ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾಗೇಪಲ್ಲಿಯಲ್ಲಿ ಕಳೆದ ಆ ದಿನ ನೆನಪಾಯಿತು..

ಸ್ಟೀಲ್ ಬ್ರಿಡ್ಜ್ ಗಿರುವ ಅವಸರ ಕುಡಿವ ನೀರಿನ ಯೋಜನೆಗೇಕಿಲ್ಲ

ತಪ್ಪು ಮಾಡದೇ ಅನುಭವಿಸುವ ಯಾತನೆಗೆ ಮುಕ್ತಿಯಿಲ್ಲ

………………………..

ಈ ಬಾರಿ ಬೆಳಗಾವಿಯಲ್ಲಿ ಅಧಿವೇಶನವನ್ನು ಕವರೇಜ್ ಮಾಡುತ್ತಿದ್ದಾಗ ಗಮನ ಸೆಳೆದದ್ದು ಪಾವಗಡ ಶಾಸಕ. ಯಾಕಂದ್ರೆ ಅವರು ಸದನದೊಳಗೆ ತಂದ ಕಲ್ಲಿನ ತುಂಡು ಎಂದು ಕೊಂಡ ಫ್ಲೋರೈಡ್ ತುಂಡಿನತ್ತಲೇ ಎಲ್ಲರ ಗಮನವಿತ್ತು. ಅದನ್ನು ಸದನದೊಳಗೆ ತರಲು ಕಾರಣವೂ ಇತ್ತು.

jyothi-column-low-resಇತ್ತೀಚೆಗೆ ನೀರಿನ ಪೈಪ್ ನಲ್ಲಿ ನೀರು ಹರಿಯದೇ ಇದ್ದಾಗ ಕಾರಣವಾದ್ರು ಏನು ಎಂಬುದನ್ನು ಪತ್ತೆ ಹಚ್ಚುವ ಕೆಲಸ ನಡೆದಿತ್ತು. ಪೈಪ್ ನ್ನು ಕತ್ತರಿಸಿದಾಗ ಅಲ್ಲಿ ಕಂಡಿದ್ದು ಗಟ್ಟಿಯಾಗಿ ಪೈಪ್ ನ್ನು ಬ್ಲಾಕ್ ಮಾಡಿದ್ದ ಫ್ಲೋರೈಡ್ ಗಡ್ಡೆ. ಫ್ಲೋರೈಡ್ ಇಷ್ಟರ ಮಟ್ಟಿಗೆ ನೀರಿನೊಂದಿಗೆ ಬೆರೆತುಹೋಗಿತ್ತು. ಮಕ್ಕಳನ್ನು ದೊಡ್ಡವರನ್ನು ಮಹಿಳೆಯರನ್ನು ಹೀಗೆ ಎಲ್ಲರ ಬದುಕನ್ನು ದುಸ್ತರಗೊಳಿಸಿದೆ ಈ ಫ್ಲೋರೈಡ್ .

ಹಾಗಾಗಿ ಪೈಪ್ ಗಳನ್ನು , ಫ್ಲೋರೈಡ್ ತುಂಡುಗಳನ್ನು ಕಾರಿನಲ್ಲಿ ತುಂಬಿಕೊಂಡು ಬಂದ ಶಾಸಕ ತಿಮ್ಮರಾಯಪ್ಪ ಸಮಸ್ಯೆಯ ತೀವ್ರತೆಯನ್ನು ಸರ್ಕಾರದ ಗಮನಕ್ಕೆ ತರುವ ಪ್ರಯತ್ನವನ್ನು ಮಾಡುತ್ತಿದ್ರು.

…..

ಚಿಕ್ಕಬಳ್ಳಾಪುರ, ಪಾವಗಡ ಸೇರಿದಂತೆ ರಾಜ್ಯದ ಹಲವು ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಇನ್ನು ಗಗನಕುಸುಮ. ಶುದ್ಧ ಕುಡಿಯುವ ನೀರನ್ನು ಹೊಂದುವುದು ಪ್ರತಿಯೊಬ್ಬರ ಹಕ್ಕಾದ್ರು ಅದರ ಕುರಿತಂತೆ ನೀಡಬೇಕಾದ ಪ್ರಾಮುಖ್ಯತೆಯನ್ನು ಇನ್ನು ನೀಡಿಲ್ಲ. ರಸ್ತೆ, ಚರಂಡಿ, ಫ್ಲೈ ಓವರ್ ಗಳಿಂದಲು ಬಹುಷಹ ಕುಡಿಯುವ ನೀರು ಮೊದಲ ಆದ್ಯತೆಯಾಗಿ ಪರಿಗಣನೆಯಾಗಬೇಕಾದ್ರು ಆ ಕಡೆ ನೀಡಬೇಕಾದ ಗಮನವನ್ನು ಕೊಟ್ಟಿಲ್ಲ. ಇದು ಕೇವಲ ರಾಜ್ಯ ಸರ್ಕಾರದ ಕರ್ತವ್ಯ ಮಾತ್ರವಲ್ಲ ಕೇಂದ್ರ ಸರ್ಕಾರದ ಪಾತ್ರವು ಇದರಲ್ಲಿ ಪ್ರಮುಖವಾಗಿರುವಂತದ್ದು.

ಶಾಸಕ ತಿಮ್ಮರಾಯಪ್ಪ ಅವರು ಫ್ಲೋರೈಡ್ ಮುಚ್ಚಿದ ಪೈಪ್ ನ್ನು ಸುವರ್ಣಸೌಧದ ಹೊರಗೆ ನನಗೆ ತೋರಿಸಿ ವಿವರಿಸಿ ಸಮಸ್ಯೆಯನ್ನು ಹೇಳಿ ನಿರ್ಗಮಿಸುತ್ತಿದ್ದಂತೆ ಎರಡು ವರ್ಷಗಳ ಹಿಂದೆ ಬಾಗೇಪಲ್ಲಿಯಲ್ಲಿ ಕಳೆದ ಆ ದಿನ ನೆನಪಾಯಿತು.

ಅದು ಹೊಸೂಡಿ ಗ್ರಾಮ. ಆ ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ನೆಲಕ್ಕಂಟಿ ಮಲಗಿದ್ದ 13 ವರುಷದ ಆ ಹುಡುಗಿ ಕಷ್ಟಪಟ್ಟು ಕೂತಳು. ಬಾಯಾರಿಕೆಯೆಂದಾಗ ಒಂದು ಗ್ಲಾಸು ನೀರನ್ನು ಆಕೆಯ ಕೈಗೆ ನೀಡಲಾಯಿತು. ಬೆರಳು ಸ್ಥಿಮಿತದಲ್ಲಿ ಇಲ್ಲ, ಬಟ್ಟೆ ಹಾಕಲು ಆಗಲ್ಲ, ಎಲ್ಲದಕ್ಕು ಬೇರೆಯವರ ಮೇಲೆಯೇ ಅವಲಂಬನೆ, ಆ ಹುಡುಗಿಯ ಸ್ಥಿತಿಗೆ ಯಾರು ಕಾರಣ ಅಂತ ಕೇಳಿದ್ರೆ ಉತ್ತರವಿಷ್ಚೇ. ಕುಡಿಯಲು ಶುದ್ಧ ನೀರು ಸಿಗದೆ ಮಿತಿಮೀರಿದ ಫ್ಲೋರೈಡ್ ಹೊಂದಿದ್ದ ನೀರನ್ನು ಕುಡಿದಿರೋದು ಸಮಸ್ಯೆಯ ಉಗಮ.

ತಾಯಿಯಿಲ್ಲದ ತಬ್ಬಲಿ ಶಂಕ್ರಮ್ಮ. ತಂದೆಯಿದ್ದರು ಅನಾಥೆ. ಸಂಬಂಧಿಕರು ಆಕೆಯನ್ನು ನೋಡಿಕೊಳ್ಳುತ್ತಿದ್ದಾರೆ. ಶಾಲೆಯಲ್ಲಿ ಓದಬೇಕಾಗಿದ್ದ, ತಮ್ಮವರಿಗೆ ಆಸರೆಯಾಗಬೇಕಾಗಿದ್ದ ಶಂಕ್ರಮ್ಮ ತನ್ನನ್ನು ತಾನು ಸಂಭಾಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾಳೆ.

ಇನ್ನು ಈ ಗ್ರಾಮದ ಕಥೆ ಕೇಳಿ. ಗ್ರಾಮದ ಹೆಸರು ಊಗಲನಾಗೇಪಲ್ಲಿ, 55 ವರ್ಷದ ಕಾರ್ಕೂರಪ್ಪಗೆ ನಡೆಯಲಾರದ ಸ್ಥಿತಿ. ವೀಲ್ ಚೇರ್ ಓಡಾಟಕ್ಕೆ ಆಸರೆ. 13 ವರ್ಷಗಳಿಂದ ಕಾಲುಗಳಿಗೆ ಸ್ಪರ್ಶ ಜ್ಞಾನವೇ ಇಲ್ಲ. ಕೂತಲ್ಲಿಂದ ಏಳಲಾರದ ಪರಿಸ್ಥಿತಿ. ಕಾರಣ ಮತ್ತೆ ಇದೇ ಅತಿಯಾದ ಫ್ಲೋರೈಡ್ ಅಂಶ ಹೊಂದಿದ ನೀರು.

……..

ಮಹಿಳೆಯರ ಮೇಲೆ ಇದರ ಪ್ರಭಾವ ನೋಡಿ. ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸೋದೆ ಕಷ್ಟ. ಸ್ವಾವಲಂಬಿ ಮಾಡೋದು ಬಿಡಿ, ಆದಷ್ಟು ಬೇಗ ಮದುವೆ ಮಾಡಿಸಿಬಿಡುವ ಎಂಬ ಮನಸ್ಥಿತಿಯನ್ನು ಹೊಂದಿದ ತಾಯಂದಿರು ಮಗಳ ಹಲ್ಲು ನೋಡಿ ಯಾರು ಬರುತ್ತಿಲ್ಲ ಎಂಬ ಉತ್ತರ ನಿರಾಸೆಯಿಂದ ಮಾತಾಡಿ ನನ್ನ ಮುಖ ನೋಡಿದ್ರು. ಟಿವಿ ನೋಡಬೇಕಾದ್ರೆ ಮಲಗಿ ನೋಡ್ತೀವಿ, ಏಳೋಕೆ ಆಗೋಲ್ಲ ಕಷ್ಟ ಅಂತ ಪದ್ಮಮ್ಮ ಹೇಳಿದಾಗ ಏನು ಹೇಳಲಾರದೆ ಮೌನಕ್ಕೆ ಮೊರೆ ಹೋದೆ.

water-tap-dangerಆ ಗ್ರಾಮದಲ್ಲಿ ಇದ್ದದ್ದು ಕೂಲಿ ಕಾರ್ಮಿಕರು. ಮೈ ಬಗ್ಗಿಸಿ ದುಡಿದ್ರೆ ಜೀವನ. ಆದ್ರೆ ದುಡಿಯಲು ಮೈಯು ಸ್ಪಂದಿಸದ ಸ್ಥಿತಿ. ಇನ್ನು ಮಕ್ಕಳ ಸ್ಥಿತಿ ನೋಡಬೇಕು. ಜಾಸ್ತಿ ಹೊತ್ತು ಆಡೋಕಾಗಲ್ಲ, ವಯಸ್ಸಾದವರ ಸುಸ್ತು ಚಿಕ್ಕ ವಯಸ್ಸಿನಲ್ಲೇ ಕಾಡುತ್ತಿದೆ. ಕಾಯಿಲೆಗಳು ಹಲವಾರು, ಪದೇ ಪದೇ ಆಸ್ಪತ್ರೆಗೆ ಹೋಗಲು ದುಡ್ಡು ಬೇರೆ ಇಲ್ಲ. ಸಮಸ್ಯೆಗಳು ಹೀಗೆ ಸರಮಾಲೆಯಂತೆ ಕಂಡವು.

ಅಷ್ಟು ಹೊತ್ತಿಗೆ ಮಕ್ಕಳು ಮುಗ್ಧ ನಗುವನ್ನು ಬೀರಿದ್ರು. ಹಲ್ಲು ಹಳದಿಯಾಗಿ ಕಲೆ ಆವರಿಸಿ ಸಮಸ್ಯೆಯ ತೀವ್ರತೆಯನ್ನು ಪ್ರತಿಬಿಂಬಿಸುತ್ತಿತ್ತು.

ಫ್ಲೋರೈಡ್ ಯುಕ್ತ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ. ಕಳೆದ ಬಾರಿ ಒಮ್ಮೆ ಶಾಸಕ ಶಿವಲಿಂಗೇಗೌಡ ಕೂಡ ಈ ಸಮಸ್ಯೆಯನ್ನು ಪ್ರಸ್ತಾಪಿಸಿ ಕಣ್ಣೀರು ಹಾಕಿದ ಘಟನೆ ಇಂದು ಕೂಡ ನೆನಪಿದೆ.ಸಮಸ್ಯೆಯನ್ನುಹೊಂದಿದ ಹಳ್ಳಿಗಳಿಗೆ ಹೋದಾಗ ಅದರ ತೀವ್ರತೆ ನಮ್ಮ ತಂಡವನ್ನು ತಟ್ಟಿದೆ. ಆ ಸಮಸ್ಯೆಯನ್ನು ಎದುರಿಸುತ್ತಿರುವ ಮುಖಗಳು ಇಂದು ಕೂಡ ಕಾಡುತ್ತಲೇ ಇವೆ,

ಇನ್ನು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿದ್ರು ಸಮಸ್ಯೆ ಪರಿಹಾರವಾಗಿಲ್ಲ. ಶುದ್ಧ ಕುಡಿಯುವ ನೀರಿನ ಪೂರೈಕೆ ಮೂಲಭೂತ  ಹಕ್ಕಾದ್ರು ಅದು ಆದ್ಯತೆಯ ಮೇಲೆ ಪರಿಗಣಿಸಲ್ಪಡುತ್ತಿಲ್ಲ. ಎತ್ತಿನಹೊಳೆಯಂತ ಯೋಜನೆಯ ಬಗ್ಗೆ ಮಾತಾಡುತ್ತಿದ್ರು ವೈಜ್ಞಾನಿಕವಾಗಿ ಸಮಸ್ಯೆ ಪರಿಹಾರವಾಗುವ ಬಗ್ಗೆ ಸಂಶೋಧಕರೇ ನಕಾರಾತ್ಮಕ ಉತ್ತರ ನೀಡುತ್ತಿದ್ದಾರೆ. ಹಾಗಿದ್ದರು ಕೋಟಿಗಟ್ಟಳೆ ಖರ್ಚು ಮಾಡಲು ಹೋಗುತ್ತಿರುವ ಹಿಂದೆ ಗುತ್ತಿಗೆದಾರರು, ಅಧಿಕಾರಿಗಳು ದುಡ್ಡುಮಾಡಲು ಯೋಜನೆ ನೆಪ ಮಾತ್ರವೆನ್ನುವ ಮಾತು ಕೇಳಿಬರುತ್ತಿದೆ. ಇನ್ನು ಐಟಿ ಅಧಿಕಾರಿಗಳು ಎತ್ತಿನ ಹೊಳೆ ಯೋಜನೆಗೆ ಸಂಬಂಧಿಸಿದಂತೆ ಗುತ್ತಿಗೆದಾರರ ಮನೆ ಮೇಲೆ ನಡೆಸಿದ ದಾಳಿ ಮತ್ತು ಮಾಹಿತಿ ಯೋಜನೆಯ ಹೆಸರಲ್ಲಿ ನಡೆಯುವ ಅಕ್ರಮದ ಕರಾಳ ಮುಖ ಬಿಚ್ಚಿಟ್ಟಿದೆ.

ಸಮಸ್ಯೆ ಪರಿಹಾರಕ್ಕೆ ಸಮರ್ಪಕ ಯೋಜನೆ ರೂಪುಗೊಳ್ಳಬೇಕು.. ವೈಜ್ಞಾನಿಕ ಸಂಗತಿ, ವಾಸ್ತವ ಸಂಗತಿಗಳನ್ನು ಆಧರಿಸಿ, ರಾಜಕೀಯ ಬದಿಗಿಟ್ಟು ಕಾರ್ಯಗತವಾಗುವ ಅಂಶಗಳತ್ತ ಗಮನಹರಿಸಬೇಕಾಗಿದೆ.

1000 ಕೋಟಿಗು ಅಧಿಕ ಮೊತ್ತದ ಸ್ಟೀಲ್ ಬ್ರಿಡ್ಜ್ ಯೋಜನೆ ಬಗ್ಗೆ ತೋರಿಸುವ ಆಸಕ್ತಿ ಕುಡಿಯುವ ನೀರಿನ ಯೋಜನೆಗೂ ತೋರಿಸಬೇಕಾಗಿದೆ…

ಮುಂದಿನ ವಾರ ಮತ್ತೊಂದು ಕವರೇಜ್ ನ ನೆನಪಿನೊಂದಿಗೆ ಬರ್ತೀನಿ

ಜ್ಯೋತಿ ….

 

‍ಲೇಖಕರು Admin

5 December, 2016

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading