ಕವಯಿತ್ರಿ ಮತ್ತು ಸಾಮಾಜಿಕ ಕಾರ್ಯಕರ್ತೆ ರೂಪ ಹಾಸನ ಅವರ ಹುಟ್ಟೂರು ಮೈಸೂರು. ತಂದೆ ಮೈಸೂರಿನ ಡಾ.ಎಸ್.ಪ್ರಸನ್ನಕುಮಾರ್ ತಾಯಿ ಬೆಳಗಾವಿಯ ಶ್ರೀಮತಿ ಹೇಮಲತಾ ದಂಪತಿಗೆ ಇವರು ಮೊದಲ ಮಗಳು. ತಂದೆ ಸರಕಾರಿ ಪಶುವೈದ್ಯಾಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದವರು. ತಾಯಿ ಗೃಹಿಣಿ. ತಂದೆ ಸರಕಾರಿ ನೌಕರರಾಗಿರುವ ಕಾರಣ ಮದ್ದೂರು, ಅರಕಲಗೂಡು, ಗೌರಿಬಿದನೂರು ಹೀಗೆ ಚಿಕ್ಕ ಚಿಕ್ಕ ಊರುಗಳಿಗೆ ವರ್ಗಾವಣೆಯಾಗುತ್ತಿದ್ದರು. ಹಾಗಾಗಿ ಅಲ್ಲಿಯ ಸರ್ಕಾರಿ ಶಾಲೆಗಳಲ್ಲಿ ಅವರು ವಿದ್ಯಾಭ್ಯಾಸ ಮಾಡಿ, ಬಿ.ಕಾಂ ಪದವಿ ಪಡೆದರು.
ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದೆಂದರೆ ಚಿಕ್ಕಂದಿನಿಂದಲೂ ತುಂಬಾ ಆಸಕ್ತಿ. ಏಕೆಂದರೆ ಅವರ ತಂದೆ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯಾಗಿದ್ದರು. ಶಾಲಾ ರಜೆ ದಿನಗಳಲ್ಲಿ ತಂದೆಯ ಹಿಂದೆ ಹಳ್ಳಿಗಳಿಗೆ ದನಗಳ ಚಿಕಿತ್ಸೆಗೆಂದು ಭೇಟಿ ಕೊಟ್ಟಾಗ ಅಲ್ಲಿನ ವಾತಾವರಣ ಹಾಗೂ ಬಡತನದ ಪರಿಸ್ಥಿತಿಗಳನ್ನು ಕಣ್ಣಾರೆ ನೋಡುತ್ತಿದ್ದುದು, ಅವರನ್ನೆಲ್ಲ ತಂದೆ ಆಪ್ತವಾಗಿ ಮಾತಾಡುವುದು ಇವರಿಗೆ ತುಂಬಾ ಪ್ರಭಾವ ಬೀರುತ್ತಿತ್ತು. ಡಾ.ಪ್ರಸನ್ನಕುಮಾರ್ ಕಟ್ಟಾ ಜಾತ್ಯಾತೀತರಾಗಿದ್ದರು.
ರೂಪ ಅವರ ಈ ಆಸಕ್ತಿ, ಕಳಕಳಿಗೆ ಪುಷ್ಟಿಕೊಟ್ಟಿದ್ದು ಎನ್.ಎಸ್.ಎಸ್. ಇವರು ಕಾಲೇಜಿನ ಎನ್ಎನ್ ಎಸ್ ಘಟಕದ ಮೂಲಕ ಜನರ ಮಧ್ಯೆ ಸುಮಾರು ಐದು ವರ್ಷ ವಿವಿಧ ರೀತಿಯ ಸಾಮಾಜಿಕ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು, ಕಾಲೇಜಿನ ಸಾಂಸ್ಕೃತಿ, ಸಾಹಿತ್ಯಿಕ ಕಾರ್ಯಕ್ರಮ, ಸ್ಪರ್ಧೆಗಳಲ್ಲಿ ಸದಾ ಮುಂದಿರುತ್ತಿದ್ದರು. ನಂತರ ಹಾಸನ ಮೂಲದ ರಾಜ್ಯ ಸರಕಾರದ ಸಹಕಾರಿ ಲೆಕ್ಕಪರಿಶೋಧಕರಾಗಿ ಸೇವೆ ಸಲ್ಲಿಸುತ್ತಿದ್ದ ಹೆಚ್.ವಿ.ನಾಗಚಂದ್ರ ಅವರೊಂದಿಗೆ ವೈವಾಹಿಕ ಜೀವನಕ್ಕೆ ಜೊತೆಯಾದರು. ಇವರಿಗೆ ನಿಶಾಂತ್ ಒಬ್ಬನೇ ಮಗನಾಗಿದ್ದು, ಅವರು ಇಂಜಿನಿಯರ್ ಆಗಿದ್ದಾರೆ. ಇದು ಅವರ ಸಂಕ್ಷಿಪ್ತ ಹಿನ್ನೆಲೆ ಎನ್ನಬಹುದು.
ಸಿಕಂದರ್ ಅಲಿ : ನೀವು ಮೊದಲು ಬರಹ / ಕಾವ್ಯ ಬರೆದಿದ್ದು ಯಾವಾಗ ?
ರೂಪ : ನಾನು ಅರಕಲಗೂಡಿನಲ್ಲಿ ಒಂಭತ್ತನೆ ತರಗತಿ ಓದುತ್ತಿದ್ದಾಗ, ಶಾಲೆಗೆ ಹೋಗುವ ಹೊತ್ತಿನಲ್ಲಿ ಕಾರಿನ ಕೆಳಗೊಂದು ಪುಟ್ಟ ನಾಯಿಮರಿ ಸಿಕ್ಕಿ ಸಾಯುವ ದೃಶ್ಯವನ್ನು ಕಣ್ಣಾರೆ ನೋಡಿ, ಸಂಕಟದಿಂದ ಒದ್ದಾಡಿ ಹೋದೆ. ಸುಮಾರು ಮೂರು ದಿನ ನನಗೆ ಆ ಅಪಘಾತದ ದೃಶ್ಯ ಮನಸನ್ನು ವಿಚಲಿತಗೊಳಿಸಿ ಕಾಡುತ್ತಿತ್ತು. ಅದೇ ಸಂದರ್ಭದಲ್ಲಿ ಚಿಕ್ಕ ಕವನವೊಂದು ನನ್ನಿಂದ ಹೊರ ಬಿದ್ದಾಗ ನಿರಾಳತೆ ಸಿಕ್ಕಿತು. ಆ ಸಮಯದಲ್ಲಿ ವನಿತಾ ಎಂಬ ಪತ್ರಿಕೆ ಬರುತ್ತಿತ್ತು ಗೆಳತಿಯರು ಅದಕ್ಕೆ ಕಳಿಸಿದ್ದರು. ಅದು ಪ್ರಕಟವೂ ಆಯಿತು. ಹತ್ತು ರೂಪಾಯಿ ಗೌರವಧನ ಕೂಡ ಸಿಕ್ಕಿತ್ತು. ಅದು ನನ್ನ ಮೊದಲ ಕವಿತೆ. ಅದೀಗ ನನ್ನ ಹತ್ತಿರವೂ ಇಲ್ಲ. ಕಳೆದುಹೋಗಿದೆ. ಸಾಹಿತ್ಯಿಕ ಹಿನ್ನೆಲೆ ಅಂತ ಹೋದ್ರೆ… ನನ್ನ ತಾತ ಶ್ರೀ ಎರ್ತೂರು ಶಾಂತಿರಾಜ ಶಾಸ್ತ್ರಿಯವರು ಮೈಸೂರು ಆಸ್ಥಾನದಲ್ಲಿ ವಿದ್ವಾಂಸರಾಗಿದ್ದವರು. ಅವರು ಸುಮಾರು ಐವತ್ತಕ್ಕೂ ಹೆಚ್ಚು ಜೈನ ಧಾರ್ಮಿಕ ಪುಸ್ತಕಗಳನ್ನು ಬರೆದಿದ್ದಾರೆ ಹಾಗೂ ಅನೇಕ ಕೃತಿಗಳ ಅನುವಾದವನ್ನೂ ಮಾಡಿದ್ದಾರೆ. ನಮ್ಮ ಕುಟುಂಬದಲ್ಲಿ ಹೀಗೆ ಸಾಮಾಜಿಕ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದು ನಾನು ಮಾತ್ರ.
ಸಿಕಂದರ್ ಅಲಿ : ಮೊದಲ ಕೃತಿ ಯಾವುದು, ಪ್ರಕಟಣೆಗೆ ಸಮಸ್ಯೆಯಾಯಿತಾ ?
ರೂಪ : ನನ್ನ ಮೊದಲ ಕೃತಿ “ಒಂದಿಷ್ಟು ಹಸಿ ಮಣ್ಣು” 2000ನೇ ಇಸವಿಯಲ್ಲಿ ಪ್ರಕಟವಾಯಿತು. ಅದರ ಹಿಂದಿನ ಸುಮಾರು ಇಪ್ಪತ್ತು ವರ್ಷದಿಂದ ನಾನು ಬರೆದುಕೊಂಡು ಬರುತ್ತಿದ್ದೆ. ಹಲವು ಕವನಗಳು, ಲೇಖನಗಳನ್ನು ಬರೆದಿದ್ದೆ ಆದರೆ ಪುಸ್ತಕವಾಗಿ ಪ್ರಕಟಣೆ ಮಾಡಿರಲಿಲ್ಲ. ಅರಸೀಕೆರೆಯ ಹೊಯ್ಸಳೇಶ್ವರ ಕಾಲೇಜಿನ ಉಪನ್ಯಾಸಕರೂ, ಹಿರಿಯ ಖ್ಯಾತ ಕವಯಿತ್ರಿ ಪ್ರೊ.ಸ.ಉಷಾ ಮೇಡಂ ಹಾಸನದ ನಮ್ಮ ಗೆಳತಿಯರ ಬಳಗದ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಆಗ ನನ್ನ ಕವಿತೆಯನ್ನು ಕೇಳಿ ಪುಸ್ತಕ ಪ್ರಕಟಿಸುವಂತೆ ಸಲಹೆ ನೀಡಿದರು. ನನ್ನ ಮೊದಲ ಕವನಸಂಕಲನ ಪ್ರಕಟಣೆ ಮಾಡಲು ಕೆಲವು ಪ್ರಕಾಶಕರನ್ನು ಅವರೇ ಕೇಳಿದರು. ಯಾರೂ ಒಪ್ಪಲಿಲ್ಲ. ಆಗ ನೆಲಮನೆ ದೇವೆಗೌಡರು ಒಪ್ಪಿ ತಮ್ಮ ನೆಲಮನೆ ಪ್ರಕಾಶನದಿಂದ ನನ್ನ ಕವನ ಸಂಕಲನ ಪ್ರಕಟಿಸಿದರು. ಆ ಕೃತಿ ಬಿಡುಗಡೆಯಾದ ನಂತರ ರಾಜ್ಯಾದ್ಯಂತ ಸುಮಾರು ಎಂಟು-ಹತ್ತು ಪ್ರಶಸ್ತಿಗಳು ಲಭಿಸಿದವು. ಆನಂತರದಲ್ಲಿ ನನ್ನ ಕವನ ಸಂಕಲನಗಳನ್ನು ಐದು ವರ್ಷಕ್ಕೊಮ್ಮೆ ಮಾತ್ರ ಪ್ರಕಟ ಮಾಡುತ್ತಾ ಬಂದಿದ್ದೇನೆ. ಅವಸರದಲ್ಲಿ ಎಂದೂ ಪ್ರಕಟ ಮಾಡಿಲ್ಲ. ಈ ಲೆಕ್ಕಾಚಾರದಲ್ಲಿ ನನ್ನ ಮುಂದಿನ ಕವನ ಸಂಕಲನ 2020 ರಲ್ಲಿ ಬರಬಹುದು! ಪ್ರಮುಖವಾಗಿ ನನ್ನ ಕವನಗಳ ಆಶಯ ಇಷ್ಟೇ ಎಂದು ಹೇಳಲಾರೆ. ಅದರಲ್ಲಿ ವಾಸ್ತವ, ಕಲ್ಪನೆ, ಕನಸು, ಸುಪ್ತಪ್ರಜ್ಞೆಯ ವ್ಯವಹಾರಗಳ ಸಮ್ಮಿಲನವಿರುತ್ತದೆ ಎಂದು ಭಾವಿಸಿರುವೆ.
ಸಿಕಂದರ್ ಅಲಿ : ನೀವು ಕವಿತೆಗಳನ್ನು ಹೇಗೆ ಬರೆಯುತ್ತೀರಿ ?
ರೂಪ : ನನಗೆ ತುಂಬಾ ನೋವು, ಸಂಕಟವಾದಾಗ, ಸಾಮಾಜಿಕ ವ್ಯವಸ್ಥೆಯ ಬಗ್ಗೆ ಅಸಮಾಧಾನ ಮೂಡಿದಾಗ, ತೀವ್ರ ಸಮಸ್ಯೆಗಳನ್ನು ಎದುರಿಸುವಾಗ ನನ್ನ ಭಾವನೆಗಳು ಮಾತಾಡುತ್ತವೆ. ಅವು ಅಕ್ಷರ ರೂಪದಲ್ಲಿ ಹೊರ ಬರಲಾರಂಭಿಸುತ್ತವೆ ಎಂದುಕೊಂಡಿರುವೆ. ನಿಜ ನಾನು ಬರೆದಿದ್ದೆಲ್ಲಾ ಕವನವಾಗುವುದಿಲ್ಲ. ಕೆಲವು ಲೇಖನ ರೂಪ ತಾಳುತ್ತವೆ. ತೀವ್ರವಾಗಿ ಕಾಡಿದ್ದು ಕವಿತೆಯ ರೂಪ ಪಡೆದು ಹೊರಬೀಳುತ್ತದೆ. ಅದೊಂದು ನನ್ನ ತಳಮಳಕ್ಕೆ ಔಟ್ಲೆಟ್. ಇದರಲ್ಲೂ ಕವಿತೆಯಾಗಿರಬಹುದೆಂದು ಭಾವಿಸಿದ್ದನ್ನು ಮಾತ್ರ ಪ್ರಕಟಿಸುತ್ತೇನೆ. ಪ್ರಕಟಿಸುವ ಮುನ್ನ ನನ್ನ ಹಿತೈಷಿಗಳಿಗೆ, ಹಿರಿಯ ಸ್ನೇಹಿತರಿಗೆ ತೋರಿಸಿ, ಸಲಹೆ ಪಡೆದು ಪ್ರಕಟಣೆ ಮಾಡುತ್ತೇನೆ. ವರ್ಷ, ಎರಡು ವರ್ಷಕ್ಕೊಂದು ಸಂಕಲನ ಪ್ರಕಟಿಸುವ ಉಮೇದು ಇಲ್ಲ. ಅಷ್ಟೊಂದು ಬರೆಯುವುದೂ ಇಲ್ಲ. ವಿರಳವಾಗಿಯಷ್ಟೇ ಕವಿತೆ ಮೂಡುತ್ತದೆ.
ಸಿಕಂದರ್ ಅಲಿ : ಸರಕಾರಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಹೋರಾಟ ಮಾಡುವ ಬದಲು ಉನ್ನತ ಶಿಕ್ಷಣಗಳಲ್ಲಿ ಕನ್ನಡ ಮಾಧ್ಯಮ ಮಾಡಲು ಹೋರಾಟ ಮಾಡಬಹುದಲ್ಲವೇ ಆಗ ಕನ್ನಡಾನೇ ಪ್ರಮುಖವಾಗುತ್ತೆ?
ರೂಪ : ಹೌದು ಈ ಸಿದ್ಧಾಂತವನ್ನೂ ಒಪ್ಪುತ್ತೇನೆ. ಆದರೆ ಮೂಲಭೂತ ಶಿಕ್ಷಣ ವ್ಯವಸ್ಥೆ ಸರಿ ಹೋಗದೇ ಉನ್ನತ ಶಿಕ್ಷಣ ವ್ಯವಸ್ಥೆ ಸರಿಪಡಿಸಲಾಗುವುದಿಲ್ಲ. ಈಗ 2-3 ವರ್ಷದ ಮಗುವನ್ನು ಶಾಲೆಗೆ ಸೇರಿಸಲು ಯಾವುದೇ ಊರಿನಲ್ಲಿ ಸರಕಾರಿ ಪೂರ್ವ ಪ್ರಾಥಮಿಕ ಶಾಲೆಗಳು ಇವೆಯಾ? ಅನ್ನುವುದು ಮುಖ್ಯವಾಗುತ್ತೆ, ಅಂಗನವಾಡಿ ಕೇಂದ್ರಗಳು ಶಾಲೆಗಳಲ್ಲ. ಅವು ಕೂಡ ಹಳ್ಳಿಗಳಲ್ಲಿ, ಸ್ಲಂಗಳಲ್ಲಿ ಮಾತ್ರ ಇವೆ. ಅಂಗನವಾಡಿ ಕೇಂದ್ರಗಳು ವ್ಯವಸ್ಥಿತ ಶಿಕ್ಷಣದ ಕೇಂದ್ರಗಳಲ್ಲ. ಅವು ಪೌಷ್ಟಿಕಾಂಶ ಕಡಿಮೆ ಇರುವ ಮಕ್ಕಳಿಗೆ ಪೌಷ್ಟಿಕಾಂಶದ ಆಹಾರ ನೀಡಲು ಇರುವ ಕೇಂದ್ರಗಳು. ಇದರ ಜೊತೆಗೇ ಒಂದಿಷ್ಟು ಪಾಠದ ರೂಪದಲ್ಲಿ ಆಟವಾಡಿಸುತ್ತಾ, ಪೂರಕ ಶಿಕ್ಷಣವನ್ನೂ ಒಂದಿಷ್ಟು ನೀಡುತ್ತವೆ. ಹೀಗಾಗಿ ಆಂಗ್ಲ ಮಾಧ್ಯಮದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ[ಬೇಬಿಸಿಟ್ಟಿಂಗ್, ಎಲ್ಕೆಜಿ, ಯುಕೆಜಿ] ಮಗುವನ್ನು ಕಳಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹಾಗಾಗಿ ನಮ್ಮ ಹಕ್ಕೊತ್ತಾಯ ಏನೆಂದರೆ, ಸರಕಾರವು ಕಡ್ಡಾಯವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಸಮಾನ ಶಿಕ್ಷಣ, ಏಕರೂಪ ಶಿಕ್ಷಣ, ಏಕಪಠ್ಯವನ್ನು ಜಾರಿ ಮಾಡಿ ಉಚಿತ ಶಿಕ್ಷಣವನ್ನು ಎಲ್ಲ ಮಕ್ಕಳಿಗೆ ತಾನೇ ನೀಡಬೇಕು. ಇಂಗ್ಲಿಷ್ ಕೂಡ ಆ ಹಂತದಿಂದಲೇ ಒಂದು ಭಾಷೆಯಾಗಿ ಕಲಿಸಬೇಕು. ಆಗ ಕನ್ನಡ ಸರಕಾರಿ ಶಾಲೆಗೆ ಮಕ್ಕಳು ತಾನಾಗಿ ಬರುತ್ತಾರೆ. ಪೋಷಕರು ಸಹಜವಾಗಿ ಹಿಂದೇಟು ಹಾಕದೇ ಮುಂದಿನ ಕನ್ನಡ ಶಾಲೆಗೆ ಸೇರಿಸುತ್ತಾರೆ. ಈಗಿನ ವ್ಯವಸ್ಥೆಯಲ್ಲಿ ಮೂರು ವರ್ಷ ಖಾಸಗಿ ಆಂಗ್ಲ ಮಾಧ್ಯಮದ ಪೂರ್ವ ಪ್ರಾಥಮಿಕ ಶಾಲೆಗೆ ಹೋಗಿ ಕಲಿತ ಮಗುವನ್ನು, ಮತ್ತೆ ಒಂದನೇ ತರಗತಿಗೆ ಕನ್ನಡ ಮಾಧ್ಯಮ ಶಾಲೆಗೆ ಕರೆದುಕೊಂಡು ಹೋಗಿ ಓದಿಸಲು ಹೆಚ್ಚಿನ ಪೋಷಕರು ಬಯಸಲಾರರು.
ಸಿಕಂದರ್ ಅಲಿ : ನಿಮ್ಮ ಒಂದೊಂದು ಕೃತಿಗಳ ಮೂಲ ಆಶಯಗಳೇನು ?
ರೂಪ : ಒಂದು ಕೃತಿ “ಕೈಚಾಚುತ್ತಿವೆ ಕಂದಮ್ಮಗಳು” ಮಕ್ಕಳಿಗೆ ಸಂಬಂಧಪಟ್ಟಿದ್ದು ಅವರ ಹಕ್ಕುಗಳು, ಅವರ ಸಮಸ್ಯೆಗಳು, ಮಗುವಿಗೆ ಸಂಬಂಧಿಸಿದ ವಿಷಯದ ಜೊತೆಗೆ ಅವರ ಮನಃಸ್ಥಿತಿ ಹೇಗೆ ಅರ್ಥ ಮಾಡಿಕೊಳ್ಳಬೇಕೆನ್ನುವ ಬಗ್ಗೆ, ಯಾವ ಯಾವ ರೀತಿ ದೌರ್ಜನ್ಯಗಳು ಸಮಾಜದಲ್ಲಿ ನಡೆಯುತ್ತವೆ ಅನ್ನೋದು, ಸರಕಾರಿ ಅಂಕಿ ಅಂಶ, ಮಕ್ಕಳ ಕಾನೂನನ್ನೊಳಗೊಂಡ ಕೃತಿ. ಇನ್ನು ಬೇರೆ ಬೇರೆ ಕೃತಿಗಳು ಸಾಮಾಜಿಕ ಕಾಳಜಿ, ವ್ಯವಸ್ಥೆಯ ಮೇಲಿನ ಅಸಮಾಧಾನ, ಲೋಪದೋಷ, ಸ್ತ್ರೀ ಸಂವೇದನೆ, ಮಹಿಳಾ ದೌರ್ಜನ್ಯದ ಬೇರೆ ಬೇರೆ ಮುಖವಾಡಗಳ ಅನಾವರಣಗಳು ಇವೆ. ಕವಿತೆಗೆ ಯಾವುದೇ ರೀತಿಯ ಗಡಿಗಳಿರುವುದಿಲ್ಲ. ಅದು ನಾನು ಒಳಗೊಳ್ಳುವ ಸುತ್ತಿನ ಎಲ್ಲದರ ಸಾವಯವದಿಂದ, ಅದರ ಸಾರವನ್ನು ಪಡೆದುಕೊಂಡು ಇನ್ನೊಂದೇ ರೂಪದಲ್ಲಿ ಬಂದಿರಬಹುದು.
ಸಿಕಂದರ್ ಅಲಿ : ಆಯಾ ಕಾಲದ ಘಟನಾವಳಿಗಳಿಗೆ ಕವಿಗಳ/ಸಾಹಿತಿಗಳ ಸ್ಪಂದನೆ ಹೇಗಿರಬೇಕು? ನಿಮ್ಮ ಸ್ಪಂದನೆ ಹೇಗಿದೆ?
ರೂಪ : ಎಲ್ಲರಿಗೂ ಎಲ್ಲಾನೂ ಕಾಡುತ್ತೆ, ಎಲ್ಲರಿಗೂ ಎಲ್ಲಾ ಕೆಲಸ ಮಾಡೋಕಾಗುತ್ತೆ, ಮಾಡ್ಲೇಬೇಕು ಅಂತ ಒತ್ತಡ ಹಾಕೋದು ತಪ್ಪಾಗುತ್ತೆ. ಅದು ಅವರ ಮನಃಸ್ಥಿತಿ, ಅವರ ಪರಿಸ್ಥಿತಿ, ತೀವ್ರತೆ, ಆದ್ಯತೆಯ ಅನುಸಾರವಾಗಿ ಸ್ಪಂದನೆಯಿರುವಂತದ್ದು. ಎಲ್ಲರಿಗೂ ಇದು ಇಲ್ಲದಿರಬಹುದು. ಇದೆಲ್ಲವೂ ಇದ್ದಾಗ ಆ ತರಹದ ಪ್ರತಿಕ್ರಿಯೆ ಕೊಡಬಹುದು. ನಾನು ಕಾಲೇಜು ದಿನಗಳಿಂದ ಇದೇ ರೀತಿಯ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡದ್ದರಿಂದ ನಾನು ಈ ಕಾಲದ ಘಟನಾವಳಿಗಳಿಗೆ ಕೆಲವಕ್ಕಾದರೂ ಸ್ಪಂದಿಸುತ್ತಿರಬಹುದು. ಖಂಡಿತಾ ಕಾಡುವಿಕೆಯಂತೂ ಇರುತ್ತದೆ. ಒಬ್ಬ ಕವಿಯಾಗಿ ಪ್ರಸ್ತುತ ತಲ್ಲಣಗಳಿಗೆ ಮನಸ್ಸಿನ ಮೇಲೆ ಒತ್ತಡ ಬಿದ್ದಾಗ ಪ್ರತಿಕ್ರಿಯೆ ಯಾವುದೋ ರೂಪದಲ್ಲಿ ಯಾವಾಗಲೋ ಹೊರಬೀಳಬಹುದು. ಸೂಕ್ಷ್ಮ ಸಂವೇದನೆಯ ಬರಹಗಾರರಿಗೆ ಇಂತಹವು ಕಾಡಬಹುದು. ಅವರು ಸ್ಪಂದಿಸಬಹುದು. ಹೊರಜಗತ್ತಿನ ವ್ಯವಸ್ಥೆಯಲ್ಲಿ, ಸಮಾಜದಲ್ಲಿ ಆಗುತ್ತಿರುವ ವೈಪರೀತ್ಯಗಳನ್ನು ವಿರೋಧಿಸಿ ನನ್ನ ಕವಿತೆಯಲ್ಲಿ ಅಲ್ಲದಿದ್ದರೂ ಲೇಖನಗಳ ಮೂಲಕ ಬರೆಯುತ್ತಿರುತ್ತೇನೆ. ಬರಹಗಳ ಮೂಲಕ ಜಗಳವಾಡುತ್ತೇನೆ. ಮಕ್ಕಳು ಮತ್ತು ಮಹಿಳೆಯರು ಈ ಸಮಾಜದಲ್ಲಿ ಅಲಕ್ಷಿತರು ಮತ್ತು ನಿರ್ಲಕ್ಷಿತರು. ಪ್ರತಿನಿತ್ಯ ಅವರ ಮೇಲೆ ಹಲ್ಲೆಗಳು, ದೌರ್ಜನ್ಯಗಳು, ಅತ್ಯಾಚಾರಗಳು ನಡೆಯುತ್ತಿವೆ. ಹಾಗೇ ಪ್ರಕೃತಿಯಲ್ಲಿಯೂ ವ್ಯಾಪಕ ಅಪಸವ್ಯಗಳು ನಡೆಯುತ್ತಿವೆ. ಹಾಗಾಗಿ ನನಗೆ ಮೊದಲ ಆದ್ಯತೆ ಮಹಿಳೆ ಮತ್ತು ಮಕ್ಕಳು. ನಂತರ ಶಿಕ್ಷಣ, ಪರಿಸರ ನನ್ನ ಆದ್ಯತೆಯ ವಿಷಯಗಳು. ಇವುಗಳಿಗೆ ನನ್ನ ಸ್ಪಂದನೆ ಸದಾ ಇರುತ್ತದೆ.
ಸಿಕಂದರ್ ಅಲಿ : ನಿಮ್ಮ ಪ್ರಕಾರ ಕಾವ್ಯ ಎಂದರೇನು ?
ರೂಪ : ಅನಿರೀಕ್ಷಿತವಾಗಿ ಸಾಹಿತ್ಯ ಕ್ಷೇತ್ರಕ್ಕೆ ಬಂದಿದ್ದರಿಂದ, ಸೈದ್ಧಾಂತಿಕವಾಗಿ, ತಾತ್ವಿಕವಾಗಿ ನಾನೆಂದೂ ಕಾವ್ಯವನ್ನು ಅರ್ಥೈಸಿಕೊಳ್ಳಲು ಹೋಗಿಲ್ಲ. ಕಾವ್ಯ ನನ್ನ ಒದ್ದಾಟಗಳಿಗೊಂದು ಹೊರ ದಾರಿ. ಒಂದು ರೀತಿಯಲ್ಲಿ ಅದು ಆತ್ಮ ಸಂಗಾತಿ. ನಾನು ಬೇರೆಯವರ ಮುಂದೆ ಹೇಳೋಕಾಗದಿರುವುದನ್ನು ಯಾವುದೋ ಪ್ರತಿಮೆ, ರೂಪಕ, ಚಿತ್ರವನ್ನು ಬಳಸಿ ಹೊರ ತರುವ ಮಾಧ್ಯಮವಿದು. ‘ಸಾಮಾಜಿಕ ಕೆಲಸ, ಹೋರಾಟಗಳ ಒತ್ತಡಗಳಿಂದ ಕವಿತೆಗಳನ್ನು ಬರೆಯೋದು ಮರೀತೀಯಾ’ ಅಂತ ಕೆಲವರು ಹೇಳುತ್ತಾರೆ. ಆದರೆ ನನಗೆ ನನ್ನ ಕವಿತೆ, “ಕಡಲಿನಾಳದ ನದಿ” ಎನ್ನಿಸುತ್ತಿರುತ್ತೆ. ಏಕೆಂದರೆ ಕಡಲನ್ನು ನೋಡಿ. ಹೊರಗಡೆ ಅಲೆಗಳು ದಡಕ್ಕಪ್ಪಳಿಸುತ್ತಾ ಪ್ರಕ್ಷುಬ್ಧವಾಗಿರುತ್ತೆ. ಆದರೆ ಆಳಕ್ಕೆ ಹೋಗಿ ನೋಡಿದರೆ, ಕಡಲಿನ ಆಳದಲ್ಲಿ ನದಿಯೊಂದು ತಣ್ಣಗೆ ಹರಿಯುತ್ತಿರುತ್ತದೆ! ಬಹುಶಃ ಕಾವ್ಯ ಕೂಡ ಹಾಗೆಯೇ. ಹೊರಗೆ ಎಷ್ಟೇ ಪ್ರಕ್ಷುಬ್ಧತೆಯಿದ್ದರೂ ಕಾವ್ಯ ಒಳಗಿನೊಳಗೆ ತಣ್ಣಗೆ ಹರಿಯುತ್ತಿರುತ್ತದೆ. ಮೌನದಲ್ಲಿ ಪ್ರೀತಿ, ನೋವು, ಜಗಳ, ಆಕ್ರೋಶ, ಅಸಮಾಧಾನ ಹೀಗೆ ಎಲ್ಲಾ ಆಯಾಮಗಳ ಜೊತೆಗೆ ಅನುಸಂಧಾನ ನಡೆಸಿ ಸಾವಯವವಾಗಿ ಹೊರಗಡೆ ಬರುತ್ತಿರುತ್ತೆ ಎನ್ನಿಸುತ್ತೆ. ಕಾವ್ಯ ಸದಾ ನನಗೊಂದು ಬೆರಗು. ಅದನ್ನ ಇಷ್ಟೇ ಎಂದು ವಿವರಿಸಲಾರೆ. ಅದೊಂದು ಅಮೂರ್ತ ಅನುಭೂತಿ. ಅದು ಕೊಡುವ ನಿರಾಳತೆಗೆ ನಾನು ಧನ್ಯ.
ಸಿಕಂದರ್ ಅಲಿ : ಸಾಹಿತ್ಯದಿಂದ ಸಮಾಜ ಬದಲಾವಣೆ ಸಾಧ್ಯವೇ ?
ರೂಪ : ಸಮಾಜ ಬದಲಾವಣೆ ನಿಧಾನವಾದ ಪ್ರೊಸೆಸ್. ಆದರೆ ತೀವ್ರ ಸಂವೇದನಾಶೀಲ ಮನಸುಗಳು ಖಂಡಿತಾ ಬದಲಾಗಲು ಸಾಧ್ಯವಿದೆ. ಸಾಹಿತ್ಯ ಎನ್ನುವುದು ತುಂಬಾ ವಿಶಾಲವಾದಂತಹ ಕ್ಷೇತ್ರ. ಅದು ಒಳಗೊಳ್ಳುವ ತಲ್ಲಣಗಳು ನಮ್ಮನ್ನು ನಿಧಾನಕ್ಕೆ ಜಾಗೃತಗೊಳಿಸುತ್ತದೆ. ಯಾರೋ ಯಾವತ್ತೋ ಬರೆದ ಸಾಹಿತ್ಯ ಇಂದಿಗೂ ಪ್ರಸ್ತುತವಾಗುತ್ತದೆಂದರೆ, ಅದನ್ನು ಓದಿ ಮತ್ತೆ ಮತ್ತೇ ನಾವು ಎಚ್ಚರಗೊಳ್ಳುತ್ತೇವೆಂದರೆ?, ನಮ್ಮೊಳಗು ಅಲುಗುತ್ತದೆಂದರೆ ಅದಕ್ಕೆ ಏನರ್ಥ? ಬುದ್ಧ ಸಾಹಿತಿಯಲ್ಲ! ಆದರೂ ಅವನ ಅನುಭವದ ಹೇಳಿಕೆಗಳು, ಕತೆಗಳು ಸಾರ್ವಕಾಲಿಕವಾಗಿ ಇಂದಿಗೂ ಉಳಿದಿವೆಯಲ್ಲಾ! ಬರವಣಿಗೆಗೆ ಅದ್ಭುತವಾದ ಶಕ್ತಿ ಇದೆ. ಅದು ನಮ್ಮ ಪ್ರಾಮಾಣಿಕತೆಯನ್ನು ಒಳಗೊಂಡು, ನಾವು ನಿಜವಾಗಿಯೂ ತಲ್ಲಣಿಸಿ, ತೀವ್ರತೆಯಿಂದ ಒದ್ದಾಡಿ ಅನುಭವಿಸಿ ನಮ್ಮಿಂದ ಹೊರಬಂದರೆ ಖಂಡಿತ ಅದು ಇನ್ನೊಂದು ಮನಸ್ಸನ್ನು ಅಲುಗಾಡಿಸುವುದರಲ್ಲಿ ಅನುಮಾನವಿಲ್ಲ. ಬರವಣಿಗೆ ಹೇಗೆ ಮೌನದಲ್ಲಿ ಹೊಮ್ಮುತ್ತದೆಯೋ, ಹಾಗೆಯೇ ಬದಲಾವಣೆ ಕೂಡ ನಿಧಾನವಾಗಿ, ಮೌನವಾಗಿ ಆಗುವಂತದ್ದು. ಅದನ್ನು ಅಳತೆ ಮಾಡಲಾಗದಿದ್ದರೂ ಅನೂಹ್ಯ ಸಾಧ್ಯತೆಗಳು ಸಾಹಿತ್ಯಕ್ಕೆ ಇದೆ.
ಸಿಕಂದರ್ ಅಲಿ : ಸಾಹಿತ್ಯ ಮತ್ತು ಚಳವಳಿಗಳ ಮಧ್ಯೆಯಿರುವ ಅಂತರ ಹೇಗೆ ತುಂಬಬಹುದು ?
ರೂಪ : ಚಳವಳಿಯಲ್ಲಿರುವವರೆಲ್ಲರೂ ಬರವಣಿಗೆ ಮಾಡಲು ಸಾಧ್ಯವಿಲ್ಲವೇನೋ ಅಥವ ಬರವಣಿಗೆಯಲ್ಲಿ ತೊಡಗಿಸಿಕೊಂಡವರೆಲ್ಲರೂ ಚಳವಳಿಗಳಲ್ಲಿ ತೊಡಗಿಸಿಕೊಳ್ಳುವುದು ಕಷ್ಟವಾಗಿದೆಯೆನೋ ಎನ್ನುವುದನ್ನು ಯೋಚಿಸಬೇಕು ಅಲ್ಲವೇ. ಒಂದಂತು ನಿಜ. ಅಮಾನವೀಯತೆಗೆ ಪ್ರತಿರೋಧವಂತು ಸಾಹಿತ್ಯದಲ್ಲಿ ಇದ್ದೇ ಇರುತ್ತದೆ. ಇದರಲ್ಲಿ ಮುಖ್ಯವಾದ ವಿಷಯವೇನೆಂದರೆ ವ್ಯವಸ್ಥೆಯಲ್ಲಿ ಗೊಂದಲ ಮೂಡಿಸುವ ಸಲುವಾಗಿ ಯಾರೋ ಒಬ್ಬ ಕ್ರಿಯೆ ಮಾಡುತ್ತಾನೆಂದರೆ, ಬಹುತೇಕರು ಅದಕ್ಕೆ ಪ್ರತಿಕ್ರಿಯೆ ಪ್ರಾರಂಭಿಸುತ್ತಾರೆ. ಆದರೆ ನಾವೇ ಸ್ವತಹ ಕ್ರಿಯೆಯನ್ನು ಹುಟ್ಟು ಹಾಕುವುದರಲ್ಲಿ ಎಡವಿದ್ದೇವೆ. ಆ ಶಕ್ತಿ ನಮ್ಮೊಳಗೆ, ನಮ್ಮ ಸಾಹಿತ್ಯದಲ್ಲಿ ಹಾಗೂ ಚಳವಳಿಗಳಲ್ಲಿ ಏಕಿಲ್ಲ ಎನ್ನುವುದನ್ನು ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳಬೇಕಿದೆ. ಯಾವುದಾದರೊಂದು ವಿವಾದ ಆದಾಗ, ಘಟನೆ ನಡೆದಾಗ ಮಾತ್ರ ಏಕೆ ನಮಗೆ ಆಕ್ರೋಶ, ಆವೇಶ ಬರುತ್ತದೆ? ಅದೂ ಇರಬೇಕು. ಆದರೆ, ಇಲ್ಲಿ ಎಷ್ಟೊಂದು ಜ್ವಲಂತ ಸಮಸ್ಯೆಗಳಿವೆ. ಅದಕ್ಕೆ ನಮ್ಮ ಸ್ಪಂದನೆ ಏಕಿಲ್ಲ? ಚಳವಳಿ ಒಂದು ವ್ಯವಸ್ಥೆಯ ದೌರ್ಜನ್ಯದ ಒತ್ತಡದ ತೀವ್ರತೆಯಲ್ಲಿ ಉಂಟಾಗುವುದೆಂದು ಹೇಳಬಹುದು. ಇವೆಲ್ಲವೂ ಈ ಕಾಲದಲ್ಲಿ ಯಾಕೆ ಸೋಲುತ್ತಿವೆ? ಎಂದರೆ ಅವಸರವೇ ಪ್ರಮುಖ ಕಾರಣವೆನಿಸುತ್ತಿದೆ. ಪ್ರತಿಕ್ರಿಯಾತ್ಮಕವಾದಂತಹ ನಮ್ಮ ಅಭಿವ್ಯಕ್ತಿ ಆ ಕ್ಷಣಕ್ಕೆ ವ್ಯಕ್ತಪಡಿಸಿ ಮುಗಿಸುತ್ತೇವೆ. ಇದೆಲ್ಲವನ್ನೂ ನನ್ನನ್ನೊಳಗೊಂಡಂತೆ ಚಳವಳಿ ಮುನ್ನಡೆಸುವವರು ಹಾಗೂ ಸಾಹಿತ್ಯ ಕ್ಷೇತ್ರದ ಉದಯೋನ್ಮುಖರು ಮನನ ಮಾಡಬೇಕು ಎನ್ನಿಸುತ್ತದೆ. ಹೇಗೆ ಅಭಿವ್ಯಕ್ತಿ ನಮ್ಮ ಹಕ್ಕೋ ಹಾಗೆ ಅಭಿವ್ಯಕ್ತಿ ನಮ್ಮ ಜವಾಬ್ದಾರಿಯೂ ಕೂಡ ಅನ್ನುವುದನ್ನು ಮರೆಯಬಾರದಲ್ಲವೇ? ಆಗ ನಾವು ಕ್ರಿಯಾತ್ಮಕ, ಸೃಜನಾತ್ಮಕತೆಯೆಡೆಗೆ ಚಲಿಸುತ್ತೇವೆನಿಸುತ್ತದೆ.
ಸಿಕಂದರ್ ಅಲಿ : ಸಾಹಿತ್ಯದಿಂದ ಪ್ರಗತಿಪರ ಚಿಂತನೆ ಹುಟ್ಟುತ್ತಿವೆಯಾ ?
ರೂಪ : ಸಾಹಿತ್ಯ ಕೇವಲ ಸಮಾಜದ ಪ್ರತಿಬಿಂಬ ಮಾತ್ರವಲ್ಲ, ಅದು ಕಲ್ಪನೆ, ಕನಸನ್ನೊಳಗೊಂಡಿರುತ್ತದೆ. ಎಲ್ಲಾ ರೀತಿಯಿಂದಲೂ ಚೆಂದವಿರುವ ಒಂದು ಸಮಾನತೆಯ ಕಲ್ಪನೆಯುಳ್ಳ, ಮಾನವೀಯ ಅಂತಃಕರಣವುಳ್ಳ ಸಮಾಜ ಕಟ್ಟುವುದನ್ನು ಒಳ್ಳೆಯ ಮನಃಸ್ಥಿತಿಯಿರುವ ಸಾಹಿತ್ಯ ಸದಾ ಬಯಸುತ್ತಿರುತ್ತದೆ. ಇಂದಿಗಿಂತ ಅದ್ಭುತವಾದ, ಸುಂದರವಾದ ನಾಳೆಯ ಸಮಾಜದ ಕಲ್ಪನೆ ಅಥವಾ ಅಸಹಜವಾದರೂ ಒಂದು ಯುಟೋಪಿಯನ್ ರಾಜ್ಯದ ಕನಸಿರುತ್ತದೆ ಎನ್ನಬಹುದು. ಅದನ್ನು ಪ್ರಗತಿಪರತೆ ಎಂದು ಸೀಮಿತ ಮಾಡುವುದು ಬೇಡ. ಅದಕ್ಕೆ ವಿಶಾಲ, ವಿಸ್ತಾರ, ಆಳವಾದ ಕ್ಯಾನ್ವಾಸ್ ಇದೆ. ಅದು ನನಸು ಮಾಡಬೇಕಾದ ಬಹು ದೊಡ್ಡ ಕನಸು ಅಷ್ಟೇ. ಅದನ್ನು ಹುಟ್ಟುಹಾಕುವುದು ಸಾಹಿತ್ಯ.
ಸಿಕಂದರ್ ಅಲಿ : ಉದಯೋನ್ಮುಖ ಸಾಹಿತಿಗಳು ಬದ್ದತೆಯಿಂದ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆಯೇ ?
ರೂಪ : ಈಗ ಹೆಚ್ಚಿನ ಯುವಜನರು ಸಶಕ್ತವಾಗಿ ಬರೆಯುತ್ತಿದ್ದಾರೆ. ಅದು ಆಶಾದಾಯಕ ಬೆಳವಣಿಗೆ. ಸೋಷಿಯಲ್ ಮೀಡಿಯಾದಲ್ಲಿ ನಾನು ಹೆಚ್ಚು ತೊಡಗಿಸಿಕೊಂಡಿಲ್ಲ. ಅಷ್ಟು ಸಮಯ ಕೂಡ ಇಲ್ಲ. ಆಗಾಗ ಕೆಲವರು ಗಮನಕ್ಕೆ ತರುತ್ತಾರೆ. ಕೆಲವರೆಲ್ಲ ತುಂಬಾ ಚೆನ್ನಾಗಿ ಬರೀತಾ ಇದ್ದಾರೆ. ಆದರೆ ತಕ್ಷಣದ ಪ್ರತಿಕ್ರಿಯಾತ್ಮಕ ಬರಹವೂ ಗೀಳಾಗಬಾರದು ಎನ್ನಿಸುತ್ತಿರುತ್ತದೆ. ನಮ್ಮ ಮನಸ್ಸನ್ನ ಕಾಡಿದ್ದು, ನಮ್ಮನ್ನ ಅಲ್ಲಾಡಿಸಬೇಕು, ಅದು ಅಲ್ಲೇ ತಂಗಿ ನಮ್ಮೊಳಗೆ ನಿಧಾನವಾಗಿ ಬೆಳೆಯಬೇಕು. ತಕ್ಷಣ ಪ್ರತಿಕ್ರಿಯಿಸಿ ಸುಮ್ಮನಾಗಿಬಿಟ್ಟರೆ ಅದು ಭ್ರೂಣ ಹತ್ಯೆಯಾಗಿಬಿಡುತ್ತೆ! ಹಸಿಹಸಿಯಾಗಿ ಹೊರಬಂದು ಅಪೂರ್ಣವಾಗಿ ತುಂಡರಿಸಿ ಹೋದರೆ ಪ್ರಯೋಜನವಾದರೂ ಏನು? ಆ ಕ್ಷಣಕ್ಕೆ ಬದುಕಿ ವಿಲವಿಲ ಒದ್ದಾಡಿ ಸತ್ತರೆ ಅದರಿಂದ ಭವಿಷ್ಯಕ್ಕೆ ಉಪಯೋಗವಿದೆಯೇ? ಅದು ಪೂರ್ಣ ರೂಪ ಪಡೆಯುವ ಹಾಗೇ ನಮ್ಮ ಬರವಣಿಗೆಗೆ ತಾಧಾತ್ಮ್ಯ ಬರಬೇಕೆನಿಸುತ್ತದೆ. ಕವಿಗೆ ಬಹುಶಃ ಕಾರುಣ್ಯ ಮುಖ್ಯವಾಗಬೇಕು. ಕರುಣೆ ಅಂದ್ರೆ ಅಯ್ಯೋ ಪಾಪ ಅಂತ ಹೇಳೋದು. ಆದರೆ ಬರಹಗಾರ ತಾನು ಸೃಷ್ಟಿಸುವ ಪ್ರತಿ ಪಾತ್ರ, ವಸ್ತುವಿನಲ್ಲೂ ಪರಕಾಯ ಪ್ರವೇಶ ಮಾಡಿ, ಅದರೆಲ್ಲ ಭಾವಗಳನ್ನೂ ತಾನೇ ಅನುಭವಿಸಿ, ಒದ್ದಾಡಿ ಸಂಕಟಪಟ್ಟು, ತಾನೇ ಅದಾಗಿ, ಅದನ್ನು ಕಂಡುಕೊಂಡು ಬರೆಯುವುದೇ ಬಹುಶಃ ಕಾರುಣ್ಯ. ಇದು ನನ್ನ ಹುಡುಕಾಟದ ದಾರಿಯೂ ಹೌದು. ಇದು ನಾನು ಸಾಧಿಸಿಬಿಟ್ಟಿದ್ದೀನಿ ಎಂದು ಹೇಳುತ್ತಿಲ್ಲ. ಸಾಧಿಸಬೇಕಾದ ಗುರಿ ಎಂದುಕೊಂಡಿದ್ದೇನೆ.
ಸಿಕಂದರ್ ಅಲಿ : ಮುಂದಿನ ಪರಂಪರೆಗಳನ್ನು ಇಂದು ನಿರೀಕ್ಷಿಸಬಹುದಾ ?
ರೂಪ : ಪರಂಪರೆ ತನ್ನಷ್ಟಕ್ಕೇ ನಿರ್ಮಾಣವಾಗುತ್ತದೆ. ಅವು ನಮ್ಮನ್ನು ನಿರ್ಲಕ್ಷಿಸುತ್ತವೆ ಅಥವ ನಾವು ಪರಂಪರೆಯನ್ನು ನಿರ್ಲಕ್ಷಿಸುತ್ತೇವೆ ಅನ್ನುವುದು ಮುಖ್ಯವಾಗುವುದಿಲ್ಲ. ಕಾಲ ಅದನ್ನು ತೀರ್ಮಾನಿಸುತ್ತಿರುತ್ತದೆ. ನಾವು ಬರೆದಂತೆಲ್ಲ ಇತಿಹಾಸದ ಪುಟಗಳಲ್ಲಿ ಸೇರುತ್ತಿರುತ್ತದೆ. ಆದರೆ ಯಾವ ಬರಹ ಸಾರ್ವಕಾಲಿಕ ಸತ್ಯವನ್ನು ಹೇಳುತ್ತದೆಯೋ, ಮಾನವೀಯ ಸ್ಪಂದನೆಯಿಂದ ಮನಸ್ಸನ್ನು ಮುಟ್ಟುತ್ತದೆಯೋ, ಯಾವ ಬರಹ ಕಾಲದ ಪ್ರವಾಹವನ್ನು ಎದುರಿಸಿ ಕೂಡ ಅಲ್ಲಾಡದೇ, ಗಟ್ಟಿಯಾಗಿರುತ್ತದೆಯೋ ಅದು ಬಹುಶಃ ಎಲ್ಲ ಕಾಲಕ್ಕೂ ಉಳಿದುಕೊಂಡುಬಿಡುತ್ತದೆನಿಸುತ್ತದೆ. ಅದು ತನ್ನಷ್ಟಕ್ಕೇ ಪರಂಪರೆ ನಿರ್ಮಾಣ ಮಾಡುತ್ತದೆ.
ಸಿಕಂದರ್ ಅಲಿ : ಸಾಹಿತ್ಯದಿಂದ ಚಳುವಳಿಗಳು ಹುಟ್ಟುತ್ತಿವೆಯೋ ಅಥವ ಚಳವಳಿಯಿಂದ ಸಾಹಿತ್ಯ ಹುಟ್ಟುತ್ತಿದೆಯೋ ?
ರೂಪ : ಅದನ್ನು ಹೀಗೆಲ್ಲಾ ವಿವರಿಸೋದಿಕ್ಕೆ ಬಹುಶಃ ಸಾಧ್ಯವಿಲ್ಲವೆನಿಸುತ್ತೆ. ಬಂಡಾಯ ಚಿಂತನೆ ಹಾಗೂ ಸಾಹಿತ್ಯದ ಮೂಲಕ ಬಂಡಾಯ ಚಳವಳಿ ಹುಟ್ಟಿಕೊಂಡಿದ್ದು, ದಲಿತ ಸಾಹಿತ್ಯ- ದಲಿತ ಚಳವಳಿಗೆ ಪೂರಕವಾಗಿ ಹುಟ್ಟಿಕೊಂಡಿದ್ದು ತಿಳಿದೇ ಇದೆ. ಮಹಿಳಾ ಚಳವಳಿ ಕೂಡ ಸ್ತ್ರೀವಾದಿ ಸಿದ್ಧಾಂತ, ಸಾಹಿತ್ಯದಿಂದ ಪ್ರೇರಣೆ ಪಡೆದು ಹುಟ್ಟಿಕೊಂಡಿದ್ದಲ್ಲವೇ? ಅವತ್ತಿನ ದಿನಗಳಲ್ಲಿ ಸಾಹಿತ್ಯ ಮತ್ತು ಚಳವಳಿಗಳು ಪರಸ್ಪರ ಪೂರಕವಾದ ವಾತಾವರಣವನ್ನುಸೃಷ್ಟಿ ಮಾಡಿದ್ದು ಸುಳ್ಳಲ್ಲ. ಇವೆರಡು ಪ್ರತ್ಯೇಕವಾಗಿರುವಂತಹ ಅಸ್ತಿತ್ವಗಳೆನಿಸಿದರೂ ಒಂದನ್ನು ಬಿಟ್ಟು ಇನ್ನೊಂದಿಲ್ಲ. ಚಳವಳಿಯ ತತ್ವ ಸಿದ್ದಾಂತ, ರೂಪುರೇಷೆಗಳು ಸಾಹಿತ್ಯದಲ್ಲಿ ಸಿಗುತ್ತದೆ. ನಮ್ಮ ಕಣ್ಮುಂದೆ ವಚನ ಚಳವಳಿ, ವಚನ ಸಾಹಿತ್ಯವಿದೆ. ಸಾಹಿತ್ಯ ಮತ್ತು ಚಳವಳಿ ಒಂದಕ್ಕೊಂದು ಪರಸ್ಪರ ಪೂರಕವೂ ಹೌದು ಹಾಗೂ ಪ್ರೇರಕವೂ ಹೌದು. ಎರಡೂ ಕೂಡ ಪ್ರತ್ಯೇಕವಾಗಿಯೂ ಕೂಡಿಕೊಂಡಿವೆ ಎನ್ನಬಹುದು. ಹೀಗಾಗೇ ಸಾಹಿತ್ಯ ಮತ್ತು ಚಳವಳಿ ಎರಡೂ ಉತ್ತಮ ಸಮಾಜ ನಿರ್ಮಾಣಕ್ಕೆ ಮುಖ್ಯ. ಎಷ್ಟೋ ಬಾರಿ ಚಳವಳಿಯ, ಪ್ರತಿರೋಧದ ಎಳೆಗಳು ಸಾಹಿತ್ಯದಲ್ಲಿ ಅಂತರ್ಗತವಾಗಿರಬಹುದು. ಅದು ಬಹಿರ್ಮುಖವಾಗಿಯೇ ಇರಬೇಕಿಲ್ಲ.
ಸಿಕಂದರ್ ಅಲಿ : ಉದಯೋನ್ಮುಖ ಬರಹಗಾರರಿಗೆ ಏನು ಹೇಳುತ್ತೀರಿ ?
ರೂಪ : ಬೇರೆಯವರಿಗೆ ಹೇಳುವಷ್ಟು ದೊಡ್ಡವಳಲ್ಲ. ನನ್ನನ್ನೊಳಗೊಂಡಂತೆ ಹೇಳಿಕೊಳ್ಳುತ್ತೇನೆ. ನಮ್ಮೊಳಗಿನ ನಿಜವಾದ ಸಂವೇದನೆ, ತಳಮಳ, ಒದ್ದಾಟ, ಸಂಕಟವನ್ನು ಅದು ಪಕ್ವವಾಗಿ ತಾನಾಗಿಯೇ ಹೊರ ಬರುವ ತನಕ ಕಾಯುವಂತಹ ಬದ್ಧತೆ, ತಾಳ್ಮೆ, ಒಂದು ಧ್ಯಾನಸ್ಥ ಸ್ಥಿತಿ ಪಡೆಕೊಳ್ಳಲು ನನಗೆ ಸಾಧ್ಯವಾದ್ರೆ, ಬಹುಶಃ ಕೆಲ ಕಾಲವಾದರೂ ಉಳಿಯುವಂತಹ, ಸತ್ವಯುತ ಅಭಿವ್ಯಕ್ತಿ ಹೊರಹೊಮ್ಮಬಹುದೆನಿಸುತ್ತೆ. ಈ ಮಾತುಗಳು ನಾನು ಆಗಬೇಕಾಗಿರುವುದಕ್ಕೇ ಹೆಚ್ಚು ಅನ್ವಯಿಸುತ್ತೆ ಅಂದುಕೊಳ್ತೇನೆ. (ನಗು)
ಸಿಕಂದರ್ ಅಲಿ : ನೀವು ಮೆಚ್ಚಿದ ನಿಮ್ಮ ಕವನ ಯಾವುದು? ಅದರ ಹಿಂದಿನ ಅನುಭವವೇನು ?
ರೂಪ : ಬಹಳಷ್ಟು ಕವಿತೆಗಳಿದಾವೆ ಯಾವುದು ಅಂತ ಹೇಳಲಿ… ಅದರಲ್ಲಿ ಒಂದು… ಒಂದು ನ್ಯೂಸ್ ಪೇಪರ್ ಗೆ ಒಂದು ವಿವಾದದ ಬಗ್ಗೆ ನಾಲ್ಕು ಸಾಲಿನ ಅಭಿಪ್ರಾಯ ಅವರೇ ಕೇಳಿದ್ದಕ್ಕೆ ಕೊಟ್ಟಿದ್ದೆ. ಆಗ ನನ್ನ ಮೇಲೆ ಪೇಪರ‍್ ಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡಮಟ್ಟದ ಟ್ರೋಲ್ ನಡೆದಿತ್ತು. ನನ್ನ ಅಭಿವ್ಯಕ್ತಿಯನ್ನು ಹತ್ತಿಕ್ಕುವ ಭರಪೂರ ಪ್ರಯತ್ನ ನಡೆದಿತ್ತು. ನಾನು ಹುಟ್ಟಿದ ಸಮೂದಾಯದವರೇ ನನ್ನ ಮೇಲೆ ಕುಪಿತರಾಗಿ ಆಕ್ರಮಣ ಮಾಡಿದ್ದರು. ಆಗ ತುಂಬಾ ನೋವಾಗಿತ್ತು, ತುಂಬಾ ತಳಮಳ, ಒದ್ದಾಟದಲ್ಲಿದ್ದೆ. ಆ ತೊಳಲಾಟದಿಂದ ಹೊರಬರಲು ಪ್ರಯತ್ನಿಸುತ್ತಿದ್ದೆ. ಆದರೂ ನನ್ನ ಹೇಳಿಕೆಗೆ ನಾನು ಬದ್ದಳಿದ್ದೆ. ಯಾರೊಂದಿಗೂ, ಯಾವುದೇ ರಾಜಿಗೂ ಸಿದ್ಧವಿರಲಿಲ್ಲ. ಇದೇ ಸ್ಥಿತಿಯಲ್ಲಿ ಮೂರು ತಿಂಗಳು ಕಳೆದೆ. ಒಂದೇ ಒಂದು ಅಕ್ಷರವೂ ನನಗೆ ಬರೆಯಲು ಸಾಧ್ಯವಾಗಿರಲಿಲ್ಲ. ನಂತರ ಒಂದು ಮಧ್ಯರಾತ್ರಿ ಎಚ್ಚರಾಗಿ, ನಾಲ್ಕು ಪುಟದ ಕವನವನ್ನು ಬರೆದುಬಿಟ್ಟಿದ್ದೆ! ಬರೆಯುತ್ತ ಬರೆಯುತ್ತಾ ಕಣ್ಣೀರು ಕೋಡಿಯಾಗಿ ಹರಿದಿತ್ತು. ಆ ಎಲ್ಲಾ ತಲ್ಲಣಗಳು ಬಹುಶಃ ಅಕ್ಷರ ರೂಪ ಪಡೆದು ನನ್ನಿಂದ ಹೊರ ಬಿದ್ದ ಮೇಲೆ ನಾನು ನಿರಾಳವಾದೆ. ಸಮಾಧಾನ ಆವರಿಸಿತು. ಅದೇ “ಬೈರಾಗಿಯ ಜಡೆ” ಎಂಬ ಕವನ! ಆ ಅನುಭವ ಮರೆಯುವಂತಿಲ್ಲ.
ಸಿಕಂದರ್ ಅಲಿ : ಒಂದು ಸಂತೋಷದ ದಿನ ಹಾಗೂ ದುಃಖದ ದಿನ ಹಂಚಿಕೊಳ್ಳಿ.
ರೂಪ : ಬಹಳಷ್ಟು ಸಂತೋಷದ ದಿನಗಳಿವೆ. ಮೊನ್ನೆಯಷ್ಟೇ ನನ್ನ ಮಗನ ನಿಶ್ಚಿತಾರ್ಥ ಅವನು ಪ್ರೀತಿಸುತ್ತಿದ್ದ ಬೌದ್ಧ ಮತದ ಹುಡುಗಿಯೊಂದಿಗಾಯ್ತು. ಅದೊಂದು ತುಂಬಾ ಸಂತೋಷದ ದಿನ. ಹಾಗೇ ದುಃಖ ಅಂತ ಬಂದಾಗ- ನನ್ನ ದುಃಖ ದೊಡ್ಡದು ಅಂತ ನಾನೆಂದು ಅಂದುಕೊಂಡಿಲ್ಲ. ನನ್ನ ಸಂಕಟದ ಕ್ಷಣಗಳಲ್ಲಿ ನನ್ನೊಂದಿಗೆ ನಿಲ್ಲಬಲ್ಲ ಹಲವು ಆಪ್ತರಿದ್ದಾರೆ. ಹೀಗಾಗಿ ಅದನ್ನು ನೀಗಿಕೊಳ್ಳಬಲ್ಲೆ. ನನ್ನ ದುಃಖಕ್ಕಿಂತ ಬಹುಪಟ್ಟು ಹೆಚ್ಚು ದುಃಖವಿರುವ ಹಲವರನ್ನು ದಿನ ನಿತ್ಯ ಕಾಣುವಾಗ, ಅದನ್ನು ನನ್ನದರಂತೆಯೇ ಭಾವಿಸಿ, ನೀಗಿಸಲು ಇರುವ ದಾರಿಗಳು ಯಾವುದು ಎಂದು ಯೋಚಿಸುತ್ತಿರುತ್ತೇನೆ.






0 Comments