ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿಜಾಪುರದ ರೊಟ್ಟಿ ತಿಂದು ಉಳದ ಬಳದದ್ದ ಕಟ್ಟಿಕೊಂಡು ಸಮ್ಮೇಳನ ವಂಟೈತೋ ಕೊಡಗೀಗ್ಯ ….

ಶಿವು ಮೊರಿಗೇರಿ

ದೇವ್ರಾಣಿ ಹೇಳ್ತೀನಿ. ಅಡ್ಡಿ ಇಲ್ರೀ ವಿಜಾಪುರ…ಮೂರು ದಿನದಿಂದ ಏರಿದ್ದ ಸಾಹಿತ್ಯದ ಜ್ವರ ಇನ್ನೂ ಇಳಿದಿಲ್ಲ. ಆದ್ರ, ಸಮ್ಮೇಳನ ಮಾತ್ರ ಅದ್ಧೂರಿ ಸಮಾರೋಪ ಕಾಣ್ತು ನೋಡ್ರಿ. ಇವತ್ತು ಮುಂಜಾನಿಲಿಂದ ಪುರುಸೊತ್ತಿಲ್ಲದಂಗ ಜನ ಅದಾ ಹುಮ್ಮಸ್ಸಿಲೆ ಬಂದ್ರು. ಸಾಹಿತ್ಯ ಸಮ್ಮೇಳನಕ್ಕ ತಮ್ಮ ಹುರುಪು ಇನ್ನೂ ಕುಗ್ಗಿಲ್ಲ, ಬಿಜಾಪುರದ ಜನ ಕನ್ನಡ ಸಾಹಿತ್ಯನ ಕೈ ಬಿಟ್ಟಿಲ್ಲ ಅಂತ ಮತ್ತ್ಯ ಇವತ್ತೂ ಸಾಬೀತು ಮಾಡಿದ್ರು. ಮುಳಾ ಮುಂಜಾನೆ ಸಮ್ಮೇಳನದ ವೇದಕಿ ಮುಂದ ಹೋದ್ರ, ಟ್ರಾಕ್ಟರ್ ಗಳು ಸಮಾವೇಶದ ಅಂಗಳಕ್ಕ ನೀರು ಚುಮುಕಿಸಿತಿದ್ವು. ಪುಸ್ತಕಗಳ ಮಳಿಗಿಗಳು ಅದಾ ಹುರುಪಿಲೆ ವ್ಯಾಪಾರಕ್ಕ ನಿಂತ್ವು. ಹೊತ್ತು ಕಳಿತಿದ್ದಂಗ ಮತ್ತೆ ಹರೀತು ಅದಾ ಜನಾಂ ಜಾತ್ರಿ. ಮುಕ್ಯ ವೇದ್ಕಿಯೊಳಗ ಜನಪದ ಗೀತೆಗಳು ಬರೋರ್ನೆಲ್ಲ ಸ್ವಾಗತ ಮಾಡತಿದ್ವು. ಅಚೆಕಡೆ ಸಮಾನಾಂತರ ವೇದಿಕಿಯೊಳಗ ಜನಪದದೊಳಗ ‘ಬಾರೋ ನಮ್ಮಣ್ನ ….ವೀರ ಸಂಗೊಳ್ಳಿ ರಾಯಣ್ಣಾ….’ ಅಂತ ಮುಗಿಲಿಗ್ಯ ಕೈ ಮಾಡಿ ಉತ್ತರ ಕರ್ನಾಟಕದ ಜನಪದ ಕಲಾ ತಂಡ ಕರದ್ರ, ಸಂಗೊಳ್ಳಿ ರಾಯಣ್ಣ ಇಳಿದು ಬರ್ತಾನೇನೋ ಅನ್ನಿಸ್ತು ನನಿಗ್ಯ.
ಆ ಹಾಡು ಮುಗಿತಿದ್ದಂಗನ, ಅಬ್ಬಾಸ್ ಮೇಲಿನ ಮನಿಯವರ ಆಶಯ ಭಾಷಣದ ಜೊತಿಗ್ಯ, ಶಿವಪ್ಪ ಕುರಿಯವರ ಸ್ವಾಗತ ಭಾಷಣದ ಹಿಂದನಾ, ಕವಿಗೋಷ್ಠಿ ಚಾಲೂ ಆತು ನೋಡ್ರಿ. ಡಾ.ಲತಾ ರಾಜಶೇಖರ ಗೌಡ, ಡಾ. ಸತ್ಯಾನಂದ, ಮಾರುತಿ, ಹನುಮಂತರಾಜ, ತಿಪ್ಪೇರುದ್ರಪ್ಪ, ಕೃಷ್ಣ, ಲೋಕೇಶ, ಟಿ.ಎ.ಎನ್.ಕಂಡಗಿ, ಸ್ನೇಹಾ ಬಸಮ್ಮ, ಶಾರದಾ ಅರಸು,ಕಮಲಾ ನರಣಿ, ಡಾ.ಗುರುದೇವಿ,ಶ್ರೀಮತಿ ರಾಧಾ ಪ್ರಕಾಶ್,ತಮಿಳ್ ಸೆಲ್ವಿ, ಅಶೋಕ ಹಳ್ಳಿ,ಗಣೇಶ್ ಮೂರ್ತಿ,ಎಂ.ಡಿ.ಒಕ್ಕುಂದ,ಸುರೇಶ್ ಬಡಿಗೇರ್,ಬ್ಯಾಡ್ರಳ್ಳಿ ಶಿವರಾಮ, ಯಪ್ಪಾ ಎಷ್ಟು ಜನಾ ಕವಿಗಳು ಅದಾರೋ, ಉತ್ತರ ಕರ್ನಾಟಕದಾಗ ! ಇಷ್ಟೂ ಜನ ಸಾಹಿತ್ಯ ತಾರೆಯರು ಒಂದಾ ವೇದ್ಕಿ ಮ್ಯಾಲ ಬಂದು ಕುಂತ್ರ, ನೋಡಾಕ, ಎಲ್ಡು ಕಣ್ಣು ಎದಕ್ಕಾಕ್ಕವ್ರಿ ? ಆ ತಾರೆಗಳು ಹೇಳೋ ನೀತಿ ಮಾತುಗಳನ್ನ, ಅವ್ರು ಬರದ ಕವನಗಳನ್ನ ಕಿವಿಯಾರ ಕೇಳಿ, ಇಕಡೆ, ಮುಖ್ಯ ವೇದ್ಕಿ ಹತ್ರ ಬಂದ್ರ ಇಲ್ಲೂ ಅದಾ ಕವಿಗಳ ದೊಡ್ಡ ದಂಡಾ ಕುಂತೈತಿ. ಸ್ವರ್ಗಾನ ನೆಲಕ್ಕ ಅಪ್ಪರಿಸಿಕಂಡೈತಿ ಅನ್ನಿಸಿಬಿಡ್ತು ನನಿಗ್ಯ.
ಶಂಕರ ವೆಂಕಟಪ್ಪ, ಮಂಜುನಾಥ ಪಾಳ್ಯ, ಅಂಬಾತೆರಿಯ ಮುದ್ರಾಣಿಯವರ ಕೈಕೆಯ ಸ್ವಗತಕ್ಕ ನಾನು ನಿಂತಲ್ಲೆ ನಿಂತುಬಿಟ್ಟೆ. ಮಾಯಾದೇವಿ ಪಾಟೀಲರ ವಾಚನದ ಹಳದಿ ಹಾಲು, ಶ್ರೀ ಕೃಷ್ನ ಸ್ವರ್ಣಸಂದ್ರಹ, ಕವಿಯೊಳಗಿನ ಕವಿತೆ, ಕೇಳಾಕ ಒಂದು ಚಂದನಾ ನೋಡ್ರಿ. ಆಮ್ಯಾಲ ಬಿ.ಟಿ.ಅಂಬಿಕಾರವರು ವಾಚಿಸಿದ, ಅಮ್ಮನ ಅಳಲು,ವೆಂಕಟೇಶ್ ವಿನಾಂದರ್ ವಾಚನದ, ಕರ್ನಾಟಕದ ನಾಮಕರಣ, ಮಾಣಿಕ್ ದೇಶಪಾಂಡೆರ ಸಾಕ್ಷಿ, ಕೋಲನಹಳ್ಳಿ ಪೀತಾಂಬರ್ ಹೇಳಿದ ಏಕೆಂದರೆ ನಾವು ಕನ್ನಡಿಗರು ಯಪ್ಪಾ ಒಂದಾ ಎರಡಾ ಎಷ್ಟು ಕವನ, ಪದ್ಯ, ಕೇಳಿದಂಗೆಲ್ಲಾ ಹೇಳಾದ,ಹೇಳಾದು, ಇಷ್ಟು ಕವನಗಳನ್ನ ಓದಿದ್ರೂ ಕುರ್ಚಿ ಬಿಟ್ಟು ಒಬ್ರು ಕದಲಲಿಲ್ಲಂದ್ರ, ಸಾಹಿತ್ಯದ ಬಗ್ಗೆ ಇಲ್ಲಿ ಜನ ಪ್ರೀತಿ ಎಷ್ಟು ಇರಬೋದು, ಅಂದಾಜು ಮಾಡಕ್ಕ ಹೆಂಗ ಸಾದ್ಯ ಹೇಳ್ರಿ ?
ಇವೆಲ್ಲ ಮುಗಿಸಿಗಂಡು ಊಟ ಬಡಕಂಡು, ಮತ್ಯ ವಳ್ಳಿ, ವೇದ್ಕಿ ಹತ್ರ ಬಂದ್ರ, ಜನಪದ ಲೋಕ ಮತ್ಯ ಕೆಳಗಿಳಿದಿತ್ತು. ನಾನಂಗ ಚೂರು ಅಡಿಗಿ ಮಾಡಾರತ್ರ ಹೋಗಿ ನೋಡಿದ್ನ. ಅವರ ಕೊನಿ ಸಿದ್ದತಿ ನೋಡಿ ಅವರ ಬಾಯಿಂದ ನಾಕು ಮಾತು ಕೇಳಾಕು ಅಂತ ಓಗಿ ಮಾತಾಡಿಸಿದ್ರ, ಅವರ ಹೇಳಿದ್ನ ಬರಿಯಾಕ ಮತ್ತೊಂದು ಧಂ ಬೇಕು ಬಿಡ್ರಿ. ಅವ್ರನ್ನೆಲ್ಲಾ ಮಾತಾಡಿಸ್ಕಂಡು ವಳ್ಳಿ ಬರಾಕತ್ತಿದ್ನ್ಯ, ಟೇಜಿನಾಗ, ಎಂ.ಎಂ.ಕಲಬುರ್ಗಿಯವರ ಭಾಷಣ ಒಳ್ಳೇ ಜೋರು ನಡಿದಿತ್ತು. ಮಾತಾಡ್ತ, ಮಾತಾಡ್ತ, ‘ಖರೇ ಏಳಾಕಂದ್ರ ರಾಜ್ಯದಾಗ 200 ಕನ್ನಡ ಸಾಲಿಗಳು ಮುಚ್ಚ್ಯಾವು, ಆದ್ರ ಸಂಸ್ಕೃತ ಸಾಲಿಗಳಾಗ ಕೋಟಾ ಹಾಜರೀ ಆಕ್ತಾರ, ಸರಿಗ್ಯ 20 ಉಡ್ರು ಇರಾಲ ಸಾಲ್ಯಾಗ’ ಅನ್ನಾ ಇಚಾರ ಕೇಳಿ ನನ್ನ ಮನಸಿಗ್ಯ ಯಾಕಾ ನೋವಾತು. ಶಾಸ್ತ್ರೀಯ ಭಾಷಿಯ ಕಾರ್ಯಕ್ಕಾಗಿ ಮೈಸೂರು ಭಾರತೀಯ ಸಂಸ್ಥಾನದ ಹೊರಗ ತಂದು ಅದ್ರ ಬಗ್ಗೆ ನಾವು ಹೆಚ್ಚು ಗಮನ ಕೊಡ್ಬೇಕಾಗೈತಿ ಅಂತ, ಕನ್ನಡಕ್ಕ ಶಾಸ್ತ್ರಿಯ ಸ್ಥಾನ ಮಾನ ಸಿಕ್ಕದ್ದನ್ನ ಎಂಗ ಬಳಿಸ್ಕಬೇಕು ಅನ್ನದನ್ನೂ ತಿಳಿಸಿದ್ರು.
ಆಮ್ಯಲ ಬಂದ್ರು ನೋಡ್ರಿ,ಕನ್ನಡ ಪ್ರಾಧಿಕಾರದ ಅಧ್ಯಕ್ಸರು ನಮ್ಮ ಮುಖ್ಯಮಂತ್ರಿ ಚಂದ್ರುರವರು, ಪುಂಡಲೀಕ ಹಾಲಂಬಿಯವರು ಪೂಜ್ಯ ಗುರುಗಳೂ,ಎಲ್ಲರೂ ಸೇರಿ ಸಮಾರೋಪ ಸಮಾರಂಭಕ್ಕ ಕಳಿ ತಂದ್ರು. ಚೀನಾ ದೇಶ ನಮ್ಮ ದೇಶದ ಮ್ಯಾಗ ಯುದ್ದಕ್ಕ ಬಂದಾಗ, ನಮ್ಮ ಕರ್ನಾಟಕದಾಗ ಮುಖ್ಯಮಂತ್ರಿಗಳಾಗಿದ್ದ ಎಸ್.ನಿಜಲಿಂಗಪ್ಪನೋರು ಅವತ್ತಿನ ಪ್ರದಾನಿ ಇಂದ್ರಮ್ಮನ ತೂಕದಷ್ಟು ಬಂಗಾರ ಕೊಟ್ಟಿದ್ರಂತ ಅಂಥಾದ್ರಾಗ ನಮ್ಮ ಉತ್ರಕರ್ನಾಟಕ ಬರದ ನಾಡು ಅಂತ ಕರಿಯಾಕ ನಮಿಗ್ಯ ಮನಸರಾ ಹೆಂಗ ಬರತೈತಿ ನೀವಾ ಹೇಳ್ರಿ ?
ಅಂದಂಗ ಈ ಸಮ್ಮೇಳನ ನಡಿಯಾಕ ಜಾಗ ಕೊಟ್ಟಿದ್ದ ಸೈನಿಕ ಸಾಲಿ ಆ ಮೂಲಕ ಇತಿಹಾಸದೊಳಗ ತನ್ನದೊಂದು ಹೆಸರು ಪಡೀತು ನೋಡ್ರಿ. ಪುಣೆದಾಗ 7000 ಎಕ್ರಿಯೊಳಗ, ಇನ್ನೊಂದು ಸೈನಿಕ ಸಾಲಿ ಐತಂತ್ರಿ, ಅಲ್ಲಿಗ್ಯ ನಮ್ಮ ವಿಜಾಪುರದ ಹುಡ್ರು ಜಾಸ್ತಿ ಕರ್ನಾಟಕದಿಂದ ಛಾಯ್ಸ್ ಅಕ್ಕಾರಂದ್ರ, ಇಲ್ಲಿ ಉಡ್ರು ಭಾರೀ ಬುದ್ದಿವಂತರು ಬಿಡ್ರಿ.
ಅಂದಾಂಗ ಸಮಾರೋಪ ಸಮಾರಂಭದಾಗ ಮಾತಾಡಿದ ಪುಂಡಲೀಕ ಹಾಲಂಬಿಯವರು, ಮುಂದಿನ ಸಮ್ಮೇಳನಾನ, ಕೊಡಗಿನಾಗ ನಡಿಸಾನ್ರಿ, ಅದಕ್ಕ ನಿಮ್ಮೆಲ್ಲರ ಬೆಂಬಲ ಹಿಂಗ ಇರ್ಲೀ ಅಂತ ಕೈ ಮುಗುದಿದ್ಕ ನನಿಗನ್ನಿಸಿದ್ದಂದ್ರ,ಬಿಜಾಪುರದ ರೊಟ್ಟಿ ತಿಂದು ಉಳದ ಬಳದದ್ದ ಕಟ್ಟಿಕೊಂಡು ಸಮ್ಮೇಳನ ವಂಟೈತೋ ಕೊಡಗೀಗ್ಯ …. ಅಂತೂ ವಿಜಾಪುರದ ಸಾಹಿತ್ಯದ ಜಾತ್ರಿಗ್ಯ ಒಂದು ಅಲ್ಪ ವಿರಾಮ ಸಿಕ್ಕೈತಿ, ಇಲ್ಲಿಗ್ಯ ಬಂದಿದ್ದ ಎಲ್ಲರನ್ನೂ ಕಳಿಸಿ ನಾಳೆ ಮತ್ತೇನಾದ್ರೂ ವಿಸ್ಯಾ ಇದ್ರ ಮತ್ಯ ನಿಮ್ಮ ಜತಿಗ್ಯ ಅಂಚಿಗಂತೀನ್ರಿ……


ಚಿತ್ರಗಳು : ಶಿವು ಮೊರಿಗೇರಿ, ಆನಂದ ಹಳ್ಳಿ ಮತ್ತು ರವಿ ಕುಮಾರ್ ಈಚಲಮರ
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ
 

‍ಲೇಖಕರು G

12 February, 2013

3 Comments

  1. ಮಂಜುನಾಥ ದಾಸನಪುರ

    ಉತ್ತರ ಕರ್ನಾಟಕದಲ್ಲಿ ಭಾಷೆಯನ್ನು ನಮಗೆ ಉಣ ಬಡಿಸಿದ್ದೀರಾ, ನುಂಗಲಿಕ್ಕೆ ಸ್ವಲ್ಪ ಕಷ್ಟವಾದರೂ……ರುಚಿ ಅಚ್ಚು ಕಟ್ಟಾಗಿತ್ತು.

  2. Jayalaxmi Patil

    ಛಂದ್ ಬರ್ದೀರಿ.ಇದು ರಾಯಚೂರು ಭಾಷಾ ಅಂತ ಕಾಣ್ತೈತಿ ಅಲ್ಲೇನ್ರಿ ಶಿವು ಮೊರಿಗೇರಿ ಅವ್ರ? ಯಾಕಂದ್ರ ವಿಜಾಪುರ ಮಂದಿ ನಾಲ್ಗಿಗೀ ‘ಹ’ಕಾರ ತ್ರಾಸ್ ಕೊಡಂಗಿಲ್ರೀ.
    ನನಗೂ ಊರಿಂದ ಸುದ್ದಿ ಬಂತು, ಊರು ಕಡೀತನ್ಕಾ ನೆನಪಿಟ್ಕೊಳ್ಳೂವಂಥಾ ಕಾರ್ಯಕ್ರಮಾ ಆತು ಅಂತ. ಕೇಳಿ ಭಾರಿ ಖುಷಿ ಆತ್ ನನಗ.

  3. Prasad V Murthy

    ಚಲೋ ಬರ್ದೀರಿ ನೋಡ್ರೀ ಶಿವು. ಕಣ್ಣಾಗ ನೋಡಕ್ಕಾಗದ ಕನ್ನಡ ಸಾಹಿತ್ಯಿಕ ಹಬ್ಬನಾ ಕಣ್ಣಿನೊಳಗಾ ಕಟ್ಟಿ ಕೊಟ್ಟೀರಿ. ನಿಮ್ಮ ಉತ್ತರ ಕರ್ನಾಟಕದ ಭಾಷೀ ಸೊಗಡು ಚಲೋ ರುಚಿ ಕೊಡ್ತು ನೋಡ್ರಿ. ನನಗೆ ಜಯಲಕ್ಷ್ಮಿ ಮೇಡಂ ಹಂಗಾ ಇದು ಇಂತದೇ ಪ್ರದೇಶದ ಭಾಷೆ ಅಂಥ ಡಿಫರೆನ್ಶಿಯೇಟ್ ಮಾಡಕ್ ಬರಂಗಿಲ್ಲ ಆದ್ರೆ ನಿಮ್ಮ ಭಾಷೆ ಮಜಾ ಕೊಡ್ತು 🙂
    – ಪ್ರಸಾದ್.ಡಿ.ವಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading