ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾಡೂಟ ಮಾಡದ ಹಾಗೆ ಮಾಡಲಾಯಿತು..

rajendra prasad

ರಾಜೇಂದ್ರ ಪ್ರಸಾದ್ 

ಮುಂದಿನ ವಾರ ಯುಗಾದಿ ಅಮಾವಾಸ್ಯೆಗೆ ಶಿವರಾತ್ರಿಯಲ್ಲಿ ಆರಂಭವಾದ ತಿಂಗಳ ಪರ್ಯಂತದ ಕಪ್ಪಡಿ ಜಾತ್ರೆ ಕೊನೆಗೊಳ್ಳಲಿದೆ. ಸರಕಾರ ಎಂದಿನಂತೆ ಪ್ರಾಣಿ ಬಲಿನಿಷೇಧವನ್ನು ಇಲ್ಲಿನ ‘ಮಾಂಸಾಹಾರ ಪ್ರಸಾದ’ಕ್ಕೆ ಅನ್ವಯಿಸಿ ನಿಷೇಧ ಮಾಡಿದೆ!!

ಚಿಕ್ಕಲ್ಲೂರು ಜಾತ್ರೆಯಲ್ಲಿ ನಾವು ಬಾಡೂಟ ಮಾಡದ ಹಾಗೆ ಮಾಡಲಾಯಿತು
ಅದಕ್ಕೆ ಪ್ರಾಣಿ ದಯಾ ಸಂಘದ ಅರ್ಜಿಯ ಮುಖವಾಡ ಬೇರೆ! ಅಲ್ಲಿರುವ ಜನ ಯಾರೂಂತ ಗೊತ್ತಿರೋದೇ!

ಅಸಲಿಗೆ ನಮ್ಮ ತಟ್ಟೆಗೆ ಕೈ ಹಾಕುವ ಕೆಲಸ ಇವರಿಗೆ ಯಾಕೆ ಅಂತ?
ಸರಕಾರ ನ್ಯಾಯಾಲಯಕ್ಕೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟು ನಿಷೇಧ ರದ್ದಾಗಲಿ.

ನಿಮ್ಮೆಲ್ಲರ ಹೆಚ್ಚು ಹೆಚ್ಚು ಸಹಿಗಳು ಮನುಷ್ಯನ ಆಹಾರ & ಧಾರ್ಮಿಕ ಸ್ವಾತಂತ್ರ್ಯವನ್ನು ಸಂರಕ್ಷಿಸುತ್ತವೆ.

ಇಲ್ಲಿ ಕ್ಲಿಕ್ಕಿಸಿ ಸಹಿ ಹಾಕಿ 

d9c418690e50ebe75252f926d0eb2460

ಚಿಕ್ಕಲ್ಲೂರು, ಕಪ್ಪಡಿ ಜಾತ್ರೆಗಳಲ್ಲಿ ಮಾಂಸಾಹಾರ ನಿಷೇಧವೇಕೆ ?

ಶತಮಾನಗಳ ಕಾಲದಿಂದ ಹಳೆ ಮೈಸೂರು ಪ್ರಾಂತ್ಯದ ಹತ್ತಾರು ಜಾತಿ-ಮತಗಳಿಗೆ ಸೇರಿದ ಮಂಟೇಸ್ವಾಮಿ ಪರಂಪರೆಯ ಜನ ಕೊಳ್ಳೇಗಾಲ ಬಳಿಯ ಚಿಕ್ಕಲ್ಲೂರಿನ ಸಿದ್ದಪ್ಪಾಜಿ ಗದ್ದುಗೆ ಹಾಗೂ ಕೆ ಆರ್ ನಗರ ಬಳಿಯ ಕಪ್ಪಡಿಯ ರಾಚಪ್ಪಾಜಿ ಗದ್ದುಗೆಗಳ ಬಳಿ ಜಾತ್ರೆ ನೆರವೇರಿಸುವುದು ತಿಳಿದಿರುವ ವಿಚಾರ. ಪ್ರತಿ ವರ್ಷ ಲಕ್ಷಾಂತರ ಜನ ಶದ್ದೆ -ಭಕ್ತಿಗಳಿಂದ ಧಾರ್ಮಿಕ ಆಚರಣೆಗಳನ್ನು ನಡೆಸುವುದು ರೂಢಿ.

ಹಲವು ವರ್ಷಗಳ ಹಿಂದೆಯೇ ‘ಭಂಗಿ ಸೇವೆ’ ಎನ್ನುವ ಭಂಗಿ ಸೊಪ್ಪಿನ ಧೂಮಪಾನವನ್ನು ಸರಕಾರ ನಿಷೇಧಗೊಳಿಸಿತ್ತು. ಈ ವರ್ಷ ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಎನ್ನುವ ಸಂಸ್ಥೆ ಸಲ್ಲಿಸಿದ ಅರ್ಜಿಯ ಅನ್ವಯ ಹೈಕೋರ್ಟ್ ಈ ಜಾತ್ರೆಗಳಲ್ಲಿ ‘ಪ್ರಾಣಿ ಬಲಿ ನಿಷೇಧ’ ಜಾರಿಯಾಗಬೇಕೆಂದು ನಿರ್ದೇಶನ ಕೊಟ್ಟಿದೆ.

non veg ootaಹಾಗೆಯೇ ಅಲ್ಲಿನ ಪೊಲೀಸ್ ಇಲಾಖೆ ಈ ಕುರಿತು ಕಟ್ಟೆಚ್ಚರ ವಹಿಸಿ ಯಾರು ಮಾಂಸಾಹಾರದ ಅಡುಗೆ ಮಾಡದಂತೆ ಚಿಕ್ಕಲೂರಿನ ಎಲ್ಲ ಮಾರ್ಗಗಳಲ್ಲೂ ಚೆಕ್ ಪೋಸ್ಟ್ ಗಳನ್ನು ಇತ್ತು ಕುರಿಕೋಳಿಗಳನ್ನು ತೆಗೆದುಕೊಂಡು ಹೋಗದಂತೆ ನೋಡಿಕೊಂಡಿದೆ.

ಚಿಕ್ಕಲ್ಲೂರು – ಕಪ್ಪಡಿ ಜಾತ್ರೆಗಳಲ್ಲಿ ಮಾಂಸಾಹಾರವೇ ಪ್ರಧಾನವೂ ಧಾರ್ಮಿಕ ಆಚರಣೆಯ ಪ್ರಸಾದವೂ ಆಗಿರುವುದರಿಂದ ಬಾಡೂಟ ಅಲ್ಲಿ ದೈವೀಕ ಆಚರಣೆಯ ಮುಖ್ಯ ಭಾಗವಾಗಿದೆ. ಗಮನಿಸಬೇಕು ಇಲ್ಲಿ ಯಾವುದೇ ಪ್ರಾಣಿಯನ್ನು ಬಲಿ ನೀಡಿ ಬಿಸಾಡುವುದಿಲ್ಲ. ಅದು ಜನರ ಆಹಾರವಾಗಿ ಬಳಸಲ್ಪಡುತ್ತದೆ.
ಕೋರ್ಟು ಹೀಗೆ ಜನರ ಆಹಾರವನ್ನೇ ನಿಷೇಧ ಮಾಡಿಬಿಟ್ಟರೆ ಹೇಗೆ? ಅದೂ ಅವರ ಧಾರ್ಮಿಕ ಆಚರಣೆಯ ಮುಖ್ಯಭಾಗವನ್ನೇ?
ಇದು ಈ ದೇಶದ ಸಾಮಾನ್ಯ ನಾಗರೀಕನ ಆಹಾರ ಮತ್ತು ಧಾರ್ಮಿಕ ಹಕ್ಕನ್ನು ಮುಟ್ಟುಗೋಲು ಹಾಕಿಕೊಂಡಂತೆ ಆಗುವುದಿಲ್ಲವೇ?

ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರವು ತುರ್ತಾಗಿ ಹೈಕೋರ್ಟ್ ಗೆ ಮನವರಿಕೆ ಮಾಡಿಕೊಡಬೇಕಲ್ಲದೆ ಈ ಎರಡು ಜಾತ್ರೆಗಳಲ್ಲಿ ಮಾಂಸಾಹಾರ/ ಬಲಿಯ ಮೇಲೆ ಹೇರಿರುವ ನಿಷೇಧ ತೆರವುಗೊಳಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ.

ಅವೈದಿಕರ – ಬುಡಕಟ್ಟು ಜನರ ಧಾರ್ಮಿಕ ಹಾಗೂ ಸಾಮಾಜಿಕ ಆಚರಣೆಗಳ ಮೇಲೆ ಎಲ್ಲ ಕಾಲದಲ್ಲೂ ನಡೆಯುತ್ತಲೇ ಬಂದಿರುವ ‘ನಾಗರೀಕತೆ ‘ ಎನ್ನುವ ಹೆಸರಿನ ಏಕಮುಖಿ ಸಂಸ್ಕೃತಿ ಪ್ರಚಾರ ಮತ್ತು ಹೇರಿಕೆಯನ್ನು ನಾವು ಖಂಡಿಸುತ್ತೇವೆ.

‍ಲೇಖಕರು admin

31 March, 2016

13 Comments

  1. Sangeeta Kalmane

    ಸರಕಾರ ತೆಗೆದುಕೊಂಡ ಕ್ರಮ ಸರಿಯಾಗೇ ಇದೆ. ಇದು ಯಾವ ಕೋಮಿಗೆ ಸೇರಿದ ಕ್ರಮವಲ್ಲ. ಅಥವಾ ಇದು ಈ ಜಾತ್ರೆಗೆ ಮಾತ್ರ ಮೊದಲಲ್ಲ. ದೇವರ ಹೆಸರಲ್ಲಿ ಮಾನವ ಮೂಕ ಪ್ರಾಣಿಯನ್ನು ಹಿಂಸಿಸಿ ಕೊಲ್ಲುವ ಆಚರಣೆ ಸಂಪೂರ್ಣ ನಿಲ್ಲಬೇಕು.
    ಹಿಂದೆ ಸಿರಸಿ ಮಾರಿಕಾಂಬಾ ದೇವಿಯ ಜಾತ್ರೆ ನಡೆಯುವಾಗ ಕೋಣವನ್ನು ಬಲಿ ಕೊಡುತ್ತಿದ್ದರು. ಸರಕಾರ ಈ ಕ್ರಮ ನಿಷೇಧಿಸಿತು. ಕೋಣನ ರಕ್ರದಲ್ಲಿ ಅನ್ನ ಕಲೆಸಿ ದೇವಿಗೆ ಅಪಿ೯ಸುವ ರೂಢಿ ಈಗ ಮುಂದುವರೆದಿದೆ. ಅಲ್ಲಿಯ ಜನ ಒಪ್ಪಿಕೊಂಡಿಲ್ಲವೇ?
    ಆದುದರಿಂದ ದಯವಿಟ್ಟು ಸರಕಾರದ ಕ್ರಮಕ್ಕೆ ಬೆಂಬಲ ನೀಡಿ ಮೂಕ ಪ್ರಾಣಿಯ ಜೀವ ಉಳಿಸಿ. ಭಕ್ತಿ ಮುಖ್ಯ, ಬಲಿ ಕೊಡೋದಲ್ಲ.

  2. Sangeeta Kalmane

    ಹಾಗೆಯೆ ಇನ್ನೊಂದು ಉದಾಹರಣೆ:
    ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನಲ್ಲಿರುವ ಚಂದ್ರಗುತ್ತಿ ಜಾತ್ರೆ. ಇಲ್ಲಿ ಪ್ರತಿ ವಷ೯ ಜಾತ್ರೆ ನಡೆಯುತ್ತದೆ. ಅಲ್ಲಿಗೆ ಬರುವ ಕೆಲವು ಭಕ್ತರು ಹೆಣ್ಣನ್ನು ಪೂತಿ೯ ನಗ್ನಗೊಳಿಸಿ ಬೇವಿನ ಸೊಪ್ಪನ್ನು ಸೊಂಟಕ್ಕೆ ಕಟ್ಟಿ ಮೆರವಣಿಗೆಯಲ್ಲಿ ತಂದು ದೇವರಿಗೆ ಹರಕೆ ಒಪ್ಪಿಸುವ ಪದ್ದತಿ ಇತ್ತು. ಜನ ಜಾತ್ರೆಗೆ ಬರುತ್ತಿದ್ದರೊ ಅಥವಾ ನಗ್ನ ಹೆಣ್ಣುಗಳನ್ನು ನೋಡಲು ಬರುತ್ತಿದ್ದರೊ ಗೊತ್ತಿಲ್ಲ. ಬರ್ ಬರುತ್ತಾ ಈ ಜಾತ್ರೆ ಅತ್ಯಂತ ಪ್ರಚಾರ ಪಡೆದುಕೊಂಡು ಪಡ್ಡೆ ಹುಡುಗರ ಚಪಲ ತೀರಿಸಿಕೊಳ್ಳುವ ಮಟ್ಟಕ್ಕೆ ಹೋಯಿತು. ಇದು ಸರಕಾರದ ಗಮನಕ್ಕೆ ಬಂದು ಈ ಪದ್ದತಿ ಸಂಪೂರ್ಣ ನಿಷೇಧ ಹೇರಿತು. ಈಗ ಅಲ್ಲಿಯ ಜನ ಹೊಂದಿಕೊಂಡಿಲ್ಲವೆ?
    ಹಾಗೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಡೆ ಸ್ನಾನ ನಿಷೇಧ.
    ಹೀಗೆ ಹಲವಾರು ಉದಾಹರಣೆಗಳು ಇರಬಹುದು. ಈ ಒಂದು ವಿಷಯದ ಕುರಿತು ಜನರಲ್ಲಿ ವೋಟು ಕೇಳಿ ಗಲಾಟೆ, ದೊಂಬಿ ಆಗಲು ಅವಕಾಶ ಕೊಡದೆ ಜನಾಂಗದವರೆಲ್ಲರೂ ಸೇರಿ ಒಂದು positive ತೀಮಾ೯ನಕ್ಕೆ ಬರಬೇಕೆಂದು ತಮ್ಮಲ್ಲಿ ವಿನಂತಿ.

  3. ಶ್ರೀವತ್ಸ ಕಂಚೀಮನೆ

    ಮಾಂಸ ತಿನ್ನೋ ಚಪಲಕ್ಕೆ ದೇವರ ಅಥವಾ ಜಾತಿಯ ಹೆಸರು ಬೇಕಾ…? ಸಸ್ಯಗಳಿಗೂ ಜೀವ ಇದೆ ಅದನ್ನು ತಿನ್ನೋ ಬ್ರಾಹ್ಮಣರು ನಮ್ಮ ಆಚರಣೆಯನ್ನ ತುಳೀತಾರೆ ಅಂತ ಯುದ್ಧಕ್ಕೆ ನಿಲ್ಬೇಡಿ… ಪ್ರಸಾದವಾಗಿ ತಿನ್ನದೆ ಹೋದರೂ ಕೆಲವು ಗ್ರಾಮ್ಯ ದೇವರುಗಳಿಗೆ ಬ್ರಾಹ್ಮಣರು ಕೂಡ ಬಲಿ ಕೊಡೋದನ್ನ ಕಂಡಿದೀನಿ – ಪ್ರಸಾದ ಅಂತ ತಿನ್ನೋಕೆ ಕಾದು ಕೂರೋ ಮಾಂಸಾಹಾರಿಗಳನ್ನೂ… ಅದನ್ನೂ ವಿರೋಧಿಸ್ತೀನಿ… ಬ್ರಾಹ್ಮಣರ ವಿಶೇಷ ಶ್ರದ್ಧಾ ಕೇಂದ್ರಗಳಲ್ಲಿಯೂ ಪ್ರಾಣಿ ಬಲಿಯನ್ನ ವಿರೋಧಿಸಿ, ನಿಶೇಧಿಸಿದ್ದನ್ನ ಕಂಡಿದೀನಿ… ಹಾಗಾಗಿ ಬಲಿ ನಿಶೇಧಕ್ಕೆ ಅವೈದಿಕರ ಶ್ರದ್ಧೆಯ ಮೇಲಿನ ದಬ್ಬಾಳಿಕೆಯ ಬಣ್ಣ ಸುಳ್ಳು ಆರೋಪ ಅಷ್ಟೇ… ಬಾಡೂಟದ ಆಸೆ ಇದ್ದರೆ ಮನೇಲಿ ಮಾಡಿ ತಿನ್ನಬಹುದಲ್ವಾ… “ಸಾರ್ವಜನಿಕವಾಗಿ” ತಮಟೆ ಜಾಗಟೆ ತೂಗಿ ಪ್ರಾಣಿಗಳನ್ನ ಕೊಂದು ತಿನ್ನಬೇಕಾ… ನಿಮ್ಮ ಆಹಾರವನ್ನು ಖಂಡಿತಾ ವಿರೋಧಿಸ್ತಾ ಇಲ್ಲ… ಆದರೆ ಅದನ್ನ ಹೊಂದುವಲ್ಲಿನ “ಅನವಶ್ಯಕ ಹಿಂಸೆ”ಯನ್ನ ವಿರೋಧಿಸ್ತೀನಿ… ಅದನ್ನ ಪ್ರಸಾದ, ಸಂಸ್ಕೃತಿ ಅಂತ ಬಿಂಬಿಸುವವರು ಮಡೆ ಸ್ನಾನ, ಬೆತ್ತಲೆ ಸೇವೆಯಂಥ ಆಚರಣೆಗಳನ್ನೂ ಹಾಗೇ ಸಂಸ್ಕೃತಿ ಅಂದುಬಿಡ್ತೀರೇನೋ… ಅದೂ ಅವರ ಧಾರ್ಮಿಕ ಶ್ರದ್ಧೆಯ ಭಾವವೇ ತಾನೆ…
    ಯಾಕೆ ಎಲ್ಲದರಲ್ಲೂ ಸ್ವಹಿತಾಸಕ್ತಿಯ ವಾದಗಳು…?
    ಯಾಕೆ ಒಂದು ಒಳಿತಿಗೂ ಅನಗತ್ಯ ವಿರೋಧಗಳು…??
    ಬಾಯಲ್ಲಿ ಜಾತ್ಯಾತೀತತೆಯ ಮಾತು ಆದರೆ ಸಹಕಾರ ಬಯಸೋ ಸರ್ಕಾರದ ಪ್ರತಿ ಕೃತಿಗೂ ಜಾತಿಯ ಬಣ್ಣದ ವಿಮರ್ಶೆ…???
    ಈ ಮನಸ್ಥಿತಿಗಳೇ ಅರ್ಥ ಆಗಲ್ಲ… 🙁

  4. ರಾಜೇಂದ್ರ ಪ್ರಸಾದ್

    ಕಂಚಿನ ಮನೆಯವರಿಗೂ ಕಳ್ಮನೆ ಯವರಿಗೂ ನಮಸ್ಕಾರ :

    * ಮೊದಲಿಗೆ ತಿನ್ನೋ ಚಪಲ : ನೀವೇನೂ ಮನೆಯಲ್ಲಿ ಸಗಣಿ ತಿನ್ನುತ್ತಿರೇನು ? ಅಥವಾ ಬರೀ ನೀರು ಕುಡಿದು ಜೀವಿಸಿದ್ದೇರೇನು ? ನೀವು ಚಾಪಲ್ಯ ಗೆದ್ದದ್ದು ಹೇಗೆ ? ಸ್ವಲ್ಪ ವಿವರಿಸಿ ಸ್ವಾಮಿ. ಮೊಸರು ಅವಲಕ್ಕಿ . ಮಜ್ಜಿಗೆ ಹುಳಿ, ಇತ್ಯಾದಿ ಮಾಡಲು ಕರು ಕುಡಿಯಬೇಕಾದ ಹಾಲನ್ನು ನೀವು ಕಿತ್ತುಕೊಂಡೇ ತಾನೇ ಮಾಡುವುದು. ಆವಾಗ ಹಸುವಿಗೂ ಅದರ ಕರುವಿಗೂ ಮಾಡುವ ಮೋಸ, ನಿಮ್ಮ ಚಾಪಲ್ಯ ಕಂಡು ನಿಮಗೆ ಹೇಸಿಗೆಯಾಗಿಲ್ಲವೇ ?.

    * ನಮ್ಮ ತಟ್ಟೆಯಲ್ಲಿ ಇದೇ ಇರಬೇಕೆಂದು ಹೇಳಲು ನೀವು ಯಾರು ? ಮಾಂಸಾಹಾರ ಮನುಷ್ಯನ ಸ್ವಭಾವಿಕ ಆಹಾರಕ್ರಮಗಳಲ್ಲಿ ಒಂದು. ನಾವು ತಿನ್ನುತ್ತೇವೆ ಬಂದರೆ ನಿಮಗೂ ತಟ್ಟೆಯಲ್ಲಿ ಉಣ ಬಡಿಸುತ್ತೇವೆ. ಜಾತಿ ಕಾರಣಕ್ಕೆ ಪಂಕ್ತಿಯಿಂದ ಎಬ್ಬಿಸುವ ದರಿದ್ರರು ನಾವಲ್ಲ.
    ನೀವು ನಿಮ್ಮ ಜಾತ್ರೆಯಲ್ಲೊ ಮನೆಯಲ್ಲೊ ಬೇಕಾದ್ದು ಮಾಡಿ ತಿನ್ನಿರಿ.. ಎಂದಾದರೂ ನಾವು ಅದನ್ನು ಇಣುಕಿ ನೋಡಿ ಇದು ತಿನ್ನಿ ಇದು ಬೇಡ ಎಂದಿದ್ದು ಉಂಟೇ ?!

    * ಮೇಲೆ ಉಲ್ಲೇಖಿಸಿರುವ ಎರಡೂ ಜಾತ್ರೆಗಳಲ್ಲಿ ಎಲ್ಲೂ ಬಲಿಪೀಠವಿಲ್ಲ, ಬಲಿಗಂಬವೂ ಇಲ್ಲ ಇಲ್ಲಿ ಪ್ರಾಣಿಯನ್ನು ದೇವರಿಗೆ ಬಲಿ ಕೊಡುವುದೂ ಇಲ್ಲ.
    ಜಾತ್ರೆ ಬರುವ ಲಕ್ಷಾಂತರ ಜನ ಅವರ ಬಿಡಾರಗಳಲ್ಲಿ ಅಡುಗೆ ಮಾಡುತ್ತಾರೆ.. ಊಟ ಮಾಡುತ್ತಾರೆ. ಬಿಡಾರದ ಬಳಿ ಬಂದ ಎಲ್ಲಾ ಜಾತಿಯ ಜನರಿಗೂ ತಮ್ಮ ಜೊತೆಯೆ ಊಟಕ್ಕೆ ಬಡಿಸುತ್ತಾರೆ. ಇಲ್ಲಿಯ ದೇವರಿಗೆ ಅಲಂಕಾರ, ರಥಗಳಿಲ್ಲ. ದುಡ್ಡು ಸುಲಿಯುವ ಪುರೋಹಿತರು ಮೊದಲೇ ಇಲ್ಲ. ಇಲ್ಲಿ ಯಾರೂ ವೈಭವದಿಂದ ಬದುಕುವಂತಿಲ್ಲ. ಎಲ್ಲರೂ ಸಮಾನವಾಗಿ ಬದುಕಬೇಕು. ಬಿಡಾರವನ್ನು ಹಾಕಿಕೊಂಡೇ ಜಾತ್ರೆಯ ದಿನಗಳಲ್ಲಿ ಬದುಕಬೇಕು.

    ಕಡೆಗೆ ಒಂದು ಮಾತು :
    ನಮ್ಮ ಜಾತ್ರೆಯಲ್ಲಿ ಎಲ್ಲ ಜಾತಿಯ ಜನರೂ ಇದ್ದಾರೆ.
    ಎಲ್ಲರೂ ಜನರೂ ಮಾಂಸ ತಿನ್ನುತಾರೆ.
    ಅದು ನಮ್ಮ ಆಹಾರ ಕ್ರಮ.
    ಇದನ್ನು ವಿರೋಧಿಸುವ ನಿಮಗೆ ಆತ್ಮ ಸಾಕ್ಷಿ ಅನ್ನುವುದು ಇದ್ದರೆ ಮೊದಲು ಹಾಲಿನ ಪದಾರ್ಥ ಬಳಸುವುದು ಬಿಡಿ,ನಿಮ್ಮ ಜಾನುವಾರಗಳಿಗೆ ನಿಮ್ಮ ಕೊಟ್ಟಿಗೆಯಿಂದ ಸ್ವಾತಂತ್ರ್ಯ ಕೊಡಿ ಇಲ್ಲವಾದರೆ ನಿಮ್ಮ ತಟ್ಟೆಯಲ್ಲಿರುವುದನ್ನು ತಿಂದು ಬದುಕಿ ಬೇರೆಯವರ ತಟ್ಟೆ ನೋಡಲು ಹೋಗಬೇಡಿ

    • ಗುಡ್ಡ

      >>ನೀವೇನೂ ಮನೆಯಲ್ಲಿ ಸಗಣಿ ತಿನ್ನುತ್ತಿರೇನು ?
      ಛೇ,ಇದೇನು ಸಭ್ಯತೆ ?

    • ರಾಜೇಂದ್ರ ಪ್ರಸಾದ್

      ಶಬ್ದದಲ್ಲಿ ಸಭ್ಯತೆಯನ್ನು ಹುಡುಕುವ ಬದಲು ‘ಮಾಂಸಾಹಾರ ಎನ್ನುವುದು ಚಪಲ’ ಎಂದ ಮಾತಿನಲ್ಲಿ ಹುಡುಕಿದ್ದರೇ ಸಗಣಿ ಎಲ್ಲಿದೆ ಎನ್ನುವುದು ನಿಮಗೆ ತಿಳಿಯುತ್ತಿತ್ತು. ನಿಮ್ಮ ಅಜ್ಞಾನಕ್ಕೆ ಮರುಗುವೆನು.
      ನಮಸ್ಕಾರ.

  5. SP

    Good decision

  6. ಶ್ರೀವತ್ಸ ಕಂಚೀಮನೆ

    ನಮಸ್ಕಾರ ರಾಜೇಂದ್ರ:
    ಮೊದಲಾಗಿ ನಾನೆಲ್ಲೂ ನಿಮ್ಮ ಆಹಾರ ಕ್ರಮವನ್ನ ವಿರೋಧಿಸಿಯೇ ಇಲ್ಲ. ಆದರೆ ಅದನ್ನು ಹೊಂದುವಲ್ಲಿನ “ಅನಗತ್ಯ” ಹಿಂಸೆಯನ್ನ ಮಾತ್ರ ವಿರೋಧಿಸಿದ್ದೇನೆ. ಮುಂದೆಯೂ ವಿರೋಧಿಸುತ್ತೇನೆ ಕೂಡ.
    ಅಲ್ಲದೇ ತಾಯೊಂದಿಗೆ ಕರುವನ್ನೂ ಸಾಕಿ, ಅದರ ಪೂರಕ ಆಹಾರವನ್ನೇ ಅದಕ್ಕೆ ಒದಗಿಸಿ ಪರ್ಯಾಯವಾಗಿ ತಾಯ ಹಾಲನ್ನು ಬಳಸಿಕೊಳ್ಳುವುದಕ್ಕೂ ಹಾಲು ಕರೆವ ತಾಯನ್ನೇ ಕಡಿದು ತಿನ್ನುವುದಕ್ಕೂ ತುಂಬಾ ವ್ಯತ್ಯಾಸ ಇದೆ ಅನ್ನುವುದನ್ನ ನಿಮಗೆ ವಿವರಿಸಬೇಕಾ ನಾನು.
    ಅಲ್ಲದೇ ಬ್ರಾಹ್ಮಣರು ದೇವರ ಹೆಸರಲ್ಲಿ ಬಲಿ ಕೊಟ್ಟರೂ ಅದನ್ನೂ ನಾನು ವಿರೋಧಿಸ್ತೇನೆ. ಅದನ್ನೂ ಅಲ್ಲಿ ಹೇಳಿದ್ದೇನೆ ಕೂಡ.
    ನೀವಂದಂತೆ ಇದುವರೆಗೂ ಅನ್ನ ಮತ್ತು ಸ್ನೇಹವನ್ನ ಹಂಚಿಕೊಳ್ಳುವಾಗ ಜಾತಿಯನ್ನು ಕೇಳಿದ್ದಿಲ್ಲ ನಾನು. ಜಾತಿಯ ಕಾರಣಕ್ಕೆ ಅನ್ನವಿಲ್ಲ ಅಂದದ್ದೂ ಇಲ್ಲ.
    ಅಲ್ಲದೇ ನೀವನ್ನೋ ತುಳಿಯಲ್ಪಟ್ಟವರ ನಡುವಿನ ಒಳ ಜಾತಿ ಪಂಗಡಗಳ ನಡುವಿನ ಅವಾಂತರಗಳನ್ನು ನಿಮ್ಮಷ್ಟಲ್ಲದಿದ್ದರೂ ಒಂದಿಷ್ಟು ಕಂಡಿದ್ದೇನೆ ಕೂಡ.
    ದೇವರ ಹೆಸರಲ್ಲಿ ಧನ ಸುಲಿಯೋ, ಅನ್ನವನ್ನು ಚೆಲ್ಲಿ ಸಂಭ್ರಮಿಸೋ ಪುರೋಹಿತರಿಗೂ, ಅದೇ ದೇವರ ಹೆಸರು ಹೇಳಿ ಮೂಗ ಪ್ರಾಣಿಯ ಪ್ರಾಣ ಸುಲಿದು ಅಬ್ಬರದ ತುಳಿತದ ಮಾತಾಡೋ ನಿಮ್ಮಗಳಿಗೂ ವ್ಯತ್ಯಾಸ ಕಾಣ್ತಾ ಇಲ್ಲ ನಂಗೀಗ.
    ಪ್ರತಿಕ್ರಿಯೆ ನೀಡುವ ಮುನ್ನ ಮತ್ತೊಮ್ಮೆ ನನ್ನ ಪ್ರತಿಕ್ರಿಯೆಯನ್ನ ಪೋರ್ತಿ ಓದಿ ಅದರ ಒಟ್ಟು ಆಶಯ ಅರಿತು ಮಾತಾಡಿದರೆ ಚಂದ ಎಂದು ಬುದ್ಧಿವಂತರಾದ ನಿಮ್ಮಂಥವರಿಗೆ ನಾನು ಹೇಳಬೇಕಾಗಿ ಬಂದದ್ದು ವಿಶಾದವೆನ್ನಿಸುತ್ತೆ.
    ಮತ್ತೊಮ್ಮೆ ಹೇಳುತ್ತೇನೆ ಸರಿಯಾಗಿ ಕೇಳಿಸಿಕೊಳ್ಳಿ: ನಾನು ವಿರೋಧಿಸುತ್ತಿರುವುದು ಮಾಂಸಾಹಾರವನ್ನಲ್ಲ; ಅದರ ಹಿಂದಿನ ಅನಗತ್ಯ ಹಿಂಸೆಯನ್ನ ಅಷ್ಟೇ.
    ಇದಕ್ಕಿಂತ ಹೆಚ್ಚಿನ ವಿವರಣೆ ಮತ್ತು ಮಾತು ಅಗತ್ಯ ಅನ್ನಿಸುತ್ತಿಲ್ಲ ನಂಗೆ. ಆಡಿದರೆ ಅದು ಮಾನಸಿಕ ದಾರಿದ್ಯ್ರ ಅನ್ನಿಸುತ್ತೆ.
    ಶುಭವಾಗಲಿ…_/_

  7. Sangeeta Kalmane

    ಕಂಚೀಮನೆಯವರೆ ಸರಿಯಾಗಿದೆ ನಿಮ್ಮ ಉತ್ತರ. ನನ್ನ ಅಭಿಪ್ರಾಯ ಕೂಡ ಇದೇ.

  8. ರಾಜೇಂದ್ರ ಪ್ರಸಾದ್

    ಎಲ್ಲರಿಗೂ : ಚಾಪಲ್ಯ ಎನ್ನುವ ಮಾತಿನಲ್ಲೇ ಮಾನಸಿಕ ದರಿದ್ರ್ಯವಷ್ಟೇ ಅಲ್ಲದೆ ಬೌದ್ದಿಕ ದಾರಿದ್ರ್ಯವೂ ತುಂಬಿರುವುದು ಕಾಣುತ್ತಿದೆ.
    ಹಾಲು ಕರುವಿನ ಸ್ವತ್ತು ಮನುಷ್ಯನ್ನದ್ದು ಅಲ್ಲ. ಹಾಗೆ ನೋಡಿದ್ರೆ ಕಡಿಯುವುದು, ಕದಿಯುವುದು ಎರಡೂ ಹಿಂಸೆಯ ಪ್ರತ್ಯೇಕ ಸ್ವರೂಪಗಳು.
    ಒಂದು ಸ್ವರೂಪವನ್ನು ತಮ್ಮ ಸ್ವಾರ್ಥಕ್ಕೆ ಸಮರ್ಥಿಸುವುದು, ಮತ್ತೊಂದನ್ನು ವಿರೋಧಿಸುವುದು ಮತಿಗೇಡಿತನದ ಲಕ್ಷಣ.
    ಅಲ್ಲಿನ ಪ್ರಾಣಿಯನ್ನು ಆಹಾರಕ್ಕೆ ಬಳಸಾಗುತ್ತದೆಯೇ ಹೊರತು ಸಾರ್ವಜನಿಕವಾದ ಹಿಂಸೆಗೆ, ಆಟಕ್ಕೆ, ಮೆರವಣಿಗೆ ಬಳಸುವುದಿಲ್ಲ ಎಂದು ಅದಾಗಲೇ ನಾನು ವಿವರಣೆ ಕೊಟ್ಟ ಮೇಲೂ ಸಮರ್ಥನೆ ಮಾತನ್ನು ಆಡುವರಲ್ಲಿ ಅಂಧ ಶ್ರದ್ಧೆ ಕಾಣುತ್ತಿದೆಯೇ ಹೊರತು ಸಾಮಾಜಿಕ ಕಾಳಜಿ ಇನಿತೂ ಇಲ್ಲ.
    ಮಾಂಸಾಹಾರ ಎನ್ನುವುದು ಹಿಂಸೆಯಲ್ಲ. ಅದು ಪ್ರಾಕೃತಿಕ ಸಮತೋಲನದ ನಡೆ. ಅದು ನಿಸರ್ಗದತ್ತ ಎಂಬುದನ್ನೂ ಮತ್ತೆ ಮತ್ತೆ ಹೇಳಿ ಅರ್ಥ ಮಾಡಿಸುವುದು ಕಷ್ಟ. ಒಂದು ವೇಳೆ ಜಗತ್ತು ಮಾಂಸಾಹಾರವನ್ನೆ ನಿಲ್ಲಿಸಿ ಬಿಟ್ಟರೆ ಭೂಮಿಯಲ್ಲಿ ಬದುಕುವ ದುಸ್ತರ ಸ್ಥಿತಿಯ ಅರಿವು ಕೆಲ ಜನರಿಗೆ ಇಲ್ಲದಿರುವುದು. ಇವತ್ತಿನ ವಿಪರ್ಯಾಸ.
    ನಮಸ್ಕಾರ.

  9. ಆಶಾದೀಪ

    ವಿಚಾರವನ್ನು ನೇರ ಹಾಗೂ ಸ್ಪಷ್ಟವಾಗಿ ಹೇಳಬೇಕು ಅಥವಾ ಅರ್ಥೈಸಬೇಕು ಅಥವಾ ಚರ್ಚಿಸಬೇಕು.. ಏನನ್ನೋ ಉದ್ದೇಶಿಸಿ, ಇನ್ನೇನನ್ನೂ ಪ್ರಶ್ನಿಸಿ, ಮತ್ತೇನನ್ನೋ ಹೀಯಾಳಿಸಿ, ದೂರುವ ಮನಸ್ಥಿತಿಯಿಂದ ಯಾವ ಚರ್ಚೆಯು ಪರಿಪೂರ್ಣವಾಗೋದಿಲ್ಲ. ಅವರು ಹಾಲು ಕುಡಿಯೋದು ತಪ್ಪಾದ್ರೆ, ಇವ್ರು ಮಾಂಸ ತಿನ್ನೋದು ತಪ್ಪು ಇಲ್ಲದಿದ್ರೆ ಸರಿ ಅನ್ನೋದು. ಒಂದೇ ಧ್ವಾರದ ಎರಡು ಬಾಗಿಲಲ್ಲಿ ತೆರೆದಿರುವ ಒಂದು ಬಾಗಿಲನ ಬಗ್ಗೆ ಒಬ್ಬರು, ಮುಚ್ಚಿರುವ ಮತ್ತೊಂದು ಬಾಗಿಲ ಬಗ್ಗೆ ಮತ್ತೊಬ್ಬರು ವಿತಂಡವಾದ ಮಾಡಿದ ಹಾಗಷ್ಟೆ… ಜಾತಿ, ಬಣ್ಣ, ವರ್ಗದ ತಾರತಮ್ಯದ ಬುಜದ ಹಿಂದೇ ನಿಂತೂ, ಕಾಲಮಾನದ ಚರ್ಚೆಯಡಿ, ಗುರಿಗೆ ಗುಂಡು ಹೊಡೆಯೋದರಿಂದ ಅವರರವರ ಸ್ವಾರ್ಥ ಸಾಧನೆ ಯಾಗುತ್ತದೆ. 

    ಇನ್ನೂ.. ವಿಚಾರಕ್ಕೆ ಬರೋದಾದ್ರೆ, ಮಾಂಸಹಾರ ಸೇವಿಸಬೇಕಾ ಬೇಡವಾ ಅನ್ನೋದು ಅವರವರ ಇಚ್ಛೆ. ಬಹಿರಂಗವಾಗಿ ಪ್ರಾಣಿಬಲಿ ಮಾಡಬಾರದು ಸರಿ ಅನುಸರಿಸೋಣ. ಯಾರು ಇಲ್ಲದ ಜಾಗದಲ್ಲಿ ಕುರಿ ಕೋಳಿ ತಿನ್ನಲು ಅಡ್ಡಿಯಿಲ್ಲ.. ಜಾತ್ರೆ ಅಂತಹ ಸಂದರ್ಭದಲ್ಲೇ ಮಾಂಸಾಹಾರ ತಿನ್ಮೇಡಿ ಮನೇಲಿ ತಿನ್ಕಳ್ಳಿ ಅನ್ನೋದು ಶುದ್ಧ ತಪ್ಪೇ..ಇಲ್ಲಿ ಮುಖ್ಯವಾಗಿ ಯುಗಾದಿಯಲ್ಲಿ ಸಿಹಿಹಾಗೂ ಖಾರ ಅನ್ನೋ ಎರಡು ದಿನಗಳು ಇರುತ್ತವೆ. ಆಯಾ ದಿನ ಆಯಾ ಸಂಭ್ರಮವೇ ಬೇರೆ. ಅದೇ ಥರ, ಜಾತ್ರೆಯಲ್ಲಿ ಕೂತು ಮಾಂಸಾಹಾರ ತಿನ್ನೋದು ಕೂಡ ಒಂದು ಸಂಭ್ರಮವೇ..ಅದನ್ನು ಕಳೆದುಕೋ ಅನ್ನೋದು ಸರಿಯಲ್ಲ..ಯಾರಿಗೋ ಇಷ್ಟವಾಗಲ್ಲ ಅಂತಾ ನಾವು ಬದಕೋದನ್ನೂ ಬಿಡೋದಕ್ಕಾಗಲ್ಲ..ಹಾಗಿದ್ದ ಮೇಲೆ ಯಾರಿಗೋ ಇಷ್ಟವಾಗಿಲ್ಲ ಅಂತಾ ನಮ್ಮ ಆಚರಣೆಗಳನ್ನ ಬಿಡೋದಕ್ಕಾಗುತ್ತಾ ಅನ್ನೋ ಪ್ರಶ್ನೆ ಕೂಡ ಎದುರಾಗುತ್ತೆ.

    ಮಾರಮ್ಮನ ಜಾತ್ರೆಗಳಲ್ಲಿ ಮೊದಲ ದಿನ ವೆಜ್ ಆದ್ರೆ, ಎರಡನೇ ದಿನ ನಾನ್​ವೆಜ್​ ಇರುತ್ತೆ. ಇಲ್ಲಿ ದೇವರನ್ನೇ ಒಂದಿನ ವೆಜ್​ ಮತ್ತೊಂದಿನ ವೆಜ್​ ಅಂತಾ ಪಾಲ್​ ಮಾಡಿಕೊಳ್ಳಲಾಗಿದೆ. ಸೌಹಾರ್ಧಯುತವಾಗಿ ಒಬ್ಬರಿಗೊಬ್ಬರು ತಲೆಕೆಡಿಸಿಕೊಳ್ಳದೇ ತಮ್ಮದೇ ರೀತಿಯಲ್ಲಿ ದೇವರನ್ನ ಆರಾಧಿಸ್ತಾರೆ. ಪೂಜಿಸ್ತಾರೆ. ಅವರು ಕೀರು ಪಾಯಸ ತಿಂದ್ರೆ, ಇವ್ರು ಕೋಳಿ ಬಲಿಕೊಟ್ಟು ಕಬಾಬು, ಕೀಮಾ ಅಂತಾ ಮಾಡ್ಕೊಂಡು ತಿಂತಾರೆ. ಇಷ್ಟು ವರ್ಷ ಈ ಸಾಮರಸ್ಯಕ್ಕೆ ಬಾರದ ತೊಂದ್ರೆ ಈಗ್ಯಾಕೆ ಬರುತ್ತಿದೆ. ಪ್ರಾಣಿಗಳ ಮೇಲೆ ದಯೆ ಇರೋರು ಪ್ರಾಣಿಗಳ ಭಾವನೆಗಳನ್ನೂ ಅರ್ಥಮಾಡಿಕೊಳ್ತಿದ್ದಾರಾ.? ಪ್ರಾಣಿಗಳನ್ನ ಉಳಿಸಲು ಹೊರಟವರಿಗೆ ರಸ್ತೆ ಪಕ್ಕದಲ್ಲೇ ಮಟನ್​ ಕಡಿಯವಾಗ ಹಿಂಸೆಯಾಗಲಾರದೇ..ದನಗಳನ್ನ ರೋಡಲ್ಲಿ ಕಡಿದು ಚರ್ಮ ಸುಲಿಯುವಾಗ ಹಿಂಸೆಯನಿಸಲಾರದೇ? ಮನುಷ್ಯನಂತೂ ಕಟುಕ ಬಿಡಿ, ತಮ್ಮದೇ ಸಹಪಾಠಿಯ ಇಡೀ ಕಳೆಬರವನ್ನು ನೇತುಹಾಕಿರೋದನ್ನು ನೋಡೋ ಕುರಿಗಳಿಗೆ ಕೋಳಿಗಳಿಗೆ ಏನೇನಿಸ್ತುತ್ತೆ ಅಂತಾ ಪ್ರಾಣಿ ದಯೆ ಉಳ್ಳವರು ಯೋಚಿಸಿಬೇಕಿದೆ. ಇವ್ರುಗೆ ಬೇಸರ ಅಗುತ್ತೆ ಅಂತಾ ಮಾಂಸಾ ತಿನ್ಬೇಡಿ ಅನ್ನುವವರು ಹಾಗಂತ ಪ್ರಚಾರ ಮಾಡಲಿ ಅದು ಅವರ ಇಷ್ಟ..ಅದನ್ನ ಪಾಲಿಸಲೇ ಬೇಕು ಅಂದ್ರೆ ಮಾತ್ರ ಕಷ್ಟ ಕಷ್ಟ..

    ಮನುಷ್ಯ ಎಲ್ಲವೂ ತನ್ನದೇ ಸ್ಬತ್ತು ಅಂತ ತಿಳಿದುಕೊಂಡವನು. ಅಲ್ಲಿ ಒಂದಷ್ಟು ಪಾಲು ಮಾಡಿಕೊಂಡಿದ್ಧಾನೆ..ನಾವದನ್ನು ಪಾಲಿಸ್ತುತ್ತಿದ್ದೇವೆ. ಸಂಪ್ರದಾಯ, ಪದ್ದತಿಯ ಹೆಸರಲ್ಲಿ ನಮ್ಮ ಬದುಕಿನ ಆಚರಣೆ ನಡೆಯುತ್ತಿದೆ. ಅದಕ್ಕೆ ಧಕ್ಕೆ ಮಾಡಿದ್ರೆ, ಪ್ರತಿಫಲವಾಗಿ ಸಿಗೋದು ವಿರೋಧ ಮತ್ತು ಆಕ್ರೋಶವಷ್ಟೆ..ಯಾರಿಗೆ ಪ್ರಾಣಿಬಲಿ ಮಾಂಸಾಹಾರ ಇಷ್ಟವಾಗೋದಿಲ್ವೋ ಅವರು ಅಂತಹ ಜಾತ್ರೆಗಳಿಗೆ ಹೋಗದಿರಲಿ, ಮಾಂಸಾಹಾರ ಸೇವೆನೆಯನ್ನು ನೋಡದಿರಲಿ, ಪ್ರಾಣಿಬಲಿಯಾಗುವಾಗ ಕಣ್ಮುಚ್ಚಿಕೊಳ್ಳಲಿ.ಕಣ್ತೆರೆಯುವಷ್ಟರಲ್ಲಿ ಬಲಿ ಮುಗಿದಿರುತ್ತದೆ. ಆಗ ಅವರ ಮನಸ್ಸಿಗೂ ನೋವಾಗೋದಿಲ್ಲ. ವಿರೋಧ ಅನ್ನಿಸುವುದಿಲ್ಲ. ನೂರು ಜನ್ರ ಸಮಸ್ಯೆಗೆ, ಲಕ್ಷ ಜನ್ರೇ ತಮ್ಮ ಆಚರಣೆಗಳನ್ನು ಬದಲಾಯಿಸಿಕೊಳ್ಳಬೇಕು ಅನ್ನೋದು ಮೂಡನಂಭಿಕೆಯ ಮೌಢ್ಯತೆಗಿಂತ ಅನರ್ಥವೆನಿಸಿಕೊಳ್ಳುತ್ತದೆ. 
    ಇವತ್ತು ಯಾರು ಮಾಂಸ ತಿನ್ನುತ್ತಿಲ್ಲ ನೂರಕ್ಕೆ ಕನಿಷ್ಟ ಎಂಬತ್ತು ಮಂದಿ ತಿಂತೀರಬಹುದಾ..ನಾನ್​ ತಿನ್ನಲ್ಲಾ ಅನ್ನೋರು ಕೂಡ,ಬಾಡಿನ ರುಚಿ ಹೇಳುಬಲ್ಲರು ಅನ್ನೋದು ಬಹಳಷ್ಟು ಜನ್ರಿಗೆ ಗೊತ್ತಿರುತ್ತೆ. ಅದರ ಚರ್ಚೆಯ ಅಗತ್ಯ ಇಲ್ಲಿಲ್ಲಿ. ಆದ್ರೇ ಹೇಳುತ್ತಿರುವ ಉದ್ದೇಶ ಇಷ್ಟೆ, ಮಾಂಸಹಾರ ಪದ್ಧತಿಯಲ್ಲ. ಆಹಾರದ ವಿಭಿನ್ನ ರುಚಿ..ಅದನ್ನು ಯಾರು ಬೇಕಾದ್ರೂ ಸೇವಿಸಬಹುದು.ಒಟ್ಟಾರೆ ಒಂದೀಡಿ ಸಮುದಾಯ ಒಟ್ಟಿಗೆ ಕುಳಿತು ಮಾಂಸ ಸೇವಿಸ್ತೇವೆ ಅಂದ್ರೆ, ಅಲ್ಲೊಂದು ಮದುವೇನೋ, ಬೀಗರ ಊಟವೋ ನಡತಿದೆ ಅಂತಾ ಸುಮ್ಮನಾಗಿ

  10. Sunil kumar ms

    ದೇವರಿಗೆ ಮಾಂಸದ ನೈವೇದ್ಯ ಇಡುವಾಗ ಬಾಡೂಟ ಇಡುವುದು ತಪ್ಪಲ್ಲ. ಜಾತಿಗೂ ಆಹಾರ ಪದ್ದತಿಗೂ ಒಂದಕ್ಕೂ ಸಂಬಂಧವಿಲ್ಲ.ಬ್ರಾಹ್ಮನರು ಮಾಂಸವನ್ನು ತಿನ್ನುತ್ತಾರೆ.ಮೊದಲು ಸರಕಾರ ಎಲೆಕ್ಷನ್ ಟೈಮಲ್ಲಿ ಬಾಡೂಟ ಇಡುವುದು ನಿಲ್ಲಿಸಲಿ. ಆಹಾರ ತಿನ್ನುವ ಇಚ್ಛೆ
    ಹಕ್ಕು ಯಾರಿಂದಲು ಕಿತ್ತಿಕೂಲ್ಲಲು ಆಗುವುದಿಲ್ಲ.

  11. ಕಲಾವತಿ.ಎಸ್

    ಯಾವುದೇ ಆಹಾರ ಯಾರನ್ನೂ ಬದಲಾಯಿಸುವುದಿಲ್ಲ, ಅವರವರ ಸಂಸ್ಕಾರಗಳಷ್ಟೇ ಅವರವರ ನಡವಳಿಕೆಗಳಿಗೆ ಕಾರಣವೆಂಬ ಸತ್ಯದ ಅರಿವಿದ್ದವರು ಇಂತಹ ಅಪ್ರಬುದ್ದ ನಿರ್ಣಯಗಳನ್ನು ಕೈಗೊಳ್ಳುವುದಿಲ್ಲ. ಜಾತ್ರೆಗಳು ಮತ್ತು ಊರ ಹಬ್ಬಗಳು ನಮ್ಮ ಸಾಂಸ್ಕೃತಿಕ ಆಚರಣೆಗಳು, ಇಲ್ಲಿ ವೈದಿಕತೆಯ ಅಧಿಪತ್ಯದ ನೆರಳಾಗಲಿ, ಗರ್ಭಗುಡಿ ಸಂಸ್ಕೃತಿಯಾಗಲೀ ಅನಾವಶ್ಯಕ ಮತ್ತು ಅಪ್ರಸ್ತುತ. ನೀಗಬೇಕಿರುವ ಸಮಸ್ಯೆಗಳು ಎಸ್ಟೊ ಇವೆ. ಸಮಸ್ಯೆಯಲ್ಲದ ಆಚರಣೆಗಳಲ್ಲಿ ಸಮಸ್ಯೆ ಹುಡುಕುವುದು ಬೇಡ…… ದೊಡ್ಡತನ, ಪ್ರಬುದ್ಧತೆ ಮೆರೆಯುವ ಮನಸ್ಸುಗಳು ಬೇಕಸ್ಟೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading