ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿಳಿಗೆರೆಯ ‘ಛೂಮಂತ್ರಯ್ಯ’ನಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಆರ್ ಜಿ ಹಳ್ಳಿ ನಾಗರಾಜ

**

ಕವಿ, ವಿಶ್ರಾಂತ ಪ್ರಾಧ್ಯಾಪಕ, ಕೃಷಿತಜ್ಞ ಪ್ರೊ. ಕೃಷ್ಣಮೂರ್ತಿ ಬಿಳಿಗೆರೆಯ “ಛೂಮಂತ್ರಯ್ಯನ ಕಥೆಗಳು” ಕೃತಿಗೆ ೨೦೨೪ರ ಕೇಂದ್ರ ಸಾಹಿತ್ಯ ಅಕಾಡೆಮಿಯ “ಬಾಲ ಸಾಹಿತ್ಯ ಪುರಸ್ಕಾರ”ದ ಗೌರವ ಸಂದಿದೆ. ಈ ಕೃತಿಯನ್ನು “ಬಹುರೂಪಿ” ಪ್ರಕಾಶನ ಪ್ರಕಟಿಸಿದ್ದು, ಕವಿ ಗೆಳೆಯ ಬಿಳಿಗೆರೆ, ಪ್ರಕಾಶನದ ಜಿ.ಎನ್. ಮೋಹನಗೆ “ಅನ್ವೇಷಣೆ” ಪತ್ರಿಕಾ ಬಳಗದ ಅಭಿನಂದನೆ. 

ಬಾಲ ಸಾಹಿತ್ಯ ವಿಭಾಗದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ “ಛೂಮಂತ್ರಯ್ಯ…” ಸಂಕಲನದಲ್ಲಿ ಜೀವಪರ ಕೃಷಿಗೆ ಸಂಬಂಧಿಸಿದ, ರೈತರೇ ವಿಜ್ಞಾನಿಗಳಾಗುವ, ತತ್ವಜ್ಞಾನಿಗಳಾಗುವ ಪ್ರಕ್ರಿಯೆಗೆ ದಾರಿಯಾಗುವ ಕತೆಗಳಿವೆ. ಇಲ್ಲಿನ ಛೂಮಂತ್ರಯ್ಯ ಒಬ್ಬನಲ್ಲ, ಬಹುಜೀವಿಗಳ ರೂಪಕ. ಕೇವಲ ಮನುಷ್ಯರಲ್ಲ, ಪ್ರಾಣಿ ಪಕ್ಷಿ, ಕ್ರಿಮಿಕೀಟ, ಗಿಡ, ಮರ, ಬಳ್ಳಿ,  ಮಳೆ, ಗಾಳಿ, ಬಿಸಿಲು ಏನೆಲ್ಲವೂ ಇವೆಯೋ ಛೂಮಂತ್ರಯ್ಯನ ಕತೆಯಲ್ಲಿ ಇವೆಲ್ಲವೂ ಜೀವಪರ ಕಾಳಜಿ ಹೊಂದಿವೆ.

“ಹುಟ್ಟಿಸುವ ಅಧಿಕಾರ ನಿನಗಿದೆಯೋ ಇಲ್ಲವೋ ಆದರೆ ಕೊಲ್ಲುವ ಅಧಿಕಾರ ನಿನಗಿಲ್ಲ” ಎನ್ನುವುದನ್ನು ಸಾಧಿಸಿ ತೋರಿಸುವ ಕತೆಗಳು ನಮಗೆ ಮುಖಾಮುಖಿಯಾಗುತ್ತವೆ.  ಸಾಮಾನ್ಯವಾಗಿ ಕತೆ ಎಂದರೆ ಕಾಲ್ಪನಿಕದ್ದಾಗಬಹುದು, ಕನಸಿನದ್ದಾಗಬಹುದು, ವಾಸ್ತವ ಜಗತ್ತಿಗೆ ತೆರೆದುಕೊಳ್ಳುವುದಾಗಬಹುದು, ಅನುಭವದ ಸಾರವೂ ಆಗಬಹುದು.  ಆದರೆ ಈ ಸಂಕಲನದ ಕತೆಗಳನ್ನು ಓದುತ್ತಾ ಹೋದಂತೆ “ಫ್ಯಾಂಟಸಿ” ಕಲ್ಪನೆ  ಹೆಚ್ಚಿದೆ ಅನ್ನಿಸುತ್ತದೆ. ನಿಜ. ಇವತ್ತಿನ ಜಗತ್ತೇ ಫ್ಯಾಂಟಸಿಯದ್ದು. ಆ ಮೂಲಕ ಮತ್ತೊಂದು ಬದುಕನ್ನು ಕಟ್ಟಿಕೊಳ್ಳುವತ್ತ ಆಲೋಚಿಸುತ್ತೇವೆ. ಹೀಗಾಗಿ ಛೂಮಂತ್ರಯ್ಯ – “ಮನುಷ್ಯ ಕುಲಕ್ಕೆ  ಸೇರದ ಕಾಡು ಮನುಷ್ಯ!”  ಅಂತಾ ಜನ ಭಾವಿಸಿದ್ದರು ಅನ್ನೋದು ಕಥೆಯ ಭಾವವಾಗಿದೆ. ಅದು ಒಂದರ್ಥದಲ್ಲಿ ಸರಿ.  ಈ ಛೂ ಮಂತ್ರಯ್ಯ ಸಾಂಕೇತಿಕ – ಕಾಲ್ಪನಿಕ ಹೆಸರಾದರೂ ಭುಜಂಗಯ್ಯನ ದಶಾವತಾರದ ತರಹ.

ಛೂಮಂತ್ರಯ್ಯನ ಅನೇಕ ಕಥೆಗಳು ಮನಸ್ಸಲ್ಲಿ ಉಳಿಯುವ, ಮನಸ್ಸಿಗೆ ನಾಟುವ ವಸ್ತು ವೈವಿಧ್ಯತೆಗಳಿಂದ  ಕೂಡಿವೆ. ಅದರಲ್ಲಿ ಎರಡು ಹಾವುಗಳು ಶಾಶ್ವತವಾಗಿ ಇಲ್ಲವಾದದ್ದು ಒಂದು ಘಟನೆ. ಕಥೆ ಓದುತ್ತಿದ್ದರೆ ವಿಚ್ರಿತ್ರ ಅನಿಸುತ್ತದೆ. “ಹಾವುಗಳು ರೈತನ ಮಿತ್ರ” ಅನ್ನೋ ಸತ್ಯ ನಮಗೆ ಅರಿವಾಗುತ್ತೆ. ಕಥೆ ಓದುತ್ತಾ ಹೋದಂತೆ ಹೌದಲ್ವಾ ಹಾವುಗಳೂ ರೈತನ ಸ್ನೇಹ ಜೀವಿಗಳು ಅನ್ನಿಸಿಬಿಡುತ್ತೆ. ಅದರೆ ವಾಸ್ತವ ಹಾಗಿಲ್ಲ. ಕಲ್ಲ ನಾಗರ ಕಂಡರೆ ಹಾಲೆರೆವ, ದಿಟನಾಗರ ಕಂಡರೆ ಕೊಲ್ಲೆನ್ನುವ ಸಂಸ್ಕೃತಿ ನಮ್ಮದು. ಇಲ್ಲಿನ ಎರಡು ಹಾವುಗಳು ಒಂದೇ ರೀತಿ. ಅವು ಗಂಡ ಹೆಂಡತಿಯೋ, ಅಕ್ಕ ತಂಗಿಯೋ, ಅಣ್ಣ ತಮ್ಮನೋ ಒಟ್ಟಲ್ಲಿ ಜೊತೆಗಿರ್ತಿದ್ವು. ಈ ಹಾವುಗಳು ಛೂಮಂತ್ರಯ್ಯನ ತೋಟದಲ್ಲಿ ಇರುವ ಬಗ್ಗೆ ಕುತೂಹಲಕಾರಿ ಸನ್ನಿವೇಶಗಳನ್ನು ಕಥೆಗಾರ ಇಲ್ಲಿ ತಂದಿದ್ದಾನೆ. ಛೂಮಂತ್ರಯ್ಯ ನಲವತ್ತು ವರ್ಷಗಳಿಂದ ಉಳುಮೆ ನಿಲ್ಲಿಸಿದ್ದ. ತೋಟದಲ್ಲಿ ಬೆಳೆದ ಆಳೆತ್ತರದ ಹುಲ್ಲು, ಕಸಕಡ್ಡಿಗಳ ಉಳಿಕೆ ಸುಡದಿದ್ದರೆ ಸೆದಾಲು ಹೆಚ್ಚುತ್ತದೆ. ಆಗ ಸುತ್ತಮುತ್ತಲು ತೋಟದಲ್ಲಿನ ನಾಗರಹಾವು, ಕೇರೆಹಾವು, ಕಟ್ಟಾವು, ಉಸಿರು ಮಂಡಲ, ಹಸಿರು ಹಾವು ಇತ್ಯಾದಿ ವಿವಿಧ ಬಗೆಯ ಹಾವುಗಳು ತಮ್ಮ ತೋಟಕ್ಕೆ ಬಂದು ವಸತಿ ಹೂಡುತ್ತವೆ. ಮೊಟ್ಟೆ ಇಟ್ಟು ಮರಿ ಮಾಡಿಕೊಳ್ಳುತ್ತವೆ. ಇದರಿಂದ ತಮ್ಮ ತೋಟ ನಾಗಲೋಕವಾಗಿ ಪರಿವರ್ತನೆಯಾಗುತ್ತದೆ! (ಪುಟ 30) ಹೀಗೆ ಛೂಮಂತ್ರಯ್ಯ ಅಂದುಕೊಂಡಿದ್ದ ಆಲೋಚನೆಯೇ ಭಯ ಹುಟ್ಟಿಸುವಂಥಾದ್ದು. ‘ಆದರೆ, ಛೂಮಂತ್ರಯ್ಯನ ಈ ಆಲೋಚನೆಗೆ ತಕ್ಕಂತೆ ಹಾವುಗಳು ಅಲ್ಲಿ ಹೆಚ್ಚು ಬಂದು ಸೇರಲಿಲ್ಲ. ಏಕೆಂದರೆ ಅವು ಸರಾಗವಾಗಿ ಹರಿದಾಡಲು ಅಲ್ಲಿ ಬೆಳೆದ ಹುಲ್ಲು ತೊಂದರೆ ಕೊಡುತ್ತಿತ್ತು’ (ಅದೇ ಪುಟ 30) ಹಾಗೆಯೇ ತನ್ನ ಶತ್ರುಗಳಿಗೆ ಸಿಕ್ಕಾಕಿಕೊಳ್ಳುವ ಭಯ ಆವರಿಸುತ್ತಿತ್ತು ಎಂಬ ಸನ್ನಿವೇಶ ಓದುತ್ತಿದ್ದರೆ ಛೂಮಂತ್ರಯ್ಯನ ಆಲೋಚನೆ ವಿಚಿತ್ರ ಅನ್ನಿಸುತ್ತೆ.  

