ಛಾಯಾ ಭಗವತಿ
ಮುಗಿಯಲೇ ಒಲ್ಲದ, ಬರೆಸಿಕೊಂಡು ನನ್ನನ್ನು ಮತ್ತೆ ಮತ್ತೆ ಹಿಮದ ಆಸೆಗೆ ಹಚ್ಚುತ್ತಿರುವ ನನ್ನ ಹಿಮವಾಸದ, ಪ್ರವಾಸದ ಬರಹದ….ಒಂದು ತುಣುಕು ನಿಮಗಾಗಿ….!

ಅವತ್ತು ಸಂಜೆ ನಾನು ಮತ್ತು ಅಕ್ಕ, ಸುಮ್ಮನೆ ಒಂದಷ್ಟು ದೂರ ಹೋಗಿಬರೋಣವೆಂದು ಹೊರಟೆವು. ಒಂದು ಕಡೆ ಮುಗಿಲೆತ್ತರ ಬೆಳೆದುನಿಂತಿದ್ದ ದೇವದಾರು ವೃಕ್ಷಮೇಳ. ಇನ್ನೊಂದೆಡೆ ಆಳ ಕಣಿವೆ. ಎಲ್ಲ ಕಡೆಗೂ ಹಸಿರು ಬಣ್ಣ! ಯಾಕೋ ಆ ಒಂದು ವಾಕು ನನ್ನಲ್ಲಿ ಹತ್ತಾರು ಭಾವನೆಗಳನ್ನು ಹುಟ್ಟಿಹಾಕಿಬಿಟ್ಟಿತು. ಒಂದು ತಿರುವಿನಲ್ಲಿ ಅಕ್ಕ ನನ್ನ ಚಿತ್ರ ಸೆರೆಹಿಡಿದ ಕ್ಷಣವಂತೂ ಅದು ಯಾವುದೋ ಮಾಯದಲ್ಲಿ ನನಗೆ, ನನ್ನ ಗುರಿಯಿರದ ಬದುಕಿಗೆ ಸಿಕ್ಕ ತಿರುವು ಅನಿಸಿಬಿಟ್ಟಿತು. ಮತ್ತೆ ಮಾತುಗಳ ಬರಗಾಲ, ಮಾತಿಲ್ಲದೆಯೇ ಸುಮ್ಮನೆ ಆ ಸುಖವನ್ನು ಒಳಗಿಳಿಸಿಕೊಂಡು ಸುಮ್ಮನಿದ್ದುಬಿಡಬೇಕು ಅನುವಂಥ ನಿರಾಳತೆ. ಅಪೂರ್ವವಾದ, ಮಾತಿಗೆ ಮೀರಿದ ಆನಂದ. ನನ್ನ ಬಾಲ್ಯವನ್ನು ಬದುಕು ಮರಳಿ ಕೊಟ್ಟ ಹಾಗೆ. ಕುಪ್ಪಳಿಸಿ ಕುಣಿಯಲಿಲ್ಲ ಅನ್ನುವುದನ್ನೊಂದು ಬಿಟ್ಟರೆ ನನ್ನ ಹಿಗ್ಗಿನ ಮುಂದೆ ಆ ಬೆಟ್ಟಸಾಲೂ ಕುಗ್ಗಿಹೋಗಿತ್ತೇನೋ ಅನುವ ಹಾಗೆ. ಎಷ್ಟು ಹಾಡು ಹಾಡಿದ್ದೆನೋ ಆ ಸಂಜೆ. ಹಾಡಬೇಡ ನಿಲ್ಲಿಸು ಅಂತ ಅಲ್ಲಿಯ ನಿಸರ್ಗ ಹೇಳಲೂ ಇಲ್ಲ, ನನ್ನೆದೆಯ ಹಾಡು ನಿಲ್ಲಲೂ ಇಲ್ಲ, ನಾ ಮರಳುವ ತನಕ.
ಸಿಕ್ಕಸಿಕ್ಕ ಎಲೆ, ಕಾಯಿ, ಚಿಗುರು, ಹೂವು, ಗಿಡದ ಬೊಡ್ಡೆ, ನೆಲದ ಹುಲ್ಲುಹಾಸು ಎಲ್ಲವನ್ನೂ, ಎಲ್ಲದನ್ನೂ ಮುಟ್ಟುತ್ತ, ಮೂಸುತ್ತ ನಡೆದಿದ್ದ ನಮ್ಮ ಕಣ್ಣಿಗೆ ಬಿದ್ದರು ಆಡುತ್ತಿದ್ದ ಚಿಣ್ಣರು. ಒಂದು ಹುಡುಗಿಯಂತೂ ಮೂಗಲ್ಲಿ ರಕ್ತ ಸುರಿಸಿಕೊಂಡೇ ಆಡುವುದನ್ನ ನೋಡಿ ಆಡಬೇಕು ಅನ್ನುವ ಅದರ ಆಸೆ ಕಂಡು ಬೆರಗಾಗಿ, ಮತ್ತೆ ಅವನ್ನೆಲ್ಲ ಜೊತೆಗೆ ಕರೆದುಕೊಂಡು ಅಕ್ಕನ ಮೊಬೈಲಿನಲ್ಲಿ ಸೆರೆಹಿಡಿದು, ಮುಂದೆ ನಡೆದಿದ್ದೆವು. ಎತ್ತರೆತ್ತರಕ್ಕೆ ಬೆಳೆದು ನಿಂತಿದ್ದ ಆ ಮರಗಳನ್ನ ನೋಡಿದಾಗಲೆಲ್ಲ ಅನಿಸುತ್ತಿತ್ತು, ನಾವೆಷ್ಟು ಚಿಕ್ಕವರು ಆದರೂ ಎಷ್ಟು ದೊಡ್ಡವರಾಗಲು ಬಡಿದಾಡುತ್ತೇವೆ, ಹೊಡೆದಾಡುತ್ತೇವೆ. ಮುಗಿಲು ಮುಟ್ಟುವ ತನಕ ಬೆಳೆದು ನಿಂತಿರುವ ಆ ಮರಗಳ ರಾಶಿಯ ನಡುವೆ ನಮ್ಮ ಪಿಸುಮಾತು ಕೂಡ ಗದ್ದಲ ಅನಿಸುತ್ತಿತ್ತು.
ಯಾಕೋ ಅಲ್ಲಿರುವತನಕ ಮಕ್ಕಳು ನನ್ನನ್ನು ಹೆಚ್ಚು ಕಾಡಲಿಲ್ಲ. ಅಪ್ಪನ ಸುಪರ್ದಿಯಲ್ಲಿ ಆರಾಮಾಗಿದ್ದಾರಲ್ಲ ಎನುವ ನಿರಾಳತೆಯೋ, ಏನೋ ನಾನೇ ಆ ಜಾಗದಲ್ಲಿ ಸಣ್ಣ ಹುಡುಗಿಯಾಗಿ ಹೋಗಿದ್ದೆ. ನನ್ನ ಬಾಲ್ಯದಲ್ಲಿ ಅಪ್ಪ ಅಮ್ಮನಿಂದ ದೂರವಿದ್ದು ಓದಬೇಕಾದ ಅನಿವಾರ್ಯತೆಯ ಮಜಲನ್ನು ನಾನು ಹಾದು ಬಂದದ್ದರಿಂದ ಯಾರೇ ನನಗೆ ಮಗುವಿನ ರೀತಿ ಪ್ರೀತಿ ತೋರಿಸಿದರೂ ಕರಗಿ ಹೋಗಿಬಿಡುತ್ತಿದ್ದೆ. ಅಲ್ಲಿ, ನನ್ನನ್ನೇ ನಾನು ಸಂಭಾಳಿಸಿಕೊಳ್ಳಬೇಕಾದ ಭಾವವೊಂದು ನನ್ನನ್ನ ಆವರಿಸಿಕೊಂಡಿತ್ತೋ ಎನ್ನುವ ಹಾಗೆ ನನ್ನ ಕ್ಷಣಗಳು ಇದ್ದವು. ಒಮ್ಮೆ ಮಾತು, ಮರುಕ್ಷಣದಲ್ಲೇ ಮೌನ ಹೀಗೆ ಬೇಕುಬೇಕಾದ ಹಾಗೆ ಭಾವದ ರಜಾಯಿಯನ್ನು ಬದಲಾಯಿಸಿಕೊಳ್ಳುತ್ತ ಮರಳಿ ಬೆಟ್ಟದ ಮನೆಗೆ ವಾಪಸಾದರೆ ಚಳಿ ನಿಧಾನ ಮೈಮನಗಳೆರನ್ನೂ ಅವರಿಸಿಕೊಳ್ಳತೊಡಗಿತ್ತು. ಅಲ್ಲಿದ್ದಷ್ಟು ದಿನಗಳೂ ಕಣ್ತುಂಬ ನಿದ್ದೆ ಮಾಡುವುದು ನನ್ನಿಂದ ಆಗಲೇ ಇಲ್ಲ.
ಯಾವೊಬ್ಬ ಹೆಣ್ಣುಮಗಳಿಗೇ ಆಗಲಿ ಮದುವೆ ಎಂಬ ಜಂಟಿರಾಗ ಶುರುವಾದ ಕೂಡಲೇ ನಿದ್ದೆ ಎನ್ನುವುದು ಮರೀಚಿಕೆಯಾಗಿ ಬಿಡುವುದೇನೋ ಅನಿಸುತ್ತದೆ. ಆರಂಭದ ದಿನಗಳಲ್ಲಿ ರೋಮಾಂಚನ ತರುವ ರಾತ್ರಿಗಳು ಕ್ರಮೇಣ ಹೆಣ್ಣೊಬ್ಬಳ ನೆಮ್ಮದಿಯನ್ನು ನಿಧಾನವಾಗಿ ಕಬಳಿಸತೊಡಗುತ್ತವೆ. ಆಮೇಲಾಮೇಲೆ ಬದುಕಿನ ತೊಟ್ಟಿಲಿಗೆ ಅಮ್ಮನೆದೆಯ ಹಾಲಿನ ಬಟ್ಟಲು ಹಿಡಿದು ಬರುವ ಮಕ್ಕಳು ಆಕೆಯ ನಿದ್ದೆ, ಊಟ, ವಿಶ್ರಾಂತಿ, ನಿರಾಳ ಕ್ಷಣಗಳನ್ನೆಲ್ಲ ಪ್ರೀತಿಯಿಂದಲೇ ಕಸಿಯತೊಡಗುತ್ತವೆ. ತಾನು ಉಣುವ ಊಟ, ತನ್ನ ಕಣ್ಣಿನ ಕನಸುಗಳ ನಿದ್ರೆ, ಮೈಯ ನೋವಿನ ಕಾಳಜಿಗಳನ್ನೆಲ್ಲ ಬದಿಗಿಡುವ ಅಮ್ಮ ಮಗುವಾಗುತ್ತಾಳೆ. ನಗುವಾಗುತ್ತಾಳೆ. ಯಾವುಯಾವುದಕ್ಕೋ ಅಳುವುಕ್ಕಿ ಬಂದರೂ ಅಲ್ಲಲ್ಲೇ ತಡೆದು, ತೊಡೆದು ಬಿಗುವನೆಲ್ಲ ಹಿಂದಿಕ್ಕಿ ಬಾಗುತ್ತಾಳೆ. ಎಲ್ಲ ನೋವನ್ನೂ ನೀಗುತ್ತಾಳೆ. ಯಾಕೋ ಅಗತ್ಯಕ್ಕೂ ಮೀರಿ ಮಕ್ಕಳನ್ನು ಹಚ್ಚಿಕೊಳ್ಳುತ್ತೆವೇನೋ ಅಂದುಕೊಂಡೆ. ನನ್ನೊಡನೆ ನಡೆದು ಬರುತ್ತಿದ್ದ ಅಕ್ಕನ ಮನಸಿನಲ್ಲಿ ಏನೇನು ಜರುಗುತ್ತ ಇರಬಹುದು ಎಂಬ ಕುತೂಹಲ ಇದ್ದರೂ, ಅವರ ಏಕಾಂತವನ್ನು ಒಡೆಯಬಾರದು ಎಂಬುದಕ್ಕಾಗಿ ಮತ್ತೆ ನನ್ನ ಹಾಡುಗಳ ಜತೆಗೆ ನನ್ನ ಹೆಜ್ಜೆಗಳು ಮುಂದೆ ನಡೆದವು. ಒಮ್ಮೆಯೂ ಇವರು ಯಾರೂ ನನಗೆ ಫೋನು ಮಾಡಿ ಕಾಟವಿಡಲಿಲ್ಲ. ಹತ್ತುದಿನಗಳಾದರೂ ಆಕೆಯ ಲೋಕದಲ್ಲಿ ಆಕೆ ಇದ್ದುಬರಲಿ ಅಂದುಕೊಂಡರೋ ಏನೋ? ಯಾರು ಏನು ಅಂದುಕೊಂಡರು ಅನ್ನುವ ಯೋಚನೆಗಿಂತ ನಾನೇನು ಅಂದುಕೊಳ್ಳುತ್ತಿದ್ದೆ ಎನ್ನುವುದು ಮುಖ್ಯ ಅನಿಸಿದರೂ ಹುಚ್ಚುಮನಸು ಹೀಗೆ ಹತ್ತೆಂಟು ಆಲೋಚನೆಗಳಲ್ಲಿ ಚಲಿಸುತ್ತಲೇ ಇರುತ್ತಿತ್ತು.






I have too experience this kind of feeling of nothingness, but not enough times as I would like to…