
ಶಿವು ಮೋರಿಗೇರಿ
ಚೋಮನದುಡಿ ಪ್ರದರ್ಶನ ‘ಬೆಳ್ಳಿ ಹೆಜ್ಜೆ ಬೆಳ್ಳಿ ಮಾತು’ ಕಾರ್ಯಕ್ರಮದಲ್ಲಿ ಆಯೋಜಿಸಿದ್ದೇ ಬೆಳ್ಳಿ ಪರದೆಯ ಆ ಬೆಳ್ಳಿ ಪದ್ಮಾರನ್ನು ಮತ್ತೆ ನೆನೆಯಲು. ಸಂಜೆ ಪ್ರದರ್ಶನಕ್ಕೂ ಮುಂಚೆ ನಿಗಧಿಯಂತೆ ಗಣ್ಯರೆಲ್ಲ ಸೇರಿಯಾಗಿತ್ತು.
ಬೆಳ್ಳಿಯನ್ನು ನೆನೆಯಲು ನಿಂತದ್ದು ಸುಂದರ್ ರಾಜ್. ಒಟ್ಟಿಗೆ ಕೆಲಸ ಮಾಡಿದವರು. ಮೊದಲೇ ಸ್ನೇಹಜೀವಿ ಪದ್ಮಾ ಅವರೊಟ್ಟಿಗೆ ಇದೇ ಚೋಮನದುಡಿಯಲ್ಲಿ ಮೊದಲ ಬಾರಿಗೆ ಅಣ್ಣನ ಪಾತ್ರದಲ್ಲಿ ನಟಿಸಿದ್ದ ಇವರು ಪದ್ಮಾ ಅವರ ಹೃದಯ ವೈಶಾಲ್ಯತೆಯನ್ನು ಮುಕ್ತ ಕಂಠದಿಂದ ಸ್ಮರಿಸಿದ್ರು. ಆ ಚಿತ್ರದಲ್ಲಿ ನನ್ನದು ಗುರುವ ಅನ್ನುವ ಪಾತ್ರ, ಅದ್ರಲ್ಲಿ ನಾನು ಕ್ರಿಶ್ಚಿಯನ್ ಹುಡ್ಗಿ ಹಿಂದೆ ಓಡೋಗ್ಬಿಡ್ತೀನಿ. ಅದೇನು ಹಣೆ ಬರಹನೋ ಏನೋ ನನ್ನ ನಿಜ ಜೀವನದಲ್ಲೂ ನಾನು ಕ್ರಿಶ್ಚಿಯನ್ ಹುಡ್ಗಿಯನ್ನೇ ಮದ್ವೆಯಾದೆ’ ಅಂತೇಳಿದಾಗ ನೆರೆದವರಲ್ಲೆಲ್ಲಾ ಕಚಗುಳಿಯ ನಗು.
ಈ ಚೋಮನದುಡಿ ಇದೆಯಲ್ವಾ ? ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬರುತ್ತೆ. ಮತ್ತಿದರಲ್ಲಿನ ಬೆಳ್ಳಿ ಪಾತ್ರದ ಮನೋಜ್ಞ ಅಭಿನಯಕ್ಕೆ ಪದ್ಮಾ ಕುಮುಟ ಅವರಿಗೆ ರಾಜ್ಯ ಪ್ರಶಸ್ತಿ ಬರುತ್ತೆ. ಈ ಕಾರಣಕ್ಕಾಗಿ ಆಗಿನ ಸರ್ಕಾರ ಈ ಚಿತ್ರದ ಕಲಾವಿದರುಗಳಿಗೆ ಸೈಟ್ ಕೊಡ್ತೀವಿ ಎಷ್ಟು ಬೇಕು ? ಎಂದು ಕೇಳಿದಾಗ 20/30 ಫೀಟ್ ಚೋಮ ಕೇಳಿದ್ರೆ, ಬೆಳ್ಳಿ ಕೇಳೋದು 30/40 ಫೀಟ್. ಇದೇ ರೀತಿ ಈಗಿನ ಗೌರ್ಮೆಂಟೇನಾನ್ನ ಯಾವುದಾದ್ರೂ ಕಲಾವಿದರನ್ನ ಕರೆದು ಎಷ್ಟಪ್ಪಾ ಬೇಕು ನಿಮ್ಗೆ ಸೈಟು ? ಅಂತ ಕೇಳ್ಬಿಟ್ರೆ. ಸಿಕ್ಕಿದ್ದೇ ಚಾನ್ಸು, ಹಂಗೇ ಒಂದೇಳೆಂಟು ಮನೆ ಕಟ್ಟುಬಹುದಾದಷ್ಟು ಜಾಗವನ್ನೇ ಅಮುಕಿಬಿಡಾಣ ಅನ್ನೋರೇ ಜಾಸ್ತಿ.
ಕೆಲವು ವಿಷಯಗಳಲ್ಲಿ ಬಹುತೇಕರಿಗೆ ಸ್ಯಾಟಿಫ್ಯಾಕ್ಷನ್ ಅನ್ನೋದೇ ಇರಲ್ಲ. ಎಷ್ಟಿದ್ರೂ ಸಾಲದು ಅನ್ನೋ ಕ್ಯಾಟಗೆರಿಯ ಜನ ಅವ್ರು. ಆದ್ರೆ ಇನ್ನು ಕೆಲವರಿರ್ತಾರೆ. ಇರೋದ್ರಲ್ಲೇ ತೃಪ್ತಿ ಕಾಣ್ತಾರೆ. ಬರದೇ ಇರೋದಕ್ಕೆ ಯಾವತ್ತೂ ಹಲುಬೋದಿಲ್ಲ. ಹಂಗಾಗೇ ಅವರಿರುವ ಕಡೆಯೆಲ್ಲಾ ಯಾವತ್ತೂ ಮಲ್ಲಿಗೆ ನಗುವಿನ ತೋರಣವಿರುತ್ತೆ. ಬೆಳ್ಳಿಯಂಥಾ ಬೆಳಕಿರುತ್ತೆ. ಬೆಲ್ಲಕ್ಕೆ ಇರುವೆ ಮುತ್ತಿದಂತೆ ಇಂಥಹವರನ್ನು ಹುಡುಕಿಕೊಂಡು ಸ್ನೇಹ ಗಳಿಸಲು, ಗಳಿಸಿಕೊಂಡ ಸ್ನೇಹವನ್ನು ಉಳಿಸಿಕೊಳ್ಳಲು ಎಲ್ಲರೂ ಹಂಬಲಿಸುತ್ತಾರೆ. ಇಂಥಹ ವ್ಯಕ್ತಿತ್ವದ ಗುಂಪಿಗೆ ಸೇರೋದು ಪದ್ಮಾ ಕುಮುಟವೆಂಬ ಬೆಳ್ಳಿ.
ಸುಂದರ್ ರಾಜ್ ಅಕ್ಷರ ಸಹ ಬೆಳ್ಳಿ ಲೋಕದಲ್ಲಿ ಕಳೆದು ಹೋಗಿಯಾಗಿತ್ತು. ಅವರ ಪ್ರತಿ ಮಾತುಗಳಿಗೂ ಕಿವಿಯಾಗಿ ಕೇಳುತ್ತಿದ್ದವರಿಗೆ ಗಕ್ಕನೆ ಪೆಚ್ಚೆನಿಸಿತು. ಬೆಳ್ಳಿ ಬದುಕಿನ ಹಾದಿಯನ್ನು ಮೆಲುಕುತ್ತಿದ್ದ ಸುಂದರ್ ರಾಜ್, ಅವರಿಲ್ಲ ಎಂಬುದನ್ನು ನೆನಪಿಸಿಕೊಂಡ ತಕ್ಷಣ ಗದ್ಗದಿತರಾದ್ರು. ಕಣ್ಣೊದ್ದೆದ್ದೆ. ನೆರೆದ ಎಲ್ಲರ ಗಂಟಲೂ ಬಿಗಿದಿತ್ತು ಆಗ. ಅಲ್ಲಿಂದ ಒಂದೆರಡು ಮಾತಾಡಿ ಮಾತು ಮುಗಿಸಿದ್ರು ಸುಂದರ್ ರಾಜ್.

ಸುಂದರ್ ರಾಜ್ ಮಾತನಾಡಿದ ಮೇಲೆ ಬೆಳ್ಳಿಯನ್ನು ಸ್ಮರಿಸಿಕೊಳ್ಳಲು ಶುರು ಮಾಡಿದ್ದು ಬಹುತೇಕ ಪದ್ಮಾ ಅವರ ಮನೆಯಲ್ಲೇ ಬೆಳೆದ ಜೈಜಗದೀಶ್. ಪದ್ಮಾ ಕುಮುಟ ಅವರ ಕುಟುಂಬದ ಸದಸ್ಯನಂತಿರುವ ಜೈಜಗದೀಶ್ ತಾವು ಕಂಡ ಪದ್ಮಾ ಕುಮುಟ ಅವರನ್ನು ಸ್ಮರಿಸುತ್ತಾ ಬೆಳ್ಳಿಗೆ ಮೀನು ಅಂದ್ರೆ ತುಂಬಾ ಇಷ್ಟ, 1976 ರಲ್ಲಿ ಫಲಿತಾಂಶ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದು, ಮೀನಿನ ಸಾರು ಮಾಡಿ ಫೋನ್ ಮಾಡಿ ಊಟಕ್ಕೆ ಕರೆಯುತ್ತಿದ್ದುದು, ಹೀಗೆ ಕೆಲವು ವಿಷಯಗಳನ್ನು ನೆರೆದವರೊಂದಿಗೆ ಹಂಚಿಕೊಂಡರು.
ಜೈಜಗದೀಶ್ ಮಾತನಾಡಿದ ಮೇಲೆ ಮೈಕನ್ನು ಕೈ ಹಿಡಿದದ್ದು ಬೆಳ್ಳಿಯ ಜೀವದ ಗೆಳತಿ ಗಾಯತ್ರಿ ಪ್ರಭಾಕರ್. ಇವರು ಮಾತನಾಡುವಾಗಲೇ ತಮ್ಮ ಜೀವನದಲ್ಲಿ ಅಮೂಲ್ಯವಾದುದೊಂದನ್ನು ಕಳೆದುಕೊಂಡ ಭಾವ ಗೊತ್ತಾಗಿಬಿಟ್ಟಿತು. ಸದಾ ಹಸನ್ಮುಖಿ, ಸ್ನೇಹಜೀವಿ ಪದ್ಮಾ ಅವರ ಜೀವದ ಗೆಳತಿ ಅಂದ್ರೆ ಕೇಳ್ಬೇಕಾ ? ಎಷ್ಟೆಲ್ಲಾ ನೆನಪುಗಳಿರಲ್ಲ ? ಖುಷಿ, ದುಃಖ, ಕೋಪ, ತಾಪ, ಜಗಳ ಆಡೋದು, ಮುನಿಸಿಕೊಳ್ಳೋದು, ಮತ್ತೆ ಎಲ್ಲ ಮರೆತು ಫೋನ್ ನಲ್ಲಿ ಗಂಟೆಗಟ್ಲೆ ಹರಟೋದು, ಹೀಗೆ ಎಲ್ಲವನ್ನೂ ಮೆಲುಕಿದ ಗಾಯತ್ರಿ ಪ್ರಭಾಕರ್, ಅನುದಿನವೂ ಬೆಳ್ಳಿಯ ನೆನಪಿನಲ್ಲೇ ಇರ್ತಾರೆ. ತಮ್ಮ ಸ್ನೇಹವನ್ನು ನೆನೆದು ಇನ್ನೇನು ಮಾತು ಮುಗಿಸಬೇಕೆನ್ನುವಾಗ ‘ಪದ್ಮಾ ಮಿಸ್ ಯೂ, ಲವ್ ಯೂ, ಇಷ್ಟ್ರಲ್ಲೇ ನಾನೂ ಬರಬಹುದೇನೋ..’ ಅಂತೇಳಿ ಕಣ್ಣೀರಾಗ್ತಾ ಕೂತದ್ದು ಎಂಥಹವರಿಗೂ ಅಜ್ಯೋ ಅನ್ನಿಸಿಬಿಡುತ್ತೆ.
ಗಾಯತ್ರಿ ಪ್ರಭಾಕರ್ ಮಾತುಗಳು ಮುಗಿದ ಮೇಲೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅದ್ಯಕ್ಷ ರಾಜೇಂದ್ರ ಸಿಂಗ್ ಬಾಬು ಅವರು ಕೆಲ ಮಾತನಾಡಿದರು. ಇನ್ನೇನು ಕಾರ್ಯಕ್ರಮ ಮುಗಿಯುತ್ತೆ ಚೋಮನ ದುಡಿ ಸ್ಕ್ರೀನ್ ಆಗುತ್ತೆ ಅಂದ್ಕೊಂಡಿದ್ದೆ. ವೇದಿಕೆಯಲ್ಲಿ ಇನ್ನೊಬ್ಬರು ಮಾತನಾಡೋದು ಬಾಕಿಯಿತ್ತು. ಅವರಿಗೆ ಮೊದಲೇ ಮಾತನಾಡೋಕೆ ಕೇಳಿಕಂಡ್ರು ನಿರಾಕರಿಸಿದ್ರು ತೀರಾ ಒತ್ತಾಯ ಮಾಡಿದ್ದಕ್ಕೆ ಮೈಕ್ ಹಿಡಿದು ನಿಂತದ್ದು ಪ್ರಫುಲ್ಲಾ ಮೇಡಂ. ಅಲ್ಲಿಯವರೆಗೂ ಒಂದೇ ಲಯದಲ್ಲಿ ಹೊರಟಿದ್ದ
ಇಡೀ ಕಾರ್ಯಕ್ರಮಕ್ಕೆ ಕೆಂಡದ ತಿರುವು ನೀಡಿದ ಮಾತುಗಳನ್ನಾಡಿದ್ದು ಇದೇ ಪ್ರಫುಲ್ಲಾ ಮೇಡಂ. ಪದ್ಮಾ ಕುಮುಟಾರನ್ನು ನೆನೆಯುತ್ತ ನೆನೆಯುತ್ತಲೇ ಮಾತುಗಳ ಪೂರ್ತಿ ನಡುಗುವ ಧ್ವನಿಯಲ್ಲೇ ಅವರು ಕೇಳಿದ ಒಂದೊಂದು ಪ್ರಶ್ನೆಯೂ ಹೌದಲ್ವಾ ? ಅನ್ನುವಂತಿತ್ತು. ಅವರ ಮಾತುಗಳಲ್ಲಿ ಇಂದಿನ ಇಂಡಸ್ಟ್ರಿಯ ವಿರುದ್ಧ ಧಿಕ್ಕಾರವಿತ್ತು. ಮಾನವೀಯತೆ ಮರೆತ ಧಾರಾವಾಹಿ ತಂಡದ ಬೇಜವಾಬ್ದಾರಿತನದ ವಿರುದ್ಧ ಅಸಹನೆಯಿತ್ತು. ಮೀಡಿಯಾದ ಮೇಲೊಂದು ನಿಗಿಕೋಪವಿತ್ತು.
ಹೌದು ಇವರು ಕೇಳಿದ್ರು, ಪ್ರತಿ ಚಿತ್ರೀಕರಣದ ಸ್ಪಾರ್ಟ್ ಗೆ ಒಂದು ಆಂಬುಲೆನ್ಸ್ ನ್ನು ಯಾಕೆ ಸಂಬಂಧಪಟ್ಟ ನಿರ್ಮಾಪಕರು ಯಾಕೆ ಇಷ್ಟು ವರ್ಷವಾದ್ರೂ ಯೋಚನೆಯನ್ನೇ ಮಾಡಿಲ್ಲ ? ಹೀಗೆ ಕೇಳುತ್ತಲೇ ಮಾಸ್ತಿಗುಡಿ ದುರಂತ ಕಣ್ಮುಂದೆ ರಪ್ ಅಂತ ಪಾಸ್ ಆಯ್ತು. ಅದು ಸಿನಿಮಾ ಆಗಿರಲಿ, ಧಾರಾವಾಹಿ ಆಗಿರಲಿ, ಯಾವುದೋ ಶೋ ಒಂದರ ಶೂಟಿಂಗ್ ಸ್ಪಾರ್ಟೇ ಆಗಿರಲಿ ಸಂಬಂಧಪಟ್ಟವರು ಹೇಗೆಲ್ಲಾ ನಡೆದುಕೊಳ್ತಾರೆ ಅನ್ನೋದರತ್ತ ಬೆಳಕು ಚೆಲ್ಲಿದ್ದು ಪ್ರಫುಲ್ಲಾ ಅವರ ಆಕ್ರೋಶಭರಿತ ಮಾತುಗಳು.
ಒಂದು ಅನಾಹುತ ನಡೆದಾಗಿದೆ. ಅದಕ್ಕೆ ಮೀಡಿಯಾ ಹೇಗೆ ಸ್ಪಂದಿಸುತ್ತವೆ ಅನ್ನೋದು ಆಯಾ ಮೀಡಿಯಾಗಳ ಐಡಿಯಾಲಜಿ, ಸಮಾಜಿಕ ಕಳಕಳಿಯನ್ನು ತೋರಿಸುತ್ತೆ. ಪದ್ಮಾ ಕುಮುಟ ಅವರ ಅಗಲಿಕೆಯನ್ನು ಯಾರೆಷ್ಟು ಬಿತ್ತರಿಸಿದ್ರು ? ಒಂದೊಳ್ಳೇ ಮಾರ್ಕೆಟ್ ಇರೋ ಕಲಾವಿದರ ಎಂಗೇಜ್ ಮೆಂಟನ್ನು ಶುರುವಿನಿಂದ ಎಲ್ಲಾರು ಎಂಗೇಜ್ ಮೆಂಟ್ ಮುಗಿಸಿಕೊಂಡು ಅವರವರ ಮನೆಗೋಗಿ ಮಲ್ಗೋವರೆಗೂ, ಮದ್ವೆಯಾದ್ರೆ ಮದ್ವೆ ತಯಾರಿಯಿಂದ ಅವಕಾಶ ಕೊಟ್ರೆ ಪ್ರಸ್ಥದ ಕೋಣೆಯ ಡೆಕೊರೇಷನ್, ಯಾವ ಯಾವ ಹೂಗಳಿಂದ ಅಲಂಕಾರವಾಗಿದೆ, ಮಂಚಕ್ಕೆಷ್ಟು ದಿಂಬು ? ತಿನ್ನಕ್ಕೇನೇನು ಐಟಂ ಇದೆ ಅನ್ನೋದನ್ನೂ ತೋರಿಸ್ತೀವಿ ಅನ್ನೋದು ಟಿಆರ್ ಪಿ ಐಟಂ, ಜಾಹೀರಾತೆಂಬ ಜಾಂಗೀರನ್ನು ಹಿಡಿದು ತರ್ತವೆ ಅಂಥಹ ಪ್ರೋಗ್ರಂಗಳು ಅನ್ನೋರೆ ಜಾಸ್ತಿ ಎನ್ನುವ ಭಾವ ಮೂಡಿತು.

ಪದ್ಮಾ ಕುಮುಟ ಅವರನ್ನು ನೆನೆಯುತ್ತಾ ನೆನೆಯುತ್ತಾ ಇಂಡಸ್ಟ್ರಿಯ ಮನಸ್ಥಿತಿಯತ್ತ ಕನ್ನಡಿ ಹಿಡಿದ ಪ್ರಫುಲ್ಲಾ ಮೇಡಂ, ಇಂಡಸ್ಟ್ರಿಯಲ್ಲಿ ಸುಧಾರಿಸಬೇಕಾದ ಅಂಶಗಳನ್ನೂ ಗಮನಕ್ಕೆ ತಂದುಕೊಟ್ಟರು. ಆಮೇಲೆ ಬೆಳ್ಳಿ ಪರದೆಯ ಮೇಲೆ ‘ಚೋಮನ ದುಡಿ’ ಸ್ಕ್ರೀನಿಂಗ್ ಆಯ್ತು. ಚಿತ್ರದ ಬಗ್ಗೆ ನಾನೇನೂ ಹೇಳಲ್ಲ. ಚಿತ್ರದಲ್ಲಿ ಚೋಮ ಇದಾನಲ್ಲ ಅವನು ನಂಗೆ ಕನ್ನಡ ಇಂಡಸ್ಟ್ರಿಯ ಹತಾಶ ಕನಸುಗಳಾಗಿ ಕಾಣಿಸಿದ. ಬೆಳ್ಳಿ ಬೇರೇನೂ ಅಲ್ಲ, ನೂರಾರು ಕನಸು ಹೊತ್ತು ಇಂಡಸ್ಟ್ರಿಗೆ ಬರುವ ಮಹಿಳಾ ಕಲಾವಿದರ ತೊಳಲಾಟಗಳಂತೆ ಗೋಚರಿಸಿದಳು. ಅಯ್ಯನೋರು ಮಾತ್ರ ಇಡೀ ಇಂಡಸ್ಟ್ರಿಯನ್ನು ಮುಷ್ಠಿಯೊಳಗಿಳಿಸುವ ಕಾಣದ ಕೈಗಳ ನೆರಳು ಅಲ್ಲದೆ ಇನ್ನೇನೂ ಅಲ್ಲ. ಆದ್ರೆ ಬೆಳ್ಳಿ ಪರದೆಯ ವಜ್ರ ಕಿರಣ ನಮ್ಮ ಬೆಳ್ಳಿ ಪದ್ಮಾ ಕುಮುಟ.






0 Comments