
ವಾಣಿ ಸತೀಶ್ ತಿಪಟೂರು
ನಾವು ಆ ಕೇರಿ ಹೊಕ್ಕಾಗ ಸುಮಾರು ಸಂಜೆ ಆರು ಮೂವತ್ತರ ಸಮಯ. ಧ್ವನಿವರ್ಧಕದಿಂದ ಹೊಮ್ಮುತ್ತಿದ್ದ ಹಾಡಿನೊಂದಿಗೆ ಕೇರಿಯ ನಡುವೆ ರಂಗ ಸಜ್ಜಿಕೆಯ ತಯಾರಿ ನಡೆದಿತ್ತು, ಇನ್ನೊಂದು ಬದಿಗೆ ದೊಡ್ಡ ಕಡಾಯಿಯಲ್ಲಿ ರಾತ್ರಿಯ ಊಟಕ್ಕೆ ಮಾಂಸದಡುಗೆ ಅಣಿಯಾಗೊಳ್ಳುತ್ತಿತ್ತು. ಬಣ್ಣ ಬಣ್ಣದ ಹೊಸ ಬಟ್ಟೆ ತೊಟ್ಟು ಚಿಟ್ಟೆಗಳಂತೆ ಕೇರಿಯ ತುಂಬಾ ಹಾರಾಡುತ್ತಿದ್ದ ಪುಟ್ಟ ಮಕ್ಕಳ ಕಣ್ಣಲ್ಲಿ ಹಿಡಿದಿಡಲಾರದಷ್ಟು ಸಂಭ್ರಮವಿದ್ದರೆ, ಚಂದದ ಸೀರೆಯ ನೆರಿಗೆ ಚಿಮ್ಮುತ್ತಾ ಅತ್ತಿಂದಿತ್ತ ಓಡಾಡುತ್ತಿದ್ದ ಹೆಂಗಸರ ನಡಿಗೆಯಲ್ಲಿ ಆತ್ಮವಿಶ್ವಾಸದ ಹೊನಲು ತುಳುಕಾಡುತ್ತಿತ್ತು.
ಮನೆಗಳ ಮುಂದೆ ಕುಕ್ಕುರುಗಾಲಿನಲ್ಲಿ ಕುಳಿತು ಎಲೆ ಅಡಿಕೆ ಮೆಲ್ಲುತ್ತಾ, ಎಳೆಯರ ಲವ ಲವಿಕಯನ್ನು ಮೈ ದುಂಬಿ ಕೊಳ್ಳಲು ಹವಣಿಸುತ್ತಿದ್ದ ಅಜ್ಜ ಅಜ್ಜಿಯರ ಮುಖದಲ್ಲಿ ವಯಸ್ಸಿನ ಭಾರ ಇಳಿದು ಎಳೆತನಕ್ಕೆ ಧುಮುಕಿದ ಆನಂದವಿತ್ತು.ನಮ್ಮ ಬಗಲಿಗೆ ಬಂದು ಕುಳಿತ ಹಿರಿಯರಿಬ್ಬರು, ಆದಿಮ ನೆನಪುಗಳಿಗೆ ಜಾರಿದವರಂತೆ ತಮ್ಮ ಎದೆ ಗೂಡಲ್ಲಿ ಧಗಧಗಿಸುತ್ತಲೇ ಇರುವ ಕಂಡುಂಡ ಹಸಿವು ಅವಮಾನಗಳ ಕನಸು ಕನವರಿಕೆಗಳ ಹಲವು ಕತೆಗಳನ್ನು ನಮ್ಮ ಮುಂದೆ ತಣ್ಣಗೆ ಅರವುತ್ತಾ ನಿರಾಳವಾಗಲು ಯತ್ನಿಸುತ್ತಿದ್ದಂತೆ ಕಂಡರು.
ಊರ ಉತ್ಸವಕ್ಕೆ ತಿಂಗಳಾನು ಗಟ್ಟಲೇ ಹಾದಿ ಬೀದಿ ಕಸ ಬಳಿದು ಶುಚಿಗೊಳಿಸಿ, ದೇವಸ್ಥಾನಕ್ಕೆ ಮೀಸಲಿಟ್ಟ ಸಿಡಿ ಕಂಬವ ತಿಕ್ಕಿ ತೀಡಿ ಲಪ್ಪ ಹಾಕಿ ಅದನ್ನು ಮೋಹಕವಾಗಿ ಅಲಂಕರಿಸುವ ನಾವು; ಹಬ್ಬದ ದಿನ ದೇವರ ಮುಂದೆ ಸಿಡಿ ಕಟ್ಟುವಾಗ ಮಾತ್ರ ಅಸ್ಪøಶ್ಯರಾಗಿ ಬಿಡುತ್ತೇವೆ. ನಮ್ಮ ಬೆವರ ಹನಿಯ ಕೆಳಗೆ ಅವರ ಮನೆ ಗುಡಿ ಗೋಪುರಗಳನ್ನು ಕಟ್ಟಿ ನಿಲ್ಲಿಸುತ್ತೇವೆ; ಅದರೊಳಗೆ ಅವರ ಪ್ರವೇಶವಾಗುವುದೇ ತಡ ನಾವು ಮೈಲಿಗೆಯವರಾಗಿ ಬಿಡುತ್ತೇವೆ, ಎನ್ನುವಾಗ ಆ ಹಿರಿಯರಲ್ಲಿ ಜಾತಿವಂತರ ಅಹಮಿಕೆಯ ಕಟ್ಟುಕಟ್ಟಳೆಗಳ ಬಗ್ಗೆ ವಿಷಾದದ ನಗುವಿತ್ತು. ಹೀಗೆ ನಮ್ಮ ಮಾತಿನ ನಡುವೆ ಸಮಯ ಸರಿದದ್ದೆ ತಿಳಿಯಲಿಲ್ಲ, ಇನ್ನೇನು ನಾಟಕ ಆರಂಭವಾಗುವ ಗಳಿಗೆ ಮನೆ ಒಳ ಹೊರಗಿದ್ದ ಜನರೆಲ್ಲಾ ರಂಗಸ್ಥಳದ ಮುಂಭಾಗಕ್ಕೆ ಜೀವ ತುಂಬಿದರು.

ಕವಿ ಸಿದ್ದಲಿಂಗಯ್ಯ ನವರ “ಬಿಡುಗಡೆ ಎಂಬುದು ಏನೋಬಿಡುಗಡೆ ಎಂಬುದು ಎಲ್ಲೋ,ಯಾರು ಬಂದರುಯಾರು ಹೋದರು ಕತ್ತಲಿಳಿಯಲಿಲ್ಲ”ಎಂಬ ಹಾಡಿನೊಂದಿಗೆ ನಾಟಕ ಮೊದಲು ಗೊಂಡಿತು. ಅದುವರೆಗೂ ಹಟ್ಟಿಯ ಉದ್ದಗಲಕ್ಕೂ ಓಡಾಡುತ್ತಾ ಗಮನ ಸೆಳೆದಿದ್ದ ಹೆಂಗಸರು ಮಕ್ಕಳೆಲ್ಲಾ ದುತ್ತನೆ ರಂಗಸ್ಥಳದಲ್ಲಿ ಪಾತ್ರಗಳಾಗಿ ಒಡ ಮೂಡಿದ ಪರಿಯಂತೂ ನನಗೆ ಬಹಳ ಖುಷಿ ಎನ್ನಿಸಿತು. ಎಪ್ಪತ್ತು ವರ್ಷದ ಹಿರಿಯರಿಂದ ಹಿಡಿದು ಐದು ವರ್ಷದ ಮಗುವಿನವರೆಗೂ ಈ ನಾಟಕದಲ್ಲಿ ಅಭಿನಯಿಸಿದ್ದು ವಿಶೇಷವಾಗಿತ್ತು. ಇಲ್ಲಿ ಯಾವುದೇ ಸಿದ್ದ ಮಾದರಿಯ ಸ್ಕ್ರಿಪ್ಟ್ ಇರದೇ ರಂಗದ ಮೇಲೆ ಮೂಡಿ ಬಂದ ಪಾತ್ರಗಳೆಲ್ಲಾ ತಾವೇ ಅನುಭವಿಸಿದ ಹಸಿವು-ಅವಮಾನಗಳಲ್ಲಿ ನೊಂದು-ಬೆಂದ, ಈಗಲೂ ಬೇಯುತ್ತಲೇ ಇರುವ ಮುಗಿಯಲಾರದ ಕತೆಗಳಿಗೆ ನಗುವಿನ ಲೇಪನ ಬಳಿದು ಮರು ಜೀವಿಸಿ ತೋರಿಸಿದರು.
ಸಮಾಜದ ನೀಚ ವ್ಯವಸ್ಥೆಯನ್ನು, ಮೇಲ್ಜಾತಿಯ ಅಮಾನವಿಯತೆಯನ್ನು ಪ್ರಶ್ನಿಸುತ್ತಾ, ನಾವು ನಿಮ್ಮಂತೆ ಮನುಷ್ಯರಯ್ಯ ನಮಗೂ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಬಿಡಿ ಎಂದು ತಮ್ಮ ಹಕ್ಕನ್ನು ಹಿಂಪಡೆಯುವ ಕನಸಿಗೆ ದನಿ ನೀಡಿದ್ದರು.ಸುಮಾರು ಎರಡು ತಾಸಿನ ಈ ಜೀವನಗಾಥೆಯ ಪ್ರಸ್ತುತಿ, ಎಲ್ಲಿಯೂ ಪ್ಯಾತೋ ಅನ್ನಿಸದಂತೆ ಕ್ಷಣ ಕ್ಷಣಕ್ಕೂ ಲವಲವಿಕೆಯಿಂದ ತುಂಬಿತ್ತು. ಆಗಾಗ ನಗೆಯ ಬುಗ್ಗೆಯೊಂದಿಗೆ ವಿಷಾದವನ್ನು ತೇಲಿ ಬಿಡುತ್ತಾ, ಒಮ್ಮೆ ನಮ್ಮೊಳಗನ್ನು ಮುಟ್ಟಿ ನೋಡಿ ಕೊಳ್ಳುವಂತೆ ನಾಟಕದ ದೃಶ್ಯಾವಳಿಗಳನ್ನು ಹೆಣೆದ ನಿರ್ದೇಶಕ ಚಂದ್ರು ಮತ್ತು ಬಳಗದವರ ಕಾಳಜಿ ಮತ್ತು ಪ್ರತಿಭೆಯನ್ನು ಮೆಚ್ಚಲೇ ಬೇಕು.
ಇಂತಹ ಸಾರ್ಥಕ ಗಳಿಗೆಗೆ ನಾವು ಸಾಕ್ಷಿಯಾದ ಸ್ಥಳ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ದಿಂಡಗೂರಿನ ದಲಿತ ಕೇರಿ. ವರ್ಷಗಳ ಹಿಂದೆ ಈ ಕೇರಿಯ ಜನ ಅಸ್ಪೃಶ್ಯತೆಯ ವಿರುದ್ದ ತಿರುಗಿ ನಿಂತು, ದೇವಾಲಯ ಪ್ರವೇಶಿಸಿದರು ಎನ್ನುವ ಕಾರಣಕ್ಕೆ ಅಲ್ಲಿನ ಮೇಲ್ಜಾತಿಯವರಿಂದ ಬಹಿಷ್ಕೃತಗೊಂಡರು. ಭಾರಿ ಮೊತ್ತದ ದಂಡ ತೆರಬೇಕಾದ ಭಯಕ್ಕೆ ಊರೊಳಗಿನ ಎಲ್ಲಾ ಜಾತಿಯವರು ಇವರೊಂದಿಗೆ ಸಂಪರ್ಕ ಕಡಿದು ಕೊಂಡರು. ಕೂಲಿಯನ್ನೇ ನೆಚ್ಚಿಕೊಂಡಿದ್ದ ಈ ಕೇರಿಯ ಹಲವು ಕುಟುಂಬಗಳು ದುಡಿಮೆ ಇಲ್ಲದೆ ಬರಿಗೈ ಆದವು. ಇಂತಹ ಪರಿಸ್ಥಿತಿಯಲ್ಲಿ ಇಲ್ಲಿನ ಹೆಣ್ಣು ಮಕ್ಕಳೇ ಕಟ್ಟಿ ಬೆಳೆಸಿದ್ದ “ಮಾತೆ ಸಾವಿತ್ರಿ ಬಾಯಿ ಪುಲೆ” ಸ್ತ್ರೀಶಕ್ತಿ ಸ್ವ ಸಹಾಯ ಸಂಘವು ‘ಅಣಬೆ’ ಕೃಷಿ ಮಾಡಲು ತರಬೇತಿಯನ್ನು ಪಡೆದು ಸ್ವಾವಲಂಬಿಗಳಾಗಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಮುಂದಾದರು.
ಕಳೆದ ಎರಡು ವರ್ಷಗಳಿಂದಲೂ ಇನ್ನಿಲ್ಲದಂತೆ ಬಾಧಿಸಿದ ಕೊರೋನ ಎಂಬ ಮಹಾಮಾರಿಯೊಂದಿಗೆ ಬಹಿಷ್ಕಾರ ಎಂಬ ವ್ಯಾದಿಯೂ ಅಂಟಿಕೊಂಡು ಹೈರಾಣಾಗಿದ್ದ ಈ ಕೇರಿಯ ಜನರನ್ನು, “ಜಂಗಮ ಕಲೆಕ್ಟವ್” (ಬೆಂಗಳೂರು) ತಂಡವು ಒಂದು ತಿಂಗಳು ತಾಲಿಮಿಗೆ ತೊಡಗಿಸಿ ಅವರದೇ ಕತೆಗೆ ಕನ್ನಡಿ ಹಿಡಿದು “ಕೇರಿ-ಹಾಡು”(ನಮ್ಮ ಹಟ್ಟಿ ಕಥೆಗಳು) ಎಂಬ ನಾಟಕ ಕಟ್ಟಿ ಆಡಿಸುವುದರ ಮುಖಾಂತರ ಆ ಇಡೀ ದಲಿತ ಕೇರಿಗೆ ಮಗದಷ್ಟು ಬಲ ತುಂಬಿದೆ ಎಂದರೆ ತಪ್ಪಾಗಲಾರದು.

ಈ ಹಟ್ಟಿಯ ಭರವಸೆಯಂತೆ ಎದ್ದು ನಿಂತಿರುವ ನೀನಾಸಂ ಪದವಿಧರರಾದ ಸಂತೋಶ್ ದಿಂಡಗೂರು ಮತ್ತು ಅದೇ ಊರಿನ ಸರ್ಕಾರಿ ಶಾಲೆಯಲ್ಲಿ ಅಥಿತಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅವರ ಸಂಗಾತಿ ನಂದಿನಿ ಮತ್ತಿತರರು ಜೊತೆಗೂಡಿ ‘ನೆಲದನಿ’ ಎಂಬ ಸಾಂಸ್ಕೃತಿಕ ತಂಡವನ್ನು ಕಟ್ಟಿ, ಹಟ್ಟಿಯ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯವಾದುದು. ಕೇರಿಯ ಹಾಡಿಗೆ ಜೀವ ತುಂಬಿ ಇತರರಿಗೆ ಮಾದರಿಯಾದ ಎಲ್ಲಾ ಹಿರಿ-ಕಿರಿಯ ನಟ-ನಟಿಯರಿಗೂ ತುಂಬು ಪ್ರೀತಿಯ ಅಭಿನಂದನೆಗಳು.
ಎಳೆಯರನ್ನು ಹಾದಿ ತಪ್ಪಿಸುತ್ತಿರುವ ಇಂತಹ ಪ್ರಕ್ಷುಬ್ಧ ವಾತಾವರಣದಲ್ಲಿ ಸಾಂಸ್ಕೃತಿಕ ಎಚ್ಚರ ಮತ್ತು ಅರಿವನ್ನು ಹಬ್ಬಿಸುವ ಕಾಯಕವನ್ನು ಮುಖ್ಯವೆಂದು ಭಾವಿಸಿ ಅದಕ್ಕಾಗಿ ರಂಗಭೂಮಿಯನ್ನು ತನ್ನ ಅಭಿವ್ಯಕ್ತಿಯ ದಾರಿಯಾಗಿಸಿಕೊಂಡಿರುವ “ಜಂಗಮ ಕಲೆಕ್ಟಿವ್”ನ ಹೊಸ ತಲೆಮಾರಿನ ಧ್ಯಾನ ಸಿದ್ದಿಸಲಿ ಎಂದು ಆಶಿಸುತ್ತಾ, ನಿರ್ದೇಶಕರಾದ ಚಂದ್ರಶೇಖರ ಮತ್ತು ಅವರ ಬೆನ್ನಿಗೆ ನಿಂತು ಇದನ್ನು ಸಾಕಾರಗೊಳಿಸಿದ ಲಕ್ಷ್ಮಣ ಕೆ.ಪಿ, ಮನೋಜ್ ಕುಮಾರ್, ಕಲ್ಲಪ್ಪ ಪೂಜಾರ್, ಸತೀಶ್ ಪಿ.ಬಿ ಇವರುಗಳನ್ನು ಅಭಿನಂದಿಸುತ್ತೇನೆ. ಪ್ರತೀ ಕೇರಿ ಕೇರಿಯಲ್ಲೂ ಈ ಹಾಡು ಮೊಳಗಿ ಎಲ್ಲಾ ಹಟ್ಟಿಗಳು ತಲೆ ಎತ್ತಿ ಆತ್ಮ ವಿಶ್ವಾಸದಿಂದ ನಡೆಯುವಂತಾಗಲಿ ಎಂಬುದು ನಮ್ಮೆಲ್ಲರ ಆಶಯವಾಗಲಿ.








ಒಂದು ಯಶೋಗಾಥೆ