ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಬಹುರೂಪಿ’ಯ ಎರಡು ಕೃತಿಗಳಿಗೆ ಪ್ರತಿಷ್ಠಿತ ‘ಅಮ್ಮ’ ಪ್ರಶಸ್ತಿ

ಬಿ ವಿ ಭಾರತಿ ಹಾಗೂ ಚೇತನ ಸೋಮೇಶ್ವರ ಅವರ ಕೃತಿಗಳಿಗೆ ಮನ್ನಣೆ

ಪ್ರತಿಷ್ಠಿತ ಅಮ್ಮ ಪ್ರಶಸ್ತಿಗೆ ‘ಬಹುರೂಪಿ’ಯ ಎರಡು ಕೃತಿಗಳು ಆಯ್ಕೆಯಾಗಿವೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ‘ಅಮ್ಮ ಪ್ರಶಸ್ತಿ’ಗೆ ಬಹುರೂಪಿಯಾ ಪ್ರಕಟಣೆಗಳಾದ ಭಾರತಿ ಅವರ ನಕ್ಷತ್ರಗಳ ಸುತ್ತ ನಾಡಿನಲ್ಲಿ ಪ್ರವಾಸ ಕಥನ ಹಾಗೂ ಚೇತನ ಸೋಮೇಶ್ವರ ಅವರ ಸಂಶೋಧನಾ ಗ್ರಂಥ ಲೋಕ ರೂಢಿಯ ಮೀರಿ ಆಯ್ಕೆಯಾಗಿದೆ.

ಇದಲ್ಲದೆ ೧೩ ಸಾಹಿತಿಗಳು ಪ್ರಶಸ್ತಿಗೆ ಪಾತ್ರರಾಗಿದ್ದಾರೆ ಎಂದು ಅಮ್ಮ ಪ್ರಶಸ್ತಿ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಅಥಣಿಯ ಪ್ರಭುಚೆನ್ನಬಸವ ಸ್ವಾಮೀಜಿ, ಕಾದಂಬರಿಕಾರ ಡಾ.ಭೈರಮಂಗಲ ರಾಮೇಗೌಡ, ಲೇಖಕಿ ಕಾವ್ಯಶ್ರೀ ಮಹಾಗಾಂವಕರ್, ಡಾ.ಆನಂದ ಋಗ್ವೇದಿ, ಸುನೀತಾ ಕುಶಾಲನಗರ, ಡಾ.ಅಶೋಕ ನರೋಡೆ, ಲಕ್ಷ್ಮಿ ಶಂಕರ ಜೋಶಿ, ಡಾ.ಕೆ.ಆರ್.ಸಂಧ್ಯಾರೆಡ್ಡಿ, ಡಾ.ಶ್ರುತಿ ಬಿ ಆರ್, ನಂದಿನಿ ಹೆದ್ದುರ್ಗ, ಶ್ರೀದೇವಿ ಕೆರೆಮನೆ, ನಿರ್ಮಲಾ ಶೆಟ್ಟರ್ ಹಾಗೂ ಸಹದೇವ ಯರಗೊಪ್ಪ ಅವರ ಕೃತಿಗಳು ಆಯ್ಕೆಯಾಗಿವೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಾದಂಬರಿ : ಮಾಯಾಕಿನ್ನರಿ (ಡಾ.ಭೈರಮಂಗಲ ರಾಮೇಗೌಡ)- ಒಳ್ಕಲ್ಲ ಒಡಲು(ಕಾವ್ಯಶ್ರೀ ಮಹಾಗಾಂವಕರ್), ಕಥೆ : ಕರಕೀಯ ಕುಡಿ(ಡಾ.ಆನಂದ ಋಗ್ವೇದಿ)-ಇಂಜಿಲಗೆರೆ ಪೋಸ್ಟ್ (ಸುನೀತಾ ಕುಶಾಲನಗರ), ಪ್ರವಾಸ : ನಕ್ಷತ್ರಗಳ ಸುಟ್ಟ ನಾಡಿನಲ್ಲಿ (ಭಾರತಿ ಬಿ ವಿ)-ಕೋಟಿ (ಡಾ.ಅಶೋಕ ನರೋಡೆ), ಸಂಕೀರ್ಣ: ಮಹಾತ್ಮರ ಚರಿತಾಮೃತ (ಪ್ರಭು ಚೆನ್ನಬಸವ ಸ್ವಾಮೀಜಿ ಅಥಣಿ – ಕರೋನಾ ಮುಕ್ತೆಯ ಕಥನ (ಡಾ.ಕೆ.ಆರ್.ಸಂಧ್ಯಾರೆಡ್ಡಿ), ಸಂಶೋಧನೆ: ಲೋಕರೂಢಿಯ ಮೀರಿ (ಚೇತನ್ ಸೋಮೇಶ್ವರ), ಹಿಂದೂಸ್ತಾನಿ ಸಂಗೀತ ವಾಹಿನಿ (ಲಕ್ಷ್ಮಿ ಶಂಕರ ಜೋಶಿ), ಕಾವ್ಯ : ಜೀರೋ ಬ್ಯಾಲೆನ್ಸ್ (ಡಾ.ಶ್ರುತಿ ಬಿ ಆರ್), ರತಿಯ ಕಂಬನಿ (ನಂದಿನಿ ಹೆದ್ದುರ್ಗ), ಮೈ ಮುಚ್ಚಲೊಂದು ತುಂಡುಬಟ್ಟೆ (ಶ್ರೀದೇವಿ ಕೆರೆಮನೆ), ಸರಹದ್ದುಗಳಿಲ್ಲದ ಭೂಮಿಯ ಕನಸು (ನಿರ್ಮಲಾ ಶೆಟ್ಟರ್), ಬಿರಿದ ನೆಲದ ಧ್ಯಾನ (ಸಹದೇವ ಯರಗೊಪ್ಪ) ಕೃತಿಗಳನ್ನು ೨೧ ನೇ ವರ್ಷದ ‘ಅಮ್ಮ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

ಇದೇ ನವೆಂಬರ್ ೨೬ ರಂದು ಸಂಜೆ ೫.೩೦ಕ್ಕೆ ಸೇಡಂ ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ ‘ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಅಮ್ಮ ಪ್ರಶಸ್ತಿಗೆ ೨೧ನೇ ವರ್ಷದ ಸಂಭ್ರಮ : ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ನೆನಪಿನಲ್ಲಿ ಸ್ಥಾಪಿಸಿದ ಅಮ್ಮ ಪ್ರಶಸ್ತಿ’ಗೆ ಈಗ ೨೧ ನೇ ವರ್ಷದ ಸಂಭ್ರಮ.

ಕನ್ನಡದ ಪ್ರತಿಭಾವಂತ ಬರಹಗಾರರು ಅಮ್ಮ ಪ್ರಶಸ್ತಿ’ಗಾಗಿ ತಮ್ಮ ಕೃತಿಗಳನ್ನು ಕಳುಹಿಸುವ ಮೂಲಕ ಪ್ರಶಸ್ತಿಯನ್ನು ಗುರುತಿಸಿದ್ದಾರೆ ಹಾಗೂ ಗೌರವಿಸಿದ್ದಾರೆ. ಈ ಬಾರಿ ೫೨೪ ಕೃತಿಗಳು ಬಂದಿದ್ದವು. ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ‘ಅಮ್ಮ ಪ್ರಶಸ್ತಿ’ ರಾಜ್ಯದ ಗಣನೀಯ ಪ್ರಶಸ್ತಿಗಳಲ್ಲಿ ಒಂದಾಗಬೇಕು ಎಂಬ ಪ್ರತಿಷ್ಠಾನದ ಆಶಯಕ್ಕೆ ಅನುಗುಣವಾಗಿ ನಾಡಿನ ಖ್ಯಾತ ಲೇಖಕರು, ಕವಿಗಳು, ಪ್ರಕಾಶಕರು ಮತ್ತು ಲೇಖಕರ ಅಭಿಮಾನಿ ಓದುಗರು ಸ್ಪಂದಿಸಿದ್ದೇ ಇದೊಂದು ಗೌರವಾನ್ವಿತ ಪ್ರಶಸ್ತಿಯಾಗಿ ರೂಪುಗೊಂಡಿದೆ ಎಂಬುದಕ್ಕೆ ಸಾಕ್ಷಿ ಎಂದು ‘ಅಮ್ಮ ಪ್ರಶಸ್ತಿ’ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

‍ಲೇಖಕರು avadhi

12 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading