ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ಸುರೇಶ್:ಸರ್ಕಾರೀ ಶಾಲೆಗಳನ್ನು ಮುಚ್ಚಬೇಕೆ?

-ಬಿ ಸುರೇಶ್

೨೪ ನವೆಂಬರ್ ಶಾಸಕರ ಭವನದ ಎರಡನೇ ಸಬಾಂಗಣದಲ್ಲಿ ‘ಸರ್ಕಾರೀ ಶಾಲೆಗಳನ್ನು ಮುಚ್ಚಬೇಕೆ?’ ಎಂಬ ಪ್ರಶ್ನೆಯೊಂದಿಗೆ ಸುದೀರ್ಘ ಸಭೆ ನಡೆಯಿತು.

ಜಿಕೆ ಗೋವಿಂದರಾವ್‌ ಅವರ ಪ್ರಸ್ತಾವನೆಯೊಂದಿಗೆ ಆರಂಭವಾದ ಈ ಸಬೆಯಲ್ಲಿ ಎಸ್‌.ಜಿ.ಸಿದ್ಧರಾಮಯ್ಯ ತರಹದ ಹಿರಿಯ ಚಿಂತಕರಲ್ಲದೆ ನಿರಂಗನಾರಾಧ್ಯ ಅಂತಹ ಶಿಕ್ಷಣ ತಜ್ಞರು ಕೂಡ ಇದ್ದರು. ವಿದ್ಯಾ ಇಲಾಖೆಯಿಂದ ಮಾತ್ರ ದೇವಿಪ್ರಸಾದ್ ಎಂಬ ಅಧಿಕಾರಿ ಬಂದಿದ್ದರು. ಕಾಗೇರಿ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಬಂದಿರಲಿಲ್ಲ.

ಅಲ್ಲಿದ್ದ ಎಲ್ಲಾ ಭಾಷಣಕಾರರ ಅಭಿಪ್ರಾಯವೂ ಒಂದೇ ಆಗಿತ್ತು. ಅದು ಸರ್ಕಾರೀ ಶಾಲೆಯನ್ನು ಮುಚ್ಚುವುದು ಬೇಡ ಎಂಬುದಾಗಿತ್ತು. ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಶಾಲೆಗಳನ್ನು ಮುಚ್ಚುವುದು ಅತ್ಯಂತ ಹೇಯ ನಿರ್ಧಾರ ಎಂದಾಗಿತ್ತು.

ನಾನು ಮಾತಾಡುತ್ತಾ ಸರ್ಕಾರ ಈ ಶಾಲೆಗಳನ್ನು ಮುಚ್ಚುವುದಾದರೆ ನಾವು ಆ ಶಾಲೆಯನ್ನು ವಹಿಸಿಕೊಳ್ಳೋಣ. occupy wallstreet ಹಾಗೆ ಸರ್ಕಾರೀ ಶಾಲೆಗಳನ್ನು ನಾವು ನಡೆಸೋಣ ಎಂಬರ್ಥದ ಮಾತಾಡಿದೆ. ಸರ್ಕಾರವೇ ಈ ಶಾಲೆಗಳಿಂದ ಲಾಭ ಇಲ್ಲ ಎಂಬ ಮಾತಾಡುವುದು ಮೂರ್ಖತನ ಎಂದೇ. ನನ್ನ ನಂತರ ಮಾತಾಡಿದ ನಿರಂಜನಾರಾಧ್ಯ ಅಧ್ಭುತವಾಗಿ ವಿಷಯ ಮಂಡಿಸಿದರು.

ನಂತರ ಮಾತಾಡಿದ ಅನೇಕ ವಿದ್ಯಾರ್ಥಿ ನಾಯಕರು ಕಾಗೇರಿಯನ್ನು ಕೊಲ್ಲಬೇಕು ಎಂಬರ್ಥದ ಮಾತಾಡಿದರು. ಇದರಿಂದ ಸಭೆಯಲ್ಲಿ ಕೇವಲ ಸಿಟ್ಟು ಮಾತ್ರ ಹುಟ್ಟಿತ್ತು.

ನಾನು ಮಧ್ಯಾಹ್ನ ೨ರ ವರೆಗೆ ಅಲ್ಲಿದ್ದೆ. ನಿರ್ಣಯಗಳಾಗುವ ಬದಲಿಗೆ ಸಭೆಯು ಸಿಟ್ಟಿನ ಹಾದಿ ಹಿಡಿದಾಗ ಸಿದ್ಧರಾಮಯ್ಯನವರು ಎಲ್ಲರನ್ನೂ ದಬಾಯಿಸಿ ಬಾಯಿ ಮುಚ್ಚಿಸಿದರು. ನಂತರ ಸಬೆಯು ಸರಿಹಾದಿ ಹಿಡಿದು ಚರ್ಚೆ ಮುಮದುವರೆಯಿತು.

ಆ ಸಭೆಯ ಒಟ್ಟಂದದ ವಿವರದಲ್ಲಿ ಈ ಕೆಳಗಿನ ತೀರ್ಮಾನಗಳನ್ನು ಮಾಡಲಾಯಿತು.

೧. ಸರ್ಕಾರೀ ಶಾಲೆಗಳನ್ನು ಮುಚ್ಚಬಾರದು.

೨. ಸರ್ಕಾರ ಲಾಭಕ್ಕಾಗಿ ಶಾಲೆಗಳನ್ನು ನಡೆಸುವ ಯೋಚನೆ ಮಾಡುವುದು ತಪ್ಪು.

೩. ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಉಪಾಧ್ಯಾಯರನ್ನು ಕೊಡಿ. ಈಗಿರುವ ಕೊಠಢಿ ಸಂಖ್ಯೆ ಆಧಾರಿತ ನೇಮಕವನ್ನು ನಿಲ್ಲಿಸಿ.

೪. ನಷ್ಟವಾಗುವುದಕ್ಕೆ ಇರುವ ಕಾರಣಗಳನ್ನು ಹುಡುಕುವ ಹಾಗೆಯೇ ವಿದ್ಯಾರ್ಥಿಗಳನ್ನು ಪೋಷಕರು ಆ ಶಾಲೆಗೆ ಕಳಿಸದೆ ಇರುವುದಕ್ಕೆ ಇರುವ ಕಾರಣಗಳ ವಿಶ್ಲೇಷಣೆ ಆಮೂಲಾಗ್ರವಾಗಿ ಆಗಲಿ.

೫. ಉಪನ್ಯಾಸಕರನ್ನು ಆಧುನಿಕ ಕಾಲಮಾನಕ್ಕೆ ಹೊಮದುವಂತೆ ಶೃತಿಗೊಳಿಸುವುದಕ್ಕಾಗಿ ವಿಶೇಷ ಶಿಬಿರಗಳನ್ನು ನಡೆಸಿ.

೬. ಸರ್ಕಾರೀ ಶಾಲೆಗಳಲ್ಲಿ ಇರುವ ಸೌಲಭ್ಯದ ಕೊರತೆಯನ್ನು ನೀಗಿಸಿ.

೭. ಬಡಮಕ್ಕಳಿಗೆ ಇರುವ ಏಕೈಕ ಓದುವ ಅವಕಾಶವನ್ನು ಕಿತ್ತುಕೊಳ್ಳುವ ಹಕ್ಕು ಸರ್ಕಾರಕ್ಕೆ ಇಲ್ಲ.

೮. ಇದೆಲ್ಲದರೊಂದಿಗೆ ಹೆಚ್ಚುತ್ತಿರುವ cbsc ಮತ್ತು icsc ಶಾಲೆಗಳನ್ನು ನಿಯಂತ್ರಿಸುವ ಹಾಗೂ ಆ ಗುಣಮಟ್ಟದ ವಿದ್ಯಾಭ್ಯಾಸವನ್ನು ಆಯಾ ವಿದ್ಯಾರ್ಥಿಗಳ ಮಾತೃಭಾಷೆಯಲ್ಲಿ ನೀಡುವ ಜವಾಬ್ದಾರೀ ಸರ್ಕಾರದ್ದು. ಆಯಾ ರಾಜ್ಯಭಾಷೆಯನ್ನು ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಕಲಿಸಲೇಬೇಕು

ಈ ರೀತಿಯ ತೀರ್ಮಾನಗಳನ್ನು ಮಾಡಲಾಯಿತು. ತೀರ್ಮಾನಗಳನ್ನು ವಿದ್ಯಾ ಇಲಾಖೆಯ ಅಧಿಕಾರಿಗೆ ನೀಡಲಾಯಿತು.

ಈಗ ಸರ್ಕಾರವು ಡಿಸೆಂಬರ್ ತಿಂಗಳ ಒಳಗೆ ತನ್ನ ತೀರ್ಮಾನಗಳನ್ನು ತಿಳಿಸಬೇಕೆಂದು ಹೇಳಿದ್ದೇವೆ. ಇಷ್ಟೆಲ್ಲಾ ಆದಮೇಲೂ ಶಾಲೆಗಳನ್ನು ಮುಚ್ಚುವ ನಿರ್ಧಾರ ಅವರು ಮಾಡಿದಲ್ಲಿ ನಾವು ಆ ಶಾಲೆಗಳನ್ನು takeover ಮಾಡುವ.

ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

ಒಟ್ಟಾರೆಯಾಗಿ ಜನಾಂದೋಲನದ ಮೂಲಕವೇ ಈ ಸರ್ಕಾರಕ್ಕೆ ಹಿಡಿದಿರುವ ಖಾಯಿಲೆಗೆ ಔಷಧಿ ನೀಡಬೇಕು.

ಈ ಸಭೆಯಲ್ಲಿ ಚರ್ಚಿಸಲು ಮಾಹಿತಿ ಒದಗಿಸಿದ ಅರುಣ್‌ ಜಾವಗಲ್, ಅಮರ್‌ನಾಥ್ ಶಿವಶಂಕರ್ ಮುಂತಾದ ಅನೇಕ ಗೆಳೆಯರಿಗೆ ಮತ್ತೊಮ್ಮೆ ಶರಣು ಶರಣಾರ್ಥಿ!

 

‍ಲೇಖಕರು avadhi

25 November, 2011

3 Comments

  1. ಅಭಯ ಸಿಂಹ

    ಸುರೇಶ್ ಸರ್,

    ಈ ಲಾಭಕ್ಕಾಗಿ ಶಾಲೆಯನ್ನು ನಡೆಸುವುದು ಎನ್ನುವ ಸರಕಾರದ ಧೋರಣೆ ಭಾರೀ ತಮಾಷೆಯಾಗಿದೆ. ಸರಕಾರ ಎನ್ನುವುದು ಒಂದು ಕಾರ್ಪರೇಟ್ ಬಾಡಿಯ ಥರಾ ವರ್ತಿಸುವುದು ಭಾರೀ ವಿಚಿತ್ರ ಸಂದರ್ಭ. ಆದರೆ ಇದು ದುರಾದೃಷ್ಟವಶಾತ್ ಕರ್ನಾಟಕ ಮಾತ್ರವಲ್ಲ, ಭಾರತದಾದ್ಯಂತ ನಡೀತಿದೆ. ಇರಲಿ ಅದರ ಕುರಿತು ಇಲ್ಲಿ ಮಾತಾಡುವುದಿಲ್ಲ. ನಮ್ಮ ಕನ್ನಡದ್ದೇ ಸಂದರ್ಭಕ್ಕೆ ಬರೋಣ…

    ನನ್ನ ಮಾವ ದಕ್ಷಿಣ ಕನ್ನಡದ ಒಂದು ಸಣ್ಣ ಹಳ್ಳಿಯಲ್ಲಿ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರು (!) ಕಳೆದ ಸುಮಾರು ಮೂವತ್ತು ವರ್ಷದಿಂದ ಅಲ್ಲಿನ ಪರಿಸ್ಥಿತಿ ಹೀಗೆಯೇ ಇದೆಯಂತೆ. ಅಲ್ಲಿ ಒಂದರಿಂದ ಏಳನೆಯ ತರಗತಿಯವರೆಗಿನ ವಿದ್ಯಾರ್ಥಿಗಳಿದ್ದರೂ, ಉಪಾಧ್ಯಾಯರು ಇವರೊಬ್ಬರೇ. ಉಪಾಧ್ಯಾಯ ಮಾತ್ರವಲ್ಲ, ಶಾಲೆಯಲ್ಲಿನ ಗುಮಾಸ್ತ, ಹಮಾಲಿ ಎಲ್ಲವೂ ಇವರೇ! ಸರಕಾರದ ಕಡೆಯಿಂದ ಶಾಲೆಯನ್ನು ನಡೆಸಲು ಬರುವ ಇತರ ಖರ್ಚುಗಳನ್ನೂ ಸಮರ್ಥವಾಗಿ ಒದಗಿಸುತ್ತಿಲ್ಲವಂತೆ. ಮಕ್ಕಳ ಕಷ್ಟ ಸಹಿಸಲಾಗದೇ, ಇವರೇ ತಮಗೆ ಬರುವ ಅಲ್ಪ ಸಂಬಳದಲ್ಲಿ ಇನ್ನಿಬ್ಬರು ಉಪಾಧ್ಯಾರರುಗಳನ್ನು ನೇಮಿಸಿಕೊಂಡು ಶಾಲೆಯನ್ನು ನಿಭಾಯಿಸುತ್ತಿದ್ದಾರೆ. ಮತ್ತೆ ಶಾಲೆಯ ಮಕ್ಕಳಿಗೆ ಕುಡಿಯಲು ನೀರಿನ ವ್ಯವಸ್ಥೆಗೆಂದು ಐವತ್ತು ಸಾವಿರದಷ್ಟು ಖರ್ಚುಮಾಡಿ ಟ್ಯಾಂಕಿನವ್ಯವಸ್ಥೆ ಮಾಡಿದರು. ಹಣ, ಮತ್ತೆ ಮುಖ್ಯೋಪಾಧ್ಯಾಯರ ಕಿಸೆಯಿಂದ.

    ಇನ್ನು ಶಾಲೆಯಲ್ಲಿ ಬಿಸಿಯೂಟ ಆರಂಭಿಸಿಯಾದ ಮೇಲೆ ಇವರುಗಳಿಗೆ ಇನ್ನೊಂದು ತೊಂದರೆ! ಸರಕಾರದಿಂದ ನೇಮಕಗೊಂಡ ಅಡಿಗೆಯವರು ಬರದಿದ್ದರೆ, ಅಂದಿನ ಅಡಿಗೆಯ ವ್ಯವಸ್ಥೆಯೂ ಈ ಉಪಾಧ್ಯಾಯರುಗಳದ್ದೇ! ಅಂದು ಊಟ ಹಾಕದಿದ್ದರೆ ಎಷ್ಟೋ ಮಕ್ಕಳಿಗೆ ದಿನದ ಏಕೈಕ ಊಟವೂ ಸಿಗುವುದಿಲ್ಲ ಮಾತ್ರವಲ್ಲ, ಸರಕಾರದ ಕಡೆಯಿಂದ ಉಪಾಧ್ಯಾಯರುಗಳ ಮೇಲೆ ವಿಚಾರಣೆ ನಡೆಯುತ್ತಂತೆ! ಮತ್ತೆ ಉಪಾಧ್ಯಾಯರು ತಮ್ಮ ಸಂಬಳದ ಕುರಿತಾಗಿಯೋ, ಇನ್ಯಾವುದೋ ಶಾಲೆಗೆ ಸಂಬಂಧಿಸಿದ ವ್ಯವಹಾರವೋ ಬಂದರೆ, ತಿಂಗಳಿಗೆ ಕನಿಷ್ಟ ಎರಡು-ಮೂರು ಬಾರಿ ಸುಮಾರು ೩೦ ಕಿ.ಮಿ ದೂರದ ಬಿ.ಸಿ.ರೋಡಿಗೋ ಇನ್ನೂ ದೂರದ ಮಂಗಳೂರಿಗೋ ಹೋಗಲೇ ಬೇಕು. ಅಂದು ಶಾಲೆಯ ಗತಿ?!

    ಆದರೆ ಸರಕಾರದ ಕಡೆಯಿಂದ ನಿಷ್ಟೆಯಿಂದ ವಿಚಾರಣಾ ಅಧಿಕಾರಿ ಹಾಜರಾಗುತ್ತಾರೆ. ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಶಾಲೆಗಳ ವಿಂಗಡಣೆ ಮಾಡುವುದರಿಂದಾಗಿ ವಿಚಾರಣೆಗೆ ಅಧಿಕಾರಿ ಬರುವ ದಿನದಂದು ಈ ಮುಖ್ಯೋಪಾಧ್ಯಾಯರು ಬೇರೆ ಶಾಲೆಯಿಂದ ವಿದ್ಯಾರ್ಥಿಗಳನ್ನು ತಂದು ಸಂಖ್ಯೆ ತೋರಿದ್ದೂ ಉಂಟಂತೆ!

    ಮತ್ತೆ ಜನಗಣನೆ, ಸರಕಾರೀ ಯೋಜನೆಗಳ ಬಿತ್ತರಣೆ ಇತ್ಯಾದಿಗಳಿಗೆ ಈ ಉಪಾಧ್ಯಾಯರುಗಳು ಸದಾ ಸರಕಾರದ ಕಾಲಾಳುಗಳು ಎಂಬ ಭಾವನೆ. ಸಿಗುವ ಎಲ್ಲಾ ಸಾರ್ವಜನಿಕ ರಜೆಗಳಲ್ಲೂ ಇವರು ಸರಕಾರದ ಕೆಲಸಕ್ಕೇ ಮುಡಿಪು. ನನ್ನ ಅತ್ತೆ ಕೇರಳಾದ ಹಳ್ಳಿಯೊಂದರಲ್ಲಿ ಶಿಕ್ಷಕಿ. ಆದರೂ ಮಾವ ವಾರದಲ್ಲಿ ಒಂದೆರಡು ಬಾರಿ ಅಲ್ಲಿಗೆ ಹೋಗಿ ಅವರೊಂದಿಗಿದ್ದು ಮತ್ತೆ ಬೆಳಗ್ಗೆ ನಲವತ್ತು ಕಿ.ಮಿ ಬೈಕಲ್ಲಿ ತಮ್ಮ ಶಾಲೆಗೆ ಹಾಜರಾಗುತ್ತಾರೆ. ಇದನ್ನೆಲ್ಲಾ ನನ್ನೊಂದಿಗೆ ಹಂಚಿಕೊಂಡಾಗ, ಇಷ್ಟೆಲ್ಲಾ ಆದಮೇಲೆ ನಿಮಗೆ ಸಂಬಳ ಏನಾದರೂ ಕೈಯಲ್ಲಿ ಉಳಿಯುತ್ತಾ ಎಂದು ಕೇಳಿದೆ. ಇಲ್ಲ ಹೆಚ್ಚಿನ ಬಾರಿ ಸಂಬಳ ಮಾತ್ರವಲ್ಲ, ಸ್ವಂತ ದುಡ್ಡೂ ಕೈಬಿಡುತ್ತೆ. ಮತ್ತೆ ಅನೇಕ ಬಾರಿ ತೀರಾ ದೊಡ್ಡ ಖರ್ಚು ಎದುರಾದರೆ, ಊರಿನ ಜನ ಒಂದಷ್ಟನ್ನು ತುಂಬು ಹೃದಯದಿಂದ ಕೊಡುತ್ತಾರೆ ಎಂದರು. ಮಾವನಿಗೆ ಸ್ವಂತ ತೋಟ ಇರುವುದರಿಂದ ಮನೆ ನಡೆಸುವುದು ಕಷ್ಟವಾಗುವುದಿಲ್ಲ. ತೋಟವನ್ನು ನೋಡಿಕೊಳ್ಳಲು ಸಮಯ ಸಾಲುವುದಿಲ್ಲ ಎನ್ನುವ ಕೊರಗು ಇದೆ.

    ಯಾಕೆ ಈ ಶಾಲೆಯ ಸಹವಾಸ ನಿಮಗೆ, ವಿ.ಆರ್.ಎಸ್ ತೆಗೆದುಕೊಳ್ಳಬಹುದಲ್ಲಾ ಎಂದು ನಾನು ಕೇಳಿದರೆ, ಇಲ್ಲ ನಲವತ್ತರ ಹತ್ತಿರ ಮಕ್ಕಳಿದ್ದಾರೆ ನಮ್ಮ ಶಾಲೆಯಲ್ಲಿ (ಒಂದರಿಂದ ಏಳರವರೆಗೆ ಸೇರಿಸಿ) ನಾನು ಬಿಟ್ಟರೆ, ಮತ್ತೆ ಈ ಶಾಲೆಗೆ ನೇಮಕಾತಿ ಆಗುವುದಿಲ್ಲ. ಮತ್ತೆ ಈ ಮಕ್ಕಳ ಶಿಕ್ಷಣದ ಗತಿ ಏನು? ಅವರ ಮುಖ ನೋಡಿದಾಗ, ಊರವರ ವಿಶ್ವಾಸ ನೋಡಿದಾಗ ಎಲ್ಲ ಕಷ್ಟ ಮರೆಯುತ್ತದೆ ಎನ್ನುತ್ತಾರೆ. ಇವರು ನನ್ನ ಮಾವ ಎಂದು ನಾನು ಎತ್ತಿ ಆಡುತ್ತಿಲ್ಲ. ಬುದ್ಧಿವಂತರ ನಾಡು ಎಂದು ಬೀಗುವ ದಕ್ಷಿಣ ಕನ್ನಡದಲ್ಲೇ ಮಕ್ಕಳ ಶಿಕ್ಷಣದ ಗತಿ ಇಷ್ಟು ಅಧ್ಬುತವಾಗಿದ್ದರೆ, ಇನ್ನು ಕರ್ನಾಟಕದ ಇತರ ಕಡೆಗಳಲ್ಲಿ ಏನು ಕಥೆ?! ಇವರ ಕೂಗು ಕಾರ್ಪರೇಟ್ ಸರಕಾರದ ಕಿವಿಗೆ ಬಿದ್ದೀತೇ?

    – ಅಭಯ ಸಿಂಹ

  2. prasad raxidi

    ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು, ಮುಚ್ಚಲು ಬಿಡಬಾರದು, ಆದರೆ ಶಾಲೆಗೆ ಮಕ್ಕಳ ಕೊರತೆಯ ಕಾರಣ ಹುಡುಕಿದರೆ ಇದೂ ಕೂಡಾ ಪ್ರದೇಶದಿಂದ ಪ್ರದೇಶಕ್ಕೆ ಬೇರೆ ಬೇರೆಯಾಗಿದೆ, ಆದರೆ ಎಲ್ಲಕ್ಕಿಂತ ಮೊದಲು ಸರ್ಕಾರಿ ಶಾಲೆಯ ಶಿಕ್ಷಕರನ್ನು ಇತರ ಕೆಲಸಗಳಿಗೆ ಬಳಸಿಕೊಳ್ಳುವುದು ನಿಲ್ಲಬೇಕು. ಈಬಗ್ಗೆ ರಾಜ್ಯಾದ್ಯಂತ ಚರ್ಚೆ ನಡೆಯಬೇಕು….

  3. ವಿ.ಎನ್.ಲಕ್ಷ್ಮೀನಾರಾಯಣ

    ಜಾಗತೀಕರಣದ ಮೂಲಮಂತ್ರವಾದ ಖಾಸಗೀಕರಣ ಮತ್ತು ವ್ಯಾಪಾರೀಕರಣದ ಬೆಂಕಿ ಸಾರ್ವಜನಿಕ ಉದ್ಯಮಗಳನ್ನು ಸುಡಲು ಆರಂಭಿಸಿ20ವರ್ಷಗಳಾದಮೇಲೆ ಅದರ ಝಳ ಈಗ ಸರಕಾರೀ ಶಾಲೆಗಳಿಗೆ ಮುಟ್ಟಿದೆ. ಜಾಗತೀಕರಣದ ಲಾಭಗಳನ್ನು ಹೆಕ್ಕಿಕೊಳ್ಳುವ ತರಾತುರಿಯಲ್ಲಿ ಕನ್ನಡಕ್ಕೂ ವ್ಯಾಪಿಸಬಹುದಾದ ದುರ್ಗತಿಯನ್ನು ಊಹಿಸಲಾಗದವರು ರಾಜಕೀಯ ಅನಕ್ಷರಸ್ಥರೇ ಸರಿ.ಬೇರನ್ನೇ ಕತ್ತರಿಸುತ್ತಿದ್ದಾಗ ಚಿಗುರು ನಳನಳಿಸುತ್ತಿದೆಯೆಂದು ಸುಮ್ಮನಿದ್ದವರ ಪ್ರಲಾಪ ಇದು. ಕಳೆದುಕೊಂಡ ಕಡೆಯೇ ಹುಡುಕಬೇಕೆಂಬ ನಾಣ್ಣುಡಿ ಇದೆ. ಕಾಗೇರಿ ಇತ್ಯಾದಿ ಜನ ಜಾಗತೀಕರಣ ರಾಜಕಾರಣದಲ್ಲಿ ತಟ್ಟೆಯ ಹೊರಗೆ ಚೆಲ್ಲಿದ ಅಗಳುಗಳನ್ನು ಹೆಕ್ಕಿಕೊಳ್ಳುವ ಕಾಗೆಗಳಂತೆ. ಅವರನ್ನು ದೂರಿ ಫಲವಿಲ್ಲ. ಜಾಗತೀಕರಣದ ಪ್ರಾಮಾಣಿಕ ಶ್ರದ್ಧಾಳು,ಜಾಗತಿಕ ಹಣಕಾಸು ಸಂಸ್ಥೆಗಳ ನಂಟ, ಅಮೆರಿಕಾದ ಶ್ರೀಮಂತ ಉದ್ಯಮಿಗಳ ಪಾರಪತ್ತೇಗಾರರ ಬಂಟರಾದ ಭಾರತದ ಪ್ರಧಾನಿ ಮತ್ತವರ ಫಲಾನುಭವಿಗಳ ಸರ್ಕಾರದಲ್ಲಿ ಜೀವ ವಿರೋಧೀ ಅಣುವಿದ್ಯುತ್ ಸ್ಥಾವರಗಳ ವ್ಯಾಪಾರದಿಂದ ಹಿಡಿದು ವಿದೇಶೀ ಬಂಡವಾಳ ಹೂಡಿಕೆಯ ಎಲ್ಲಾ ಜನವಿರೋಧೀ ನೀತಿಗಳಲ್ಲಿ ನಮ್ಮೆಲ್ಲರ ಸಮಸ್ಯೆಗಳ ಬೇರುಗಳು ಇವೆ. ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸಿದರೆ ಅವರು ಬಡವರಿಗೆ ಸಹಾಯ ಮಾಡಬಹುದು;ಸರಕಾರಗಳೇ ಖಾಸಗೀಕರಣಗೊಂಡರೆ ದಕ್ಷ ಆಡಳಿತ ಸಾಧ್ಯ ಎಂದು ನಂಬಿದರೆ ಪ್ರಸ್ತುತ ರಾಜಕಾರಣದಲ್ಲಿ ಪದವಿ-ಅಧಿಕಾರ-ಹಣಗಳಿಕೆ ಸಾಧ್ಯ. ಪಕ್ಷಬೇಧವಿಲ್ಲದ ಇಂಥ ಸರಕಾರಗಳು ನಮ್ಮನ್ನು ಆಳುತ್ತಿವೆ. ಆದರೆ ಈಗಲೂ ಕಾಲ ಮಿಂಚಿಲ್ಲ.ನಮ್ಮ ಕಣ್ಣಿಗೆ ಕಾಣುವ ಮೇಲ್ಪದರದ ಸಮಸ್ಯೆಗಳನ್ನು ಆಳದ ರಾಜಕೀಯ-ಆರ್ಥಿಕ ನೀತಿಗಳಲ್ಲಿ ಗುರುತಿಸಿ ವಿರೋಧ ಸಂಘಟಿಸಿದರೆ ಕನ್ನಡದ ಜನರ ಬದುಕು-ಕನ್ನಡ-ಸರಕಾರೀ ಶಾಲೆಗಳು ಉಳಿಯುವ ಸಾಧ್ಯತೆ ಇದೆ.ಹೀಗೆ ಜನಾಭಿಪ್ರಾಯವನ್ನು ಸಂಘಟಿಸದೆ ಕನ್ನಡದ ಶಾಲೆಗಳ ಉಳಿವಿಗೆ ಬರಿದೆ ಹೋರಾಡಿದರೆ ಹುತ್ತದಲ್ಲಿನ ಹಾವನ್ನು ಹುಡುಕಿ ಕೊಲ್ಲದೆ ಗೆದ್ದಲನ್ನು ದೂಷಿಸಿದಂತಾಗುತ್ತದೆ.
    ವಿ.ಎನ್.ಲಕ್ಷ್ಮೀನಾರಾಯಣ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading