ಡಾ ವಿಜಯಕುಮಾರ್ ಎಂ ಬೋರಟ್ಟಿ

ಸ್ವಾಮಿ, ಮಾಚಯ್ಯನನ್ನು ನಮ್ಮ ಜನ ನೆನ್ನೆ ರಾತ್ರಿ. . . ಎಂದು ಒಬ್ಬ ಗರುಡ (ಬೇಹುಗಾರ) ಪ್ರಧಾನ ಮಂತ್ರಿ ಶಂಕರ ದೇವನಿಗೆ ತಲೆ ಬಾಗಿ ಹೇಳುತ್ತಿದ್ದಂತೆ ಶಂಕರ ತನಗಿದ್ದ ಕಂಟಕ ಕೊನೆಗೂ ತೀರಿತು ಎಂದು ಮುಗುಳ್ನಕ್ಕ. ಮಾಚಯ್ಯ ಕೊಲೆಯಾಗಿದ್ದ. ಮಾಚಯ್ಯನ ಕೊಲೆಯಲ್ಲಿ ಮತ್ತೊಂದು ಕಲ್ಯಾಣ ಕ್ರಾಂತಿ ಟಿಸಿಲೊಡೆಯುವ ಮುನ್ನವೇ ಕಮರಿ ಹೋಯಿತು.
ಶಂಕರ ದೇವ ಗಂಡಾಧೀಶ್ವರನೆನೆಸಿಕೊಂಡಿದ್ದ ರಾಜ ಮಹಾದೇವನ ಆಸ್ಥಾನ ಕವಿ ಮತ್ತು ಪ್ರಧಾನ ಮಂತ್ರಿ. ಮಹಾದೇವನ ಎಲ್ಲಾ ಮಹಾದಾಸೆಗಳನ್ನು ಪೂರೈಸುತ್ತಲೇ ಶಂಕರ ದೇವ ಇಷ್ಟೊಂದು ಮೇಲೆ ಬಂದದ್ದು. ಬಲು ಜಾಣ. ವಾಕ್ಚಾತುರ್ಯದಿಂದ ಎಂತವರನ್ನು ಮರುಳು ಮಾಡಬಲ್ಲ ಆಸಾಮಿ.
ಬಿಜ್ಜಳನ ಅನೇಕ ಮಂಡಳಾಧೀಶ್ವರರಲ್ಲಿ ಒಬ್ಬನಾದ ವೀರಭದ್ರನ ಮೊಮ್ಮಗನೇ ಮಹಾದೇವ. ವೀರಭದ್ರ ಮೂಲದಲ್ಲಿ ಹಡಪದ ಜನಾಂಗಕ್ಕೆ ಸೇರಿದವನು. ಹಾಗಾಗಿ ಬಿಜ್ಜಳನ ನಂಬಿಕೆಗೆ ಪಾತ್ರನಾಗಿದ್ದ. ಆದರೆ ನಂತರ ಬಸವಣ್ಣನ ಪ್ರಭಾವಕ್ಕೆ ಒಳಗಾಗಿ ತಾನು ಕೂಡ ಶಿವಶರಣರ ಮತವನ್ನು ಅನುಸರಿಸಿದ. ಗುಪ್ತವಾಗಿ. ಬಿಜ್ಜಳನ ಕೊಲೆಯ ನಂತರ ಕಲ್ಯಾಣದ ಸುತ್ತ-ಮುತ್ತ ಅರಾಜಕತೆ ಮತ್ತು ಹಿಂಸೆ ವಿಪರೀತವಾಯಿತು. ಹಾಗಾಗಿ ವೀರಭದ್ರ ಅಲ್ಲಿರದೇ ಈಗಿನ ಬಳ್ಳಾರಿ ಪ್ರಾಂತಕ್ಕೆ ವಲಸೆ ಬಂದ. ಕೆಲ ಸಮಯದ ನಂತರ ತನ್ನ ನಿಷ್ಠರ ಸಹಾಯದಿಂದ ಅಲ್ಲಿನ ಕೆಲವು ಗ್ರಾಮಗಳನ್ನು ಗೆದ್ದು, ಅಲ್ಲೇ ನೆಲೆಸಿದ. ಮಗ ಸೋಮನಾಥನಿಗೆ ಅಪ್ಪನಿಂದ ಬಂದ ಪ್ರದೇಶಗಳನ್ನು ಕಾಪಾಡಿಕೊಂಡು ಹೋಗುವಷ್ಟರಲ್ಲಿ ಸಾಕಾಗಿಹೋಯಿತು. ಆದರೆ ಮೊಮ್ಮೊಗ ಆಕಾಂಕ್ಷಿ. ವೀರ, ಧೀರ ಮತ್ತು ಸಾಹಸಿಯಾಗಿದ್ದ ಮಹಾದೇವ ಪಟ್ಟಕ್ಕೆ ಬಂದಾಗ 17 ವರ್ಷಗಳು. ಬಸವಣ್ಣ ಕಾಲದ ಕಲ್ಯಾಣ ಕ್ರಾಂತಿಯು ವಿಫಲತೆಯನ್ನು ಕಂಡು ಸುಮಾರು 40 ವರ್ಷಗಳಾಗಿದ್ದವು. ಪಟ್ಟಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಮಹಾದೇವ ಕುಂದಗಲ್ಲಿನ ಗ್ರಾಮಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು, ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿದ. ತನ್ನ ದಿಗ್ವಿಜಯವನ್ನು ಶಾಶ್ವತಗೊಳಿಸಬೇಕು, ತಾನು ಕೂಡ ಬಸವಣ್ಣನಷ್ಟೇ ಪ್ರಸಿದ್ಧಿಯಾಗಬೇಕು ಎಂದು ಅನೇಕ ದೇವಾಲಯಗಳನ್ನು ಕಟ್ಟಿಸಿ ಅಲ್ಲಿ ತನ್ನ ಬಗ್ಗೆ ಕಲ್ಲಿನ ಶಾಸನಗಳನ್ನು ಕೆತ್ತಿಸಿದ. ಇದಕ್ಕೆಲ್ಲಾ ಒಬ್ಬ ವಿದ್ವಾಂಸನ ಅವಶ್ಯಕತೆ ಇದ್ದಾಗ ಅದನ್ನು ಪೂರೈಸಿದ್ದು ಶಂಕರ ದೇವ. ಅವನಿಂದ ರಚಿಸಲ್ಪಟ್ಟ ಮಹಾದೇವೋತ್ತಮ ದರ್ಪಣವನ್ನು ಎಲ್ಲಾ ದೇವಾಲಯಗಳ ಶಾಸನಗಳಲ್ಲಿ ಕೆತ್ತಿಸಿಲಾಯಿತು. ದರ್ಪಣದ ಅನೇಕ ಭಾಗಗಳನ್ನು ರಾಘವಾಂಕನ ಗದ್ಯದಿಂದ ಕದ್ದಿದ್ದು ಎಂದು ಮಹಾದೇವನಿಗೆ ಗೊತ್ತಾಗಲೇ ಇಲ್ಲ. ದರ್ಪಣದ ವಾಚನವನ್ನು ಮಾಡಿದ ಮೇಲೆ ಶಂಕರ ದೇವ ಮಹಾದೇವನಿಗೆ ಬಹಳ ಆತ್ಮೀಯನಾದ. ಆಸ್ಥಾನದ ಕವಿ ಆದ. ನಂತರ ಪ್ರಧಾನ ಮಂತ್ರಿಯಾಗಿ ಬಡ್ತಿ ಪಡೆದುಕೊಂಡ.
ಶಂಕರ ದೇವನ ಪೂರ್ವದ ಹೆಸರು ಶಂಕರ ಭಟ್ಟ. ಸ್ಮಾರ್ತ (ಕಮ್ಮೆ ಕುಲ) ಮೂಲದವನು. ಇವನ ಕಡೆಯವರನ್ನು ಶಿವಬ್ರಾಹ್ಮಣರು ಎಂತಲೂ ಕರೆಯುತ್ತಿದ್ದರು. ಅವನಿಗೀಗ ಸುಮಾರು ಅರವತ್ತರ ವಯಸ್ಸು. ಕಲ್ಯಾಣ ಕ್ರಾಂತಿ ಸಂಭವಿಸುವ ಸಮಯದಲ್ಲಿ ಅವನಿಗೆ ಸುಮಾರು 20 ವರ್ಷಗಳಾಗಿದ್ದವು. ಆಗ ಅವನು ಕಲ್ಯಾಣದ ಹತ್ತಿರದ ಒಂದು ಗ್ರಾಮದಲ್ಲಿದ್ದ. ಶಿವಶರಣರ ಪ್ರಭಾವದ ಬಿರುಗಾಳಿಗೆ ಸಿಕ್ಕು ಬೇರೆ ದಾರಿ ಕಾಣದೆ ತನ್ನ ತಂದೆ, ತಾಯಿ ಮತ್ತು ಮಡದಿಯೊಂದಿಗೆ ಲಿಂಗ ದೀಕ್ಷೆಯನ್ನು ತೆಗೆದುಕೊಂಡಿದ್ದ. ವೇದ, ಉಪನಿಷತ್ತುಗಳ ಮೇಲೆ ತಕ್ಕ ಮಟ್ಟಿಗೆ ಹಿಡಿತವಿತ್ತು. ಮೊದ, ಮೊದಲು ಶಿವಶರಣರ ಹೊಸ ವಿಚಾರ, ಲಿಂಗಾಯತ ಮತದ ಜನಪ್ರಿಯತೆಯನ್ನು ತಡೆಯಲು ಪ್ರಯತ್ನಿಸಿದವರಲ್ಲಿ ಇವನೂ ಒಬ್ಬ. ಆದರೆ ಇದು ಕ್ಷೀಣ ದನಿಯಾಗಿತ್ತು. ಬದಲಾಗುತ್ತಿರುವ ಪರಿಸ್ಥಿತಿಗಳಲ್ಲಿ ತನ್ನ ಪೌರೋಹಿತ್ಯದ ಸ್ಥಾನ-ಮಾನವು ಕೊಚ್ಚಿಕೊಂಡು ಹೋಗುತ್ತದೆಯೆಂದು ಭಯಗೊಂಡು ಬಸವಣ್ಣನ ಮತಕ್ಕೆ ಸೇರಿಕೊಂಡ. ಲಿಂಗಾಯತನಾಗಿದ್ದುಕೊಂಡೆ ಪೌರೋಹಿತ್ಯವನ್ನು ಮುಂದುವರೆಸಬಹುದೆಂದು ಮೊದಲು ಹೊಳೆದದ್ದೇ ಇವನಿಗೆ. ಜೊತೆಗೆ ಹೊಸ ಮತದಲ್ಲಿ ಹೆಚ್ಚು ಜನ ಅಕ್ಷರಸ್ಥರಿರಲಿಲ್ಲ. ಹಾಗಾಗಿ ಶಿವಶರಣರ ಮೇಲೆ ತಾನು ಪಾಂಡಿತ್ಯ ಸಾಧಿಸಬಹುದೆಂದು ಎಣಿಸಿದ. ಸ್ವತಃ ಬಸವಣ್ಣನೇ ತನಗೆ ಲಿಂಗ ದೀಕ್ಷೆ ಕೊಟ್ಟರೆಂದು ಶಂಕರ ಕೊಚ್ಚಿಕೊಳ್ಳತೊಡಗಿದ. ತನ್ನ ಹೆಸರನ್ನು ಶಂಕರ ದೇವ ಎಂದು ಬದಲಾಯಿಸಿಕೊಂಡ. ಅಷ್ಟೇ ಅಲ್ಲ. ಬಸವಣ್ಣನು ಕಮ್ಮೆ ಕುಲಕ್ಕೆ ಸೇರಿದವರೆಂದು, ಅವರು ಮೂಲತಃ ನಮ್ಮವರು ಎಂದು ತನ್ನ ಆತ್ಮೀಯರಲ್ಲಿ ಪ್ರಚಾರ ಮಾಡಲು ಶುರು ಮಾಡಿದ. ಮೂಲ ಕುಲದ ಬುದ್ಧಿ ಹೋಗಲಿಲ್ಲ. ಶಂಕರ ದೇವ ತನ್ನ ಶ್ರೇಷ್ಠತೆಯನ್ನು ಪ್ರತಿಪಾದಿಸಲು ಶುರುಮಾಡಿದ. ಲಿಂಗವಂತ ಕೆಳಜಾತಿಯವರ ಜೊತೆಗೆ ತನಗಿದ್ದ ಉನ್ನತ ಸ್ಥಾನಮಾನಗಳನ್ನು ಹಂಚಿಕೊಳ್ಳಲು ಹಿಂಜರಿದ. ತನ್ನ ಪೌರಹಿತ್ಯವೇ ಮೇಲೆಂದು ಪ್ರದಶರ್ಿಸಿದ.
ಹೀಗೆ ಮುಂದುವರೆಯುತ್ತಿರಬೇಕಾದರೆ ಕಲ್ಯಾಣದಲ್ಲಿ ಅಂತರ್-ಜಾತೀಯ ವಿವಾಹದ ವಿವಾದ ಕೋಲಾಹಲವನ್ನುಂಟು ಮಾಡಿತು. ಬಿಜ್ಜಳನ ಸೈನಿಕರು ಶಿವಶರಣರನ್ನು ಮಟ್ಟ ಹಾಕಲು ಶುರು ಮಾಡಿದರು. ಶಂಕರನ ತಂದೆ-ತಾಯಿ ಬಂಧನಕ್ಕೊಳಗಾದರು. ಆಗ ಶಂಕರ ತನ್ನ ಹೆಂಡತಿಯ ಜೊತೆಗೆ ಅವಳ ತವರು ಮನೆಗೆ ಹೋಗಿದ್ದ. ತಂದೆ-ತಾಯಿಗಳನ್ನು ಬಂಧಿಸಿದ ಸುದ್ದಿ ಕೇಳಿ ಎಲ್ಲಿ ತನ್ನನ್ನು ಕೂಡ ಬಂಧಿಸುತ್ತಾರೊ ಎಂದು ಹೆದರಿ, ಅವನು ಅಲ್ಲಿಂದಲೇ ಹೆಂಡತಿಯನ್ನು ಕರೆದುಕೊಂಡು ನಾಪತ್ತೆಯಾದ. ರಾಜಾಶ್ರಯಕ್ಕಾಗಿ ಅಲೆದಾಡಿದ. ಸಾಕಷ್ಟು ಅಲೆದಾಡಿದ ಮೇಲೆ ಕೊನೆಗೆ ಕುಂದಗಲ್ಲಿಗೆ ಬಂದ. ಅಲ್ಲಿ ಆಗ ತಾನೆ ಮಹಾದೇವ ಅನೇಕ ಗ್ರಾಮಗಳನ್ನು ಗೆದ್ದು ತನ್ನ ಖ್ಯಾತಿಗೆ ಹಾತೊರೆಯುತ್ತಿದ್ದ. ತಕ್ಕನಾದ ವಿದ್ವಾಂಸ ಕವಿಯನ್ನು ಹುಡುಕುತ್ತಿರುವಾಗ ಮಹಾದೇವನ ಕಣ್ಣಿಗೆ ಬಿದ್ದದ್ದು ಈ ಶಂಕರ.
ಕುಂದಗಲ್ಲಿನಲ್ಲಿ ಸಂಸ್ಕೃತ ಭಾಷೆ ಮಾತಾಡೋರು ಯಾರೂ ಇರಲಿಲ್ಲ. ಹಾಗಾಗಿ ಶಂಕರನಿಗೆ ಎಲ್ಲಿಲ್ಲದ ಮರ್ಯಾದೆ ದೊರೆಯಿತು. ಮಹಾದೇವನಿಗೆ ಅದೇನು ಹುಚ್ಚೋ, ಯಾರು ಅವನ ಕಿವಿ ಊದಿದರೋ ಗೊತ್ತಿಲ್ಲ, ಸಂಸ್ಕೃತ ದೇವಭಾಷೆಯೆಂದು ಅವನ ತಲೆಯಲ್ಲಿ ಹೊಕ್ಕಿಬಿಟ್ಟಿತ್ತು. ಹೀಗಾಗಿ ಶಂಕರ ದೇವ ಅವನಿಗೆ ಮಹಾನ್ ವಿದ್ವಾಂಸನಾಗಿ ಗೋಚರಿಸಿದ. ಶಂಕರನ ಚಾರಿತ್ರಿಕ ಪ್ರಜ್ಞೆ ಬಹಳಷ್ಟು ಕೆಲಸ ಮಾಡಿತು. 40 ವರ್ಷಗಳ ಹಿಂದೆ ತನ್ನ ಊರಿನವರನ್ನು ಹೇಗೆ ಮರಳು ಮಾಡುತ್ತಿದ್ದನೋ, ಹಾಗೆ ಇಲ್ಲಿಯೂ ಕೂಡ ಮಹಾದೇವನನ್ನು, ಇತರರನ್ನು ತನ್ನ ಕಟ್ಟು ಕತೆಗಳಿಂದ ಮರುಳು ಮಾಡತೊಡಗಿದ. ಎಲ್ಲರೂ ಅವನ ಮಾತಿನ ವರಸೆಗೆ, ತಾವು ನೋಡಿರಲಾರದ ಮತ್ತು ಬಹಳ ಆಸೆಯಿಂದ ಕೇಳಲು ಬಯಸಿದ ಶಿವಶರಣರ ಕತೆಗಳನ್ನು ಅವನ ಬಾಯಿಂದ ಕೇಳಿ ಬಹಳ ಆನಂದ ಪಡುತ್ತಿದ್ದರು. ಒಬ್ಬನನ್ನು ಹೊರತು ಪಡಿಸಿ. ಅವನೇ ಮಾಚಯ್ಯ.

ಮಾಚಯ್ಯ ಮಹಾದೇವನ ದಂಡನಾಯಕ. ಮಹಾದೇವ ಎಲ್ಲೆಲ್ಲಿ ದಂಡೆತ್ತಿ ಹೋಗುತ್ತಾನೋ, ಅಲ್ಲಲ್ಲಿ ತನ್ನ ವೀರ, ಪರಾಕ್ರಮದಿಂದ ಕಾದಾಡಿ ರಾಜನ ಮೆಚ್ಚುಗೆಯನ್ನು ಪಡೆದುಕೊಂಡವನು. ಮಹಾದೇವನ ಅನೇಕ ವಿಜಯಗಳಲ್ಲಿ ಮಾಚಯ್ಯನ ಪಾತ್ರ ಬಲು ದೊಡ್ಡದು. ಪಾಂಡಿತ್ಯದಲ್ಲಿ ಹೇಗೆ ರಾಜನು ಶಂಕರನನ್ನು ನಂಬಿದ್ದನೋ, ಯುದ್ಧ, ಸಮರಗಳಲ್ಲಿ ಮಾಚಯ್ಯ ರಾಜನ ನೆಚ್ಚಿನ ಬಂಟ. ಅವನು ಶಂಕರಿನಿಗಿಂತ ಸುಮಾರು ಮೂವತ್ತು ವರ್ಷ ಚಿಕ್ಕವನಾಗಿದ್ದ. ವಯಸ್ಸಿಗೆ ತಕ್ಕಂತೆ ಅವನಿಗೆ ಇನ್ನೂ ಬಿಸಿ ರಕ್ತದ ಕಾವು ಇತ್ತು. ಮಾಚಯ್ಯನ ಮೂಲಸ್ಥರು ಮಾದರ ಕೋಮಿಗೆ ಸೇರಿದವರು. ಕೆಲವರು ಹೇಳುವ ಪ್ರಕಾರ ಶಿವಶರಣ ಮಾದರ ಚೆನ್ನಯ್ಯ ಇವನ ಹಿರಿಯ ಸಂಬಂಧಿಕನಂತೆ. ಈಗ ಇವರೆಲ್ಲರೂ ಲಿಂಗಾಯತರಾಗಿದ್ದರಿಂದ ಮಾಚಯ್ಯ ತಾನು ಕೂಡ ಶಿವಶರಣರ ಸಂತಾನ ಎಂದು ಹೆಮ್ಮೆ ಪಡುತಿದ್ದ. ಇವನ ವಂಶಸ್ಥರೂ ಕೂಡ ಕಲ್ಯಾಣದ ಅದ್ಯಾವುದೋ ಹಳ್ಳಿಯಲ್ಲಿ ಇದ್ದವರು. ಕಲ್ಯಾಣದ ಗಲಭೆಯಿಂದ ಇವರನ್ನು ಹಳ್ಳಿ ಬಿಟ್ಟು ಹೋಗಲು ಬಿಜ್ಜಳನ ಕಡೆಯವರು ಆಜ್ಞೆ ಮಾಡಿದ್ದರಿಂದ ಊರೂರು ಅಲೆದು, ಕೊನೆಗೆ ಇಲ್ಲಿ ಬಂದು ಜೀವನ ಸಾಗಿಸುತ್ತಿದ್ದರು.
ಸಾಮಾನ್ಯ ಸೈನಿಕನಾಗಿದ್ದ ಮಾಚಯ್ಯ ದಂಡನಾಯಕನಾದ ದಿನದಿಂದ, ಅವನಿಗೂ, ಶಂಕರನಿಗೂ ಮುಸುಕಿನ ಗುದ್ದಾಟ ಶುರುವಾಯಿತು. ಇದಕ್ಕೆ ಕಾರಣ ಮಾಚಯ್ಯನಲ್ಲ. ಶಂಕರ. ಅನೇಕ ವಿಷಯಗಳ ಬಗ್ಗೆ ಇಬ್ಬರಲ್ಲೂ ಭಿನ್ನಾಭಿಪ್ರಾಯಗಳಿದ್ದವು. ಯುದ್ಧ, ಪ್ರಜೆಗಳು, ರಾಜಕೀಯ, ಕಂದಾಯ, ಕೃಷಿ, ಸೈನ್ಯ, ಆಥರ್ಿಕ, ಸಾಮಾಜಿಕ, ಕೌಟಂಬಿಕ, ಇತ್ಯಾದಿ ವಿಷಯಗಳ ಬಗ್ಗೆ ಶಂಕರ ರಾಜನಿಗೆ ಸಲಹೆಗಳನ್ನು ನೀಡುತಿದ್ದ. ರಾಜ ಅವುಗಳನ್ನು ಪ್ರಶ್ನಿಸದೇ, ಪಾಲಿಸುತ್ತಿದುದು ಅತಿಯಾಯಿತು ಎಂದು ಮಾಚಯ್ಯನಿಗೆ ಅನಿಸತೊಡಗಿತು. ಪ್ರಜೆಗಳ ನಾಡಿ ಮಿಡಿತವನ್ನು ಸರಿಯಾಗಿ ತಿಳಿಯದೇ ಶಂಕರ ತನ್ನ ಸ್ವಾರ್ಥ ಸಾಧನೆಗೆ ಇಷ್ಟೆಲ್ಲಾ ಮಾಡುತ್ತಿದ್ದಾನೆಂದು ಮಾಚಯ್ಯನಿಗೆ ಸ್ಪಷ್ಟವಾಗತೊಡಗಿತ್ತು. ತನ್ನ ನೇರವಾದ, ಕಪಟತನವಿಲ್ಲದ ಮಾತುಗಳಿಂದ ಮಾಚಯ್ಯ ಶಂಕರನಿಗೆ ತಲೆನೋವಾಗತೊಡಗಿದ. ಮಾಚಯ್ಯನ ಬಗ್ಗೆ ಶಂಕರ ಒಳಗೊಳಗೆ ಕುದಿಯತೊಡಗಿದ. ಇವನನ್ನು ಹೀಗೆ ಬಿಟ್ಟರೆ ತನಗೆ ಕಂಟಕ ತಪ್ಪಿದ್ದಲ್ಲ ಎಂದು ಶಂಕರ ಮನಗಂಡ. ತಾನು ಮುಂಜಾಗ್ರತೆ ವಹಿಸಬೇಕು ಎಂದುಕೊಳುತ್ತಿದ್ದ ಸಮಯದಲ್ಲಿ ನಡೆದ ಘಟನೆಗಳು ಮಾಚಯ್ಯನನ್ನು ಮಟ್ಟ ಹಾಕಲು ಕಾರಣಗಳನ್ನು ನೀಡಿದವು. ಕುಂದಗಲ್ಲಿನ ಇತಿಹಾಸದಲ್ಲಿ ಎಂದೆಂದಿಗೂ ಮರೆಯಲಾಗದ ರಕ್ತ ಚರಿತ್ರೆಗೆ ಇದು ನಾಂದಿಯಾಯಿತು.
ರಾಜ ಮಹಾದೇವ ಒಮ್ಮೆ ಶಂಕರನನ್ನು ಕರೆದು,
ಶಂಕರರೆ, ನಮ್ಮ ಬಸವಣ್ಣಾದಿಗಳ ಖ್ಯಾತಿ ಸಮಸ್ತ ಭೂತಳಕೆ ಬೆಳಗುವಂತೆ ತಾವು ಕಾವ್ಯ-ಪುರಾಣಗಳನ್ನು ರಚಿಸಬೇಕು. ಇದುವರೆಗೂ ಯಾರೂ ಕನ್ನಡದಲ್ಲಿ ಬಸವಣ್ಣಾದಿಗಳ ಬಗ್ಗೆ ಗ್ರಂಥಗಳನ್ನು ಬರೆದಿಲ್ಲ. ಹಾಗಾಗಿ ನಿಮ್ಮ ಕರಗಳಿಂದ ಅವರ ಖ್ಯಾತಿ ದಶದಿಕ್ಕುಗಳಿಗೂ ಪಸರಿಸುವಂತಹ ಗ್ರಂಥವನ್ನು ರಚಿಸಿ. ರಾಜನ ಒಳ ಇಂಗಿತವನ್ನು ತಕ್ಷಣವೇ ಅರಿತ ಶಂಕರ ಬಲು ಉತ್ಸಾಹದಿಂದ ರಾಜನೆದುರಿಗೆ,
ರಾಜರೆ, ಶಿವಶರಣರ ಖ್ಯಾತಿ ಮೂರು ಲೋಕಕ್ಕೆ ತಿಳಿಯುವಂತೆ ಮಾಡುವುದು ನನ್ನ ಪುಣ್ಯ. ನಾನು ಬರೆಯುವ ಕಾವ್ಯ ಮುನ್ನಿನ ಕಬ್ಬಮನೆಲ್ಲಮಿಕ್ಕಿ ಮೆಟ್ಟುವಂತವು ಎಂದು ಎದೆ ಉಬ್ಬಿಸಿ ಪ್ರಮಾಣ ಮಾಡಿದ. ಈ ಬಯಕೆಯ ಫಲಶೃತಿಯೇ ‘ಬಸವ-ಮಹಾದೇವಾದಿ ದರ್ಪಣಂ’ಕೃತಿ. ಈ ಕೃತಿಯನ್ನು ಅವನು ಎರಡು ಭಾಗಗಳನ್ನಾಗಿ ವಿಂಗಡಿಸಿಕೊಂಡ. ಮೊದಲನೆಯ ಭಾಗದಲ್ಲಿ ಮಹಾದೇವನ, ಗುಣಗಾನವನ್ನು ಮಾಡಿದರೆ, ಎರಡನೇ ಭಾಗದಲ್ಲಿ ಬಸವಣ್ಣಾದಿಗಳ ಜೀವನ ಚರಿತ್ರೆ ಮತ್ತು ಲೀಲೆಯ ಬಗ್ಗೆ ಬರೆದ.
ಕೃತಿಯ ಆದಿ ಭಾಗದಲ್ಲಿ ಮಹಾದೇವನನ್ನು ವಿಷ್ಣುವಿಗೂ, ಪರಮೇಶ್ವರನಿಗೂ, ಬಸವಣ್ಣನಿಗೂ, ಸೂರ್ಯನಿಗೂ, ಮನ್ಮಥನಿಗೂ ಹೋಲಿಸಿ ಬೇರೆ ಬೇರೆ ಮಂಗಳ ಶ್ಲೋಕಗಳನ್ನು ರಚಿಸಿದ. ಮಹಾದೇವನು ಐಶ್ವರ್ಯವಂತನು, ಬಲವಂತನೂ, ಬಲಿಷ್ಠರಾದವರ ಗರ್ವವನ್ನು ನಾಶಪಡಿಸಿದವನು, ಬಸವಣ್ಣನಂತೆ 96 ಸಾವಿರ ಜಂಗಮರ ಸುಖಭೋಗಗಳಿಗೆ ಆಶ್ರಯದಾತನೂ, ಧಮರ್ಾನುಗುಣವಾಗಿ ರಾಜ್ಯವನ್ನು ಪಾಲಿಸುವವನೂ, ಕಮಲಗಳಂತೆ ವಿಸ್ತಾರವಾದ ಕಣ್ಣುಗಳನ್ನು ಉಳ್ಳವನೂ, ಪುರುಷಶ್ರೇಷ್ಠನೂ ಶ್ರೀವಿಷ್ಣು-ಮಹೇಶ್ವರ ಸ್ವರೂಪನೂ ಸತ್ಯಾಶ್ರಯಕುಲತಿಲಕನು ಎಂದು ಬಣ್ಣಿಸಿ, ಅವನು ಬಸವಪುರುಷನ ಹಾಗೆ ಶುಭಕರವಾದ ಅನೇಕ ಬಗೆಯ ಸಂತೋಷವನ್ನು ನಮಗೆ ದಯಪಾಲಿಸಬೇಕೆಂದು ಮೊದಲನೇ ಭಾಗವನ್ನು ಮುಗಿಸಿದನು. ಆಸ್ಥಾನದ ಕೆಲವು ಪಂಡಿತರು ‘ಹೌದೌದು’ ಎಂದು ತಲೆಯಾಡಿಸಿದ್ದನ್ನು ನೋಡಿ ಇನ್ನುಳಿದವರು ಸಹ ತಲೆಯಾಡಿಸಿದರು. ಮಾಚಯ್ಯ ಕೂಡ. ಆದರೆ ಆತ ತಲೆಯಾಡಿಸಿದ್ದು ನಿಜಹೃದಯದಿಂದ. ಕಾವ್ಯದಲ್ಲಿ ತನ್ನ ದೊರೆಯನ್ನು ಹೊಗಳಿದ ಭಾಗಗಳನ್ನು ಅವನು ಅರ್ಥ ಮಾಡಿಕೊಂಡ. ಎಲ್ಲೆಲ್ಲಿ ಸಂಸ್ಕೃತಭರಿತ ಸಾಲುಗಳು ಇದ್ದವೋ ಅವು ತನಗೆ ಅರ್ಥವಾಗುವುದಿಲ್ಲವೆಂದು ನಿರ್ಲಕ್ಷಿಸಿದ. ಆದರೆ ಮಹಾದೇವನನ್ನು ವಿಷ್ಣುವಿಗೆ ಹೋಲಿಸಿದ್ದು ಮಾಚಯ್ಯನಿಗೆ ಸರಿ ಬೀಳಲಿಲ್ಲ. ಮಹಾರಾಜರು ಇದನ್ನು ಯಾಕೆ ಗಮನಿಸಲಿಲ್ಲ? ಎಂದು ಆಶ್ಚರ್ಯ ಪಟ್ಟ. ಸಮಯ ಸಿಕ್ಕಾಗ ಇದರ ಬಗ್ಗೆ ಮಹಾರಾಜರಲ್ಲಿ ವಿಚಾರಿಸಬೇಕು ಎಂದು ತನ್ನ ಮನಸ್ಸಿನಲ್ಲಿ ಅಂದುಕೊಂಡ.
ಶಂಕರನ ಲೀಲಾಜಾಲವಾದ ಓದಿಗೆ, ಪಾಂಡಿತ್ಯಕ್ಕೆ ಮತ್ತು ಕಾವ್ಯದ ಸೊಬಗಿಗೆ ತಲೆದೂಗಿದ ಮಹಾದೇವ ಸಂತುಷ್ಟನಾಗಿ ಶಂಕರನನ್ನು ಮನಃಪೂರ್ವಕವಾಗಿ ಅಭಿನಂದಿಸುತ್ತಾ,
ಶಂಕರ ಮಂತ್ರಿಗಳೆ, ನಿಮ್ಮನ್ನು ಪಡೆದ ನಾವೇ ಧನ್ಯರು. ಅಪರೂಪದ, ಅನುಪಮವಾದ ಕಾವ್ಯವನ್ನು ರಚಿಸಿದ್ದೀರಿ. ಕಣರ್ಾನಂದವಾಯಿತು. ಇನ್ನು ತಾವು ದಯಮಾಡಿ, ಎರಡನೇ ಭಾಗವನ್ನೂ ಸಹ ಓದಬೇಕು. ಬಸವಣ್ಣಾದಿಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕೆಂಬ ಆಸೆ, ತವಕ. ಅವರ ಮಹಿಮೆಯನ್ನು, ಸಾಧನೆಗಳನ್ನು ತಿಳಿದುಕೊಳ್ಳುವ ಕುತೂಹಲ. ನಮಗ್ಯಾರಿಗೂ ಅವರ ಬಗ್ಗೆ ಹೆಚ್ಚು ಗೊತ್ತಿಲ್ಲ. ತಾವು ಸ್ವತಃ ಅವರ ಕಾಲದಲ್ಲಿ ಇದ್ದೋರು. ಇನ್ನು ತಡ ಮಾಡಬೇಡಿ. ಮುಂದುವರೆಯಲಿ ಸರಸ್ವತಿಯ ಆರಾಧನೆ
ಪ್ರಭುಗಳ ಚಿತ್ತ ಎಂದು ಶಂಕರ ತಲೆ ಬಾಗಿ ಕಾವ್ಯದ ಎರಡನೇ ಭಾಗವನ್ನು ವಾಚಿಸಲು ಶುರು ಮಾಡುತ್ತಾನೆ. ಎರಡನೇ ಭಾಗದಲ್ಲಿ ಬಸವಣ್ಣನ ಜೀವನದ ಬಗ್ಗೆ ಶಂಕರ ದೇವ ಬರೆದ ಕಾವ್ಯದ ಸಾರಾಂಶ ಹೀಗಿತ್ತು:
ಬಸವಣ್ಣನು ಶಿವನ ಅಂಶ. ಶಿವನ ಆಜ್ಞೆಯನ್ನು ಶಿರಸಾವಹಿಸಿ ವೃಷಭಮುಖನು
ಅಗ್ರಹಾರಂ ಬಾಗೆವಾಡಿಯೊಳಗೆಸೆದಿರ್ಪ
ಅಗ್ರೇಶ್ವರಂ ಕಮ್ಮೆಕುಲದಿಂದೆ ಮೆರೆದಿರ್ಪ
ವಿಪ್ರನಿರ್ಪಂ ಮಾದಿರಾಜನಾತನ ಸತಿಯು
ಅಪ್ರತಿಮ ಮಾದಾಂಬೆಯೆಂದೆಂಬ ಗುಣವತಿ
ಗೆ ಚಿಪ್ಪಿನೊಳ್ ಮುತ್ತು ಕಾಸಾರದೊಳ್ ಪಕಜಂ ಪುಟ್ಟುವಂತೆ ಬಸವರಾಜನಾಗಿ ಜನಿಸುವನು. ಆತನ ಬಾಲ್ಯದಲ್ಲಿಯೇ ಅವನ ತಂದೆ-ತಾಯಿಗಳು ತೀರಿಕೊಳ್ಳುವರು. ಬಸವರಾಜ ಪ್ರಾಯಕ್ಕೆ ಬಂದಾಗ ಅಗ್ರಹಾರದ ಸಾಂಪ್ರದಾಯಿಕಮತದಲ್ಲಿ ಅನಾದರಣೆ ಹುಟ್ಟಿ ಹೊಸ ಧಾಮರ್ಿಕ ಭಾವನೆಯುಂಟಾಗುವುದು. ಸ್ವಜನ, ಸ್ವಗ್ರಾಮವನ್ನು ಪರಿತ್ಯಾಗ ಮಾಡಿ ಪುಣ್ಯಕ್ಷೇತ್ರವಾದ ಕಪ್ಪಡಿ ಸಂಗಮಕ್ಕೆ ಬರುವನು. ಅಲ್ಲಿ ಕೆಲವು ಕಾಲ ಶಿವಪೂಜೆಯಲ್ಲಿ ನಿರತನಾಗಿದ್ದು ಈಶ್ವರಪ್ರೇರಿತನಾಗಿ ಬಿಜ್ಜಳನ ರಾಜಧಾನಿಗೆ ಹೋಗುವನು. ಅಲ್ಲಿ ಅನುಕೂಲಸಂದರ್ಭವೊದಗಿ ಆತನಿಗೆ ನೌಕರಿಯೂ, ಸ್ವಜನವಾದ ಸಿದ್ಧದಂಡಾಧಿಪನ ಆಶ್ರಯವೂ ದೊರೆಯುವುದು. ಕಾಲಕ್ರಮದಲ್ಲಿ ತನ್ನ ಜಾಣ್ಮೆಯಿಂದ ಬಸವರಾಜ ಬಿಜ್ಜಳನ ಮೆಚ್ಚಿಗೆಯನ್ನು ಪಡೆದು ಉನ್ನತ ಪದವಿಗೇರುವನು. ಈತನು ಹೀಗೆ ಉನ್ನತ ಪದವಿಗೆ ಬಂದಾಗ ಈತನ ಪ್ರಭಾವದಿಂದ ಸಹಸ್ರಾರು ಸಂಖ್ಯೆಯಲ್ಲಿ ಬ್ರಾಹ್ಮಣ ವಟುಗಳು ಈತನ ಪಂಥಕ್ಕೆ ಸೇರಿ ತಮ್ಮನ್ನು ತಾವು ‘ಲಿಂಗಿ ಬ್ರಾಹ್ಮಣ’ರೆಂದು ಕರೆದುಕೊಂಡರು. ಇವರ ಜೊತೆಗೆ ಇನ್ನೂ ಅಧಿಕ ಸಂಖ್ಯೆಯಲ್ಲಿ ಶೂದ್ರಾತಿಶೂದ್ರರೂ ಸಹ ಬಸವಣ್ಣ ಪ್ರತಿಪಾದಿಸಿದ ವಿಚಾರಗಳಿಗೆ ಮಾರು ಹೋಗಿ ಲಿಂಗದೀಕ್ಷಿತರಾಗುವರು. ಆದರೆ ಅವರ ಹಿನ್ನಲೆಗಣುಗುಣವಾಗಿ ಅವರನ್ನು ‘ಲಿಂಗಾಯತ’ರೆಂದು ಗುರುತಿಸಲಾಯಿತು. ಲಿಂಗಿ ಬ್ರಾಹ್ಮಣರು ಮೇಲುಸ್ತರದಲ್ಲಿದ್ದು, ಲಿಂಗಾಯತರು ಕೆಳಸ್ತರದಲ್ಲಿದ್ದರು. ಬಸವಣ್ಣನ ಈ ಹೊಸ ಪಂಥದಿಂದ ವರ್ಣಸಂಕರವುಂಟಾಗಿ ಬಸವಣ್ಣನಿಗೂ ಬಿಜ್ಜಳನಿಗೂ ವೈಮನಸ್ಯ ಉಂಟಾಯಿತು. ಕ್ರಮೇಣ ಇದು ತೀವ್ರಗೊಂಡು ಬಸವಣ್ಣನು ಬಿಜ್ಜಳನ ರಾಜ್ಯವನ್ನು ತೊರೆದು ಕಪ್ಪಡಿ ಸಂಗಮಕ್ಕೆ ಬಂದು ಅಲ್ಲಿ ಶಿವನಲ್ಲಿ ಐಕ್ಯವನ್ನು ಹೊಂದಿದನು.
ಬೆಳಿಗ್ಗಿನಿಂದ ಸಂಜೆಯವರೆಗೂ ವಾಚನ ಮಾಡಿದ ಶಂಕರನ ಕಾವ್ಯಕ್ಕೆ ರಾಜ ತಲೆದೂಗಿ, ಬಸವಣ್ಣನ ಚರಿತ್ರೆಯನ್ನು ಕೇಳಿದಕ್ಕೆ ತನ್ನ ಜನ್ಮ ಸಾರ್ಥಕವಾಯಿತು ಎಂದು ಹೇಳಿದ. ಪುರಾಣದಲ್ಲಿದ್ದ ಸಂಸ್ಕೃತದ ಸಾಲುಗಳು ರಾಜನ ವಿಶೇಷ ಪ್ರಶಂಸೆಗೆ ಪಾತ್ರವಾದವು. ಶಂಕರನ ಕೋರಿಕೆಯ ಮೇರೆಗೆ ಬಸವಣ್ಣನ ಚರಿತ್ರೆಯನ್ನು ಎಲ್ಲೆಡೆ ಪಸರಿಸುವಂತೆ ತನ್ನ ವಿದ್ವಾಂಸರಿಗೆ ಆಜ್ಞೆಯಿತ್ತ. ಇಷ್ಟೆಲ್ಲಾ ಆಗುತ್ತಿರಬೇಕಾದರೆ ಮಾಚಯ್ಯನಿಗೆ ಬಸವಣ್ಣಾದಿಗಳ ಬಗ್ಗೆ ಶಂಕರ ಬರೆದ ಕಾವ್ಯದಲ್ಲಿ ಏನೋ ಎಡವಟ್ಟಾಗಿದೆ; ಎಂಥದೋ ಮಿಥ್ಯ ಸೇರಿಕೊಂಡಿದೆ ಎಂದು ಅನುಮಾನಿಸಿದ. ಬರೆದಿರುವ ಎಲ್ಲಾ ಸಾಲುಗಳು ಶಂಕರನದೇ ಅಥವಾ ಬೇರೆಯವರದೇ? ಯೋಚಿಸಿದಷ್ಟು ಅವನಲ್ಲಿ ಅಸಮಾಧಾನ ಹೆಡೆ ಎತ್ತಿತು. ಶಂಕರನ ರಚನೆಯಲ್ಲಿ ಯಾವುದೋ ಸ್ವಾರ್ಥ ಅಡಗಿದೆಯೆಂದು ಅವನಿಗೆ ಅನಿಸತೊಡಗಿತು. ಯಾವುದು ಈ ಸ್ವಾರ್ಥ? ಮುಂದಾಲೋಚನೆಯಿಲ್ಲದೇ ಈ ಶಂಕರ ಯಾವುದೇ ಕಾರ್ಯವನ್ನು ಮಾಡಿದವನಲ್ಲ. ಹಾಗಾದರೆ ಈಗ ಇವನ ಉದ್ದೇಶವೇನು? ಯಾವ ಉದ್ದೇಶವನ್ನು ಈಡೇರಿಸಿಕೊಳ್ಳಲು ಹೊರಟಿದ್ದಾನೆ? ಅನೇಕ ಪ್ರಶ್ನೆಗಳು ಅವನ ತಲೆಯಲ್ಲಿ ಹುಳುಗಳು ಕೊರೆಯುವಂತೆ ಕೊರೆಯತೊಡಗಿದವು. ಆದರೆ ತನ್ನ ಅಸಮಾಧಾನವನ್ನು ಈಗ ಪ್ರಕಟಗೊಳಿಸುವುದು ಸರಿಯಲ್ಲವೆಂದು ಸುಮ್ಮನಾದ. ರಾಜನ ಆಜ್ಞೆಯಂತು ಮಾಚಯ್ಯನ ನಿದ್ರೆಯನ್ನೇ ಕೆಡಿಸಿತು.
ಗಿ
ಮಾಚಯ್ಯ ಒಂದು ದಿನ ರಾಜನ ಮನೆಯಿಂದ ತನ್ನ ಮನೆಗೆ ಕುದುರೆಯ ಮೇಲೆ ವಾಪಾಸು ಹೋಗುತ್ತಿದ್ದಾಗ ಶಂಕರ ಹೇಳಿದ ಬಸವಣ್ಣನ ಕಾವ್ಯ-ಪುರಾಣವನ್ನು ಮೆಲುಕು ಹಾಕುತ್ತಾ, ಯೋಚಿಸುತ್ತಾ ನಡೆದ. ಮಾಚಯ್ಯನಿಗೆ ತನ್ನ ಬಾಲ್ಯದ ದಿನಗಳು ಜ್ಞಾಪಕ ಬಂದವು. ಅಜ್ಜನ ಜೊತೆಗೆ ಶಿವಶರಣರ ಬಗ್ಗೆ ಮಾತನಾಡಿಕೊಳ್ಳುತ್ತಿದುದು ಅವನಿಗೆ ಈಗಲೂ ಪ್ರಿಯವಾದ ವಿಷಯ. ಅಜ್ಜನ ಮಾತುಗಳು ನಿಧಾನವಾಗಿ ನೆನಪಿಗೆ ಬರತೊಡಗಿದವು,
ಬಸಣ್ಣೋರು ಆಗ ಚೆನ್ನಯ್ಯನ ಮನ್ಯಾಗೆ ಒಂದ್ಸಲ ಬಂದು ಪಳಾರ ತಕ್ಕೊಂಡ ದಿನ ನಮ್ಮ ವಂಸದಾಗೆ ಬಾರಿ ಸುದಿನ ಅಂತೆ. ಅವರು ಬಂದ್ರು ಅಂದ್ರೆ ಇಡೀ ಊರೂರೇ ಖುಸಿ ಪಡ್ತಿತ್ತು ಅಂತೆ. ಅಂತ ದೊಡ್ಡ ಮನಸ್ರು ಅವ್ರು. ಅಜ್ಜ ಹೇಳುತ್ತಿದುದನ್ನು ಮೈಯೆಲ್ಲಾ ಕಿವಿಯಾಗಿ ಮಾಚಯ್ಯ ಕೇಳುತ್ತಿದ್ದ.
ಅಜ್ಜ, ಬಸಣ್ಣೋರು ನೋಡೋಕೆ ಹೆಂಗಿದ್ರು? ನಮ್ಮಂಗ?
ಲೇ ಮಗಾ. ಏನ್ ಪ್ರಸ್ನೆನೋ ಅದು? ಬಸಣ್ಣೋರು ಕೂಡ ನಮ್ಮಂಗೆ ಮನುಸ್ರು. ಆದರೆ ದೊಡ್ಡ ಮನಸ್ರು. ನಮ್ಮಂಗೆ ಕಪ್ಪಗೆ, ಕರಿ ಮೈಯ್ಯ ಅವದರ್ು? ನಮ್ಮಪ್ಪ ಹೇಳ್ತಾ ಇದ್ದ. ಅವರನ್ನ ನೋಡೋಕೆ ಎರಡು ಕಣ್ಣುಗಳು ಸಾಲ್ತಾ ಇಲರ್ಿಲ್ವಂತೆ. ಅವರು ಬತರ್ಾ ಇದ್ರೆ ಸಾಕ್ಷಾತ್ ಸಿವನೇ ಬಂದಂಗಾಗ್ತಾ ಇತ್ತಂತೆ. ಬೆಳ್ಳಗೆ ಇದ್ರಂತೆ. ಒಳ್ಳೊಳ್ಳೆ ಬಟ್ಟೆ ಹಾಕೊಂತಿದ್ರಂತೆ. ಸಾಹುಕಾರಾಗಿದ್ರಂತೆ. ಏನೇನೋ ಓದ್ಕೊಂಡಿದ್ರಂತೆ. ಅಷ್ಟಿದ್ರು, ಒಂದಿಷ್ಟು ಸೊಕ್ಕಿಲರ್ಿಲ್ವಂತೆ. ನಮ್ಮನ್ನ, ಆ ಹೊಲೆಯರನ್ನ ತಮ್ಮ ಮನೆಗೆ ಕದರ್ು, ಊಟ ಕೊಡ್ತಿದ್ರಂತೆ ಅಜ್ಜ ತನ್ನ ಬೊಜ್ಜು ಬಾಯಿಯನ್ನು ತೆಗೆದು ಖುಷಿಯಿಂದ ಹೇಳುತ್ತಿದ್ದ. ಮಾಚಯ್ಯ ತಡೆಯಲಾರದೆ,
ಅಜ್ಜ, ಬಸಣ್ಣೊರು ಬಾಂಬ್ರು ಕುಲಕ್ಕೆ ಸೇದರ್ೊರ? ಅಂತ ಕೇಳಿ ಬಿಟ್ಟ.
ಹಂಗ್ಯಾಕೆ ಕೇಳ್ತಿಯೋ? ಎಬರೇಷಿ! ಅವರು ಯಾವ ಕುಲಕ್ಕೆ ಸೇದರ್ೊರು ಅಂತ ನಂಗೂ ಗೊತ್ತಿಲ್ಲ. ಜನ್ರಲ್ಲಿ ಕುಲಾನ ಹುಡುಕಬಾದರ್ು ಅಂತ ಹೇಳ್ತಾ ಇದ್ರಂತೆ ಬಸಣ್ಣೋರು. ನಿಂಗ್ಯಾಕೆ ಈ ಇಚಾರ ಬಂತು?
ಅಲ್ಲ. ಬೆಳ್ಳಗೆ ಇದ್ರು ಅಂತ ಹೇಳ್ದೆ. ಸಾಹುಕಾರರಾಗಿದ್ರು ಅಂತ ಹೇಳ್ದೆ. ನಮ್ಮಲ್ಲಿ ಅಂತೋರು ಯಾರೌರೆ? ಅದಕ್ಕೆ ಕೇಳ್ದೆ!
ನಮ್ಮಪ್ಪ ಅದರ ಬಗ್ಗೆ ಏನೂ ಹೇಳ್ಲಿಲ್ಲ. ಅಲ್ಲ ಕಣ್ಲೆ, ಬಾಂಬ್ರು ಆಗಿದ್ರೆ ನಮ್ಮ ಹಟ್ಟಿ ತಕ ಯಾರ್ಲ ಬತರ್ಿದ್ದ್ರು? ಬಾಂಬ್ರು ಯಾವತ್ತಾದ್ರು ನಮ್ಮ ಕೇರಿಗೆ ಬಂದರ್ವ? ಬರೊದಿಲರ್ಿ. ನಮ್ಮ್ ಜೊತೆ ಊಟ, ಪಳಾರ ತಿಂದಾರ? ಬಸಣ್ಣೋರು ಒಂದ್ಸಲ ನಮ್ಮನೆಗೆ ಬಂದು ಊಟದ್ ಜೊತೆ ಉಳ್ಳಿ ತಿಂದು ಹೋದ್ರಂತೆ. ಹಂಗಾಗಿ ಅವರು ನಮ್ಮೊರೆ ಆಗಿದ್ರೇನೋ?!
ಆದ್ರೆ ಅವ್ರಿಗೆ ಓದೋಕೆ, ಬರೆಯೋಕೆ ಬತರ್ಿತ್ತು ಅಂತ ಹೇಳ್ದೆ? ಒಳ್ಳೆ ಇದ್ವಾಂಸರು ಅಂತ ಹೇಳ್ದೆ? ಸಂಸ್ಕೃತದಲ್ಲಿ ಮಾತಾಡ್ತಿದ್ರು ಅಂತ ನೀನು ಒಂದ್ಸಲ ಹೇಳಿದ್ ನೆಪ್ಪು ನಂಗೆ!?
ಹೌದಲ್ವ!? ಹಂಗಂತ ಹೇಳಿದ್ನ ನಾನು!? ಹಾಳಾದ್ದು ತಲೆ! ನೆಪ್ಪೇ ಬತರ್ಾ ಇಲ್ಲ! ಹಂಗಾದ್ರೆ ನಂಗು ಗೊತ್ತಿಲ್ಲಪ್ಪ! ಗೊತ್ತಿಲ್ಲಂದ್ರೆ ಸುಮ್ ಸುಮ್ಕೆ ದೊಡ್ಡೊರ ಬಗ್ಗೆ ಏನೂ ಮಾತಾಡ್ಬಾದರ್ು. ಸುಮ್ಕಿರು. ಇಂಥ ಪ್ರಸ್ನೆಗಳನ್ನ ಕೇಳಬಾದರ್ು. ನಮಗೆ ಅವ್ರು ಕುಲ ದ್ಯಾವ್ರು. ನಮ್ಮನ್ನ ಉದ್ಧಾರ ಮಾಡ್ದೋರು. ಅವರಿಂದ್ಲೆ ನಮ್ಗೆ ಸ್ವಲ್ಪ ಇದ್ಯೆ ತಲೆಗೆ ಹತ್ತಿರೋದು.
ಮಾಚಯ್ಯನ ಯೋಚನಾ ಲಹರಿ ಹೀಗೆ ಸಾಗುತ್ತಿದ್ದಾಗ ತಕ್ಷಣವೇ ಶಂಕರನ ಒಳ ಇಂಗಿತದ ಬಗ್ಗೆ ಅನುಮಾನಗಳು ಹುಟ್ಟತೊಡಗಿದವು. ಬಸವಣ್ಣನವರು ವಾಸ್ತವವಾಗಿ ಹೇಗೆ ಇದ್ದರು, ಅವರು ಹೇಗೆ ಜೀವನ ಸಾಗಿಸಿದರು. ಅವರ ಜೊತೆಗಿದ್ದವರು ಹೇಗಿದ್ದರು? ತಾನು ಚಿಕ್ಕವನಿದ್ದಾಗ ಕೇಳಿದ ಕಥೆಗಳಿಗೂ, ಶಂಕರ ಹೇಳಿದ ಪುರಾಣಕ್ಕೂ ಅಜಗಜಾಂತರವಿದೆಯಲ್ಲ? ಯಾವುದು ಸತ್ಯ? ಶಂಕರನಂತೂ ತಾನು, ನೋಡಿದ, ಭೇಟಿಯಾಗಿದ್ದ ಬಸವಣ್ಣನ ತದ್ರೂಪವನ್ನೇ ತನ್ನ ಸಾಲುಗಳ ಮೂಲಕ ಪ್ರತಿಬಿಂಬಿಸಿದ್ದೇನೆ ಅಂತ ಹೇಳಿಕೊಂಡ. ಅಂದರೆ ನನ್ನಜ್ಜ ಬಸವಣ್ಣನ ಬಗ್ಗೆ ಹೇಳುತ್ತಿದುದು ಸುಳ್ಳಾ? ಅಜ್ಜ ಹೇಳಿದ್ದ ಅನೇಕ ಶಿವಶರಣರ ಹೆಸರುಗಳು ಈಗ ನಿಧಾನವಾಗಿ ಜ್ಞಾಪಕಕ್ಕೆ ಬರತೊಡಗಿದವು. ಅಲ್ಲಮ, ಮಡಿವಾಳ ಮಾಚಿದೇವ, ಕದಿರೆ ರೆಮವ್ವೆ, ಪುಣ್ಯಸ್ತ್ರಿ ಲಿಂಗಮ್ಮ, ಮಾದರ ಚೆನ್ನಯ್ಯ, ಉರಿಲಿಂಗ ಪೆದ್ದಿ, ಅಂಬಿಗರ ಚೌಡಯ್ಯ, ಮೋಳಿಗೆ ಮಾರಯ್ಯ, ಸತ್ಯಕ್ಕ, ಇವರುಗಳು ಶಂಕರನ ಪುರಾಣದಲ್ಲಿ ಕಾಣಲಿಲ್ವಲ್ಲ? ಅವರೆಲ್ಲರೂ ಬಸವಣ್ಣನ ಸಂಗಡಿಗರು, ಬೆಂಬಲಿಗರೂ ಆಗಿದ್ದರು ಅಂತ ಅಜ್ಜ ಎಷ್ಟೊ ಸಲ ಹೇಳಿದ್ದ ನೆನಪು. ಆದರೆ ಅವರ ಬಗ್ಗೆ ಒಂದು ಮಾತನ್ನೂ ಶಂಕರ ಆಡಲಿಲ್ವಲ್ಲ? ಯಾಕೆ? ಇವೆಲ್ಲವನ್ನು ರಾಜನ ಎದುರಿಗೆ ಸಮಯ ಸಿಕ್ಕಾಗ ಚಚರ್ಿಸಬೇಕು ಎಂದು ಮನೆ ತಲುಪಿದಾಗ, ಮನೆಯ ಮುಂದೆ ತನಗಾಗಿ ಒಬ್ಬ ಗರುಡ ಕಾಯುತ್ತಿದುದು ಕಂಡಿತು. ಏನು ಬಂದದ್ದು? ಏನು ವಿಷಯ? ಎಂದು ಕೇಳಿದಾಗ ಬಂದಾತ,
ದಣಿ, ಶಂಕರ ದೇವರು ರಾಜರ ಅನುಮತಿಯಿಂದ ತೆಲುಗು ನಾಡಿನಿಂದ ಬಂದ ಅನೇಕ ಬ್ರಾಹ್ಮಣರಿಗೆ ಲಿಂಗ ದೀಕ್ಷೆ ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದ. ವಿಷಯ ಕೇಳಿ ಮಾಚಯ್ಯನ ಮುಖ ಗಂಭೀರವಾಯಿತು.
ಗಿ
ಜನರ ಮನಸ್ಸಿನಿಂದ ಕಲ್ಯಾಣ ಕ್ರಾಂತಿಯ ಘಟನೆಗಳು ದೂರವಾಗತೊಡಗಿದಂತೆ ಬಸವಣ್ಣಾದಿಗಳ ಬಗ್ಗೆ ಕೇವಲ ಅಂತೆ-ಕಂತೆಗಳು ಉಳಿದುಕೊಂಡವು. ಈ ಅಂತೆ-ಕಂತೆಗಳು ಶಂಕರನಿಗೆ ಸೂಕ್ತವಾಗಿ ಕಂಡವು. ಜನರ ಅಜ್ಞಾನ ಮತ್ತು ಮರೆಗುಳಿಕೆಯನ್ನು ಶಂಕರ ದೇವ ಬಳಸಿಕೊಂಡು ‘ಬಸವ-ಮಹಾದೇವಾದಿ ದರ್ಪಣಂ’ನ್ನು ರಚಿಸಿದ. ತಾನು ಬರೆದದ್ದೇ ಸತ್ಯ ಎಂದು ಘೋಷಿಸಿದ. ರಾಜನಂತೂ ಕಾವ್ಯದಲ್ಲಿದ್ದ ತನ್ನ ವರ್ಣನೆಯಲ್ಲಿ ಮೈಮರೆತೆ. ಬಸವಣ್ಣನು ಬ್ರಾಹ್ಮಣ ಕುಲದಲ್ಲಿ ಹುಟ್ಟಿದ್ದು ಎಂದು ತಿಳಿದಾದ ಮೇಲೆ ಅವರ ಬಗ್ಗೆ ರಾಜನಲ್ಲಿ ಗೌರವ, ಭಕ್ತಿ ನೂರ್ಮಡಿಯಾಯಿತು. ತನ್ನ ಒಳ ಇಂಗಿತವನ್ನು ವ್ಯಕ್ತಪಡಿಸುವುದು ಇದೇ ತಕ್ಕನಾದ ಸುಸಮಯವೆಂದು ಒಂದು ದಿನ ಶಂಕರ ರಾಜನ ಹತ್ತಿರ ಬಂದು,
‘ಪ್ರಭುಗಳಿಗೆ, ವಂದನೆ ಎಂದು ತಲೆಬಾಗಿ ಕೈಮುಗಿದ. ಮಹಾದೇವ ಆಗ ತಾನೆ ಲಿಂಗಾರ್ಚನೆಯನ್ನು ಮುಗಿಸಿ ತನ್ನ ಕೋಣೆಯಲ್ಲಿ ಫಲಹಾರವನ್ನು ಸ್ವೀಕರಿಸುತ್ತಿದ್ದ. ಶಂಕರನನ್ನು ತಲೆ ಎತ್ತಿ ನೋಡಿ,
ಏನು, ಶಂಕರ ದೇವರೆ? ಬೆಳಗ್ಗೆ, ಬೆಳಗ್ಗೆ ನನ್ನನ್ನು ನೋಡಲು ಬಂದಿದ್ದೀರಿ! ಏನು ಸಮಾಚಾರ? ಎಂದು ಕೇಳಿದ.
ಪ್ರಭು, ನಿಮ್ಮ ಬಳಿ ಒಂದು ವಿಷಯ ಮಾತನಾಡುವದಿತ್ತು!
ಏನದು. ಅಷ್ಟೊಂದು ವಿಶೇಷವಾದದ್ದೇ? ತುತರ್ಿನದೆ?
ಹೌದು, ಪ್ರಭು. ಬಹಳ ಮುಖ್ಯವಾದದ್ದು
ಹಾಗಾದರೆ, ಹೇಳಿ ಎಂದು ತನ್ನ ಫಲಹಾರವನ್ನು ಮುಗಿಸಿ, ಕೈತೊಳೆದು ಪಲ್ಲಂಗದ ಮೇಲೆ ಕುಳಿತುಕೊಂಡ.
ಪ್ರಭು, ಈಗ್ಗೆ ತೆಲುಗು ನಾಡಿನಿಂದ ಕೆಲವು ಬ್ರಾಹ್ಮಣರು ಇಲ್ಲಿಗೆ ವಲಸೆ ಬಂದಿದ್ದಾರೆ. ಅವರಲ್ಲಿ ಅನೇಕರು ಮಹಾ ಪಂಡಿತರು, ಯೋಗಿಗಳು, ಸಂಸ್ಕೃತ ವಿದ್ವಾಂಸರು ಮತ್ತು ಜ್ಞಾನಿಗಳು. ಅವರಿಗೆ ತಾವು ಆಶ್ರಯ ಕೊಡಬೇಕು. ಇದು ಅವರ ಕೋರಿಕೆಯು ಕೂಡ
ಅವರ ಕೋರಿಕೆಯೋ, ಅಥವಾ ತಮ್ಮ ಬಯಕೆಯೋ?
ಎರಡೂ ಕೂಡ ಹೌದು ಎಂದು ಅಳುಕಿನಿಂದ ಶಂಕರ ಹೇಳಿದ.
ಆದರೆ, ಅವರು ಬ್ರಾಹ್ಮಣರು. ಅವರಿಗೆ ನಾವು ಆಶ್ರಯ ಕೊಡುವುದೆಂದರೆ ಅತಿಯಾದ ನಿರೀಕ್ಷೆ ಇಟ್ಟುಕೊಂಡ ಹಾಗೆ ಅನಿಸುವುದಿಲ್ಲವೇ ನಿಮಗೆ? ನಾವು ಶಿವಶರಣರ ಸಂತಾನದವರು. ಅವರಿಗೂ, ನಮಗೂ ಆಗ ಬರುವುದಿಲ್ಲ. ಆದರೆ ಅವರು ನಿಮಗೆ ಪರಿಚಯದವರಾಗಿರುವುದರಿಂದ ಅವರ ಬಗ್ಗೆ ನಮಗೆ ಗೌರವವಿದೆ. ನಮ್ಮಲ್ಲಿ ಒಂದೆರಡು ದಿನ ಇದ್ದು, ನಮ್ಮ ಆತಿಥ್ಯವನ್ನು ಸ್ವೀಕರಿಸಬಹುದಲ್ಲ?. ರಾಜನ ಈ ಮಾತುಗಳನ್ನು ಮೊದಲೇ ನಿರೀಕ್ಷಿಸಿದ್ದ ಶಂಕರ,
ಪ್ರಭು, ಇದಕ್ಕೆ ಒಂದು ಉಪಾಯವಿದೆ. ಅವರೆಲ್ಲರು ನಮ್ಮ ಕುಲಕ್ಕೆ ಮತಾಂತರಗೊಳ್ಳುವುದಾದರೆ ಇಲ್ಲಿ ಇರಲು ಅಡ್ಡಿಯಿಲ್ಲ ಅನಿಸುತ್ತೆ. ನಿಮಗೆ ಗೊತ್ತೇ ಇದೆ. ನಮ್ಮ ಬಸವಣ್ಣನವರೂ ಕೂಡ ಹುಟ್ಟಿನಿಂದ ಬ್ರಾಹ್ಮಣರು. ನಂತರ ಸಂಗಮನ ಕೃಪೆಯಿಂದ ಲಿಂಗವಂತರಾದರು. ಹಾಗಾಗಿ. . . .
ಶಂಕರ ದೇವರೆ, ನಿಮ್ಮ ತಲೆಯನ್ನು ಮೆಚ್ಚಲೇಬೇಕು. ಎಷ್ಟಾದರೂ ನೀವು ಕೂಡ ಒಂದು ಕಾಲದಲ್ಲಿ ಬ್ರಹ್ಮಪಿಂಡ ಅಲ್ಲವೇ?!
ಪ್ರಭು, ಇದರಲ್ಲಿ ನಮ್ಮ ಒಳಿತು ಅಡಗಿದೆ. ನಮ್ಮ ಕುಲದ ಹಿರಿಮೆಯನ್ನು ವ್ಯಾಪಿಸಿದಂತೆ ಆಗುವುದು. ಬಸವಣ್ಣನವರ ಕಾಲದಲ್ಲಿ ನೂರಾರು ಬ್ರಾಹ್ಮಣರು ಲಿಂಗವಂತರಾದರು. ಅವರು ತೋರಿದ ಮಾರ್ಗದಲ್ಲಿ ನಾವು ನಡೆಯಬೇಕು. ಜೊತೆಗೆ ಈ ಬ್ರಾಹ್ಮಣರಲ್ಲಿ ಅನೇಕರು ವಿದ್ವಾಂಸರಿರುವದರಿಂದ ನಮ್ಮಲ್ಲಿ ಪಾಂಡಿತ್ಯವನ್ನು ಬೆಳೆಸಿದಂತಾಗುವುದು. ಇವರ ಸಹಾಯದಿಂದ ನಮ್ಮ ಕುಲವನ್ನು ತೆಲುಗು ನಾಡಿನಲ್ಲೂ ಪಸರಿಸಬಹುದು. ಶಂಕರನ ಈ ಮಾತಿಗೆ ಮಹಾದೇವ ಪುಳಕಗೊಂಡ. ಬಸವಣ್ಣಾದಿಗಳ ಜೊತೆಗೆ ತನ್ನ ಖ್ಯಾತಿಯೂ ಎಲ್ಲೆಡೆ ಪ್ರಚಾರ ಮಾಡಿದಂತಾಗುವುದೆಂದು, ಮುಂದೆ ಇತಿಹಾಸವು ನನ್ನನ್ನು ಒಬ್ಬ ಮಹಾನ್ ಲಿಂಗವಂತ ರಾಜ ಎಂದು ನೆನಪಿಸಿಕೊಳ್ಳುವುದೆಂದು ಒಳಗೊಳಗೆ ಉಲ್ಲಾಸಗೊಂಡ.
ಒಂದು ಗೊತ್ತಾದ ದಿನ ಪ್ರಾತಿನಿಧ್ಯವೆಂಬಂತೆ ನಾಲ್ಕು ಬ್ರಾಹ್ಮಣರಿಗೆ ರಾಜನ ಸಮ್ಮುಖದಲ್ಲಿ ಲಿಂಗ ದೀಕ್ಷೆಯನ್ನು ಕೊಡುವ ಕಾರ್ಯಕ್ರಮವನ್ನು ಇಟ್ಟುಕೊಳ್ಳಲಾಯಿತು. ರಾಜನಿಗೆ ದೀಕ್ಷೆ ನೀಡುವುದನ್ನು ಒಂದು ಕಾರ್ಯಕ್ರಮದಂತೆ ನೇರವೇರಿಸುವುದು ಹೊಸತೆನಿಸಿತ್ತು. ಯಾಕೆಂದರೆ ತನಗೆ ಹಿಂದೆ ಲಿಂಗದೀಕ್ಷೆಯಾದದ್ದು ಕೆಲವೇ ಕೆಲವು ನಿಮಿಷಗಳಲ್ಲಿ. ಕೊರಳ ಸುತ್ತ ಇಷ್ಟ ಲಿಂಗವನ್ನು ಕಟ್ಟಿ ಓಂ ಬಸವಲಿಂಗಾಯ ನಮಃ’ ಎಂದು ಹೇಳಿದಾಕ್ಷಣ ದೀಕ್ಷೆಯ ಘಳಿಗೆ ಮುಗಿದ ಹಾಗೆ. ಬಸವಣ್ಣ, ಅಲ್ಲಮ, ಅಕ್ಕನವರು ಈ ರೀತಿ ಹೇಳಿಕೊಟ್ಟಿದ್ದರಂತೆ. ಈ ಕಾರ್ಯಕ್ರಮವನ್ನು ವೀಕ್ಷಿಸಲು ಅನೇಕ ಗಣ್ಯರು, ವ್ಯಾಪಾರಸ್ಥರು, ಜಮೀನುದಾರರು, ಪಕ್ಕದೂರಿನ ಮಂತ್ರಿಗಳು ಮತ್ತು ಅನೇಕ ವಿದ್ವಾಂಸರನ್ನು ಆಹ್ವಾನಿಸಲಾಯಿತು. ಎಲ್ಲರೂ ಇದು ಕೆಲವು ನಿಮಿಷಗಳ ಕಾರ್ಯಕ್ರಮವಿರಬಹುದೆಂದು ನಿರೀಕ್ಷಿಸಿದ್ದರು. ಆದರೆ ಆಗಿದ್ದೇ ಬೇರೆ. ಶಂಕರನಿಗೆ ಈ ಕಾರ್ಯಕ್ರಮ ಲಿಂಗವಂತರಿಗೆ ಮಾದರಿಯಾಗಬೇಕೆಂದು ಒಂದು ಕಡೆ ಇದ್ದರೆ, ಇದರಿಂದ ತನ್ನ ಸ್ಥಾನ, ಮಾನ, ಅಂತಸ್ತುಗಳನ್ನು ಹೆಚ್ಚಿಸುವ ತಂತ್ರವು ಮತ್ತೊಂದು ಕಡೆ ಇತ್ತು. ಜೊತೆಗೆ ತಾನು ಹೊಸದಾಗಿ ಬರೆದಿದ್ದ ಶಿವದೀಕ್ಷಾಭೋದಾಕ್ರಮವನ್ನು ಜಾರಿಗೊಳಿಸುವು ವಿಚಾರವೂ ಕೂಡ ಈ ಕಾರ್ಯಕ್ರಮದ ಭಾಗವಾಗಿತ್ತು. ದೀಕ್ಷೆಯನ್ನು ಶಂಕರನೇ ಕೊಡುತ್ತಿದುದರಿಂದ ದೀಕ್ಷೆಗೊಳಗಾಗುವ ಬ್ರಾಹ್ಮಣರಿಗೆ ಅವನೇ ಗುರುವಾದ.
ಮೊದಲಿಗೆ ಶಂಕರಗುರುವಿನಾಜ್ಞೆಯಂತೆ ಪ್ರಭಾತಸಮಯದಲ್ಲಿ ಆ ನಾಲ್ಕು ಬ್ರಾಹ್ಮಣರು ಮಂಗಳಸ್ನಾನವಂಮಾಡಿದರು. ಬಳಿಕ ಅವರಿಂದ ಶಿವಪೂಜಾಪರಾಯಣ ಮಾಡಿಸಲಾಯಿತು. ಭಯಭಕ್ತಿಯಿಂದ ಗುರುಪೂಜನವನ್ನು ಮಾಡಿ, ಸಕಲಶಿವಮಾಹೇಶ್ವರರ ಬಲವೆನಿಸಿದ ವಿಭೂತಿಯನ್ನು ಹಣೆಯ ಮೇಲೆ ಧರಿಸಿ, ಖನನ, ದಹನಶೋಧನ, ಸಂಪ್ರೋಕ್ಷಣ, ಮರ್ಧನ, ಅನುಲೇಪನವೆಂಬ ಷಟ್ಕರ್ಮಂಗಳಿಂದ, ಸಾರಣೆ, ಕಾರಣೆ, ತಳಿರ, ದೋರಣ, ಕುಸುಮ, ಸರವಿಸರ, ಬಳವಳಿಗಿ ಧೂಪಾದಿಗಳಿಂದಪರಿಶೋಭಿಪ ಮನೋಹರ ಮಂಟಪದಲ್ಲಿ ಆ ನಾಲ್ವರು ಪದ್ಮಾಸೀನರಾದರು. ಶಿವಮಂತ್ರೋಚ್ಛಾರಣ ಶಿವಧ್ಯಾನಾದಿಗಳಿಂಕುಳ್ಳಿದ್ದ ಬ್ರಾಹ್ಮಣರನ್ನು ಶಂಕರನು ತನ್ನ ಕೃಪಲೋಚನದಿಂದ ನಿರೀಕ್ಷಿಸಿ ಮೇಲೆ ಸಕಲಮಾಹೇಶ್ವರರಾಶೀರ್ವಾದದಿಂದ ವೀರಮಾಹೇಶ್ವರಮಂತ್ರವನ್ನು ಉಚ್ಛರಿಸಿದ. ಬಳಿಕ ಪ್ರಣವಪಂಚಾಕ್ಷರಮಂತ್ರವಂ ಶಿಷ್ಯರ ದಕ್ಷಿಣಕರದಲ್ಲಿ ಮೆಲ್ಲನುಚ್ಚರಿಸುತ್ತಾ, ಲಿಂಗ ಯಜ್ಞೋಪವೀತವನ್ನು ಧರಿಸುವಲ್ಲಿ ದೀಕ್ಷೆಯ ಕಾರ್ಯಕ್ರಮವು ಮುಗಿಸಿದ.
ಪ್ರಾತಃಕಾಲದಲ್ಲಿ ಶುರುವಾದ ಈ ಕಾರ್ಯಕ್ರಮ ಮುಗಿದಾಗ ಸೂರ್ಯ ಭುಜದ ಮೇಲೆ ಬಂದಿದ್ದ. ಇದಾದ ನಂತರ ರಾಜನ ಉಪಸ್ಥಿತಿಯಲ್ಲಿ ಬಂದಿದ್ದವರೆಲ್ಲರಿಗೂ ದಾಸೋಹವನ್ನು ಏರ್ಪಡಿಸಲಾಯಿತು. ವಿಜೃಂಭಣೆಯಿಂದ ನಡೆದ ಈ ಕಾರ್ಯಕ್ರಮವನ್ನು ಬಂದ ಅಹ್ವಾನಿತರು ಹೊಗಳಿದ್ದೇ, ಹೊಗಳಿದ್ದು. ಶಂಕರ ಸಮಯ ಪ್ರಜ್ಞೆಯನ್ನು ಮೆರೆದು ಇದಕ್ಕೆಲ್ಲಾ ಕಾರಣ ನಮ್ಮ ಮಹಾರಾಜನೆಂದು ಘೋಷಿಸಿದ. ಇದರಿಂದ ಮಹಾದೇವ ಸಂತುಷ್ಟವುಂಟಾಗಿ, ಇನ್ನು ಮುಂದೆ ದೀಕ್ಷೆಯು ಹೀಗೆಯೇ ಇರಬೇಕೆಂದು, ಲಿಂಗದೀಕ್ಷ ವಿಧಾನವು ನಿಯಮಗಳ ಪ್ರಕಾರ ನಡೆಯಬೇಕೆಂದು, ದೀಕ್ಷೆಯನ್ನು ನೀಡಲು ಗುರು/ಆಚಾರ್ಯರಿಗೆ ಮಾತ್ರ ಅನುಮತಿಯಿದ್ದು, ಬೇರೆ ಯಾರಿಗೂ ದೀಕ್ಷೆ ನೀಡುವ ಹಕ್ಕಿಲ್ಲವೆಂದು ಆಜ್ಞೆ ಮಾಡಿದ. ಹೊಸದಾಗಿ ಸೇರಿಕೊಂಡ ಬ್ರಾಹ್ಮಣರನ್ನು ‘ಲಿಂಗಿ ಬ್ರಾಹ್ಮಣ’ರೆಂದು, ಅವರು ವಿಶೇಷ ಗೌರವಾದಾರಗಳಿಗೆ ಅರ್ಹರು ಎಂದು ನೆರೆದಿದ್ದವರಿಗೆ ಶಂಕರ ಸೂಚಿಸಿದ. ಶಂಕರನ ಲಿಂಗದೀಕ್ಷೆಯ ಚಟುವಟಿಕೆಗಳು ದಿನೇ, ದಿನೇ ಹೆಚ್ಚಾದವು. ತೆಲುಗು, ತಮಿಳು ಪ್ರದೇಶಗಳಿಂದ ಬಂದ ನೂರಾರು ಬ್ರಾಹ್ಮಣರಿಗೆ ಲಿಂಗದೀಕ್ಷೆಯನ್ನು ನೀಡಿದ. ಕೆಲವನ್ನು ಮಹಾದೇವನ ಗಮನಕ್ಕೆ ತಂದರೂ, ನೂರಾರು ಜನ ಬ್ರಾಹ್ಮಣರ ಲಿಂಗದೀಕ್ಷೆಯನ್ನು ಗುಪ್ತವಾಗಿ ನೆರವೇರಿಸಿದ. ನೋಡ, ನೋಡುತ್ತಲೆ ಶಂಕರ ಅತಿ ಶೀಘ್ರವಾಗಿ ಪ್ರಧಾನಿ ಪಟ್ಟಕ್ಕೆ ಏರಿದ್ದು ಈ ರೀತಿಯಿಂದ.

ಪ್ರಧಾನ ಮಂತ್ರಿಯಾದ ಕೆಲವೇ ದಿನಗಳಲ್ಲಿ ಶಂಕರ ಅಧಿಕಾರ ಚಲಾಯಿಸಲು ಶುರು ಮಾಡಿದ. ಅನೇಕ ಲಿಂಗಿ ಬ್ರಾಹ್ಮಣರಿಗೆ ಭಂಡಾರ, ಕಂದಾಯ ವಸೂಲಿ ಮತ್ತು ಸೈನ್ಯದ ಮೇಲ್ವಿಚಾರಕ ಮಂಡಳಿಯಲ್ಲಿ ಸೂಕ್ತವಾದ ಸ್ಥಾನ-ಮಾನಗಳನ್ನು ನೀಡಿದ. ಇಷ್ಟು ಸಾಲದು ಎಂದು, ಶಂಕರ ಅನೇಕ ಮಠ-ಮಾನ್ಯಗಳನ್ನು, ಗುರುಪೀಠಗಳನ್ನು ಶುರು ಮಾಡಿದ. ಅವುಗಳ ಮಠಾಧೀಶರನ್ನಾಗಿ ತನ್ನವರನ್ನೇ ನೇಮಿಸಿದ. ಈ ಮಠಗಳ ಮೂಲಕ ಜನರ ಧಾರ್ಮಿಕ ಜೀವನವನ್ನು ಹತೋಟಿಯಲ್ಲಿಡುವ, ರೂಪಿಸುವ ಯೋಜನೆಯಿತ್ತು. ಕ್ರಮೇಣ ಸುತ್ತ-ಮುತ್ತಲ ಗ್ರಾಮಗಳಲ್ಲಿ ಇದುವರೆಗೂ ಇರದಿದ್ದ ಸಾಮಾಜಿಕ, ಧಾಮರ್ಿಕ ಕಟ್ಟು-ಪಾಡುಗಳು ಈಗ ನಿಧಾನವಾಗಿ ತಲೆ ಎತ್ತಿದವು. ಇದರಲ್ಲಿ ಪ್ರಮುಖವಾದ ವಿಷಯ ವಿವಾಹ ಸಂಬಂಧಕ್ಕೆ ಸೇರಿತ್ತು. ಲಿಂಗವಂತರಲ್ಲಿ ಮೊದಲು ಇರದಿದ್ದ ವಿವಾಹ ನಿರ್ಬಂಧಗಳು ಈಗ ಮೊಳಕೆಯೊಡೆದವು. ಬಹುತೇಕ ಜನ ತಮ್ಮನ್ನು ತಾವು ಶಿವಶರಣರ ಸಂತಾನಗಳು ಎಂದು ನಂಬಿದ್ದರಿಂದ ಅವರ ನಡುವೆ ವಿವಾಹದ ಕೊಳು-ಕೊಡುವಿಕೆಯಲ್ಲಿ ಕಟ್ಟು-ನಿಟ್ಟಿನ ನಿಷಿದ್ಧಗಳಿರಲಿಲ್ಲ. ಇದ್ದರೂ ಕ್ರಮೇಣ ಕ್ಷೀಣೀಸುತಿತ್ತು. ಆದರೆ ಈಗ ವಿವಾಹ ಸಂದರ್ಭಗಳನ್ನು ನಡೆಸಲು ಗುರು/ಆಚಾರ್ಯರನ್ನು ಕರೆಯಬೇಕಾದ್ದರಿಂದ ವಿವಾಹ ಸಂಬಂಧಗಳು ಮತ್ತೊಮ್ಮೆ ಕಟ್ಟು-ಪಾಡುಗಳಿಗೆ ಒಳಗಾದವು.
ಇದಕ್ಕೆ ಶಂಕರನ ‘ವಿವಾಹ-ವಿಧಿ’ಎಂಬ ಗ್ರಂಥ ಮಾರ್ಗದರ್ಶನವಾಯಿತು. ಮಠಾಧೀಶರಾದ ‘ಲಿಂಗಿ ಬ್ರಾಹ್ಮಣ’ರು ಶ್ರೇಷ್ಠರು ಎಂಬ ನಂಬಿಕೆಯನ್ನು ನಿಧಾನವಾಗಿ ನೆಲೆಯೂರಿಸಲಾಯಿತು. ಈ ಶ್ರೇಷ್ಠತೆಯ ಜೊತೆಗೆ ಕನಿಷ್ಠರು ಯಾರು ಎಂಬ ಅರಿವು ಅನೇಕರಲ್ಲಿ ಸ್ಪಷ್ಟವಾಗಿ ಗೋಚರಿಸತೊಡಗಿದವು. ಕಡಿಮೆಯಾಗುತ್ತಿದ್ದ ತಾರತಮ್ಯಗಳು ಈಗ ಮತ್ತೆ ಜನರ ನಡುವೆ ನಿಧಾನವಾಗಿ ನುಸುಳತೊಡಗಿದವು. ಸುಲಭವೂ, ಸರಳವೂ ಆಗುತ್ತಿದ್ದ ಸಾಮಾಜಿಕ ಸಂಬಂಧಗಳು ಈಗ ಮತ್ತೆ ಅನೇಕ ನಿಷಿದ್ಧಗಳ ಬಲೆಯಲ್ಲಿ ಸಿಲುಕಿದವು. ರಾಜ್ಯದ ಅನೇಕ ಪ್ರಮುಖ ವಿಷಯಗಳಲ್ಲಿ ಶಂಕರ ಅಥವಾ ಆತನ ಕಡೆಯವರು ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಪ್ರಬಲರಾದರು. ಸೈನ್ಯದಲ್ಲಿ ಶಂಕರ ತನಗೆ ನಿಷ್ಠರಾದ ದಂಡನಾಯಕರನ್ನು ಮತ್ತು ಸೈನಿಕರನ್ನು ರಾಜನಿಗೆ ಗೊತ್ತಾಗದ ಹಾಗೆ ನೇಮಕ ಮಾಡಿಕೊಂಡ. ಸರ್ವಾಧಿಕಾರಿಯಾಗುವ ಎಲ್ಲಾ ಲಕ್ಷಣಗಳನ್ನು ಶಂಕರ ನಿಧಾನವಾಗಿ ಪ್ರಕಟಿಸತೊಡಗಿದ.
ಇವೆಲ್ಲವನ್ನು ವೀಕ್ಷಿಸುತ್ತಿದ್ದ ಮಾಚಯ್ಯನಿಗೆ ಅನೇಕ ವಿಷಯಗಳು ಸ್ಪಷ್ಟವಾಗತೊಡಗಿದವು. ಶಂಕರನ ಉದ್ದೇಶಗಳ ಬಗ್ಗೆ ಇದ್ದ ಅನುಮಾನಗಳು ಗಟ್ಟಿಯಾಗತೊಡಗಿದವು. ಮಹಾದೇವನ ಜಾಗದಲ್ಲಿ ತನ್ನನ್ನು ಪ್ರತಿಷ್ಠಾಪಿಸುವ ಹುನ್ನಾರವೇ? ಶಂಕರ ದೇವನನ್ನು ಈಗ ತಡೆಯಲಿಲ್ಲ ಅಂದ್ರೆ ರಾಜನಿಗೆ ಉಳಿಗಾಲವಿಲ್ಲವೆಂದು, ಅದಕ್ಕಿಂತ ಮಿಗಿಲು ಬಸವಣ್ಣಾದಿಗಳ ಚರಿತ್ರೆಗೆ, ನಮ್ಮ ಶಿವಶರಣರ ಕುಲಕ್ಕೆ, ಇತಿಹಾಸದಲ್ಲಿ ನಮ್ಮ ಬಗ್ಗೆ ಕಪ್ಪು ಚುಕ್ಕೆ ಉಳಿಯುತ್ತದೆಂದು ಮಾಚಯ್ಯ ಅರಿತುಕೊಂಡ. ಈಗ ತನ್ನ ಮುಂದೆ ಇರೋದು ಕೆಲವೇ ಕೆಲವು ಉಪಾಯಗಳು ಎಂದು ಮಾಚಯ್ಯನಿಗೆ ಅನಿಸಿತು. ಒಂದು, ರಾಜನ ಬಳಿ ಹೋಗಿ ಎಲ್ಲವನ್ನು ಚರ್ಚಿಸುವುದು ಮತ್ತು ಶಂಕರನ ಸಂಚನ್ನು ಬಯಲು ಮಾಡುವುದು. ಆದರೆ ಅದು ಸಾಧ್ಯವಿಲ್ಲದ ಮಾತು. ಮತ್ತು ಅಪಾಯಕಾರಿ ಕೂಡ. ಏಕೆಂದರೆ ಶಂಕರನ ಕಣ್ಣು ತಪ್ಪಿಸಿ ರಾಜನನ್ನು ಭೇಟಿ ಮಾಡಿ ಇಂತಹ ಮಹತ್ತರವಾದ ವಿಷಯವನ್ನು ಚರ್ಚಿಸುವುದು ಅಸಾಧ್ಯವಾಗಿತ್ತು. ಜೊತೆಗೆ ರಾಜ ತನ್ನನ್ನು ನಂಬುತ್ತಾನೋ, ಇಲ್ಲವೋ ಎಂಬುದರ ಬಗ್ಗೆ ಖಾತ್ರಿ ಇಲ್ಲ. ಎರಡನೇಯದು ಶಂಕರನ ವಿರುದ್ಧ ದಂಗೆ ಏಳುವುದು. ಅದು ಕೂಡ ಅಸಾಧ್ಯ. ಏಕೆಂದರೆ ಕ್ಷಣ ಮಾತ್ರದಲ್ಲಿ ದಂಗೆಯನ್ನು ಹತ್ತಿಕ್ಕುವ ಸಾಮರ್ಥ್ಯ, ಶಕ್ತಿಯನ್ನು ಶಂಕರ ಗಳಿಸಿಕೊಂಡು ಬಿಟ್ಟಿದ್ದಾನೆ. ಈಗ ಉಳಿದಿರುವುದು ಒಂದೇ ದಾರಿ. ಇದು ಪ್ರಾಯಾಸದಾಯಕ, ದೀರ್ಘವಾಗಿದ್ದರೂ ಮುಂದೆ ಇದರ ಉಪಯೋಗಗಳು ಅನೇಕ. ಆಕಸ್ಮಾತ್ ತಾನು ಈ ದಾರಿಯಲ್ಲಿ ವಿಫಲನಾದರೂ ಇದರ ಪರಿಣಾಮ ಮುಂದಿನ ಪೀಳಿಗೆಯವರೆಗು ಇರುತ್ತದೆಯೆಂದು ತಕ್ಷಣವೇ ಹೊಸ ದಾರಿಯಲ್ಲಿ ಕಾರ್ಯೋನ್ಮುಖನಾದ. ಕೆಲವೇ ದಿನಗಳಲ್ಲಿ ಮಾಚಯ್ಯ ಕಾಣೆಯಾಗಿದ್ದಾನೆಂದು ಸುದ್ದಿ ಹರಡಿತು.
ಮಾಚಯ್ಯ ಮರೆಯಾಗಿದ್ದು ಶಂಕರನಿಗೆ ಒಗಟಾಗಿ ಪರಿಣಮಿಸಿತು. ಎಲ್ಲಿ ಹೋಗಿರಬಹುದು? ಏನು ಮಾಡಿತ್ತಿರಬಹುದು? ರಾಜ್ಯ ಬಿಟ್ಟು ಹೋದನೆ? ಯಾಕೆ ತಲೆಮರಿಸಿಕೊಂಡಿದ್ದಾನೆ? ಎಂಬ ಪ್ರಶ್ನೆಗಳು ಕಾಡತೊಡಗಿದವು. ಅವನ ಸುಳಿವನ್ನು ಹಿಡಿಯಲು ಶಂಕರ ತನ್ನ ನೆಚ್ಚಿನ ಗರುಡರನ್ನು ನೇಮಿಸಿದ.
ಮಾಚಯ್ಯ ಎಲ್ಲೂ ಹೋಗಿರಲಿಲ್ಲ. ಅಲ್ಲೇ ಇದ್ದ. ರಾತ್ರಿಯ ವೇಳೆ ಜಂಗಮ ಸಂನ್ಯಾಸಿಯ ಹಾಗೆ ವೇಷ ಮರೆಸಿಕೊಂಡು ತನ್ನ ಬಾಲ್ಯ ಸ್ನೇಹಿತ ಕಲ್ಲಿನಾಗಯ್ಯನ ಜೊತೆ ಊರಲ್ಲಿ ಸುತ್ತುತ್ತಾ, ಜನರನ್ನು ಸಂಪರ್ಕಿಸತೊಡಗಿದ. ಸಂಘಟನೆಗಾಗಿ. ಇವನ ಜನರು ಕೆಳವರ್ಗದ, ಕೆಳ ಕುಲದ ಜನರಾಗಿದ್ದರು. ಸುತ್ತ, ಮುತ್ತಲೂ ಅವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅವರಲ್ಲಿ ನೂರಾರು ಮಂದಿ ಮಡಿವಾಳರು, ಹಡಪದರು, ಹೆಂಡದವರು, ಕುರಿ ದನ ಕಾಯುವವರು, ದೊಂಬರಾಟದವರು, ಚಂಡಾಲರು, ದಾಸಯ್ಯರು, ತಿರುಕರು, ಜೀತದಾಳುಗಳು, ಬೇಸಾಯಗಾರರು, ಎಕ್ಕಡ ಹೊಲಿಯುವವರು, ಸಿಂಪಿಗರು, ಹೆಣ ಹೊರುವವರು, ಚರ್ಮ ಸುಲಿಯುವವರು, ಹೊಲೆಯರು, ವೇಶ್ಯೆಯರು, ಇತ್ಯಾದಿಗಳು ಇದ್ದರು. ಇವರೆಲ್ಲರನ್ನು ಸಂಘಟಿಸಿ ಎಲ್ಲರಿಗೂ ಲಿಂಗದೀಕ್ಷೆಯನ್ನು ಕೊಟ್ಟು, ತನ್ನ ಬೆಂಬಲಿಗರ ಸಂಖ್ಯಾ ಬಲವನ್ನು ಹೆಚ್ಚಿಸಿಕೊಂಡು ತಾನು ಕೂಡ ಉನ್ನತ ಪದವಿಗೇರಬೇಕೆಂದುಕೊಂಡ.
ರಾಜ-ರಾಜ್ಯವನ್ನು ಉಳಿಸಲು ಶಂಕರನ ಹಾಗೆ ತಾನೂ ಕೂಡ ಬಲವಾಗಲಿಲ್ಲಾಂದ್ರೆ ಅವನ ಸಮನಾಗಿ ತಾನು ನಿಲ್ಲಲು ಸಾಧ್ಯವಿಲ್ಲವೆಂಬ ಕಠೋರ ಸತ್ಯ ಮಾಚಯ್ಯನಿಗೆ ತಿಳಿದಿತ್ತು. ಕಲ್ಯಾಣ ಕ್ರಾಂತಿಯ ಅಳಿದುಳಿದ ಜನರನ್ನು ಸಂಪರ್ಕಿಸಿ ಬಸವಣ್ಣಾದಿಗಳ ನೈಜ ವಿಚಾರಗಳನ್ನು ಕಲೆ ಹಾಕತೊಡಗಿದ. ಬಸವಣ್ಣಾದಿಗಳು ಅಸಂಖ್ಯಾತ ಕೆಳವರ್ಗದವರನ್ನು ಲಿಂಗವಂತ ಮತಕ್ಕೆ ಸೇರಿಸಿಕೊಂಡಿದ್ದು ಮಾಚಯ್ಯನಿಗೆ ಉತ್ಸಾಹವನ್ನುಂಟು ಮಾಡಿತು. ತಾನು ಕೂಡ ಇದನ್ನು ಸಾಧಿಸಬಹುದೆಂದು ಯೋಚಿಸಿದ. ಮಾಚಯ್ಯ ಮತ್ತು ಕಲ್ಲಿನಾಗಯ್ಯ ಹೋದೆಡೆಯಲೆಲ್ಲಾ ಶಂಕರ ದೇವ ಪ್ರಜೆಗಳನ್ನು ತಪ್ಪುದಾರಿಗೆ ಎಳೆಯುತ್ತಿದ್ದಾನೆಂದು, ಅದರಲ್ಲಿ ಅವನ ಸ್ವಾರ್ಥವಿದೆಯೆಂದು, ಇಲ್ಲದ ಕಟ್ಟು-ಪಾಡುಗಳನ್ನು ಬಲವಂತವಾಗಿ ಹೇರುತ್ತಿದ್ದಾನೆಂದು, ಜನರ ಐಕ್ಯತೆಯನ್ನು ಅವನು ಒಡೆಯುತ್ತಿದ್ದಾನೆಂದು ಪ್ರಚಾರ ಮಾಡತೊಡಗಿದರು. ಅಜ್ಜ ಹೇಳುತ್ತಿದ್ದ ವಚನಗಳ ಕೆಲವು ಪದಗಳನ್ನು ಜ್ಞಾಪಿಸಿಕೊಂಡು ಮಾಚಯ್ಯ ಜನರೆದುರಿಗೆ ಬಸವಣ್ಣಾದಿಗಳ ನಿಜ-ಸಂದೇಶವನ್ನು ಸಾರತೊಡಗಿದರು.
ಗರುಡರ ಮೂಲಕ ಮಾಚಯ್ಯನ ಚಟುವಟಿಕೆಗಳ ಬಗ್ಗೆ ಶಂಕರನಿಗೆ ಸುದ್ದಿ ಹೋಯಿತು. ಒಂದು ಕ್ಷಣ ಅವನು ತಲ್ಲಣಗೊಂಡ. ಆದರೆ ತಕ್ಷಣ ಸುಧಾರಿಸಿಕೊಂಡು, ಮಾಚಯ್ಯನನ್ನು ಈಗ ತಡೆಯಲಿಲ್ಲಾಂದ್ರೆ ಎಲ್ಲವೂ ತನ್ನ ಕುತ್ತಿಗೆಗೆ ಸುತ್ತಿಕೊಳ್ಳಬಹುದೆಂದು ಜಾಗ್ರತೆ ವಹಿಸಿದ. ರಾಜನ ಹತ್ತಿರ ಹೋಗಿ ಮಾಚಯ್ಯನ ಗುಪ್ತ ಚಟುವಟಿಕೆಗಳ ಬಗ್ಗೆ ಸುಳ್ಳು ದೂರು ನೀಡಿದ. ತಮ್ಮ ವಿರುದ್ಧ ಮಾಚಯ್ಯ ಸೈನ್ಯ ಕಟ್ಟುತ್ತಿದ್ದಾನೆಂದು, ಅದಕ್ಕಾಗಿ ಜನರನ್ನು ಆಕಷರ್ಿಸಲು, ಸಂಘಟಿಸಲು, ತಮ್ಮ ವಿರುದ್ಧ ಪ್ರಚಾರ ಮಾಡುತ್ತಿದ್ದಾನೆಂದು ರಾಜನ ಕಿವಿಯಲ್ಲಿ ಊದಿದ. ರಾಜನಿಗೆ ಇದನ್ನು ಮೊದ, ಮೊದಲು ನಂಬಲು ಅಸಾಧ್ಯವೆನಿಸಿತು. ಅತ್ಯಂತ ನಿಷ್ಠನಾದ ಮಾಚಯ್ಯ ಹೀಗೆ ಮಾಡಲು ಸಾಧ್ಯವೆ ಎಂದು ಒಂದು ಕ್ಷಣ ಅನಿಸಿದರೂ, ಶಂಕರನ ಮಾತನ್ನು ತಳ್ಳಿಹಾಕಲು ಇಷ್ಟಪಡಲಿಲ್ಲ. ದೀರ್ಘ ಕಾಲ ಯೋಚಿಸಿದ ಮೇಲೆ,
ಇದಕ್ಕೆ ಉಪಾಯವೇನು, ಶಂಕರ ದೇವರೆ?
ಇದನ್ನ ನನಗೆ ಬಿಡಿ. ತಾವು ವೃಥಾ ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಆಡಳಿತದ ಕಡೆ ಗಮನ ಹರಿಸಿ. ನನ್ನ ಮೇಲೆ ಭರವಸೆ ಇಡಿ ಎಂದು ಶಂಕರ ಹೇಳಿದ. ರಾಜ ಶಂಕರ ಹೇಳಿದ ಹಾಗೆ ಮಾಡಿದ. ತಕ್ಷಣ ಕಾರ್ಯಕ್ಕಿಳಿದ ಶಂಕರ ಮಾಚಯ್ಯನ ಸಭೆಯಲ್ಲಿ ಹಾಜರಿರುತ್ತಿದ್ದ ಕೆಲವರು ತನ್ನನ್ನು ಭೇಟಿ ಮಾಡಲು ಗರುಡರ ಮೂಲಕ ಹೇಳಿ ಕಳಿಸಿದ. ಶಂಕರನ ಆಜ್ಞೆಯಂತೆ ಬಂದವರಲ್ಲಿ ಬೇಸಾಯಗಾರರು, ಸಿಂಪಿಗರು, ಮಡಿವಾಳರು, ಹಡಪದರು ಮುಖ್ಯವಾಗಿದ್ದರು. ಇವರೆಲ್ಲರು ಹೊಲೆ-ಮಾದಿಗರು, ತಿರುಕರು ಇವರುಗಳಿಗಿಂತ ಮೇಲಿನವರು. ಶಂಕರ ಬಲು ಜಾಣತನದಿಂದ ಇವರನ್ನು ಮಾತ್ರ ಕರೆಸಿಕೊಂಡಿದ್ದ. ಸಮಯ ವ್ಯಯ ಮಾಡದೇ ಶಂಕರ ಅವರನ್ನುದ್ದೇಶಿಸಿ,
ನೀವೆಲ್ಲರೂ ನನ್ನ ಕರೆಗೆ ಓಗೊಟ್ಟು ಇಲ್ಲಿಗೆ ಬಂದದ್ದಕ್ಕೆ ವಂದನೆಗಳು. ನಾನು ನಿಮ್ಮನ್ನು ಇಲ್ಲಿಗೆ ಕರೆಸಿದ ಉದ್ದೆಶ ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ಕೆಲವರು ನಮ್ಮ ಸಮಾಜವನ್ನು, ಕುಲವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲ-ಸಲ್ಲದ ವಿಚಾರಗಳನ್ನು ನಮ್ಮ ಪ್ರಜೆಗಳ ಮನಸ್ಸಲ್ಲಿ ಬಿತ್ತುತ್ತಿದ್ದಾರೆ. ಇದರಿಂದ ನಮಗೆ ಮುಂದೆ ತೊಂದರೆಯಾಗಬಹುದು. ಸುಖ-ಶಾಂತಿಗೆ ಭಂಗವಾಗಬಹುದು. ಇದನ್ನು ತಪ್ಪಿಸುವ ಸಲುವಾಗಿ ನಾನು ಈ ಸಭೆಯನ್ನು ಕರೆದಿದ್ದೇನೆ. ಇದಕ್ಕೆ ತಮ್ಮ ಸಹಕಾರ ಬೇಕು.
ನಮ್ಮಿಂದೇನಾಗಬೇಕು, ಸ್ವಾಮಿ. ನಾವು ಸಹಕಾರ ನೀಡುವಷ್ಟು, ನಮ್ಮಿಂದ ಸಹಕಾರ ಕೇಳುವಷ್ಟು ದೊಡ್ಡವರಾ ನಾವು?
ಪರಿಸ್ಥಿತಿ ಹಾಗಿದೆ. ಹೊಲೆ-ಮಾದಿಗರು, ವೇಶ್ಯೆಯರು, ಹೆಣಕಾಯುವವರು, ಜೀತದಾಳುಗಳು, ತಿರುಕರುಗಳಿಗಿಂತ ನೀವು ಉತ್ತಮ ವರ್ಗಕ್ಕೆ ಸೇರಿದವವರು. ಜೊತೆಗೆ ನೀವು ಸ್ವಲ್ಪನಾದರೂ ನಮ್ಮ ಜೊತೆ ಸಂಪರ್ಕದಲ್ಲಿರುವವರು. ಹಾಗಾಗಿ ನೀವೆಲ್ಲರೂ ನಿಮ್ಮಗಿಂತ ಕೀಳಾಗಿರುವವರ ಜೊತೆಗೆ ಯಾಕೆ ಸೇರಬೇಕು? ನಿಮಗೆ ನಿಮ್ಮ ಕುಲ ಶ್ರೇಷ್ಠವಲ್ಲವೇ? ಅದು ಯಾರೋ ತಿರುಕ ಜಂಗಮ ಜನರ ತಲೆಯನ್ನು ಕೆಡುಸುತ್ತಿದ್ದಾನಂತೆ. ಅವನ ಮಾತನ್ನು ಕೇಳಬೇಡಿ. ಗುಂಪಿನಲ್ಲಿದ್ದ ಮತ್ತೊಬ್ಬ,
ಸ್ವಾಮಿ, ಆ ಜಂಗಮ ಹೇಳೋದು ಸರಿ ಅಂತ ಕಾಣ್ಸುತ್ತೆ. ನಮಗೂ ಶಿವಶರಣರ ಕುಲಕ್ಕೆ ಸೇರಿಕೊಳ್ಳಬೇಕು ಅಂತ ಆಸೆ. ನಾವು ಕೂಡ ನಿಮ್ಮ ಹಾಗೆ ಉತ್ತಮರೆನಿಸಿಕೊಳ್ಳಬೇಕು. ಅದಕ್ಕೆ ಉಳಿದಿರುವುದು ಇದೊಂದೇ ದಾರಿ ಅಂತ ನಮ್ಮ ಅಭಿಪ್ರಾಯ. ನಮಗೆ ಲಿಂಗದೀಕ್ಷೆ ನೀಡಬೇಕು. ನೀವಾದರೂ ಸರಿ, ಆ ಜಂಗಮನಾದರೂ ಸರಿ. ನಾವು ಕೂಡ ರಾಜರ ಕುಲಕ್ಕೆ ಸೇರಿ ಅವರ ಕೃಪೆಗೆ ಒಳಗಾಗಬೇಕು ಎಂಬ ಬಯಕೆ
ಉತ್ತಮರೆನಿಸಿಕೊಳ್ಳುವುದು ಜನ್ಮಾಪಿ ಇರುವಂತದ್ದು. ನೀವು ಅಯಾಯ ಕುಲದಲ್ಲಿ ಹುಟ್ಟಿದುದರಿಂದಲೇ ನೀವು ಆ ಹೊಲೆ-ಮಾದಿಗ, ಕುಡುಕ, ತಿರುಕರಿಗಿಂತ ಉತ್ತಮರು. ನಾನು ಶಿವ ಬ್ರಾಹ್ಮಣ. ಚತುರ್ವೇದಿ. ಸ್ವತಃ ಬಸವಣ್ಣನಿಂದ ದೀಕ್ಷೆಗೊಳಪಟ್ಟವನು. ನಾವೆಲ್ಲರು ಒಂದೆನೆ? ನಾವೆಲ್ಲರು ಒಂದೇ ಆದರೆ ನೀವು ಆ ಹೊಲೆ-ಮಾದಿಗರನ್ನು ನಿಮ್ಮ ಮನೆಗೆ ಸೇರಿಸಿಕೊಳ್ಳುವಿರೋ ಹೇಳಿ? ಶಂಕರ ಉತ್ತರಕ್ಕಾಗಿ ಕಾದ. ಅವರಲ್ಲಿ ಮತ್ತೊಬ್ಬ,
‘ಅದು ಹೇಗೆ ಸಾಧ್ಯ, ಸ್ವಾಮಿ? ನಾವು ಯಾವಗನಿಂದಲೂ ಅವರಿಗಿಂತ ಮೇಲುಗಡೆ. ಅವರು, ನಾವು ಒಂದೇ ಹೇಗಾದೀತು?. ಶಂಕರ ಮೊದಲ ಹಂತದಲ್ಲಿ ನನಗೆ ಜಯ ಸಿಕ್ಕಿತು ಎಂದು ಮುಗುಳ್ನಕ್ಕ.
ಹಾಗಾದರೆ, ನೀವು ಆ ಜಂಗಮ ತಿರುಕ ಸೇರಿಸುವ ಸಭೆಗೆ ಹೋಗಬಾರದು. ಅಲ್ಲಿ ನೀವು ಹೊಲೆ-ಮಾದಿಗರ ಜೊತೆಗೆ, ವೇಶ್ಯೆಯರ ಜೊತೆಗೆ ಸೇರಬಾರದು. ಸೇರಿದರೆ ವರ್ಣಸಂಕರವಾದೀತು ಎಚ್ಚರಿಕೆ. ಶಾಸ್ತ್ರ, ಪುರಾಣಗಳ ವಿರುದ್ಧ ನಾವು ಹೋಗುವ ಹಾಗಿಲ್ಲ ಎಂದು ಹೇಳುತ್ತಾ ತಾನು ಯಾವುದನ್ನು ಕಣ್ಣೆತ್ತಿಯೂ ನೋಡಬಾರದು, ಕೇಳಬಾರದು, ಆಡಬಾರದು ಎಂದು ಕೊಂಡಿದ್ದನೋ ಅದನ್ನು ಈಗ ಹೇಳಲೇಬೇಕಾಯಿತು,
ಲಿಂಗದೀಕ್ಷೆ ಅನ್ನೋದು ಚಿಕ್ಕ ಮಕ್ಕಳ ಆಟ ಅಲ್ಲ. ನಮ್ಮ ಚೆನ್ನಬಸವಣ್ಣನವರು ಏನು ಹೇಳಿದ್ದಾರೆ ಗೊತ್ತೆ?
ಶ್ರೀಗುರುವಾದಾತನು ಸಕಲಾಗಮಂಗಳ ಹೃದಯವನರಿತು
ತನ್ನ ತಾನರಿದು ಸವರ್ಾಚಾರ ತನ್ನಲ್ಲಿ ನೆಲೆಗೊಂಡು
ಉಪದೇಶ ಮಾಡುವ ಕ್ರಮವೆಂತೆಂದಡೆ
ಬ್ರಾಹ್ಮಣನ ಮೂರು ವರುಷ ನೋಡಬೇಕು
ಕ್ಷತ್ರಿಯನ ಆರು ವರುಷ ನೋಡಬೇಕು,
ವೈಶ್ಯನ ಒಂಬತ್ತು ವರುಷ ನೋಡಬೇಕು,
ಶೂದ್ರನ ಹನ್ನೆರಡು ವರುಷ ನೋಡಬೇಕು
ನೋಡಿದಲ್ಲದೆ ದೀಕ್ಷೆ ಕೊಡಬಾರದು. ನಮ್ಮ ಹಿರಿಯರೇ ಹೀಗೆ ಹೇಳಿರಬೇಕಾದರೆ ಅವರ ಇಚ್ಛೆಗೆ ವ್ಯತಿರಿಕ್ತವಾಗಿ ನಾವು ನಡೆದುಕೊಳ್ಳಬಾರದು ಅಲ್ಲವೆ?
ಬಂದವರೆಲ್ಲರೂ ಮುಖ, ಮುಖ ನೋಡಿಕೊಂಡರು. ಚೆನ್ನಬಸವಣ್ಣರೇ ಹೀಗೆ ಹೇಳಿರಬೇಕಾದರೆ ಶಂಕರರು ಹೇಳುತ್ತಿರುವುದರಲ್ಲಿ ದಿಟವಿದೆ ಎಂದು ತಮ್ಮಲ್ಲಿ ಗುಸು, ಗುಸು ಮಾತನಾಡಿಕೊಂಡರು. ಎರಡನೇ ಹಂತದಲ್ಲೂ ತನಗೇನೆ ಜಯ ದೊರೆಯಿತು ಎಂದು ಶಂಕರ ನಿಟ್ಟುಸಿರು ಬಿಟ್ಟ. ಈಗ ಮೂರನೇ ಹಂತ. ಮಾಚಯ್ಯನ ಕಥೆ ಮುಗಿಸುವುದು. ಬಂದವರನ್ನೆಲ್ಲಾ ಹೊರಗೆ ಕಳುಹಿಸಿ ತನ್ನ ಗರುಡರನ್ನು ಕರೆದ.
ಮಾಚಯ್ಯ ಮತ್ತು ಕಲ್ಲಿನಾಗಯ್ಯ ಜನರನ್ನು ಸಂಘಟಿಸಿ ಅವರಿಗೆ ರಾಜ್ಯದ ದುಸ್ಥಿತಿಯ ಬಗ್ಗೆ ಪ್ರಚಾರ ಮಾಡಬೇಕಾದರೆ ಅನೇಕ ಸಮಸ್ಯೆಗಳು ಎದುರಾದವು. ಮೊದಲು ಸಂಘಟನೆಯ ಸಮಸ್ಯೆಗಳು. ಅನೇಕ ಬಾರಿ ಜನ ಸಾಕಷ್ಟು ಸಂಖ್ಯೆಯಲ್ಲಿ ಸೇರುತ್ತಿರಲಿಲ್ಲ. ಒಮ್ಮೊಮ್ಮೆ ಬೆರಳೆಣಿಕೆಯಷ್ಟು ಮಾತ್ರ ಇರುತ್ತಿದ್ದರು. ನಂತರ ಸಭೆಗೆ ಬರುವವರ ಸಂಖ್ಯೆಯಲ್ಲಿ ವೃದ್ಧಿಯಾದರೂ, ಅವರು ತಮ್ಮ, ತಮ್ಮ ಜನರನ್ನು ಮಾತ್ರ ಸೇರುತ್ತಿದ್ದರು. ಹಡಪದರು ಇತರ ಹಡಪದರ ಹತ್ತಿರ. ಮಡಿವಾಳರು ತಮ್ಮ ಮಡಿವಾಳ ಜನರ ಜೊತೆಗೆ. ಹೀಗಾಗಿ ಸಭೆಗಳಲ್ಲಿ ಅನೇಕ ಗುಂಪುಗಳಾಗುತ್ತಿದ್ದವು. ಹೊಲೆ-ಮಾದಿಗರು, ವೇಶ್ಯಯರು, ಜೀತದಾಳುಗಳು, ತಿರುಕರು, ಒಂದು ಸಾಲಿನಲ್ಲಿದ್ದರೆ, ಮತ್ತೊಂದು ಸಾಲಿನಲ್ಲಿ ಹಡಪದರು, ಮಡಿವಾಳರು, ಸಿಂಪಿಗರು ಇರುತ್ತಿದ್ದರು. ಅನೇಕ ಬಾರಿ ಇಂತಹ ಪರಿಸ್ಥಿತಿ ಮಾಚಯ್ಯನಿಗೆ ನಿರಾಸೆಯನ್ನುಂಟು ಮಾಡುತಿತ್ತು. ಈ ಅನಿಷ್ಟವನ್ನು ಹೋಗಲಾಡಿಸಿ ಎಲ್ಲರನ್ನೂ ಬಸವಣ್ಣಾದಿಗಳ ಹಾದಿಯಲ್ಲಿ ನಡೆಸೋಣವೆಂದರೆ ಇವರೆಲ್ಲರೂ ತಮ್ಮ ಮೂಲವನ್ನು ಮರೆಯೋದಕ್ಕೆ ಪ್ರಯತ್ನ ಪಡದೆ, ಹೊಸ, ಹೊಸ ಸಮಸ್ಯೆಗಳನ್ನು ಹುಟ್ಟು ಹಾಕಿದರು.
ದಂಡನಾಯಕನಾಗಿದ್ದುಕೊಂಡು ಅರ್ಥಮಾಡಿಕೊಳ್ಳಲಾಗದ ವಿಷಯಗಳನ್ನು ಈಗ ಜಂಗಮ ಸಂನ್ಯಾಸಿಯಾಗಿದ್ದುಕೊಂಡು ಅನುಭವಿಸುವುದು ಅವನಿಗೆ ಹೊಸ ಹೊಸ ಪಾಠಗಳನ್ನು ಕಲಿಸಿತು. ಇವರನ್ನು ಒಗ್ಗೂಡಿಸಿ ಶಂಕರನಿಗೆ ಸಮನಾಗಿ ನಿಲ್ಲಲು ಸಾಧ್ಯವೆ? ಶತಮಾನಗಳಿಂದ ಇರುವ ಕುಲ-ವ್ಯತ್ಯಾಸಗಳನ್ನು ‘ಲಿಂಗದೀಕ್ಷೆ’ಯಿಂದ ಹೋಗಲಾಡಿಸಲು ಸಾಧ್ಯವೆ? ಮಡಿವಾಳ, ಹಡಪದರು ಹೊಲೆ-ಮಾದಿಗರ ಜೊತೆಗೆ ಸೇರಿ ಒಟ್ಟಾಗಿ ಬಾಳಬಲ್ಲರೇ? ಹೊಲೆ-ಮಾದಿಗರು, ವೇಶ್ಯೆಯರು, ತಿರುಕರು, ಹೆಂಡದವರ ಜೊತೆಗೆ ಬಾಳಲಾರದ ಇವರು ಶಂಕರನು ವಿಧಿಸಿರುವ ನಿರ್ಭಂದಗಳನ್ನು ಅರ್ಥಮಾಡಿಕೊಳ್ಳಬಲ್ಲರೇ? ಇವರನ್ನೆಲ್ಲಾ ಒಟ್ಟುಗೂಡಿಸುವುದಕ್ಕೆ ಹೋಗಿ ಹಿಂದೆ ಬಸವಣ್ಣಾದಿಗಳೇ ಚದುರಿ ಹೋದರು ಅಂತ ಯಾರೋ ಹೇಳಿದ ನೆನಪು. ಇನ್ನು ನನ್ನಂತವರ ಗತಿಯೇನು? ಆದರೆ ನನ್ನ ಈ ಪ್ರಯತ್ನಕ್ಕೆ ಅವರೇ ಅಲ್ಲವೇ ಸ್ಫೂತರ್ಿ? ಆದರೆ ಇವರೆಲ್ಲರಿಗು ‘ಲಿಂಗದೀಕ್ಷೆ’ ಕೊಡಿಸಿ ತಾನು ಶಂಕರನ ಸಾಮರ್ಥ್ಯಕ್ಕೆ ಸಮನಾಗುವುದು ಸ್ವಾರ್ಥವೆನಿಸಿತು. ಶಂಕರ ಬ್ರಾಹ್ಮಣರನ್ನು ಬಳಸಿಕೊಳ್ಳುವ ಹಾಗೆ ತಾನು ಇವರನ್ನು ಬಳಸಿಕೊಂಡರೆ ನನಗೂ, ಅವನಿಗೂ ಏನು ವ್ಯತ್ಯಾಸ? ನನ್ನ ಜನರಲ್ಲೇ ಎಷ್ಟೊಂದು ಮಂದಿ ತಾರತಮ್ಯಗಳನ್ನ ಮಾಡಿರೋದನ್ನು ನೋಡಿಲ್ಲ ನಾನು? ನಮ್ಮ ಲಿಂಗವಂತರಲ್ಲೇ ಇರುವ ಮೇಲು-ಕೀಳು ಭಾವನೆಯನ್ನು ನಿಮರ್ೂಲನ ಮಾಡುವ ಕಡೆ ಗಮನ ಹರಿಸಬೇಕು. ಬಸವಣ್ಣಾದಿಗಳ ಬಗ್ಗೆ ಹೊಸ ಚರಿತ್ರೆಯನ್ನು ಬರೆದು, ನನ್ನವರಿಗೆ ಶಂಕರನ ಸ್ವಾರ್ಥ, ನಯವಂಚಕತನವನ್ನು ತೋರಿಸಬೇಕು ಎಂದು ನಿರ್ಧರಿಸಿದ. ಇವೆಲ್ಲಾ ವಿಚಾರಗಳನ್ನು ಕಲ್ಲಿನಾಗಯ್ಯನಿಗೆ ಅರುಹಿದ. ಕಲ್ಲಿನಾಗಯ್ಯ,
ಅಲ್ಲ, ನಿನ್ನ ಎಲ್ಲಾ ವಿಚಾರಗಳು ಸರಿ! ಆದರೆ ಬಸವಣ್ಣಾದಿಗಳ ಚರಿತ್ರೆ ಬರೆಯೋದು ಅಂದ್ರೇನು? ನಾವೇನು ಶಂಕರನಷ್ಟು ಒದ್ಕೊಂಡಿದ್ದೀವ? ನಮಗೆ ಕತ್ತಿ-ಗುರಾಣಿಗಳನ್ನು ಹಿಡಿದು ರೂಢಿ. ನಮಗೂ, ಪುರಾಣಕ್ಕೂ ಆಗ ಬರಲ್ಲ. ಅದಕ್ಕೆ ಬೇಕಾಗಿರೋ ಪಾಂಡಿತ್ಯ ನಮ್ಮಲ್ಲಿ ಇಲ್ವಲ್ಲ. ಏನು ಮಾಡೋದು?. ಮಾಚಯ್ಯ ಈ ಪ್ರಶ್ನೆಯನ್ನು ನಿರೀಕ್ಷಿಸಿದ್ದ.
ನೋಡು, ಕಲ್ಲಿ, ನಮಗೆ ಶಂಕರನ ಹಾಗೆ ಪಾಂಡಿತ್ಯ ಇಲ್ಲದೇ ಇರಬಹುದು. ಆದ್ರೆ ಬಸವಣ್ಣಾದಿಗಳು ಹೇಳಿರೋ ನುಡಿ-ಮುತ್ತುಗಳು ಇದಾವೆ. ನಾವು ಎಲ್ಲಾ ಕಡೆ ಹೋಗಿ ಅವುಗಳನ್ನು ಕಲೆ ಹಾಕಬೇಕು. ನಮ್ಮ ಜನರಿಗೆ ಅವುಗಳನ್ನು ತಿಳಿಸಬೇಕು. ಶಂಕರನ ಹಾಗೆ ಪುರಾಣ ಅಲ್ಲದೇ ಇದ್ರು, ಅವು ನೇರವಾಗಿ ಬಸವಣ್ಣಾದಿಗಳ ಬಾಯಿಯಿಂದ ಹೊರಟ ಮಾತುಗಳು ಅಂತ ನನ್ನಜ್ಜ ಆಗಾಗ ಹೇಳುತಿದ್ದ. ನಮ್ಮ ಚೆನ್ನಯ್ಯರ ಮಾತುಗಳಂತೂ ಶಂಕರನಂತವರ ಮೇಲೆ ಎಸೆಯೋ ಬಿರುಸಿನ ಬಾಣಗಳಿದ್ದಂತೆ!
ಹಂಗಾದ್ರೆ ಇದು ಒಂದೆರಡು ದಿನದ ಕೆಲಸ ಅಲ್ಲ ಅನಿಸುತ್ತೆ!
ಹೌದು, ಕಲ್ಲಿ. ಒಂದೆರಡು ದಿನದ ಕೆಲಸ ಅಲ್ಲ. ಮೊದಲು ನಾನು ಕೂಡ ಒಂದೆರಡು ದಿನಗಳಲ್ಲಿ ಕಾರ್ಯ ಸಾಧಿಸಬಹುದೆಂದು ಅಂದುಕೊಂಡಿದ್ದೆ. ಆದರೆ ಸಮಸ್ಯೆ ನಾವು ಅಂದುಕೊಂಡಷ್ಟು ಸರಳವಾಗಿಲ್ಲ. ನಿರಂತರವಾಗಿ ನಾವು ಕೆಲಸ ಮಾಡ್ತಾ ಇರಬೇಕು. ಇಲ್ಲಾಂದ್ರೆ ಶಂಕರನಂತೋರು ಹತ್ತಾರು ಮಂದಿ ಹುಟ್ಟಿಕೊಳ್ಳುತ್ತಾರೆ.
ಭವಿಷ್ಯ ನುಡಿಯುತ್ತಿದ್ದೀಯಾ?
ಇಲ್ಲ. ಇರೋದನ್ನ ಹೇಳ್ತಾ ಇದ್ದೀನಿ. ಇದನ್ನ ನಾವು ಈಗ ಅರ್ಥ ಮಾಡಿಕೊಳ್ಳಲಿಲ್ಲಾಂದ್ರೆ ಬಸವಣ್ಣಾದಿಗಳಿಗೆ ನಾವು ಅಪಚಾರವೆಸಗಿದಂತೆ. ಇಬ್ಬರೂ ಹೀಗೆ ಮಾತನಾಡುತ್ತಾ ನಡೆಯುತ್ತಿದ್ದಾಗ ಕಲ್ಲಿನಾಗಯ್ಯ, ಸರಿ. ಈಗ ಹೊತ್ತಾಗಿದೆ. ನಾಳೆ ಸಿಗೋಣ ಎಂದು ತಮ್ಮ ಸಂಭಾಷಣೆಯನ್ನು ಮೊಟಕುಗೊಳಿಸಿದ. ಅವನನ್ನು ಬಿಳ್ಕೊಟ್ಟ ಮಾಚಯ್ಯ ತನ್ನೊಳಗೆ ಅನೇಕ ವಿಚಾರಗಳ ಬಗ್ಗೆ ಗುದ್ದಾಟ ನಡೆಸುತ್ತಾ ಮನೆ ಕಡೆಗೆ ತಿರುಗಿದಾಗ ಯಾರೋ ಮೂರು ಜನ ಅವನ ಮುಖದ ಮೇಲೆ ಮುಸುಕನ್ನು ಹಾಕಿ ತಲೆಗೆ ಬಲವಾಗಿ ಹೊಡೆದರು. ಅಷ್ಟೆ. ಮಾಚಯ್ಯ ಕೆಲವೇ ಕ್ಷಣಗಳಲ್ಲಿ ಚೆನ್ನಯ್ಯಾ, ಬಸಣ್ಣಾ ಎಂದು ಹೇಳುತ್ತಾ ಅಸು ನೀಗಿದ. ಸ್ವಲ್ಪ ದಿನಗಳಲ್ಲಿ ಕಲ್ಲಿನಾಗಯ್ಯನನ್ನು ಬಂಧಿಸಿ, ಗುಪ್ತವಾಗಿ ಬೇರೆಡೆ ಸಾಗಿಸಲಾಯಿತು. ಇದಾದ ನಂತರ ಮಾಚಯ್ಯನ ಬೆಂಬಲಿಗರು ಚೆಲ್ಲಾ ಪಿಲ್ಲಿಯಾದರು. ಅವರ ಜೊತೆಗಿದ್ದದ್ದು ಮಾಚಯ್ಯ ಕಲಿಸಿಕೊಟ್ಟ ಬಸವಣ್ಣಾದಿಗಳ ನುಡಿಗಳು ಮಾತ್ರ. ಮಾಚಯ್ಯನನ್ನು ಯಾಯರ್ಾರು ಬೆಂಬಲಿಸಿದರೋ ಅವರನ್ನು ಹುಡುಕಿ, ಹುಡುಕಿ ಕೊಲೆ ಮಾಡಲಾಯಿತು. ಅವರ ಹೆಂಡತಿ-ಮಕ್ಕಳನ್ನು ಸೂರೆ ಮಾಡಲಾಯಿತು. ಅನೇಕರ ಮೇಲೆ ಕಳ್ಳತನ, ದರೋಡೆಯ ಆರೋಪಗಳನ್ನು ಹೇರಿ ಬಂಧಿಸಲಾಯಿತು. ಇನ್ನುಳಿದವರನ್ನು ಬಹಿಷ್ಕರಿಸಲಾಯಿತು. ಮಾಚಯ್ಯ ಶುರುಮಾಡಬೇಕೆಂದಿದ್ದ ಶರಣ-ಬಂಡಾಯ ಶೀಘ್ರವಾಗಿ ಅವಸಾನ ಹೊಂದಿತು. ರಾಜನಿಗೆ ಇದ್ಯಾವುದರ ಬಗ್ಗೆ ಸುಳಿವು ಸಿಗಲಿಲ್ಲ. ಮಾಚಯ್ಯ ರಾಜ್ಯ ಬಿಟ್ಟು ಓಡಿಹೋದನೆಂದು ರಾಜನಿಗೆ ತಿಳಿಸಲಾಯಿತು. ಕೆಲವೇ ದಿನಗಳಲ್ಲಿ ಪರಿಸ್ಥಿತಿ ತಿಳಿಯಾಯಿತು. ಶಂಕರ ದೇವ ತನ್ನ ಚಟುವಟಿಕೆಗಳನ್ನು ನಿರಾತಂಕವಾಗಿ ಮುಂದುವರೆಸಿದ.





0 Comments