ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಳ್ಳಿತೆರೆಗೆ ಬಂಗಾರದ ಲೇಪ ನೀಡಿದ ಸಿದ್ಧಲಿಂಗಯ್ಯ

ಗೊರೂರು ಶಿವೇಶ್

ಕನ್ನಡ ಚಲನಚಿತ್ರ ಕಂಡ ಮೇರು ನಿರ್ದೇಶಕ ಬಿ. ಸಿದ್ಧಲಿಂಗಯ್ಯನವರು ತಮ್ಮ 79ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಳೆದ ವಾರವಷ್ಟೇ ಅವರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟನ್ನು ಕೊಡಮಾಡಿದೆ. ಈ ಗೌರವ ಕನಿಷ್ಠ ಐದಾರು ವರ್ಷಗಳ ಹಿಂದಾದರೂ ದೊರೆತಿದ್ದರೆ ಅವರ ಕುಟುಂಬವರ್ಗ ಸಂತಸಪಡಬಹುದಿತ್ತು. ಇತ್ತೀಚಿನ ವರ್ಷಗಳಲ್ಲಿ ಮಗ ಚಿತ್ರನಟ ಮುರುಳಿ ಮತ್ತು ಪತ್ನಿಯನ್ನು ಕಳೆದುಕೊಂಡು ಜರ್ಝರಿತರಾಗಿ ಹಾಸಿಗೆ ಹಿಡಿದಿದ್ದ ಅವರಿಗೆ ಈ ಗೌರವದ ಅರಿವಾದರೂ ಆಗಿತ್ತೋ ಇಲ್ಲವೋ?
ಕಳೆದ ಶತಮಾನದ ಎಪ್ಪತ್ತು ಎಂಬತ್ತರ ದಶಕ, ಸಾಹಿತ್ಯದಂತೆ ಸಿನಿಮಾಕ್ಕೂ ಚೇತೋಹಾರಿಯಾದ ವರ್ಷ. ಒಂದೆಡೆ ತರಾಸು, ತ್ರಿವೇಣಿ, ವಾಣಿ, ಆರ್ಯಾಂಭಪಟ್ಟಾಭಿ, ಎಂ.ಕೆ. ಇಂದಿರಾ, ಉಷಾನವರತ್ನರಾಮ್, ಅಶ್ವಿನಿ, ಅನುಪಮ ನಿರಂಜನರಂಥ ಲೇಖಕ-ಲೇಖಕಿಯರ ಕೃತಿಗಳು ಹೆಂಗೆಳೆಯರ ಮನಸ್ಸನ್ನು ಆವರಿಸುತ್ತಿರುವಂತೆ ಪುಟ್ಟಣ್ಣಕಣಗಾಲ್, ದೊರೆ ಭಗವಾನ್, ಗೀತಪ್ರಿಯರಂಥ ನಿರ್ದೇಶಕರ ಮೂಲಕ ಚಲನಚಿತ್ರಗಳಾಗಿಯೂ ಮೂಡಿಬಂದು ಜನಮನ್ನಣೆಗೊಳ್ಳುತ್ತಿದ್ದರೆ ಮತ್ತೊಂದೆಡೆ ಶ್ರೀಕೃಷ್ಣ ಆಲನಹಳ್ಳಿ, ಎಸ್.ಎಲ್. ಭೈರಪ್ಪ, ಯು.ಆರ್. ಅನಂತಮೂರ್ತಿ, ಚದುರಂಗ, ತೇಜಸ್ವಿಯವರ ಕಾದಂಬರಿಗಳು ಹೊಸಅಲೆ ಚಿತ್ರಗಳಾಗಿ ಗಿರೀಶ್ ಕಾರ್ನಾಡ್, ಗಿರೀಶ್ ಕಾಸರವಳ್ಳಿ, ಚದುರಂಗ, ನಾಗಾಭರಣ ಮುಂತಾದ ನಿರ್ದೇಶಕರ ಮೂಸೆಯಲ್ಲಿ ಮೂಡಿ ರಾಷ್ಟ್ರಪ್ರಶಸ್ತಿಗಳನ್ನು ದೋಚುತ್ತಿದ್ದ ಕಾಲ. ಕಮರ್ಷಿಯಲ್ ಅಂಶಗಳನ್ನು ಉಳಿಸಿಕೊಂಡು ಸಾಮಾಜಿಕ ವಾತಾವರಣವನ್ನು ಪೋಷಿಸುವ ಚಿತ್ರವನ್ನು ಮಾಡಿದ ಕಾರಣಕ್ಕಾಗಿ ಪಂಡಿತ, ಪಾಮರರಿಬ್ಬರಿಂದಲೂ ಮೆಚ್ಚುಗೆ ಪಡೆದ ಇಬ್ಬರು ನಿರ್ದೇಶಕರು ಪುಟ್ಟಣ್ಣಕಣಗಾಲ್ ಮತ್ತು ಸಿದ್ಧಲಿಂಗಯ್ಯ. ಪುಟ್ಟಣ್ಣ ಸ್ತ್ರೀ ಪ್ರಧಾನ ಚಿತ್ರಗಳನ್ನು, ಸಿದ್ಧಲಿಂಗಯ್ಯ ಪುರುಷ ಪ್ರಧಾನ ಚಿತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದು ಮತ್ತೊಂದು ವೈಶಿಷ್ಟ್ಯ.

ತುಮಕೂರಿನ ಶಿರಾ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಹುಟ್ಟಿ ನಾಟಕಗಳಲ್ಲಿ ಅಭಿನಯಿಸಿ, ನಟರಾಗಲೆಂದು ಮದ್ರಾಸಿಗೆ ಓಡಿಹೋದ ಸಿದ್ಧಲಿಂಗಯ್ಯ ನೆಲೆಯಾಗಿ ನಿಂತಿದ್ದು ಚಿತ್ರ ನಿರ್ದೇಶಕರಾಗಿ. ಇದಕ್ಕೆ ಪ್ರೇರಣೆ ದೊರೆತದ್ದು ನಟ ಬಾಲಕೃಷ್ಣರಿಂದ. ಕ್ಲಾಪ್ ಬಾಯಿಯಿಂದ ಸಹಾಯಕ ನಿರ್ದೇಶಕನಾಗಿ ಹಲವು ವಿಭಾಗದಲ್ಲಿ ದುಡಿಯುತ್ತಿದ್ದ. ಸಿದ್ಧಲಿಂಗಯ್ಯನವರ ಕ್ರಿಯಾಶೀಲತೆ, ಎಸ್.ಪಿ. ವರದರಾಜುರವರ (ರಾಜ್ಕುಮಾರ್ ಸಹೋದರ) ಗಮನ ಸೆಳೆದು ಆಗ ತುಂಬಾ ಬೇಡಿಕೆಯಿದ್ದ ಡಾ. ರಾಜ್ಕುಮಾರ್ ಕಾಲ್ಶೀಟ್ ಕೊಡಿಸುವ ಭರವಸೆ ನೀಡಿದರು. ರಾಜ್ರವರ ಕಾಲ್ಶೀಟ್ಗಾಗಿ ಕಾಯುತ್ತಿದ್ದ ದ್ವಾರಕೀಶ್ ನಿರ್ಮಾಣ ಮಾಡಲು ಮುಂದೆ ಬಂದರು. ಆಗ ನಿರ್ಮಾಣಗೊಂಡ ಚಿತ್ರವೇ ‘ಮೇಯರ್ ಮುತ್ತಣ್ಣ’.

ಹಳ್ಳಿಯಲ್ಲಿ ಅವಮಾನಿತನಾಗಿ ಅಸಹಾಯಕನಾಗಿ ನಗರಕ್ಕೆ ಬಂದು, ಅಲ್ಲಿನ ಕೊಳೆಗೇರಿಯಲ್ಲಿ ವಾಸಿಸುತ್ತ ಹಂತ ಹಂತವಾಗಿ ಜನರ ಮನಗೆದ್ದು ನಗರದ ಪ್ರಥಮ ಪ್ರಜೆಯಾಗುವ ‘ಮೇಯರ್ ಮುತ್ತಣ್ಣ’ ಆ ಕಾಲದ ಬ್ಲಾಕ್ಬಸ್ಟರ್ ಚಿತ್ರ. ಮುಂದೆ 1969ರಿಂದ 1973ರ ಅವಧಿಯಲ್ಲಿ ಡಾ. ರಾಜ್ಕುಮಾರ್ಗಾಗಿಯೆ ಬಾಳು ಬೆಳಗಿತು, ನಮ್ಮ ಸಂಸಾರ, ತಾಯಿ ದೇವರು, ನ್ಯಾಯವೇ ದೇವರು ಮುಂತಾಗಿ ಯಶಸ್ವಿ ಚಿತ್ರಗಳು ಹೊರಬಂದವು. ಆದರೆ ರಾಜ್ಕುಮಾರ್ ಜೊತೆಗೆ ಸಿದ್ಧಲಿಂಗಯ್ಯನವರನ್ನು ಕೀರ್ತಿ ಶಿಖರಕ್ಕೇರಿಸಿದ ಚಿತ್ರ ‘ಬಂಗಾರದ ಮನುಷ್ಯ’.

ರಾಜೀವ ಎಂಬ ವಿದ್ಯಾವಂತ ತರುಣ, ತನ್ನ ಅಕ್ಕನ ಊರಿಗೆ ಹೋಗಿ ಭಾವ ತೀರಿಹೋದ ಕಾರಣ ಅಲ್ಲಿಯೆ ನೆಲೆ ನಿಂತು ಕುಟುಂಬದ ಜವಾಬ್ದಾರಿ ಹೊರುತ್ತಾನೆ. ಬಂಜರು ಭೂಮಿಯನ್ನು ತನ್ನ ಪರಿಶ್ರಮ, ಛಲದಿಂದ ಫಲವತ್ತಾದ ಭೂಮಿಯನ್ನಾಗಿ ಮಾಡುತ್ತಾನೆ. ಅಕ್ಕನ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಮುಂದೆ ಅವರ ನಿಂದನೆಯ ಮಾತಿಗೆ ನೊಂದು ಅವರೆಲ್ಲನ್ನು ಊರನ್ನು ತೊರೆದು ಹೋಗುವ ಕಥಾಹಂದರ ಚಿತ್ರದ್ದು.
ಆ ಕಾಲಕ್ಕೆ ಉದ್ಯೋಗಕ್ಕಾಗಿ ವ್ಯವಸಾಯವನ್ನು ತೊರೆದು ನಗರಕ್ಕೆ ಹೋಗುತ್ತಿದ್ದ ಯುವಜನಾಂಗವನ್ನು ಮತ್ತೆ ಹಳ್ಳಿಯೆಡೆಗೆ ಮೊಗ ಮಾಡುವಂತೆ ಮಾಡಿದ್ದು ಆ ಚಿತ್ರದ ಹೆಗ್ಗಳಿಕೆ. ಅನೇಕರು ಇದನ್ನು ಹೇಳಿಕೊಂಡಿದ್ದಾರೆ ಕೂಡಾ. ಆ ಕಾಲಕ್ಕೆ ಬೆಂಗಳೂರಿನ ಸ್ಟೇಟ್ಸ್ ಮತ್ತು ಕೆಂಪೇಗೌಡ ಚಿತ್ರಮಂದಿರದಲ್ಲಿ ಸಂಯೋಜಿತವಾಗಿ ಎರಡು ವರ್ಷಕ್ಕೂ ಹೆಚ್ಚು ಕಾಲ ಪ್ರದರ್ಶನಗೊಂಡು ನಿರ್ಮಾಪಕರಿಗೆ ಹಣದ ಹೊಳೆಯನ್ನೇ ಹರಿಸಿತು.
ಬಹುಶಃ ಚಿತ್ರದ ಯಶಸ್ಸಿನ ಬಹುಪಾಲು ಚಿತ್ರದ ನಾಯಕನಟ ರಾಜ್ರವರಿಗೆ ದೊರೆತ ಕಾರಣದಿಂದಲೋ ಏನೋ ತಮ್ಮ ಸಂಪೂರ್ಣ ಪ್ರತಿಭೆಯನ್ನು ಪಣಕ್ಕಿಟ್ಟು ನಿರ್ದೇಶಿಸಿದ ಚಿತ್ರ ‘ಬೂತಯ್ಯನ ಮಗ ಅಯ್ಯು’.

