ಹೊಸ ಶಬ್ದಸಂಸಾರ ಕವನ ಸಂಗ್ರಹ- ಕವಿ ಶ್ರಿ ಬಿ ಏ. ಸನದಿ
ಉದಯಕುಮಾರ ಹಬ್ಬು,
ಕಾವ್ಯ ಹೃದ್ಯವಾಗಬೇಕಾದರೆ ಅದು ಹೃದಯಕ್ಕೆ ವೇದ್ಯವಾಗಬೇಕು. ಹೃದಯದಲ್ಲಿ ನಾನಾ ನಮೂನೆಗಳ ಧನಾತ್ಮಕ, ನವಿರಾದ ಭಾವನೆಗಳನ್ನು ಸ್ಪುರಿಸಬೇಕು. ಕಾವ್ಯ ನವ್ಯ ಕವನದಂತೆ ಬೌದ್ಧಿಕ ಕಸರತ್ತು ಆಗಕೂಡದು. ತನ್ನೊಳಗೆ ಹುದುಗಿರುವ, ಆತ್ಮರತಿಯಾದ ಆಮೆಯಾಗಿರಕೂಡದು. ಒಳಗಿನಿಂದ ಹೊರಗೆ ಬಂದು ತನ್ನಂತೆ ಪರರೆಂದು ಭಾವಿಸುವ ಸುಮನಸ್ಕನಿರಬೇಕು ಕವಿ.
ಇಲ್ಲಿಯ ಕವನಗಳು ನವ್ಯದ ಅತೀ ಬೌದ್ಧಿಕತೆಗೆ, ಸಂಕೀರ್ಣತೆಗೆ, ಆತ್ಮರತಿಗೆ ಸೆಡ್ಡು ಹೊಡೆದು ನಿಂತಿವೆ. ಕವಿ ಮಾನವ ಧರ್ಮದ, ಮಾನವ ಜನಾಂಗದ ಅನಧಿಕೃತ ಶಾಸಕರಂತೆ ಎಂದು ವರ್ಡ್ಸ್ ವರ್ತ್ ಹೇಳಿದ್ದಾನೆ. ಇಲ್ಲಿಯ ಕವಿತೆಗಳು ಒಬ್ಬ ಸುಮನಸ್ಕ, ಸೌಮ್ಯ, ಸುಸಂಸ್ಕೃತ, ಮಾನವೀಯ ಅನುಕಂಪ ತುಂಬಿರುವ, ಕರುಣೆಯುಳ್ಳ ಮಾನವ್ಯ ಕವಿಯಾಗಿ, ಸೂಫಿ ಸಂತರಂತೆ ಕವಿ ಕಂಡು ಬರುವಂತೆ ಮಾಡಲು ಯಶಸ್ವಿಯಾಗುತ್ತವೆ.
ಶಬ್ದಗಳ ಆಯ್ಕೆಯಲ್ಲಯೂ ಸೌಮ್ಯ ಶಬ್ದಗಳು ಅವರು ಹೇಳಿದಂತೆ ಕೇಳುತ್ತವೆ. ಸುಲಲಿತ ಲಯಗಳು, ಗೇಯತೆ, ಸರಳ ವಿಚಾರಗಳು, ವಿನಯತೆ, ಹೃದಯವಂತಿಕೆ, ಸಹೃದಯತೆ, ವಿಶಾಲ ಮನೋಭಾವನೆ, ಇವೆಲ್ಲವೂ ಇವರನ್ನು ಶ್ರೇಷ್ಠ ಕವಿಗಳ ಸಾಲಿಗೆ ಸೇರಿಸಿವೆ ಎಂದು ನಾನು ಅಂದುಕೊಂಡಿದ್ದೇನೆ.
ಕವಿ ಇಲ್ಲಿ ಮಾನವ ಸಂಬಂಧಗಳ ಸೂಕ್ಷ್ಮ ವೀಕ್ಷಕನಾಗಿ, ತನ್ನ ಅನುಭವಗಳ ಮೂಸೆಯಿಂದ ಕಾಸಿ ಹೊರಹಾಕಿದ ಕೆಲವು ಬೋಧನೆಗಳಿವೆ. ಆದರೆ ಒಣ ಬೋಧನೆಗಳಲ್ಲ. ಅವುಗಳಿಗೆ ಜೀವಂತ ದೃಷ್ಟಾಂತದ ಲೇಪನವಿದೆ. ರೂಪಕಗಳ ಅವಿಷ್ಕಾರ ಮತ್ತು ನಿರೂಪಣೆ ಇದೆ. ರೂಪಕಗಳ ನಿರೂಪಣೆಯಲ್ಲಿಯೂ ಎಲ್ಲಿಯೂ ಕವಿಯು ಅತಿಯಾಗಿ ಜಗ್ಗಾಡದೆ, ಎಳೆದಾಡದೆ ನೇರವಾಗಿ, ಹೇಳಬೇಕಾದ್ದನ್ನು ಅತ್ಯಂತ ಸ್ಪಷ್ಟವಾಗಿ,ಸರಳವಾಗಿ ಕೆಲವೊಮ್ಮೆ ಸೂಚ್ಯವಾಗಿ ತನ್ನ ಅನುಭವದ ಮೂಲಕವೆ ಬೋಧನೆಗೆ ದೃಷ್ಟಾಂತವಾಗಿಬಿಡುತ್ತಾರೆ ಗೌರೀಶ ಕೈಕಿಣಿಯವರು ಹಾಗಾಗಿಯೇ ಅವರನ್ನು ‘ಮಾನವ್ಯ ಕವಿ’ ಎನ್ನುತ್ತಾರೆ.
ಮನುಷ್ಯ ಹೇಗಿರಬೇಕು? ಮನುಷ್ಯನೆಂದೆನಿಸಿಕೊಳ್ಳಬೇಕಿದ್ದರೆ ಅವನಲ್ಲಿ ಯಾವ ಗುಣಗಳಿರಬೇಕು, ಯಾವುದು ಇರಬಾರದು ಈ ಎಲ್ಲ ಕಹಿ, ಸಿಹಿ ವಿಚಾರಗಳನ್ನು ತನಗನಿಸಿದ್ದನ್ನು ಓರ್ವ ಸಹೃದಯಿ ಮಾನವನಾಗಿ ಕಂಡು ರೂಪಕಗಳಲ್ಲಿ ನಿರೂಪಿಸುತ್ತಾರೆ. ಉದಾಹರಣಗೆ ‘ಹುಚ್ಚರು’ ಕವನದಲ್ಲಿ ಅತಿ ನೋವಿನಿಂದ ಮನುಷ್ಯನ ಸ್ವಭಾವದ ಕುರಿತಾಗಿ ಬರೆಯುತ್ತಾರೆ. ಒಣ ಜಂಬದ ಸಣ್ಣ ಮನುಷ್ಯನಿರುವುದು ಹೀಗೆ:
ತನ್ನ ಒಳಬಲದಿಂದ ಬಾನೇರಿ ಹೋದವನೆ
ತಾನೆಂಬ ಬಣ್ಣದ ಬೆಲೂನಿನೊಲು
ಬಡಿವಾರ ಕೊಚ್ಚುವರು
ಮನುಷ್ಯ ಹೇಗಿದ್ದರೆ ಚೆನ್ನ? ಸರಿಯಾಗಿದ್ದವನನ್ನು ಜನರು ನೋಡುವುದಂತ?
ಮೌನಚಿಂತನದಲ್ಲಿ
ಹೊಸ ಬೆಳಕ ಹುಡುಕುವವರ ಕುರಿತು ನಗೆಯಾಡುವುದು
ಸಾಜವೇನು?
ಚಿಂತಕನ ಕಂಡರೆ, ಸಭ್ಯನ ಕಂಡರೆ ಜನಸಾಮಾನ್ಯರು ನಕ್ಕುಬಿಡುತ್ತಾರೆ. ಅಥವಾ ಗೇಲಿ ನಗುತ್ತಾರೆ.ಅದು ಅವರಿಗೆ ಸಹಜವಲ್ಲ. ಸರಿಯಲ್ಲ. ಎಂದು ವಿಷಾದದಿಂದ, ನವಿರಾದ ವ್ಯಂಗ್ಯದಿಂದ ಜನರನ್ನು ಎಚ್ಚರಿಸುತ್ತಾರೆ. ಕವಿ ಪ್ರಕೃತಿಯಾರಾಧಕ. ಬೆಳಗು, ಬೈಗು, ಹಗಲು ರಾತ್ರಿ, ಸಾಗರ, ನೆಲ, ಆಕಾಶ, ಮೋಡ ಹೂವು, ಮುಳ್ಳು, ಪ್ರಕೃತಿಯ ಸೌಂದರ್ಯ ಪ್ರಕೃತಿಯ ವಿರಾಟ್ ರೂಪ ಇವೆಲ್ಲವುಗಳು ಮನುಷ್ಯನ ಮನಸ್ಸುಗಳನ್ನು ಅರಿಯುವ ತಂತ್ರವಾಗಿ ಬಳಸುತ್ತಾರೆ.
ಇವರ ಕವಿತೆಗಳನ್ನು ಓದಿದಾಗ, ಇವರನ್ನು ಚೆನ್ನವೀರ ಕಣವಿಯವರನ್ನು ಕರೆವಂತೆ ‘ಸಮನ್ವಯಕವಿ’ ಎಂದು ಕರೆಯಬಹುದು. ಸಾಹಿತ್ಯದ ಯಾವ ಚಳವಳಿಗಳಿಂದ ಅಬಾಧಿರಾಗಿ ಶುದ್ಧಕವಿತೆಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಕವಿಗೆ ಬರೆಯುವುದೆ ಬದುಕು. ಅದಿಲ್ಲದಿರೆ ಸಾವು. ಅವರ ಬೆರಳು ಅವರಿಗೆ ತುಸು ಕಾಲ ಅಸಹಕಾರ ಚಳವಳಿ ಹೂಡಿದವು. ಆಗ ಕವಿ ಖಿನ್ನನಾಗುತ್ತಾನೆ. ಆದರೆ ಕವಿ ತನ್ನಷ್ಟಕ್ಕೆ ಸಾಂತ್ವನ ಮಾಡಿಕೊಳ್ಳುತ್ತಾನೆ
ಹಾಡು ಹೊರಹೊಮ್ಮಲಿಕೆ
ಬೆರಳೆ ಬೇಕೆಂದಿಲ್ಲ, ಕೊರಳಾದರೂ ಸಾಕು
ಸ್ಥಾವರಕೆ ಜಂಗಮದ ದಾರಿ ತೋರಿಸಲು!
ಎಂದು ಹೇಳಿಕೊಳ್ಳುತ್ತಾರೆ. ಆದರೆ ಮಿಲ್ಟನ್ನನಿಗೆ ಎರಡು ಕಣ್ಣಗಳೇ ಹೋಗಿದ್ದವು. ಆದರೆ ಅವನ ಬರೆಯುವ ಹಂಬಲ ನಿಂತಿರಲಿಲ್ಲ. ಕಾವ್ಯ ಬರೆಯುವ ಪ್ರತಿಭೆ ದೇವರು ತನ್ನ ಸೇವೆಯನ್ನು ಮಾಡಲು ಕೊಟ್ಟಿರುವ ಅವಕಾಶ ಎಂದು ಬರವಣಿಗೆಯನ್ನು ಮುಂದುವರಿಸುತ್ತಾನೆ. ‘ಬೋಡರ್ಯ ಕಡಲ ಕಿನಾರೆ’, ‘ಕೆಂಪು’, ಇವೆರಡು ಕವಿಯ ಪ್ರಕೃತಿ ಪ್ರೇಮದ ಅಭಿವ್ಯಕ್ತಿಗಳು. ಕವಿ ಮುಂಬಯಿಯಂಥ ಮಹಾನಗರದಲ್ಲಿ ಬಹು ಕಾಲ ಕಳೆದದ್ದರಿಂದ ಅಲ್ಲಿನ ಸದ್ದು-ಗದ್ದಲಗಳು ಎಬ್ಬಿಸುವ ಅವಾಂತರ, ಅದೇ ಅಭ್ಯಾಸವಾಗಿ ಹೋದ ಮನುಜ. ಹೇಳುತ್ತಾರೆ
ಬೆಳಗಿನಿಂದ ಹೊಸ ಬೆಳಗಿನವರೆಗೆ,
ಹೀಗೆಯೇ ಜಾತ್ರೆ ನಡೆವುದು ಕೊನೆಗೆ
ಸದ್ದಿಗೆ ಸದ್ದೇ ಮುದ್ದಿನ ಉಡುಗೊರೆ
ಗಾಳಿಯಲೆಗೂ ಜನರುಸಿರಿನ ಹೊರೆ
ಜನರ ಟೀಕೆ ಮಾಡುವ ಸಣ್ಣತನದ ಸ್ವಭಾವದ ಕುರಿತು ಕವಿ ಬರೆಯುತ್ತಾನೆ:
ಕೆಲವರಿಗೆ ಕೈಯಲ್ಲಿ ರಾವುಗನ್ನಡಿ ಹಿಡಿದು
ಎದುರು ಬರುವವರ ಚಹರೆ
ಪರಿಕಿಸುವ ಪರಿಯಲ್ಲಿ ನೋಡುವುದೆ ಅಭ್ಯಾಸ!
ಮೇಲು ನೋಟಕೆ ತಮಗೆ ಕಂಡುದಷ್ಟೇ ಸತ್ಯ
ಎಂದೂದಿ ತುತ್ತೂರಿ ಸುಖ ಪಡುವೆ ಹವ್ಯಾಸ
……..ತಮ್ಮ ಹೊಟ್ಟೆಯ ಕಿಚ್ಚು ತಮಗರಿಯದಂತೆಯೆ
ತಮ್ಮನ್ನು ಸುಡುತಿರಲು
ದೂರವಿರುವವರ ದೂರಿ ಬಾರಿ ಬಾರಿ
ಮಮತೆಯುಣಿಸಿದ ಜನರ ಮನೆಯೆದುರೆ ಕಾರಿ
ಹಿಗ್ಗಿನಲಿ ಬೀಗುವುದು ಲಕ್ಷಣವೇ?
ಎಂದು ಕವಿ ಜನರ ಸಣ್ಣ ಮನಸ್ಸುಗಳನ್ನು ನೋಡಿ ನೊಂದುಕೊಳ್ಳುತ್ತಾರೆ. ‘ಹಿಂಡಿನೆದುರಿಗೆ’ ಕವನದಲ್ಲಿ ಕವಿ ಗುಂಪಿನಲ್ಲಿ ಗೋವಿಂದನಾಗಲು ಇಷ್ಟಪಡುವುದಿಲ್ಲ. ಆದರೆ ಕವಿ ಎಷ್ಟೆ ಪ್ರಯತ್ನಪಟ್ಟರೂ ಜನರ ಹಿಂಡಿಗೆ ಅವರ ಅನನ್ಯತೆಯನ್ನು ಅರಿಯುವ ಮನಸ್ಸಿದ್ದಂತಿಲ್ಲ. ಹಿಂಡಿನೆದುರಿಗೆ ಕವಿ ತನ್ನತನವನ್ನು ಕಳಕೊಂಡ ವಿಷಾದ ಕಾಡುತ್ತಿದೆ. ಸದ್ವಿವೇಕದ ಸಣ್ಣ ಧ್ವನಿಯೂ ಗುಂಪಿನಲ್ಲಿ ಉಡುಗಿ ಹೋಗುತ್ತದೆ. ಸಮಷ್ಟಿ, ಮತ್ತು ವ್ಯಕ್ತಿಯ ವ್ಯಕ್ತಿತ್ವದ ನಡುವೆ, ವಿಶೇಷವಾಗಿ ಸಂವೇದನಾಶೀಲ ಕವಿ, ಚಿಂತಕರ ಮತ್ತು ಜನರ ನಡುವೆ ಈ ಸಂಘರ್ಷ ಇದ್ದದ್ದೇ.ಅದು ಸೊಕ್ರೆಟಿಸ್ ಆಗಿರಬಹುದು. ಗಾಂಧೀಜಿ ಆಗಿರಬಹುದು.
ತುಳಿದ ದಾರಿ’ ಕವಿತೆಯಲ್ಲಿ ಕವಿಗೆ ತುಳಿದ ದಾರಿಯನ್ನು ಬಿಟ್ಟು, ಹೊಸ ದಾರಿಯನ್ನು ಹಿಡಿಯುವ ಹಂಬಲ. ರೋಬರ್ಟ ಫ್ರೊಸ್ಟ್ ನಿಗೆ ಹೀಗೆ ಆಯಿತು ಒಮ್ಮೆ. ‘ದಿ ರೋಡ್ ನೊಟ್ ಟೇಕನ್’ ಕವಿತೆಯಲ್ಲಿ. ಅವನು ತುಳಿಯದ ಹಾದಿಯನ್ನೇ ಹಿಡಿಯುತ್ತಾನೆ. ಇದು ಎಲ್ಲ ಕವಿಗಳು. ಚಿಂತಕರು ಒಂದಲ್ಲಾ ಒಂದು ಹಂತದಲ್ಲಿ ಹಾದುಹೋಗಬೇಕಾದ ಅವಸ್ಥೆಯೆ ಸರಿ. ಕವಿ ಇಲ್ಲಿ:
ಹೊಸ ದಾರಿಗಳಗೊಮ್ಮೆ ಬಿದ್ದರೂ ಎದ್ದರೂ
ಸಾಹಸದ ಶ್ರೇಯದಲಿ ಅರಳುವುದು ಪ್ರಾಣ!
ಎಂದು ಹೊಸ ದಾರಿಯನ್ನೆ ಆಯ್ಕೆ ಮಾಡುತ್ತಾನೆ ಕವಿ.
‘ಸ್ವರತಿ’ ಕವನ ನವ್ಯ ಕವಿಗಳನ್ನು ಛೇಡಿಸಿ ಬರೆದದ್ದೋ, ಅಥವಾ ತನ್ನಲ್ಲಿಯೇ ಅನುರಕ್ತನಾದ ನಾಸರ್ಿಸಸ್ ಮನೋವೈಕಲ್ಯದವನ ಕುರಿತಾಗಿ ಬರೆದದ್ದಾದರೂ, ಕವಿ ಬಯಸುವುದು ಏನನ್ನು?
ತಮ್ಮೊಡಲಾಳಕೆ ಇಳಿಯದೆ ಕಡಲಾಳಕ್ಕೇ ಜಿಗಿವವರು
ತಮಗಲ್ಲದೆ ಇನ್ನಾರಿಗೂ ಬಾರದು ಈಜಲಿಕೆನ್ನುವರು.!
ಅಹಂಕಾರದ ಮೊಟ್ಟೆಯಾದ ವ್ಯಕ್ತಿಗಳಿಗೂ ಇದು ಅನ್ವಯಿಸುತ್ತದೆ.
ಕೊಡುಗೆ’ ‘ಪರಿಸರೆ ಸೊಗಸು’, ಈ ಕವನಗಳು ಬುದ್ಧನಂತಹ ತಾತ್ವಿಕರ ಅನಭಾವವಿರುವ ಕಥನಾತ್ಮಕ ಕವನಗಳು.
‘ಬೆಂಕಿಯ ಪ್ರೀತಿ’ ಇದು ಹಲವಾರು ಅರ್ಥವನ್ನು ಧ್ವನಿಸುವ ಉತ್ತಮ ಕವನ. ಪಂಚಭೂತಗಳಲ್ಲಿ ಅಗ್ನಿ ಪ್ರಧಾನವಾದ ಶಕ್ತಿಯಾಗಿದೆ. ಅಗ್ನಿ ಎಂದರೆ ಶಾಖ. ಬೆಂಕಿ ಎಂದರೆ ಬೆಳಕು. ಬೆಂಕಿ ಎಂದರೆ ನಾಶ. ಬೆಂಕಿ ಎಂದರೆ ಒಡಲು ಹಸಿವು, ಒಡಲ ಕಿಚ್ಚು. ಬೆಂಕಿ ಎಂದರೆ ಕೇವಲ ಬೆಂಕಿಯಲ್ಲ. ಅದು ಎಲ್ಲವೂ ಆಗಿದೆ. ಅನ್ನ ಬೇಯಿಸಲು ಬೇಕು ಬೆಂಕಿ. ದ್ವೇಷದ ಕಿಡಿ ಎನ್ನುತ್ತೇವೆ.
ಹಸಿವೆಯಾಗಿ ಹೊಟ್ಟೆಯಲಿ ಉರಿಯುವುದು, ಬಾಯಾರಿಕೆಯಾಗಿ ಗಂಟಲ ಸುಡುವುದು, ಸಿಟ್ಟಿನಲ್ಲಿ ಅತಾರ್ಕಿಕವಾಗೆ ಇಡಿ ದೇಹ, ಮನಸ್ಸನ್ನೆ ಸುಡುವುದು ಬೆಂಕಿ. ಈ ಅಗ್ನಿಯೇ ನಮ್ಮ ಅನ್ನ ಬೇಯಿಸುತ್ತದೆ. ಈ ಅಗ್ನಿಯೆ ಬೆಳಕನ್ನು ನೀಡುತ್ತದೆ. ಆ ಸೂರ್ಯನೆಂದರೆ ಬ್ರಹ್ಮಾಂಡ ಬೆಂಕಿಯ ಉಂಡೆ.
ಸೂರ್ಯನೆಂಬುವ ಕೆಂಡಮಂಡಲದ ಶಕ್ತಿಯಲಿ
ಚಲನೆ ಪಡೆವುದು ವಿಶ್ವ ವ್ಯಾಪಾರ ವಹಿವಾಟು
ವರ್ತಮಾನದ ಬದುಕು ಪುಟಗೊಂಡು ಬೆಳಗುವುದು
ವಿಜ್ಞಾನ ಪ್ರಜ್ಞೆಯಲಿ ಹದಗೊಂಡ ಬೆಂಕಿಯಲಿ
ಬದುಕಿನಚ್ಚಿಗೆ ಬೆಂಕಿಯಿಂದಲೇ ಗತಿ-ಪ್ರಗತಿ
ನನ್ನ ಕವಿತೆಗೆ ಕೂಡ ಸುಡದ ಬೆಂಕಿಯ ಪ್ರೀತಿ.
ನಾಶಗೊಳಿಸದ ಬೆಂಕಿಯೆ ಕವಿಗೆ ಪ್ರೀತಿ.
‘ಅಪಶ್ರುತಿ’ ಕವನದಲ್ಲಿ ಮನುಷ್ಯನ ಒಳ, ಹೊರ ಒಂದಾಗಿದ್ದರೆ ಚೆನ್ನ. ಅದಿಲ್ಲದಿದ್ದರೆ ಹೊರಗೆ ಆಡಂಬರದ ಪೋಷಾಕು, ಒಳಗೆಲ್ಲ ಕೊಳೆತು ನಾರುವ ಸಣ್ಣತನ, ಅರಿಷಡ್ವೈರಿಗಳ ದಾಂಧಲೆ. ಹೊರಗೆ ಆಡಂಬರ ಒಳಗೆ ಗೋಳಿಸಪ್ಪು ಎಂಬ ಗಾದೆ ಮಾತಿನಂತಿರುವ ಮನುಷ್ಯರ ಕುರಿತು ಕವಿ ಇಲ್ಲಿ ಲೇವಡಿ ಮಾಡುತ್ತಿದ್ದಾನೆ. ಒಳಗೆ ಕೊಳೆತು ನಾರುತ್ತಿರುವ ತೆಂಗಿನಕಾಯಿಯ ಹೊರ ಮೈ ನಾರಿನ ಧಿಮಾಕನ್ನು ಮನುಷ್ಯರ ಹುಳುಕತನ ಮತ್ತು ಹೊರತೋರಿಕೆಯ ಬದುಕಿಗೆ ಹೋಲಿಸಲಾಗಿದೆ.
ಮನುಷ್ಯ ಎತ್ತರಕ್ಕೆ ಹೋಗಲು ಬಯಸುವುದೇನೋ ಸರಿ; ಆದರೆ ಆ ತಕ್ಕ ಅವನ ನಡೆ, ನುಡಿ ಇರಬೇಕು. ಅಂಥವ ಕುರಿತಾಗಿ ವಚನ ಸಾಹಿತ್ಯದಲ್ಲಿ ಹಲವಾರು ವಚನಗಳು ಬರುತ್ತವೆ. ಅಂಥವರು ‘ನಿಂತಲ್ಲಿಯೇ ನಡೆವವರು, ಗುರಿ ಸೇರುವಾಟ ಆಡುವವರು. ಈ ಪ್ರಪಂಚದಲ್ಲಿ ಆಲಸಿಗಳಿದ್ದಾರೆ. ನಖರೆ ಮಾಡುವವರಿದ್ದಾರೆ. ಅಂಥವರಿಗೆ ಯಾವ ಸುಖ? ಎಲ್ಲಿಯ ಸುಖ? ಎಂದು ಕವಿ ಗೇಲಿ ಮಾಡುತ್ತಾನೆ. ಹಾಗಿರಕೂಡದು ಎಂದು ಬೋಧಿಸುತ್ತಾರೆ. ಮತ್ತೆ ಹೇಗಿರಬೇಕು?
ತಿಳಿಯಾಗಿ ತಿಳಿದದ್ದೆ ಶ್ರುತಿಯಾಗಿ ಉಳಿದೀತು!
ಕೃತಿಯಲ್ಲಿ-ಇಳಿದೀತು!
ನಮ್ಮ ನಡೆ, ನುಡಿ ತಿಳಿಯಾಗಿದ್ದರೆ, ಯಾವ ಕಲಂಕಗಳಿಲ್ಲದೆ, ಶುಭ್ರವಾಗಿದ್ದರೆ ಅದು ಬದುಕಿನ ಸುಂದರ, ಕಿವಿಗಿಂಪಾಗುವ ಶ್ರುತಿಯಾಗಿ ಉಳಿದೀತು. ಕೃತಿಯಾಗಿ ಮನುಷ್ಯರ ಬದುಕು ರಚನಾತ್ಮಕ ದಿಶೆಯತ್ತ ಹೊರಳೀತು ಎಂಬುದು ಕವಿಯ ಆಶಯವಾಗಿದೆ.
‘ವಾದ’ ಕವನದಲ್ಲಿ ವಾದದಿಂದ ಸಂಘರ್ಷ, ಕಲಹ ಮತ್ತೇನೂ ಪ್ರಯೋಜನವಿಲ್ಲ ಎಂಬುದೊಂದು ಬಗೆ. ಜಗಳದಿಂದ ಎಲ್ಲ ವ್ಯರ್ಥ. ಶಕ್ತಿಯ ವ್ಯಯ. ಯಾವ ಸತ್ಯವೂ ಕಂಡಂತೆ ಇರುವುದಿಲ್ಲ. ಒಳಗಿರುವ ಸತ್ಯವೇ ಬೇರೆ. ದೀಪ ಬೆಳಕನ್ನು ಕೊಟ್ಟಂತೆ ಅದರ ಕಿಡಿಯನ್ನು ಹುಲ್ಲು ಗೊಣಬೆಯ ಮೇಲೆಸದರೆ ಸತ್ಯಾನಾಶವಾಗುತ್ತದೆ ಸರ್ವವೂ. ಸರಳವೆಂಬುದು ನಾವು ತಿಳಕೊಂಡಷ್ಟು ಸರಳವಲ್ಲ. ಇದು ಮನುಷ್ಯನ ಭ್ರಮೆ ಅಷ್ಟೆ.
ಸರಳವೆಂಬುದು ನಮ್ಮ ಭ್ರಮೆಯಲ್ಲಿ ಸರಳ
ಭ್ರಮೆಯೆ ವಾಸ್ತವವೆಂದು ಭ್ರಮಿಸುವನೊ ಮರುಳ!
ಎಂದು ಕವಿ ತಮ್ಮನುಭವದ ಮಾತನ್ನು ಹೇಳುತ್ತಾನೆ. ಮುಂಬೈ ನಗರದಲ್ಲಿ ಹಲವಾರು ದಶಕಗಳನ್ನು ಕಳೆದಿರುವ ಸನದಿಯವರು ಅಲ್ಲಿಯ ಬದುಕಿನ ಹೂಬೇಹೂಬು ಚಿತ್ರಣವನ್ನು ಕೊಡುತ್ತಾರೆ. ಅಲ್ಲಿನ ಕೊಳೆಗೇರಿ ಕೊಳಕು ಬದುಕು, ಮತ್ತು ಜೋಪಡಿಪಟ್ಟಿಗಳ ನಡುವೆ ಎದ್ದ ಬಹುಮಹಡಿ ಕಟ್ಟಡ, ಅಲ್ಲಿ ವಾಸಿಸುತ್ತಿರುವ ಮನುಷ್ಯರು ಇವರ ಬಗ್ಗೆ ಕವಿ ನೀಡುವ ಚಿತ್ರಣ ಇಂತಿದೆ:
ಈ ಮಹಾನಗರದ ನೆಲಕೆ ಮುಂಗೈ ಮಾರಳತೆಗಳೆಲ್ಲ
ಸೋತು ಹೋದಂತೆ
ನಡುನಡುವೆ ಮೇಲೆದ್ದ ಗಗನಚುಂಬಿ ಸೌಧಗಳು
ನೆಲದ ಮೇಲೆ ನಿಂತಿವೆಯೋ, ಇಲ್ಲ
ಆಗಸದಿಂದ ನೆಲದೆಡೆಗೆ ಜೋತು ಬಿದ್ದಿಹವೋ
ಎಂಬಂತೆ ಭಾಸ!
ಎಂತಿದ್ದರೂ ಅವು ಕೈಯೂರಿದ್ದು
ಅವುಗಳ ಅಸ್ತಿತ್ವಕ್ಕೆ ಜೀವ ತುಂಬಿದ ಬಡ ಕೂಲಿಗಳ
ಸಾಲು, ಸಾಲು ಗುಡಿಗಳ ಮೇಲೆ! ಶ್ರೀಮಂತರಿಗೆ ಇದು ಗೊತ್ತಿಲ್ಲದೆ ಇಲ್ಲ. ಆದರೆ ಅವರ ಕಣ್ಣುಗಳಲ್ಲಿ ನೆತ್ತರವೇ ಇಲ್ಲ. ಕ್ರೂರಿಗಳು ಹಣವುಳ್ಳವರು ಎಂದು ಚಿತ್ರಿಸುತ್ತಾರೆ.(ಆರಡಿಯ ವಿಶ್ವ) ನಗರದಲ್ಲಿ ಹೆಣ್ಣು ರೇಪಾಗುವುದು ಮಾಮೂಲು. ಅದೂ ಬಡವಳು ಎಂದರೆ ಹೇಳುವವರು, ಕೇಳುವವರು ಯಾರಿದ್ದಾರೆ ಅವರದೊಂದು ಯಕ್ಷಪ್ರಶ್ನೆ
ಮಾನವನ ಪ್ರಾಣಿ ಗುಣಕಿಲ್ಲವೇ ಕೊನೆಯು?
ಈ ಇಂಥ ಕ್ರೌರ್ಯಕ್ಕೆ
ಮೂಲೋಕದೊಳಗುಂಟೆ ಸಮರ್ಥನೆಯು?(ಯಕ್ಷಪ್ರಶ್ನೆ)
ದೇವರ ನಂಬುವುದರ ಕುರಿತು ಹೊರಗಿನ ಸಾಕ್ಷಿ ಏಕೆ?
ಇವೆಲ್ಲ ಅವರವರ ಅಂತರಾಳದ ಪ್ರಶ್ನೆಗಳು.
ಅಂತರಾಳದ ಪ್ರಶ್ನೆಗಳಿಗೆ ಹೊರಗಿನುತ್ತರ ಬೇಕೆ?
ಹೊರಗಿನ ಸಾಕ್ಷಿಯೇ ಇಲ್ಲದಕೆ
ಆತ್ಮಸಾಕ್ಷಿಯೆ ಸಾಕು ತಾ ತಿಳಿವುದಕ್ಕೆ
ಎನ್ನುತ್ತಾರೆ.
ತಮ್ಮ ಬದುಕಿನ ಸಂಧ್ಯಾ ಕಾಲದಲ್ಲಿದ್ದ ಸನದಿಯವರಿಗೆ ಅವರ ಮುಪ್ಪು ಒಂದು ಹೊರೆಯಾಗಿಲ್ಲ. ಆದರೆ ಇನ್ನೂ, ಇನ್ನೂ ಸಕ್ರಿಯವಾಗಿರುವ ಕಾಲವಾಗಿದೆ.
ಈ ಗಡಿಯ ಅಂಚಿಗೆ ಬಂದು
ಕ್ಷಣ ಕಾಲ ಧೇನಿಸುತ ನಿಂತದ್ದು,
ನಾ ನಡೆದ ದಾರಿಯ ಏರು- ತಗ್ಗುಗಳೇಸೊ
ನನಗಿತ್ತ ಕಟು- ಮಧುರ ನೋವಿನನುಭವಗಳಿಗೆ
ನೆನಪಿನ ಗಾಳಿ ತುಂಬಿದ್ದು,
ಈ ಗಾಳಿಯೇ ನನಗಿನ್ನು ಜೀವವಾಹಿನಿಯಾಗಿ
ಇನ್ನೂ….ಇನ್ನೂ….ಇನ್ನೂ
ಎಂದು ಮುದಗೊಳ್ಳುತ್ತಾರೆ. ಮುಪ್ಪು ಮುಪ್ಪೆಂದು
ನಾನಿಂತು ಕೊನೆಗೆ, ಮನೆಯಲ್ಲೇ ಕೂತರೆ
ನಿಂತಲ್ಲೆ ಕುಸಿದೀತು ರಥದ ಗಾಲಿ! ಎನ್ನುತ್ತಾರೆ ಕವಿ.
ನಾವು ಹೇಗೆ ಬದುಕಬಹುದು? ಹೇಗೆ ಬದುಕುತ್ತಿದ್ದೇವೆ? ಹೇಗೆ ಬದುಕಿದರೆ ಚೆನ್ನ? ಈ ಪ್ರಶ್ನೆಗಳು ಶ್ರೀಸಾಮಾನ್ಯನನ್ನು ಕಾಡಿರಬಹುದು. ಕಾಡದೆಯೆ ಇರಬಹುದು. ಆದರೆ ಪ್ರಜ್ಞಾವಂತ, ನಾಗರಿಕನಿಗೆ, ಸೂಕ್ಷ್ಮ ಸಂವೇದನೆಯುಳ್ಳವರಿಗೆ ಈ ಪ್ರಶ್ನೆಗಳು ನಿರಂತರ ಕಾಡುತ್ತವೆ.
ಕವಿಗಂತೂ ಹೆಚ್ಚಾಗಿ ಕಾಡುತ್ತವೆ. ನಾವು ಬದುಕುವ ರೀತಿ ಸರಿ ಇದೆಯೆ? ಇಲ್ಲದಿದ್ದರೆ ಯಾಕಿಲ್ಲ? ಈ ಮುಂತಾದ ಪ್ರಶ್ನೆಗಳನ್ನು ‘ಬದುಕುವುದೆಂದರೆ’ ಕವನ ನಮ್ಮ ಗಮನ ಸೆಳೆಯುತ್ತದೆ. ದಿನ ನಿತ್ಯದ ಯಾಂತ್ರಿಕ ಬದುಕಿನಲ್ಲಿ ವ್ಯರ್ಥವಾದ ಓದಿನಲ್ಲಿ ತೊಡಗಿಸಿಕೊಳ್ಳುವುದು. ಆ ಓದಿನ ತಲೆ, ಬುಡ ಅವರಿಗರ್ಥವಾಗಿರುವುದಿಲ್ಲ. ಕೋಮು ಸಂಘರ್ಷ ಇತ್ತೀಚಿಗೆ ಮಾಮೂಲಾಗಿದೆ.
ಇತ್ತ ಮಾನವ್ಯದ ದಾರಿಯರಿಯದ ಧೀರರೋ
ಧರ್ಮ-ದೇವರ ನೆರಳಿನಲ್ಲಿ ನಿಂತು
ನೆರೆಹೊರೆಯ ಮನೆಮಾರುಗಳ ಸುಡುವುದು
ಅರರೆ!ನಾವು ಇಂಥವರಲ್ಲ!
ಹೊರಗಿನವರಾರೋ ಬಂದು
ಕಿಡಿಗೇಡಿತನಗೈದು ಬೆಂಕಿ ಹಚ್ಚಿದರೆಂದು
ಲೋಕವಿಡಿ ಕೇಳುವೊಲು ಆವಾಜು ಮಾಡುವುದು
ಬೆಂಕಿಯಾರಿಸುವ ನೆಪದಲ್ಲಿ ಒಳಹೊಕ್ಕು
ಕೈಗೆ ಸಿಕ್ಕುದನ್ನೆಲ್ಲ ಹೊರತಂದು
ಸ್ವಂತ ಮನೆಯಲಿ ತುಂಬಿಟ್ಟುಕೊಳ್ಳುವದು
ಇವೆಲ್ಲ ಸರಿಯೆ? ಕವಿ ಕೇಳುತ್ತಾನೆ. ಇಂಥವೇ ನಡೆಯುತ್ತಿದೆ ಈಗ ಜಗದಲ್ಲಿ ಎನ್ನುತ್ತಾರೆ ಕವಿ. ಈಗ ಹಣ ಮಾಡುವವನೆ ಬುದ್ಧಿವಂತ ಎಂದೆನಿಸಿಕೊಳ್ಳುತ್ತಾನೆ. ನಾವು ಲೋಕಚಿಂತನೆ ಮಾಡಬೇಡವೆ? ಗಳಿಸಿದ್ದನ್ನು ಅಸಹಾಯಕರಲ್ಲಿ ಹಂಚಬೇಡವೆ?
ದೈವಾಜ್ಞೆಯಾದರೂ ಸಿದ್ಧರಾಗುವರುಂಟೆ,
‘ಕುರ್ಬಾನಿ’ ನೀಡಲಿಕೆ
ತಮ್ಮ ಜೀವಕ್ಕಿಂತ ಪ್ರಿಯವಾದ ಸಂತಾನ? ಎಂದು ಕೇಳುತ್ತಾರೆ ಕವಿ.
‘ಅರಿದೊಡೆ ಶರಣಂ’ ಈ ಕವಿತೆಯಲ್ಲಿ ರೂಢಿಗತವಾದ ಶರಣರ ಮಾತುಗಳನ್ನೆ ಅಲ್ಲಗಳೆಯುತ್ತಕವಿ ಹೇಳುತ್ತಾರೆ
ಅರಿದೊಡೆ ಶರಣ
ಮರೆದೊಡೆ ಮಾನವ’
ನನ್ನ ಪಾಲಿಗೆ
ದೊರೆಯಲಿ ಮೊದಲಿಗೆ
ಎರಡನೆ ಸೌಭಾಗ್ಯ!
ಅರಿಯಬೇಕಿದ್ದರೆ ಮನುಜ ಮೊದಲು ಮಾನವನಾಗಲು ಕಲಿಯಬೇಕು.
ಅರಿವಿನ ಏಣಿನೇರುವ ಮೊದಲು
ಪಡೆಯಲೇಬೇಕು
ಮಾನವನೆಂಬ ಸನದು!
ಸನದಿಯವರಿಗೆ ಮಾನವ ಎಂಬ ಸನದೇ ಬೇಕಾಗಿದೆ. ಆದರೆ ಶರಣನೆಂಬ ಬಿರುದು ಬೇಡವಾಗಿದೆ.
ತುಳಸಿಕಟ್ಟೆ ಕವನ ಸದ್ಯದ ಪರಿಸ್ಥಿತಿಗೆ ಮುಗುಮ್ಮಾಗಿ ಅನ್ವಯಿಸುವ ಕವನ. ಬಾಬರಿ ಮಸೀದಿ ಒಡೆದು ಇವರೇನು ಸಾಧಿಸಿದರು? ಒಂದಿಷ್ಟು ಕೋಮು ಗಲಭೆ. ಒಂದಿಷ್ಟು ಜೀವಹಾನಿ. ಮತ್ತೆ ಅಶಾಂತಿ. ಅರಾಜಕತೆ. ಸನದಿಯವರು ಕುಮಟಾದಲ್ಲಿ ಒಂದು ಮನೆ ಖರೀದಿಸಿದಾಗ ಅಲ್ಲೊಂದು ತುಳಸಿಕಟ್ಟೆ. ಇವರು ಮುಸ್ಲಿಂ ಎಂದು ಗೊತ್ತಿದ್ದ ಜನ ಸನದಿಯವರಿಗೆ ಆಶ್ಚರ್ಯದಿಂದ ಕೇಳುತ್ತಾರೆ:
ಏನ್ರೀ, ಯಾಕೆ ತೆಗೆಸಿಯೇ ಇಲ್ಲ
ಮೊದಲಿದ್ದ ಮನೆಯವರ ಈ ತುಳಸಿಕಟ್ಟೆ?”
ಎಲ್ಲರೂ ಬಂದವರಿಗೆ ಕಾಡುವ ಈ ಪ್ರಶ್ನೆ ಸನದಿ ದಂಪತಿಗಳಿಗೆ ಕಾಡಲೇ ಇಲ್ಲ.
ಇದ್ದರೂ ಇರಲಿ ಬಿಡಿ, ನಮಗೆ ಅಡಚಣಿಯಿಲ್ಲ-
ಮೆಲ್ಲನೆಯೆ ನನ್ನವಳೆ ಪ್ರಶ್ನೆಗುತ್ತರಿಸುವಳು:
“ಎಷ್ಟು ಚೆಂದಾಗಿದೆ ನೋಡಿ ಚೌಕಾಕಾರದ ಕಲ್ಲಿನಕಟ್ಟೆ!
ನಿಮ್ಮಂಥ ಅಥಿತಿಗಳ ಆನಂದಕಿರಲೆಂದು
ಅದರ ಸುತ್ತಲೂ
ತರ, ತರೆದ ಹೂಕುಂಡಗಳ ಜೋಡಿಸಿ ಬಿಟ್ಟೆ!”
ಯಾರೋ ಕಟ್ಟಿದುದನು ಒಡೆಯುವುದು ಸರಿಯಲ್ಲವೆಂದು ಬಿಟ್ಟೆ!”
ಈ ಮಾತುಗಳನ್ನು ಇಂದಿನ ರಾಜಕೀಯ ಪುಡಾರಿಗಳಿಗೆ ಹೇಳಬೇಕಿದೆ. ನಾವೆಲ್ಲ ತಿಳಿಯಬೇಕಿದೆ. ತುಳಸಿಕಟ್ಟೆ ಒಡೆಯದೆ ಬಿಟ್ಟ ಸನದಿಯವರು ವಿಶ್ವಮಾನವರು. ಬಾಬರಿ ಮಸೀದಿಯನ್ನು ಒಡೆದವರು ಮುಠ್ಠಾಳ ವಿಶ್ವಾಸಘಾತುಕರು. ವಿಜ್ಞಾನ ನಮ್ಮೆಲ್ಲ ಸಹಜ ಬದುಕನ್ನು ಹೀರಿಕೊಂಡು ಬಿಟ್ಟಿದೆ. ಎಲ್ಲವೂ ಬೆರಳ ತುದಿಗಳಲ್ಲಿ ಲಭ್ಯ. ಸುಖ, ನೋವು, ನಲಿವು. ಕಂಪ್ಯೂಟರ್ ಒಂದಿದ್ದರೆ ಸಾಕು. ಜಗತ್ತೆಲ್ಲ ನಮ್ಮ ಮುಷ್ಟಿಯಲ್ಲಿ! ಕೋಗಿಲೆ ಗಾನ ಯಾರಿಗೆ ಬೇಕಾಗಿದೆ? ಕವಿ ವಿಲಪಿಸುವುದು ಹೀಗೆ:
ಇನ್ನು ಯಾರಿಗೆ ಎಲ್ಲಿ ದೊರೆಯುವುದೊ ಪುರುಸೊತ್ತು
ನಿತ್ಯ ಮುಂಜಾವಿನಲ್ಲಿ ಸುಳಿವ ಸುಳಿಗಾಳಿ ಸವಿ
ಸವಿವ ಸುಖ ಪಡೆಯಲಿಕ್ಕೆ?
ಮತ್ತೆ ಸಜೀವ ಸೃಷ್ಟಿಯ ಕೊರಳು
ಕುಹೂ ಕುಹೂ ಎಂದು ದನಿಯೆತ್ತಿ ಹಾಡಿದರೂ
ಬೆಳಗಿನನುರಾಗಕ್ಕೆ
ಕಿವಿದೆರೆದು ಕೇಳುತ್ತ ನಿಲುವುದಕ್ಕೆ? ಸನದಿಯವರ ಕವನಗಳಲ್ಲಿ ಮನುಷ್ಯ ಸ್ವಭಾವದ ವಿಶ್ಲೇಷಣೆ ಇದೆ. ಮನುಷ್ಯ ಮನುಷ್ಯನಾಗಬೇಕೆಂಬ ಕನಸು ಇದೆ. ಹಾಗಾಗದ್ದಿದ್ದುದರ ಬಗ್ಗೆ ವಿಷಾದವಿದೆ. ಕವಿ ಮುಲಾಜಿನ ವ್ಯಕ್ತಿ. ಅದಕ್ಕಾಗಿ ತೆತ್ತಿದ್ದು ಬಹಳ. ಈ ಮುಲಾಜೆಂಬುದೆ ಬರಿ ಓಳು. ಅದು ಇಲಾಜು ಕಾಣದ ಒಳ ಬೇನೆ. ಸನದಿಯವರು ಹಲವಾರು ರಶ್ಯನ್ ಕವಿತೆಗಳನ್ನು, ಅಬ್ದುಲ್ ಕಲಾಮರ ಒಂದು ಕವಿತೆಯನ್ನು, ಮತ್ತು ಬೇರೆ, ಬೇರೆ ದೇಶಗಳ ಕವಿತೆಗಳನ್ನು ಅನುವಾದಿಸಿದ್ದಾರೆ. ಅವುಗಳು ಅನುವಾದಗಳಲ್ಲ. ಭಾವಾನುವಾದಗಳು. ಸ್ವತಂತ್ರ ಕವಿತೆಗಳಂತೆ ಅನಿಸುವಂಥವುಗಳು.
ಈ ಮಾನವ್ಯ ಕವಿ ಇಂದಿನ ಯುವಜನಾಂಗಕ್ಕೆ ಮಾದರಿಯಾಗಬೇಕಿದೆ. ಅನುಕರಿಸುವುದಾದರೆ ಬಿ. ಏ. ಸನದಿಯವರನ್ನು ಅನುಕರಿಸಿ ಎಂದು ನಿಶ್ಶರ್ಥವಾಗಿ ಯುವಕರಿಗೆ ಕರೆ ಕೊಡಬಹುದು.









prof.habbu,
hosa shabda saMsaara krUtiya bagge nIvu bareda lEkhana chennaagide. TuMbaa aabhaari.
abhinaMdanegaLu.
B A Sanadi