ಇದೊಂದು  ಹುಚ್ಚು ಆಲೋಚನೆಯಾದರೂ, ವೈಜ್ಞಾನಿಕವಾಗಿ ಅಧ್ಯಯನ ಮಾಡಿದರೆ ನಿಜ ಅನ್ನಿಸಬಹುದು. ಆದರೆ ಹಾವು ಕಂಡರೆ ಯಾರಿಗಾಗಲಿ ಭಯ. ಭೂಮಿಯ ಅನುಭವ ಪಡೆಯದೆ ತೋಟದಲ್ಲಿನ ಪ್ರತಿ ಜೀವಿಗಳನ್ನು ಸೂಕ್ಷ್ಮವಾಗಿ ಗಮನಿಸದಿದ್ದರೆ ಹೀಗೆ ಬರೆಯಲು ಸಾಧ್ಯವೇ ಇಲ್ಲ. ಉದಾಹರಣೆಗೆ “ಇಲಿ, ಹಲ್ಲಿ, ಕಪ್ಪೆ ನುಂಗಿ ಬರುತ್ತಿದ್ದ ಹಾವುಗಳಿಗೆ –  ಅವು ಸಿಕ್ಕದಿದ್ದಾಗ ಗೆದ್ದಲು ತಿನ್ನುತ್ತಿದ್ದವು”. ಬಹುಸೂಕ್ಷ್ಮ ಗ್ರಹಿಕೆಯ ವಿಚಾರವಿದು. ಆದರೆ, ನವಿಲುಗಳಿದ್ದರೆ ಹಾವನ್ನು ತಿನ್ನುವ ವಿಚಾರವೂ ಬರುತ್ತದೆ. ಮುಂದೆ ಕಥೆ ಅನೇಕ ತಿರುವುಗಳನ್ನು ಪಡೆಯುತ್ತೆ. ಛೂಮಂತ್ರಯ್ಯನ ಕಂಡರೆ ಹಾವುಗಳಿಗೂ ಭಯ ಇರಲಿಲ್ಲ.  ಇದ್ದಕ್ಕಿದ್ದಂತೆ ಅವು ಅಲ್ಲಿ ಇಲ್ಲವಾದಾಗ ಛೂಮಂತ್ರಯ್ಯನಿಗೆ ಚಿಂತೆ ಶುರುವಾಗುತ್ತೆ. ಅವುಗಳ ಬಗ್ಗೆ ತಲೆಕೆಡಿಸಿಕೊಂಡು ಹುಡುಕ ಹೊರಟಾಗ  ಇಲಿ ಹಿಡಿಯಲು ಇಟ್ಟಿದ್ದ ಕತ್ತರಿಯಲ್ಲಿ ಸಿಲುಕಿ ಅವು ಸತ್ತು ಹೋಗಿರುತ್ತವೆ. ಆದರೆ ಜಾಣ ಇಲಿಗಳು ಒಂದೂ ಅಲ್ಲಿ ಬಂದು ಸಿಕ್ಕಿಹಾಕಿಕೊಂಡಿರಲಿಲ್ಲ! ಅನ್ನೋದು ಕುತೂಹಲಕರ. ಮುಂದೆ ಛೂಮಂತ್ರಯ್ಯನಿಗೆ ಚಿಂತೆ ಆಗುತ್ತೆ, ತೋಟದಲ್ಲಿ ಹಾವಿರಬೇಕು ಎಂದು ಯೋಚಿಸಿ, ಹಾವಾಡಿಗರನ್ನು ಕರೆಸಿಕೊಂಡು ತೋಟದಲ್ಲಿ ಹಾವು ಬಿಡಿಸಿಕೊಳ್ಳುತ್ತಾನೆ. ಇದು ‘ಛೂಮಂತ್ರಯ್ಯ’ನಿಂದ ಮಾತ್ರ ಸಾಧ್ಯ. ಅದಕ್ಕೆ ಆರಂಭದಲ್ಲಿ ಹೇಳಿದಂತೆ ಛೂಮಂತ್ರಯ್ಯ ಮನುಷ್ಯನಾಗಿರದೆ ಕಾಡುಮನುಷ್ಯನ ಹಾಗೇ ಕಾಣುತ್ತಾನೆ.

ರೈತ ವರ್ಗದ ಬಗ್ಗೆ ಇಷ್ಟು ಕರಾರುವಾಕ್ಕಾಗಿ ಆಲೋಚಿಸುವ ಬಿಳಿಗೆರೆಯಂಥ ಲೇಖಕರರನ್ನು ಮೂರು ದಶಕಗಳಿಂದ ನಾನು ಕಂಡಿಲ್ಲ. ಬಿಳಿಗೆರೆ ತನ್ನ ವೃತ್ತಿಯನ್ನು, ಪ್ರವೃತ್ತಿಯನ್ನೂ ಸಮಾನವಾಗಿ ಪ್ರೀತಿಸಿದವನು. ನಗರ ಪ್ರದೇಶವನ್ನು ದಿಕ್ಕರಿಸಿ ಸಂಗಾತಿ ಮಂಜುಳಾ ಅವರ ಜೊತೆಗೆ ಬಿಳಿಗೆರೆ ಎಂಬ ಹಳ್ಳಿಯಲ್ಲಿ ತನ್ನ ವೃತ್ತಿ ಬದುಕು ಕಳೆದವನು.  ತನ್ನ ಅಪ್ಪ – ಅವ್ವನ ಹೊಲ ತೋಟ ಮಾಡುತ್ತಾ, ಪಾಠ ಮಾಡುತ್ತ,  ಕವಿತೆ, ಹಾಡು, ನಾಟಕ ಬರಕೊಂಡು –  ಕೃಷಿಯಲ್ಲಿ ಹೊಸತನ ಸಾಧಿಸಿದ ಮಿತ್ರ. ಕಲಿತ ನಮಗೆಲ್ಲ ಕೃಷಿಯ ಪ್ರಯೋಗಗಳಲ್ಲಿ ಎಂಬತ್ತರ ದಶಕದಿಂದ “ಫುಕುವೋಕಾ” ಗೊತ್ತು. ಕೃಷಿಕರಲ್ಲದವರೂ ಅವನ “ಸಹಜ ಕೃಷಿ” ಬಲ್ಲರು. ಕೊನೆ ಪಕ್ಷ ಅವನ ಪುಸ್ತಕವನ್ನಾದರೂ ಓದಿದ್ದಾರೆ. ಇಡೀ ಕೃತಿಯಲ್ಲಿ ಗ್ರಹಿಸಿಬೇಕಾದ ಅನೇಕ ಅಂಶಗಳಿವೆ. ರೈತ ಹೋರಾಟಕ್ಕೆ ಸಂಬಂಧಿಸಿದ ನೇರ ಸೂಕ್ಷ್ಮ ವಿಚಾರಗಳೂ ಇಲ್ಲಿವೆ.

ಮುಖ್ಯವಾಗಿ ರಾಸಾಯನಿಕಗಳಿಂದ, ಕ್ರಿಮಿನಾಶಕಗಳಿಂದ ರೈತನ ಜಮೀನು ಬಂಜೆ ಆಗುತ್ತದೆ ಎಂದು ಅರಿತ ಜಪಾನಿನ ಉದ್ದ ಗಡ್ಡದ ಫುಕವೋಕಾ ತಮ್ಮ ಪೂರ್ವಜರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ತೋಟ ಮಾಡಿ ಜಗತ್ಪ್ರಸಿದ್ಧ ಆದವನು. ಇಂಥವನ ಆದರ್ಶ ಕೃಷ್ಣಮೂರ್ತಿ ಬಿಳಿಗೆರೆಗೂ ಇದೆ. ಹೀಗಾಗಿ ಅವನ ಛಲ, ಅವನ ಸಾಧನೆ, ಹಾಡು, ಸಂಘಟನೆ, ಉಪನ್ಯಾಸ ಮತ್ತವನ ತೊಡಗಿಸಿಕೊಳ್ಳುವಿಕೆ  ನಮಗೆಲ್ಲಾ ಮಾದರಿ. ಆದರೆ ಅವನಂತೆ ನಾವಿರಲು ಸಾಧ್ಯವಿಲ್ಲ.

ಕೈಯಲ್ಲೊಂದು ತಂಬೂರಿ ಹಿಡಿದು ತಾನೆ ಬರೆದ ತತ್ವಪದ ಹಾಡುತ್ತ ಪುಸ್ತಕ ಮಾರುತ್ತ, ಪುಸ್ತಕ ಸಂಸ್ಕೃತಿ, ಓದು ಗೀಳು ಹಚ್ಚುವ  ಪ್ರಾಂಶುಪಾಲರನ್ನು ಎಲ್ಲಾದರೂ ಕಂಡಿದ್ದೀರಾ? ಹೀಗೆ ಹೇಳುತ್ತಲೇ ಈ ಕೃತಿಯ ಫುಕುವೋಕನ ಕಥೆಯನ್ನು ನೆನಪಿಸುತ್ತಾನೆ.‌ ಚಿಟ್ಟೆ, ದುಂಬಿ, ಜೇನುನೊಣ, ಹಕ್ಕಿಪಕ್ಷಿ, ಗೆದ್ದಲು, ಎರೆಹುಳು, ಜೇಡ ಮುಂತಾದುವು – ಬಿಳಿಗೆರೆಗೂ ಸ್ನೇಹಜೀವಿಯಾಗಿ ಒಗ್ಗಿವೆ.

ಈ ಕೃತಿಯಲ್ಲಿ “ಎರೆಹುಳು ಕಚ್ಚಿ ಆದದ್ದೆಂದು ಹೇಳಲಾದ ಗಾಯ” ಎಂಬ ಕತೆ ಇದೆ. ಕಥೆಯ ಶೀರ್ಷಿಕೆಯೇ ವಿಚಿತ್ರ ಅನ್ನಿಸುತ್ತೆ. ಅಸಾಧ್ಯವಾದದ್ದು ಈ ಶೀರ್ಷಿಕೆಯಲ್ಲಿದೆ!

ಅದೇನಪ್ಪ ಹಾಗಾದ್ರೆ… ಅದೇ “ಎರೆಹುಳು ಕಚ್ಚಿದ ಪ್ರಸಂಗ”. ಇದೇ  ಇಡೀ ಕತೆಯ ವಿಡಂಬನೆ. ಇದು ವಿಡಂಬನೆ ಆದರೂ ನಗರೀಕರಣದ ಜನರ ದಡ್ಡತನದ ಅರ್ಥಾತ್ ಮೆದುಳಿಲ್ಲದವರ ಪ್ರದರ್ಶನದಂತಿದೆ. 

ಇಲ್ಲಿನ “ಛೂಮಂತ್ರಯ್ಯ” ನನಗೆ ಸಹಜಕೃಷಿಯಲ್ಲಿ ಸಾಧಿಸಿರುವ  ಶಿವನಂಜಯ್ಯ ಬಾಳೆಕಾಯಿ ಅವರೇ ಇರಬಹುದಾ ಅನಿಸಿತು. ಅನೇಕ ಕಡೆ ಅವರೆ ಇರಬಹುದಾದರೂ, ಬಹುತೇಕ ಕಡೆ ಬಿಳಿಗೆರೆಯೇ ಛೂಮಂತಯ್ಯ ಆಗಿದ್ದಾನೆ!  ಮನುಷ್ಯ ಅವತಾರ ಎತ್ತುತ್ತಲೇ ಇರಬೇಕಂತೆ. ಅದು ಒಳ್ಳೆಯದಕ್ಕೆ ಹೀಗೆ ಅವತಾರ ಎತ್ತಿದ್ದರೆ ಯಾರಿಗೂ ನಷ್ಟವಿಲ್ಲ.  ಹಾಗಾಗಿ ಗೆಳೆಯ ಬಿಳಿಗೆರೆ ಎರೆಹುಳುಗಳನ್ನು ಬಳಸಿಕೊಂಡು ಸೊಗಸಾದ ಕಥೆ ನೇಯ್ದಿದ್ದಾನೆ.

 ಬೆಂಗಳೂರಿನಿಂದ ಛೂಮಂತ್ರಯ್ಯನ ತೋಟ ನೋಡಲು ಬಂದವರ ತಲೆಹರಟೆಯ ಪ್ರಶ್ನೆಗಳು – ತರಲೆಗಳು ಬಾಲಿಶ ಅನ್ನಿಸಿದ್ದರಿಂದ ಅವರಿಗೆ ತೋಟ ಪ್ರವೇಶಿಸಲು ಹಾಕಿದ ಬೂಟು ತೆಗೆಸಿ ಪಾದ ನೆಲಕ್ಕೆ ಊರುವಂತೆ ಮಾಡ್ತಾನೆ!  ಕೂಲಿಂಗ್ ಗ್ಲಾಸ್ ತೆಗೆಸಿ ತೋಟದ “ಕೂಲ್ ವಾತಾವರಣ” ಅನುಭವಿಸಲು ಹೇಳ್ತಾನೆ! ತಲೆಮೇಲೆ ಗಾಳಿ ಆಡಲಿ ಅಂತ ಕ್ಯಾಪ್ ತೆಗೆಸ್ತಾನೆ!

ತೋಟ ನೋಡಲು ಬಂದವರಿಗೆ ಛೂಮಂತ್ರಯ್ಯ ಹೇಳುವ ವಿಚಾರ ಕುತೂಹಲಕರ. “ಮಾನವ ಉಳಿಮೆ ಇಲ್ಲದ ತೋಟ! ಆದರೆ,  ಎರೆಹುಳು, ಇರುವೆ, ಗೊದ್ದ, ಗೆದ್ದಲು ಹುಳು ಮತ್ತು ಕೀಟಗಳು ತೋಟದ ಉಳುಮೆ ಮಾಡ್ತಾವೆ.  ಇದು ಮರಾಧಾರಿತ ತೋಟ. ರಾಸಾಯನಿಕ ಗೊಬ್ಬರ ಬಳಸದ ತೋಟ. ಗೆಡ್ಡೆ ಗೆಣಸುಗಳ ತೋಟ,  ಹಸಿರು ಬೇಲಿಯ ತೋಟ” – ಎಂದೇಳುವ  ಮಾತುಗಳೇ ಇಡೀ ಕೃತಿಯ ಹಲವು ಕಥೆಗಳ ಕೇಂದ್ರ ವಸ್ತು. ಹಾಗೂ ಅದೇ ಮೂಲ ಮಂತ್ರದೊಂದಿಗೆ ಅನೇಕ ಕಥೆಗಳು ಜೀವ ತಳೆದಿವೆ. ಎರೆಹುಳು ಕಚ್ಚಿದ ಕಥೆಯಲ್ಲಿನ “ಬ್ಯಾಂಡೇಜ್” ಪ್ರಕರಣ ಇಡೀ ಕತೆಯ ವ್ಯಂಗ್ಯೋಕ್ತಿಗೆ ಉದಾಹರಣೆ. 

ತೋಟ ನೋಡಲು ಬಂದವರೊಬ್ಬರು ಛೂಮಂತ್ರಯ್ಯನವರ ಎಡಗೈಗೆ ಕಟ್ಟಿದ್ದ ಬ್ಯಾಂಡೇಜ್ ನೋಡಿ, “ಏನ್ಸಾರ್ ಬ್ಯಾಂಡೇಜ್?” ಅಂತಾರೆ.  ಅವರಿಗೆ ತಮಾಷೆ ಮಾಡಬೇಕು ಅನ್ನಿಸಿ, “ನೆನ್ನೆ ಇದೇ ತೋಟದ ಮೂಲೆಯಲ್ಲಿ ಎರೆಹುಳುಗಳು ಕಚ್ಚಿದವು ಕಣ್ರಿ!” ಅಂದರು.

ಬಂದ 36 ಜನರ ಕಿವಿಯೂ ನೆಟ್ಟಗಾದವು. ಇಲ್ಲಿಂದ ವಿಡಂಬನೆಯ ಆಟ ಶುರುವಾಗುತ್ತದೆ.  ಫ್ಯಾಂಟಸಿಯ ಜಗತ್ತನ್ನು ಅನಾವರಣ ಮಾಡುವ ಈ ಕಥೆ ಇವತ್ತಿನ ಹದಗೆಟ್ಟ  24 × 7 ವಿದ್ಯುನ್ಮಾನ ಮಾಧ್ಯಮಗಳನ್ನು ವ್ಯಂಗ್ಯ ಹಾಗೂ ವಿಡಂಬನೆಯಿಂದ  ಲೇವಡಿ ಮಾಡುತ್ತದೆ.  ಆ್ಯಂಕರ್ ಪ್ರಶ್ನೆ ಥರಾ…  ಮುಂದಿನ ಈ  ಸಂಭಾಷಣೆ ಕೇಳಿ – ನಿಮ್ಮ ಮನಸ್ಸು ಹಗುರಾಗುತ್ತದೆ. (ಎರೆಹುಳು ಕಚ್ಚಿತು ಅಂದಿದ್ದಕ್ಕೆ) ಒಬ್ಬ, ಮತ್ತೊಬ್ಬ, ಮಗದೊಬ್ಬ, ಇನ್ನೊಬ್ಬ ಕೇಳುವ ಈ ಪ್ರಶ್ನೆ ಗಮನಿಸಿ: 

“ಇದೇನ್ಸಾರ್,  ಎರೆಹುಳು ರೈತನ ಗೆಳೆಯ ಅಂತರೆ?” 

“ಸಾಕಿದ್ದ?  ನ್ಯಾಚುರಲ್ಲಾ?” 

“ದೇಶಿನಾ?  ವಿದೇಶಿನಾ?”

” ನಾಟಿನಾ? ಹೈಬ್ರೀಡಾ?” 

“ಏರೆಹುಳಕ್ಕೆ ಹಲ್ಲಿರುತ್ತಾ?”

“ಎರೆಹುಳು ಏಕೆ ಕಚ್ಚಿತು? ನೀವೇನಾದರೂ ಕೆಣಕಿದ್ರಾ?”

“ಕಡಿದಾಗ ರಕ್ತ ಬಂತಾ?”

“ಕಡಿದಾಗ ನವೆ ಬಂತಾ!”

 “ಕಡಿದದ್ದು ರಾತ್ರಿನಾ? ಹಗಲೊತ್ತಾ?”

“ವಿಷ?” , “ಪ್ರಾಣ ಭಯ?”  

“ಕಚ್ಚಿ ಓಡಿ ಹೋಯ್ತಾ?”

“ಕಚ್ಚಿ ಸತ್ತು ಹೋಯ್ತಾ?” 

“ಕಚ್ಚಿ ಜೇನುಹುಳು ಸತ್ತು ಹೋಗುತ್ತಂತಲ್ಲ… ಹಾಗೆ”.

ಗಾಯಕ್ಕೆ ಆದ ಬ್ಯಾಂಡೇಜ್ ಕಟ್ಟಿದ್ದಕ್ಕೆ ನಮ್ಮ ನಗರವಾಸಿಗಳ ಪ್ರಶ್ನೆಗಳು  ಅತ್ಯದ್ಭುತವಾಗಿವೆ! ಪುಸ್ತಕದ ಬದನೇಕಾಯಿ ತಿನ್ನೋಕೆ ಬರೊಲ್ಲ ಅನ್ನೋದು ಇದ್ರಿಂದ ತಿಳಿಯುತ್ತೆ. ಎರೆಹುಳುವನ್ನೇ ನೋಡದ  ನಗರ ಜನಕ್ಕೆ ರಾಗಿಯು ಹೇಗೆ ಬೆಳೆಯುತ್ತೆ ಅನ್ನೋದು ಗೊತ್ತಿಲ್ಲ!  ಅದು ಮರದಿಂದ ಉದುರುತ್ತೆ ಅಂತಾನೆ ತಿಳಿದಿದ್ದಾರೆ. ಉಣ್ಣುವ ಅನ್ನದ ಅಕ್ಕಿಯ ಭತ್ತ  ಹೇಗೆ ಬೆಳೆತ್ತೆ? ಅನ್ನೋದು ಗೊತ್ತಿಲ್ಲ.  ಆ ಬೆಳೆಗಳ ಬಗ್ಗೆ ತಪ್ಪಾಗಿ ಹೇಳುವ  ಬುದ್ದಿವಂತರು ಇದ್ದಾರೆ.  ಆದರೆ ಈ ಕಥೆಯಲ್ಲಿ ಅದೇ ಎರೆಹುಳು  ಮುಂದೆ ಕಚ್ಚಬಹುದಾದ ಸೂಚನೆಯ ಎಚ್ಚರಿಕೆಯೂ ಹೌದು.  ಅದೇ ಈ ಕಥೆಯ ನಿಜವಾದ ಯಶಸ್ಸು. ತಿರುವು ಇರುವುದೇ ಇಲ್ಲಿ.  “ಮನುಷ್ಯರು ಹೀಗೆ ನೆಲಕ್ಕೆ ನಾನಾ ರೀತಿಯ ರಾಸಾಯನಿಕ ಗೊಬ್ಬರಗಳನ್ನ ವಿಷದ ಔಷಧಿಗಳನ್ನ ಹಾಕ್ತಾ ಹೋದರೆ ಒಂದು ದಿನ ಆ ವಿಷಯವನ್ನು ಉಂಡು ಸಿಟ್ಟಿಗೆದ್ದ ಹುಳುಗಳು ನಾಗರ ಹಾವಿನಂಥ ಹೆಡೆಯನ್ನು ಬೆಳೆಸಿಕೊಂಡು  ಮನುಷ್ಯರನ್ನು ಕಚ್ಚುವುದಿಲ್ಲ ಎನ್ನುವುದಕ್ಕೆ ಏನು ಆಧಾರ?” ಎಂಬ ಸ್ವಗತ ನುಡಿ  – ಎಚ್ಚರಿಕೆಯ ಮುನ್ಸೂಚನೆ ಆದರೂ, ನಾಳೆ ಈ ಘಟನೆ ಘಟಿಸಿದರೆ ಆಶ್ಚರ್ಯಪಡಬೇಕಿಲ್ಲ.

ಈಗಾಗಲೇ ಎಷ್ಟೋ ಕ್ರಿಮಿನಾಶಕ ಹೊಡೆದರು ಸಾಯದ ಹುಳುಗಳು ಹುಟ್ಟಿವೆ.  ಅವು ರೈತನ ಬೆಳೆಗೆ ಹಾನಿ ಮಾಡುತ್ತಿವೆ. ವಿಜ್ಞಾನಕ್ಕೆ ಸವಾಲಾಗಿ ಇವತ್ತು ಕೀಟ ಪ್ರಪಂಚ ಮನುಷ್ಯನ ಮೇಲೆ ದಬ್ಬಾಳಕ್ಕೆ ನಡೆಸಿದರೂ,  ನಡೆಸಬಹುದು.  ಸಂಕಲನದ ವಿಶಿಷ್ಟವಾದ ಮತ್ತೊಂದು ಕಥೆ ಅಮೆಜಾನ್ ಕಾಡಿಗೆ ಬಿದ್ದ ಬೆಂಕಿಯಲ್ಲಿ ಜೇನುಹುಳುಗಳು ದಿಕ್ಕಾಪಾಲಾಗಿ ಓಡಿ ಹೋದ ಕಥೆ – ರಾಣಿ ಜೇನು ಇಟ್ಟ ಮೊಟ್ಟೆ ಸಿಡಿದು ಹೋದ ಚಿಂತೆ… ತನ್ನ ನೆಲೆಗಾಗಿ ದೇಶ ವಿದೇಶ ಸುತ್ತುವ ಕುತೂಹಲ ಇಲ್ಲಿದೆ.  ಜನ ಬೆಂಕಿ ಜೊತೆ ಸರಸವಾಡುತ್ತಿದ್ದಾರೆ ಅಂತ ರಾಣಿ ಜೇನು ಭಾವಿಸುವ ಈ ಕತೆಯ ವಸ್ತು,  ಕಥೆ ಸಾಗುವ ಶೈಲಿ ನಿಜಕ್ಕೂ ವಿಶಿಷ್ಟ ಹಾಗೂ ಸೋಜಿಗ. ಕಥೆ ರಾಣಿ ಜೇನು ಮೂಲಕ ಜಪಾನಿನ ” ಫುಕುವೋಕ”ನ  ತೋಟಕ್ಕೆ ಎಳೆದು ತರುತ್ತದೆ.

“ಛೂಮಂತ್ರಯ್ಯ”ನ ೨೪ ಕತೆಗಳು ವೈವಿಧ್ಯಮಯ. ಎಲ್ಲಾ ಕಥೆಯ ಆರಂಭವೇ ವಿಶೇಷವಾಗಿ ಆಗಿ,  ಮುಂದೆ ಹೊಸ ಆಲೋಚನೆಗೆ ತಿರುಗುತ್ತವೆ. ಒಂದು ರೀತಿ ಮೆದುಳಿಗೆ ಮೇವು ನೀಡುತ್ತವೆ. ಯೋಚಿಸುವಂತೆ ಮಾಡುತ್ತವೆ.  ಮಕ್ಕಳನ್ನು ಉದ್ದೇಶಿಸಿ ಈ ಕಥೆಗಳನ್ನು ನೇಯ್ದಿದ್ದರೂ,  ಅದು ಹಿರಿಯರಿಗೆ ಹೆಚ್ಚು ಅರಿವು ಮೂಡಿಸಲು ಬರೆದಂತೆ ಕಾಣುತ್ತೆ. “ಬಹುರೂಪಿ” ಈಗಾಗಲೇ ಹೊಸ ರೀತಿಯ ಪುಸ್ತಕ ಪ್ರಕಾಶನಕ್ಕೆ ಕೈ ಹಾಕಿದ್ದು, ವಿಶಿಷ್ಠವಾದ ವಿನ್ಯಾಸಕ್ಕೆ ರಾಷ್ಟ್ರೀಯ ಮಟ್ಟದ ಪುರಸ್ಕಾರ ಪಡೆದಿರುವುದು ಸಂತೋಷ. ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ರೀತಿಯ ಇಂಥ ಕಥಾ ಜಗತ್ತಿಗೆ ಕಣ್ಣು ತರಿಸಿದ್ದಕ್ಕೆ ಕೃಷ್ಣಮೂರ್ತಿ ಬೆಳಿಗೆರೆಯನ್ನು ಅಭಿನಂದಿಸುತ್ತೇನೆ. 

“ಇಂಥದ್ದೊಂದು ಪುಸ್ತಕವನ್ನು ನಾನು ಇದುವರೆವಿಗೂ ಓದಿರಲಿಲ್ಲ” ಎಂದು  ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಛೂಮಂತ್ರಯ್ಯನ ಬಗ್ಗೆ ಮೆಚ್ಚುಗೆ ಸೂಚಿಸಿದರೆ;  ಕಥೆಗಾರ ಎಸ್. ಗಂಗಾಧರಯ್ಯ ಈ ಕಥಾ ಹಂದರಕ್ಕೆ  ಉತ್ತಮ ಚೌಕಟ್ಟುಳ್ಳ ಒಳನೋಟಗಳನ್ನು ನೀಡಿದ್ದು,  ಈ ಕೃತಿಯ ಮೌಲ್ಯ ಹೆಚ್ಚಿಸಿದೆ. ಕೃಷ್ಣಮೂರ್ತಿ ಬಿಳಿಗೆರೆ ಮಕ್ಕಳ ಮನವ ಲೋಕವನ್ನು ಆವರಿಸಿ ಮತ್ತಷ್ಟು ವಾಸ್ತವ ಹಾಗೂ ಫ್ಯಾಂಟಸಿಯ ಕಥೆ, ಕವಿತೆಗಳನ್ನು ನೀಡಲಿ, ಅವು ಜನಮನಕ್ಕೆ ತಲುಪಿ ಹಲವು  ಪ್ರಶಸ್ತಿ ಪುರಸ್ಕಾರಗಳನ್ನು ಪಡೆಯಲಿ ಎಂದು ಆಶಿಸುತ್ತೇನೆ.

‍ಲೇಖಕರು avadhi

21 June, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading