ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ
ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.
ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.
ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.
‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ
ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ
ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.
ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು
ಅಲುಗಾಡಿಸಬಹುದು.
ಕರ್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ
ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.ಕರ್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ
ಇನ್ನು ಮುಂದೆ ಪರಿಚಯಿಸಲಾಗುವುದು.
56
ಅಯ್ದು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಇರುವ ಬಾಶೆಗಳು
ಕರ್ನಾಟಕದಲ್ಲಿ ಅಯ್ದು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಇರುವ ಒಟ್ಟು ಎಂಟು ಬಾಶೆಗಳಿವೆ. ಅವುಗಳೆಂದರೆ,
ಬಾಶೆ ಮಾತುಗರು ನಾಡಿನಲ್ಲಿ %
ಸವುರಾಶ್ಟ್ರಿ 4,399 0.007%
ಮಣಿಪುರಿ 4,073 0.006%
ಕಾಶ್ಮೀರಿ 2,972 0.004%
ಕಚ್ಚಿ 2,008 0.003%
ಮಯ್ತಿಲಿ 1,757 0.002%
ಸಂಸ್ಕ್ರುತ 1,218 0.001%
ಅರಾಬಿಕ್/ಅರ್ಬಿ 1,159 0.001%
ಗೊಂಡಿ 1,012 0.001%
ನಾಡಿನಲ್ಲಿ ಈ ಬಾಶೆಗಳು ಪಸರಿಸಿಕೊಂಡಿರುವ ಬಗೆಯನ್ನು ಇಲ್ಲಿ ಪರಿಚಯಿಸಿಕೊಳ್ಳೋಣ.
ಸವುರಾಶ್ಟ್ರಿ:
ಸವುರಾಶ್ಟ್ರಿ ಗುಜರಾತಿ ಬಾಶೆಯ ಒಳಗೆ ಒಂದು ತಾಯ್ಮಾತು ಎಂದು ದಾಕಲಾಗಿದೆ. ದೇಶದಲ್ಲಿ ಸವುರಾಶ್ಟ್ರಿ ಮಾತಾಡುವ 2,47,702 ಮಂದಿ ದಾಕಲಾಗಿದ್ದಾರೆ. ಇದರಲ್ಲಿ ಕರ್ನಾಟಕದಲ್ಲಿ ದಾಕಲಾದ ಸವುರಾಶ್ಟ್ರಿ ಮಾತುಗರು 4,399. ಇದು ದೇಶದ ಒಟ್ಟು ಸವುರಾಶ್ಟ್ರಿಗಳ 1.775% ಆಗುತ್ತದೆ. ಇದು ಕರ್ನಾಟಕದ 0.007% ಪ್ರತಿಶತತೆಯನ್ನು ರೂಪಿಸುತ್ತದೆ. ಕರ್ನಾಟಕದಲ್ಲಿ ದಾಕಲಾದ ಬಹುತೇಕ ಸವುರಾಶ್ಟ್ರಿಗಳು ಬೆಂಗಳೂರು ನಗರ ಜಿಲ್ಲೆಯಲ್ಲಿ ಕಾಣಿಸುತ್ತಾರೆ. ಬೆಂಗಳೂರಿನಲ್ಲಿ ಒಟ್ಟು 4,065 ಮಂದಿ ಇದ್ದಾರೆ. ಇದು ಕರ್ನಾಟಕದ ಒಟ್ಟು ಸವುರಾಶ್ಟ್ರಿಗಳ 92.407% ಆಗುತ್ತದೆ. ಕರ್ನಾಟಕದಲ್ಲಿ ಒಟ್ಟು ಇಪ್ಪತ್ತೊಂದು ಜಿಲ್ಲೆಗಳಲ್ಲಿ ಸವುರಾಶ್ಟ್ರಿಗಳು ದಾಕಲಾಗಿದ್ದಾರೆ. ಇದರಲ್ಲಿ ಬೆಂಗಳೂರು ನಗರ ಜಿಲ್ಲೆಯೊಂದನ್ನು ಹೊರತುಪಡಿಸಿ ಎಲ್ಲ ಜಿಲ್ಲೆಗಳಲ್ಲಿ ನೂರಕ್ಕಿಂತ ಕಡಿಮೆ ಮಂದಿ ದಾಕಲಾಗಿದ್ದಾರೆ.
ಮಣಿಪುರಿ:
ಮಣಿಪುರಿ ಬಾಶೆಗೆ ದೇಶದಲ್ಲಿ ದಾಕಲಾದ ಒಟ್ಟು ಮಾತುಗರ ಸಂಕೆ 17,61,079. ಇದರಲ್ಲಿ ಮಣಿಪುರಿ ಒಂದೆ ತಾಯ್ಮಾತು ಆಗಿದ್ದು, ಇತರ ಎಂಬ ಗುಂಪೊಂದು ದಾಕಲಾಗಿದೆ. ಮಣಿಪುರಿ ತಾಯ್ಮಾತಿಗೆ ದೇಶದಲ್ಲಿ ದಾಕಲಾದ ಮಾತುಗರ ಸಂಕೆ 17,60,913. ಕರ್ನಾಟಕದಲ್ಲಿ ಒಟ್ಟು 4,073 ಮಂದಿ ಮಣಿಪುರಿಗಳು ದಾಕಲಾಗಿದ್ದಾರೆ. ಇದು ಒಟ್ಟು ದೇಶದ ಮಣಿಪುರಿಗಳ 0.002% ಮತ್ತು ಒಟ್ಟು ಕರ್ನಾಟಕದ ಜನಸಂಕೆಯ 0.006% ಆಗಿದೆ. ಇದರಲ್ಲಿ ಹೆಚ್ಚಿನ ಮಣಿಪುರಿಗಳು ಬೆಂಗಳೂರು ನಗರ ಜಿಲ್ಲೆಯೊಂದರಲ್ಲಿಯೆ ದಾಕಲಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಕಾಣಿಸುವ ಮಣಿಪುರಿಗಳ ಸಂಕೆ 3,500 ಆಗಿದೆ. ಅಂದರೆ ಒಟ್ಟು ಕರ್ನಾಟಕದ ಮಣಿಪುರಿಗಳ 85.931% ಆಗುತ್ತದೆ. ಮಯ್ಸೂರು (122) ಮತ್ತು ಮಂಗಳೂರು (113) ಜಿಲ್ಲೆಗಳಲ್ಲಿ ನೂರಕ್ಕೂ ಹೆಚ್ಚು ಮಂದಿ ಇದ್ದಾರೆ. ರಾಜ್ಯದಲ್ಲಿ ಒಟ್ಟು ಇಪ್ಪತ್ತು ಜಿಲ್ಲೆಗಳಲ್ಲಿ ನೂರಕ್ಕಿಂತ ಕಡಿಮೆ ಮಂದಿ ಮಣಿಪುರಿಗಳು ದಾಕಲಾಗಿದ್ದಾರೆ.
ಕಾಶ್ಮೀರಿ:
ದೇಶದಲ್ಲಿ ಕಾಶ್ಮಿರಿಗೆ ದಾಕಲಾದ ಮಾತುಗರ ಸಂಕೆ 66,80,837. ಇದರಲ್ಲಿ ನಾಲ್ಕು ತಾಯ್ಮಾತುಗಳು ಮತ್ತು ಇತರ ಎಂಬ ಒಂದು ಗುಂಪು ದಾಕಲಾಗಿದೆ. ಕಾಶ್ಮೀರಿ ತಾಯ್ಮಾತಿಗೆ ದಾಕಲಾದ ಮಂದಿ 64,86,219. ಕರ್ನಾಟಕದಲ್ಲಿ ದಾಕಲಾದ ಕಾಶ್ಮೀರಿ ಮಾತುಗರ ಸಂಕೆ 2,972. ಇದು ದೇಶದ ಒಟ್ಟು ಕಾಶ್ಮೀರಿಗಳಲ್ಲಿ 0.045% ಆಗಿದೆ ಮತ್ತು ಇದು ಒಟ್ಟು ಕರ್ನಾಟಕದ 0.004% ಆಗಿದೆ. ಕರ್ನಾಟಕದಲ್ಲಿ ಕಾಶ್ಮೀರಿಯ ಬಹುತೇಕ ಮಂದಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಕಾಣಿಸುತ್ತಾರೆ. ಬೆಂಗಳೂರಲ್ಲಿ ದಾಕಲಾದ ಕಾಶ್ಮೀರಿಗಳ ಸಂಕೆ 2,244. ಇದು ಒಟ್ಟು ಕರ್ನಾಟಕದ ಕಾಶ್ಮೀರಿಗಳ 75.504% ಆಗುತ್ತದೆ. ಆನಂತರ ಬೀದರ (185) ಮತ್ತು ಕಾರವಾರ (115) ಜಿಲ್ಲೆಗಳಲ್ಲಿ ನೂರಕ್ಕಿಂತ ಹೆಚ್ಚು ಮಂದಿ ಕಾಣಿಸುತ್ತಾರೆ. ಉಳಿದಂತೆ ಒಟ್ಟು ಇಪ್ಪತ್ತೆಂಟು ಜಿಲ್ಲೆಗಳಲ್ಲಿ ನೂರಕ್ಕಿಂತ ಕಡಿಮೆ ಮಂದಿ ದಾಕಲಾಗಿದ್ದಾರೆ. ಇದರಲ್ಲಿ ಮಯ್ಸೂರಿನಲ್ಲಿ ನೂರಕ್ಕೆ ಹತ್ತಿರ (91) ಮಂದಿ ದಾಕಲಾಗಿದ್ದಾರೆ.
ಕಚ್ಚಿ:
ಸಿಂದಿ ಬಾಶೆಯ ಒಳಗೆ ಕಚ್ಚಿ ಒಂದು ತಾಯ್ಮಾತು ಆಗಿ ದಾಕಲಾಗಿದೆ. ದೇಶದಲ್ಲಿ ಒಟ್ಟು ಕಚ್ಚಿ ಮಾತಾಡುವ 10,30,602 ಮಂದಿ ದಾಕಲಾಗಿದ್ದಾರೆ. ಇದರಲ್ಲಿ ಕರ್ನಾಟಕದಲ್ಲಿ ದಾಕಲಾದ ಕಚ್ಚಿಗಳ ಸಂಕೆ 2,008. ಇದು ಒಟ್ಟು ದೇಶದ ಕಚ್ಚಿಗಳ 0.194% ಆಗುತ್ತದೆ. ಇದು ಕರ್ನಾಟಕದ 0.003% ಆಗುತ್ತದೆ. ಕಚ್ಚಿ ಮಾತುಗರ ಹಂಚಿಕೆ ಹೆಚ್ಚಾಗಿ ಬೆಂಗಳೂರು ಮತ್ತು ದಾರವಾಡ ಜಿಲ್ಲೆಗಳಲ್ಲಿ ಕಂಡುಬರುತ್ತದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 768 (38.247%) ಮಂದಿ ಮತ್ತು ದಾರವಾಡದಲ್ಲಿ 493 (24.551%) ಮಂದಿ ದಾಕಲಾಗಿದ್ದಾರೆ. ಆನಂತರ ಗದಗ ಜಿಲ್ಲೆಯಲ್ಲಿ 183 ಮಂದಿ ದಾಕಲಾಗಿದ್ದಾರೆ. ಇನ್ನುಳಿದ ಹದಿನಯ್ದು ಜಿಲ್ಲೆಗಳಲ್ಲಿ ನೂರಕ್ಕೂ ಕಡಿಮೆ ಮಂದಿ ದಾಕಲಾಗಿದ್ದಾರೆ.
ಮಯ್ತಿಲಿ:
ಮಯ್ತಿಲಿ ಬಾಶೆಗೆ ದೇಶದಲ್ಲಿ ದಾಕಲಾದ ಮಾತುಗರ ಸಂಕೆ 1,35,83,464. ಇದರಲ್ಲಿ ನಾಲ್ಕು ತಾಯ್ಮಾತುಗಳು ಮತ್ತು ಇತರ ಎಂಬ ಒಂದು ಗುಂಪು ದಾಕಲಾಗಿದ್ದು ಮಯ್ತಿಲಿ ಎಂಬ ತಾಯ್ಮಾತಿನಲ್ಲಿ 1,33,53,347 ಮಂದಿ ದಾಕಲಾಗಿದ್ದಾರೆ. ಕರ್ನಾಟಕದಲ್ಲಿ ದಾಕಲಾದ ಮಯ್ತಿಲಿ ಮಾತುಗರು 1,757. ಇದು ಒಟ್ಟು ದೇಶದ ಮಯ್ತಲಿ ಮಾತುಗರ 0.013% ಪ್ರತಿಶತತೆಯನ್ನು ರೂಪಿಸುತ್ತದೆ. ಇದು ಕರ್ನಾಟಕದ 0.002% ಆಗುತ್ತದೆ. ಕರ್ನಾಟಕದಲ್ಲಿ ದಾಕಲಾದ ಮಯ್ತಿಲಿಗರಲ್ಲಿ ಹೆಚ್ಚಿನವರು ಬೆಂಗಳೂರು ನಗರ ಜಿಲ್ಲೆಯಲ್ಲಿ ಕಾಣಿಸುತ್ತಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ದಾಕಲಾದ ಮಯ್ತಿಲಿಗರ ಸಂಕೆ 1,418. ಇದು ಕರ್ನಾಟಕದ ಮಯ್ತಿಲಿಗಳ 80.705% ಆಗುತ್ತದೆ. ಉಳಿದಂತೆ ಒಟ್ಟು ಇಪ್ಪತ್ಮೂರು ಜಿಲ್ಲೆಗಳಲ್ಲಿ ಮಯ್ತಿಲಿ ದಾಕಲಾಗಿದ್ದು ಎಲ್ಲ ಕಡೆ ನೂರಕ್ಕಿಂತ ಕಡಿಮೆ ಮಾತುಗರನ್ನು ಹೊಂದಿದೆ.
ಸಂಸ್ಕ್ರುತ:
ಸಂಸ್ಕ್ರುತಕ್ಕೆ ಬಾರತದಲ್ಲಿ ದಾಕಲಾದ ಮಾತುಗರ ಸಂಕೆ 24,821. ಇದರಲ್ಲಿ ಸಂಸ್ಕ್ರುತ ಎಂಬುದು ಒಂದೆ ತಾಯ್ಮಾತು ಆಗಿದ್ದು, ಇತರ ಎಂಬ ಒಂದು ಗುಂಪು ದಾಕಲಾಗಿದೆ. ಸಂಸ್ಕ್ರುತ ತಾಯ್ಮಾತಿನಲ್ಲಿ ದಾಕಲಾದ ಮಾತುಗರು 24,709. ಕರ್ನಾಟಕದಲ್ಲಿ 1,218 ಮಂದಿ ದಾಕಲಾಗಿದ್ದಾರೆ. ಇದು ಒಟ್ಟು ಬಾರತದ ಸಂಸ್ಕ್ರುತದ 4.929% ಪ್ರತಿಶತತೆಯನ್ನು ರೂಪಿಸುತ್ತದೆ. ಇದು ಕರ್ನಾಟಕದ 0.001% ಪ್ರತಿಶತ ಆಗುತ್ತದೆ. ಕರ್ನಾಟಕದಲ್ಲಿ ದಾಕಲಾದ ಸಂಸ್ಕ್ರುತದವರಲ್ಲಿ ಹೆಚ್ಚಿನವರು ಅಂದರೆ 725 ಮಂದಿ. ಇದು ಕರ್ನಾಟಕದ ಸಂಸ್ಕ್ರುತದವರ 59.523% ಆಗುತ್ತದೆ. ಉಳಿದಂತೆ ಒಟ್ಟು ಇಪ್ಪತ್ತಯ್ದು ಜಿಲ್ಲೆಗಳಲ್ಲಿ ಸಂಸ್ಕ್ರುತ ದಾಕಲಾಗಿದ್ದು ಎಲ್ಲೆಡೆ ನೂರಕ್ಕಿಂತ ಕಡಿಮೆ ಮಂದಿ ದಾಕಲಾಗಿದ್ದಾರೆ. ಮಂಗಳೂರು ಜಿಲ್ಲೆಯಲ್ಲಿ ಮಾತ್ರ ನೂರಕ್ಕೆ ಹತ್ತಿರ ಅಂದರೆ 94 ಮಂದಿ ದಾಕಲಾಗಿದ್ದಾರೆ.
ಅರಾಬಿಕ್/ಅರ್ಬಿ:
ಅರಾಬಿಕ್ ಬಾಶೆಗೆ ದೇಶದಲ್ಲಿ ದಾಕಲಾದ ಮಾತುಗರ ಸಂಕೆ 54,947 ಆಗಿದೆ. ಇದರಲ್ಲಿ ಅರಾಬಿಕ್ ಒಂದೆ ತಾಯ್ಮಾತು ಆಗಿದ್ದು ಇತರ ಎಂಬ ಗುಂಪು ದಾಕಲಾಗಿದೆ. ಅರಾಬಿಕ್ ತಾಯ್ಮಾತಿನವರ ಸಂಕೆ 54,871 ಆಗಿದೆ. ಇದರಲ್ಲಿ ಕರ್ನಾಟಕದಲ್ಲಿ ದಾಕಲಾದ ಅರಾಬಿಕರ ಸಂಕೆ 1,159 ಆಗಿದೆ. ಇದು ಒಟ್ಟು ದೇಶದ ಅರಾಬಿಕರ 2.112% ಮತ್ತು ಕರ್ನಾಟಕದ 0.001% ಆಗುತ್ತದೆ. ನಾಡಿನ ಒಟ್ಟು ಇಪ್ಪತ್ಮೂರು ಜಿಲ್ಲೆಗಳಲ್ಲಿ ಅರಾಬಿಕರು ದಾಕಲಾಗಿದ್ದು ಮೂರು ಜಿಲ್ಲೆಗಳಲ್ಲಿ ನೂರಕ್ಕೂ ಹೆಚ್ಚು ಮಂದಿ ಅರಾಬಿಕರು ದಾಕಲಾಗಿದ್ದಾರೆ. ಅವುಗಳೆಂದರೆ ಬೆಂಗಳೂರು ನಗರದಲ್ಲಿ 395 (34.081%), ಮಂಗಳೂರು 219 (18.895%) ಮತ್ತು ಚಿಕ್ಕಮಗಳೂರು 116 (10.008%) ಜಿಲ್ಲೆಗಳು. ಉಳಿದ ಜಿಲ್ಲೆಗಳಲ್ಲಿ ನೂರಕ್ಕಿಂತ ಕಡಿಮೆ ಮಂದಿ ದಾಕಲಾಗಿದ್ದಾರೆ.
ಗೊಂಡಿ:
ಗೊಂಡಿ ಮಾತಾಡುವ ಒಟ್ಟು 29,84,453 ಮಂದಿ ಇದ್ದಾರೆ. ಗೊಂಡಿಯಲ್ಲಿ ದಾಕಲಾದ ತಾಯ್ಮಾತುಗಳು ನಾಲ್ಕು ಮತ್ತು ಇತರ ಎಂಬ ಒಂದು ಗುಂಪು. ಇದರಲ್ಲಿ ಅತಿ ಹೆಚ್ಚು ಮಂದಿ ಮಾತಾಡುವ ಗೊಂಡಿ ತಾಯ್ಮಾತಿನ ಮಾತುಗರ ಸಂಕೆ 28,56,581. ಇದರಲ್ಲಿ ಕರ್ನಾಟಕದಲ್ಲಿ 1,012 ಮಂದಿ ದಾಕಲಾಗಿದ್ದಾರೆ. ಇದು ಒಟ್ಟು ದೇಶದ ಗೊಂಡಿ ಬಾಶೆಯ 0.035% ಬಾಗವನ್ನು ಮತ್ತು ಕರ್ನಾಟಕ ರಾಜ್ಯದ 0.001% ಬಾಗವನ್ನು ಒಳಗೊಳ್ಳುತ್ತದೆ. ರಾಜ್ಯದಲ್ಲಿ ಗೊಂಡಿ ಬಾಶೆಯು ಕೇವಲ ಅಯ್ದು ಜಿಲ್ಲೆಗಳಲ್ಲಿ ಮಾತ್ರ ದಾಕಲಾಗಿದ್ದಾರೆ. ಇದರಲ್ಲಿ ಬೀದರಿನಲ್ಲಿ ಅತಿ ಹೆಚ್ಚು ಅಂದರೆ 727 (71.837%) ಮಂದಿ ದಾಕಲಾಗಿದ್ದಾರೆ. ಆನಂತರ ದಾವಣಗೆರೆಯಲ್ಲಿ 277 (27.371%) ಮಂದಿ ದಾಕಲಾಗಿದ್ದಾರೆ. ಉಳಿದ ಮೂರು ಜಿಲ್ಲೆಗಳಲ್ಲಿ ನೂರಕ್ಕೂ ಕಡಿಮೆ ಮಂದಿ ಕಾಣಿಸುತ್ತಾರೆ.
ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಈ ಬಾಶೆಗಳಲ್ಲಿ ಬಿಲಿ ಮತ್ತು ಗೊಂಡಿ ಇವೆರಡನ್ನು ಹೊರತಾಗಿ ಉಳಿದೆಲ್ಲ ಬಾಶೆಗಳಿಗೆ ಹೆಚ್ಚಿನ ಸಂಕೆಯ ಮಾತುಗರು ಬೆಂಗಳೂರು ನಗರ ಜಿಲ್ಲೆಯಿಂದ ವರದಿಯಾಗಿದ್ದಾರೆ. ಸವುರಾಶ್ಟ್ರಿ (4,065, 92.407%), ಮಣಿಪುರಿ (3,500, 85.931%), ಕಾಶ್ಮೀರಿ (2,244, 75.504%), ಕಚ್ಚಿ (768, 38.247%), ಮಯ್ತಿಲಿ (1,418, 80.705%), ಸಂಸ್ಕ್ರುತ (725, 59.523%), ಅರಾಬಿಕ್ (395, 34.081%). ಗೊಂಡಿ ಬಾಶೆಗೆ ಬೀದರಿನಲ್ಲಿ ಹೆಚ್ಚು ಮಂದಿ (727, 71.837%) ದಾಕಲಾಗಿದ್ದಾರೆ. ಬಿಲಿ ಬಾಶೆ ಹೆಚ್ಚು ವಿವಿದ ಜಿಲ್ಲೆಗಳಲ್ಲಿ ಪಸರಿಸಿಕೊಂಡಿದೆ.
। ಇನ್ನು ಮುಂದಿನ ವಾರಕ್ಕೆ ।






0 Comments