ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾಲದ ಪುರಾಣ…

ಜೆ ವಿ ಕಾರ್ಲೊ

ಜೆ ವಿ ಕಾರ್ಲೊ ಅವರು ಪ್ರಸ್ತುತ ಹಾಸನದಲ್ಲಿ ನೆಲೆಸಿದ್ದಾರೆ. ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಹಳ್ಳಿ ಸೇರಿದ್ದ ಅವರನ್ನು ಕಲಾವಿದ ಗೆಳೆಯರಾದ ಕೆ ಟಿ ಶಿವಪ್ರಸಾದರು ತಾವು ವಿನ್ಯಾಸ ಮಾಡಲು ಶುರು ಮಾಡಿದ ಮನೆಗಳನ್ನು ಕಟ್ಟುವ ಕೆಲಸಕ್ಕೆ ಹಚ್ಚಿದರು. ಅದನ್ನೇ ಈಗಲೂ ಮುಂದುವರಿಸಿಕೊಂಡು ಬಂದಿದ್ದಾರೆ. 

ಅನುವಾದ ಇವರ ನೆಚ್ಚಿನ ಹವ್ಯಾಸ. ಇಂಗ್ಲೀಷ್‌, ಕನ್ನಡ, ಕೊಂಕಣಿ ಮೂರು ಭಾಷೆಗಳಲ್ಲಿ ಬರೆಯಬಲ್ಲರು, ಅನುವಾದಿಸಬಲ್ಲರು. ದಾಹ್ಲ್‌, ಮೊಪಾಸ, ಕ್ಯಾಥರಿನ ಆನಪೋರ್ಟರ್‌, ಜಾಕ್‌ ಲಂಡನ್‌ ಮೊದಲಾದವರ ಕೃತಿಗಳ ಅನುವಾದ ಮಾಡಿದ್ದಾರೆ.

ಸುಮಾರು 30 ಸಣ್ಣ ಕತೆಗಳು ಮಯೂರ ಮೊದಲಾದ ಪತ್ರಿಕೆಗಳಲ್ಲಿ, ಅಂತರ್ಜಾಲ ತಾಣಗಳಲ್ಲಿ ಪ್ರಕಟಗೊಂಡಿವೆ. ಕನ್ನಡ ಮಾತ್ರವಲ್ಲದೇ ಕೊಂಕಣಿ ಭಾಷೆಯಲ್ಲಿ ಅವರ 80ಕ್ಕೂ ಹೆಚ್ಚು ಸಣ್ಣ ಕತೆಗಳ ಅನುವಾದಗಳು ಹಾಗೂ ಮೂರು ಕಾದಂಬರಿಗಳು ಧಾರಾವಾಹಿಯಾಗಿ ಪ್ರಕಟವಾಗಿವೆ. 

ಅವಧಿಯ ಅನುವಾದ ಸಂಚಿಕೆಗಾಗಿ ತಾವು ಕೊಂಕಣಿಯಲ್ಲಿ ಬರೆದಿದ್ದ ಲಲಿತ ಪ್ರಬಂಧ ಬಾಲದ ಪುರಾಣವನ್ನು ಅನುವಾದಿಸಿದ್ದಾರೆ. ಈ ಪ್ರಬಂಧವು ಕೊಂಕಣಿಯ ‘ಆರ್ಸೊ’ ಪತ್ರಿಕೆಯಲ್ಲಿ 2015ರಲ್ಲಿ ಪ್ರಕಟವಾಗಿತ್ತು.

ಮಧ್ಯಾಹ್ನ ಊಟಕ್ಕೆಂದು ಮನೆ ಕಡೆಗೆ ಹೊರಟು ನಮ್ಮ ರಸ್ತೆಯ ಕಡೆಗೆ ಹೊರಳಿದಾಗ ಟ್ರಾಫಿಕ್ ಜಾಮ್ ಆಗಿತ್ತು. ನಮ್ಮ ಮನೆಯ ರಸ್ತೆಯಲ್ಲೇ ಹೆಚ್ಚಾಗಿ ಶಾಲೆ ಕಾಲೇಜುಗಳಿದ್ದು ಸಾಮಾನ್ಯವಾಗಿ ಬೆಳಗ್ಗೆ ಮತ್ತು ಸಂಜೆ ವಿದ್ಯಾರ್ಥಿಗಳಿಂದ ತುಂಬಿರುತ್ತದೆ. ಅಲ್ಲದೆ, ABVP ಅಥವಾ DYFI ಸಂಘಟನೆಗಳ ಯಾವುದಾದರೊಂದು ಬೇಡಿಕೆ ಇದ್ದು, ವಿದ್ಯಾರ್ಥಿಗಳನ್ನು ತಿಂಗಳಿಗೊಮ್ಮೆಯಾದರೂ ರಸ್ತೆಗಿಳಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವುದು ಮಾಮೂಲಿ. ಆದರೆ, ಇವರ ಪ್ರತಿಭಟನಾ ಮೆರವಣಿಗೆಗಳು ಹೆಚ್ಚಾಗಿ ಶಾಲೆ, ಕಾಲೇಜು ಪ್ರಾರಂಭವಾಗುವ ಒಂದು ಗಂಟೆಯೊಳಗೆ ಶುರುವಾಗುತ್ತವೆ. ಮಧ್ಯಾಹ್ನ ಊಟದ ಹೊತ್ತಿನಲ್ಲಂತೂ ಅಲ್ಲವೇ ಅಲ್ಲ!

