ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾಲಚಂದರ್ ಎಂದರೆ ಕಾಮಧೇನು ಕಲ್ಪವೃಕ್ಷ..

ಕೆ ಎಸ್ ಪರಮೇಶ್ವರ

ಅಲ್ಲಿಗೆ ದಕ್ಷಿಣ ಭಾರತ ಚಿತ್ರರಂಗದ ಒಂದು ಮಹತ್ವದ ಪರ್ವ ಅಂತ್ಯವಾದಂತಾಗಿದೆ. ಕಳೆದ ಮಂಗಳವಾರ ಆ ಹಿರಿಯ ಚೇತನದ ಸಾವಿನ ಸುದ್ದಿ ಬಂದಾಗ ಇಡೀ ಭಾರತೀಯ ಚಿತ್ರರಂಗ ಒಂದು ಕ್ಷಣ ಸ್ತಬ್ಧವಾಗಿತ್ತು. ಗೊತ್ತು ಗುರಿ ಇಲ್ಲದೇ ಹಾದಿ ತಪ್ಪಿ ಅಲೆಯುತ್ತಿದ್ದ ಮನೆಯ ಸದಸ್ಯರಿಗೆ ನಿರ್ದಿಷ್ಟ ಗುರಿ ದಾರಿ ಎರಡನ್ನೂ ತೋರಿಸಿ ಕೊಟ್ಟು ಅವರನ್ನು ಸರಿದಾರಿಗೆ ತಂದಂತಹ ಮನೆಯ ಹಿರಿಯನೊಬ್ಬ ಗತಿಸಿದಾಗ ಆಗುವಂತಹ ನೋವು, ದುಃಖ ಅಂದು ದಕ್ಷಿಣ ಭಾರತ ಚಿತ್ರರಂಗದ್ದಾಗಿತ್ತು. ಭಾರತದ ಎಲ್ಲಾ ಪತ್ರಿಕೆಗಳು, ಟಿವಿ ವಾಹಿನಿಗಳು “ಇಡೀ ಚಿತ್ರರಂಗಕ್ಕೆ ಇದೊಂದು ಭರಿಸಲಾರದ ನಷ್ಟ” ಅಂತ ಬರೆದವು ಮತ್ತು ಅದು ಕೇವಲ ತೋರಿಕೆಯ ಮಾತಾಗಿರಲಿಲ್ಲ. ರಜನೀಕಾಂತ್ ರಂತಹ ರಜನೀಕಾಂತ್ ’ನಾನು ಕಳೆದುಕೊಂಡಿದ್ದು ಗುರುವನ್ನಲ್ಲ ನನ್ನ ತಂದೆಯನ್ನ…’ ಅಂದರು. ಅವರ ಮಾತಿನಲ್ಲೂ ಸಹ ಯಾವುದೇ ಉತ್ಪ್ರೇಕ್ಷೆ ಇರಲಿಲ್ಲ. ಶಿವಾಜಿರಾವ್ ಗಾಯಕವಾಡ್ ಎಂಬ ಹುಡುಗನ ಪ್ರತಿಭೆಯನ್ನು ಗುರುತಿಸಿ, ಆತನಿಗೆ ತಮ್ಮ ಸಿನಿಮಾಗಳಲ್ಲಿ ಅವಕಾಶ ಕೊಟ್ಟು ಅವನ ಮೊದಲ ಸಿನಿಮಾ ತೆರೆಗೆ ಬರುವ ಮೊದಲೇ ’ಇವನು ಚಿತ್ರರಂಗದಲ್ಲಿ ದೊಡ್ಡ ಎತ್ತರಕ್ಕೆ ಬೆಳಿತಾನೆ!’ ಎಂದು ಭವಿಷ್ಯ ನುಡಿದಿದ್ದ ಚಿತ್ರಬ್ರಹ್ಮ ಅವರು. ಮುಂದೆ ಅವರ ಭವಿಷ್ಯ ನಿಜವಾಗಿ ತಾನು ಸೂಪರ್ ಸ್ಟಾರ್ ರಜನೀಕಾಂತ್ ಆಗ್ತೇನೆ ಅಂತ ಆಗ ಶಿವಾಜಿರಾವ್ ಗಾಯಕವಾಡ್ ಎಂಬ ಆ ಹುಡುಗನಿಗೂ ಗೊತ್ತಿರಲಿಲ್ಲವೇನೊ. ಹಾಗೆ ಸರಿಸುಮಾರು ೬೫ ಜನ ನಟನಟಿಯರನ್ನು. ಏ ಆರ್ ರೆಹಮಾನ್ ರಂತಹ ಸಂಗೀತ ಸಾಮ್ರಾಟನನ್ನು, ಹಲವು ಶ್ರೇಷ್ಠ ತಂತ್ರಜ್ಞರನ್ನು ಚಿತ್ರರಂಗಕ್ಕೆ ಪರಿಚಯಿಸಿದ ದಿಗ್ಗಜ ಅವರು. ಹೌದು ನಾನು ಹೇಳುತ್ತಿರುವುದು ದಕ್ಷಿಣ ಭಾರತದ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಕೈಲಾಸಂ ಬಾಲಚಂದರ್ ಉರುಫ್ ಕೆ.ಬಾಲಚಂದರ್ ಎಂಬ ನಿರ್ದೇಶಕರ ಬಗ್ಗೆ.

ಭಾರತೀಯ ಚಿತ್ರರಂಗ ಅದರಲ್ಲೂ ಪ್ರಮುಖವಾಗಿ ದಕ್ಷಿಣ ಭಾರತ ಚಿತ್ರರಂಗ ಇವತ್ತು ಹೊಸ ಬಗೆಯ ಕಥಾ ಹಂದರ, ಚಿತ್ರಕತೆ, ನಿರೂಪಣೆ ಶೈಲಿಗಳನ್ನು ಚಿತ್ರರಂಗಕ್ಕೆ ಪರಿಚಿಯಿಸಿದ ಹೊಸ ತಲೆಮಾರಿನ ಅನೇಕ ಪ್ರತಿಭಾವಂತ ನಿರ್ದೇಶಕರನ್ನು ಕಾಣುತ್ತಿದೆ. ತಮ್ಮ ಸಿನಿಮಾಗಳ ಮೂಲಕ ಮನರಂಜನೆಯ ಜೊತೆಗೆ ಸಾಮಾನ್ಯ ಜನರ ಆಶೋತ್ತರಗಳಿಗೆ, ದುಖಃ ದುಮ್ಮಾನಗಳಿಗೆ ಧ್ವನಿ ಒದಗಿಸಿದ ನಿರ್ದೇಶಕರ ಸಾಲು ಸಾಲೇ ಇಂದು ನಮ್ಮ ಮುಂದಿದೆ. ಆದರೆ ಒಬ್ಬ ಒಬ್ಬ ಬಾಲಚಂದರ್ ಮಾತ್ರ ಸುಮಾರು ೫೦ ವರ್ಷಗಳ ಹಿಂದೆಯೇ ಮನರಂಜನೆಯ ಜೊತೆಗೆ ಸಿನಿಮಾಗಳ ಸಾಮಾಜಿಕ ಜವಬ್ದಾರಿಯ ಕುರಿತು ಯೋಚಿಸಲಾರಂಭಿಸಿದರು ಮತ್ತು ಅದೇ ಸಿದ್ದಾಂತವನ್ನು ಬಲವಾಗಿ ನಂಬಿ ಚಿತ್ರ ನಿರ್ದೇಶನಕ್ಕೆ ತೊಡಗಿದರು.
ತಮಿಳುನಾಡಿನ ತಂಜಾವೂರು ಪ್ರಾಂತ್ಯದ ಬ್ರಾಹ್ಮಣ ಕುಟುಂಬದಲ್ಲಿ ಜುಲೈ ೯ ೧೯೩೦ರಂದು ಜನಿಸಿದ ಎಲ್ಲರ ಪ್ರೀತಿಯ ಕೆಬಿ ವೃತ್ತಿ ಜೀವನ ಆರಂಭಿಸಿದ್ದು ಶಾಲಾ ಶಿಕ್ಷಕನಾಗಿ. ತದನಂತರ ಲೆಕ್ಕಪತ್ರ ವಿಭಾಗದಲ್ಲಿ ಸೂಪರಿಟೆಂಡೆಂಟ್ ಅಗಿ ವೃತ್ತಿ ಜೀವನ ಮುಂದುವರೆಸತೊಡಗಿದ ಬಾಲಚಂದರ್ ಆ ಸಮಯದಲ್ಲೇ ನಾಟಕದ ಸೆಳೆತಕ್ಕೆ ಒಳಗಾದರು. ಸೂಪರಿಟೆಂಡೆಂಟ್ ಕೆಲಸ ಮುಂದುವರೆಸುತ್ತಲೇ ಹಲವು ಜನಪ್ರಿಯ ನಾಟಕಗಳನ್ನು ಬರೆದು ನಿರ್ದೇಶಿಸಿದರು. ೧೯೬೫ರಲ್ಲಿ ಬಂದ ಅವರ ಮೊದಲ ಚಿತ್ರ ನೀರ್ ಕುಮಿಳ್ (Neer Kumizhi) ಅವರದ್ದೇ ಒಂದು ನಾಟಕವನ್ನು ಆಧರಿಸಿದ ಚಿತ್ರ. ಸಾವುಬದುಕಿನೊಂದಿಗೆ ಹೋರಾಡುತ್ತಿರುವ ಕ್ಯಾನ್ಸರ್ ರೋಗಿಯೊಬ್ಬ ಪ್ರೇಮಿಗಳನ್ನು ಒಂದು ಮಾಡಲು ಹೆಣಗುವ ಕಥಾಹಂದರವಿದ್ದ ಕೆಬಿರವರ ಮೊದಲ ಚಿತ್ರದಲ್ಲಿ ಭಾರತದ ಹೆಮ್ಮೆಯ ಹಾಗೂ ಪ್ರತಿಭಾವಂತ ನಟ ತಾಯ್ ನಾಗೇಶ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಮೊದಲ ಚಿತ್ರ ನೀರ್ ಕುಮಿಳ್ (Neer Kumizhi) ಭರ್ಜರಿ ಯಶಸ್ಸು ಗಳಿಸುವ ಮೂಲಕ ಕೆಬಿರವರಲ್ಲಿ ಬಲವಾದ ಆತ್ಮವಿಶ್ವಾಸ ಮೂಡಿಸಿತ್ತು. ಅಲ್ಲಿಂದ ಬಾಲಚಂದರ್ ಹಿಂತಿರುಗಿ ನೋಡಿದ್ದೇ ಇಲ್ಲ. ತಮ್ಮ ೫೦ ವರ್ಷಗಳ ಸುದೀರ್ಘ ಚಿತ್ರ ಬದುಕಿನಲ್ಲಿ ಅವರು ಕಾಣಿಕೆಯಾಗೆ ಕೊಟ್ಟಿರುವುದು ನೂರಕ್ಕೂ ಹೆಚ್ಚು ಚಿತ್ರರತ್ನಗಳನ್ನು. ಕಥೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ, ನಿರ್ಮಾಣ, ನಟನೆ ಹೀಗೆ ಸಿನಿಮಾ ಸಂಬಂಧಿತ
ಹಲವು ವಿಭಾಗಗಳಲ್ಲಿ ಸತತವಾಗಿ ದುಡಿದ ಕ್ರಿಯಾಶೀಲ ಮನಸ್ಸು ಬಾಲಚಂದರ್.
’ನಿರ್ದೇಶಕ’ ಎಂಬ ಹುದ್ದೆಗೆ ಘನತೆ, ಗೌರವ ತಂದುಕೊಟ್ಟವರು ಬಾಲಚಂದರ್ ಎಂಬುದು ಮತ್ತೊಂದು ಪ್ರಮುಖವಾದ ಅಂಶ. ಒಂದು ಸಿನಿಮಾದಲ್ಲಿ ಎಲ್ಲಕ್ಕಿಂತ, ಎಲ್ಲರಿಗಿಂತ ಮುಖ್ಯನಾದವನು ’ನಿರ್ದೇಶಕ’ ಎಂಬ ಅಂಶವನ್ನು ಪ್ರತಿಪಾದಿಸಿ ತಮ್ಮ ಸಿನಿಮಾಗಳಲ್ಲಿ ಅದನ್ನೇ ಪಾಲಿಸಿಕೊಂಡು ಬಂದ ಕೆಬಿ ಕೊನೆಯವರೆಗೂ ಅದೇ ನಂಬಿಕೆಗೆ ಬದ್ಧರಾಗಿದ್ದರು. ಪ್ರೇಕ್ಷಕರಿಗೂ ಸಹ ಕೆ.ಬಾಲಚಂದರ್ ಸಿನಿಮಾ ಅನ್ನುವುದಷ್ಟೇ ಸಾಕಿತ್ತು. ಉಳಿದ ನಟನಟಿಯರು ಯಾರು? ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳದೇ ನಿರ್ದೇಶಕನ ಮೇಲೆ ನಂಬಿಕೆ ಇಟ್ಟು ಥಿಯೇಟರ್ ಗಳಿಗೆ ನುಗ್ಗುತ್ತಿದ್ದರು ಎಂದರೆ ಏನಿರಬಹುದು ಬಾಲಚಂದರ್ ತಾಕತ್ತು. ಹಾಗಾಗಿ ಬಾಲಚಂದರ್ ಅಂದರೆ ಒಂದು ಬ್ರಾಂಡ್ ನೇಮ್. ಮತ್ತು ಅವರು ತಮ್ಮದೇ ಆದ ಈ ಬ್ರಾಂಡ್ ನೇಮ್ ಸಂಪಾದಿಸಿದ್ದು ಎಂಜಿಆರ್ ಮತ್ತು ಶಿವಾಜಿ ಗಣೇಶನ್ ಎಂಬ ಇಬ್ಬರೂ ದೈತ್ಯ ಸ್ಟಾರ್ ನಟರು ತಮ್ಮದೇ ಆದ ಎರಡು ಬೇರೆ ಬೇರೆ ಶೈಲಿಯ ಚಿತ್ರಗಳ ಮೂಲಕ ಇಡೀ ತಮಿಳುನಾಡು ಚಿತ್ರರಂಗವನ್ನು ಆಳುತ್ತಿದ್ದ ೭೦ರ ದಶಕದ ಸಂದರ್ಭದಲ್ಲಿ. ಕೆಬಿ ಅದೇ ಸಂದರ್ಭದಲ್ಲಿ ತಮ್ಮದೇ ಶೈಲಿಯ ಚಿತ್ರಗಳ ಮೂಲಕ ಈ ಇಬ್ಬರೂ ಸ್ಟಾರ್ ನಟರ ಚಿತ್ರಗಳ ಭರಾಟೆಯ ಮಧ್ಯೆ ತಮ್ಮ ಸ್ಥಾನಮಾನ ಕಂಡುಕೊಂಡರು ಅದೂ ತಮ್ಮ ಚಿತ್ರಗಳಿಗೆ ಯಾವುದೇ ಸ್ಟಾರ್ ನಟರ, ದೊಡ್ಡ ದೊಡ್ಡ ಕಲಾವಿದರ ಹಂಗಿಲ್ಲದೇ ಬರೀ ಹೊಸ ನಟರನ್ನು ಪರಿಚಯಿಸುವ ಮೂಲಕ. ಅದು ಅವರ ನಿಜವಾದ ಸಾಧನೆ.
ಕೆಬಿರವರ ಕುರಿತ ಮತ್ತೊಂದು ವಿಶೇಷತೆ ೬೦, ೭೦ರ ದಶಕಗಳಲ್ಲಿ ತಮಿಳು ಚಿತ್ರರಂಗ ತೆರೆಯ ಮೇಲೆ ಕೇವಲ ನಾಯಕನನ್ನೇ ವಿಜೃಂಭಿಸುವ ಚಿತ್ರಗಳನಷ್ಟೇ ಮಾಡುತ್ತಿದ್ದ ಸಂದರ್ಭದಲ್ಲಿ ಬಾಲಚಂದರ್ ಪ್ರಪ್ರಥಮವಾಗಿ ಮಹಿಳಾಪ್ರಧಾನ ಸಿನಿಮಾಗಳನ್ನು ಮಾಡುವ ಮೂಲಕ ಹೊಸ ಹಾದಿಯ ಅನ್ವೇಷಣೆಗೆ ಕಾರಣಪುರುಷರಾದರು. ಇರು ಕೊಡುಗಳ್, ಅರ್ರಂಗೇಟ್ರಂ, ಅಪೂರ್ವ ರಾಗಂಗಳ್, ತಣ್ಣೀರ್ ತಣ್ಣೀರ್, ಅಗ್ನಿ ಸಾಕ್ಷಿ, ಸಿಂಧು ಭೈರವಿ ಮೊದಲಾದ ಅವರ ಮಹಿಳಾ ಪ್ರಧಾನ ಚಿತ್ರಗಳು ಸ್ತ್ರೀಯರ ಸಾಮಾಜಿಕ ಸ್ಥಾನಮಾನಗಳೇ ಮೊದಲಾದ ಸಾರ್ವಕಾಲಿಕ ವಿಷಯಗಳನ್ನು ಸಮರ್ಥವಾಗಿ ಮಂಡಿಸುವಲ್ಲಿ ಯಶಸ್ವಿಯಾಗಿದ್ದಷ್ಟೇ ಅಲ್ಲ ಆ ಎಲ್ಲಾ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿಯೂ ಸಹ ಭರ್ಜರಿ ಯಶಸ್ಸು ಗಳಿಸಿದವು. ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಿಂದ ಬಂದ ಬಾಲಚಂದರ್ ತಮ್ಮ ಸಿನಿಮಾವೊಂದರಲ್ಲಿ ಬ್ರಾಹ್ಮಣ ಹೆಣ್ಣೊಬ್ಬಳು ವೇಶ್ಯಾವೃತ್ತಿಗೆ ತೊಡಗುವುದನ್ನು ಚಿತ್ರಿಸಿದಾಗ ಸಮುದಾಯದ ಟೀಕೆ, ಆಕ್ರೋಶ ಎದುರಿಸಬೇಕಾಯಿತು.
ಕೇವಲ ಮನರಂಜನೆ ಸಿನಿಮಾಗಳ ಉದ್ದೇಶವಲ್ಲ ಎಂಬ ನಂಬಿಕೆ ಹೊಂದಿದ್ದ ಕೆಬಿರವರ ಬಹುಪಾಲು ಸಿನಿಮಾಗಳು ಮಧ್ಯಮ ವರ್ಗದ ಸಾಮಾಜಿಕ ತಲ್ಲಣಗಳ ಕುರಿತೇ ಇರುವಂತಹವು. ಪುನ್ನಗೈ, ಅವಳ್ ಒರು ತೋಡರ್ ಕಥೈ, ಅವರ್ಗಳ್, ತಪ್ಪು ತಾಳಂಗಳ್, ಜಾದಿ ಮಲ್ಲಿ, ಉನ್ನಲ್ ಮುಡಿಯುಮ್ ತಂಬಿ ಮೊದಲಾದ ಅವರ ಚಿತ್ರಗಳು ಇದಕ್ಕೆ ಸಾಕ್ಷಿ. ಕಥಾ ನಿರೂಪಣೆಯಲ್ಲಿ ಹೊಸತನ ಕೆಬಿರವರ ವಿಶೇಷತೆ. ಪ್ರೇಕ್ಷಕ ಪ್ರಭುವೇ ತೀರಾ ಹೊಸದನ್ನು ಬಯಸದಂತಹ ಸಂದರ್ಭಗಳಲ್ಲಿ ಅವರು ತೀರಾ ಹೊಸ ಮಾದರಿಯ ಚಿತ್ರಗಳನ್ನು ಕೊಟ್ಟು ಸೈ ಅನಿಸಿಕೊಂಡಿದ್ದಾರೆ. ಕೆಬಿರವರಿಗಿಂಗಲೂ ಮೊದಲೇ ತಮಿಳೂ ಚಿತ್ರರಂಗದ ಕೆಲ ನಿರ್ದೇಶಕರು ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಚಿತ್ರ ನಿರ್ದೇಶಿಸಿದ್ದಾರೆ. ಆದರೆ ಅವೆಲ್ಲಾ ಆಯಾ ನಿರ್ದೇಶಕರ ಯಶಸ್ಸು ಕಂಡ ತಮಿಳು ಚಿತ್ರಗಳೇ ಆಗಿದ್ದವು. ಆದರೆ ಬಾಲಚಂದರ್ ನೇರವಾಗಿ ತೆಲುಗು ಸಿನಿಮಾಗಳನ್ನು ಮಾಡುವ ಮೂಲಕ ತೆಲುಗು ಚಿತ್ರರಂಗಕ್ಕೂ ಸಹ ಹಲವು ಮಹತ್ವದ ಚಿತ್ರಗಳನ್ನು ಕೊಟ್ಟ ಕೀರ್ತಿಗೆ ಪಾತ್ರರಾಗಿದ್ದಾರೆ. ಮರೋಚರಿತ್ರ, ಕೋಕಿಲಮ್ಮ, ರುದ್ರವೀಣ ಅವರ ಪ್ರಮುಖ ತೆಲುಗು ಚಿತ್ರಗಳು.
ಇನ್ನೂ ಬಾಲಚಂದರ್ ರವರು ತಿದ್ದಿ ತೀಡಿ ರೂಪಿಸಿದ ಪ್ರತಿಭೆಗಳು ಇಡೀ ಭಾರತೀಯ ಚಿತ್ರರಂಗಕ್ಕೆ ಅನರ್ಘ್ಯ ರತ್ನಗಳೆಂದರೆ ಅತಿಶಯೋಕ್ತಿಯಲ್ಲ. ಕಮಲ್ ಹಾಸನ್, ರಜನೀಕಾಂತ್, ಪ್ರಕಾಶ್ ರೈ, ಹಾಸ್ಯ ನಟ ವಿವೇಕ್, ನಾಸರ್, ನಾಯಕ ನಟ ರಮೇಶ್ ಅರವಿಂದ್ ಇವರೆಲ್ಲ ಬಾಲಚಂದರ್ ಗರಡಿಯ ಹುಡುಗರು. ನಟಿಯರಿಗೆ ಬರುವುದಾದರೆ ಸರಿತ, ಜಯಸುಧ, ಜಯಪ್ರಧ, ಶ್ರೀದೇವಿ ಮೊದಲಾದ ಹಲವು ಯಶಸ್ವಿ ನಟಿಯರು ಬಾಲಚಂದರ್ ರವರನ್ನು ತಮ್ಮ ಗುರು ಎಂದು ಒಪ್ಪಿಕೊಳ್ಳುತ್ತಾರೆ. ಸಂಗೀತ ಸಾಮ್ರಾಟ ಎ.ಆರ್ ರೆಹಮಾನ್ ಸಹ ಚಿತ್ರರಂಗಕ್ಕೆ ಬಾಲಚಂದರ್ ರವರ ಕೊಡುಗೆಯೇ. ಈಗ ಪ್ರಸಿದ್ದ ನಿರ್ದೇಶಕರಾದ ಸುರೇಶ್ ಕೃಷ್ಣ, ಸರಣ್, ಸಮುದ್ರಕಣಿ ಬಾಲಚಂದರ್ ರೂಪಿಸಿದ ಶಿಷ್ಯರು.
ಬಾಲಚಂದರ್ ಎಂಥ ಹೃದಯವಂತ ಎಂದರೆ ಯಾವುದೇ ಹೊಸ ತಂಡ ಒಳ್ಳೆಯ ಸಿನಿಮಾ ಮಾಡಿದರೂ ಅವರನ್ನು ಗುರುತಿಸಿ ಮುಚ್ಚುಮರೆಯಿಲ್ಲದೇ ಪ್ರಶಂಸೆಗೊಳಪಡಿಸುತ್ತಿದ್ದರು. ಹೊಸಬರ ಚಿತ್ರ ತಂಡವನ್ನು ಗುರುತಿಸಿ ಬೆನ್ನುತಟ್ಟುವ ಮೊದಲ ವ್ಯಕ್ತಿ ಅವರಾಗಿರುತ್ತಿದ್ದರು. ಹಾಗೇ ಹೊಸಬರ ತಂಡ ಸಹ ಬಾಲಚಂದರ್ ರವರಿಗೆ ತಮ್ಮ ಚಿತ್ರ ತೋರಿಸಿ ಅವರ ಅಭಿಪ್ರಾಯ ಕೇಳಲು ಉತ್ಸುಕರಾಗಿರುತ್ತಿದ್ದರು.
ಹೊಸ ಬದಲಾವಣೆಗಳಿಗೆ ಬೇಗ ಒಗ್ಗಿಕೊಳ್ಳುವ ಗುಣ ಬಾಲಚಂದರ್ ರವರಿಗೆ ಕರಗತ. ಇದಕ್ಕೆ ಉದಾಹರಣೆ ೧೯೯೦ರಲ್ಲಿ ಕಿರುತೆರೆ ಮಾಧ್ಯಮ ಕಾಲಿಟ್ಟಾಗ ಅದರ ಸಾಧ್ಯತೆಗಳನ್ನು ಬೇಗ ಕಂಡುಕೊಂಡು ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆಯಡಿಯಲ್ಲಿ ಹಲವು ಧಾರಾವಾಹಿಗಳು ಹಾಗೂ ಕಿರುತೆರೆ ಕಾರ್ಯಕ್ರಮಗಳನ್ನು ರೂಪಿಸಿ ಅಲ್ಲಿಯೂ ಸಹ ಯಶಸ್ವಿಯಾದರು.
ಸರಳ, ಸಜ್ಜನಿಕೆಯ ಸೀದಾ ಸಾದಾ ವ್ಯಕ್ತಿತ್ವದ ಬಾಲಚಂದರ್ ರವರ ಚಿತ್ರಗಳು ಇಡೀ ಭಾರತೀಯ ಚಿತ್ರರಂಗಕ್ಕೆ ದಾರಿದೀಪಗಳು. ಅವರೊಬ್ಬ ಯಶಸ್ವಿ ನಿರ್ದೇಶಕ, ಬರಹಗಾರ, ನಿರ್ಮಾಪಕ, ನಟ ಮೇಲಾಗಿ ಅಪ್ಪಟ ಹೃದಯವಂತ ಮನುಷ್ಯ. ೯ ಬಾರಿ ರಾಷ್ಟ್ರ ಪ್ರಶಸ್ತಿಗಳು, ಆಂಧ್ರ ಪ್ರದೇಶ ಸರ್ಕಾರದ ನಂದಿ ಅವಾರ್ಡ್, ೧೯೮೭ರಲ್ಲಿ ಪದ್ಮಶ್ರೀ ಪುರಸ್ಕಾರ, ಅವೆಲ್ಲವುಗಳಿಗೆ ಕಿರೀಟವಿಟ್ಟಂತೆ ೨೦೧೦ರಲ್ಲಿ ದಾದಾಸಾಹೇಬ್ ಫಾಲ್ಕೆ ಪುರಸ್ಕಾರಗಳು ಬಾಲಚಂದರ್ ರವರ ಸಾಧನೆಗೆ ಸಂದಿವೆ. ಇವೆಲ್ಲಕಿಂತಲೂ ಹೆಚ್ಚು ಭಾರತೀಯ ಚಿತ್ರರಸಿಕರು ತಮ್ಮ ಹೃದಯ ಸಿಂಹಾಸನದಲ್ಲಿ ಕೆಬಿಯವರಿಗೆ ಕೊಟ್ಟಿರುವ ಶಾಶ್ವತ ಸ್ಥಾನಮಾನ. ಎಲ್ಲದಕ್ಕೂ ಕಾರಣ ಅವರ ಸಾರ್ವಕಾಲಿಕ ಚಿತ್ರಗಳು. ಅವರ ಕೊನೆಯ ಚಿತ್ರ ೨೦೦೬ರ ’ಪೊಯಿ’ ಅಂದರೆ ’ಸುಳ್ಳು’. ಅವರ ಕೊನೆಯ ಚಿತ್ರದಂತೆ ಅವರ ನಿರ್ಗಮನ ಸಹ ’ಪೊಯಿ’ ಆಗಬಾರದೆ. ಕೆಬಿ ಸರ್ you will remain with us forever with your films! RIP
 

‍ಲೇಖಕರು G

5 January, 2015

1 Comment

  1. ಅಕ್ಕಿಮಂಗಲ ಮಂಜುನಾಥ

    ಸಾದಕನೊಬ್ಬನ ಪರಿಚಯವನ್ನು ಪರಮೇಶ್ವರ ರವರು ತುಂಬಾ ಚೆನ್ನಾಗಿ ತೋರಿಸಿದ್ದಾರೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading