ಜೋಗಿ ಅಂದ್ರೇ ಹಾಗೆ. ಆ ಕ್ಷಣಕ್ಕೆ ತಟಕ್ಕನೆ ಬೇಕಾಗಿದ್ದೇ ಹೊಳೆಯುತ್ತದಲ್ಲಾ ಅದು yes, ಜೋಗಿಗೆ ಮಾತ್ರ ಸಾಧ್ಯ. ಅವರೊಳಗೊಬ್ಬ ಅಸಾಧ್ಯ ತುಂಟನಿದ್ದಾನೆ. ಅವರ ಅಮ್ಮನ ಬಗ್ಗೆ ನಮಗೆಲ್ಲಾ ಕರುಣೆ. ಹೇಗೆ ಸುಧಾರಿಸಿದರೋ ಆ ತಾಯಿ.
ಉಪ್ಪಿನಂಗಡಿಯಿಂದ ಬೆಂಗಳೂರಿಗೆ ಬಂದೆ ಎನ್ನುತ್ತಾರೆ ಜೋಗಿ. ನಮಗ್ಯಾಕೋ ಡೌಟು, ಉಪ್ಪಿನಂಗಡಿಯೇ ಇವರನ್ನು ತಾಳಲಾಗದೆ ಹೊರ ದಬ್ಬಿತೇನೋ ಎಂದು. ಇವರಿಗೆ ಪುತ್ತೂರಲ್ಲೊಬ್ಬ ಗೆಳೆಯ ಕುಂಟಿನಿ. ಜೋಗಿಯಷ್ಟೇ ಕಿಲಾಡಿ.
ಸಾಹಿತ್ಯ ಸಮಾರಂಭಕ್ಕೆ ಬಳಸುವ ಕ್ಲೀಷೆಗಳನ್ನೆಲ್ಲಾ ಓದಿ ಓದಿ ಸುಸ್ತಾದವರಿಗೆ ಜೋಗಿಯ ವಿಟ್ ಇಲ್ಲಿದೆ. ಸಮಾರಂಭವನ್ನು ಸಭ್ಯ ದನಿಯಲ್ಲಿ ಕೀಟಲೆ ಮಾಡುತ್ತಲೇ ತಮ್ಮ ತುಂಟ ಕಣ್ಣುಗಳಿಂದ ನೋಡಿದ್ದನ್ನು ಜೋಗಿ ಇನ್ನು ಮುಂದೆ ನಮ್ಮ ಮುಂದಿಡುತ್ತಾರೆ.
ಮಾಲತಿ ಶೆಣೈ ಪತ್ರ ಬರೆದರು- ‘ತೇರೇ ದ್ವಾರ್ ಖಡಾ ಏಕ್ ಜೋಗಿ ’ ಅಂತ. ಮಾತು ತಪ್ಪಿಸುವ ಈ ಜೋಗಿಯನ್ನು ಎಳೆ ತಂದು ಪ್ರತೀ ಮನೆಯ ಬಾಗಿಲಲ್ಲಿ ನಿಲ್ಲಿಸಿದ್ದೇವೆ, ಒಪ್ಪಿಸಿಕೊಳ್ಳಿ-
ಮೇ ಹತ್ತರ ಮಧ್ಯಾಹ್ನ
ನಿನ್ನೆ ಕವಿ ಸಿದ್ಧಲಿಂಗಯ್ಯ ನಿಜಕ್ಕೂ ಹೊಟ್ಟೆ ತುಂಬ ನಗಿಸಿದರು. ತಮಾಷೆಯಾಗಿ ಮಾತಾಡುವಾಗ ನಗಬಾರದು ಎಂಬ ಹಳೆಯ ನಿರ್ಧಾರದಿಂದ ಅವರಿನ್ನೂ ಹೊರಗೆ ಬಂದಿಲ್ಲ ಅನ್ನುವುದೂ ಗೊತ್ತಾಯಿತು. ಅವರಿಗಿಂತಲೂ ಮೊದಲು ಮಾತಾಡಿದ ಸಿ ಎಚ್ ಹನುಮಂತರಾವ್ ಅತ್ಯುತ್ಸಾಹದಿಂದಲೂ, ರಾಮೇಗೌಡರು ಅತ್ಯುಗ್ರವಾಗಿಯೂ ಭಾಷಣ ಮಾಡಿದ್ದರು. ನಾವೆಲ್ಲ ಕಂಗಾಲಾಗಿ ಕೂತಿದ್ದೆವು.
ಸಿದ್ಧಲಿಂಗಯ್ಯ ಎಂದಿನಂತೆ ತಮ್ಮನ್ನು ತಾವು ಗೇಲಿ ಮಾಡಿಕೊಳ್ಳುತ್ತಾ ಮಾತು ಶುರುಮಾಡಿದರು. ಮೂರ್ತಿ ಚಿಕ್ಕದಾದರೂ ಪ್ರಯೋಜನ ದೊಡ್ಡದು ಎಂದರು. ಎಂಎಲ್ಸಿ ಆದಾಗ ವಿಧಾನಸೌಧದ ಒಳಗೆ ಬಿಡದೇ ಇದ್ದಿದ್ದನ್ನು ಹೇಳಿಕೊಂಡರು. ಅವೆಲ್ಲ ಹಳೆಯ ತಮಾಷೆಗಳೇ. ಒಬ್ಬ ಲೇಖಕ ಜನರಿಂದ ದೂರ ಸರಿದು, ಜನಪ್ರಿಯತೆ ಮತ್ತು ಅಧಿಕಾರಕ್ಕೆ ಹತ್ತಿರವಾಗುತ್ತಿದ್ದಂತೆ ಅವನು ಘಟನೆಗಳಿಗೆ ಸನ್ನಿವೇಶಗಳಿಗೆ ತುತ್ತಾಗುವ ಪ್ರಸಂಗ ಕಡಿಮೆಯಾಗುತ್ತಾ ಬರುತ್ತದೆ. ಅದರೊಟ್ಟಿಗೆ ಕಲ್ಪನೆಗಳೂ ಕ್ಷೀಣಿಸತೊಡಗುತ್ತದೆ. ಹಂಬಲದ ಹಡಗಿನಲ್ಲಿ ಹೊರಟವರಿಗೆ ಅಲೆಗಳ ರೋಷತಪ್ತ ತಲ್ಲಣ ಕಾಣಿಸುವುದೇ ಇಲ್ಲ.
ಸಿದ್ಧಲಿಂಗಯ್ಯ ಹೇಳಿದ ಇದೊಂದು ಘಟನೆ ತಮಾಷೆಯದ್ದೂ ವಿಷಾದದ್ದೂ ಆಗಿತ್ತು. ಮನೆಯಲ್ಲಿ ಅಪಾರ ಗೌರವ ಹೊಂದಿರುವ ವ್ಯಕ್ತಿಗೆ ಹೊರಗೆ ಸಮಾಜದಲ್ಲಿ ಅಂಥ ಗೌರವ ಇರುವುದಿಲ್ಲ. ಹಾಗೇ ಸಮಾಜದಲ್ಲಿ ದೊಡ್ಡ ಗೌರವ ಸಂಪಾದಿಸಿದವನಿಗೆ ಮನೆಯೊಳಗೆ ಅಂಥ ಗೌರವ ಸಿಗುವುದಿಲ್ಲ. ಅಂಥವರನ್ನು ಮನೆಗೆ ಮಾರಿ ಅಂತ ಭಾವಿಸುತ್ತಾರೆ. ಆದರೆ ನಾನು ಹಾಗಲ್ಲ. ಎರಡನ್ನೂ ಒಂಥರ ಬ್ಯಾಲೆನ್ಸ್ ಮಾಡುತ್ತಾ ಸಾಗಿದವನು. ಹೀಗಾಗಿ ನನಗೆ ಸಮಾಜದಲ್ಲೂ ಗೌರವ ಅಷ್ಚೊಂದಿಲ್ಲ. ಮನೆಯಲ್ಲೂ ಗೌರವ ಅಷ್ಟೇನಿಲ್ಲ.
ಉಲ್ಲಾಸದ ಕಾರ್ಯಕ್ರಮ ಅದು. ಅಪ್ಪಗೆರೆ ತಿಮ್ಮರಾಜು ನಾವೆಲ್ಲ ಒಂದು ಕಾಲದಲ್ಲಿ ಮೆಚ್ಚಿ ಕಣ್ಣೀರು ಸುರಿಸಿದ್ದ ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಹಾಡಿ ರಂಜಿಸಿದರು. ಪಕ್ಕದಲ್ಲೇ ಕೂತ ಬಿಟಿ ರುದ್ರೇಶ್ ಸಂತೋಷದಿಂದ ನಗುತ್ತಿದ್ದರು. ಬಿಎಸ್ ಕೇಶವರಾವ್ ಜರ್ಮನಿಯ ಜರ್ನಿ ಮತ್ತು ಪ್ಯಾರಿಸ್ಸಿನ ಪ್ರಯಾಣದ ಕತೆಗಳನ್ನು ಬರೆದಿದ್ದಾಗಿ ಹೆದರಿಸಿದರು.
ಸಂಜೆ ಕವಿ ಬಿ ಆರ್ ಲಕ್ಷ್ಮಣರಾವ್ ಬರೆದ ‘ನಂಗ್ಯಾಕೋ ಡೌಟು’ ನಾಟಕವಿತ್ತು. ಅದು ಚೆನ್ನಾಗಿರುವುದು ಯಾಕೋ ಡೌಟು ಅಂತ ತಮಾಷೆ ಮಾಡಿಕೊಂಡು ಅತ್ತ ತಲೆ ಹಾಕಲಿಲ್ಲ.
ಉರಿಕಂಡಾಯ ಪುಸ್ತಕವನ್ನು ತುಂಬಾ ಸೊಗಸಾಗಿ ತಂದಿದ್ದರು ಪ್ರಕಾಶ್. ಪೆಂಗ್ವಿನ್ ಪ್ರಕಾಶನದ ಪುಸ್ತಕದ ಹಾಗೆ ಸಂತೋಷ ಕೊಡುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿದೆ ಎಂದು ಸಿದ್ಧಲಿಂಗಯ್ಯ ಹೊಗಳಿದರು. ನನ್ನ ಪುಸ್ತಕವನ್ನು ಹೀಗೆ ತರೋದು ಯಾವಾಗ ಅಂತ ಕೇಳಿದೆ. ಮೊದಲು ಇನ್ನೂರೈವತ್ತು ಪುಟದ ಕಾದಂಬರಿ ಬರೀರಿ. ಆಮೇಲೆ ನೋಡಿ ಅಂದರು. ಜಾಸ್ತಿ ಹೊತ್ತು ಅಲ್ಲೇ ಇದ್ದರೆ ನನ್ನ ಕುತ್ತಿಗೆಗೇ ಬರುತ್ತೆ ಅಂತ ಗಾಬರಿಯಾಗಿ ಆಕಾಶ ನೋಡುತ್ತಾ ಅಲ್ಲಿಂದ ಹೊರಬಿದ್ದೆ.
ಬಸವನಗುಡಿ ಕ್ಲಬ್ಬಿನಲ್ಲಿ ಬಿಯರು ಬಿಸಿಯಾಗುತ್ತಿದ್ದ ಮಧ್ಯಾಹ್ನ.





maathu , beeru harate yella bittu baredare vattu samaajakke valleyadu
liked this piece immencely. Navya movement made a mark with such remarks and sence of humour. these type of reports keep us informed without being too heavy on us.