ಮುಂದಿನ ವಾರ ಯುಗಾದಿ ಅಮಾವಾಸ್ಯೆಗೆ ಕಪ್ಪಡಿ ಜಾತ್ರೆ ಕೊನೆಗೊಳ್ಳಲಿದೆ. ಸರಕಾರ ಎಂದಿನಂತೆ ಪ್ರಾಣಿ ಬಲಿನಿಷೇಧವನ್ನು ನಿಷೇಧ ಮಾಡಿದೆ!!.
ಮಾಂಸಾಹಾರ ಪ್ರಸಾದದ ಜಾತ್ರೆಗಳಲ್ಲಿ ಈ ರೀತಿಯ ನಿಷೇಧ ನಿಲ್ಲಬೇಕು ಎಂದು ರಾಜೇಂದ್ರ ಪ್ರಸಾದ್ ಆಗ್ರಹಿಸಿದ್ದರು. ಅದಕ್ಕೆ ಶ್ರೀವತ್ಸ ಕಂಚಿನಮನೆ ಹಾಗೂ ಗೀತಾ ಕಲ್ಮನೆ ಅವರು ನೀಡಿದ ಪ್ರತಿಕ್ರಿಯೆ ಇಲ್ಲಿದೆ.
ಮಾಂಸಾಹಾರ ಬೇಕೇ ಬೇಡವೇ? ಏನನ್ನಿಸುತ್ತಿದೆ ನಿಮಗೆ
ಬನ್ನಿ ಚರ್ಚೆಯಲ್ಲಿ ಭಾಗವಹಿಸಿ
ನಿಮ್ಮ ಕಾಮೆಂಟ್ ಗಳನ್ನು avadhimag@gmail.com ಗೆ ಕಳುಹಿಸಿ
ಶ್ರೀವತ್ಸ ಕಂಚಿನಮನೆ

ಮಾಂಸ ತಿನ್ನೋ ಚಪಲಕ್ಕೆ ದೇವರ ಅಥವಾ ಜಾತಿಯ ಹೆಸರು ಬೇಕಾ…?
ಸಸ್ಯಗಳಿಗೂ ಜೀವ ಇದೆ ಅದನ್ನು ತಿನ್ನೋ ಬ್ರಾಹ್ಮಣರು ನಮ್ಮ ಆಚರಣೆಯನ್ನ ತುಳೀತಾರೆ ಅಂತ ಯುದ್ಧಕ್ಕೆ ನಿಲ್ಬೇಡಿ..
ಪ್ರಸಾದವಾಗಿ ತಿನ್ನದೆ ಹೋದರೂ ಕೆಲವು ಗ್ರಾಮ್ಯ ದೇವರುಗಳಿಗೆ ಬ್ರಾಹ್ಮಣರು ಕೂಡ ಬಲಿ ಕೊಡೋದನ್ನ ಕಂಡಿದೀನಿ – ಪ್ರಸಾದ ಅಂತ ತಿನ್ನೋಕೆ ಕಾದು ಕೂರೋ ಮಾಂಸಾಹಾರಿಗಳನ್ನೂ… ಅದನ್ನೂ ವಿರೋಧಿಸ್ತೀನಿ…
ಬ್ರಾಹ್ಮಣರ ವಿಶೇಷ ಶ್ರದ್ಧಾ ಕೇಂದ್ರಗಳಲ್ಲಿಯೂ ಪ್ರಾಣಿ ಬಲಿಯನ್ನ ವಿರೋಧಿಸಿ, ನಿಷೇಧಿಸಿದ್ದನ್ನ ಕಂಡಿದೀನಿ… ಹಾಗಾಗಿ ಬಲಿ ನಿಷೇಧಕ್ಕೆ ಅವೈದಿಕರ ಶ್ರದ್ಧೆಯ ಮೇಲಿನ ದಬ್ಬಾಳಿಕೆಯ ಬಣ್ಣ ಸುಳ್ಳು ಆರೋಪ ಅಷ್ಟೇ…
ಬಾಡೂಟದ ಆಸೆ ಇದ್ದರೆ ಮನೇಲಿ ಮಾಡಿ ತಿನ್ನಬಹುದಲ್ವಾ… “ಸಾರ್ವಜನಿಕವಾಗಿ” ತಮಟೆ ಜಾಗಟೆ ತೂಗಿ ಪ್ರಾಣಿಗಳನ್ನ ಕೊಂದು ತಿನ್ನಬೇಕಾ…
ನಿಮ್ಮ ಆಹಾರವನ್ನು ಖಂಡಿತಾ ವಿರೋಧಿಸ್ತಾ ಇಲ್ಲ… ಆದರೆ ಅದನ್ನ ಹೊಂದುವಲ್ಲಿನ “ಅನವಶ್ಯಕ ಹಿಂಸೆ”ಯನ್ನ ವಿರೋಧಿಸ್ತೀನಿ… ಅದನ್ನ ಪ್ರಸಾದ, ಸಂಸ್ಕೃತಿ ಅಂತ ಬಿಂಬಿಸುವವರು ಮಡೆ ಸ್ನಾನ, ಬೆತ್ತಲೆ ಸೇವೆಯಂಥ ಆಚರಣೆಗಳನ್ನೂ ಹಾಗೇ ಸಂಸ್ಕೃತಿ ಅಂದುಬಿಡ್ತೀರೇನೋ… ಅದೂ ಅವರ ಧಾರ್ಮಿಕ ಶ್ರದ್ಧೆಯ ಭಾವವೇ ತಾನೆ…
ಯಾಕೆ ಎಲ್ಲದರಲ್ಲೂ ಸ್ವಹಿತಾಸಕ್ತಿಯ ವಾದಗಳು…?
ಯಾಕೆ ಒಂದು ಒಳಿತಿಗೂ ಅನಗತ್ಯ ವಿರೋಧಗಳು…??
ಬಾಯಲ್ಲಿ ಜಾತ್ಯಾತೀತತೆಯ ಮಾತು ಆದರೆ ಸಹಕಾರ ಬಯಸೋ ಸರ್ಕಾರದ ಪ್ರತಿ ಕೃತಿಗೂ ಜಾತಿಯ ಬಣ್ಣದ ವಿಮರ್ಶೆ…???
ಈ ಮನಸ್ಥಿತಿಗಳೇ ಅರ್ಥ ಆಗಲ್ಲ…

ಗೀತಾ ಕಲ್ಮನೆ

ಸರಕಾರ ತೆಗೆದುಕೊಂಡ ಕ್ರಮ ಸರಿಯಾಗೇ ಇದೆ.
ಇದು ಯಾವ ಕೋಮಿಗೆ ಸೇರಿದ ಕ್ರಮವಲ್ಲ ಅಥವಾ ಇದು ಈ ಜಾತ್ರೆಗೆ ಮಾತ್ರ ಮೊದಲಲ್ಲ. ದೇವರ ಹೆಸರಲ್ಲಿ ಮಾನವ ಮೂಕ ಪ್ರಾಣಿಯನ್ನು ಹಿಂಸಿಸಿ ಕೊಲ್ಲುವ ಆಚರಣೆ ಸಂಪೂರ್ಣ ನಿಲ್ಲಬೇಕು.
ಹಿಂದೆ ಸಿರಸಿ ಮಾರಿಕಾಂಬಾ ದೇವಿಯ ಜಾತ್ರೆ ನಡೆಯುವಾಗ ಕೋಣವನ್ನು ಬಲಿ ಕೊಡುತ್ತಿದ್ದರು. ಸರಕಾರ ಈ ಕ್ರಮ ನಿಷೇಧಿಸಿತು. ಕೋಣನ ರಕ್ತದಲ್ಲಿ ಅನ್ನ ಕಲೆಸಿ ದೇವಿಗೆ ಅಪಿ೯ಸುವ ರೂಢಿ ಈಗ ಮುಂದುವರೆದಿದೆ. ಅಲ್ಲಿಯ ಜನ ಒಪ್ಪಿಕೊಂಡಿಲ್ಲವೇ?
ಆದುದರಿಂದ ದಯವಿಟ್ಟು ಸರಕಾರದ ಕ್ರಮಕ್ಕೆ ಬೆಂಬಲ ನೀಡಿ ಮೂಕ ಪ್ರಾಣಿಯ ಜೀವ ಉಳಿಸಿ. ಭಕ್ತಿ ಮುಖ್ಯ, ಬಲಿ ಕೊಡೋದಲ್ಲ.
ಹಾಗೆಯೇ ಇನ್ನೊಂದು ಉದಾಹರಣೆ:
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನಲ್ಲಿರುವ ಚಂದ್ರಗುತ್ತಿ ಜಾತ್ರೆ. ಇಲ್ಲಿ ಪ್ರತಿ ವಷ೯ ಜಾತ್ರೆ ನಡೆಯುತ್ತದೆ. ಅಲ್ಲಿಗೆ ಬರುವ ಕೆಲವು ಭಕ್ತರು ಹೆಣ್ಣನ್ನು ಪೂತಿ೯ ನಗ್ನಗೊಳಿಸಿ ಬೇವಿನ ಸೊಪ್ಪನ್ನು ಸೊಂಟಕ್ಕೆ ಕಟ್ಟಿ ಮೆರವಣಿಗೆಯಲ್ಲಿ ತಂದು ದೇವರಿಗೆ ಹರಕೆ ಒಪ್ಪಿಸುವ ಪದ್ದತಿ ಇತ್ತು.
ಜನ ಜಾತ್ರೆಗೆ ಬರುತ್ತಿದ್ದರೊ ಅಥವಾ ನಗ್ನ ಹೆಣ್ಣುಗಳನ್ನು ನೋಡಲು ಬರುತ್ತಿದ್ದರೊ ಗೊತ್ತಿಲ್ಲ. ಬರ್ ಬರುತ್ತಾ ಈ ಜಾತ್ರೆ ಅತ್ಯಂತ ಪ್ರಚಾರ ಪಡೆದುಕೊಂಡು ಪಡ್ಡೆ ಹುಡುಗರ ಚಪಲ ತೀರಿಸಿಕೊಳ್ಳುವ ಮಟ್ಟಕ್ಕೆ ಹೋಯಿತು.
ಇದು ಸರಕಾರದ ಗಮನಕ್ಕೆ ಬಂದು ಈ ಪದ್ದತಿ ಸಂಪೂರ್ಣ ನಿಷೇಧ ಹೇರಿತು. ಈಗ ಅಲ್ಲಿಯ ಜನ ಹೊಂದಿಕೊಂಡಿಲ್ಲವೆ?
ಹಾಗೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಡೆ ಸ್ನಾನ ನಿಷೇಧ.
ಹೀಗೆ ಹಲವಾರು ಉದಾಹರಣೆಗಳು ಇರಬಹುದು. ಈ ಒಂದು ವಿಷಯದ ಕುರಿತು ಜನರಲ್ಲಿ ವೋಟು ಕೇಳಿ ಗಲಾಟೆ, ದೊಂಬಿ ಆಗಲು ಅವಕಾಶ ಕೊಡದೆ ಜನಾಂಗದವರೆಲ್ಲರೂ ಸೇರಿ ಒಂದು positive ತೀಮಾ೯ನಕ್ಕೆ ಬರಬೇಕೆಂದು ತಮ್ಮಲ್ಲಿ ವಿನಂತಿ





0 Comments