ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಬಾಡೂಟದ ಜೊತೆಗೆ ಗಾಂಧಿ ಜಯಂತಿ’ ಪುಸ್ತಕ ಅವಲೋಕನ

-ಡಾ.ಎಸ್.ಬಿ.ಜೋಗುರ

‘ಬಾಡೂಟದ ಜೊತೆಗೆ ಗಾಂಧಿ ಜಯಂತಿ’ ಇದು ಲಡಾಯಿ ಪ್ರಕಾಶನದವರು ಪ್ರಕಟಿಸಿರುವ ಬಿ.ಎಂ ಬಶೀರ್ ಅವರ ಬಿಡಿ ಲೇಖನಗಳ ಕೃತಿ. ಒಟ್ಟು 28 ಬೇರೆ ಬೇರೆ ವಿಷಯಗಳನ್ನಾಧರಿಸಿದ ಇಲ್ಲಿಯ ಲೇಖನಗಳು ಭಾರತೀಯ ಸಮಾಜದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರದ ಸಹವಾಸದಲ್ಲಿ ಅದ್ದಿ ತೆಗೆದಂತಿವೆ. ಇಲ್ಲಿಯ ಜಾತಿ, ಧರ್ಮ, ಭಾಷೆ, ಆಹಾರ, ವೇಷ ಭೂಷಣ ಮುಂತಾದವುಗಳ ಪಲಕಿನೊಂದಿಗೆ, ಆಯಾ ಸಂದರ್ಭಕ್ಕೆ ತಕ್ಕ ಹಾಗೆ ಬರೆಯಿಸಿಕೊಂಡ ಬರಹಗಳಿವು. ಸಮಾಜವೊಂದರ ನಗ್ನತೆಯನ್ನು ನಿಚ್ಚಳವಾಗಿ ತೋರುವ ಶುಭ್ರವಾದ ಕನ್ನಡಿಯಂತೆ ಇಲ್ಲಿಯ ಬರಹಗಳು ಕೆಲಸ ಮಾಡುತ್ತವೆ. ಕೆಲ ಲೇಖನಗಳ ವಿಷಯ ಪುನರಾವತರ್ಿತವಾದಂತೆನಿಸಿದರೂ ಮನುಷ್ಯನ ಮರೆಗುಳಿತನದ ಎಚ್ಚರದ ಹಿನ್ನೆಲೆ ತಾನೇ ತಾನಾಗಿ ಈ ಬರಹಗಳಿಗೆ ಮೈಗೂಡಿಕೊಂಡಿರುವುದಿದೆ. ಲೇಖಕನೇ ಖುದ್ದಾಗಿ ಹೇಳಿಕೊಂಡಂತೆ ‘ಇಲ್ಲಿರುವ ಎಲ್ಲ ಲೇಖನಗಳು ಪತ್ರಿಕೆಗಳಿಗಾಗಿ ಬರೆದವುಗಳು. ಪತ್ರಿಕಾ ಬರಹಗಳಿಗಿರುವ ಎಲ್ಲ ಮಿತಿಗಳನ್ನು ಇಲ್ಲಿರುವ ಲೇಖನಗಳು ತನ್ನದಾಗಿಸಿಕೊಂಡಿವೆ’ ಎಂದು ಹೇಳಿರುವುದರಿಂದ ಮತ್ತೆ ಇಲ್ಲಿಯ ಲೇಖನಗಳ ಮಿತಿಯ ಪ್ರಸ್ತಾಪ ಅನಗತ್ಯವೆನಿಸುತ್ತದೆ.

ಅಬ್ಬೂ ಕಾಕಾನ ಗೂಡಂಗಡಿಯ ಚಾ ಮತ್ತು ಅಲ್ಲಿಯ ರಾಜಕೀಯ ಚಚರ್ೆಯೊಂದಿಗೆ ರೂಪಿತವಾದ ಅನೇಕ ವ್ಯಕ್ತಿತ್ವಗಳ ಬಗೆಗಿನ ವಿವರಣೆಯೊಂದಿಗೆ ಆರಂಭವಾಗುವ ಲೇಖನ ಆ ಗೂಡಂಗಡಿ ಕಂ ಕ್ಲಾಸ್ ರೂಂ ಆಗಿ ಅದು ಕೆಲಸ ಮಾಡಿದ ಬಗೆಯನ್ನು ಲೇಖಕರು ವಿವರಿಸುತ್ತ ‘ಆ ಗೂಡಂಗಡಿಯಲ್ಲಿ ದೊರೆಯುತ್ತಿದ್ದ ನೀರು ದೋಸೆ, ಕಲ್ತಪ್ಪವನ್ನು ಮೀನು ಸಾರಿನೊಂದಿಗೆ ಬಡಿಸಿದರೆಂದರೆ..’ ಎನ್ನುತ್ತಲೇ ಓದುಗರ ನಾಲಿಗೆಯನ್ನೂ ನೀರಾಗಿಸುತ್ತಾರೆ. ‘ಯಕ್ಷರಂಗದ ರಾಕ್ಷಸ ವೇಷಗಳು’ ಎನ್ನುವ ಲೇಖನದಲ್ಲಿ ಅವರು ಈ ಕಲೆ ಕ್ರಮೇಣವಾಗಿ ಮೇಲಿನ ಸ್ತರಗಳ ಸ್ವತ್ತಾಗಿ ಅದು ವೈದಿಕೀಕರಣ ಮತ್ತು ಕೋಮುವಾದೀಕರಣಗೊಂಡ ಬಗ್ಗೆ ಖೇದವನ್ನು ವ್ಯಕ್ತಪಡಿಸುತ್ತಲೇ ಅದು ಕಮಶರ್ಿಯಲ್ ಆದ ಬಗ್ಗೆಯೂ ಬೇಸರಿಸುತ್ತಲೇ ‘ಕಮಶರ್ಿಯಲ್ ಆಗಿರುವುದು ಹಸಿವಿನ ಕಾರಣದಿಂದ ಆಗಿದ್ದರೆ ಅದನ್ನು ಯಾವ ಕಾರಣಕ್ಕೂ ಪ್ರಶ್ನಿಸುವಂತಿಲ್ಲ.ಕಲೆಗಿಂತ ದೊಡ್ಡ ಸತ್ಯ ಬದುಕು. ಆದರೆ ಎರಡನೆಯದನ್ನು ನಾವು ಪ್ರಶ್ನಿಸಲೇ ಬೇಕಾಗುತ್ತದೆ’ ಎನ್ನುವುದು ಲೇಖಕರ ಮನದಾಳದ ನೋವಿನ ಅಭಿಪ್ರಾಯವೂ ಹೌದು. ‘ಮೂತ್ರ ರಾಜಕೀಯ’ ಎನ್ನುವ ಲೇಖನದಲ್ಲಿ ದನದ ಮೂತ್ರವನ್ನು ಔಷಧಿಯಾಗಿ ಬಳಸುವ ಬಗ್ಗೆ ತಕರಾರು ಎತ್ತುವ ಲೇಖಕರು ‘ ವೈದ್ಯರ ಕೆಲಸವನ್ನು ರಾಜಕಾರಣಿಗಳು ಮಾಡುವಂತಿಲ್ಲ. ಔಷಧಿಗಳಿಗೆ, ವೈದ್ಯಕೀಯಕ್ಕೆ ಅದರದೇಯಾದ ಚೌಕಟ್ಟುಗಳಿವೆ, ನೀತಿ ಸಂಹಿತೆಗಳಿವೆ’ ಎನ್ನುವ ಲೇಖಕರು ಮೂತ್ರವನ್ನು ಔಷಧಿಗಾಗಿ ಬಳಸುವ ಒತ್ತಡ ಎಷ್ಟು ಸರಿ..? ಎನ್ನುವ ಪ್ರಶ್ನೆಯನ್ನೂ ಎತ್ತುತ್ತಾರೆ.

ಕವಿತಾ ಲಂಕೇಶರ ‘ಅವ್ವ’ ಸಿನೇಮಾದ ಬಗ್ಗೆ ಬರೆಯುವಾಗ ಗಾಂಧಿಯಂಥಾ ಮಹಾನ್ ವ್ಯಕ್ತಿತ್ವದ ಅಂತರ್ಯದಲ್ಲಿ ಓರ್ವ ಹೆಣ್ಣಿದ್ದಳು. ಹಾಗಾಗಿಯೇ ಅವರ ಹೋರಾಟ ಗಂಗಾ ನದಿಯ ಹಾಗೆ ಉದ್ದಕ್ಕೂ ಹರಿಯಿತು ಎನ್ನುತ್ತಾರೆ. ‘ಅವ್ವ’ ಚಿತ್ರ ನಿರೀಕ್ಷೆಯ ಮಟ್ಟಕ್ಕೆ ಬಾರದೇ ಆ ಪಾತ್ರಕ್ಕಾಗಿ ಆಯ್ಕೆಯಾದ ಶೃತಿ ಪಕ್ಕಾ ಲಂಕೆಶರ ‘ಅವ್ವ’ ಳೇ ಆಗಿ ಜೀವ ತುಂಬಲಿಲ್ಲ. ಪರಿಣಾಮವಾಗಿ ‘ ಚಿತ್ರದುದ್ದಕ್ಕೂ ನಿರ್ದೇಶಕಿಯನ್ನು ಕಾಡಿದ ಲಂಕೇಶ್ ನೆರಳು. ಅದರಿಂದಾಗಿ ಅತ್ತ ಕವಿತಾರ ಚಿತ್ರವೂ ಆಗದೇ ಇತ್ತ ಲಂಕೆಶರ ಕಾದಂಬರಿಯೂ ಆಗದೇ ಪ್ರೇಕ್ಷಕರನ್ನು ನಡುಗಡಲಲ್ಲಿ ಕೈ ಬಿಟ್ಟು ಬಿಡುತ್ತದೆ’ ಎನ್ನುತಾರೆ. ಬ್ಯಾರಿ ಚಿತ್ರ ಮತ್ತು ಸಾರಾ ಅಬೂಬಕ್ಕರ್ ಕುರಿತು ಬರೆಯುವಾಗ ಅತ್ಯಂತ ಸಣ್ಣದಾದ ಪ್ರಾದೇಶಿಕ ಭಾಷೆಯೊಂದರ ಚಿತ್ರಕ್ಕೆ ಸ್ವರ್ಣ ಕಮಲ ದಕ್ಕಿದ್ದು ಸಾಮಾನ್ಯವಲ್ಲ. ‘ ತನ್ನ ಇದ್ದ ಬಿದ್ದ ಶಕ್ತಿಯೊಂದಿಗೆ ಒಂದು ಸಣ್ಣ ಭಾಷೆ, ಸಂಸ್ಕೃತಿ, ಸಿನೇಮಾ ರೂಪ ಪಡೆದು ಹಿಂದಿ ಸೇರಿದಂತೆ ರಾಜ್ಯದ ಎಲ್ಲ ಭಾಷೆಗಳಿಗೆ ಸೆಡ್ದು ಹೊಡೆದು ಸ್ವರ್ಣ ಕಮಲವನ್ನು ತನ್ನದಾಗಿಸುವುದು ಸಣ್ಣ ವಿಷಯ ಅಲ್ಲವೇ ಅಲ್ಲ. ಅದು ಈ ದೇಶದ ಬಹು ಸಂಸ್ಕೃತಿಯನ್ನು ನಾಶ ಮಾಡಿ ಏಕ ಸಂಸ್ಕೃತಿಯನ್ನು ಪ್ರತಿಸ್ಠಾಪನೆ ಮಾಡುವವರಿಗೆ ಹಾಕಿದ ಸವಾಲು’ ಎನ್ನುತ್ತಲೇ ತಾವು ಬ್ಯಾರಿ ಭಾಷೆಯನ್ನು ಮಾತನಾಡುವವರು ಎನ್ನುವ ಕಾರಣಕ್ಕಾಗಿಯೇ ಬಾಲ್ಯದಲ್ಲಿ ಅನುಭವಿಸಿದ ನೋವುಗಳನ್ನು ಖುಷಿಯಲ್ಲಿ ಬ್ಯಾರಿ ಭಾಷೆಯ ಚಿತ್ರವೊಂದು ಗೆಲ್ಲುವ ಮೂಲಕ ತುಂಬಿಕೊಟ್ಟದ್ದು ಅನನ್ಯವಾದುದು.

‘ಗೋರಿಗಳ ತೋಟದ ಕಾವಲುಗಾರರು’ ಎನ್ನುವ ಲೇಖನದಲ್ಲಿ ಸಾಹಿತಿಯೊಬ್ಬ ನಮ್ಮ ನಡುವಿನಿಂದ ನಿರ್ಗಮಿಸಿದಾಗ ಅವನನ್ನು ಆತ ಮಾಡಿಟ್ಟ ಆಸ್ತಿ ಅಂದರೆ ಮನೆ, ತೋಟ, ಮಣ್ಣು ಮಾಡಿದ ಸ್ಥಳದಲ್ಲಿ ಅವನನ್ನು ಹುಡುಕುವದಲ್ಲ ಹಾಗೆಯೇ ಅವರ ಗೋರಿಗಳ ಕಾವಲುಗಾರರಾಗುವುದರಲ್ಲೂ ಯಾವ ಪುರುಷಾರ್ಥವೂ ಇಲ್ಲ ಎನ್ನುವುದನ್ನು ಅತ್ಯಂತ ಮಾರ್ಮಿಕವಾಗಿ ಬಶೀರ್ ಪ್ರತಿಪಾದಿಸಿದ್ದಾರೆ. ‘ಕೋಳಿ ಅಂಕಕ್ಕೆ ಒಂದು ಸುತ್ತು’ ಎನ್ನುವ ಲೇಖನದಲ್ಲಿ ಕೋಳಿಗಳ ನಡುವಿನ ಕಾಳಗ ಹೇಗೆ ಮನುಷ್ಯನ ಮೇಲಿನ ಸೇಡಾಗಿ ರೂಪುಗೊಂಡಿರುತ್ತದೆ ಎನ್ನುವುದನ್ನು ಹೇಳುತ್ತಲೇ ‘ ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನಿಗೆ ಥಳಿಸುವುದು ನಮಗೆ ರಂಜಿಸುತ್ತದೆ ಎಂದಾದರೆ ಗುಜರಾತ ಹತ್ಯಾಕಾಂಡವೂ ನಮ್ಮನ್ನು ರಂಜಿಸಬಲ್ಲದು’ ಎನ್ನುತ್ತಾರೆ. ‘ದಲಿತರು ‘ಸತ್ತ ದನ’ ದ ವಾರಸುದಾರರಾಗಬೇಕೆ..?’ ಎನ್ನುವ ಲೇಖನದಲ್ಲಿ ಅವರನ್ನು ಮೇಲಿನ ಸ್ತರಗಳು ಪೂಸಿ ಹೊಡೆಯುತ್ತಲೇ ಮೋಸ ಮಾಡುವ ಕ್ರಮವನ್ನು ಒಂದು ನಿರಂತರವಾದ ಪ್ರಕ್ರಿಯೆಯಾಗಿ ಹೇಗೆ ಸಮಾಜ ಮತ್ತು ಸಂಸ್ಕೃತಿಯೊಂದರ ಭಾಗವೆಂಬಂತೆ ನಡೆಯಿಸಿಕೊಂಡು ಬರಲಾಗಿದೆ ಎನ್ನುವುದನ್ನು ‘ಅವರೂ ಅರ್ಚಕರಾಗಬಹುದು’ ಎನ್ನುವ ಹೇಳಿಕೆಯ ಅಪಾಯವನ್ನು ಮುಂದಿಟ್ಟುಕೊಂಡು ಚರ್ಚಿಸುತ್ತಾರೆ.

‘ನನ್ನ ತಂದೆಯನ್ನು ಯಾಕೆ ಕೊಂದೆ?’ ಎನ್ನುವ ಲೇಖನದಲ್ಲಿ ರಾಜೀವ ಗಾಂಧಿಯವರ ಮಗಳು ಪ್ರಿಯಾಂಕಾ ಜೈಲಿನಲ್ಲಿದ್ದ ನಳಿನಿಯನ್ನು ಕುರಿತು ಕೇಳಿದ ಪ್ರಶೆ ಇದು. ಇದಕ್ಕೆ ವ್ಯತಿರಿಕ್ತವಾಗಿ ನಳಿನಿಯೂ ‘ನನ್ನ ತಂದೆಯನ್ನು ನೀವೆಲ್ಲ ಸೇರಿ ಯಾಕೆ ಕೊಂದಿರಿ..?’ ಎನ್ನುವ ಮರು ಪ್ರಶ್ನೆ ಹಾಕಿದ್ದರೆ ಬಹುಷ: ಪ್ರಿಯಾಂಕಾಳಲ್ಲಿಯೂ ನಳಿನಿಯ ಮೌನವೇ ಉತ್ತರವಾಗಿರುತ್ತಿತ್ತು ಎನ್ನುವುದು ಲೇಖಕರ ಅಭಿಪ್ರಾಯ. ಶ್ರೀಲಂಕಾದ ನಾಯಕ ಜಯವರ್ಧನೆ ಮತ್ತು ರಾಜೀವಗಾಂಧಿ ಬೆಂಗಳೂರಿನಲ್ಲಿ ಭೇಟಿ ಮಾಡಿದ ಆ ಅವಿಷ್ಮರಣೀಯ ದಿನಗಳ ಬಗ್ಗೆ ಶ್ರೀಲಂಕಾದ ತಮಿಳು ಕವಿ ಚೇರನ್ ಅವರ ಕವಿತೆಯ ಕೆಲವು ಸಾಲುಗಳನ್ನು ಲೇಖಕರು ಬಳಸಿರುವುದಿದೆ.

‘ ಕಪ್ಪುಗಳಲ್ಲಿ ಚಹಾ ದಿಢೀರನೇ ರಕ್ತವಾಗಿದ್ದನ್ನು ತಿಳಿಯದೇ

ಇಬ್ಬರೂ ನಾಯಕರು ಕುರುಡು ರಾಜಕೀಯದಲ್ಲಿ ಕಾಲ ಕಳೆದರು

ಮನುಷ್ಯ ಮೂಳೆಗಳು ಸುಂದರ ಚಮಚೆಗಳಾಗಿ

ತಲೆಬುರುಡೆಗಳು ತಟ್ಟೆಗಳಾಗಿ ರೂಪಾಂತರಗೊಂಡವು

ಊಟದ ಮೇಜಿನ ಮೇಲೆ

ದೂರದರ್ಶನ ಕಣ್ನುಗಳೆಲ್ಲಾ ಕುರುಡಾದವು

ನಾವಿಲ್ಲದೇ ನಡೆದ ಒಪ್ಪಂದ ಸಾವಿರಾರು ಜೀವಗಳ

ನುಂಗಿ ನೆತ್ತರಲ್ಲಿ ಬರೆದ ಚರಿತ್ರೆ’

‘ಅಳು ತರಿಸುವ ರಾಂಪನ ಜೋಕುಗಳು’ ಎನ್ನುವ ಬರಹ ರಾಮಪ್ಪಣ್ಣ ಎನ್ನುವ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಕೇಂದ್ರಿತವಾದ ಬರಹ. ಕೇವಲ 5 ರೂಪಾಯಿಗೆ ಹೊಟ್ಟೆ ತುಂಬ ಊಟ ಕೊಡುವ ಈ ಮನುಷ್ಯ ವಡ್ಡರಸೆ ರಘುರಾಮ ಶೆಟ್ಟರ ಮುಂಗಾರಿಗೂ ಚೈತನ್ಯವಾಗಿದ್ದರು ಎನ್ನುವುದನ್ನು ತೀರಾ ಮನೋಜ್ಞವಾಗಿ ಬರೆದಿದ್ದಾರೆ. ‘ವಿವೇಕ್ ಶಾನಭಾಗ್ ಕಂಡ ಉದ್ಯಾನವೊಂದರ ಕನಸು’ ಎನ್ನುವ ಲೇಖನದಲ್ಲಿ ದೇಶ-ಕಾಲ ದಲ್ಲಿಯ ಅಚ್ಚುಕಟ್ಟುತನ ತನ್ನನ್ನು ಬೆರಗುಗೊಳಿಸಿತ್ತಾದರೂ ‘ಜಗತ್ತಿನ ಶ್ರೇಷ್ಟವಾದುದೆಲ್ಲಾ ತನ್ನಲ್ಲಿರಬೇಕೆಂಬ ಹಟ ಈ ಪತ್ರಿಕೆಯೊಳಗಿದೆ ಎನಿಸಿತು’ ಕ್ರಮೇಣವಾಗಿ ‘ಈ ಪತ್ರಿಕೆಗೆ ಒಂದು ಪ್ರತಿ ಆಲೋಚನೆಯನ್ನು ಸೃಷ್ಟಿಸುವುದು ಸಾಧ್ಯವಾಗುತ್ತಿಲ್ಲ ಎನ್ನುವುದು ಗೊತ್ತಾಗತೊಡಗಿತು’ ಎನ್ನುತ್ತಾರೆ.

‘ಬಾಡೂಟದ ಜೊತೆಗೆ ಗಾಂಧಿ ಜಯಂತಿ’ ಎನ್ನುವ ಪುಸ್ತಕದ ಶೀರ್ಷಿಕೆಯ ಲೇಖನದಲ್ಲಿ ಹೇಗೆ ಒಂದು ಧರ್ಮದ ಆಚರಣೆ ಇನ್ನೊಂದು ಧರ್ಮದವರ ಆಹಾರದ ಹಕ್ಕನ್ನು ಕಸಿಯುತ್ತದೆ ಎನ್ನುವುದನ್ನು ಲೇಖಕ ಹೀಗೆ ಹೆಳುತ್ತಾರೆ. ‘ ಕೆಲ ವರ್ಷಗಳ ಹಿಂದೆ ಬಕ್ರೀದ್ ಮತ್ತು ಮಹಾವೀರ ಜಯಂತಿ ಜೊತೆ ಜೊತೆಯಾಗಿಯೇ ಬಂತು. ಆಗ ರಾಜ್ಯದ ಮೂರ್ಖ ಸರ್ಕಾರ [ ಬಾಡೂಟವನ್ನು ಅತಿಯಾಗಿ ಪ್ರೀತಿಸುತ್ತಿದ್ದ ಜೆ.ಎಚ್.ಪಟೆಲರೇ ಆಗ ಮುಖ್ಯ ಮಂತ್ರಿಯಾಗಿದ್ದದ್ದು ದುರಂತ] ಮಹಾವೀರ ಜಯಂತಿ ದಿನ ಮಾಂಸ ಮಾರಾಟವನ್ನು ನಿಷೇಧಿಸಿತು. ಒಂದು ಧರ್ಮವನ್ನು ಗೌರವಿಸುವ ಹೆಸರಿನಲ್ಲಿ ಇನ್ನೊಂದು ಧರ್ಮದ ಮೌಲ್ಯವನ್ನು ಅವಮಾನಿಸಿತು.’ ಎನ್ನುವುದನ್ನು ವಸ್ತು ನಿಷ್ಟವಾಗಿ ದಾಖಲಿಸುತ್ತಾರೆ.

‘ಹುಲ್ಲು ಹುಲ್ಲು ತಿಂದು ರಾಕ್ಷಸರಾದವರು’ ಎನ್ನುವ ಇನ್ನೊಂದು ಲೇಖನದಲ್ಲಿ ಕವಿ ಎನ್ಕೆ ಹನುಮಂತಯ್ಯನವರ ಗೋವು ತಿಂದು ಗೋವಿನಂತಾದವನು’ ಎನ್ನುವ ಕವಿತೆಯ ಸಾಲುಗಳನ್ನು ಉಲ್ಲೇಖಿಸುತ್ತಾ ‘ಇತಿಹಾಸದುದ್ದಕ್ಕೂ ಗೋವು ತಿನ್ನದವರು ಗೋವು ತಿಂದವರ ಮೇಲೆ ದೌರ್ಜನ್ಯ ನಡೆಸಿದರೇ ಹೊರತು ಗೋವು ತಿಂದು ಬದುಕಿದವರು ಸಸ್ಯಾಹಾರಿಗಳ ಮೆಲೆ ಎರಗಿದ ಒಂದೇ ಒಂದು ಉದಾಹರಣೆಗಳಿಲ್ಲ’ ಎನ್ನುವ ಲೇಖಕರು ದೇವರು ಮತ್ತು ರಾಕ್ಷಸರ ನಡುವಿನ ಸಂಘರ್ಷ ಆರ್ಯ-ದ್ರಾವಿಡರ ಘರ್ಷಣೆಯೂ ಹೌದು ಎನ್ನುತ್ತಾರೆ. ‘ಜಾತಿಗೊಬ್ಬ ಕುಲಗುರು’, ‘ರಾವಣನನ್ನು ಸುಡುವುದು ಎಷ್ಟು ಸರಿ..?’ ‘ಎದೆಯ ಧ್ವನಿಯನ್ನು ಆಲಿಸೋಣ’ ಹೀಗೆ ಇಡೀ ಕೃತಿಯಲ್ಲಿ ಸಾಮಾಜಿಕ ಅಸಮಾನತೆ, ಮೇಲಿನ ಸ್ತರಗಳ ಶೋಷಣೆ, ಉಪ ಸಂಸ್ಕೃತಿಗಳ ಮೇಲೆ ಪ್ರಧಾನ ಸಂಸ್ಕೃತಿಯ ಹಾವಳಿ, ದಂತಕತೆಗಳ ವೈಭವೀಕರಣದ ಮೂಲಕ ಸವಾರಿ ಮಾಡುವ ಪ್ರಕ್ರಮ ಹೀಗೆ ಇಲ್ಲಿರುವ ಬಹುತೇಕ ಲೇಖನಗಳು ವಸ್ತುನಿಷ್ಟ ಅಭಿಪ್ರಾಯಗಳೊಂದಿಗೆ ಓದುಗನನ್ನು ಮುಖಾಮುಖಿಯಾಗಿಸುತ್ತವೆ. ಒಂದು ಕೃತಿಯಿಂದ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುವ ಅಗತ್ಯವಿಲ್ಲ ಎಂದುಕೊಳ್ಳುತ್ತೇನೆ.

‍ಲೇಖಕರು avadhi

7 April, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading