ಚಿತ್ತ ಹರಿದತ್ತ……
ಬದುಕು ಅಂದ್ರ ಇಷ್ಟsನ …..!!!
-ಸರೋಜಿನಿ ಪಡಸಲಗಿ
*
ಬೆಳಗ ಹರೀಯೂಕಿಂತಾ ಮೊದಲs ಎಚ್ಚರಾಗಿ ಬಿಡ್ತದ ಇನ್ನೂ ಚುಮು ಚುಮು ಇದ್ದಾಗನ! ಪತಿರಾಯರ ಗೊರಕಿ ಒಂದ ಬಿಟ್ಟ ಮನಿ ಎಲ್ಲಾ ಇನ್ನೂ ಏಕದಂ ಸುನ್- ಸಾನ್!! ಹೊರಗನೂ ಇನ್ನೂ ಮಬ್ಬ ಮಬ್ಬ ಇದ್ಧಾಂಗನ ನನ್ನ ಕಣ್ಣನೂ ನಿದ್ದಿ ಭಾರಕ್ಕ ಮಬ್ಬ ಮಬ್ಬ ಇದ್ರೂ ತಲಿ ಪೂರಾ ನಿಚ್ಚಳ ಆಗಿರತದ. ಡಬ್ಬಿಗೆ ಪಲ್ಯಾ ಏನು , ಮುಂಜಾನೆ ತಿನಸ ಏನು ಅಂತ ಲೆಕ್ಕಾ ಹಾಕೂದ್ರಾಗ ಮಗಾ – ಸೊಸಿ ರೂಂ ನ ಬಾಗಲಾ ಸಪ್ಪಳಾತು. ಇನ್ನ ಸೊಸಿ ಕೆಳಗ ಇಳದ ಬಂದು ತನ್ನ ಮಗನ ಸಾಲಿದು ಡಬ್ಬಿ, ಅವನ ಹಾಲು ಎಲ್ಲಾ ಮುಗಿಸಿ ಅವನ್ನ ಕಳಿಸಿ ತಾ ಜಿಮ್ಮಿಗೆ, ನನ್ನ ಮಗಾ ಜಾಗಿಂಗ್ ವಾಕಿಂಗ್ ಅಂತ ಹೋಗೋ ರೂಢಿ ಅವರದು. ಇನ್ನೂ ನಾ ಏಳದಿದ್ರ ತೀರಾ ನಗ್ಗೇಡಾದೀತ ತಗಿ ಅಂತ ಝಾಡಿಸಿಕೊಂಡ ಏಳಕೋತನs ” ಈ ಪಲ್ಯಾದ ತಂಗೆವ್ವಗ ಏನಾತು ಅಂತೀನಿ. ಎರಡ ಮೂರ ದಿನಾ ಆತು,ಬಂದೇ ಇಲ್ಲ ಖೋಡಿ” ಅನಕೋತ ಮಾರಿ ಗೀರಿ ಬಗಿಹರಿಸಿ ದೇವರ ಮುಂದೆ ದೀಪಾ ರಂಗೋಲಿ ಬಾಗಲ ಮುಂದೆ ರಂಗೋಲಿ ಮುಗಸೂದ್ರಾಗ ಮೊಮ್ಮಗ ಸಾಲಿಗೆ,ಮಗ – ಸೊಸೆ ಜಿಮ್ಮು, ವಾಕ್ ಅಂತ ಹೋದ್ರು.
” ಮುಗೀತೋ ಇಲ್ಲೋ ನಿದ್ದಿ” ಅಂತ ಒಂದ ಸಲಾ ನನ್ನ ಗಂಡನ್ನ ಎಬ್ಬಿಸಿ ಚಹಾಕ್ಕ ಇಡ್ಲಿಕ್ಕೆ ಹೋದೆ. ಈ ಹೆಣ್ಣ ಜನಮಕ್ಕ ನಿಧಾನ ಅನೂದ ಇಲ್ಲ ನೋಡ ಹೋಗೂ ತನಕಾ ! ಬರೀ ದಡಪಡಸೂದ್ರಾಗನ ಆತ ನೋಡ ಜನಮ! ಮುಂಜಾನೆ ಎದ್ದ ಕೂಡಲೇ ಅಂತೂ ಒಬ್ಬರ ಚಹಾ,ಒಬ್ರ ಕಾಫಿ, ಹುಡಗೂರ ಡಬ್ಬಿ,ತಿನಸಾ ಅಂತ ಕಣ್ಣಾಗ,ಮೂಗನ್ಯಾಗ ತುಂಬಿಕೊಂಡ ಹಂಗ ಆಗ್ತದ ಥೇಟ್! ಅದೇ ವಿಚಾರ ಮಾಡ್ಕೋತ ಇವರ ಚಹಾ ಮುಗಿಸಿ ಡಬ್ಬಿ ತಯಾರಿ ಮಾಡೂದ್ರಾಗ ಮತ್ತ ಅದೇ ತಂಗೆವ್ವನ ವಿಚಾರ! ” ಸುಡಗಾಡ ತಂಗೆವ್ವ ಬಂದೇ ಇಲ್ಲಾ.ಪಲ್ಯಾರೇ ಅದನೋ ಇಲ್ಲೋ ” ಅಂತ ಫ್ರಿಡ್ಜ್ ನ್ಯಾಗ ಕಡಾಬಡಾ ಮಾಡಿ, ಇದ್ದದ್ರಾಗ ಜೋಡಿಸಿ – ಕ್ಯಾರಿಯರ್ ಗೆ, ಇದು ಮಧ್ಯಹ್ನದೂಟಕ್ಕೆ ಅಂತ ಮಾಡಿ, ತಿಂಡಿ ಮುಗಿಸಿ, ‘ಎಲ್ಲಾ ಆವರಾಸೂದ್ರಾಗ ಹೆಣಾ ಬಿದ್ದ ಹೋಗ್ತದ ತಾಯಿ! ‘ ಹುಷ್ ‘ ಅಂತ ಸೋಫಾದ ಮ್ಯಾಲೆ ಕೂತೆ. ಆತ ಮತ್ತ ತಂಗೆವ್ವ ತಲ್ಯಾಗ! ” ಈಕಿ ಈ ಹೊತ್ತನೂ ಬರಲಿಲ್ಲಾ ಅಂದ್ರ ಪಲ್ಯಾ ತರಲಿಕ್ಕ ಒಂದ ಹೋಗಬೇಕಲಾ ಅಂತ ಚೂರ ಬ್ಯಾಸರನೂ ಆತು!
ಈ ಹೊತ್ತಿಂದಂತೂ ಬಗೀಹರೀತಲಾ ಅಂತ ಪೇಪರ್ ಮ್ಯಾಲೆ ಕಣ್ಣ ಹಾಯಿಸ್ದೆ. ನನ್ನ ಪತಿ ಇಷ್ಟ ಜೋರ ಟಿವಿ ಹಚ್ಚಿದ್ರಲಾ ತಲಿ ದಿಂ ಅಂತು. ಸ್ವಲ್ಪ ವಾಲ್ಯೂಮ್ ಕಡಿಮಿ ಮಾಡ್ರಿ ” ಅಂತ ಅದರಕಿಂತ ಜೋರಲೆ ಒದರಿ ಹೇಳಿ ಬಾಜಾರ ಭಾವದ ಕಡೆ ನೋಡಿಕೋತ” ಯಾಕ ಬಂದಿರಲಿಕ್ಕಿಲ್ಲಾ ತಂಗೆವ್ವ? ಅಂದೆ. ಕೇಳಸಬೇಕಲಾ ಇವರಿಗೆ ಆ ಟಿವಿ ಸಂಭ್ರಮದಾಗ!
ಈ ಮನಿಗೆ ಬಂದು 20-22 ವರ್ಷ ಆತು. ಆಗಿಂದನೂ ಒಂದಿನಾ ತಪ್ಪದ, ತಾಜಾ ಮಲಾ ಮಲಾ ಅನೂ ತೊಪ್ಪಲಪಲ್ಯಾ, ಕಾಯಿ ಪಲ್ಯ, ಕರಿಬೇವು, ಕೊತ್ತಂಬರಿ…..! ಒಂದs ಎರಡ s!! ಎಲ್ಲಾ ಅಗದೀ ವ್ಯವಸ್ಥಿತ ಬರೋಬ್ಬರಿ ವ್ಯಾಳ್ಯಾಕ್ಕ ತಂದ ಕೊಡಾಕಿ ; ಯಾಕೋ ಚೂರ ಕಾಳಜಿ ಆತ ನಂಗ! ಆಕಿ ಗಂಡ ಮೊನ್ನೆ ಯಾಕೋ ಭಾಳ ಕೆಮ್ಮತಾನ ಅಂತಿದ್ಲು; ಆರಾಮ ಇದ್ದಾನೋ ಇಲ್ಲೋ ಮತ್ತ! ಈ ದರಿದ್ರ ಕೋವಿಡ್ ಒಂದ ನೂರಾ ಎಂಟ ಚಿಂತಿ ಹಚ್ಚಿ ಹೋಗೇದ ಅನೂದ್ರಾಗ ” ಯವ್ವಾ,ಪಲ್ಲ್ಯಾ ಬೇ..” ಅಂತ ಆಕೀನ,ತಂಗೆವ್ವನ ಒದರಿದ್ಲು! ಒಂದೇ ಹಾರಿಕಿಗೆ ಹೊರಗ ಬಂದು, ಅಡರಾಸಿ ತಂಗೆವ್ವನ್ನ ಕೇಳ್ದೆ –
” ಯಾಕ ತಂಗೆವ್ವಾ,ಎರಡ ಮೂರ ದಿನಾ ಆತು ಬಂದೇ ಇಲ್ಲಾ; ಆರಾಮ ಅದ ಇಲ್ಲೋ ಎಲ್ಲಾ” ಅಂತ ಕೇಳಿ ಆಕಿ ಬುಟ್ಟಿ ಇಳಸಲಿಕ್ಕೆ ಕೈ ಹಚ್ಚಿದೆ.
ಪಲ್ಲ್ಯಾ ಎಲ್ಲಾ ದಿನಧಂಗ ಮಸ್ತ್ ತಾಜಾ ಇತ್ತು; ಆದರ ತಂಗೆವ್ವ ಮಾತ್ರ ದಿನಧಂಗ ಇರಲಿಲ್ಲ. ಕಣ್ಣಾಗ ತೇಜ ಇಲ್ಲ; ಮಾರಿ ಬಾಡಿ ಬಸಳಿ ಸೊಪ್ಪ ಆಗಿತ್ತು! ಧನಿಯೊಳಗ ಜೀವಾನs ಇಲ್ಲ! ಎಲ್ಲಾ ಯಥಾ ಪ್ರಕಾರ ಪಲ್ಲ್ಯಾ ತೂಗಿ ನನ್ನ ಬುಟ್ಟಿ ಒಳಗ ಹಾಕಲಿಕ್ಹತ್ತಿದ್ದ ತಂಗೆವ್ವನ್ನ ಕೇಳೇ ಬಿಟ್ಟೆ -” ಯಾಕ ತಂಗೆವ್ವಾ, ಆರಾಮ ಇದ್ದೀ ಇಲ್ಲೋ? ಇಷ್ಟ್ಯಾಕ ಸಪ್ಪಗ ಆಗೀ? ಏನ ಕಾಳಜಿ ಮಾಡ್ಲೀಕ್ಹತ್ತೀ?” ಅಂತ ಕೇಳೂದ ತಡಾ – ಬಿಕ್ಕಿ ಬಿಕ್ಕಿ ಅಳಲಿಕ್ಕೇ ಸುರು ಮಾಡಿದ್ಲು!! ‘ಯಾಕ ತಂಗೆವ್ವಾ,ಏನಾತು’ ಅಂದೆ.
” ಯವ್ವಾ ಅದs ,ನಮ್ಮ ಗಂಗ್ಯಾ ನನ್ನ ಮುನ್ನೀನ್ನ ಒಯ್ದ ಮತ್ತ ತಮ್ಮ ಮಾಲಕರ ಮನಿಗೆ ಮುಟ್ಟಿಸಿ ಬಂದನವಾ! ನಾ ಹ್ಯಾಂಗ ಇರಲಿ ಬೇ ಮುನ್ನಿ ಇಲದ?” ಅಂದ್ಲು ಸೊರಾ ಸೊರಾ ಮೂಗ ಏರಿಸಿಗೋತ. ನನಗೇನ ತಲಿ ಬುಡಾ ತಿಳೀಲಿಲ್ಲ!!
” ಯಾರs ಈ ಮುನ್ನಿ? ” ಅಂದೆ.” ಅಯ್ಯ! ನಾ ನಿಂಗ ಹೇಳೇ ಇಲ್ಲ ಯವ್ವಾ! ನಮ್ಮ ಗಂಗಣ್ಣ ಕೆಲಸಕ್ಕ ಹೋಗ್ತಾನಲಾ,ಆ ಸಾಹೇಬ್ರ ಮನಿ ಬೆಕ್ಕ ಯವ್ವಾ ಈ ಮುನ್ನಿ. ಅವರ ಎಲ್ಲೋ ದೂರದ ದೇಶಕ್ಕ ಹೋಗಿದ್ರವಾ ಒಂದ ಮೂರ ತಿಂಗಳ. ಹೋಗೂ ಮುಂದ ಮುನ್ನಿನ್ನ ಗಂಗಣ್ಣನ ತಾಬಾಕ್ಕ ಕೊಟ್ಟು ಅವರ ಬರೂ ಮಟಾ ಜ್ವಾಕೀಲೇ ನೋಡಕೋ ಅಂತ ಹೇಳಿ ಹೋಗಿದ್ರ ಯವ್ವಾ. ಗಂಗ್ಯಾ ಅದನ್ನ ಮನಿಗೆ ತಗೊಂಡ ಬಂದಾ. ಮೊದ ಮೊದಲ ಅಡರ ಹುಡರ್ ಮಾಡಿದ್ರೂ ಈಗ ಅದಕ ನಾ ಅಂದ್ರ ಜೀವ ಪಿರಾಣ ಯವ್ವಾ! ನಂಗೂ ಹಂಗ ಆಗಿತ್ತ ಮುನ್ನಿ. ಈಗ ಮೂರ ದಿನದ ಹಿಂದೆ ಅವರ ಬಂದ್ರ ಯವ್ವಾ ತಿರುಗಿ! ಗಂಗ್ಯಾ ಮುನ್ನೀನ್ನ ತಗೊಂಡ ಹೋಗಿ ಅವರಿಗೆ ಕೊಟ್ಟ ಬಂದಾ. ಅದೂ ಹೋಗೂ ಮುಂದ ಒದರಕೋತನ ಹೋದ್ರೂ ಅಲ್ಲಿ ಹೋದ ಮ್ಯಾಲೆ ಒಂಚೂರ ಚಡ ಪಡಿಸಿ,ದಿಕ್ಕ ತಪ್ಪಿಧಂಗ ಓಡಾಡಿ ಆ ಮ್ಯಾಲ ಸುಮ್ಮ ಆಗಿ ಹೊಂದಿ ಕೊಂಡ್ತಂತ ಯವ್ವಾ! ಆದ್ರ ನಂಗ ಇರಾಣ ಆಗವಲತ ಯವ್ವಾ! ಕುಂತ್ರ, ನಿಂತ್ರ ಮಲಗಿದ್ರ ಎದ್ರ ಮುನ್ನೀನ ಕಾಲ ಕಾಲಾಗ ಓಡಾಡಿ ತಿರಗಿಧಂಗ ಅನಸ್ತೇತಿ ಬೇ! ತಿಂದಿಲ್ಲ ಉಂಡಿಲ್ಲ ಅದ ಹೋದಾಗಿಂದ.ಕೂಳ ಗಂಟಲದಾಗ ಇಳೀವಲತವಾ! ಮುನ್ನಿ ಇಲದ ಹ್ಯಾಂಗೊ ಇರಲಿ ಅಂದ್ರ, ಗಂಗ್ಯಾ -” ಭಾಳ ಆತಬೇ ನಿಂದು. ಮೂರ ತಿಂಗಳ ಮೊದಲ ಹ್ಯಾಂಗ ಇದ್ದಿ ನೋಡ ಹಂಗ ಇರು. ಅಲ್ಲ ಯವ್ವಾ ಆಗೇನ ಮುನ್ನಿ ಇತ್ತೇನ ನಿನ್ನ ಕೂಡ!! ” ಅಂತಾನ ನೋಡಬೇ ಯವ್ವಾ! ಆಗ ಮುನ್ನೀದ ಸವಯನs ಇರಾಕಿಲ್ಲ; ನಂಗ ಗೊತ್ತೂ ಇರಾಕಿಲ್ಲ! ಈಗ ನನ್ನ ಜೀವಕ್ಕಿಂತ ಹೆಚ್ಚ ನಂಗದು! ಅದೂ ಹಂಗs ಹಚಿಗೊಂಡಿತ್ತು. ಹೆಂಗ ಇರಲಿ ನಾ ನೀನs ಹೇಳ ಯವ್ವಾ ; ತಿಳದಾಕಿ ನೀ ” ಅಂದ್ಲು.
ಏನ ಹೇಳಲಿ ನಾ; ಖರೇನೇ ಅದು! ಎಲ್ಲಿಂದ, ಯಾವಾಗ, ಹೆಂಗ,ಯಾವ ಬಂಧ ಬಂದು ಬಂಧಿಸ್ತಾವೋ ಗೊತ್ತಿಲ್ಲ.ಖರೆ ಆ ಬಂಧ ಕಡಕೊಳೂದು ಭಾಳ ಕಷ್ಟ! ಹಚಗೋಳೂದು ತಡಾ ಆದೀತು; ಆದ್ರ ಆ ಬಂಧ ಕಳಕೊಂಡು, ಮರತ ಮತ್ತ ಮೊದಲಿನ ಹಂಗs ಇರೂದು ಅಷ್ಟ ಸರಳ ಅದ ಏನು? ಬಲು ಸೂಕ್ಷ್ಮ ಬಂಧ – ಹೆಸರೇ ಇರಾಂಗಿಲ್ಲ ಆ ಸಂಬಂಧಗಳಿಗೆ; ಆದರ ಅವು ಜೀವಜಲದ ಗುಪ್ತಗಾಮಿನಿ ಆಗಿರ್ತಾವ ಅವು. ಖರೇ ಅದ ತಂಗೆವ್ವ ಹೇಳೂದು ! ಗೊತ್ತೇ ಇರೂದಿಲ್ಲ – ಬರೋಬ್ಬರಿ; ಆದರ ಒಮ್ಮೆ ಗೊತ್ತಾಗಿ ಜೀವದ ಜೀವತಂತುನ್ಹಾಂಗ ಹೆಣಕೊಂಡದ್ದನ್ನ ಮರತು, ಅದು ಬರೂಕಿಂತಾ ಮೊದಲ, ಅದು ಇಲದಾಗ ಇದ್ಧಂಗ ಇರು ಅಂದ್ರ ಏನದು, ಎಂಥಾ ಭಾವರಹಿತ ಮಾತು!
” ಹೌದ ತಂಗೆವ್ವಾ, ನೀ ಅನೂದ ಬರೋಬ್ಬರಿ ಅದ. ಇರಲಿಕ್ಕೆ ಬೇಕು, ಹೌದು; ಆದರ ಮೊದಲ ಇದ್ಧಂಗ ಹೆಂಗ ಇರಾಕಾದೀತು? ಗಂಗಣ್ಣ ಗಂಡಸ. ಅಂವಗೇನ ಈ ಸೂಕ್ಷ್ಮ, ಮೆತ್ತಗಿನ, ಬೆಚ್ಚಗಿನ ಭಾವಗಳದು ಅರ್ಥ ಆದೀತ ಬಿಡು ” ಅಂತ ಹೇಳಿ ಅಕಿಗೆ ಚಹಾ ಮಾಡ್ಲಿಕ್ಕೆ ಒಳಗ ಹೋದೆ. ಪಾಪ ಹಸದ ಹಸದ ಬಂದಿದ್ಲು. ಇಷ್ಟ ಚಹಾ – ತಿನಿಸು ಕೊಟ್ಟು ಸಮಾಧಾನ ಮಾಡಿ ಕಳಿಸ್ದೆ ಆಕಿನ್ನ. ಆಕಿ ಹೋದ್ಲು ; ಆದರ ಆಕಿ ಮಾತು, ಮಾರಿ ಕಣ್ಣಾಗಿಂದ, ಮನಸಿನ್ಯಾಗಿಂದ ಸರೀನ ಒಲ್ಲತು! ಈ ಬಂಧ,ಸಂಬಂಧ ಎಷ್ಟು ಸೂಕ್ಷ್ಮನೋ ಅಷ್ಟs ಗಟ್ಟಿ! ಒಂದ ಬೆಕ್ಕಿನ ಮರೀದೇ ಹಿಂಗ ಇದ್ದಾಗ ಹಚಗೊಂಡ ಮನಶಾರನ ಮರೆತು ಹೆಂಗಿರೂದು? ಈ ಬದುಕಿನುದ್ದಕ್ಕೂ ಎಷ್ಟೋ ಮಂದಿ ಬರ್ತಾರ, ಭೆಟ್ಟಿ ಆಗ್ತಾರ ಹೋಗ್ತಾರ – ಖರೆ. ಎಲ್ಲಾರೂ ಹಂಗ ಜೀವಕ್ಕ, ಮನಸಿಗೆ ಹತ್ರ ಬರೂದಿಲ್ಲಾ. ಎಲ್ಲೋ ಒಂದೊಂದ ಜೀವಾ ಅಂಥಾವು ಗಾಠಾಸ್ತಾವ. ಕಡೀತನಕಾನೂ ಅವನ್ನ ಹಂಗ ಮರತ ಇರೂ ಮಾತ ಮರತೇ ಬಿಡೂದು! ಹಂಗ ಅಂತs ಎಷ್ಟ ದೊಡ್ಡ ಬಳಗ ಆಗ್ತದ; ಮನಶ್ಯಾನ ಪ್ರಪಂಚ ಎಷ್ಟ ವಿಶಾಲ ಆಗ್ತದ! ಒಂದೊಂದು ಅಗದೀ ಥೇಟ್ ಮುನ್ನಿ – ತಂಗೆವ್ವನ ಹಂಗೂ ಆಗ್ತಾವ; ಅದಕೂ ಹೆಚ್ಚೇ, ಜೀವಕ್ಕ ಜೀವಾ ಕೊಡೂ ಅಂಥಾವೂ ಬಂಧ ಬಂಧಿಸಿ ಬಿಡ್ತಾವ! ಈ ಬದುಕೇ ಹಂಗ ಅದ! ಮನೀಗೆ ಬಂದ ಸೊಸಿ, ಅಳಿಯಾ, ಅತಿಗಿ, ನಾದಿನಿ ….ಹಿಂಗ ನೂರಾ ಎಂಟು ಸಂಬಂಧ – ಅವರೆಲ್ಲಾ ಏನ ಮೊದಲಿಂದನs ಇರ್ತಾರೇನ? ಈಗ ಮಗಾ – ಸೊಸಿ ಬ್ಯಾರೆ ಮನಿ ಮಾಡ್ಕೊಂಡ ಹೋದ್ರ? ಮಕ್ಕಳ ಬ್ಯಾರೆ; ಬೆಕ್ಕು ನಾಯಿ ಬ್ಯಾರೆ! ಶಂಭರ್ ಟಕ್ಕೆ ಖರೆ! ಆದರೂನೂ ಎಲ್ಲೋ ಒಂದ ಕಡೆ ಚೇಳು ಕುಟುಕಿಧಂಗ ಆಗ್ತದ ಅನೂದಂತೂ ಖರೆ!
ಒಂದ ಬಾ ಅಂದ್ರ ನೂರು ವಿಚಾರ ಬರ್ತಾವ! ಅಗಲಿ ಇರೂ ಅಂಥಾದು,ಮರತ ಇರೂ ಅಂಥಾದು ಪ್ರಸಂಗನs ತರಬ್ಯಾಡಪಾ ದೇವರೇ ಅಂತ ಜೀವ ಅಲವತ್ತುಗೊಂಡ್ತು.
ನನ್ನ ಪತಿ ರೇಡಿಯೋ ಟ್ಯೂನ್ ಮಾಡಿದ್ರು ಅನಸ್ತದ- ” ಚಲೋ ಇಕ ಬಾರ ಫಿರಸೆ ಅಜನಬಿ
ಬನ ಜಾಯೆ ಹಮ್ ದೋನೋ……..”
ಹಾಡು ಕೇಳಿಸ್ತು.” ಅದೆಂಥಾ ನಿರ್ಭಾವುಕ ಈ ಮನಶ್ಯಾ ” ಅನ್ಕೊಂಡೆ ನಾ! ಆದೀತ ಹಂಗ ಎಂದsರೆ! ತಂಗೆವ್ವನ ಮಾರಿ ಕಣ್ಣ ಮುಂದ ಬಂತು. ತಂಗೆವ್ವಗ ಆ ಬೆಕ್ಕು ಮುನ್ನೀನ್ನ ಮರೀಯೂದ ಸಾಧ್ಯ ಇಲ್ಲದಾಗ ಮನಶ್ಯಾ – ಮನಶ್ಯಾನ ಸಂಬಂಧದ್ದ ಏನ ಹೇಳಲಿ!? ಅದಕ ಯಾವ ಹೆಸರು ಅಂಬೂದರದ ಕೂಡಾ ಗರಜ ಇರೂದಿಲ್ಲ!ಶಾಂತ ಶಾಲ್ಮಲೆಯ ಹರಿವು ಅದು! ಹೊರಗ ಇನ್ನೂ ಮಹೇಂದ್ರ ಕಪೂರ್ ನ ಹಾಡು ನಡದಿತ್ತು!
ಯಾಕೋ ಗೊತ್ತೇ ಆಗಧಂಗ ಕಣ್ಣೀರಲೆ ನನ್ನ ಸೀರಿ ಸೆರಗು ಒದ್ದಿ ಆತು.
ಈಬದುಕುಅಂದ್ರಇಷ್ಟsನsದೇವರೇ!!






0 Comments