ಈ ಹದಿನೈದು ಭಾನುವಾರ ಪುರುಷೋತ್ತಮ ಬಿಳಿಮಲೆ ಅವರ ಬಹುರೂಪ ಪುಸ್ತಕ ಬಿಡುಗಡೆ ಆಗುತ್ತಿದೆ.
ಯಾಜಿ ಪ್ರಕಾಶನದಿಂದ ಹೊರ ಬರುತ್ತಿರುವ ಈ ಪುಸ್ತಕದ ಆಹ್ವಾನ ಪತ್ರಿಕೆ ಇಲ್ಲಿದೆ.
ಪುಸ್ತಕಕ್ಕೆ ಡಾ ಬಿ ಎ ವಿವೇಕ್ ರೈ ಅವರು ಮುನ್ನುಡಿ ಬರೆದಿದ್ದಾರೆ.
ಪುಸ್ತಕಕ್ಕೆ ವಿವೇಕ್ ರೈ ಅವರು ಬರೆದ ಮುನ್ನುಡಿ ಇಲ್ಲಿದೆ
ಡಾ . ಪುರುಷೋತ್ತಮ ಬಿಳಿಮಲೆ ಅವರು ‘ವಿಜಯ ಕರ್ನಾಟಕ’ದಲ್ಲಿ ನಿಯತವಾಗಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ ‘ ಬಹುರೂಪ ‘ ಕ್ಕೆ ಮುನ್ನುಡಿಯನ್ನು ಬರೆಯುವ ಕೆಲಸ ಸಂತೋಷದ್ದು ಮತ್ತು ಸವಾಲಿನದ್ದೂ ಹೌದು . ನಾನು ಹಿಂದೆ ‘ ಮುಂಗಾರು ‘ ಮತ್ತು ‘ ಪ್ರಜಾವಾಣಿ ‘ ಪತ್ರಿಕೆಗಳಿಗೆ ಕೆಲವು ಕಾಲ ಅಂಕಣಬರಹ ಬರೆದ ನನ್ನ ಅನುಭವ ಅಂತಹ ನಿಯತಕಾಲಿಕ ಬರವಣಿಗೆಗಳ ಸಂಕಷ್ಟವನ್ನು ನೆನಪು ಮಾಡಿಕೊಡುತ್ತದೆ . ಸಕಾಲಕ್ಕೆ ಬರಹವನ್ನು ಕೊಡುವುದರಿಂದ ತೊಡಗಿ , ನಿರ್ದಿಷ್ಟ ಪದಗಳ ಒಳಗೆ ಅದನ್ನು ಅಡಕಮಾಡುವುದರಿಂದ ಮುಂದುವರಿದು ,ಪ್ರತೀ ಬಾರಿಯೂ ಹೊಸತಾಗಿ ಮತ್ತು ವಿಶಿಷ್ಟವಾಗಿ ಹಾಗೂ ಓದುಗರಿಗೆ ನೇರವಾಗಿ ಸಂವಹನವಾಗಬಲ್ಲ ರೀತಿಯಲ್ಲಿ ಬರೆಯುವುದು ಬಲು ದೊಡ್ಡ ಸಾಹಸ . ಹಾಗಾಗಿ ಪತ್ರಿಕೆಗಳ ಅನೇಕ ಅಂಕಣಗಳು ವಿಷಯದ ಏಕತಾನತೆಯಿಂದ , ಹೊಸ ಒಳನೋಟಗಳ ಕೊರತೆಯಿಂದ ,ಅನುಭವ ಮತ್ತು ಅಧ್ಯಯನಶೀಲತೆಯ ಮಿತಿಯಿಂದ ,ಸಂವಹನಶೀಲತೆಯ ಬಿರುಕಿನಿಂದ ಬಳಲುತ್ತವೆ .ಆದರೆ ಡಾ . ಬಿಳಿಮಲೆ ಈ ಎಲ್ಲ ಸವಾಲುಗಳನ್ನು ಎದುರಿಸಿ ಅವುಗಳನ್ನು ಮೀರಿ ,ಸುಮಾರು ಮೂರು ವರ್ಷಗಳ ಕಾಲ ಅವರ ಅಂಕಣವನ್ನು ಓದುಗರು ಸದಾ ಎದುರುನೋಡುವಂತೆ ಬರೆಯುತ್ತ ಬಂದಿದ್ದಾರೆ .
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪರಿಸರದ ಬಂಟಮಲೆ ಕಾಡಿನ ಬಳಿಯ ವಾಟೆಕಜೆ ಮನೆಯಲ್ಲಿ ಹುಟ್ಟಿ ಬೆಳೆದ ಪುರುಷೋತ್ತಮ ಮುಂದೆ ಬಿಳಿಮಲೆ ,ಪಂಜ , ಸುಳ್ಯ , ಮಂಗಳೂರು , ಹಂಪಿಗಳಲ್ಲಿ ಕಲಿತು ಕಲಿಸಿ ಕಲೆತು ಕೊನೆಗೆ ದೆಹಲಿಗೆ ಬಂದಿದ್ದಾರೆ . ಹೀಗೆ ಹಳ್ಳಿಯಿಂದ ದಿಲ್ಲಿಗೆ ಮೆಟ್ಟಿಲುಗಳನ್ನು ಏರುತ್ತಾ ಸಾಗಿದ್ದಾರೆ . ಈಗ ದೆಹಲಿಯ ಅಂತಾರಾಷ್ಟ್ರೀಯ ಅಧ್ಯಯನ ಕೇಂದ್ರದಲ್ಲಿ ಕುಳಿತುಕೊಂಡು ಅಂಕಣಗಳನ್ನು ಬರೆಯುವಾಗ ಅವರ ನೆನಪುಗಳು ಅವರ ಹಳ್ಳಿಯಿಂದ ಆರಂಭವಾಗುತ್ತವೆ . ಬಾಲ್ಯದ ನೆನಪುಗಳನ್ನು ಮರುನೆನೆದುಕೊಳ್ಳುವ ಪ್ರಕ್ರಿಯೆಗೆ ಬಹಳ ಒಳ್ಳೆಯ ಅವಕಾಶವೆಂದರೆ ಅಂಕಣ ಬರಹ . ಅದು ಗತಕಾಲದ ಅನುಭವಗಳ ಕಥನದ ಮೂಲಕ ವರ್ತಮಾನ ಕಾಲಕ್ಕೆ ಪ್ರವೇಶಮಾಡಿ , ಒಂದು ಕ್ಷಣ ಬೆರಗನ್ನು ಮತ್ತು ವಿಷಾದವನ್ನು ಒಟ್ಟಿಗೇ ಪಡೆಯುವ ‘ಅಕ್ಷರ ಬಯಲಾಟ ‘ . ಬಹಳ ಮಂದಿ ಹೊಸ ಮೆಟ್ಟಿಲುಗಳನ್ನು ಏರುತ್ತಾ ಹೋದ ಹಾಗೆ ಹಳೆಯ ಮೆಟ್ಟಿಲುಗಳನ್ನು ಮರೆತುಬಿಡುತ್ತಾರೆ , ಇಲ್ಲವೇ ಏರಿದ ಏಣಿಗಳನ್ನು ಕೆಳಕ್ಕೆ ತಳ್ಳಿಬಿಡುತ್ತಾರೆ . ಆದರೆ ಪುರುಷೋತ್ತಮ ಹಾಗೆ ಆಗಿಲ್ಲ ಎನ್ನುವುದೇ ಅವರ ವ್ಯಕ್ತಿತ್ವದ ಮತ್ತು ಬರವಣಿಗೆಯ ಅನನ್ಯತೆ .
ಬಿಳಿಮಲೆ ತಮ್ಮ ಅಂಕಣ ಬರಹಗಳನ್ನು ಐದು ವಿಭಾಗಗಳನ್ನಾಗಿ ವಿಂಗಡಿಸಿಕೊಂಡಿದ್ದಾರೆ . ಇದು ಕಾಲಾನುಕ್ರಮಣಿಕೆಯ ದೃಷ್ಟಿಯಿಂದ ಪುರುಷೋತ್ತಮರ ಬದುಕಿನ ಪಂಚಸ್ಥಲಗಳ ಹಾಗಿ ಕಾಣಿಸಿಕೊಳ್ಳುತ್ತದೆ . ಆದರೆ ಅವರು ಈ ಐದೂ ಸ್ಥಲಗಳಲ್ಲಿ ಇವತ್ತೂ ಜೀವಂತವಾಗಿದ್ದಾರೆ . ಅವರ ಬಾಲ್ಯದ ನೆನಪುಗಳ ಬರಹಗಳನ್ನು ಮತ್ತೆ ಮತ್ತೆ ಓದಿ ನಾನು ಸಂಭ್ರಮಪಟ್ಟಿದ್ದೇನೆ . ತಮ್ಮ ಬಂಟಮಲೆ ಮನೆಯ ಪಕ್ಕದ ಕಿರುತೊರೆ ಮತ್ತು ಅದರ ಸುತ್ತ ಇರುವ ಬಗೆಬಗೆಯ ಕಥನಗಳು ಮತ್ತು ಆ ಪರಿಸರದಲ್ಲಿ ಬೆರಗುಗಣ್ಣಿನಿಂದ ನೋಡಿದ ಯಕ್ಷಗಾನ ಆಟಗಳು -ಇವೆಲ್ಲ ಪುರುಷೋತ್ತಮ ಅವರ ಮನಸ್ಸಿನಲ್ಲಿ ದಟ್ಟವಾಗಿ ಅಚ್ಚೊತ್ತಿ , ಅವರು ರಾಚನಿಕವಾಗಿ ಗಂಗೆ ಯಮುನೆಯಂತಹ ದೊಡ್ಡ ನದಿಗಳ ಬಗ್ಗೆ ಮತ್ತು ಜಾಗತಿಕ ರಂಗಭೂಮಿಯ ಬಗ್ಗೆ ಕುತೂಹಲದಿಂದ ಚರ್ಚಿಸಲು ಅವಕಾಶ ಕಲ್ಪಿಸುತ್ತದೆ . ನಾವು ಇವತ್ತು ಹೇಳುವ ದೊಡ್ಡ ಶಬ್ದವಾದ ‘ ಸಂಸ್ಕೃತಿ ‘ ಎನ್ನುವುದು ಕಿರುತೊರೆ, ಕಾಗೆ ಮುಟ್ಟಿದ ಕತೆ , ಇಲಿಗಳು , ಬಿದಿರಕ್ಕಿ , ಯಕ್ಷಗಾನ , ಅರೆಭಾಷೆ – ಇವುಗಳ ಮೂಲಕವೇ ಬೆಳೆಯುತ್ತ ಅನುಭವವೇದ್ಯವಾಗುತ್ತ ಬರುತ್ತದೆ . ನಾವು ಅಧ್ಯಯನ ಶಿಸ್ತು ಎಂದು ಭಾವಿಸುವ ‘ ಜಾನಪದ ‘ ಆರಂಭವಾಗುವುದೇ ಕುಟ್ಟ ಬ್ಯಾರಿಯ ಪುಟ್ಟಕತೆ ,ಚೌರಿಗರ ಕೃಷ್ಣಪ್ಪನ ಕೀಚಕ ವೇಷ ,ಕಳಕೊಂಡ ನಾಲ್ಕಾಣೆ ಮತ್ತು ಯಕ್ಷಗಾನ – ಇಂತಹ ಬಾಲ್ಯದ ಅನುಭವಗಳ ಮೂಲಕ . ಹಾಗಾಗಿಯೇ ಎರಡನೆಯ ಭಾಗದ ಜಾನಪದ ಅಧ್ಯಯನದ ಬೇರುಗಳು ಮೊದಲನೆಯ ಹಂತದ ಬದುಕಿನ ಚೇಷ್ಟೆಗಳಲ್ಲಿವೆ .
ಪುರುಷೋತ್ತಮ ಅವರು ಸುಳ್ಯದ ನೆಹರು ಸ್ಮಾರಕ ಕಾಲೇಜಿನಲ್ಲಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಅಧ್ಯಾಪಕರಾಗಿದ್ದಾಗ ಯಕ್ಷಗಾನ ಮತ್ತು ನಾಟಕಗಳಲ್ಲಿ ಪಾತ್ರ ಮಾಡುವ ಹುಮ್ಮಸ್ಸಿನ ಜೊತೆಗೆ ಬಂಡಾಯ ಸಂಘಟನೆಗಳಲ್ಲಿ ಸೈದ್ಧಾಂತಿಕವಾಗಿ ತೊಡಗಿಸಿಕೊಂಡಿದ್ದರು . ಈ ಮನೋಧರ್ಮ ಅವರ ಸುಪ್ತ ಪ್ರಜ್ಞೆಯಲ್ಲಿ ಬಾಲ್ಯದಿಂದಲೇ ಬಂದುದು ಎನ್ನುವುದು ಅವರ ‘ವಿದ್ಯೆಯಿಲ್ಲದ ಜಾತಕ ಮತ್ತು ನನ್ನ ಶಾಲೆ ‘ ಎಂಬ ಬರಹದಲ್ಲಿ ಸೂಚಿತವಾಗಿದೆ . ‘ ಮನೆಮುರುಕರು ಮತ್ತು ಮಂಗಳೂರು ಮಲ್ಲಿಗೆ ‘ ಎಂಬ ಲೇಖನ ಈ ದೃಷ್ಟಿಯಿಂದ ಪ್ರಾದೇಶಿಕ ಸಂಸ್ಕೃತಿಯನ್ನು ನೋಡುವಂಥದ್ದು . ಕರಾವಳಿಯ ಮೂರು ಕೋಮುಗಳ ನಡುವಿನ ಸಾಮರಸ್ಯವನ್ನು ಅವರು ‘ ಮಂಗಳೂರು ಮಲ್ಲಿಗೆ ‘ ಯ ರೂಪಕದ ಮೂಲಕ ಹೇಳುವ ಬಗೆ ಮಾರ್ಮಿಕವಾದುದು -” ಕರಾವಳಿಯ ಪುಟ್ಟ ಮಂಗಳೂರು ಮಲ್ಲಿಗೆ ಎಲ್ಲೆಡೆಯು ಪ್ರಸಿದ್ಧ . ಅದನ್ನು ಒಂದು ಕೋಮಿನವರು ಬೆಳೆಸುತ್ತಾರೆ , ಇನ್ನೊಂದು ಕೋಮಿನವರು ಸಾಗಾಣಿಕೆ ಮಾಡುತ್ತಾರೆ , ಮತ್ತೊಂದು ಕೋಮಿನವರು ಮಾರಾಟ ಮಾಡುತ್ತಾರೆ . ಮಲ್ಲಿಗೆಯ ಪರಿಮಳ ಎಲ್ಲೆಡೆಯೂ ಪಸರಿಸಿಕೊಳ್ಳುತ್ತದೆ . ಈ ಅರ್ಥದಲ್ಲಿ ಮಂಗಳೂರು ಮಲ್ಲಿಗೆಯು ಕೋಮು ಸೌಹಾರ್ದತೆಗೊಂದು ಸಂಕೇತ . ”
ಅರೆಭಾಷೆಯನ್ನು ಮಾತೃ ಭಾಷೆಯಾಗಿ ಉಳ್ಳ ಪುರುಷೋತ್ತಮ ಪರಿಸರದ ಭಾಷೆ ತುಳುವಿನ ಬಗ್ಗೆ ನಡೆಸಿದ ಅಧ್ಯಯನ ಮತ್ತು ಪ್ರಕಟಿಸಿದ ಕಾಳಜಿ ಅಪೂರ್ವವಾದುದು . ‘ ತುಳು ಭಾಷೆಗೆ ಸಂವಿಧಾನದ ಮಾನ್ಯತೆ ‘ ಎನ್ನುವ ಲೇಖನದಲ್ಲಿ ತುಳುಭಾಷೆಯ ಶಕ್ತಿಯನ್ನೂ ತುಳುವರ ದೌರ್ಬಲ್ಯವನ್ನೂ ಒಟ್ಟಿಗೆ ಅನಾವರಣ ಮಾಡುತ್ತಾರೆ . . ಬಾಲ್ಯದಿಂದಲೇ ಯಕ್ಷಗಾನಕ್ಕೆ ತೆರೆದುಕೊಂಡ ಅವರು ಅದರ ಮಯಾಲೋಕವನ್ನೂ ವಾಸ್ತವ ಜಗತ್ತನ್ನೂ ಸೂಕ್ಮವಾಗಿ ಗ್ರಹಿಸಿಕೊಂಡ ಬರಹಗಳು ಇಲ್ಲಿವೆ . ತಾಳಮದ್ದಲೆಯ ಭಾಷಾಲೋಕ ಮತ್ತು ತುಳು ಯಕ್ಷಗಾನದ ದೇಸಿಲೋಕ ಇವೆರಡನ್ನೂ ಸಾಮಾಜಿಕವಾಗಿ ವಿವರಿಸುವ ಕ್ರಮ ವಿಶಿಷ್ಟವಾದುದು .
‘ಬಹುರೂಪ ‘ ದ ಎರಡನೆಯ ಭಾಗದಲ್ಲಿ ಬಿಳಿಮಲೆ ತಮ್ಮ ಊರು ಮತ್ತು ಜಿಲ್ಲೆಗಳನ್ನು ಮೀರಿ ಕರ್ನಾಟಕದ ವ್ಯಾಪ್ತಿಗೆ ಬರುತ್ತಾರೆ . ಕನ್ನಡ ಭಾಷೆ ಮತ್ತು ಕರ್ನಾಟಕದ ಜಾನಪದದ ಬಹುರೂಪಗಳು ಇಲ್ಲಿ ತೆರೆದುಕೊಳ್ಳುತ್ತವೆ . ‘ ಕನ್ನಡ ಭಾಷೆಗೆ ರಾಷ್ಟ್ರೀಯ ಮತ್ತು ಜಾಗತಿಕ ಮನ್ನಣೆ ‘ ಎನ್ನುವ ಲೇಖನದಲ್ಲಿ ಕರ್ನಾಟಕದ ರಾಜಕೀಯ ಮತ್ತು ಆಡಳಿತದ ವ್ಯಕ್ತಿಗಳ ನಿರಾಸಕ್ತಿ ಹೇಗೆ ಕನ್ನಡಕ್ಕೆ ರಾಷ್ಟ್ರೀಯ ಮನ್ನಣೆ ದೊರೆಯಲು ಅಡ್ಡಿಯಾಗಿದೆ ಎನ್ನುವ ವಿವರಗಳು ದೊರೆಯುತ್ತವೆ . ‘ ಕನ್ನಡ ದೇಸಿ ಅಂದರೆ ನೀರುಳ್ಳಿ ‘ ಎನ್ನುವ ಬರಹ ಒಂದು ರೂಪಕವಾಗಿ ಕನ್ನಡ ಸಂಸ್ಕೃತಿಯ ಗ್ರಹಿಕೆಯ ಬಹುಬಗೆಯ ನೋಟಗಳನ್ನು ಧ್ವನಿಸುತ್ತದೆ . ಹೀಗೆ ಹೇಳುವಾಗಲೇ ಬಹುಧರ್ಮಗಳ ಸಂಕೀರ್ಣ ರೂಪವೇ ಕನ್ನಡ ಸಂಸ್ಕೃತಿ ಎನ್ನುವ ಧ್ವನಿ ಗಟ್ಟಿಯಾಗಿದೆ . ನೀರುಳ್ಳಿ ಯನ್ನು ಸುಲಿಯುತ್ತ ಬಂದು ಕೊನೆಗೆ ಏನೂ ಉಳಿಯದ ಸ್ಥಿತಿ ಬರುವ ಹಾಗೆ ಕರ್ನಾಟಕದ ಸಂಸ್ಕೃತಿಯಿಂದ ತಮಗೆ ಒಪ್ಪಿಗೆಯಾಗದ ಅಂಶಗಳನ್ನು ತಿರಸ್ಕರಿಸುವ ಅಪಾಯವನ್ನು ಇಲ್ಲಿ ಮಾರ್ಮಿಕವಾಗಿ ಸೂಚಿಸಲಾಗಿದೆ . ಕರ್ನಾಟಕದ ಜಾನಪದ ಅಧ್ಯಯನ , ಕರ್ನಾಟಕದ ಜಾತ್ರೆಗಳು , ಪುರಾಣಗಳು , ಕಲೆಗಳು – ಇವುಗಳನ್ನು ಕುರಿತ ಇಲ್ಲಿನ ಬರಹಗಳು ಕಿರಿದರೊಳ್ ಪಿರಿದರ್ಥವನ್ನು ಹೇಳುವ ಮಾದರಿಯವು . ಕುಮ್ಮಟ ದುರ್ಗ, ಮೈಲಾರಲಿಂಗ ಜಾತ್ರೆ , ಕಳಸದ ಕತೆ , ಲಿಖಿತ ಪುರಾಣಗಳು ಮತ್ತು ಜನಪದ ಪುರಾಣಗಳು , ಕನ್ನಡ ಪಂಚಭೂತಗಳು , ಕರ್ನಾಟಕದ ಐತಿಹ್ಯಗಳು -ಹೀಗೆ ಕರ್ನಾಟಕ ಜಾನಪದದ ಒಂದೊಂದು ವಿಷಯವೂ ಇಲ್ಲಿ ಸಂಕ್ಷಿಪ್ತವಾಗಿ ಚರ್ಚೆಗೆ ಒಳಗಾಗಿದೆ . ಕ್ಷೇತ್ರಕಾರ್ಯದ ಮಾಹಿತಿಯನ್ನು , ಜಾನಪದ ಅಧ್ಯಯನದ ಒಳನೋಟವನ್ನು ಮತ್ತು ಸಾಂಸ್ಕೃತಿಕ ಪ್ರವಾಸದ ಸೂಚನೆಯನ್ನು ಒಟ್ಟಿಗೆ ಕೊಡುವ ಸಮನ್ವಯದ ಮಾದರಿಯಲ್ಲಿ ಇಲ್ಲಿನ ಬರಹಗಳು ಇವೆ . ‘ ಕರ್ನಾಟಕ ಜನಪದ ಕಲೆಗಳಿಗೆ ಯುನೆಸ್ಕೋ ಮನ್ನಣೆ ಏಕಿಲ್ಲ’ ಎಂಬ ಲೇಖನದ ರಚನೆಯು ಕನ್ನಡ ಭಾಷೆಗೆ ರಾಷ್ಟ್ರೀಯ ಮನ್ನಣೆ ಏಕಿಲ್ಲ ಎನ್ನುವ ಮಾದರಿಯದ್ದು . ಕೇರಳದಂತಹ ರಾಜ್ಯದ ಜೊತೆಗೆ ಹೋಲಿಸಿಕೊಂಡು ಜಾಗತಿಕ ಮಟ್ಟದಲ್ಲಿ ಕರ್ನಾಟಕವು ಗೈರುಹಾಜರಾಗುವುದಕ್ಕೆ ಇರುವ ರಾಜಕೀಯ ಕಾರಣಗಳನ್ನು ತುಂಬಾ ನೇರವಾಗಿ ಇಲ್ಲಿ ಪ್ರಸ್ತಾವಿಸಲಾಗಿದೆ . ಪ್ರಾದೇಶಿಕ ಪಕ್ಷಗಳು ಎನ್ನುವ ಹೆಸರಿನಲ್ಲಿ ಕರ್ನಾಟಕದಲ್ಲಿ ಮತ್ತು ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಈಗ ನಡೆಯುತ್ತಿರುವ ಹೊಂದಾಣಿಕೆಯ ರಾಜಕೀಯ ಹೇಗೆ ‘ಪ್ರಾದೇಶಿಕತೆ ‘ ಎನ್ನುವ ಪರಿಕಲ್ಪನೆಗೆ ಅವಹೇಳನ ಎನ್ನುವ ಸಂಗತಿಯನ್ನು ಸಮರ್ಪಕ ವಿವರಗಳೊಂದಿಗೆ ಚರ್ಚಿಸಲಾಗಿದೆ .
ಈ ಗ್ರಂಥದ ಮೂರನೆಯ ಭಾಗದಲ್ಲಿ ಬಿಳಿಮಲೆ ಅವರು ದೆಹಲಿಯಲ್ಲಿ ಕುಳಿತುಕೊಂಡು ಕರ್ನಾಟಕವನ್ನು ಮತ್ತು ಭಾರತವನ್ನು ನೋಡುತ್ತಾರೆ . ದೇಶದ ರಾಜಧಾನಿಯಾದ ದೆಹಲಿಯು ಅಧಿಕಾರದ ಕೇಂದ್ರವಾಗಿ ಮಾತ್ರವಲ್ಲದೆ , ರಾಜ್ಯಗಳ ಗುರುತುಗಳಿಗೆ ಬಯಲು ಆಗುವ ಇತಿಹಾಸದ ವಿವರಗಳನ್ನು ಕೊಡುತ್ತಾರೆ . ಹಾಗಾಗಿ ಕನ್ನಡದ ಗುರುತು ,ಕನ್ನಡಿಗರ ವಲಸೆ , ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕನ್ನಡ , ಗಡಿ ದಾಟಿದ ಯಕ್ಷಗಾನ – ಇವೆಲ್ಲವನ್ನು ರಾಷ್ಟ್ರೀಯತೆಯ ಸಂಕೀರ್ಣ ಪರಿಕಲ್ಪನೆಯ ಒಳಗೆ ನೋಡುವ ದೃಷ್ಟಿಕೋನ ಕಾಣಿಸುತ್ತದೆ . ಸ್ಥಳೀಯತೆ ಮತ್ತು ಪ್ರಾದೇಶಿಕತೆಗಳು ತಮ್ಮ ಅನನ್ಯತೆಗಳನ್ನು ಉಳಿಸಿಕೊಂಡು ರಾಷ್ಟ್ರೀಯತೆಯ ಒಳಗೆ ಕ್ರಿಯಾಶೀಲ ಆಗುವುದು ಬಹಳ ಮುಖ್ಯವಾದುದು . ಆದ್ದರಿಂದಲೇ ರಾಷ್ಟ್ರೀಯ ದೃಷ್ಟಿಕೋನ ಎನ್ನುವುದು ಬಂಟಮಲೆ ಬಿಳಿಮಲೆ ಪಂಜ ಸುಳ್ಯ ತುಳುನಾಡು ಮತ್ತು ಕರ್ನಾಟಕ – ಇವನ್ನು ಬಿಟ್ಟು ಬೇರೆಯಾಗಿ ಇರಲು ಸಾಧ್ಯವಿಲ್ಲ .
‘ಬಹುರೂಪ’ ದ ನಾಲ್ಕನೆಯ ಭಾಗದಲ್ಲಿ ಪುರಾಣ , ಇತಿಹಾಸ ಮತ್ತು ವರ್ತಮಾನಗಳನ್ನು ಮುಖಾಮುಖಿ ಮಾಡಿ ನದಿಗಳು ,ಕ್ಷೇತ್ರಗಳು ಮತ್ತು ಪುರಾಣಕತೆಗಳನ್ನು ವಿವರಿಸಲಾಗಿದೆ . ಸಿಂಧೂ , ಗಂಗೆ , ಯಮುನೆ , ಸರಸ್ವತಿ ನದಿಗಳ ಸಂಕಥನಗಳು ಬಹುಮುಖಿ ಸಾಮಗ್ರಿಗಳ ವಿವೇಚನೆಯ ಮೂಲಕ ತುಂಬಾ ಮಹತ್ವದ್ದಾಗಿವೆ . ಈ ನಾಲ್ಕು ನದಿಗಳ ಪುರಾಣ , ಇತಿಹಾಸ ಮತ್ತು ವರ್ತಮಾನವನ್ನು ಬಿಳಿಮಲೆ ತಮ್ಮ ವ್ಯಾಪಕ ಅಧ್ಯಯನ ಮತ್ತು ಲವಲವಿಕೆಯ ಕ್ಷೇತ್ರಕಾರ್ಯದ ಮೂಲಕ ಹೊಸ ಪುರಾಣ ಕತೆಗಳಂತೆ ಕಟ್ಟಿಕೊಟ್ಟಿದ್ದಾರೆ . ಅವರಿಗೆ ‘ ಕತೆ ‘ ಎನ್ನುವ ಪದ ಬಹಳ ಇಷ್ಟವಾದುದು – ಗಂಗೆಯ ಕತೆ , ಹನುಮಂತನ ಕತೆ , ಹಲವು ಮಹಾಭಾರತಗಳ ಕತೆ , ಮಧ್ಯಕಾಲೀನ ಭಾರತದ ಪ್ರೆಮಕತೆಗಳು – ಹೀಗೆ ನದಿ , ದೇವತೆ ಮತ್ತು ಪುರಾಣ ಸಂಬಂಧಿ ಕತೆಗಳು ಇಲ್ಲಿ ಬಹು ಪದರಗಳ ಜೋಡಣೆಯಿಂದ ಕಥನಗಳಾಗಿವೆ . ಮಥುರಾ , ವಾರಣಾಸಿ ಮತ್ತು ಕುರುಕ್ಷೇತ್ರಗಳ ಪುರಾಣ ,ಇತಿಹಾಸ ಮತ್ತು ವರ್ತಮಾನಗಳ ವೈರುಧ್ಯಗಳು ಮತ್ತು ರೂಪಾಂತರಗೊಂಡ ಬಗೆಗಳು ಇಲ್ಲಿ ಜಾಹೀರು ಗೊಂಡಿವೆ . ಹಾಗಾಗಿಯೇ ಅವರ ದೃಷ್ಟಿಯಲ್ಲಿ ಮಥುರೆಯಲ್ಲಿ ಕೃಷ್ಣ ಮಾರಾಟದ ವಸ್ತುವಾದರೆ , ಕುರೂಪಗೊಂಡದ್ದು ಕುರುಕ್ಷೇತ್ರ ಮತ್ತು ಬೆಳಕಿಲ್ಲದ ನಗರ ವಾರಣಾಸಿ . ಸಾಂಸ್ಥಿಕ ಧರ್ಮಗಳು ವ್ಯಾಪಾರೀ ಧರ್ಮಗಳಾಗುವ ಅಪಮೌಲ್ಯದ ಕತೆಗಳು ಇಲ್ಲಿನ ಬರಹಗಳು .
‘ಬಹುರೂಪ ‘ದ ಕೊನೆಯ ಭಾಗದ ಲೇಖನಗಳು ವಿಶ್ವದ ಹರಹಿನಲ್ಲಿ ಬಿಳಿಮಲೆ ಕಂಡದ್ದು ಮತ್ತು ಕೇಳಿದ್ದು . ಜಪಾನಿನಲ್ಲಿ ಕಂಡ ಆಚರಣೆಗಳು ಮತ್ತು ಕೇಳಿದ ಕತೆಗಳು ಅವರಿಗೆ ಅವರ ಬಾಲ್ಯವನ್ನು ನೆನಪಿಸುತ್ತವೆ . ಜಾಗತಿಕ ಸಂಸ್ಕೃತಿಯನ್ನು ಸ್ಥಳೀಯ ಸಂಸ್ಕೃತಿಯ ಜೊತೆಗೆ ಮುಖಾಮುಖಿಯಾಗಿಸಿ ನೋಡುವ ಕ್ರಮವೇ ಸಂಸ್ಕೃತಿ ಅಧ್ಯಯನದ ತೌಲನಿಕ ಮಾದರಿಯದ್ದು . ಗ್ಲೋಬಲ್ ಮತ್ತು ಲೋಕಲ್ ಗಳನ್ನು ಎದುರುಬದುರು ಇರಿಸಿದಾಗ ಗ್ಲೋಬಲ್ ನ್ನು ಲೋಕಲ್ ಮೂಲಕ ನೋಡುವ ಕ್ರಮವನ್ನು ‘ಗ್ಲೋಕಲ್ ‘ ಎಂದು ಕರೆಯಬಹುದು . ಜಪಾನಿನ ಸೃಷ್ಟಿಪುರಾಣದ ಜಿಗಣೆಗಳು ಬಂಟಮಲೆಯ ಜಿಗಣೆಗಳನ್ನು , ಜಪಾನಿನ ‘ಕಮಿ ‘ ತುಳುನಾಡಿನ ‘ಕುಲೆ ‘ ಗಳನ್ನು ನೆನಪಿಸುವ ಮೂಲಕ ವಿಶ್ವಾತ್ಮಕ ಸಂಸ್ಕೃತಿ ನಿರ್ಮಾಣದ ಸಮಾನ ಆಸಕ್ತಿಯನ್ನು ಪ್ರಕಟಿಸುತ್ತದೆ . ಸೂರ್ಯನನ್ನು ಹೆಣ್ಣು ಎನ್ನುವ ಜಪಾನಿ ಪುರಾಣ ಭಾರತೀಯ ಪುರಾಣಗಳಿಗಿಂತ ಭಿನ್ನವಾಗಿ ತಾಯಿಯ ಸೃಷ್ಟಿಯ ಕಲ್ಪನೆಯನ್ನು ಕೊಡುತ್ತದೆ.’ ದೇಹ ಮತ್ತು ಸಂಸ್ಕೃತಿ ‘ ತುಂಬಾ ಅಪೂರ್ವ ಒಳನೋಟಗಳನ್ನು ಉಳ್ಳ ಲೇಖನ .ಯಕ್ಷಗಾನದಂತಹ ನಮ್ಮ ರಂಗಕಲೆಗಳು ದೇಹದ ಕೆಳಭಾಗವನ್ನು ಹಿಂಭಾಗವನ್ನು ಮತ್ತು ಎಡಭಾಗವನ್ನು ನಿರ್ಲಕ್ಷ್ಯ ಮಾಡಿರುವುದರ ಹಿಂದಿನ ತಾತ್ವಿಕತೆಯ ಪೂರ್ವಗ್ರಹವನ್ನು ಸೂಕ್ಷ್ಮವಾಗಿ ಗುರುತಿಸಿದ್ದಾರೆ . ಅನಾಟಮಿ , ಕಲಾರೂಪ ಮತ್ತು ನಮ್ಮ ತಾತ್ತ್ವಿಕತೆಗಳ ನಡುವಿನ ಅಂತರ್ ಸಂಬಂಧವನ್ನು ಅಧ್ಯಯನ ಮಾಡಲು ಈ ಪುಟ್ಟ ಲೇಖನ ಉತ್ತಮ ಮಾರ್ಗದರ್ಶಿಯಾಗಿದೆ .
ಡಾ . ಪುರುಷೋತ್ತಮ ಬಿಳಿಮಲೆ ತುಂಬಾ ಸಂಕೀರ್ಣವಾದ ಸಂಗತಿಗಳನ್ನು ತಮ್ಮ ಅಂಕಣ ಬರಹಗಳಲ್ಲಿ ಬಿಡಿಬಿಡಿಯಾಗಿ ಚರ್ಚಿಸುತ್ತಾರೆ . ನಿಜವಾದ ಅರ್ಥದಲ್ಲಿ ಇಡೀ ಪುಸ್ತಕದ ಎಲ್ಲ ಬರಹಗಳು ಕೆಲವು ಮುಖ್ಯ ತಾತ್ವಿಕತೆಗಳ ಅಭಿವ್ಯಕ್ತಿಯ ಭಿನ್ನ ರೂಪಗಳು . ಅವನ್ನೆಲ್ಲ ಒಂದುಗೂಡಿಸಿದಾಗ ರಾಷ್ಟ್ರೀಯತೆ ಪ್ರಾದೇಶಿಕತೆ ಮತ್ತು ಸ್ಥಳೀಯತೆಗಳ ಸಂಬಂಧ ,ಧರ್ಮ ಮತ ಜಾತಿ ಮತ್ತು ಭಾಷೆಗಳ ಸಂಬಂಧ , ಸಾಹಿತ್ಯ ಜಾನಪದ ಮತ್ತು ಕಲೆಗಳ ಸಂಬಂಧ – ಹೀಗೆ ಅನೇಕ ಪರಿಮಾಣಗಳ ಮೂಲಕ ಪುನಾರಚನೆ ಮಾಡಬಹುದು .
ಸ್ಥಳೀಯತೆಯ ಸಂಸ್ಕೃತಿ ಮತ್ತು ಬದುಕಿನ ಆರಂಭದ ದಿನಗಳ ಅನುಭವದ ಮೂಲಕ ನಾಡನ್ನು ದೇಶವನ್ನು ಮತ್ತು ವಿಶ್ವವನ್ನು ಕಾಣುವ ದೃಷ್ಟಿಕೋನ ;ಮೌಖಿಕ ಸಂಸ್ಕೃತಿಯನ್ನು ತಳದಲ್ಲಿ ಮತ್ತು ಕೇಂದ್ರದಲ್ಲಿ ಇಟ್ಟುಕೊಂಡು ಅದರ ಮೂಲಕ ಪುರಾಣ ಮತ್ತು ಶಿಷ್ಟಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದು ; ಯಕ್ಷಗಾನ ರಂಗಭೂಮಿಯ ಆಕೃತಿಯ ಮೂಲಕ ರಾಷ್ಟ್ರೀಯ ಮತ್ತು ವಿಶ್ವದ ರಂಗಭೂಮಿ ಕಲೆಗಳನ್ನು ಅಭ್ಯಾಸಮಾದುವುದು ;ಭಾಷೆ ಮತ್ತು ನಾಡಿನ ಅನನ್ಯತೆಯನ್ನು ಸ್ಥಾಪಿಸಲು ನಿರ್ದಿಷ್ಟ ಯೋಜನೆಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು ; ಜಾತೀಯತೆ ಮತ್ತು ಕೊಮುವಾದಗಳು ಜನಪದ ಸಂಸ್ಕೃತಿಯ ಮೇಲೆ ನಡೆಸುತ್ತಿರುವ ಧಾಳಿಯನ್ನು ಸಂಸ್ಕೃತಿಯ ಒಳಗಿನಿಂದಲೇ ಪ್ರತಿರೋಧಿಸುವುದು ; ಪರಂಪರೆಯ ಸಂಸ್ಕೃತಿಯನ್ನು ಗಲೀಜುಮಾಡುವ ಆಧುನಿಕತೆಯ ಹುನ್ನಾರಗಳನ್ನು ಬಯಲುಮಾಡುವುದು – ಇವೆಲ್ಲವನ್ನೂ ತಾಳಮದ್ದಲೆಯ ಅರ್ಥಗಾರಿಕೆಯಂತೆ ಹರಿಕತೆಯ ಪ್ರವಚನದಂತೆ ತುಂಬ ಆಪ್ತವಾಗಿ ಸ್ವಾರಸ್ಯಕರವಾಗಿ ಅನುಭವ ಕಥನ ಮತ್ತು ಗ್ರಂಥ ಪಠನಗಳ ಉಪಕತೆಗಳೊಂದಿಗೆ ಓದುಗರ ಜೊತೆಗೆ ಹಂಚಿಕೊಳ್ಳುವುದು . ಇದು ‘ಬಿಳಿಮಲೆ ಬಹುರೂಪ’ ದ ಆಂಜನೇಯ ಶಕ್ತಿ .








anna…abinandanegalu.pusthaka odalu kaayuttiruve-smitha.
will send you a copy, thanks and best wishes
ಪುರುಷೋತಮ್ ಬಿಳಿಮಲೆ, ವೀಣಾ ಬನ್ನಂಜೆ, ಮೋಹನ್ ಕುಂಟಾರ್
ಮತ್ತು ಯಾಜಿ ಪ್ರಕಾಶನ ಬಳಗಕ್ಕೆ ಹಾರ್ದಿಕ ಅಭಿನಂದನೆಗಳು.
ಕಾರ್ಯಕ್ರಮಕ್ಕೆ ಶುಭಹಾರೈಕೆ.
ABHINANDANE