ಮೆರವಣಿಗೆ ನನ್ನ ಸನಿಹಕ್ಕೆ ಬರುವವರೆಗೆ ಬೈಕ್ ಆಫ್ ಮಾಡಿ ನಿಂತಿದ್ದೆ. ಮೆರವಣಿಗೆ ವಿದ್ಯಾರ್ಥಿಗಳದ್ದೇ. ಆದರೂ, ಯಾವುದೇ ಸ್ಲೋಗನ್‌ಗಳಿಲ್ಲ. ಸೈಲೆಂಟ್ ಮೆರವಣಿಗೆ. ಸುಮಾರು ನೂರು ನೂರೈವತ್ತು ಯುವಕ-ಯುವತಿಯರಿದ್ದರು. ಎಲ್ಲರೂ ಹಸಿರು ಟೀ-ಶರ್ಟ್ ಧರಿಸಿದ್ದರು. ಎಲ್ಲರ ಕೈಯಲ್ಲೂ ಒಂದು placard ಇತ್ತು.Ban GM Foods, Shame Monsanto ಎಂಬ ಘೋಷಣೆ ಎದ್ದು ಕಾಣುತ್ತಿತ್ತು. ಸಾಮಾನ್ಯವಾಗಿ ತಮ್ಮದೇ ಜಗತ್ತಿನಲ್ಲಿರುತ್ತಿದ್ದ ಮಲ್ನಾಡ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಬೀದಿಗಿಳಿದಿದ್ದರು. ಈ ಮೆರವಣಿಗೆಯ ಕೊನೆಯಲ್ಲಿದ್ದ ಹುಡುಗರು ನನಗೆ ತುಸು ವಿಶೇಷವಾಗಿ ಕಂಡರು. ಅವರೆಲ್ಲರೂ ಹಿಂಭಾಗಕ್ಕೆ ಒಂದೊಂದು ಬಾಲ ಸಿಗಿಸಿಕೊಂಡಿದ್ದರು! ಈ ಬಾಲದ ಔಚಿತ್ಯವಾಗಲೀ, ಅದರ ಗೂಢಾರ್ಥವಾಗಲೀ ನನಗೆ ಗೊತ್ತಾಗಲಿಲ್ಲ. ಆದರೂ, ನನ್ನ ಸುಪ್ತಾವಸ್ಥೆಯಲ್ಲೊಂದು ಪುಟ್ಟ ಬಲ್ಬು ಉರಿಯತೊಡಗಿತು.

ಕೋತಿ ಮನುಷ್ಯನ ಮುತ್ತಾತನೇ?!

ಊಟ ಮಾಡಿ ಅಡ್ಡಾದ ನನಗೆ ನೆನಪುಗಳು ಹೈಸ್ಕೂಲ್ ದಿನಗಳ, ಅದರಲ್ಲೂ ಜೀವಶಾಸ್ತ್ರದ ತರಗತಿಗಳಿಗೆ ಕೊಂಡೊಯ್ದಿತು. ಒಂದು ದಿನ ನಮ್ಮ ಮೇಷ್ಟ್ರುಎಲ್ಲರಿಗೂ ಅವರವರ ಬೆನ್ನು ಮೂಳೆ ತಡವಿಕೊಂಡು ಕೊನೆಯಲ್ಲಿ ಏನು ಸಿಗುತ್ತದೆ ನೋಡಿ ಹೇಳಿ ಎಂದು ಆಹ್ವಾನವನ್ನೋ ಸವಾಲೋ ಇತ್ತರು. ನಾವು ಹಾಗೆಯೇ ಮಾಡಿದೆವು. (ಆಗ ಹಾಸನದ ಸೈಂಟ್ ಜೋಸೆಪ್ ಶಾಲೆ ಕೇವಲ ‘ಬಾಲ’ಕರ ಆಡುಂಬೊಲವಾಗಿತ್ತು.) ಇದರ ಮೊದಲು ನಾವ್ಯಾವತ್ತೂ ನಮ್ಮ ಬೆನ್ನು ಮೂಳೆಯ ಅಂಚನ್ನು (end) ಪರೀಕ್ಷಿಸುವ ಗೋಜಿಗೇ ಹೋಗಿರಲಿಲ್ಲ. ನಮ್ಮ ಬೆನ್ನು ಮೂಳೆಯ ಅಂಚಿನಲ್ಲಿ ಒಂದು ಚೋಟುದ್ದ ಸಣ್ಣ ತುಂಡು ಅಲ್ಲಿಗೇ ಯಾರೋ ಕತ್ತರಿಸಿದಂತೆ ಮೊಂಡಾಗಿ ನಿಷ್ಪ್ರಯೋಜಕವಾಗಿ ಉಳಿದುಕೊಂಡಿತ್ತು! ನಾವು ಯಾವುದೋ ಮಹಾನ್ ವಿಚಿತ್ರವನ್ನು ಕಂಡಿಡಿದವರಂತೆ ಮೇಷ್ಟ್ರಿಗೆ ಹೇಳಿದೆವು. ಈ ಚೋಟುದ್ದ ಬೆನ್ನು ಮೂಳೆ ತುಂಡಿಗೆ coccyx  ಅಥವಾ tailbone ಅಂತಾರಂತ ಮೇಷ್ಟ್ರುವಿವರಣೆ ಕೊಟ್ಟರು.

ವಿಕಾಸದ ಹಂತದಲ್ಲಿ ಕೋತಿ ಮರದಿಂದ ಇಳಿದು ಮಾನವನಾದಾಗ ಅವನಿಗೆ ಬಾಲದ ಅಗತ್ಯ ಅಷ್ಟೇನೂ ಕಂಡು ಬರಲಿಲ್ಲ. ವಿಕಾಸದ ಹಾದಿಯಲ್ಲಿ ಯಾವುದೇ ಅಂಗ ಹೆಚ್ಚು ಕಾಲ ಬಳಸದಿದ್ದಲ್ಲಿ ಅದು ಉದುರಿಹೋಗುವುದು ನಿಶ್ಚಿತ. ಹೀಗೇ ನಮ್ಮ ವಿಕಾಸದ ಹಾದಿಯಲ್ಲಿ ಬಾಲ ನಿಷ್ಪ್ರಯೋಜಕವಾದ್ದರಿಂದ ಉದುರಿ ಹೋಗಿ ಆ ಜಾಗದಲ್ಲಿ ಬಾಲದ ಒಣ ಬೇರು ಮಾತ್ರ ಉಳಿದಿರುವುದೆಂದು ನಮ್ಮ ಮೇಷ್ಟ್ರ ವಾದ. ಬಾಲದಂತ, ನಮಗೆ ಈಗ ಉಪಯೋಗವಿಲ್ಲದ ಮತ್ತೂ ಕೆಲವು ಅಂಗಗಳನ್ನು ಮೇಷ್ಟ್ರುಉದಾಹರಿಸಿದರು. ಈ ಬಾಲದಂತೆಯೇ ‘ಅಪೆಂಡಿಕ್ಸ್’ ಅನ್ನುವ ಅಂಗ ಕೂಡ ನಮಗೆ ಪ್ರಯೋಜನವಿಲ್ಲದ್ದು. ಇದೇನಾದರೆ ತೊಂದರೆ ಕೊಟ್ಟರೆ ಶಸ್ತ್ರಚಿಕಿತ್ಸೆಯೇ ಗತಿ. ಅದನ್ನು ಕುಯ್ದು ಹಾಕುವುದರಲ್ಲಿ ಏನೂ ತೊಂದರೆಯಿಲ್ಲ. ಹಾಗೆಯೇ ಬಹಳಷ್ಟು ಜನರು ತಮ್ಮ ಟಾನ್ಸಿಲ್ಸ್ ಗಳನ್ನೂ ಸಮರ್ಪಯಾಮೀ ಮಾಡಿದ್ದಾರೆ. ಆದರೆ, ಇದು ಒಳ್ಳೆಯದಲ್ಲವೆಂದೂ ಕೇಳಿದ್ದೇನೆ.

ಮನುಷ್ಯ ಮಂಗನಿಂದಾದನೋ ಇಲ್ಲ ಮಂಗನೇ ಮನುಷ್ಯನಿಂದಾಯಿತೋ ಎನ್ನುವ ವಿಚಾರದಲ್ಲಿ ನನಗೆ ಇನ್ನೂ ಗೊಂದಲವಿದೆ. ಕೆಲವೊಮ್ಮೆ ಎರಡೂ possibilities ಇರುವಂತೆ ಕಾಣುತ್ತದೆ! ಮನುಷ್ಯ ಮತ್ತು ಮಂಗನಿಗೆ ಮಾತ್ರ ಖಂಡಿತವಾಗಿಯೂ ಯಾವುದೋ ಜನ್ಮದ ಸಂಬಂಧ ಇದೆ ಎನ್ನುವುದು ಮಾತ್ರ ಸತ್ಯ. ಬೇಕಾದರೆ ನೀವೇ ಒಮ್ಮೆ ಪರೀಕ್ಷಿಸಿ. ಯಾವುದೇ ಮೃಗಾಲಯಕ್ಕೆ ಹೋಗಿ ನೋಡಿ. ಅಬಾಲವೃದ್ಧರಿಂದಿಡಿದು ಹೆಚ್ಚೆಚ್ಚು ಜನರನ್ನು ಆಕರ್ಷಿಸುವ ಪ್ರಾಣಿ ಯಾವುದೆಂದು ಗಮನಿಸಿದ್ದಿರಾ? ಹುಲಿ? ಸಿಂಹ? ಆನೆ? ಹುಂ… ಹುಂ…ಇದ್ಯಾವುದೂ ಅಲ್ಲ, ಅದು ಮಂಗ!! ಮಕ್ಕಳು, ಮುದುಕರು, ಯುವಕರೆಲ್ಲರೂ ಈ ಕೋತಿ ಚೇಷ್ಟೆಗಳನ್ನು ನೋಡುತ್ತಾ (ತಮ್ಮ ಗತ ಜನ್ಮಕ್ಕೆ ಹಿಂದಿರುಗಿ) de-stressಆಗಿ ಆನಂದಿಸುವುದು ನೋಡಿದರೆ, ಮಂಗಗಳದ್ದೇ ವಿಶೇಷ ಮೃಗಾಲಯ ಇರಬೇಕು ಅನಿಸುತ್ತದೆ. ಹಾಸನದ ಮಹಾರಾಜರು ಪಾರ್ಕಿನಲ್ಲಿ ಹಿಂದೆ ಕೋತಿಗಳನ್ನು ಸಾಕಿದ್ದರು. ಪಾರ್ಕಿನಲ್ಲಿ ಅಡ್ಡಾಡುವವರು ಅವುಗಳಿಗೆ ಕಡ್ಲೆಕಾಯಿ ತಿನ್ನಿಸುತ್ತಾ ಆನಂದಪಡುತ್ತಿದ್ದರೆ ಕೋತಿಗಳು ಇವರನ್ನು ವಿವಿಧ ಚೇಷ್ಟೆಗಳಿಂದ ರಂಜಿಸುತ್ತಿದ್ದವು.

ಕೋತಿವೀಕ್ಷಣೆ ಮಾಡಲು ಜೂ-ಗಳಿಗೇ ಹೋಗಬೇಕಿಲ್ಲ. ಗದ್ದೆಗಳಲ್ಲಿ ಭತ್ತದ ಪೈರು ತೆನೆಗಟ್ಟುವಾಗ ನಮಗೆ ಮಕ್ಕಳಿಗೆ ಕೋತಿಗಳನ್ನು ಅಟ್ಟಲು ಗದ್ದೆಗಳಿಗೆ ಕಳಿಸುತ್ತಿದ್ದರು. ಇದು ನಮ್ಮ ಬಾಲ್ಯದ ಸುವರ್ಣಕಾಲವೆಂದರೂ ಅಡ್ಡಿ ಇಲ್ಲ! ಇಷ್ಟು ಹತ್ತಿರದಿಂದ ಕೋತಿಗಳನ್ನು ನೋಡಿ ನಾವು ಪಟ್ಟಷ್ಟು ಸಂತೋಷ ಬಹುಶಃ ಪಕ್ಷಿವೀಕ್ಷಕ ಸಲೀಂ ಅಲಿಯವರೂ ಪಟ್ಟಿರಲಾರರು!

ಮಾನವ ಮತ್ತು ಬಾಲ

ಮಾನವರಿಗೂ ಮತ್ತು ಮಂಗಗಳಿಗೂ ಅಥವಾ ಬಾಲಕ್ಕೆ ಯಾವುದೋ ಹಿಂದಿನ ಜನ್ಮದ ನಂಟಿದೆ ಎಂದು ನಮಗೆಲ್ಲ ದೊಡ್ಡವರಾದ ಮೇಲೆ ಸ್ಕೂಲಿನಲ್ಲಿ ಡಾರ್ವಿನ್ ಸಾಹೇಬರ ವಿಕಾಸವಾದ ಕೇಳುವ ಮೊದಲೇ ಗೊತ್ತಿತ್ತು. ನಮ್ಮ ಶಾಲೆಯ ಹೆಡ್‌ಮಾಸ್ಟರ್ ಜೆಜ್ವಿಟ್ ಫಾದರ್ ನಮ್ಮನ್ನೆಲ್ಲ ಹೆಸರಿಡಿದು ಕರೆಯುತ್ತಲೇ ಇರಲಿಲ್ಲ. ಅವರ ಅಪ್ಪಟ ಮಂಗಳೂರು ಭಾಷಾ ಶೈಲಿಯಲ್ಲಿ, ತೋರು ಬೆರಳನ್ನು ಪಿಸ್ತೂಲಿನಂತೆ ಗುರಿ ಇಟ್ಟು “ಇಲ್ಲಿ ಬಾರೋ ಮಂಗಾ..!” ಅಂತಲೇ ಕರೆಯುತ್ತಿದ್ದರು. ನಮ್ಮ ಶಾಲೆಯಲ್ಲಿ ಉತ್ತರ ಕರ್ನಾಟಕದ ಮೇಷ್ಟ್ರುಗಳು ಯಾರೂ ಇರಲಿಲ್ಲ. ‘ಮಂಗ್ಯಾ..’ ಅಂದರೆ ‘ಮಂಗನೇ..’ ಅಂತ ಗೊತ್ತಾದದ್ದು ತಡವಾಗಿ! ನಾವೋ ಅಪ್ಪಟ ಘಟ್ಟದವರು, ಬಯಲು ಸೀಮೆಯವರು. ನಮ್ಮ ಗುರುಗಳೋ ಪಕ್ಕಾ blue blooded ಮಂಗಳೂರಿ! ಅವರು ನಮ್ಮನ್ನು ಕುರಿತಾಗಿ ಹಾಗೆ (racist) ಕರೆಯುತ್ತಿದ್ದರೋ, ಇಲ್ಲ, ನಮ್ಮ ಪೂರ್ವಿಕರ ಹೆಸರಿಡಿದು ಕರೆಯುತ್ತಿದ್ದರೋ ಎಂದು ಗೊತ್ತಾಗುವಷ್ಟು ನಮ್ಮ ಬುದ್ಧಿ ಬೆಳೆದಿರಲಿಲ್ಲ (ಇನ್ನೂ ಬೆಳೆದಿಲ್ಲ ಅನ್ನಬೇಡಿ!). 

ಗುರುಗಳದು ಒತ್ತಟ್ಟಿಗಿರಲಿ. ನಮ್ಮ ಹಿರಿಯರೂ ಕೂಡ, “ಆಹಾ! ಬೇಷಾಯ್ತು ಕಣ್ಲಾ! ನಿಂಗೆ ಬಾಲವೊಂದು ಕಡಿಮೆ ಇತ್ತಷ್ಟೇ..” ನಮ್ಮ ಬಾ(ಲ)ಲ್ಯ ಲೀಲೆಗಳನ್ನು ಗಮನಿಸಿ (ಬಾಲವಿಲ್ಲದ!) ಹಿರಿಯರು ತೀರ್ಪು ಕೊಡುತ್ತಿದ್ದರು.

ಆಗೆಲ್ಲ ನಮಗೆ ಖಂಡಿತವಾಗಿಯೂ ಒಂದು ಬಾಲವಿದೆ, ಅದೇ ನಮ್ಮನ್ನು ಈ ಪರಿ ಆಟ ಆಡಿಸುತ್ತಿದೆ ಎಂದು ನಮ್ಮ ಹಿರಿಯರು ಭಾವಿಸಿದ್ದರು.

ಅಂತೆಯೇ, ನಮ್ಮ ಮನೆಗಳಲ್ಲಿ, ಶಾಲೆಯಲ್ಲಿ, ಚರ್ಚಿನಲ್ಲಿ, “ನಿನ್ನ ಬಾಲ ಹೇಗೆ ಕತ್ತರಿಸುವುದು, ಮಡಚುವುದು, ಜಿಗುಟುವುದು ನನಗೆ ಗೊತ್ತು ಕಣೋ…” ಎಂದು ಹಿರಿಯ sadist ಗಳು ಅವಡುಗಚ್ಚಿ ಎಚ್ಚರಿಕೆ ಕೊಡುತ್ತಿದ್ದರು.

ನಿಮಗೆ ಗೊತ್ತೋ ಇಲ್ಲವೋ. ಕ್ರಿಶ್ಚಿಯನರ ಮನೆಯಲ್ಲಿ ಸಂಜೆ ಪ್ರಾರ್ಥನೆಗಳು (prayers) ಕಡ್ಡಾಯ. ಇವು ಶುರುವಾಗುತ್ತಲೇ ನನಗೆ, ಗಾಂಜಾನೋ, ಆಫೀಮೋ ಸೇವಿಸಿದಂತೆ ಎಲ್ಲಿಲ್ಲದ ನಿದ್ರೆ ಆವರಿಸಿಕೊಳ್ಳುತ್ತಿತ್ತು. ಆಗ ನನ್ನ ತಂದೆ ನಿನ್ನ ಕಿವಿಯೊಳಗೆ ಸೈತಾನ ತನ್ನ ಬಾಲವನ್ನು ತೂರಿಸಿ ಮೃದುವಾಗಿ ತೀವುತ್ತಾ ನಿನಗೆ ನಿದ್ರೆ ಬರಿಸುತ್ತಾನೆಂದೂ, ಎಚ್ಚರವಾಗಿರು ಎಂದು ತಲೆಯ ಮೇಲೆ ಮೊಟಕಿ ಗದರಿಸುತ್ತಿದ್ದರು!

ಬಾಲ, ಮಾನ ಮರ್ಯಾದೆಯ ಸಂಕೇತವೂ ಹೌದು. ಗೆದ್ದರೆ, “ನೋಡು, ಹೇಗೆ ಬಾಲ ನೆಟ್ಟಗೆ ಧ್ವಜದಂತೆ ಎತ್ತಿ ಗರ್ವದಿಂದ ಬೀಗುತ್ತಿದ್ದಾನೆ!” ಅಂತಾರೆ. ಅದೇ ಸೋತರೆ, “ನೋಡು ಹೇಗೆ ಅಂಡಿನ ಕೆಳಗೆ ಬಾಲ ಮುದುರಿಕೊಂಡು ಹೋಗುತ್ತಿದ್ದಾನೆ!” ಅಂತಲೂ ಹೇಳುತ್ತಾರೆ!

ಬಾಲ ನಿಷ್ಪ್ರಯೋಜಕ ಅಂಗವೇ?

ಮನುಷ್ಯ ವಿಕಾಸದ ಕೊನೆಯ ಹಂತ ತಲುಪಿದಾಗ ಪ್ರಯೋಜನವಿಲ್ಲದ ಬಾಲ ಉದುರಿ ಹೋಗಿ ಅದರ ಜಾಗದಲ್ಲಿ ಒಣ ಬೇರಷ್ಟೇ ಉಳಿದುಕೊಂಡಿದೆ ಎನ್ನುವ ವಾದ ನಿಮಗೆ ಸರಿಕಾಣುತ್ತಿದೆಯೇ? ನನಗೆ ಯಾಕೋ ಹಾಗನಿಸುತ್ತಿಲ್ಲ. ಮನುಷ್ಯನಿಗೆ ಬಾಲ ಇದ್ದಿದ್ದರೆ ಖಂಡಿತವಾಗಿಯೂ ಅದೊಂದು ವರದಾನವಾಗಿರುತ್ತಿತ್ತು ಅನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಬಾಲದ ಬಗ್ಗೆ ನೀವು ತುಸು ಸಮಯ ಯೋಚಿಸಿದರೆ ಅದರ ವಿವಿಧ ಉಪಯೋಗಗಳನ್ನು ಖಂಡಿತಾ ಕಂಡುಕೊಳ್ಳುತ್ತೀರಿ. 

ಈ ದಿನಗಳಲ್ಲಿ ಕರ್ನಾಟಕದಲ್ಲಿ ಲೋಡ್‌ಶೆಡ್ಡಿಂಗ್ ಜಾರಿಯಲ್ಲಿದೆ. ಮುಂದೆ ಪರಿಸ್ಥಿತಿ ಮತ್ತೂ ಬಿಗಾಡಯಿಸಬಹುದು. ಆಗ ನಮ್ಮ ಫ್ಯಾನು, ಎಸಿ, ಕೂಲರ್‌ಗಳು ಯಾವ ಕರ್ಮಕ್ಕೆ? Just imagineಮಾಡಿ. ನಮಗೊಂದು ಬಾಲ ಇದ್ದಿದ್ದರೆ, ಒಂದು ಸುಂದರವಾದ ಲೈಟ್ ವೇಯ್ಟ್ ಚೈನೀಸ್ ಬೀಸಣಿಗೆಯನ್ನು ಬಾಲಕ್ಕೆ ಕಟ್ಟಿ ಬೇರೆ ಯಾವುದೇ ಅತಿರಿಕ್ತ ಖರ್ಚು ವೆಚ್ಚಗಳಿಲ್ಲದೆ ಗಾಳಿ ಬೀಸಿಕೊಳ್ಳಬಹುದಿತ್ತೇ? ಎಲ್ಲ ಪ್ರಾಣಿಗಳು ನೊಣ, ಸೊಳ್ಳೆ ಇತ್ಯಾದಿಗಳಿಂದ ರಕ್ಷಣೆ ಪಡೆಯಲು ಹೆಚ್ಚಾಗಿ ತಮ್ಮ ಬಾಲವನ್ನೇ ಅಸ್ತ್ರವನ್ನಾಗಿ ಬಳಸುತ್ತವೆ… ಯೋಚಿಸುತ್ತಾ ಹೋದರೆ ಬಾಲದ ನಾನಾ ಉಪಯೋಗಗಳು ಹೊಳೆಯುತ್ತಲೇ ಇರುತ್ತವೆ. ಈ ಲೇಖನ ಇವತ್ತೇ ಬರೆದುಕೊಡಲು ಸಂಪಾದಕರು ಹೇಳಿರುವುದರಿಂದ ನಾನು ಹೆಚ್ಚು ಯೋಚಿಸಲು ಹೋಗಲಿಲ್ಲ. ಓದುಗರಿಗೆ ಮತ್ತಷ್ಟು ವಿಚಾರಗಳು ಹೊಳೆದರೆ ಸಂಪಾದಕರಿಗೆ ಬರೆದು ಕಳಿಸಬಹುದೇನೋ?

ನಮಗೆ ಬಾಲ ಇದ್ದಿದ್ದೇ ಆದರೆ, ಅದು ಹೇಗಿರುತ್ತಿತ್ತು? ಖಂಡಿತವಾಗಿಯೂ ಅದು ಗಂಡಸರಿಗೂ, ಹೆಣ್ಣು ಮಕ್ಕಳಿಗೂ ಬೇರೆ ಬೇರೆಯೇ ಇರುತ್ತಿತ್ತು ಮತ್ತು ಬೇರೆ ಬೇರೆ ರೀತಿಯಲ್ಲಿ grooming ಮಾಡಬೇಕಾಗಿರುತ್ತಿತ್ತು. ಹೆಣ್ಣುಮಕ್ಕಳಿಗೆ ಈಗಿನಂತೆಯೇ ಮತ್ತಷ್ಟು ಖರ್ಚಾಗುತ್ತಿದ್ದುದರಲ್ಲಿ ಅನುಮಾನವೇ ಇಲ್ಲ. ಕಾಸ್ಮೆಟಿಕ್ ಇಂಡಸ್ಟ್ರಿ ಮತ್ತಷ್ಟು ಬೆಳೆಯುತ್ತಿದ್ದುದರಲ್ಲಿ ಸಂಶಯವೇ ಇರುತ್ತಿರಲಿಲ್ಲ.

ಮನುಷ್ಯನಿಗೆ ವಯಸ್ಸಾಗುತ್ತಿದ್ದಂತೆ ಅವನ ಬಾಲಕ್ಕೂ ಆಗದಿರುತ್ಯೇ? ಅನೇಕರಿಗೆ ತಲೆಗೂದಲು ಉದುರಿ ಹೋಗುವಂತೆ ಬಾಲ ಕೇಶವೂ ಉದುರತೊಡಗಿ ಬೊಕ್ಕ ಬಾಲವಾದರೆ? ನನ್ನ ತಲೆಗೂದಲಿನಂತೆ ಬಾಲಗೂದಲೂ ಹಣ್ಣಾದರೆ? ಕೆಲವರು ತಲೆಗೆ ಹೆನ್ನಾ ಹಾಕಿ ಕೆಂಗೂದಲು ಮಾಡಿಕೊಳ್ಳುವಂತೆ ಅಥವ ಇತರೆ ವಿಚಿತ್ರ ಬಣ್ಣಗಳನ್ನೂ ಬಳಿದು ಠೀವಿಯಿಂದ ಬಾಲ ತಿರುವಬಹುದಾದರೆ? ಅಗಣಿತ optionಗಳು!

ಬಾಲ ಉದುರಿದಾದರೂ ಹೇಗೆ?

ಇಷ್ಟೆಲ್ಲ ಉಪಯೋಗಗಳಿದ್ದರೂ ಬಾಲ ಅದೇಗೆ ಉದುರಿ ಹೋಯಿತು ಎಂಬ ಪ್ರಶ್ನೆ ಏಳುವುದು ಸಹಜವೇ. ಈ ಬಗ್ಗೆ ಯೋಚಿಸಿ ಯೋಚಿಸಿ ನಾನೊಂದು ತೀರ್ಮಾನಕ್ಕೆ ಬಂದಿದ್ದೇನೆ. ಇದು ಸಂಶೋಧನೆಯಲ್ಲ! ಸಂಶೋಧನೆಯಾಗಿದ್ದಿದ್ದರೆ Lancet ಪತ್ರಿಕೆಗೇ ಕಳಿಸಿರುತ್ತಿದ್ದೆ!

ನೀವು ಈಸೋಪನ ನೀತಿಕತೆಗಳನ್ನು ಓದಿರಬಹುದು. ಅವೂ ಕೂಡ ನಮ್ಮ ಪಂಚತಂತ್ರ ಕಥೆಗಳಂತೆ ಪ್ರಾಣಿಗಳ ಕಥೆಗಳು. ಬಹಳ ಹಿಂದಿನಿಂದಲೂ ನರಿಗಳು ಪ್ರಾಣಿವರ್ಗದಲ್ಲೇ ಮನುಷ್ಯರಷ್ಟೇ ಚತುರ, ಠಕ್ಕವೆಂದು ಮನುಷ್ಯ ಆರೋಪಿಸಿದ್ದಾನೆ! ಅದಕ್ಕೆ ತಕ್ಕಂತೆ ಕಥೆಗಳನ್ನೂ ಹೆಣೆದಿದ್ದಾನೆ! ವಿಪರೀತ ಬುದ್ಧಿಯ ಮನುಷ್ಯರನ್ನು ‘ಅವನೊಬ್ಬ ಗುಳ್ಳೆ ನರಿ!’ ಎಂದು ಹಿರಿಯರು ಹೇಳುವುದನ್ನು ನಾವು ಕೇಳಿಸಿಕೊಂಡಿದ್ದೇವೆ.

ಹೀಗೆಯೇ, ನರಿಯೊಂದು, ಮನುಷ್ಯನೊಬ್ಬನು ರಚಿಸಿದ್ದ ಉರುಳಿಗೆ ಸಿಕ್ಕಿ ಬಿದ್ದಿತ್ತಂತೆ. ಪೂರ್ತಿಯಾಗಲ್ಲ, ಬಾಲವಷ್ಟೇ! ನರಿ, ಬಿಡಿಸಿಕೊಳ್ಳಲು ಹೋರಾಡಿ ಕೊನೆಗೂ ಗೆದ್ದಿತು, ಮೈನಸ್ ಬಾಲ! ಹೋದರೆ, ಬಾಲ ಎಂದು ನರಿ ಅಲ್ಲಿಂದ ಓಡಿ ಹೋಯಿತಂತೆ. ಬಹಳಷ್ಟು ದೂರ ಓಡಿದ ನಂತರ ನರಿ ದಣಿವಾಗಿ ಬಾಯಾರಿಕೆ ಈಡೇರಿಸಿಕೊಳ್ಳಲು ಒಂದು ಕೆರೆಗೆ ಹೋಯಿತು. ನೀರಿನಲ್ಲಿ ಅದರ ಪೃಷ್ಠದ ಸೆಲ್ಫಿ ತೆಗೆದು ನೋಡಿದಾಗ..!! ಬಾಲ ಬುಡದಿಂದಲೇ ಮಾಯವಾಗಿದೆ! ನೀವು ಯಾವತ್ತಾದರೂ ನರಿಯ ಬಾಲ ನೋಡಿದ್ದೀರಾ? ಯಾವ ಹೆಣ್ಣುಮಗಳೂ ಕುರುಬುವಂತ ಸೊಂಪಾದ ಕೂದಲಿನ ಬಾಲ. ನೋಡಿ ನರಿಗೆ ಅಳುವೇ ಬಂದುಬಿಟ್ಟಿತು. ಆದರೂ, ನರಿ ಪ್ರಾಕ್ಟಿಕಲ್ ಪ್ರಾಣಿ, ಸ್ವಮರುಕದಲ್ಲಿ ಅಳುತ್ತಾ ಕೂರುವ ಜಾಯಮಾನದ್ದಲ್ಲ. ತನ್ನ ಹಿಂಡಿಗೆ ಸೇರುವ ಮುನ್ನ ಏನಾದರೂ ಮಾಡಲೇಬೇಕೆಂದು ಚಿಂತಿಸಿ ತನ್ನ ಗುಂಪಿಗೆ ಸೇರುತ್ತಲೇ, “ಬಾಂಧವರೇ, ನೀವು ಎಂದಾದರೂ ನಮ್ಮ ಬಾಲದ ಬಗ್ಗೆ ಯೋಚಿಸಿದ್ದಿರಾ? ಯೋಚಿಸಿದರೆ ಅದೊಂದು ನಿಷ್ಪ್ರಯೋಜಕ ಅಂಗ ಎಂದು ನಿಮಗೆ ಖಂಡಿತ ಮನದಟ್ಟಾಗುವುದು. ಯಾವುದಕ್ಕೂ ಅದೊಂದು ಅಡ್ಡಿ ಅಂತಲೇ ಹೇಳಬಹುದು. ಅದನ್ನು ನೆಟ್ಟಗೆ ಎತ್ತಿ ಹೋಗಲೂ ಎಷ್ಟೊಂದು stamina ಖರ್ಚು..! ಬ್ಲಾ… ಬ್ಲಾ… ಎಂದು, “ಇವತ್ತು ಅದನ್ನು ಸಿಟ್ಟಿಗೆದ್ದು ಕತ್ತರಿಸಿಯೇ ಬಿಟ್ಟೆ! ಇವತ್ತು ನಾನೆಷ್ಟು ಹಗುರವಾಗಿದ್ದೇನೆಂದರೆ, ಇಡೀ ದಿವಸ ಕುಣಿದು ಕುಪ್ಪಳಿಸಿ ಪಲ್ಟಿ ಹೊಡೆಯೋಣ ಎಂದೆನಿಸುತ್ತಿದೆ! ಗೆಳೆಯರೇ, ಕತ್ತರಿಸಿ ಒಗೆಯಿರಿ ನಿಮ್ಮ ಬಾಲಗಳನ್ನು! ಸ್ವತಂತ್ರರಾಗಿರಿ. You have nothing to lose except your wretched tails ಅಂತು. ಎಲ್ಲೆಡೆ ಮೌನ. ನಂತರ ಇನ್ನೊಂದು ನರಿ, ‘ಸರಿಯಪ್ಪ, ನಿನ್ನ ಪೃಷ್ಠ ಕೊಂಚ ತೋರಿಸು?’ ಎಂದಿತು. ನರಿ ಉತ್ಸಾಹದಿಂದ ತೋರಿಸಿದ್ದೇ ತಡ ನರಿಗಳೆಲ್ಲ ನೆಲದ ಮೇಲೆಲ್ಲ ಉರುಳಾಡಿ ನಕ್ಕವಂತೆ! ಅವು ಕೂಡ ಚತುರ ನರಿಗಳೇ ತಾನೆ? ಅವಕ್ಕೆ ಎಲ್ಲವೂ ಅರ್ಥವಾಗಿತ್ತು.

ನರಿ ಬಾಲಕ್ಕೂ ಮತ್ತು ಮನುಷ್ಯ ಬಾಲ ಕಳೆದುಕೊಂಡಿದ್ದಕ್ಕೂ ಎಲ್ಲಿಂದ ಎಲ್ಲಿಯ ಸಂಬಂಧವೆಂದು ನೀವು ಕೇಳಬಹುದು. ಮನುಷ್ಯನಿಗೆ ಕತೆ ಕಟ್ಟಿ ಹೇಳುವ, ನೇರವಾಗಿ ಹೇಳಲಾಗದ್ದನ್ನು ಸುತ್ತಿ ಬಳಸಿ ರೂಪಕ, ಪ್ರತಿಮೆ ಮತ್ತು ಪ್ರಾಣಿಗಳ ಮೇಲೆ ಆರೋಪಿಸಿ ಹೇಳುವ ಕಲೆ ಕರಗತವಾಗಿದೆ! Reading between the lines ಪದ ನೀವು ಕೇಳಿರಬಹುದು. ಈಸೋಪ ಮೇಲಿನ ಕತೆಯನ್ನು ಸುಮ್ಮನೇ ನರಿಯ ಮೇಲೆ ಹೊರಿಸಿದ್ದಾನೆ ಎಂದು ನನಗೆ ಯಾವಾತ್ತೋ ಮನದಟ್ಟಾಗಿತ್ತು. ನಿಜ ಹೇಳ ಬೇಕೆಂದರೆ ಬಾಲ ಕಳೆದುಕೊಂಡಿದ್ದು ನರಿಯಲ್ಲ, ಮನುಷ್ಯ! ಚೆನ್ನಾಗಿ ಮಾತು ಬಲ್ಲವನು ತಟ್ಟೆ ಬಡಿಯಿರಿ ಎಂದರೆ, ಜನಸ್ತೋಮ ಯಕ್ಷಿಣಿಗೊಳಗಾದಂತೆ ತಟ್ಟೆ ಬಡಿದೋ, ಐದು ನಿಮಿಷ ಲೈಟಾಫ್ ಮಾಡಿ ಅಂದರೆ ಲೈಟಾಫ್ ಮಾಡಿ ತಾವು ಎಂತಾ ಅಜ್ಞಾನುಪಾಲಕರು ಎಂದು ತೋರಿಸಿ ಶಹಬ್ಬಾಸ್ ಎಂದು ಕರೆಸಿಕೊಳ್ಳಲು ಕಾದು ನಿಂತಿರುತ್ತಾರೆ! ಅಂತಾ ಈ ಕರಿಶ್ಮ್ಯಾಟಿಕ್ ಮನುಷ್ಯನ ಮಾತು ಕೇಳಿ ಬಾಲ ಕತ್ತರಿಸಿಕೊಂಡಿದ್ದಾರೆ! ಈಸೋಪ ತನ್ನ ಕತೆಗಳನ್ನು ಬರೆಯುವ ಹೊತ್ತಿನಲ್ಲಿ ಅವನಿಗೆ ಮನುಷ್ಯ ಬಾಲ ಕಳೆದುಕೊಂಡು ಏನೆಲ್ಲ ಅವಾಂತರ ಮಾಡಿಕೊಂಡಿದ್ದಾನೆಂದು ಅರಿವಾಗಿತ್ತು. ಆದರೂ, ಮನುಷ್ಯ ತನ್ನ ತಪ್ಪನ್ನು ಯಾವತ್ತೂ ಒಪ್ಪಿಕೊಂಡ ಉದಾಹರಣೆಗಳಿಲ್ಲ!

***

ನಾನೇಕೆ ಅನುವಾದಿಸುತ್ತೇನೆ

ಟಿವಿ, ಮೊಬೈಲ್, ಇಂಟರ್ನೆಟ್ ಇಲ್ಲದ ನನ್ನ ಬಾಲ್ಯದಲ್ಲಿ ಸಾಮಾನ್ಯವಾಗಿ ಓದು ಬರಹ ಗೊತ್ತಿದ್ದ ಎಲ್ಲರಂತೆ ನಾನೂ ಕೂಡ ಚಂದಮಾಮ, ಬಾಲಮಿತ್ರ, ಪಂಚತಂತ್ರ, ಈಸೋಪನ ನೀತಿಕತೆಗಳಿಂದ ಬಡ್ತಿ ಹೊಂದಿ ಎನ್ನರಸಿಂಹಯ್ಯನವರ ಪತ್ತೇದಾರ ಧ್ವಯರ ಮೋಡಿಗೆ ಸಿಲುಕಿಕೊಂಡಿದ್ದೆ. ಎಂಟನೇ ತರಗತಿಗೆ ಬಂದಾಗ ನನಗೆ ಇಂಗ್ಲಿಷ್ ಮೀಡಿಯಮ್ಮಿಗೆ ಸೀಟು ಸಿಕ್ಕಿತು. ಆಗ ಭಾಷಾ ಪುಸ್ತಕದ ಜೊತೆಗೆ ನಾನ್-ಡಿಟೇಯ್ಲ್ ಪುಸ್ತಕವೊಂದೂ ಇತ್ತು. ಇಂಗ್ಲಿಷಿನಲ್ಲಿ ಆರ್.ಎಲ್.ಸ್ಟೀವನ್‌ಸನ್ ನ ಸರಳ ಸಂಗ್ರಹ Treasure Island ಮತ್ತು ಕನ್ನಡದಲ್ಲಿ, ಸರಿಯಾಗಿ ಜ್ಞಾಪಕವಿಲ್ಲ, ಥಾಮಸ್ ಆಲ್ವ ಎಡಿಸನ್ ಬಗ್ಗೆ ಇರಬೇಕು.

‘ಟ್ರೆಶರ್ ಐಲೆಂಡ್’ ನನಗೆ ಬಹಳ ಸಮಯ ಕಾಡಿದ ಪುಸ್ತಕ. ಕಡಲನ್ನೇ ನೋಡಿರದ ನನಗೆ ಕಡಲ್ಗಳ್ಳರ ಬಗ್ಗೆ, ಅದರ ಬಾಲ ಹೀರೋ ಜಿಮ್, ಕುಂಟ ಲಾಂಗ್ ಜಾನ್ ಸಿಲ್ವರ್  ಈಗಲೂ ಕಣ್ಮುಂದೆ ಸುಳಿಯುತ್ತಾರೆ. ಆ ನಂತರ ನನಗೆ ಸಿಕ್ಕಿದ್ದು ಡ್ಯಾನಿಯೆಲ್ ಡಿಫೋ ನ ರಾಬಿನ್‌ಸನ್ ಕ್ರೂಸೊ! ಅವನ ಸೇವಕ ಮ್ಯಾನ್ ಫ್ರೈಡೇ! ನನ್ನ ಅಕ್ಕಂದಿರು ಓದಿದ್ದು ಬರೆ ಎಸೆಸೆಲ್ಸಿ. ಅವರ ಪುಸ್ತಕಗಳಲ್ಲಿ ನನಗೆ ಸಿಕ್ಕಿದ್ದು ಮತ್ತೊಂದು gem, ಎಎನ್ ಮೂರ್ತಿರಾಯರ ‘ಹವಳದ ದ್ವೀಪ.’ ಇದು ಕೂಡ ನನಗೆ ತುಂಬಾ ಖುಷಿ ಕೊಟ್ಟ ಪುಸ್ತಕ. ಬ್ಯಾಲಂಟಾಯ್ನ ಈ ಪುಸ್ತಕ,  Coral Island ನನ್ನ ಕಿಂಡಲ್‌ನಲ್ಲಿದ್ದರೂ ನನಗೆ ‘ಹವಳದ ದ್ವೀಪ’ವೇ ಇಷ್ಟ!

ಮೊಟ್ಟ ಮೊದಲು ನಾನು ಬರೆದ ಕತೆ ‘ಹ್ಯಾಪ್ಪಿ ಕ್ರಿಸ್ಮಸ್’ ಎಂದು. ಇದು, ಬಹುಶಃ ಪ್ರಥಮ, ಅಥವಾ ದ್ವಿತೀಯ ಬಿಎಯಲ್ಲಿದ್ದಾಗಲೋ ಬರೆದದ್ದು ‘ಕನ್ನಡ ಪ್ರಭ’ದ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗಿತ್ತು. ನಂತರ ನಾನು ಬರೆಯುವದಕ್ಕಿಂತಲೂ ಓದಿನೆಡೆಗೆ ಹೆಚ್ಚು ಗಮನ ಹರಿಸಿದೆ. ಕನ್ನಡದಲ್ಲಿ ಓದುತ್ತಿದ್ದರೂ, ಅಮೆರಿಕನ್ನರ, ಯೂರೋಪಿನವರ ಕತೆಗಳ ವಿಭಿನ್ನತೆ ಆಕರ್ಷಿಸಿತು. ಆಗ ದೊರಕಿದ್ದು Mark Twain ನ  Tom Sawyer’s Adventures.ಇದು ಸ್ವಲ್ಪ ದೊಡ್ಡದಿದ್ದುದರಿಂದ, ಮತ್ತು ನಾನು ಯಾರೋ ಅನಾಮಿಕ ಲೇಖಕನಾಗಿರರುವುದರಿಂದ ಕನ್ನಡದಲ್ಲಿ ನನಗೆ ಖಂಡಿತ ಅವಕಾಶವಿರುವುದಿಲ್ಲವೆಂದು ಭಾವಿಸಿ ನನ್ನ ಮಾತೃಬಾಷೆ ಕೊಂಕಣಿಗೆ ಅನುವಾದಿಸಿದೆ. ಅದು, ಕೊಂಕಣಿಯ ಹಿರಿಯ ಪತ್ರಿಕೆ ‘ರಾಕ್ಣೋ’ದ ಮಕ್ಕಳ ವಿಭಾಗದಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. ಅಲ್ಲಿಂದ ನನಗೆ ಅನುವಾದವೇ ಮೆಚ್ಚಿನ ಕೆಲಸವಾಯಿತು.

‍ಲೇಖಕರು Admin

29 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading