
ಸುಧಾ ಆಡುಕಳ
ಹುಣ್ಣಿಮೆಯ ಇರುಳಲ್ಲಿ ತೇಲಿ ಹೋದ ಅಮ್ಮನ ಹೆಣ
ಚಂದಿರನೇ ನಾ ನಿನ್ನ ಕ್ಷಮಿಸಲಾರೆ
ತಣ್ಣನೆಯ ಬೆಳದಿಂಗಳು ಸುಟ್ಟುರಿಸುವುದು ನನ್ನ
ಬದುಕತಂಪ ಕಳೆದ ದಿನವ ಮರೆಯಲಾರೆ
ಅಮ್ಮನ ಅಗಲಿಕೆಯ ನೋವನ್ನು ಮರೆಯಲು ಎಂದೋ ಬರೆದ ಸಾಲುಗಳಿವು. ಹೌದು, ತುಂಬು ಹುಣ್ಣಿಮೆಯ ಬೆಳದಿಂಗಳು ಹಾಲಂತೆ ಚೆಲ್ಲಿದಾಗಲೆಲ್ಲ ಅಂಗಳದಲ್ಲಿ ತಣ್ಣಗೆ ಮಲಗಿದ ಅಮ್ಮ ನೆನಪಾಗುತ್ತಾಳೆ. ಅಕಾರಣವಾಗಿ ಅವಳನ್ನು ಆಹುತಿ ಪಡೆದ ದಂಡೆಯಿಲ್ಲದ ಬಾವಿ ಬಾಯಿ ತೆರೆಯುತ್ತದೆ. ಧಗಧಗನೆ ಉರಿವ ಬೆಂಕಿ ಜೀವದ ನೆರಳಾಗಿದ್ದ ಅಮ್ಮನನ್ನು ದಹಿಸುವಾಗಲೂ ಮೋಡದ ಮರೆಗೆ ಸರಿಯದೇ ನಗುತ್ತಿದ್ದ ಚಂದ್ರ ಕಾಡುತ್ತಾನೆ.
ಮತ್ತೆ ಬಂದ ಹೋಳಿ ಹುಣ್ಣಿಮೆಯಲ್ಲಿ ಅಮ್ಮನ ಒಂದಿಷ್ಟು ನೆನಪುಗಳು…
ಇತ್ತೀಚೆಗೆ ಅವಧಿಯ ಹಳೆಯ ಲೇಖನಗಳನ್ನು ಓದುತ್ತಿದ್ದಾಗ ಜಿ ಎನ್ ಮೋಹನ್ ಬರೆದ ‘ಅಮ್ಮ ರಿಟೈರ್ ಆಗ್ತಾಳೆ’ ಎಂಬ ಲೇಖನ ಗಮನ ಸೆಳೆಯಿತು. ಓದುತ್ತ ಹೋದಂತೆಲ್ಲ ಅಮ್ಮ ಎನ್ನುವ ಜೀವ ಮನೆಯೊಳಗಿಲ್ಲದಿದ್ದರೆ ಏನೆಲ್ಲ ಅಧ್ವಾನಗಳು ನಡೆಯಬಹುದು ಮತ್ತು ಎಂಥದೊಂದು ಶೂನ್ಯ ಆವರಿಸಬಹುದು ಎಂಬುದನ್ನು ಕಲ್ಪಿಸುತ್ತಿದ್ದಂತೆ ನನ್ನಮ್ಮ ಒಂದಷ್ಟು ದಿನ ಮನೆಯೊಳಗಿಂದ ರಿಟೈರ್ ಆದ ನೆನಪುಗಳು ಒತ್ತರಿಸಿಕೊಂಡು ಬಂದವು.
ಅದು ನಡೆದದ್ದು ಹೀಗೆ. ನಮ್ಮ ಮನೆಯಲ್ಲಿ ಊಟಕ್ಕೆ ಅಕ್ಕಿಯಿಲ್ಲದಿದ್ದರೂ ನಡೆದೀತು, ಆದರೆ ತಾಂಬೂಲದ ಬಟ್ಟಲು ಮಾತ್ರ ಸದಾ ತುಂಬಿರಬೇಕು. ಸುತ್ತಮುತ್ತಲಿನ ಮನೆಯವರೆಲ್ಲರೂ ನಮ್ಮನೆಗೆ ದಿನದಲ್ಲಿ ಒಮ್ಮೆಯಾದರೂ ಬಂದ ಹೋಗಲು ಕಾರಣವೆಂದರೆ ಈ ಕವಳದ ಬಟ್ಟಲು. ಬಂದವರೇ ಬಾಯಿ ತುಂಬುವಷ್ಟು ಕವಳವನ್ನು ಜಗಿದು ಜಗುಲಿಯಲ್ಲಿಯೇ ನಿಂತು ತೋಟದ ಮೂಲೆಗೆ ಪಿಚಕ್ಕೆಂದು ಉಗಿದು, ನೀರು ತಾರೆಂದು ಕುಡಿದು, ಹೋಗುವಾಗ ಇನ್ನೊಂದು ಕವಳ ತುಂಬಿಸಿಕೊಂಡು ಹೋಗುವುದು ರೂಢಿ. ಹಾಗೆ ಎಲ್ಲರೂ ಜಗುಲಿಯ ತುದಿಯಲ್ಲಿಯೇ ಉಗುಳುವ ಕವಳದ ಕೆಂಪು ರಾಶಿಯನ್ನು ವಾರಕ್ಕೊಮ್ಮೆ ತಲೆಸ್ನಾನ ಮಾಡುವ ದಿನ ಅಮ್ಮ ತನ್ನ ಕೈಯ್ಯಾರೆ ಸ್ವಚ್ಛಗೊಳಿಸಿ ಪಾವನಳಾಗುತ್ತಿದ್ದಳು. ಮನೆಯ ಎದುರೇ ಉಗುಳಿನ ರಾಶಿ ಬೀಳುವುದು ಅಮ್ಮನಿಗೆ ಸುತಾರಾಂ ಇಷ್ಟವಿರಲಿಲ್ಲ. ಆದರೆ ಅಪ್ಪ ಮಾತ್ರ ಇದು ತಮ್ಮೆಲ್ಲರ ಹಕ್ಕು ಎಂದು ತಿಳಿದಿದ್ದರಿಂದ ಅವಳು ಸುಮ್ಮನೆ ಇರುತ್ತಿದ್ದಳು.

ಹೀಗಿರುತ್ತ ಅಮ್ಮನಿಗೆ ಒಂದು ದಿನ ಕ್ರಾಂತಿಕಾರಿ ವಿಚಾರವೊಂದು ಮನಸ್ಸಿನಲ್ಲಿ ಬಂದೇ ಬಿಟ್ಟಿತು. ಅಪ್ಪ ಸೊಪ್ಪಿನ ಹೊರೆ ತರಲು ಹೋದ ಸಮಯವನ್ನು ಕಾದು ಅವರು ಕವಳ ಉಗಿಯುವ ಜಾಗದ ತುಂಬೆಲ್ಲ ಚಂದಚಂದದ ಹೂ ಗಿಡಗಳನ್ನು ನೆಟ್ಟು ಬಿಟ್ಟಳು. ಹೂಗಿಡದ ಮೇಲೆ ಯಾರೂ ಉಗುಳಲಾರರು, ಹಾಗಾಗಿ ಅಂಗಳದ ತುದಿಯಲ್ಲಿ ಹೋಗಿ ಉಗುಳಿಯಾರು ಎಂಬುದು ಅಮ್ಮನ ಊಹೆಯಾಗಿತ್ತು. ಆದರೆ ದೂರ್ವಾಸ ಮುನಿಯಾದ ಅಪ್ಪನಿಗೆ ಅಮ್ಮನನ್ನು ಥಳಿಸಲು ಇದಕ್ಕಿಂತ ದೊಡ್ಡ ಕಾರಣಗಳು ಬೇಕಿರಲಿಲ್ಲ. ನೆಟ್ಟ ಹೂವಿನ ಗಿಡದ ಕಡ್ಡಿಗಳೆಲ್ಲ ಅಮ್ಮನ ಮೈಮೇಲೆ ಬಾಸುಂಡೆ ಮೂಡಿಸಿ ಹುಡಿಹುಡಿಯಾದವು.
ಅಮ್ಮನೂ ಯಾಕೋ ಆ ದಿನ ಕೋಪಗೊಂಡಿದ್ದಳು. ‘ಮೂರು ಹೊತ್ತು ಮಾಡಿ ಹಾಕಿದ್ದನ್ನುತಿಂದು ಕೊಬ್ಬಿದರೆ ಹೀಗೆ ಆಗುವುದು’ ಎಂದು ಏಟಿಗೆ ಇದಿರೇಟು ಕೊಟ್ಟೇ ಬಿಟ್ಟಳು. ಇದೇ ಕಾರಣವನ್ನಿಟ್ಟುಕೊಂಡು ಅಪ್ಪ, ‘ನೀನಿನ್ನು ಮಾಡಿಹಾಕುವುದು ಬೇಡ, ದನ ಕಾಯಿ. ನಾನು ಮನೆಯೊಳಗಿನ ಕೆಲಸವನ್ನೆಲ್ಲ ಮಾಡುತ್ತೇನೆ.’ ಎಂದು ಘೋಷಿಸಿಯೇ ಬಿಟ್ಟರು. ಸಣ್ಣ ಮಕ್ಕಳು ನಾವು ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದೆವು. ಅಲ್ಲಿಂದ ನಮ್ಮ ಮನೆಯಲ್ಲಿ ಪಾತ್ರಗಳು ಅದಲು ಬದಲಾದವು.
ಅಮ್ಮನಿಗೂ ಸಹಿಸಿ ಸಾಕಾಗಿತ್ತೆಂದು ಕಾಣುತ್ತದೆ. ದಿನವೂ ಐದಕ್ಕೆದ್ದು, ಹಟ್ಟಿಯ ಹಸುಗಳ ಹಾಲು ಕರೆದು, ಬಿಸಿ, ಬಿಸಿ ದೋಸೆ ಮಾಡುತ್ತಿದ್ದವಳು ಥೇಟ್ ಅಪ್ಪನಂತೆ ಮುಸುಕು ಹಾಕಿ ಮಲಗಿಯೇ ಬಿಟ್ಟಳು. ಅಪ್ಪನೋ ಬೆಳಗೆದ್ದು ಗಡಿಬಿಡಿಯಲ್ಲಿ ರಂಗೋಲಿ ಹಾಕಲು ಹೋಗಿ ಪುಡಿಯನ್ನೆಲ್ಲ ಚೆಲ್ಲಿಕೊಂಡು ಪೇಚಾಟದಲ್ಲಿದ್ದರು. ಹಾಲು ಹಿಂಡಲು ಹೋದರೆ ಇವರ ಘನ ಆಕಾರವನ್ನು ನೋಡಿಯೇ ಹೆದರಿದ ಹಸುಗಳು ಒದ್ದು ಹಾಲಿನ ಪಾತ್ರೆಯನ್ನೇ ಹಟ್ಟಿಯಾಚೆಗೆ ಹಾರಿಸಿದವು. ಅಂತೂ ಹೇಗೋ ಒಂದು ದನವನ್ನು ಸಂತೈಸಿ ಚಹಾಕ್ಕಾಗುವಷ್ಟು ಹಾಲು ತಂದರು.
ದೋಸೆಯ ಹಿಟ್ಟಿಗೆ ನೀರು ಹೆಚ್ಚಾಯಿತೆಂದು ಬೈಯ್ಯುತ್ತಲೇ ಮಣದಪ್ಪದ ದೋಸೆಗಳನ್ನು ಬಟ್ಟಲಲ್ಲಿ ತುಂಬಿಸಿದರು. ಉರಿಯದೇ ಹಠ ಹಿಡಿವ ಕಟ್ಟಿಗೆಯನ್ನು ಒಲೆಗೆ ಕುಟ್ಟಿ ಮಣ್ಣಿನ ಒಲೆಯನ್ನು ಮುಕ್ಕುಗೊಳಿಸಿದರು. ಕಾವಲಿಗೆ ಅಂಟಿದ ಗರಿಗರಿಯಾದ ದೋಸೆಯ ಬದುಗಳನ್ನು ತಿನ್ನಲು ಹಾತೊರೆವ ಬೆಕ್ಕನ್ನು ಕೊಳ್ಳಿಯಿಂದಲೇ ಬಡಿದು ಓಡಿಸಿದರು. ಅಂತೂ ನಾವು ಶಾಲೆಗೆ ಹೋಗುವ ಹೊತ್ತಿಗೆ ಒಂದು ತಿಂಡಿಯ ಶಾಸ್ತ್ರವು ಮುಗಿದಿತ್ತು. ಅಮ್ಮ ತೀರ ಶಾಂತಳಾಗಿ ನಮ್ಮ ಕೈಗೆ ಗುಟ್ಟಾಗಿ ಒಂದಿಷ್ಟು ದುಡ್ಡನ್ನು ತುರುಕಿ, ಶಾಲೆಯ ಪಕ್ಕದ ಅಂಗಡಿಯಲ್ಲೇನಾದರೂ ತಿನ್ನಿ ಎಂದು ಹೇಳಿ ದನಗಳನ್ನು ಮೇಯಿಸಲು ಹೊರಟಳು. ಅಪ್ಪಇನ್ನುಅಡುಗೆ ಮುಗಿಸಿ ನಮಗೆ ಊಟ ಕಟ್ಟಿಕೊಡುವುದು ಅಷ್ಟರಲ್ಲೇ ಇದೆ ಎಂದು ಅವಳಿಗೆ ತಿಳಿದಿತ್ತು.
ಸಂಜೆ ಮನೆಗೆ ಬರುವಾಗ ಮನೆ ತುಂಬ ಧೂಳಿನ ರಾಶಿಯೇ ತುಂಬಿತ್ತು. ಮಣ್ಣಿನಿಂದ ಮಾಡಿದ ಮನೆಯ ನೆಲವನ್ನು ಅಮ್ಮ ಸಗಣಿಯಿಂದ ಪ್ರತಿ ದಿನವೂ ನುಣ್ಣಗೆ ಸಾರಿಸಿ ಹೊಳೆಯುವಂತೆ ಇಡುತ್ತಿದ್ದಳು. ಅಪ್ಪನ ಸಾರಿನಲ್ಲಿ ಉಪ್ಪಲ್ಲದೇ ಬೇರೆ ರುಚಿಯೇ ಇರದಿದ್ದರೂ ಹೆದರಿಕೆಯಿಂದ ತೆಪ್ಪಗೆ ಉಂಡು ಮಲಗಿದೆವು. ಕಡೆಯ ಪಕ್ಷ ಊಟ ಮಾಡಿದ ಎಂಜಲನ್ನಾದರೂ ಅಮ್ಮ ತೆಗೆಯುವಳೆಂದು ಅಪ್ಪ ಊಟವಾದೊಡನೆ ಬೀಡಿ ಹಚ್ಚಿಕೊಂಡು ಖುರ್ಚಿಯಲ್ಲಿ ಕುಳಿತು ಕಾದರು. ಅಮ್ಮ ಮಾತ್ರ ಇದ್ಯಾವುದರ ಪರಿವೆಯಿಲ್ಲದೇ ಮಲಗಿಬಿಟ್ಟಳು. ಅಪ್ಪ ಸಗಣಿ ನೀರನ್ನು ನೆಲದ ತುಂಬಾ ಚಿಮುಕಿಸಿ, ಕೈಯ್ಯಿಂದಲೇ ಉಜ್ಜುತ್ತಾ, ಇಡಿಯ ಅಡುಗೆ ಕೋಣೆಯನ್ನು ಪಟ್ಟೆಪಟ್ಟೆಯ ಚಿತ್ತಾರವಾಗಿಸಿದರು. ಬೆಳಗಿಂದ ಇವಳು ತೊಳೆಯಬಹುದೆಂದು ಪೇರಿಸಿಟ್ಟ ಪಾತ್ರೆಗಳನ್ನೆಲ್ಲ ಕಣಕಣ ಶಬ್ದದೊಂದಿಗೆ ತೊಳೆಯುತ್ತಾ ನಮಗೆ ನಿದ್ದೆ ಬರದಂತೆ ಕಾದುಕೊಂಡರು.

ರುಚಿಯಾದ ಅಡುಗೆ, ಹೊಸಿಲ ತುಂಬ ರಂಗೋಲಿ, ಸಗಣಿ ಸಾರಿಸಿದ ಅಂಗಳ, ಹೊಳೆಯುತ್ತಿದ್ದ ಮಣ್ಣಿನ ನೆಲ ಇದೊಂದೂ ಇಲ್ಲದೇ ಮನೆಯೆಂಬುದು ಕಸದ ಗುಡಾಣವಾಗಿ ಹೋಗಿತ್ತು. ಇದೇ ಸಮಯಕ್ಕೆ ಕಾಯುತ್ತಿದ್ದ ಇರುವೆಗಳು, ಜಿರಲೆಗಳು ತಮ್ಮ ಅಸ್ತಿತ್ವ ತೋರಿಸುತ್ತಾ ವಿಜೃಂಭಿಸತೊಡಗಿದವು. ಅಮ್ಮ ಸೋಲಲೆಂದು ಅಪ್ಪ, ಸೋಲಬಾರದೆಂದು ಅಮ್ಮ ಪಣಕಟ್ಟಿದಂತೆ ದಿನ ತೆಗೆಯತೊಡಗಿದರು.
ಅದೊಂದು ರಾತ್ರಿ ಎಚ್ಚರವಾದಾಗ ನೋಡಿದರೆ ಅಮ್ಮ ಕೋಣೆಯೊಳಗೆ ದೀಪ ಬೆಳಗಿಸಿಕೊಂಡು ಪಾದವನ್ನು ಚುಚ್ಚುತ್ತಿದ್ದಳು. ಚಪ್ಪಲಿಯನ್ನು ಧರಿಸದ ಅಮ್ಮನ ಪಾದಗಳ ತುಂಬೆಲ್ಲಾ ಕಾಡಿನ ದಾರಿಯಲ್ಲಿರುವ ಮುಳ್ಳುಗಳು ರಾಶಿಯಾಗಿ ಒಳನುಗ್ಗಿದ್ದವು! ಕುಂಟುತ್ತಾ ನಡೆದರೆಲ್ಲಿ ತಾನು ಸೋತೆನೆಂದುಕೊಳ್ಳುವರೇನೋ ಎಂದು ಅಮ್ಮ ಮುಳ್ಳು ಚುಚ್ಚಿ ಕೀವಾದ ಪಾದವನ್ನು ಗಟ್ಟಿಯಾಗಿ ಊರಿ ನಡೆಯುತ್ತಲೇ ನೋವನ್ನು ಸಹಿಸುತ್ತಿದ್ದಳು. ಅಂತೂ ಅಪ್ಪನಿಗೆ ಪರವೂರಿಗೆ ಹೋಗುವ ದಿನವೊಂದು ಬಂತು ಅಥವಾ ಹಾಗೆ ಬರಿಸಿಕೊಂಡರೋ ತಿಳಿಯದು. ‘ನಾನಿರುವಷ್ಟು ದಿನ ನಿನ್ನ ಮಕ್ಕಳನ್ನು ಉಪವಾಸ ಹಾಕಿಲ್ಲ. ಈಗ ಎರಡು ದಿನ ಮನೆಯಲ್ಲಿರುವುದಿಲ್ಲ. ಅಡುಗೆ ಮಾಡುತ್ತೀಯೋ, ಉಪವಾಸ ಹಾಕುತ್ತೀಯೋ ನಿನಗೆ ಬಿಟ್ಟಿದ್ದು’ ಎನ್ನುತ್ತಾ ತಮ್ಮ ಚರಪರ ಚಪ್ಪಲನ್ನು ಮೆಟ್ಟಿಕೊಂಡು ಹೊರಟರು.
ನಾವೆಲ್ಲ ದುಃಖದ ಕಟ್ಟೆಯೊಡೆದಂತೆ ಅಳುತ್ತಲೇ ಅಮ್ಮನನ್ನು ಅಡುಗೆ ಕೋಣೆಗೆ ಬರಲು ಒತ್ತಾಯಿಸದೆವು. ಅಮ್ಮ ನಿತ್ಯದಂತೆ ಮತ್ತೆ ಅಡುಗೆ ಮನೆಗೆ ಬಂದಳು. ಮನೆಯನ್ನೆಲ್ಲ ಒಪ್ಪವಾಗಿಸಿ, ಅಂಗಳ ಸಾರಿಸಿದಳು. ಮಂಜಜ್ಜಿಯ ಕೈಯ್ಯಲ್ಲಿ ಎಲ್ಲ ಮುಳ್ಳುಗಳನ್ನು ತೆಗೆಸಿಕೊಂಡು ಗಾಯಕ್ಕೆ ಅರಿಸಿನದ ಹುಡಿ ತುಂಬಿಸಿಕೊಂಡಳು. ಸೋಲೆನೆಂದು ಮೀಸೆ ತಿರುವಿದ ಅಪ್ಪ ಮರಳಿ ಬರುವಾಗ ಅಮ್ಮನಿಗೊಂದು ಸೀರೆ ತಂದ ನೆನಪು.






0 Comments