ರಂಜನೆ, ಬೋಧನೆ, ಪ್ರಚೋದನೆ ಯಾವುದೇ ದೃಶ್ಯಮಾಧ್ಯಮದ ಪ್ರಮುಖ ಗುಣವೆಂದು ಭಾವಿಸುವುದಾದರೆ ‘ಬೂತಯ್ಯನಮಗಅಯ್ಯು’ ಚಿತ್ರ ಮೂರನ್ನು ಒಳಗೊಂಡಿದೆ. ಮೊದಲಿನಿಂದ ಕೊನೆಯವರೆವಿಗೂ ಹಿಡಿದಿಡುವ ಚಿತ್ರಕಥೆ, ‘ಕೂಡಿಬಾಳಿದರೆ ಸ್ವರ್ಗಸುಖ’ ವೆಂಬ ಬೋಧನೆ, ಸಮಾಜದ ಸಾಮರಸ್ಯವನ್ನು ಕಾಪಾಡುವ ಕುರಿತ ಪ್ರಚೋದನೆ ಈ ಚಿತ್ರದಲ್ಲಿ ಹಾಸುಹೊಕ್ಕಾಗಿದೆ.. ಗ್ರಾಮ ಭಾರತದ ಅವನತಿಗೆ ಕಾರಣವಾಗಿರುವ ದ್ವೇಷ, ಅಸೂಯೆ, ಶೋಷಣೆ, ಜಾತಿಯತೆ ಮುಂತಾದ ಅಂಶಗಳನ್ನು ತನ್ನ ಕಥಾಗರ್ಭದಲ್ಲಿ ಅಡಗಿಸಿಕೊಂಡು ‘ಒಗ್ಗಟ್ಟಿನಲ್ಲಿ ಬಲವಿದೆ’ ಸಂದೇಶವನ್ನು ಈ ಚಿತ್ರ ಸಾರುತ್ತದೆ
ಊರಿನ ಶೋಷಕ ಬೂತಯ್ಯ, ಅವನ ಸಾಲದ ಬಲೆಗೆ ಸಿಕ್ಕ ಊರಿನ ಜನ, ಸಾಲಕ್ಕೆ ಜಾಮೀನು ನೀಡಿ ಬೂತಯ್ಯನ ಜಾಲಕ್ಕೆ ಸಿಕ್ಕು ಗುಳ್ಳನ ತಂದೆ ಸಾಂಬಯ್ಯ, ಗುಳ್ಳ ಮತ್ತು ಅಯ್ಯುವಿನ ನಡುವೆ ಇದಕ್ಕಾಗಿ ಏರ್ಪಡುವ ದ್ವೇಷ, ಮುಂದೆ ನ್ಯಾಯಾಲಯದ ಮೆಟ್ಟಿಲು ಹತ್ತಿ ಒಂದೊಂದು ಕೋರ್ಟಿನಲ್ಲಿ ಒಂದೊಂದು ತೀರ್ಪು ಬಂದು ಅಂತಿಮವಾಗಿ ಅಯ್ಯು ವಿಜಯಿಯಾಗುತ್ತಾನೆ. ಮುಂದೆ ಸೃಷ್ಟಿಯಾಗುವ ಸನ್ನಿವೇಶಗಳು ಅವರಿಬ್ಬರನ್ನು ಒಂದುಗೂಡಿಸುವುದರ ಜೊತೆಗೆ, ‘ಕೋರ್ಟ್ ನಲ್ಲಿ ಗೆದ್ದೋನು ಸೋತ, ಸೋತೋನು ಸತ್ತ’ ಗಾದೆ ನೆನಪಿಸುತ್ತಾ ಕೋರ್ಟ್, ಪೋಲೀಸ್ ಸ್ಟೇಷನ್, ದೇವಸ್ಥಾನಗಳ ಹೆಚ್ಚಳವೆ ಅಭಿವೃದ್ಧಿ ಎನ್ನುವ ಕಾಲಘಟ್ಟದಲ್ಲಿ ಗ್ರಾಮಸ್ವರಾಜ್ಯದ ಕಲ್ಪನೆಯನ್ನು ಮೂಡಿಸುತ್ತದೆ.
ಒಂದು ಚಲನಚಿತ್ರ ಮನರಂಜನೆಯ ಮಾಧ್ಯಮವಷ್ಟೆ ಆಗಿರದೆ ಆಯಾ ಪ್ರಾದೇಶಿಕ ಸಂಸ್ಕೃತಿಯನ್ನು ಪ್ರಚಾರಮಾಡುವ ವಕ್ತಾರನೂ ಆಗಿರುತ್ತದೆ ಎಂಬುದನ್ನು ಸಿದ್ದಮಾಡಿ ಚಿತ್ರ ತೋರಿಸುತ್ತದೆ. ಕನ್ನಡ ನಾಡಿನ ಹಬ್ಬಗಳ ವಿಶೇಷ, ಜಾತ್ರೆಯ ಸಡಗರ, ಸಾವಿನ ಸಂತಾಪ ಅಂತ್ಯಸಂಸ್ಕಾರದ ಆಚರಣೆ, ಎತ್ತಿನ ಓಟದಂಥ ಗ್ರಾಮೀಣ ಕ್ರೀಡೆಗಳು ಚಿತ್ರದಲ್ಲಿ ಸಹಜವಾಗಿ ಎನ್ನುವಂತೆ ಸೇರಿಹೋಗಿದೆ. ಆ ಕಾಲಕ್ಕೆ ಎಲ್ಲಾ ಹೊಸಬರಿಂದಲೇ ಕೂಡಿದ್ದ ಚಿತ್ರದಲ್ಲಿ ಎಲ್ಲಾ ಪಾತ್ರಗಳ ಪೋಷಣೆ ಮತ್ತು ಎಲ್ಲಾ ವಿಭಾಗಗಳೂ ಅತ್ಯುತ್ತಮ ಕೆಲಸ ನಿರ್ವಹಿಸಿದ್ದು ಚಿತ್ರದ ಕ್ಯಾಪ್ಟನ್ ಸಿದ್ದಲಿಂಗಯ್ಯನವರ ಬಗ್ಗೆ ಹೆಮ್ಮೆ ಮೂಡಿಸುತ್ತದೆ.
ಒಟ್ಟು ಇಪ್ಪತ್ತಮೂರು ಚಿತ್ರಗಳನ್ನು ನಿರ್ದೇಶಿಸಿದ ಶ್ರೀನಿವಾಸಮೂರ್ತಿ, ಚರಣರಾಜ್ರಂಥ ನಟರನ್ನು ಚಿತ್ರರಂಗಕ್ಕೆ ಪರಿಚಯಿಸುವುದರ ಜೊತೆಗೆ ಲೋಕೇಶ್ರಂಥ ನಟರಿಗೆ ಮರುಜನ್ಮವನ್ನು ನೀಡಿದ್ದರು. ತಮ್ಮ ಮಗನನ್ನು ನಟನಾಗಿಸಲು ಅಜೇಯ, ಪ್ರೇಮಪರ್ವ, ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದರೂ ಮುರುಳಿ ನೆಲೆ ನಿಂತಿದ್ದು ತಮಿಳಿನಲ್ಲಿ.
ಕನ್ನಡ ಚಿತ್ರರಂಗದಲ್ಲಿ ತಮ್ಮ ಎರಡು ಚಿತ್ರ ಕಾವ್ಯಗಳಾದ ‘ಬಂಗಾರದ ಮನುಷ್ಯ’ ಮತ್ತು ‘ಬೂತಯ್ಯನ ಮಗ ಅಯ್ಯು’ದ ಮೂಲಕ ಚಿರಸ್ಥಾಯಿಯಾದ ನಿರ್ದೇಶಕ ಸಿದ್ಧಲಿಂಗಯ್ಯ ಈ ಚಿತ್ರಗಳ ಮೂಲಕವೇ ಸದಾ ಅಮರ.
 

‍ಲೇಖಕರು G

16 March, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading