’ಯ ಹಿಡಿದು “ನಾಕುತಂತಿ”ಯ ಮಿಡಿದು
ಮೇರು ಕೀರ್ತಿಯ “ಜ್ಞಾನಪೀಠ”ದಲಿ ಮೆರೆದೆ-9
ನಿನ್ನ ನುಡಿ ಹೂಗಳನೆ “ವಿನಯ” “ನಮನ”ಗಳೊಡನೆ
ಅರ್ಪಿಸುವೆ ‘ಶ್ರೀ ಅಂಬಿಕಾತನಯ ದತ್ತ’
ಜಾನಪದ ಕವಿಗಾರ ನುಡಿ ಮಂತ್ರ ದ್ರಷ್ಟಾರ
ಕಾವ್ಯರ್ಷಿ ನಡೆಸೆನ್ನ ಹೊಂಬೆಳಕಿನತ್ತ-10
-ಟಿ.ಕೆ.ಗಂಗಾಧರ ಪತ್ತಾರ.