
ಮಮತಾ ಅರಸೀಕೆರೆ
ಬರಗೂರು ರಾಮಚಂದ್ರಪ್ಪನವರು ಹಾಗೂ ಸಾಂಸ್ಕೃತಿಕತೆ ಪರ್ಯಾಯ ಹೆಸರುಗಳು. ರಾಜ್ಯದ ಸಾಂಸ್ಕೃತಿಕ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದ, ಉಳಿಯುವ ಮೇರು ವ್ಯಕ್ತಿತ್ವ. ಬರಗೂರರ ಬಗ್ಗೆ ಮಾತನಾಡುವ, ಬರೆಯುವವರೆಲ್ಲರ ಒಂದು ಸಾರ್ವತ್ರಿಕ ಅಭಿಪ್ರಾಯವೇನೆಂದರೆ ಬಡತನದ ಹಿನ್ನೆಲೆಯಿಂದ ಬಂಡಾಯದ ಅಪ್ರತಿಮ ನಾಯಕನಾಗುವವರೆಗೆ ಅವರ ಸಂಪೂರ್ಣ ಸಮೃದ್ಧ ಬದುಕಿನ ಸಚಿತ್ರ ವಿವರಣಾತ್ಮಕ ಪಯಣದ ಹಾದಿಯೇ ಯಶಸ್ಸಿನ ಮಾರ್ಗಸೂಚಿ ಸಂದೇಶವಾಹಕ.
ಬದುಕು ಬರಹಗಳಲ್ಲಿ ಏಕಮಾರ್ಗವನ್ನು ಸಾಧಿಸಿದ ಅಪರೂಪದ ಸಾಧಕ. ಗ್ರಾಮೀಣತೆಯನ್ನೆ ಸ್ಥಾಯಿಭಾವವಾಗಿಸಿಕೊಂಡು ನಾಗರೀಕ ಸಂಸ್ಕೃತಿಯನ್ನು ಅಳವಡಿಸಿಕೊಂಡು ಎರಡರ ನಡುವೆಯೂ ಸಮನ್ವಯತೆ ಸಮವಾಗಿಸಿದವರು. ಗ್ರಾಮೀಣ ಸೊಗಡಿನ ಅನನ್ಯತೆಯನ್ನು ಅಭಿಮಾನದಿಂದ, ಹೆಮ್ಮೆಯಿಂದ ಬಲವಾಗಿ ಪ್ರತಿಪಾದಿಸುತ್ತಾ ಈ ಹೊತ್ತಿಗೂ ಗ್ರಾಮಗಾರುಡಿಗರಾಗಿ ಅದೇ ಗುಂಗನ್ನು ಹೊತ್ತು ನಡೆನುಡಿಯಲ್ಲಿ, ಬರಹದಲ್ಲಿ ಅನುಸರಿಸಿದವರು. ಅವರ ವಿಚಾರಗಳಿಗೆ ದಾರ್ಶನಿಕತೆಯ ಸ್ಪರ್ಶವಿದೆ.
ಅವರ ಇಷ್ಟು ವರ್ಷಗಳ ಸಾಧನೆಯ ಫಲವೀಗ ‘ಸಮಗ್ರ ಸಂಪುಟಗಳ’ ರೂಪದಲ್ಲಿ, ಒಟ್ಟು ೧೪ ಸಂಪುಟಗಳು ೫೨೬೦ ಪುಟಗಳನ್ನೊತ್ತು ಪ್ರಕಟವಾಗುತ್ತಿದೆ.
ಅಸಲಿ ಬೆಲೆ ೫೯೫೦ ರೂಗಳು. ಇದೇ ಮಾರ್ಚ್ ೧೨ ರಂದು ಗಾಂಧಿಭವನದಲ್ಲಿ ಜನಾರ್ಪಣೆಗೊಳ್ಳುತ್ತಿರುವ ಸಮಗ್ರದ ಪ್ರಕಟಣಾಪೂರ್ವ ರಿಯಾಯ್ತಿ ಬೆಲೆ ೪,೫೦೦ ರೂಗಳು. ಸಂಪುಟದ ಶೀರ್ಷಿಕೆಯೆ ಅಪೂರ್ವವಾದ್ದು, “ಬೆವರು ನನ್ನ ದೇವರು’’ ಶೀರ್ಷಿಕೆಯ ಈ ಸಮಗ್ರದಲ್ಲಿ ಸಾಹಿತ್ಯ ಸಂಸ್ಕೃತಿ-೧ ಮತ್ತು ೨, ಅಂಕಣ ಬರಹಗಳು-೧ ಮತ್ತು ೨, ಪುಸ್ತಕಾವಲೋಕನ- ೧ ಮತ್ತು ೨, ಕಾದಂಬರಿಗಳು- ೧,೨,೩ , ಕತೆ-ನೀಳ್ಗತೆ, ಸಾಮಾಜಿಕ ರಾಜಕಾರಣ, ಭಾಷೆ ಶಿಕ್ಷಣ ಸಿನೆಮಾ, ಕಿರು ಕಾದಂಬರಿಗಳು, ಇಲ್ಲಿಯವರೆಗಿನ ಎಲ್ಲಾ ಕವಿತೆಗಳು ಅಡಕವಾಗಿವೆ.

ಇಷ್ಟು ಅಗಾಧ ಬರವಣ ಗೆ, ಓದು, ಸಾಹಿತ್ಯ, ಸಿನೆಮಾ, ಸಂಘಟನೆ, ತೊಡಗಿಸಿಕೊಂಡ ಅನೇಕ ಕ್ಷೇತ್ರಗಳ ಬರಗೂರರ ಈ ಸಾಂಸ್ಕೃತಿಕ ಹಾದಿ ಸತತ ಪರಿಶ್ರಮ ಮತ್ತು ಎಡೆಬಿಡೆದ ಛಲದ್ದು. ತನಗೆ ಸರಿಕಂಡದ್ದನ್ನು ತಾನು ನಿರ್ವಹಿಸಬಹುದಾದ ಕ್ಷೇತ್ರಗಳನ್ನು ತಾನೇ ಕಂಡುಕೊಂಡು ದಾಪುಗಾಲಿಟ್ಟ ಬರಗೂರರ ಪಥ ಏಕಲವ್ಯನ ಸ್ವರೂಪದಂತದ್ದು ಅನ್ನಬಹುದೇನೊ. ವೈವಿಧ್ಯ ಮಾದರಿಗಳಲ್ಲಿ ಸೈ ಎನಿಸಿಕೊಂಡ ಏಕೈಕ ವ್ಯಕ್ತಿತ್ವ ಅವರಿರಬಹುದೇನೊ.
ಸಾಮಾಜಿಕ ಜಡತೆಯನ್ನು ಕೊಡವುತ್ತಾ, ಚಿಂತನಶೀಲತೆಯನ್ನು ಅಳವಡಿಸಿಕೊಂಡು ಮಾತು ಕೃತಿಗಳಲ್ಲಿ ಪ್ರಖರವಾಗಿ ಹರಡಿದವರು. ಬಂಡಾಯ ಸಾಹಿತ್ಯ ಸಂಘಟನೆಯ ಮೂಲಕ ಹೊಸಬರನ್ನು ಯುವಸಮುದಾಯವನ್ನು ತಲುಪುತ್ತಾ, ದಶಕಗಟ್ಟಲೆ ಜೊತೆಸಾಗಿದವರನ್ನೂ ಜೊತೆಯಲ್ಲೆ ಕೊಂಡೊಯ್ಯುತ್ತಾ, ಲೇಖಕರಿಗಿರಬೇಕಾದ ಪ್ರಗತಿಪರ ಧೋರಣೆ, ಗತಿಶೀಲತೆಯ ಮಾರ್ಗಕ್ಕೆ ಧಕ್ಕೆ ಬಾರದಂತೆ ಮಾರ್ಗದರ್ಶಿಯಾದವರು. ಸಂಘಟನಾತ್ಮಕವಾಗಿ ಕಾಲದ ಬದಲಾವಣೆಗೆ ಹೊಂದಿಕೊಂಡು ತಕ್ಷಣ ಸ್ಪಂದಿಸುವ, ನ್ಯೂನ್ಯತೆ ಕೊರತೆಗಳನ್ನು ಆಯಾ ಹಂತದಲ್ಲೆ ಸೂಕ್ಷ್ಮವಾಗಿ ಗ್ರಹಿಸಿ ಪರಿಹರಿಸುವ ವಿಶೇಷ ಗುಣದೊಂದಿಗೆ ಚಾಣಾಕ್ಷತೆಯನ್ನೂ ಮೆರೆದವರು.
ಈ ಸಂದರ್ಭದಲ್ಲಿ ಒಂದು ವಿಷಯ ನೆನಪಾಗುತ್ತದೆ. ದಿ.ಚಂಪಾರವರು ಎಡೆಬಿಡದೆ ಐವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಸಂಕ್ರಮಣ ಪತ್ರಿಕೆಯನ್ನು ಹೊರತಂದು ಜಯಿಸಿದವರು. ಹಾಗೆಯೇ ಬರಗೂರರು ಬಂಡಾಯ ಸಾಹಿತ್ಯ ಸಂಘಟನೆಯ ಚುಕ್ಕಾಣ ಹಿಡಿದು ದಶಕಗಳ ಕಾಲ ಮುನ್ನೆಡೆಸಿದ್ದು ಸುಲಭದ ಮಾತಂತೂ ಅಲ್ಲ. ಭಿನ್ನವಾದ, ಪ್ರಗತಿಪರವಾದ, ವೈಚಾರಿಕ ನಿಲುವನ್ನು ಸೃಜಶೀಲವಾಗಿಯೇ ವ್ಯಕ್ತಪಡಿಸಿದ ತಾತ್ವಿಕತೆ ಇವರದ್ದು.
ಅಲ್ಪಸಂಖ್ಯಾತರು, ಮಹಿಳೆಯರು, ಪರಿಶಿಷ್ಟರು, ದನಿಯಿಲ್ಲದ ದಮನಿತರು, ಅವಜ್ಞೆಗೆ ಗುರಿಯಾದವರು ಇವರ ಬರಹಗಳಲ್ಲಿ ವಸ್ತುನಿಷ್ಠವಾಗಿ ಕಾಣ ಸಿಕೊಂಡರು. ಆ ಮೂಲಕ ಪ್ರಬಲ ಪ್ರಖರ ದನಿಯಾದರು. ಕೀರ್ತಿ, ಅಧಿಕಾರ, ಆಡಂಬರಗಳಿಂದ ಹೊರತಾದ ನೆಲಮೂಲ ಗುಣಗಳ ಬರಹದಿಂದ ಮೇಲ್ಪಂಕ್ತಿ ನಿರ್ಮಿಸಿ ಲೇಖಕರ ಬರಹದ ಸಾಮರ್ಥ್ಯ ಸಾರ್ಥಕವಾಗಬೇಕಾದ್ದು ಜನಪರ, ತತ್ವ ಸಿದ್ಧಾಂತದ ಪರ, ಆದರ್ಶಗಳ ಆಚರಣೆಯ ಪರ ಎಂಬುದನ್ನು ಪದೆಪದೆ ಸಾಬೀತುಪಡಿಸಿದರು.

ಮಾತು, ಬರಹದ ಮೂಲಕ ವ್ಯಕ್ತವಾಗಿದ್ದು ಆಚರಣೆ ಹಾಗೂ ಬದುಕಿನಲ್ಲಿ ದೃಢವಾಗಬೇಕಾದ ಅಂಶಗಳ ಕಡೆ ಒತ್ತುಕೊಟ್ಟರು. ಬಹುಪರಾಕುಗಳ ಆರ್ಭಟಕ್ಕಿಂತ ಸಾಹಿತ್ಯಾಭಿರುಚಿ, ಆಂತರಿಕ ಮೌಲ್ಯಮಾಪನ, ದೃಷ್ಟಿಕೋನಗಳ ಸದೃಢತೆ ಬಹುಮುಖ್ಯ ಅನ್ನುವ ಬರಗೂರರು ಮಾತು ಮತ್ತು ಕೃತಿಯ ಏಕೀಭವೀಕರಣದಲ್ಲಿ ನಂಬಿಕೆಯುಳ್ಳವರು.
ತಮ್ಮೆಲ್ಲ ಆಲೋಚನೆ, ಸತತ ಚಿಂತನೆ, ಪ್ರಾಯೋಗಿಕ ಅನುಭವಗಳು, ಸೃಜನಾತ್ಮಕತೆ, ಮೊದಲಾದವುಗಳನ್ನು ವಾಸ್ತವದ ನೆಲೆಯಲ್ಲಿ ಸತ್ವಪೂರ್ಣವಾಗಿ ಲೇಖನಿಯಲ್ಲಿ ಮೂಡಿಸಿದ ಬರಗೂರರ ಸಾಹಿತ್ಯ ಸಮೃದ್ಧಿ ಈಗ ಒಟ್ಟಾರೆಯಾಗಿ ಸಮಗ್ರವಾಗಿದೆ. ಇದಕಿಂತ ಹೆಚ್ಚಾಗಿ ಅವರ ಅಮೂಲ್ಯ ಮಾತಿನ ಭಂಡಾರ ವೀಡಿಯೋಗಳಲ್ಲಿ, ಯೂಟೂಬಿನಲ್ಲಿ ಶೇಖರವಾಗಿದೆ. ಅವೆಲ್ಲವನ್ನೂ ಲೇಖನಿ ಸಂಗ್ರಹಿಸುತ್ತಾ ಹೋದರೆ ಅದಿನ್ನೆಷ್ಟು ಸಂಪುಟಗಳಾಗಬಹುದೊ ಲೆಕ್ಕವಿಲ್ಲ.






ಬರಗೂರರ ಕೃತಿಗಳಿಗೊಂದು ಉತ್ತಮ ಪ್ರವೇಶ