ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ಕೆಂಚರಡ್ಡಿ ಮೆಚ್ಚಿದ ʼಚಾಲುಕ್ಯರ ಶಿಲ್ಪಕಲೆ’

ನಮಗೆ ಸಾಧ್ಯವಿಲ್ಲವೇ… ಎರಡೇ ಮಾತು…

ಪ್ರೊ ಬಸವರಾಜ ಕೆಂಚರಡ್ಡಿ

What is Art?
It is the response of man’s
creative soul to the call of real
–Rabindranath Tagore

ಕಲೆಯ ಜ್ಞಾನೋದಯ ಕುರಿತು ರವೀಂದ್ರನಾಥ್ ಠಾಗೋರರು, ‘ಬಹುಸಂಖ್ಯಾತ ಸಮುದಾಯವೊಂದು ಒಂದು ಅರಿವಿನಿಂದ ಇದ್ದಕ್ಕಿದ್ದಂತೆ ಉಜ್ವಲಗೊಳ್ಳುವ ಸಂದರ್ಭ ಬರುತ್ತವೆ. ಅದು ನಿತ್ಯ ಜಂಜಾಟಗಳ ಕ್ಷುಲ್ಲಕತೆಯಿಂದ ಮೇಲೆತ್ತುವಂಥದ್ದು… ಹಾಗೇ ಮನುಷ್ಯರು, ತಮ್ಮ ಅಸಾಧಾರಣ ಅನುಭವಗಳನ್ನು ಸದಾ ಸ್ಮರಣೀಯ ಗೊಳಿಸುವುದಕ್ಕಾಗಿ ಅಸಾಧ್ಯವಾದುದನ್ನು ಮಾಡಲು ನಿಶ್ಚಯಿಸಿದರು: ಬಂಡೆಗಳನ್ನು ಮಾತಾಡುವಂತೆ ಮಾಡಿದರು. ಶಿಲೆಗಳಿಂದ ಹಾಡಿಸಿದರು, ಗುಹೆಗಳಿಗೆ ನೆನಪುಕೊಟ್ಟರು’ ಎಂದು ಕಲೆಯ ಆರಂಭದ ಕಾಲ ಬಂಧುವನ್ನು ಗುರುತಿಸಿದ್ದಾರೆ.

ಕಲಾವಿದ ರಮೇಶ್‌ಚಂದ್ರ, ‘ನಮ್ಮ ಪೂರ್ವಿಕರು, ಜೀವನವನ್ನು ಸ್ವೀಕರಿಸಿದ ಬಗ್ಗೆ ಯೋಚಿಸಿದಾಗ ಅನ್ನಿಸುವುದು, ಅವರಷ್ಟು ಗಾಢವಾಗಿ ಬದುಕನ್ನು ಪ್ರೀತಿಸಲು ನಮಗೆ ಸಾಧ್ಯವಿಲ್ಲವೇನೋ ಎಂದು. ಅವರ ಬದುಕು, ಸಂಸ್ಕೃತಿ ಮುಂದಿನ ಪೀಳಿಗೆಗೂ ಪ್ರೇರಣೆಯಾಗಬೇಕೆಂಬುದೇ ಅವರ ಇಚ್ಛೆಯಾಗಿತ್ತು. ಇದಕ್ಕೆ ಹಲವು ಸಾಕ್ಷಿಗಳನ್ನು ಅವರು ನಮಗೆ ಬಿಟ್ಟುಹೋಗಿದ್ದಾರೆ.

ನಮ್ಮ ಮುಂದೆ ಈಗಲೂ ಇರುವ ದೇವಾಲಯಗಳ ವಾಸ್ತು ಮತ್ತು ಕಲೆ ಮೇಳೈಕೆಯನ್ನೇ ನೋಡಿ, ತಮ್ಮ ನಂತರದ ಹಲವು ತಲೆಮಾರುಗಳವರೆಗೆ ನಿಂತು ತಮ್ಮ ಬದುಕಿನ ಸಂದೇಶ ತಲುಪಿಸಲೆಂದೇ ತಮ್ಮೆಲ್ಲ ಜೀವನ ಎರಕಹೊಯ್ದು ಇಂತಹ ಕಲಾ ಕೃತಿಗಳನ್ನು ನಿರ್ಮಿಸಿದ್ದಾರೆ’ ಎಂದು ನಮ್ಮ ದೇವಾಲಯಗಳ ನಿರ್ಮಾಣದ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ.

ನಮ್ಮ ಪ್ರಾಚೀನ ಕಲಾ ಪರಂಪರೆಯನ್ನು ಕಟ್ಟಿಕೊಡಲು ಪುಂಡಲೀಕ ಸಾಹಿತ್ಯ ಹಾಗೂ ಕಲಾ ಮಾಧ್ಯಮಗಳೆರಡನ್ನೂ ಸಪ್ರಮಾಣದಲ್ಲಿ ಬೆರೆಸಿ ಬಳಸಿಕೊಂಡಿದ್ದಾರೆ. ಸ್ವತಃ ಕಲಾವಿದರಾದ ಪುಂಡಲೀಕ ಈ ಎರಡು ಮಾಧ್ಯಮಗಳನ್ನು ಅರ್ಥಪೂರ್ಣವಾಗಿ ದುಡಿಸಿಕೊಂಡ ಅನುಭವ ಇದೆ. ಈ ಮಾದರಿಯನ್ನು ಅನುಸರಿಸಿ ವಿನ್ಯಾಸಗೊಂಡು ಪ್ರಕಟಗೊಂಡ ಅವರ ಹೊಯ್ಸಳರ ಶಿಲ್ಪಕಲೆಯ ಕುರಿತಾದ ‘ಬೇಲೂರು-ಹಳೇಬೀಡು ಶಿಲ್ಪಕಲಾ ಸಾಮ್ರಾಜ್ಯ’ ಕೃತಿಗೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ದೊರತಿದೆ. ಗಜೇಂದ್ರಗಡ ರೋಣ ತಾಲೂಕುಗಳ ಶಿಲ್ಪಕಲಾ ದೇಗುಲಗಳು ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.

ಪ್ರಸ್ತುತದಲ್ಲಿ ರೂಪುಗೊಂಡ ಕೃತಿ ‘ಚಾಲುಕ್ಯರ ಶಿಲ್ಪಕಲೆ’. ಇದು ಪುಂಡಲೀಕ ಹುಟ್ಟಿ ಬೆಳೆದ ಬಾದಾಮಿ ಐಹೊಳೆ ಪಟ್ಟದಕಲ್ಲುಗಳ ಪರಿಸರದ ಶಿಲ್ಪಕಲೆಯ ವೈಭವವನ್ನು ಮತ್ತು ಸ್ಥಳೀಯ ಸಂಸ್ಕೃತಿಯನ್ನು ವ್ಯವಸ್ಥಿತ ರೀತಿಯಲ್ಲಿ ದಾಖಲಿಸುವ ಆಶಯ ಹೊಂದಿದೆ. ಇದು ಬರೀ ಛಾಯಾಚಿತ್ರ ಸಂಪುಟವಲ್ಲ. ಇಲ್ಲಿ ಶಿಲ್ಪಗಳ ಅಂತರ್ಗತ ಕಥಾತ್ಮಕ ಆಶಯಗಳನ್ನು ನಮಗೆ ಪರಿಚಯಿಸುತ್ತ ಬಿತ್ತರಗೊಂಡಿರುವುದು ಈ ಗ್ರಂಥದ ವಿಶೇಷ. ಇದು ಪ್ರವಾಸ ಪ್ರಿಯರಿಗೆ ಮಾರ್ಗದರ್ಶಿಯಾಗಿದೆ. ಶಿಲ್ಪಕಲಾ ಇತಿಹಾಸ ಪ್ರಿಯರಿಗೆ ಆಕರ ಗ್ರಂಥವಾಗಿದೆ.

ಕನ್ನಡ ನಾಡಿನ ಇತಿಹಾಸಲ್ಲಿ ಚಾಲುಕ್ಯರದೇ ಒಂದು ಛಾಪು. ಅವರ ಕಾಲದಲ್ಲಿಯ ಗುಹಾಂತರ ದೇವಾಲಯಗಳು ಬಾದಾಮಿಯಿಂದ ಅಜಂತಾ ಎಲ್ಲೋರಾವರೆಗೂ ಹಬ್ಬಿವೆ. ಆ ಶಿಲ್ಪಕಲಾ ಸೃಷ್ಟಿಯ ಪರಿ ಇವತ್ತಿಗೂ ಕಗ್ಗಂಟು. ಅದನ್ನು ಈ ಗ್ರಂಥ ಸಾದೃಶ್ಯಪೂರ್ಣವಾಗಿ ಛಾಯಾಚಿತ್ರಗಳ ಮೂಲಕ ಪರಿಚಯಿಸುತ್ತದೆ. ಪ್ರತಿಯೊಂದು ಶಾಲಾ ಕಾಲೇಜಿನಲ್ಲಿರಬೇಕಾದ ಗ್ರಂಥವಿದು.

‍ಲೇಖಕರು Admin

10 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading