ಒಂದು ಕುತೂಹಲಕಾರಿ ಅನುಭವ
ಸೂರಿ ಹಾರ್ದಳ್ಳಿ
ಒಂದು ವಿಶೇಷ ಅನುಭವವನ್ನು ಓದುಗರೊಡನೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ ಎಂಬ ಮಾತಿನೊಂದಿಗೆ ನಿಮ್ಮನ್ನು ದೆಹಲಿಯ ಕರೋಲ್ಬಾಗ್ನ ಲಾಡ್ಜ್ ಒಂದಕ್ಕೆ ಕರೆದುಕೊಂಡು ಹೋಗುತ್ತೇನೆ. ಹೋಟೆಲಿನ ಹೆಸರು ಬೇಡ ಬಿಡಿ, ನಿಮ್ಮ ಕುತೂಹಲವನ್ನು ಸಾಯಿಸಲು ನನಗೆ ಆಸಕ್ತಿ ಇಲ್ಲ. ನನ್ನ ಉದ್ಯೋಗದಾತ ಕಂಪನಿಯು ದೆಹಲಿಯಲ್ಲಿ ಜನವರಿಯ ಮೊದಲ ವಾರದಲ್ಲಿ ನಡೆಯುವ ಏಳು ದಿನಗಳ ಅವಧಿಯ ಆಟೊ ಎಕ್ಸ್ಪೋದಲ್ಲಿದಲ್ಲಿ ಪಾಲ್ಗೊಂಡಿತ್ತು, ಮತ್ತು ನಾನೂ ಅದರಲ್ಲಿ ಕಂಪನಿಯ ಪರವಾಗಿ ಭಾಗವಹಿಸಬೇಕಾಗಿ ಬಂದಿತ್ತು. ಕಂಪನಿಯು ನನಗೆ ಹನ್ನೊಂದು ದಿನಗಳ ಕಾಲ ಆ ಹೋಟೆಲಿನಲ್ಲಿ ರೂಂ ಮಾಡಿಸಿಕೊಟ್ಟಿತ್ತು.
ವಿಮಾನ ನಿಲ್ದಾಣದಿಂದ ಕಂಪನಿಯದೇ ಟ್ಯಾಕ್ಸಿ ಹಿಡಿದು ಹೋಟೆಲಿಗೆ ಹೋದೆ. ನನ್ನ ಕೋಣೆ ಮೂರನೆಯ ಮಹಡಿಯಲ್ಲಿತ್ತು, ಮತ್ತು ನಾನೊಬ್ಬನೇ ವಾಸಿಸುವವನು. ದಿನಾಲೂ ಬೆಳಗ್ಗೆ ಎಂಟಕ್ಕೆ ಟ್ಯಾಕ್ಸಿ ಬಂದು ನನ್ನನ್ನು ಷೋ ನಡೆಯುವ ಸ್ಥಳಕ್ಕೆ ಕರೆದೊಯ್ಯುತ್ತಿತ್ತು, ಸಂಜೆ ಕೋಣೆ ಸೇರುವಾಗ ರಾತ್ರಿ ಎಂಟಾಗುತ್ತಿತ್ತು. ಜನವರಿಯಲ್ಲಿ ದೆಹಲಿಯ ಚಳಿ ತಡೆಯಲಾಗದಷ್ಟು. ಹಾಗಾಗಿ ಹೊರ ಹೋಗಲೂ ಹಿಂಜರಿಕೆಯಾಗುತ್ತಿತ್ತು. ಅದಲ್ಲದೇ ಕರೋಲ್ಬಾಗ್ನಲ್ಲಿ ಅಸಾಧ್ಯ ಜನಸಂದಣಿ. ನಾನು ಕೋಣೆ ಸೇರಿ ಹಾಸಿಗೆ ಸೇರಿದರೆ ಮತ್ತೆ ಏಳುವುದು ಮರುದಿನ ಬೆಳಗ್ಗೆಗೇ. ದೆಹಲಿಯ ಕೋಣೆಗಳಲ್ಲಿ ಚಿಕ್ಕ ರೆಫ್ರಿಜರೇಟರ್ ಇರುತ್ತದೆ ಮತ್ತು ಅವುಗಳೊಳಗೆ ವಿಸ್ಕಿ, ಬಿಯರ್ ಬಾಟಲಿಗಳು, ನೀರಿನ ಬಾಟಲಿಗಳು, ಚಾಕಲೇಟ್-ಬಿಸ್ಕತ್ತುಗಳು, ಚಿಪ್ಸ್/ಕಡಲೆಕಾಯಿ ಮುಂತಾದ ಕುರುಕಲು ತಿಂಡಿಗಳು ಇರುತ್ತವೆ.
ನೀವದನ್ನು ಉಪಯೋಗಿಸಿದರೆ ಅದಕ್ಕಾಗಿ ನೀವು ದೊಡ್ಡ ಮೊತ್ತದ ಹಣವನ್ನು ಪಾವತಿಸಬೇಕಾಗುತ್ತದೆ ಎಂಬುದು ನನಗೆ ಗೊತ್ತಿರುವ ಕಾರಣ ಅದರ ತಂಟೆಗೇ ಹೋಗಿರಲಿಲ್ಲ. ಒಬ್ಬನೇ ವಾಸಿಸುತ್ತಿರುವುದರಿಂದ ಶೌಚಾಲಯದ ಕೋಣೆಯ ಬಾಗಲಿನ ಕೊಂಡಿಯನ್ನು ಹಾಕಿಕೊಳ್ಳಬೇಕಾದ ಸಂದರ್ಭ ಬಂದಿರಲಿಲ್ಲ. ಹನ್ನೊಂದನೆಯ ದಿನ, ನನ್ನ ಲಗೇಜುಗಳನ್ನು ಪ್ಯಾಕ್ ಮಾಡಿಕೊಂಡು, ರಿಸೆಪ್ಷನ್ಗೆ ಚೆಕ್ ಔಟ್ ಬಗ್ಗೆ ತಿಳಿಸಿ, ರೆಡಿಮಾಡಿದ ಬಿಲ್ಗೆ ಸಹಿಹಾಕಿ, ನನ್ನ ಟ್ಯಾಕ್ಸಿಗಾಗಿ ಹೊರಡುವವನಿದ್ದೆ. ರೂಂ ಬಾಯ್ ಕೋಣೆಗೆ ಹೋಗಿ ಅಲ್ಲಿದ್ದ ಆಹಾರ ಸಾಮಗ್ರಿಗಳನ್ನೇನಾದರೂ ನಾವು ಉಪಯೋಗಿಸಿದ್ದೇವೆಯೇ ಎಂದು ಪರೀಕ್ಷಿಸುತ್ತಾನೆ. ಆ ಹೊತ್ತಿನಲ್ಲಿ ಅದೇಕೋ ಶೌಚಾಲಯಕ್ಕೆ ಹೋಗಬೇಕೆನಿಸಿತು. ಆ ರೂಂ ಬಾಯ್ ಹಿಂದೆಯೇ ಕೋಣೆಗೆ ಹೋಗಿ ಶೌಚಾಲಯ (ನಾಗರಿಕರು ಇದನ್ನು ವಿಶ್ರಾಂತಿ ಗೃಹ, ರೆಸ್ಟ್ ರೂಂ ಎಂದು ಕರೆಯುತ್ತಾರೆ) ಸೇರಿದೆ. ಮುಗಿಸಿ ಬಾಗಿಲು ತೆರೆಯಲು ಯತ್ನಿಸಿದರೆ ಅದು ತೆರೆದುಕೊಳ್ಳುತ್ತಿಲ್ಲ. ನಾಬ್ ಅನ್ನು ತಿರುಗಿಸಿದೆ, ಒತ್ತಿದೆ, ಎಳೆದೆ, ಬಾಗಿಲನ್ನು ದಡಬಡ ಬಡಿಯುತ್ತಾ, ‘ಅರೆ ಬಾಯ್, ದೇಖೋ,’ ಎಂದು ಕೂಗಿದೆ. ಪ್ರತಿಕ್ರಿಯೆ ಇಲ್ಲ. ಬಹುಶಃ ಅವನು ತನ್ನ ಕೆಲಸ ಮುಗಿಸಿ ಹೊರಟುಹೋಗಿರಬೇಕು. ಕೆಲ ಕೋಣೆಗಳಲ್ಲಿ ಬಚ್ಚಲು ಮನೆಯಲ್ಲಿಯೂ ಫೋನ್ ಇರುತ್ತದೆ. ಆದರೆ ಇಲ್ಲಿ ಇರಲಿಲ್ಲ. ಹೊರಗೆ ಟ್ಯಾಕ್ಸಿ ಕಾಯುತ್ತಿದೆ, ಲಗೇಜು ರಿಸೆಪ್ಷನ್ನಲ್ಲಿದೆ, ಬಿಲ್ ಚುಕ್ತಾ ಮಾಡಿಬಿಟ್ಟಿದ್ದೇನೆ.
ಈಗ ಏನು ಮಾಡುವುದು? ಒಳಗೆ ತೆರೆದುಕೊಳ್ಳುವ ಬಾಗಿಲಾಗಿದ್ದರಿಂದ ಸಿನೆಮಾಗಳಲ್ಲಿ, ಸಿ.ಐ.ಡಿ. ಸೀರಿಯಲ್ಗಳಲ್ಲಿ ಮಾಡುವಂತೆ ತಳ್ಳಿ ಬಾಗಿಲು ಮುರಿಯುವಂತಿಲ್ಲ. ಒಂದೇ ಒಂದು ಕ್ಷಣದಲ್ಲಿ ಪ್ಯಾನಿಕ್ ಆದೆ. ಒಳಗೇ ಇದ್ದು, ಬೇರೊಬ್ಬ ಗ್ರಾಹಕ ಬರುವ ತನಕ ಕಾಯಬೇಕು. ಆದರೆ ಅದು ಎಷ್ಟು ಕಾಲ ತುಸು ಹೊತ್ತಿನ ನಂತರ ನಾನು ಏನು ಮಾಡಬಹುದು ಎಂದು ಯೋಚಿಸತೊಡಗಿದೆ. ಕಕ್ಕಸು (ಡಬ್ಲು ಸಿ) ಹತ್ತಿದರೆ ಕಿಟಕಿಯಿಂದ ಹೊರಗೆ ಇಣುಕಬಹುದು. ಹತ್ತಿ ಹೊರಗೆ ನೋಡಿದರೆ ಅದೊಂದು ಗಲ್ಲಿ. ಜನ ಸಂಚಾರವೇ ಇಲ್ಲ. ತೊಟ್ಟ ಬಟ್ಟೆ ಕೊಳೆಯಾಗಿಬಿಟ್ಟಿತ್ತು. ಆಗಲಿ, ಈಗ ಇಲ್ಲಿಂದ ಹೊರಹೋಗುವುದಷ್ಟೇ ಮುಖ್ಯ. ತುಸು ಹೊತ್ತು ಕಾದೆ. ಒಬ್ಬ ವ್ಯಕ್ತಿ ಅಲ್ಲಿ ಸಾಗುತ್ತಿರುವುದು ಕಾಣಿಸಿತು. ಗಟ್ಟಿಯಾದ ದನಿಯಲ್ಲಿ ‘ಅರೆ ಭಾಯಿ ಸಾಬ್..’ ಎಂದು ಕೂಗಿದೆ. ಆ ವ್ಯಕ್ತಿ ಗೊಂದಲಗೊಂಡಂತೆ ಕಾಣಿಸಿತು. ಆಕಡೆ ಈಕಡೆ ನೋಡಿ ಸುಮ್ಮನೆ ಮುಂದಕ್ಕೆ ಸಾಗಿದ. ಮತ್ತೆ ಹತಾಶೆ. ತುಸು ಹೊತ್ತಿನ ನಂತರ ಇನ್ನೊಬ್ಬ ಕಾಣಿಸಿದ. ‘ಅರೆ ಬಾಯ್, ಊಪರ್ ದೇಖೋ,’ ಎಂದೆ. ಅವನು ಮೇಲೆ ನೋಡಿದ. ನನ್ನ ಮುಖದ ತುಸು ಭಾಗ ಮಾತ್ರ ಕಾಣಿಸುತ್ತಿತ್ತು ಅವನಿಗೆ. ಮತ್ತಷ್ಟು ಹೊರ ಬಾಗಿ, ‘ಹೋಟೆಲ್ಕಾ ವಾಚ್ಮನ್ಕೊ ಬುಲಾವೋ,’ ಎಂದು ಕೂಗಿದೆ.
ಸಾವಿರಾರು ಜನ್ಮದ ಸುಕೃತವೋ ಏನೋ, ಅವನು ಹೋಗಿ ಹೋಟೆಲಿನ ಕಾವಲುಗಾರರನ್ನು ಕರೆತಂದ. ನಾನು ಅವನಿಗೆ ‘ಅಂದರ್ಸೇ ಫಸಾ ಹುವಾಂ ಹೂಂ, ಕಮರಾ ನಂಬರ್.. ರೂಮ್ ಬಾಯ್ಕೋ ಬುಲಾವೋ,’ ಎಂದೆ. ಹತ್ತು ನಿಮಿಷದಲ್ಲಿ ರೂಂ ಬಾಯ್ ಬಂದ. ಬಾಗಿಲನ್ನು ತೆರೆದು, ಹಿಂದಿಯಲ್ಲಿ, ನಿಮಗೆ ಬಾಗಿಲು ತೆರೆಯಲು ಬರುವುದಿಲ್ಲವೇ? ಎಂದು ಕೇಳಿದ. ಅದಾಗಲೇ ತೊಂದರೆ ಅನುಭವಿಸಿದ ನನಗೆ ಆ ಮಾತುಗಳು ಅಪಹಾಸ್ಯ ಮಾಡಿದಂತಿತ್ತು. ನಾನು ಕೂಡಲೇ ‘ದಿಖಾವೋ ಅಂದರ್ ಜಾಕೆ’ ಎಂದು ಅವನನ್ನು ಒಳಗೆ ಕಳುಹಿಸಿದೆ. ಅವನು ಕೊಂಡಿ ಹಾಕಿಕೊಂಡ. ಅಲ್ಲಿ ಅವನು ಬಾಗಿಲು ತೆರೆಯಲಾರದೇ ಪರದಾಡುತ್ತಿರುವುದು ತಿಳಿಯಿತು. ನನ್ನನ್ನು ಹಾಸ್ಯ ಮಾಡಿದ ಅವನಿಗೆ ಅದೇ ಸರಿಯಾದ ಶಿಕ್ಷೆ ಎಂದುಕೊಂಡು ಏನೂ ಮಾತನಾಡದೇ ನಾನು ಹೊರಬಂದು ಲಗೇಜುಗಳನ್ನು ಎತ್ತಿಕೊಂಡು ಟ್ಯಾಕ್ಸಿ ಏರಿದೆ. ಇದೊಂದು ಪಾಠ ನನಗೆ. ಅಂದಿನಿಂದ ಯಾವುದೇ ಹೋಟೆಲಿಗೆ ಹೋದರೂ ಎಲ್ಲಾ ಚಿಲಕಗಳೂ ಸರಿಯಾಗಿ ಕಾರ್ಯ ನಿರ್ವಹಿಸುತ್ತವೆಯೇ ಎಂದು ಪರೀಕ್ಷಿಸುತ್ತಿದ್ದೆ.






haha..chennagide kate-smitha