ಕಾಣದ ಕಡಲಿಗೆ ಹಂಬಲಿಸಿದೆ ಮನ
ನನ್ನ ಕೆಲಸಗಳಿಗೆ ಸ್ಪೂರ್ತಿ ತುಂಬಿದ
ಸಾಲುಮರದ ತಿಮ್ಮಕ್ಕಳಿಗೆ
ಅರ್ಪಣೆ
ನನ್ನ ಮಾತು
ಮಧ್ಯಪ್ರಾಂತ್ಯದ ರಾಜನೊಬ್ಬ ತನ್ನ ಅರಮನೆಗೆ ಎರಡು ಗಿಡುಗಗಳನ್ನು ಖರೀದಿಸಿ ತರುತ್ತಾನೆ. ಅರಮನೆಗೆ ಬಂದ ಮೇಲೆ ಒಂದು ಗಿಡುಗ ಸ್ವಚ್ಛಂದವಾಗಿ ಹಾರಾಟ ನಡೆಸುತ್ತಿತ್ತು. ಎರಡು ವಾರಗಳಾದರೂ ಎರಡನೇ ಗಿಡುಗ ನೆಲವನ್ನು ಬಿಟ್ಟು ಮೇಲೇರಲೇ ಇಲ್ಲ. ಎರಡೂ ಒಂದೇ ಜಾತಿಯ ಗಿಡುಗಗಳು. ಎರಡಕ್ಕೂ ಸರಿ ಸುಮಾರು ಒಂದೇ ವಯಸ್ಸು. ರಾಜ ಇದನ್ನು ತಿಳಿದು ಚಿಂತೆಗೀಡಾಗುತ್ತಾನೆ.
ಯಾರು ಎರಡನೆಯದನ್ನು ಹಾರುವಂತೆ ಮಾಡುತ್ತಾರೊ, ಅವರಿಗೆ ದೊಡ್ಡ ಮೊತ್ತದ ಬಹುಮಾನ ಕೊಡುವುದಾಗಿ ಘೋಷಿಸುತ್ತಾನೆ. ತಜ್ಞ ವೈದ್ಯರನ್ನು ಕರೆಸಿ ಪರೀಕ್ಷಿಸುತ್ತಾನೆ. ಮುಲ್ಲಾರನ್ನು ಕರೆಸಿ ಮಂತ್ರಗಳನ್ನಾಕಿಸುತ್ತಾನೆ. ತನ್ನ ಆಸ್ಥಾನದ ಹಲವಾರು ಜನರು ಬಂದು ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಾರೆ. ಯಾರಿಗೂ ಆ ಗಿಡುಗ ಬಗ್ಗುವುದಿಲ್ಲ.
ತನ್ನ ಆಸ್ಥಾನದಲ್ಲಿರುವ ಒಬ್ಬ ಸಾಮಾನ್ಯ ರೈತನ ಕೈಚಳಕದ ಬಗ್ಗೆ ಎಲ್ಲರೂ ಮಾತನಾಡುತ್ತಿರುವುದು ರಾಜನ ಕಿವಿಗೂ ಬೀಳುತ್ತದೆ. ಸರಿ ಅದೂ ನಡೆದು ಹೋಗಲಿ ಎಂದು ಆ ರೈತನಿಗೂ ಒಂದು ಅವಕಾಶ ಕಲ್ಪಿಸುತ್ತಾನೆ. ಮರುದಿನವೇ ಆ ಎರಡನೇ ಗಿಡುಗ, ಮೊದಲನೇ ಗಿಡುಗನ ಜೊತೆ ಹಾರಾಡುತ್ತಿರುವುದನ್ನು ರಾಜ ಗಮನಿಸಿ ಆಶ್ಚರ್ಯಚಕಿತನಾಗುತ್ತಾನೆ.
ಆ ರೈತನನ್ನು ಕರೆಸಿ ಈ ಕೌತುಕದ ಬಗ್ಗೆ ವಿಚಾರಿಸುತ್ತಾನೆ. “ಓ ಮಹಾರಾಜನೇ, ಇದು ಬಹಳ ಸರಳವಾದ ವಿಷಯ. ನಾನು ಆ ಗಿಡುಗ ಕುಳಿತಿದ್ದ ಮರದ ಕೊಂಬೆಯನ್ನು ಕಡಿದೆ. ಅಷ್ಟೇ ನೋಡಿ, ಅದಕ್ಕೆ ಬೇರೆ ದಾರಿಯಿಲ್ಲದೆ ಹಾರಾಡುತ್ತಾ ಮುಂದಿನ ಕೊಂಬೆಯನ್ನು ಹುಡುಕುತ್ತಾ ಹೊರಟಿತು. ಒಂದು ಸಲ ಅದು ಆಕಾಶದಲ್ಲಿ ಹಾರಾಡುವ ಖುಷಿಯನ್ನು ಅನುಭವಿಸಿದ ಮೇಲೆ, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಮಹಾಸ್ವಾಮಿ” ಎಂದು ಅವನು ಉತ್ತರಿಸುತ್ತಾನೆ. ರಾಜನು ಅವನಿಗೆ ಬಳುವಳಿ ಕೊಟ್ಟು ಕಳಿಸುತ್ತಾನೆ.
ಮೇಲಿನ ಕಥೆಯಲ್ಲಿ ಸೂಚಿಸಿರುವ ಗಿಡುಗನ ಹಾಗೆ ಮನುಷ್ಯರೆಲ್ಲರಿಗೂ ಸ್ವಚ್ಛಂದವಾಗಿ ಹಾರಾಡಿ ಏನಾದರೊಂದು ಸಾಧಿಸುವ ಶಕ್ತಿ ಇರುತ್ತದೆ. ನಮಗೆ ಇಷ್ಟಬಂದ ಹಾಗೆ ಹಾರಾಡುವುದಕ್ಕೇನೇ ನಾವೆಲ್ಲರು ಭೂಮಿಯ ಮೇಲೆ ಬಂದಿರುತ್ತೇವೆ. ಆದರೆ ವೈಫಲ್ಯಗಳ ಕುರುಡು ಭಯಗಳಿಂದ ನಮ್ಮ ರೆಕ್ಕೆಗಳು ಬಿಚ್ಚುವುದೇ ಇಲ್ಲ. ಹಾರಾಡುವ ಬಹು ದೊಡ್ಡ ಕನಸನ್ನು ಹೊತ್ತ ಒಬ್ಬ ಹುಡುಗ ತಾನು ಕುಳಿತಿದ್ದ ಮರದ ಕೊಂಬೆಯನ್ನು ತಾನೇ ಕಡಿದುಕೊಂಡು ರೆಕ್ಕೆಬಡಿಯುತ್ತಿರುವ ಕಥೆಯಿದು.
ಎಲ್ಲೋ ಕೇಳಿದ್ದ ನೆನಪು.
ಕೆಲವೊಂದು ಪ್ರವಾಸಗಳಿಗೆ ಪ್ರವಾಸ ಕೈಗೊಂಡ ವ್ಯಕ್ತಿಗಳನ್ನು ಸಂಪೂರ್ಣವಾಗಿ ಬದಲಾಯಿಸುವ ಶಕ್ತಿಯಿರುತ್ತದಂತೆ. ನಾನು ಕೈಗೊಂಡ ನಲವತ್ತು ದಿನಗಳ ಪ್ರಯಾಣಕ್ಕೂ ಅಂತಹದೇ ಶಕ್ತಿಯಿತ್ತು ಎನಿಸುತ್ತದೆ.
ಅದರಲ್ಲೂ ಒಬ್ಬ ತಿರುಕನಂತೆ ದೂರದ ಊರು ಕೇರಿಗಳನ್ನು ಸುತ್ತಿ, ಕಂಡು ಕೇಳರಿಯದವರ ಮೇಲೆ ಅವಲಂಬಿಸಿ ಜೀವನ ಸಾಗಿಸಿಕೊಂಡು ಮಾಡುವ ಪ್ರಯಾಣದ ಅನುಭವಗಳು ಅತ್ಯದ್ಭುತವಾಗಿರುತ್ತವೆ. ಪ್ರಯಾಣ ಕೈಗೊಳ್ಳುವ ಹಿಂದಿನ ನನ್ನ ಜೀವನಕ್ಕೂ, ಪ್ರಯಾಣದ ನಂತರದ ಜೀವನಕ್ಕೂ ಅಜಗಜಾಂತರವಿರುವಂತೆ ಭಾಸವಾಗುತ್ತದೆ.
ಕಳೆದ ಐದಾರು ತಿಂಗಳಿಂದೀಚೆಗೆ ತರಾವರಿ ಹೊಸ ಅನುಭವಗಳು ಸಾಗರದ ಅಲೆಗಳಂತೆ ನನ್ನ ಮೇಲೆ ಬಂದಪ್ಪಳಿಸುತ್ತಿವೆ.
ಅದರಲ್ಲೊಂದು ಈ ನನ್ನ ಬರವಣಿಗೆಯ ಅಲೆ. ಕನ್ನಡದಲ್ಲಿ ಬರವಣಿಗೆ ನಿಲ್ಲಿಸಿ ಹಲವಾರು ವರ್ಷಗಳೇ ಕಳೆದಿದ್ದವು. ಆಂಗ್ಲ ಭಾಷೆಯಲ್ಲಿ ನನ್ನ ಸಂತೋಷಕ್ಕೆಂದು ಹಲವಾರು ಕಿರು ಲೇಖನಗಳನ್ನು ಬರೆದು ಅಂತರ್ಜಾಲದಲ್ಲಿ ಪ್ರಕಟಿಸುತ್ತಿದ್ದ ನನಗೆ, ಶುರುವಿನಲ್ಲಿ ಕನ್ನಡಕ್ಕೆ ಒಗ್ಗಿಕೊಳ್ಳಲು ತ್ರಾಸವೇ ಆಯಿತು. ದಿನಚರಿಯಂತೆ ಬರೆದುಕೊಂಡಿದ್ದ ಬರಹವು ಒಂದು ಪುಸ್ತಕವಾಗಿ ರೂಪುಗೊಂಡಿದ್ದು ನನಗೆ ಈಗಲೂ ಅಚ್ಚರಿಯನ್ನುಂಟು ಮಾಡುತ್ತದೆ. ಹಾಗೆಯೇ ಈ ಕೃತಿಯಲ್ಲಿ ಬರುವ ಚುಟುಕು ಕವನಗಳಿಗೆ ‘ಓ ಪ್ರಕೃತಿ’ ಎಂಬ ಕಾವ್ಯಾಂಕಿತವನ್ನು ಅಲಂಕರಿಸಿದ್ದೇನೆ.
ಪುಸ್ತಕಕ್ಕೆ ರೂಪಾಂತರಗೊಳ್ಳುವುದರ ಹಿಂದೆ ಹಲವು ತಿಂಗಳ ಪರಿಶ್ರಮ ಮತ್ತು ಹಲವಾರು ಅನುಭವಸ್ಥರ ಮಾರ್ಗದರ್ಶನ ಕಾರಣವಾಗಿರುತ್ತದೆ. ವ್ಯಕ್ತಿಗಳ ಹೆಸರು ಸೂಚಿಸದೇ, ಎಲ್ಲ ಹಂತಗಳಲ್ಲೂ ನನಗೆ ಸಹಕಾರ ನೀಡಿ, ನನ್ನ ಬರಹವನ್ನು ಓದಿ, ತಿದ್ದಿ ನನಗೆ ಮಾರ್ಗದರ್ಶನ ನೀಡಿ ಉತ್ತೇಜನ ಕೊಟ್ಟ ಎಲ್ಲರಿಗೂ ನನ್ನ ಮನದಾಳದ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ನಿಮ್ಮೆಲ್ಲರ ಮಾರ್ಗದರ್ಶನದಲ್ಲಿ ಕನ್ನಡ ಭಾಷೆಯ ಮೇಲಿನ ನನ್ನ ಜ್ಞಾನವನ್ನು ಮತ್ತಷ್ಟು ವೃದ್ಧಿಸಿಕೊಂಡು ನನ್ನ ಬರವಣಿಗೆಯನ್ನು ಮುಂದುವರಿಸಿಕೊಂಡು ಹೋಗುವ ಆಸೆಯಂತೂ ನನ್ನ ಮನಸ್ಸಿನ ಹೂದೋಟದ ಕಾರಂಜಿಯಲ್ಲಿ ನೀರಿನ ಚಿಲುಮೆಯಂತೆ ಚಿಮ್ಮುತ್ತಿರುವುದಂತೂ ಸತ್ಯ.
ನನ್ನ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ತಮ್ಮ ತನು, ಮನ, ಧನವನ್ನು ಅರ್ಪಿಸಿ ನನ್ನ ಎಲ್ಲಾ ಕೆಲಸಗಳನ್ನು ಉತ್ತೇಜಿಸುತ್ತಿರುವ ನನ್ನ ಸ್ನೇಹಿತರು, ನನ್ನ ಅನುಪಸ್ಥಿತಿಯ ನೋವನ್ನು ನುಂಗಿ ನನ್ನ ಪ್ರತೀ ಕೆಲಸಕ್ಕೂ ಬೆನ್ನೆಲುಬಾಗಿ ನಿಂತಿರುವ ನನ್ನ ಕುಟುಂಬ ವರ್ಗದವರು, ನನ್ನನ್ನು ಅವರ ಪ್ರೇಮದೋಟದಲ್ಲಿನ ಋಣದ ಬಾವಿಗೆ ತಳ್ಳಿದ್ದಾರೆ.
ನನ್ನ ಪ್ರಯಾಣದಲ್ಲಿ ಹೆಜ್ಜೆ ಹೆಜ್ಜೆಗೂ ನನಗೆ ತಮ್ಮ ಸಹಾಯ ಹಸ್ತವನ್ನು ಚಾಚಿದ ಹುಬ್ಬಳ್ಳಿ-ಧಾರವಾಡ, ಹಾವೇರಿ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಜನರಿಗೂ, ತಮ್ಮ ಶಾಲೆಯಲ್ಲಿ ಉಪನ್ಯಾಸ ಕೊಡಲು ನನಗೆ ಅವಕಾಶ ಮಾಡಿಕೊಟ್ಟ ಶಾಲೆಗಳ ಶಿಕ್ಷಕ ವೃಂದಕ್ಕೂ ಮತ್ತು ನನ್ನ ಉಪನ್ಯಾಸವನ್ನು ಬಹಳ ಶಾಂತಚಿತ್ತದಿಂದ ಕೇಳಿ, ಅರ್ಥ ಮಾಡಿಕೊಂಡು, ಜಾಗೃತರಾಗಿ ಪ್ರಕೃತಿ ಉಳಿವಿನ ಮತ್ತು ಸ್ವಚ್ಛತೆಯ ಕಡೆಗೆ ಕಾರ್ಯಪ್ರವೃತ್ತರಾಗಿರುವ ಪ್ರೀತಿಯ ಶಾಲಾ ವಿದ್ಯಾರ್ಥಿಗಳಿಗೂ ನಾನು ಅಭಾರಿಯಾಗಿರುತ್ತೇನೆ.
ಈ ಪುಸ್ತಕದ ನಿರೂಪಣೆಯಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಎಲ್ಲ ವ್ಯಕ್ತಿಗಳೂ ಸೂರ್ಯಪ್ರಕಾಶದಷ್ಟೇ ವಾಸ್ತವ ವ್ಯಕ್ತಿಗಳು.
ಕಾಲ್ಪನಿಕ ವ್ಯಕ್ತಿಗಳಿಗಾಗಲೀ, ಸುಳ್ಳು ಘಟನೆಗಳಿಗಾಗಲೀ ಇಲ್ಲಿ ಅವಕಾಶವಿಲ್ಲ.
ಇದು ಕಾದಂಬರಿಯಲ್ಲ, ಕಟ್ಟುಕತೆಯಲ್ಲ – ನಲವತ್ತು ದಿನಗಳ ನನ್ನ ಪ್ರವಾಸದ ನಿಷ್ಠುರ ಅನುಭವದ ನಿರೂಪಣೆ.
ಇಲ್ಲಿ ಯಾರ ದಾಕ್ಷಿಣ್ಯವೂ ಇಲ್ಲ – ಯಾರನ್ನೂ ವೃಥಾ ಹೊಗಳಬೇಕೆಂಬುದಾಗಲೀ, ನಿಷ್ಕಾರಣವಾಗಿ ಯಾರನ್ನಾದರೂ ತೆಗಳಬೇಕೆಂಬುದಾಗಲೀ ಇಲ್ಲಿನ ಪರಿಯಲ್ಲ. ಸರಿಯಾದುದನ್ನು ಸರಿ ಎಂದೂ, ತಪ್ಪಾದುದನ್ನು ತಪ್ಪು ಎಂದೂ ನಿರ್ಭಿಡೆಯಿಂದ ಹೇಳಿದ್ದೇನೆ.
ನಾನಾಗಿಯೇ ಪುಸ್ತಕದಲ್ಲಿ ಯಾರ ಮನಸ್ಸನ್ನೂ ನೋಯಿಸಬೇಕೆಂದು ಪ್ರಯತ್ನಿಸಿಲ್ಲ. ದೋಷಗಳನ್ನು ನಿರೂಪಿಸುವ ಏಕೈಕ ಗುರಿ – ಆ ದೋಷಗಳನ್ನು ತಿದ್ದಿಕೊಳ್ಳಲಿ ಎಂದು.
ಪ್ರಿಯ ಓದುಗರು ನನ್ನ ವಿಶುದ್ಧ ದೃಷ್ಟಿಕೋನವನ್ನು ಅರ್ಥ ಮಾಡಿಕೊಳ್ಳಲೆಂದು ವಿನಂತಿ.
- ರಾದ





Interesting . Nice to read . Also thanks to avadhimag for giving the courage for people like me to post poems & the love to read things on line. Thank u.
ಧನ್ಯವಾದಗಳು ಕುಸುಮರವರೆ. ಅವಧಿ ಹೊಸ ಲೇಖಕರಿಗೆ ಉತ್ತೇಜನ ಕೊಡುತ್ತಿರುವುದು ಪ್ರಸಂಶನೀಯ.
ಎಲ್ಲಾ ಅಧ್ಯಾಯಗಳೂ ಈ ಕೆಳಗಿನ ಸ್ಥಳಗಳಲ್ಲಿ ಪ್ರಕಟಗೊಳ್ಳಲಿವೆ. ಹಿಂದಿನ ಅಧ್ಯಾಯಗಳನ್ನೂ ಓದಿ.
ಎಲ್ಲಾ ಅಧ್ಯಾಯಗಳೂ ಈ ಕೆಳಗಿನ ಸ್ಥಳಗಳಲ್ಲಿ ಪ್ರಕಟಗೊಳ್ಳಲಿವೆ.
http://avadhimag.online/category/%E0%B2%85%E0%B2%82%E0%B2%95%E0%B2%A3/%E0%B2%95%E0%B2%BE%E0%B2%A3%E0%B2%A6-%E0%B2%95%E0%B2%A1%E0%B2%B2%E0%B2%BF%E0%B2%97%E0%B3%86-%E0%B2%B9%E0%B2%82%E0%B2%AC%E0%B2%B2%E0%B2%BF%E0%B2%B8%E0%B2%BF%E0%B2%A6%E0%B3%86-%E0%B2%AE%E0%B2%A8/
ದಿನಕ್ಕೆ ೧೫ ನಿಮಿಷ ಸಮಯ ಕೊಟ್ಟರೆ ಮುಂದಿನ ಕೆಲವು ವಾರಗಳಲ್ಲಿ ನನ್ನ ೪೦ ದಿನಗಳ ಪ್ರವಾಸದ ಚಿತ್ರಣ ನಿಮಗೆ ಸಿಗುತ್ತದೆ.
facebook ಪೇಜ್:
https://m.facebook.com/KaanadaKadalige/
ಓದಿ ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ಓದಲು ಹೇಳಿ.
Very interesting.. Loved the content..
Thanks Pooja. Am glad you liked it.
Please follow further episodes.
It’s truly connecting and inspiring..
you are amazing with words..
Thanks Ganesh
Interesting and inspiring.
Title is awesome Rahul – Jagavella malagiralu ivanobban edda
Thanks Gaja. Am glad you liked it.
Title is Avadhi’s choice.
ಎಲ್ಲಾ ಅಧ್ಯಾಯಗಳೂ ಈ ಕೆಳಗಿನ ಸ್ಥಳಗಳಲ್ಲಿ ಪ್ರಕಟಗೊಳ್ಳಲಿವೆ.
http://avadhimag.online/category/%E0%B2%85%E0%B2%82%E0%B2%95%E0%B2%A3/%E0%B2%95%E0%B2%BE%E0%B2%A3%E0%B2%A6-%E0%B2%95%E0%B2%A1%E0%B2%B2%E0%B2%BF%E0%B2%97%E0%B3%86-%E0%B2%B9%E0%B2%82%E0%B2%AC%E0%B2%B2%E0%B2%BF%E0%B2%B8%E0%B2%BF%E0%B2%A6%E0%B3%86-%E0%B2%AE%E0%B2%A8/
ದಿನಕ್ಕೆ ೧೫ ನಿಮಿಷ ಸಮಯ ಕೊಟ್ಟರೆ ಮುಂದಿನ ಕೆಲವು ವಾರಗಳಲ್ಲಿ ನನ್ನ ೪೦ ದಿನಗಳ ಪ್ರವಾಸದ ಚಿತ್ರಣ ನಿಮಗೆ ಸಿಗುತ್ತದೆ.
facebook ಪೇಜ್:
https://m.facebook.com/KaanadaKadalige/
ಓದಿ ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ಓದಲು ಹೇಳಿ.
ನಿಮ್ಮನ್ನು ಮತ್ತೆ ಬೇಟಿಯಾಗುವ ಆಸೆ ಇದೆ