ಹಿರಿಯ ಪತ್ರಕರ್ತ ಹಾಗೂ ಲೇಖಕ ಶಶಿಧರ ಹಾಲಾಡಿ ಅವರ ಕೃತಿ ‘ನದಿ ದಾಟಿ ಬಂದವರು‘
ಈ ಕೃತಿಯನ್ನು ‘ಅಂಕಿತ ಪ್ರಕಾಶನ’ ಪ್ರಕಟಿಸಿದೆ.
ಈ ಕೃತಿಯ ಕುರಿತ ನಾರಾಯಣ ಯಾಜಿ ಅವರ ಅನಿಸಿಕೆ ಇಲ್ಲಿದೆ.
ಕಾಲದೊಂದಿಗೆ ಬದುಕಿನ ಪಲ್ಲಟವನ್ನು ತೆರೆದಿಟ್ಟ ಕೃತಿ : ‘ನದಿ ದಾಟಿ ಬಂದವರು‘
-ನಾರಾಯಣ ಯಾಜಿ
ಶಶಿಧರ ಹಾಲಾಡಿಯವರು ಪ್ರಕೃತಿಪ್ರಿಯ ಅಂಕಣಕಾರರಾಗಿ ಹೆಸರು ಮಾಡಿದವರು. ತನ್ನ ಬಾಲ್ಯದಲ್ಲಿ ಕಂಡು ಅನುಭವಿಸಿದ ಸಣ್ಣ ಸಣ್ಣ ವಿಷಯಗಳೂ ಅವರ ಲೇಖನಿಯಲ್ಲಿ ಸೊಗಸಾಗಿ ಮೂಡಿವೆ. ಹಾಲಾಡಿ ಪರಿಸರದ ಅಬ್ಬಿ, ಕರಡಿನ ಬೇಣ, ಕಾಟು ಮಾವಿನಕಾಯಿಗಳೆಲ್ಲವೂ ಅಕ್ಷರ ರೂಪವನ್ನು ತಳೆದು ಇಂದು ನಾವು ಕಳೆದುಕೊಂಡ ಆದಿನಗಳನ್ನು ಮೆಲಕು ಹಾಕಿಸುತ್ತವೆ. ಹಾಗಂತ ಅವರನ್ನು ಕೇವಲ ಪರಿಸರ ಪ್ರಿಯ ಲೇಖಕರನ್ನಾಗಿ ನೋಡಲು ಸಾಧ್ಯವಿಲ್ಲ. ಅವರ “ಕಾಲಕೋಶ” ಕಾದಂಬರಿ ದೇಶ ವಿಭಜನೆಯ ಕರಾಳ ದಿನಗಳು ಮತ್ತು ಗಾಂಧೀಜಿಯವರ ಹತ್ಯೆಯ ಜೊತೆ ೧೯೮೪ ರಲ್ಲಿ ಇಂದಿರಾ ಗಾಂಧಿಯವರ ಹತ್ಯೋತ್ತರದ ಸಿಖ್ಖರ ಮೇಲಾದ ದಾರುಣ ಹತ್ಯೆಯನ್ನು ಸಮೀಕರಿಸಿ ಬರೆದ ಕೃತಿ. ಕಾರಣ ಏನೇ ಇರಬಹುದು, ಎರಡೂ ಘಟನೆಗಳಿಗೂ ಇರುವ ಸಂಬಂಧಮಾತ್ರ ಧರ್ಮಾಂಧತೆ ಎನ್ನುವುದನ್ನು ಸೂಕ್ಷ್ಮವಾಗಿ ತಿಳಿಸಿದ್ದಾರೆ.
ಗಾಂಧಿ ಹತ್ಯೆಮಾಡಿದವ ಚಿತ್ಪಾವನ ಎನ್ನುವ ಕಾರಣಕ್ಕೆ ಮಹಾರಾಷ್ಟ್ರದಲ್ಲಿ ಚಿತ್ಪಾವನರ ಮಾರಣ ಹೋಮವಾದರೆ ಇಂದಿರಾಕೊಲೆಯನು ಮಾಡಿದವರು ಸಿಖ್ಖ ಧರ್ಮಕ್ಕೆ ಸೇರಿದವರು ಎನ್ನುವ ಕಾರಣಕ್ಕೆ ಅಮಾಯಕ ಸಿಕ್ಖರು ದಹಿಸಿ ಹೋದ ದುರಂತ ಕಥೆ ಕಾಲಕೋಶದಲ್ಲಿದೆ. ಬಹುಕಾಲ ಕಾಡುವ ಕೃತಿಯಾದ ಇದರ ನಂತರ ಬಂದ “ಅಬ್ಬೆ” ಪರಿಸರವನ್ನು ಅಧರಿಸಿದ ಕಾದಂಬರಿ. ಪರಿಸರದಲ್ಲಿಯೇ ಬದುಕುವ ಮನುಷ್ಯ, ಪರಿಸರದಲ್ಲಿನ ವಿಷಜಂತುಗಳಿಗಿಂತ ಹೇಗೆ ಅಪಾಯಕಾರಿ ಎನ್ನುವುದನ್ನು ವಿವರಿಸಿದ್ದಾರೆ. ಇದೀಗ ಮೂರನೆಯ ಕಾದಂಬರಿ “ ನದಿದಾಟಿ ಬಂದವರು” ಸ್ವಾತಂತ್ರ್ಯ ಹೋರಾಟದ ದಿನಗಳ ಕಾಲದ ವಸ್ತುವನ್ನು ಹಿಡಿದುಕೊಂಡು ನಂತರ ನಡೆದ ಸಾಮಾಜಿಕ ಪಲ್ಲಟಗಳನು ವಿವರಿಸುವ ಕೃತಿಯಾಗಿದೆ.
‘ನದಿ ದಾಟಿ ಬಂದವರು’ ಜನಪದದಲ್ಲಿ ವಲಸೆಯ ಸಂಕೇತವಾಗಿದೆ. ಹಳೆಯ ಸಂಬಂಧಗಳನ್ನು ಕಡಿದುಕೊಂಡು ಹೊಸ ಬದುಕನ್ನು ಸಾಗಿಸಲೆಂದು ಬಂದವರನ್ನು “ಹೊಳೆ ದಾಟಿದವರು” ಎನ್ನುತ್ತಾರೆ. ಇದ್ದಕಡೆ ಬದುಕಲಸಾಧ್ಯವಾಗಿ ಹೊರಡುವಾಗ ಆಗುವ ನೋವು, ಮುಖತೋರಿಸಲಾಗದ ದುಃಖ ಇವೆಲ್ಲವೂ ಇದರಲ್ಲಿ ಇದೆ. ನಾರಾಯಣ ಭಂಡಾರಿಯವರಲ್ಲಿ ಚಾಲುಗೇಣಿಗೆ ಇದ್ದ ಕುಯಿರು ನಾಯಕನಿಗೆ ಒಡೆಯನಿಗೆ ಚಾಲುಗೇಣಿ ಕೊಡಲಾರದೇ ರಾತ್ರೋರಾತ್ರಿ ಕರ್ಜೆ ಎನ್ನುವ ಕರಾವಳಿ ಸಮೀಪದ ಊರಿನಿಂದ ಸಂಸಾರ ಸಮೇತ ಪಲಾಯನ ಮಾಡುವಲ್ಲಿಂದ ಕಥೆ ಪ್ರಾರಂಭವಾಗುತ್ತದೆ. ಹಾಗೇ ಹೋಗುವಾಗ ತನ್ನ ಮನೆಯ ಎದುರು ಆತ ಮಣ್ಣಿನ ಹರಿಯನ್ನು ಕವುಚಿ ಹಾಕುತ್ತಾನೆ. ತಾನು ದಿವಾಳಿ ಆಗಿದ್ದೇನೆ ಎನ್ನುವ ಸಂಕೇತ ಇದು. ನಾರಾಯಣ ಭಂಡಾರಿ ಗೇಣಿಯ ನೆಪದಲ್ಲಿ ಕುಯಿರುವಿನಿಂದ ಅನೇಕ ಬಿಟ್ಟಿ ಕೆಲಸಗಳನ್ನು ಮಾಡಿಸುತ್ತಿರುತ್ತಾನೆ. ಕಾನೂನು ಬಾಹಿರವಾಗಿ ಅಡವಿಯ ಮರಗಿಡಗಳ್ಳನ್ನು ಕಡಿಸುವದನ್ನೂ ಆತ ಕುಯಿರು ನಾಯಕನಿಂದಲೇ ಮಾಡಿಸುತ್ತಾನೆ. ಜೊತೆಗೆ ಆತನ ಪತ್ನಿಯ ಮೇಲೂ ಕಣ್ಣಿಟ್ಟಿದ್ದಾನೆ. ಹೆದರಿದ ಆತ ಇವೆಲ್ಲದರಿಂದ ತಪ್ಪಿಸಿಕೊಳ್ಳಲು ಹೂಡುವ ಉಪಾಯವೇ ನದಿದಾಟಿ ಬೇರೆಲ್ಲಿಯೋ ಹೊಸ ಬದುಕನ್ನು ಕಂಡುಕೊಳ್ಳುವುದು.

ಸೀತಾನದಿ ಕರಾವಳಿಗೂ ಮಲೆನಾಡಿಗೂ ಇರುವ ಗಡಿ. ಊರು ಬಿಟ್ಟವನಿಗೆ ಆತನ ಹೆಂಡತಿಯ ತವರು ಮನೆಯವರೇ ಆಸರೆ ಕೊಡುವುದಿಲ್ಲ. ಗತಿ ಇಲ್ಲದೇ ತಿರುಗುತ್ತಿರುವವನಿಗೆ ನೆಲ್ಯಾಡಿಯಲ್ಲಿ ವೆಂಕಣ್ಣಯ ಆಶ್ರಯ ಕೊಡುತ್ತಾರೆ. ಅಲ್ಲಿಗೂ ಬೆನ್ನಟ್ಟಿಬರುವ ನಾರಾಯಣ ಭಂಡಾರಿ ಊರ ಮುಖಂಡ ಬಲ್ಲಾಳರ ಸಹಾಯ ಯಾಚಿಸುತ್ತಾನೆ. ಇಲ್ಲಿಂದ ಪ್ರಾರಂಭವಾಗುವ ಕಥೆ ನೆಲ್ಯಾಡಿ, ಮೇಲ್ ಕೊಡಿಗೆ, ಕುಂದಾಪುರ ಮೊದಲಾದ ಹಂದರವನ್ನು ತೆರೆದುಕೊಳ್ಳುತ್ತಾ ಸಾಗುತ್ತದೆ. ವೆಂಕಣ್ಣಯ್ಯ ಆತನ ಹೆಂಡತಿ ಸಾಕಮ್ಮ, ಮಕಳಾದ ವಾಸುದೇವ, ಸತ್ಯನಾರಾಯಣ, ಜಾನಕಿ ಇವರ ಬದುಕಿನ ವಿಧಾನ ಅನೇಕ ಸಲ ಡಾ ಶಿವರಾಮ ಕಾರಂತರ “ಬೆಟ್ಟದ ಜೀವ”, ಡಾ. ಅನಂತಮೂರ್ತಿಯವರ “ಮೌನಿ”, ವಿ. ಟಿ. ಶೀಗೇಹಳ್ಳಿಯವಾ “ತಲೆಗಳಿ”ಗಳ ಪಾತ್ರಗಳನ್ನು ನೆನಪಿಸುತ್ತದೆ. ಶ್ರೀಮಂತನೂ ಅಲ್ಲದ ಬಡವನೂ ಅಲ್ಲದ ವೆಂಕಣ್ಣಯ್ಯ, ಅನುಕೂಲಸ್ತನಾದ ರಸಿಕ ಕೃಷ್ಣಯ್ಯ ಇವರಿಬ್ಬರ ಬದುಕಿನಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಸಾಕಮ್ಮ ಮತ್ತು ಭಾಗೀರಥಿ ಇವರ ಪೈಕಿ ಭಾಗೀರಥಿಗೆ ತನ್ನ ಗಂಡ ಕೃಷ್ಣಯ್ಯನ ಹೊರಗಡೆಯ ಬಾನ ಗಡಿಯಿಂದಲಾಗಿ ಸಂಪತ್ತಿದ್ದರೂ ಅನುಭವಿಸದ ಸ್ಥಿತಿಯಿದೆ. ಜೊತೆಗೆ ಗಂಡನ ಅಕ್ಕ ಹೊನ್ನಮ್ಮಳ ಕಾಟ ಆಕೆಯ ಬದುಕನ್ನು ಇನ್ನಷ್ಟು ಖಿನ್ನತೆಗೆ ದೂಡಿದೆ.
ಈ ಕಾದಂಬರಿ ನಡೆಯುವ ಕಾಲ ಎರಡನೆ ಮಹಾಯುದ್ಧದ ಸಂದರ್ಭ. ಬ್ರಿಟಿಷರು ಭಾರತವನ್ನೂ ಯುದ್ಧಕ್ಕೆ ದೂಡಿದ್ದರು. ಎಲ್ಲಾ ವಸ್ತುಗಳೂ ತುಟ್ಟಿಯ ಕಾಲ. ಇಂತಲ್ಲಿ ಬಲ್ಲಾಳರಂತವರು ತಮ್ಮ ಜಮೀನುದಾರಿಕೆಯ ಅಥವಾ ಪಟೇಲ ಗಿರಿಯ ಗತ್ತಿನಲ್ಲಿ ತೊಂದರೆ ಇಲ್ಲದೇ ಬದುಕು ಸಾಗಿಸುತ್ತಾರೆ. ಅವರ ನ್ಯಾಯ ತೀರ್ಮಾನವೇ ಹಳ್ಳಿಗಳಲ್ಲಿ ಅಂತಿಮ. ಏನೇ ಆದರೂ ಅವರಲ್ಲಿಗೆ ಬಂದವರು ವರುಷಕ್ಕೆ ಇಷ್ಟು ದಿವಸ ಬಿಟ್ಟಿಯಾಗಿ ದುಡಿಯಲು ಹೋಗಲೇ ಬೇಕು. ಕುಯಿರು ನಾಯಕ ಸಹ ಇದಕ್ಕೆ ಹೊರತಾಗಲಿಲ್ಲ.
ಬ್ರಿಟಿಷರ ಆಡಳಿತ ಒಳ್ಳೆಯದೆನ್ನುವ ಅವರು ಸ್ವಾತಂತ್ರ್ಯ ಬಂದ ತಕ್ಷಣ ತಮ್ಮ ನಿಷ್ಠೆ ಬದಲಾಯಿಸಿಬಿಡುತ್ತಾರೆ. ವೆಂಕಣ್ಣಯ್ಯ ಹಾಗಲ್ಲ, ಆತನಿಗೆ ಗಾಂಧೀಜಿಯಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗುವದಿನ ದೂರವಿಲ್ಲ, ಆಗ ಒಳ್ಳೆಯದಾಗುತ್ತದೆ ಎನ್ನುವ ಬಲವಾದ ನಂಬಿಕೆಯಿದೆ. ಮುಂದೆ ಒಳ್ಳೆಯದಾಗುತ್ತದೆ ಎನ್ನುವ ಆಶಾಭಾವನೆ ವರ್ತಮಾನದ ಕಷ್ಟಗಳನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕೊಡುತ್ತದೆ. ತಾಳಮದ್ದಳೆಯ ಅರ್ಥದಾರಿಯೂ ಆಗಿರುವ ವೆಂಕಣ್ಣಯ್ಯನಿಗೆ ಕೃಷ್ಣಯ್ಯನೆಂದರೆ ಸ್ನೇಹ. ಸಾಕಮ್ಮನಿಗೆ ಭಾಗೀರಥಿಯ ಮೇಲೆ ಕನಿಕರ ಮತ್ತು ಆತ್ಮೀಯತೆ. ಹೀಗೆ ಸಾಗುವ ಕಾದಂಬರಿ ಕುಂದಾಪುರಕ್ಕೆ ಗಾಂಧಿ ಬಂದಾಗ ಇನ್ನೊಂದು ರೂಪವನ್ನು ಪಡೆಯುತ್ತದೆ.
ವೆಂಕಣ್ಣಯ್ಯನಿಗೆ ಗಾಂಧಿಯನ್ನು ನೋಡುವ ಆಸೆ. ಆತನ ಜೊತೆ ಕೃಷ್ಣಯ್ಯ ಬಂದರೂ ಆತ ಹೋಗುವುದು ಬಸ್ರೂರಿನ ಗಣಿಕೆಯರ ಜೊತೆ ಕಳೆಯಲು. ಗಾಂಧೀಜಿ ಮೇಕೆ ಹಾಲು ಕುಡಿಯುತ್ತಾರಂತೆ ಎನ್ನುವ ಅಧ್ಯಾಯದಲ್ಲಿ ಸ್ವಾತಂತ್ರ್ಯ ಹೋರಾಟ ಆ ಕಾಲದಲ್ಲಿ ಜನಸಾಮಾನ್ಯರ ಮೇಲೆ ಮಹಾತ್ಮಾ ಬೀರಿದ ಪ್ರಭಾವವನ್ನು ಎದ್ದು ಹೇಳುತ್ತದೆ. ಅವರ ಒಂದು ಕರೆಗೆ ಸಭೆಗೆ ಬಂದ ಜನರೆಲ್ಲರೂ ಚಿನ್ನ ಹಣಗಳನ್ನು ಕೊಡುವ ಸಮೂಹ ಸನ್ನಿಯ ವಿವರಣೆ ಆಪ್ತವಾಗಿ ಮೂಡಿಬಂದಿದೆ. ಇಲ್ಲಿಯೂ ಗಾಂಧಿ ಕಾಣಿಸುವುದು ದೂರದಲ್ಲಿಯೇ ಎನ್ನುವ ಮೂಲಕ ನಾಯಕನಾದವರು ಜನರಿಗೆ ಎಟುಕದಷ್ಟು ದೂರವಿರುತ್ತಾರೆ ಎನ್ನುವುದನ್ನು ಪರೋಕ್ಷವಾಗಿ ಹೇಳುತ್ತಾರೆ. ತಾಳಮದ್ದಳೆಯ ಅರ್ಥಗಾರಿಕೆಯಲ್ಲಿ ಸ್ವಾತಂತ್ರದ ಕುರಿತು ಜಾಗ್ರತಿಯನ್ನು ಪರೋಕ್ಷವಾಗಿ ಮೂಡಿಸುತ್ತಿರುವ ವೆಂಕಣ್ಣಯ್ಯನಿಗೆ ಜ್ವರದ ರೂಪದಲ್ಲಿ ವಿಧಿ ಸೆಳೆದೊಯ್ಯುತ್ತದೆ. ಅವರು ಕಂಡ ಕನಸಿನ ರಾಮರಾಜ್ಯ ಭಾರತವನ್ನು ನೋಡಲು ಅವರಿಗಾಗುವುದಿಲ್ಲ. ಅಲ್ಲಿಯವರೆಗೆ ಒಂದುರೀತಿಯ ಹದಲ್ಲಿ ಸಾಗುತ್ತಿದ್ದ ಕಾದಂಬರಿ ಇದ್ದಕ್ಕಿಂದ್ದಂತೆ ತಿರುವನ್ನು ಪಡೆಯುತ್ತದೆ. ಮೊದಲು ನದಿ ದಾಟಿಬಂದ ಕುಯಿರು ನಾಯಕನ ಬದುಕು ಒಂದು ಸ್ಥಿರತೆ ಕಂಡುಕೊಂಡರೆ ಎರಡನೆಯ ತಲೆಮಾರಿನ ಆತನ ಮಗ ಸಿದ್ಧ ಮತ್ತು ವೆಂಕಣ್ಣಯ್ಯರ ಮಕ್ಕಳಾದ ವಾಸುದೇವ, ಸತ್ಯನಾರಾಯಣ, ಜಾನಕಿಯರ ಬದುಕು ಸ್ವಾತಂತ್ರೋತ್ತರ ಭಾರದಲ್ಲಿದೆ. ಒಳ್ಳೆಯ ಕಾಲ ಬರುತ್ತದೆ ಎನ್ನುವ ಆಶಾ ಭಾವನೆಯಿಂದ ಕಾಲಕ್ಕೆ ಬಲ್ಲಳರಂತವರೂ ಇಲ್ಲಿಯೂ ಮುನ್ನೆಲೆಯಲ್ಲಿಯೇ ಇರುತ್ತಾರೆ. ಮತ್ತು ಅವರ ದರ್ಪ ಇನ್ನಷ್ಟು ಹೆಚ್ಚಾಗುತ್ತದೆ. ಕಲಿಯಲು ಹುಶಾರಿದ್ದ ವಾಸುದೇವ ದಿಕ್ಕಿಲ್ಲದ ಮನೆಯ ಜವಾಬುದಾರಿಯನ್ನು ಹೊರಲು ಶಾಲೆ ಬಿಡಬೇಕಿದೆ.
ಸತ್ಯನಾರಾಯಣ ಯಕ್ಷಗಾನ ಮೇಳಕ್ಕೆ ಚಂಡೆಬಾರಿಸಲು ಹೋಗುತ್ತಾನೆ. ವಾಸುದೇವ ಕೆಟ್ಟು ಪಟ್ಟಣಾವನ್ನು ಸೇರು ಎನ್ನುವಂತೆ ಬೆಂಗಳೂರು ಸೇರಿ ಹೋಟೆಲ್ ನಡೇಸುತ್ತಾನೆ. ಬಲ್ಲಾಳರು ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟೀಷರ ಪರ ನಿಂತವರು ಇದೀಗ ತಮ್ಮ ಬಾವ ಚುನಾವಣೆಗೆ ನಿಂತಿರುವ ಕಾರಣ ಅವರಿಗೆ ಓಟುಕೇಳಲು ಬರುತ್ತಾರೆ. ಅಧಿಕಾರದಲ್ಲಿರುವವರು ಅಧಿಕಾರದಲ್ಲಿಯೇ ಮುಂದುವರಿಯುತ್ತಾರೆ. ಸಾಕಮ್ಮ ತಮ್ಮ ಜಮೀನು ಹೊಸ ಕಾಯಿದೆ ಉಳುವವನೇ ಹೊಲದೊಡೆಯ ಎನ್ನುವ ಕಾನೂನಿನ ಪರಿಣಾಮ ಸಿದ್ದನಾಯ್ಕನ ಪಾಲಾಗುತ್ತಿರುವುದನ್ನು ಕಂಡು ಆಘಾತವಾಗ್ದೆ. ಕಂಗಾಲಾಗಿ ಧರಣಿ ಕೂರುವ ಸನ್ನಿವೇಶ ಇಡೀ ಕಾದಂಬರಿಗೆ ಹೊಸ ತಿರುವನ್ನು ಕೊಟ್ಟಿದೆ. ಕುಯಿರ ನಾಯಕನಿಗೆ ಆಶ್ರಯ ಕೊಟ್ಟವರ ಮನೆಯ ಜಮೀನೆಲ್ಲವೂ ಸಿದ್ದನಾಯಕನ ಪಾಲಾಗುವಾಗ ಮುಂದಿನ ಬದುಕಿಗೆ ಸಾಕಮ್ಮ ಮತ್ತು ಆಕೆಯ ಕುಟುಂಬ ಬೆಂಗಳೂರು ಪಾಲಾಗುವಿಕೆ ಇನ್ನೊಂದು ತಿರುವನ್ನು ನೀಡುತ್ತದೆ. ಮೊದಲು ಜಾಗಕೊಟ್ಟ ಕುಟುಂಬ ತಮ್ಮ ನೆಲೆಯನ್ನು ಹುಡುಕಲು ಬೆಂಗಳೂರು ಪಾಲಾಗುವುದು ನದಿದಾಟಿದವರು ಎನ್ನುವುದಕ್ಕೆ ಕೊನೆಯ ತಿರುವನ್ನು ನೀಡಿದೆ.
ಕಾದಂಬರಿ ಇಷ್ಟೇ ಆಗಿದ್ದರೆ ಸ್ವತಂತ್ರ್ಯಭಾರತದ ಕಾಯಿದೆಯ ದೋಷವಾಗಿ ಪರಿಣಮಿಸುತ್ತಿತ್ತು. ನಿರ್ಗತಿಕನಾದ ಕುಯಿರನ ಮಗ ಗೇಣಿಯೆನ್ನುವುದು ಯಾವತ್ತಿದ್ದರೂ ಅತಂತ್ರ ಸ್ಥಿತಿಯೇ. ಕರ್ಜೆಯಿಂದ ಹೊರಬಂದಿರುವುದೂ ಆ ಕಾರಣಕ್ಕಾಗಿಯೇ ಎನ್ನುವುದನ್ನು ಮರೆಯಬಾರದು. ಆತನ ಬದುಕೂ ಸಹ ಒಂದು ನೆಲೆಯನ್ನು ಕಾಣಬೇಕು ಎನ್ನುವ ಆಶಯದಲ್ಲಿ ಕೊನೆಗೆ ಬ್ಯಾಂಕಿನವರು ಬಂದು ಮನೆಕಟ್ಟಿಕೊಳ್ಳಲು ಸಾಲ ಕೊಡುವೆ ಎನ್ನುವ ಭರವಸೆಯೊಂದಿಗೆ ಭಾರತದ ಸಾಮಾಜಿಕ ನ್ಯಾಯ ತತ್ವವನ್ನು ಇಲ್ಲಿ ಹಾಲಾಡಿಯವರು ಕಟ್ಟಿಕೊಟ್ಟಿದ್ದಾರೆ. ವೆಂಕಣ್ಣಯ್ಯನ ಕುಟುಂಬವೂ ಸಹ ಕೃಷಿಯಿಂದ ಹೊಟೆಲ್ ಉದ್ಯಮದತ್ತ ತಿರುಗಿ ಸುಭದ್ರ ಬದುಕನ್ನು ಕಂಡುಕೊಂಡಿದ್ದಾರೆ.
‘ನದಿದಾಟಿ ಬಂದವರು’ ಕಾದಂಬರಿಯಲ್ಲಿ ನಮ್ಮನ್ನು ಸೆಳೆಯುವುದು ಹಳ್ಳಿಯ ಬದುಕಿನ ಸಣ್ಣ ಸಣ್ಣ ಘಟನೆಗಳನ್ನು ನವಿರಾಗಿ ಹಣೆದಿರುವುದು. ಗ್ರಹಣದ ದಿನ ಫಲ ಕೊಡದ ತೆಂಗಿನ ಮರಕ್ಕೆ ಒನಕೆಯಿಂದ ಸೂರ್ಯ ಮತ್ತು ಚಂದ್ರನ ಗುರುತನ್ನು ಮಾಡುವುದನ್ನು ಮುಷ್ಟ ತಾಗಿಸುವುದು ಎನ್ನುತ್ತಾರೆ. ಹೀಗೆ ಮಾಡುವುದರಿಂದ ಮುಂದಿನ ವರ್ಷ ಫಲ ಕೊಡುತ್ತದೆ ಎನ್ನುವ ನಂಬಿಕೆ ಹಳ್ಳಿಯಲ್ಲಿದೆ. ಕೃಷ್ಣಯ್ಯ ಹೊನ್ನಿನ ವರಹವನ್ನು ಬಸ್ರೂರಿನ ಗಣಿಕೆಗೆ ಕೊಟ್ಟರೂ ಆತನ ರೂಪವನ್ನು ನೋಡಿದ ಆಕೆ ಈತನಿಂದ ತಪಿಸಿಕೊಳ್ಳುವುದು ಇವೆಲ್ಲವೂ ಕಾದಂಬರಿಗೆ ಸಹಜ ಸೌಂದರ್ಯವನ್ನು ಮೂಡಿಸಿದೆ. ಮಳೆಗಾಲದ ಬದುಕು, ಹಳ್ಳಿಯ ಡಾಕ್ಟರರು ಕೊಡುವ ಔಷಧಿ ಇವುಗಳಲ್ಲೆಲ್ಲವೂ ಪರಿಸರ ಪ್ರಿಯರಿಗೆ ಇಷ್ಟವಾದುತ್ತದೆ. ತರ್ಕದಿಂದ ಎಲ್ಲವನ್ನು ಸಾಧಿಸಲಾಗದು. ಕೆಲವೊಂದು ವಿಜ್ಞಾನ ಮತ್ತು ತರ್ಕಕ್ಕೆ ಮೀರಿದ ವಿಷಯಗಳೂ ಜನಪದರಲ್ಲಿತ್ತು ಎನ್ನುವದನ್ನು ಇಲ್ಲಿ ಚಿತ್ರಿಸಿದ್ದಾರೆ. ಯಾವ ಉದ್ವೇಗವಿಲ್ಲದೇ ಬದುಕಿನ ಏರುಪೇರುಗಳನ್ನು ಸಹಜವೆನ್ನುವಂತೆ ಸ್ವೀಕರಿಸುವ ಮತ್ತು ಸ್ವಾತಂತ್ರ್ಯ ಹೋರಾಟ ಹಳ್ಳಿಯ ಬದುಕಿನ ಮೇಲೆ ಬೀರಿದ ಪ್ರಭಾವವನ್ನು ಈ ಕಾದಂಬರಿಯಲ್ಲಿ ಕಾಣಬಹುದಾಗಿದೆ. ಬಲ್ಲಾಳರಂತವರು ಅಧಿಕಾರ ಹಿಡಿದಿರುವುದು ಅವಕಾಶವಾದಿ ರಾಜಕಾರಣದ ಸಂಕೇತವಾದರೂ ಪ್ರಜಾಪ್ರಭುತ್ವವೆನ್ನುವುದು ಇದೆನ್ನಲ್ಲವನ್ನು ಒಳಗೊಂಡ ಒಳ್ಳೆಯ ಆಯ್ಕೆ ಎನ್ನುವುದನ್ನು ಹಾಲಾಡಿ ಈ ಕೃತಿಯಲ್ಲಿ ಧ್ವನಿಸಿದ್ದಾರೆ.
ಸಹಜವಾಗಿ ಓದಿಸಿಕೊಂಡು ಹೋಗುವ ಕಾದಂಬರಿ ಇದು.
ಕೃತಿ : ನದಿ ದಾಟಿ ಬಂದವರು
ಲೇಖಕರು : ಶಶಿಧರ ಹಾಲಾಡಿ
ಪ್ರಕಾಶಕರು : ಅಂಕಿತ ಪ್ರಕಾಶನ
ಬೆಲೆ : ರೂ. 250/-






0 Comments