ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಣ್ಣದ ಬದುಕೂ, ಬದುಕಿನ ಬಣ್ಣಗಳೂ..

ನಾಗರಾಜ ವಸ್ತಾರೆ ಅವರ ಕಥಾ ಸಂಕಲನ ‘ಹನ್ನೊಂದೂ ಮತ್ತೊಂದು’

‘ವೀರಲೋಕ ಬುಕ್ಸ್’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತು ಶಮ ನಂದಿಬೆಟ್ಟ ಅವರ ಒಂದು ಬರಹ ಇಲ್ಲಿದೆ.

-ಶಮ ನಂದಿಬೆಟ್ಟ 

ನನ್ನ ನೆನಪಿನ ಪ್ರಕಾರ ಅದು 2007ನೇ ಇಸವಿ. ಹಕೂನ ಮಟಾಟ ಎಂಬ ವಿಚಿತ್ರ ಹೆಸರಿನ ಪುಸ್ತಕವೊಂದು ಮಾರುಕಟ್ಟೆಗೆ ಬಂದಿತ್ತು. ಅದಕ್ಕೆ ಸರಿಯಾಗಿ ಲೇಖಕರ ಹೆಸರಿನಲ್ಲಿರುವ ವಸ್ತಾರೆ ಎಂಬ ಶಬ್ದವೂ ನನಗೆ ಹೊಸದು. ಪುಸ್ತಕ ಕೊಳ್ಳುವುದೇ ಜೀವನದ ಪರಮ ಗುರಿ ಎಂದು ಭಾವಿಸಿದ್ದ ಕಾಲವದು. ಕೊಂಡು ಓದಿದ ನಂತರ ಸುಮಾರು 20ಕ್ಕೂ ಹೆಚ್ಚು ಕೃತಿಗಳನ್ನು ಒಮ್ಮೆಲೇ ಖರೀದಿಸಿ ಆಪ್ತರಿಗೆ ಉಡುಗೊರೆ ಕೊಡಬೇಕಾದ ಸಂದರ್ಭಗಳಲ್ಲೆಲ್ಲ ಅದನ್ನೇ ಕೊಟ್ಟಿದ್ದೆ. ಆ ದಿನಗಳಲ್ಲಿ ಬಾವಿಯೊಳಗಿನದಲ್ಲ, ಲೋಟದೊಳಗಿನ ಕಪ್ಪೆ ಆಗಿದ್ದ ನನ್ನನ್ನು, ಹಕೂನ ಮಟಾಟ ಬೆಚ್ಚಿ ಬೀಳಿಸಿತ್ತು. ಕಥಾಹಂದರಗಳು, ಅದರ ಜನ-ಜೀವನ, ಸಂಬಂಧಗಳು, ವರ್ತನೆಗಳು ಎಲ್ಲವೂ ಹೊಸದೊಂದು ಲೋಕವನ್ನು ತೆರೆದಿಟ್ಟಿತ್ತು; ಜಗತ್ತು ಹೀಗೂ ಇರಲು ಸಾಧ್ಯವಾ ಎಂದು ತಿಂಗಳುಗಳ ಕಾಲ ಯೋಚಿಸುತ್ತಲೇ ಇದ್ದೆ. ಅವತ್ತಿಂದ ಇವತ್ತಿಗೆ ಹದಿನೆಂಟು ವಸಂತಗಳು ಉರುಳಿವೆ. ಲೋಟದೊಳಗಿನ ಕಪ್ಪೆ ಈಗ ಸಮುದ್ರವನ್ನೂ ನೋಡಿ ಬಂದಿದೆ.

ಪಾರಂಪರಿಕ ಬದುಕಿನ ಮೋದ, ಆಧುನಿಕತೆ ತಂದಿಡುವ ಮೋಹ ಎಲ್ಲವೂ ಅಂಗೈಗೆರೆಯಷ್ಟು ನಿಚ್ಚಳವಿದೆ. ಇಂಥ ಹೊತ್ತಿನಲ್ಲಿ ವಸ್ತಾರೆಯವರ ಕಥಾ ಸಂಕಲನ ಹನ್ನೊಂದೂ ಮತ್ತೊಂದು ಹೊಸ ದಿರಿಸು ಧರಿಸಿ ಓದುಗರ ಮನೆಗೆ ತೆರಳಲು ಸಜ್ಜಾಗಿದೆ. ಸುಮಾರು ಎರಡು ದಶಕಗಳಲ್ಲಿ, ಪರಿಸ್ಥಿತಿಗಳ ಜೊತೆಗೆ, ಓದುಗಳಾಗಿ ನನ್ನ ಮನಸ್ಥಿತಿ ಕೂಡ ಬದಲಾಗಿದೆ, ಅನುಭವದ ಪರಿಧಿ ವಿಸ್ತರಿಸಿದೆ. ಹಕೂನ ಮಟಾಟದ ಎಲ್ಲರೂ ಹೊಸಬರಾಗಿ ಸೆಳೆದಿದ್ದರೆ, ಹನ್ನೊಂದೂ ಮತ್ತೊಂದರವರು ನನ್ನ ಸುತ್ತಮುತ್ತಲಿನವರೇ ಆಗಿ ಮನಹೊಕ್ಕರು! ಸಾಮಾಜಿಕ ಜಾಲತಾಣಗಳು ಮತ್ತು ಅಂತರ್ಜಾಲ, ಊಟ ನೀರಿನಂತೆ ಬದುಕಿನ ಅವಿಭಾಜ್ಯ ಅಂಗಗಳಾಗಿರುವ ಈ ಹೊತ್ತಿನಲ್ಲಿ ಕೂಡ ಇಲ್ಲಿನ ಕಥೆಗಳು ಹಿಂದಿನಂತೆಯೇ ತಟ್ಟಿದೆಯೆಂದರೆ, ವಸ್ತಾರೆ ಎಂಬ ಕಥೆಗಾರ ಬರಹಗಾರನಾಗಿ ಬದಲಾಗಿಲ್ಲ ಎಂಬುದು ಶ್ರುತಪಟ್ಟಿದೆ.

ಇಲ್ಲಿನ ಅಷ್ಟೂ ಕಥೆಗಳು ಜೀವ ಪ್ರೀತಿಯ, ಜೀವನ ಪ್ರೀತಿಯ ಕಥೆಗಳು. ಓದುತ್ತ ಹೋದಂತೆ ಹಲವಾರು ಪಾತ್ರಗಳಲ್ಲಿ ಕುಟುಂಬದ, ಮಿತ್ರವರ್ಗದ, ನೆರೆಮನೆಯ ಯಾರೋ ಕಂಡರೆ ಅತಿಶಯವಿಲ್ಲ. ಹಾಗೆಯೇ, ಇಂದಿನ ದಿನಗಳಲ್ಲಿ ಕಾಣುವ ವೈವಿಧ್ಯಮಯ ಬದುಕು, ಅದರ ಪೊಳ್ಳುತನ, ಪ್ರೇಮ, ಕಾಮ, ಸಮಾಜ ಹಾದರವೆಂದು ಕರೆಯುವ ವಿಕ್ಷಿಪ್ತತೆ, ಇವೆಲ್ಲವನ್ನು ಮೀರಿದ ಗಟ್ಟಿತನ ಎಲ್ಲವೂ ಇದೆ. ಶತಮಾನಗಳ ಹಿಂದಿನಿಂದ ಪೋಷಿಸಿಕೊಂಡು ಬಂದ ಉದಾತ್ತ ಜೀವಿತಗಳು ಒಂದೆಡೆಯಾದರೆ, ಅದರ ಮಗ್ಗುಲಿನಲ್ಲೇ ಹುಟ್ಟಿ ಬೆಳೆದು ಆಧುನಿಕತೆಯ ಮಾಯಾಜಿಂಕೆಯ ಹಿಡಿತಕ್ಕೆ ಸಿಲುಕಿ ನಲುಗಿದ ಕಥೆಗಳೂ ಇವೆ.

ಇನ್ನು, ವಸ್ತಾರೆ ಕನ್ನಡವನ್ನು ಎದೆಗೆ ಇಳಿಸಿಕೊಳ್ಳುವುದು ಇನ್ನೊಂದೇ ತೆರನಾದ ಸೊಗಸು. ನುಡಿಯೊಡತಿ ಇವರಿಗಷ್ಟೇ ಒಂದು ಬೊಗಸೆ ಹೆಚ್ಚು ಪ್ರೇಮವವ್ನೂ, ಶೈಲಿಯನ್ನೂ ಧಾರೆಯೆರೆದು ಹರಸಿದ್ದಾಳೆ. ಜೀವನಾನುಭವ ಎಷ್ಟೇ ಆಗಿದ್ದರೂ ಓದುವಾಗ ಅಲ್ಲಲ್ಲಿ ಮನಸು ಒದ್ದೆಯಾದರೆ, ಮುಂದಿನ ಪುಟಕ್ಕೆ ತೆರಳುವ ಹೊತ್ತಿಗಾಗಲೇ ತುಟಿಯರಳಿರುತ್ತದೆ. ಕೆಲವೊಂದು ಕಡೆ ಅರಿವಿಲ್ಲದೇ ಕಳೆದು ಹೋದರೆ, ಮತ್ಯಾವುದೋ ಭಾಗವನ್ನೋದಿದ ನಂತರ ಪುಸ್ತಕ ಮುಚ್ಚಿಟ್ಟು ಕೆಲ ಘಳಿಗೆಗಳ ಕಾಲ ಸುಮ್ಮನೇ‌ ಯಾವುದೋ ಒಂದು ಪಾತ್ರದೊಳಕ್ಕೆ ನಡೆದುಬಿಡಬೇಕು ಎನಿಸುತ್ತದೆ.

ಹೇಳಲೇಬೇಕಾದ ಇನ್ನೊಂದು ವಿಷಯ ಇವರ ಕಥೆಗಳಲ್ಲಿನ ಹೆಸರುಗಳು! ಪ್ರಮಾಣ ಮಾಡಿ ಹೇಳುವೆ, ಇವರ ಅಷ್ಟೂ ಪುಸ್ತಕಗಳಲ್ಲಿರುವ ಹೆಸರುಗಳನ್ನು ಪಟ್ಟಿ ಮಾಡಿದರೆ ಒಂದು ಕುಟುಂಬದ ಏಳು ತಲೆಮಾರಿನ ಅಷ್ಟೂ ಮಕ್ಕಳಿಗೆ ಸಾಕಾಗುವಷ್ಟು ಚೆಂದ!  ಪ್ರವಲ್ಲಿಕಾ, ನೀರದ, ದೃಷ್ಟಿ, ಸಮನ್ಯು, ಕ್ಷಿತಿ, ಸವ್ಯ, ವಿಧು, ಕುಂದಗೌರಿ, ಕಾಶ್ಯಪಿ, ಪರಿಣಯ್‌, ಕನಕವಾರಿ, ಹಿಮಾದ್ರಿ, ಸತ್ಪತಿ… ಅದೂ ಅವರವರ ವಯಸ್ಸಿಗೆ ಅನುಗುಣವಾದ ಹೆಸರುಗಳು! ಮಗುವಿಗೆ ಹೆಸರು ಹುಡುಕುವ ಹೊತ್ತಿನಲ್ಲಿ ಕೆಲವರು ಚಂದದೊಂದು ಕನ್ನಡದ ಹೆಸರು ಹೇಳೆಂದು ನನ್ನ ಕೇಳಿದಾಗ ನಾನು ವಸ್ತಾರೆಯವರ ಪುಸ್ತಕದಲ್ಲಿ ಹುಡುಕಿ ಅಂದಿದ್ದುಂಟು! ನಮ್ಮ ಮೆದುಳಿನೊಳಗಿಲ್ಲದ ಕಂಪಾರ್ಟ್‌ʼಮೆಂಟ್‌ ಒಂದು ಇವರ ಮೆದುಳಿನಲ್ಲಿ ಹೆಸರುಗಳಿಗಾಗಿಯೇ ಮೀಸಲಿರಬಹುದಾ ಎಂದು ಕನಿಷ್ಟ ಎರಡು ಸಾವಿರದ ಇನ್ನೂರಾ ಹದಿನೆಂಟೂವರೆ ಸಲ ಯೋಚಿಸಿರಬಹುದು ನಾನು! ಈ ಸೊಗಸನ್ನು ಆಸ್ವಾದಿಸುವ ಹೊತ್ತಿನಲ್ಲೇ ಶವಕ್ಕೆ ಅಲಂಕಾರ ಮಾಡುವವನನ್ನು ಶವಶಿಲ್ಪಿ ಎಂದು ಕರೆದು ಅರೆಕ್ಷಣ ಬೆಚ್ಚಿ ಬೀಳಿಸುತ್ತಾರೆ. ಬಾದರಾಯಣ ಕಥೆಯಲ್ಲಿ ಒಂದು ಕಡೆ ಲೇಖಕರು ವರ್ಕಿ ಎಂಬಾಕೆಯನ್ನು ಪರಿಚಯಿಸುತ್ತಾ, ಬೇಕಿದ್ದರೆ ಗೂಗಲ್‌ ಮಾಡಿ ನೋಡಿ ಎಂದದ್ದನ್ನು, ನನಗೇ ಹೇಳಿದರೇನೋ ಎಂಬ ಭಾವದಲ್ಲಿ ವಿಧೇಯ ವಿದ್ಯಾರ್ಥಿಯಂತೆ ಗೂಗಲ್‌ ಮಾಡಿ ನೋಡಿದರೆ ನಿಜಕ್ಕೂ ವರ್ಕಿ ಕುಟುಂಬ ನಮ್ಮ ನಡುವಿರುವ ಖ್ಯಾತರೇ ಹೌದು! ಕಥೆ ಎಂದರೆ ಬಹುತೇಕ ಕಾಲ್ಪನಿಕ ಎಂಬ general notionಗೆ ಅಪವಾದ ಎಂಬ ಹಾಗೆ ಗೂಗಲ್ ಮಾಡಿ ನೋಡಬಹುದಾದ ಅಥೆಂಟಿಸಿಟಿ ಮಜಾ ಕೊಟ್ಟಿತು.

ಈ ಸಂಕಲನದಲ್ಲಿ ಪ್ರತಿ ಕಥೆಗೂ ಪುಟ್ಟದೊಂದು ಪ್ರವೇಶದ್ವಾರವಿದೆ. ಶುರುವಾತಿನಲ್ಲಿ ಏನೂ ಅನ್ನಿಸದ ಸಾಲುಗಳಿಗೆ, ಕಥೆಯ ಅರ್ಧಕ್ಕೆ ಬರುವಷ್ಟರಲ್ಲಿ ಹೊಸದಾದ ಅರ್ಧವೊಂದು ಹೊಳೆದಿರುತ್ತದೆ.

ಸೊಗಸು ತಂದೀಯೇನು
ಬೊಗಸೆ ತುಂಬುವಷ್ಟು
ಮುಗಿಸಿ ನೋವು ಮುನಿಸು
ನಸುತುಸುವೆ ಇಷ್ಟು ನಗಿಸು…

(ಏಸ್ಥೆಟಿಕಲೀ ಸ್ಪೀಕಿಂಗ್‌… ಕಥೆಯ ಪ್ರವೇಶಿಕೆಯಿಂದ ತಂದ ಸಾಲುಗಳು)

ವೈಯಕ್ತಿಕವಾಗಿ ಇವರನ್ನು ಬಲ್ಲವರಿಗೆ, ಅವರು ಹೆಣ್ಣಿಗೆ ಕೊಡುವ ಗೌರವದ ಬಗ್ಗೆ ಗೊತ್ತೇ ಇರುತ್ತದೆ. ಈ ಕಥೆಗಳನ್ನೋದಿದಾಗ, ಹೆಣ್ಣು ಜೀವದ ಬದುಕಿನ ಸಂಕೀರ್ಣತೆಗಳು, ಹಾಯಬೇಕಾದ ಅಗ್ನಿದಿವ್ಯಗಳು ಎಲ್ಲವನ್ನೂ ಅರ್ಥ ಮಾಡಿಕೊಂಡಿದ್ದಾರಲ್ಲ ಎಂಬ ಗೌರವ, ಕೃತಜ್ಞತೆಯಿಂದ ತಲೆ ಬಾಗಿದ್ದೇನೆ. ಕಥೆಗಳ ಪಾತ್ರಗಳು ಆಡುವ ಒಂದಷ್ಟು ಸಾಲುಗಳು ಕಾಡಿದ್ದು ಹೀಗೆ.

  • ಧರ್ಮ ಅರ್ಥ ಕಾಮ-ಮೋಕ್ಷಗಳಲ್ಲಿ ಹೆಣ್ಣಿಗೆ ದಕ್ಕುವುದೆಲ್ಲ ಕಿಂಚಿತ್ತೇ ಎಂದು ಸ್ವಂತ ಅನುಭವದ ಮೇರೆಗೆ ಕಂಡುಕೊಂಡಿದ್ದಾಳೆ. ಈ ನಾಲ್ಕರಲ್ಲೂ ಪುರುಷನು ಹೆಣ್ಣಿಗೆ ಮೋಸ ಮಾಡುತ್ತಾನಾದರೆ, ಪುರುಷಾರ್ಥವೆಂಬುದರ ನಿಜವಾದ ಅರ್ಥವೇನೆಂದು…
  • ಹಾದರ ಅನ್ನೋದು ಈ ಮನೆಯ ಜಾಯಮಾನವೇ ಆಗಿ ಹೋಗಿದೆ, ಕಷ್ಟವೋ, ಸುಖವೋ ನಾವುಗಳು ಬದ್ಧವಿದ್ದು ನಡಕೋಬೇಕು ಅಷ್ಟೇ. – ಬದ್ಧತೆ ಎಂಬುದು ಇವತ್ತಿಗೂ ಹೆಣ್ಣಿಗೆ ಮಾತ್ರ ಎಂಬ ವ್ಯಥೆಯ ಎಳೆಯೊಂದು ತುಂಬಾ ಹೊತ್ತು ಕಾಡಿತು.
  • ಕೈ ಹಿಡಿದ ಹೆಣ್ಣನ್ನೇ ವ್ಯಾಮೋಹಿಸಲು ಒಲ್ಲದ ಗಂಡಸಿನ ಬಗ್ಗೆ ಏನೆನ್ನುವುದು – ಓದಿದಾಗ ನಿಜವಾಗಿಯಾದರೆ ಕೈಹಿಡಿದ ಹೆಣ್ಣಿನ ಮೇಲಲ್ಲವೇ ಗಂಡಸಿಗೆ ಮೋಹ ಇಲ್ಲದಾಗುವುದು ಎಂಬ ಯೋಚನೆ ತಟ್ಟನೆ ಹಾದುಹೋಯಿತು.
  • ಜಗತ್ತಿನ ಗಂಡಸ್ತಿಕೆಯು ತಲೆ ಬೋಳಿಸಿ ಅವಳನ್ನು ವಿರೂಪಗೊಳಿಸಿದ್ದರೂ, ಮುಖದಲ್ಲಿನ ಸಹಜ ಸ್ನಿಗ್ಧ ಸೊಗಸನ್ನು ಮಾತ್ರ ತೊಡೆಯಲಾಗದೆ ಸೋತಿತ್ತೇನೋ… ಸಂಪ್ರದಾಯದ ದಗಲುಬಾಜಿತನವನ್ನು ಆಕೆಯ ಚೆಲುವು ಸೆಡ್ಡುಹೊಡೆದು ಮಣಿಸಿತ್ತೇನೋ… – ಕೇಶಮುಂಡನ ಮಾಡಿದ ಸೌಂದರ್ಯವತಿ ವಿಧವೆಯ ಬಗ್ಗೆ ಬರೆದ ಸಾಲುಗಳಿವು. ಪ್ರಕೃತಿಯ ಮುಂದೆ ಗಂಡಸು ತನ್ನ ಅಹಂಕಾರವನ್ನೆಷ್ಟು ತೋರಿಸಿ ಮೆರೆದರೂ ಕೊನೆಗೆ ಗೆಲ್ಲುವುದು ಪ್ರಕೃತಿಯೇ ಎಂಬುದನ್ನು ಸಹೃದಯಿ ಗಂಡಸು ಎಷ್ಟು ಸರಳವಾಗಿ ಹೇಳಿ ತನ್ನ ಸಂಕುಲದ ತಣ್ಣನೆಯ ಕ್ರೌರ್ಯದ ಎಳೆಗಳನ್ನು ಬಿಚ್ಚಿಡಬಲ್ಲ ಎನಿಸಿತು. (ಇಲ್ಲಿ ಹೆಣ್ಣು ಪ್ರಕೃತಿಯೆಂಬುದನ್ನೂ ಗಮನದಲ್ಲಿಟ್ಟುಕೊಂಡು ಓದಿದರೆ ದಕ್ಕುವ ಅರ್ಥ ವೈಶಾಲ್ಯವೆಷ್ಟು!)
  • ಸಂಸಾರದ ಒಳಸುಳಿಗಳ ಬಗ್ಗೆ ಮಾತನಾಡುತ್ತಾ ʼಸಂಸಾರ ನೇರ್ಪಾಗಿರಬೇಕಿದ್ದಲ್ಲಿ ತಂತಮ್ಮ ಈಗೋ ದಾಟುವುದೆ ಸೈಯೆಂದು ಇಬ್ಬರೂ ಯೋಚಿಸುತ್ತಾರೆ. ಆದರೆ ಮೊದಲು ಯಾರು ದಾಟಬೇಕೆನ್ನುವಲ್ಲಿ ಸಮಸ್ಯೆ ವಾಪಸು ಬಂದು ಜಡಿದುಕೊಳ್ಳುತ್ತದೆ.ʼ – ಇದು ಪ್ರವ್ಲಿ, ನೀರದರದು ಅಷ್ಟೇ ಅಲ್ಲ, ಎಲ್ಲಾ ಸಂಸಾರಗಳ ಕಥೆಯಲ್ವಾ? ಎನಿಸಿಬಿಡುತ್ತದೆ.
  • ವಿದ್ಯೆ ಎನ್ನುವುದು ಸುಲಭಕ್ಕೆ ದಕ್ಕುವುದಿಲ್ಲ ಹಾಗೆ ದಕ್ಕಿದ್ದು ವಿದ್ಯೆಯೇ ಅಲ್ಲ – ಇದನ್ನೋದುವಾಗ, ಮೂರು ಮತ್ತೊಂದು ದಿನ ಯಾವುದೋ ತರಗತಿಗಳಿಗೆ ಹೋಗಿ ತಾವೇ ಅದರಲ್ಲಿ ಪರಮ ಪಂಡಿತರೆಂಬ ಹಾಗೆ ಜಾಲತಾಣಗಳಲ್ಲಿ ಪಾಂಡಿತ್ಯ ಪ್ರದರ್ಶಿಸುವ ಎಲ್ಲರೂ ಕಣ್ಣೆದುರು ಸಾಲಾಗಿ ಸುಳಿದು ಹೋದರು. ಜೊತೆಗೆ ಸಂಧ್ಯಾರಾಗದ ಲಚ್ಚಣ್ಣನೂ!
  • ದಾಕ್ಷಿಣ್ಯವೆನ್ನುವುದು ಜಿಪ್ಪು ಕೈಕೊಟ್ಟ ಪ್ಯಾಂಟು ತೊಟ್ಟಂತೆ. ಮೇಲಕ್ಕೂ ಏರದು ಕೆಳಕ್ಕೂ ಇಳಿಯದು. – ಇಂಥ ತಿಳಿ ಹಾಸ್ಯಗಳೂ ಕಡಿಮೆಯಿಲ್ಲ.
  • ಬದುಕಿನಲ್ಲಿ ಎಲ್ಲಾ ಸರಿ ಇದೆ ಎಂದ ಮಾತ್ರಕ್ಕೆ ಬೆಸವೇ ಇಲ್ಲವೆಂದಲ್ಲವಷ್ಟೇ? ಸುಮಾರು ಸರಿಗಳ ನಡುವೆ ಒಂದೋ ಎರಡೋ ಬೆಸವಿದ್ದಲ್ಲಿ ಅಂಥವನ್ನು ಲೆಕ್ಕಿಸುತ್ತೇವೆಲ್ಲಿ? – ಮನೆಯೊಳಗಿನವರಿಗೆ ಹೀಗನ್ನಿಸಿದರೆ, ಹೊರಗಿನವರಿಗೆ ಬೆಸವಷ್ಟೇ ಕಂಡು ಮಸಾಲೆ ಸುದ್ದಿಯಾಗುತ್ತದೆ! ಇಲ್ಲಿನ ವೈಶಿಷ್ಟ್ಯ ನೋಡಿ, ಕಥೆಗಾರನಿಗೆ ಹಾಗನ್ನಿಸಿದರೆ, ಓದುಗಳಾಗಿ ನನ್ನಲ್ಲಿ ಅದರ ತದ್ವಿರುದ್ಧ ಭಾವ! ಇದಲ್ಲವೇ ಕಥೆಗಳ ಮೋದ.
  • ಮನೆಯ ಒಪ್ಪ ಓರಣ ಕಾಪಾಡುವುದಕ್ಕೆ ಬೇಕಾಗಿರುವುದು ಸಮಯವಲ್ಲ ಆಸ್ಥೆ ಎಂಬ ಒಂದು ಮಾತು ಕಥೆಯೊಂದರಲ್ಲಿದೆ – ಇದು ಮನೆಗಷ್ಟೇ ಅಲ್ಲ, ಬದುಕಿನ ಎಲ್ಲದಕ್ಕೂ ಅನ್ವಯಿಸುವ ಸತ್ಯವಲ್ಲವೇ?

ಕಥೆಗಳ ಓಘಕ್ಕೆ ತಕ್ಕಂತೆ ಅಲ್ಲಲ್ಲಿ ಎದುರಾಗುವ ಸಾಲುಗಳು ಭಾವಸೂಕ್ಷ್ಮತೆ ಇರುವವರ ಒಳಗನ್ನು ಅಲ್ಲಾಡಿಸಿ ಬಿಡಬಲ್ಲಷ್ಟು ಶಕ್ತವಾಗಿವೆ.

ಸ್ವಲ್ಪ ಉದ್ದವಾಗುತ್ತಿದೆ, ಆದರೂ ಕೊನೆಯ ʼಫೈರುಪೀಸ್‌ ಪ್ಲೀಸ್‌ʼ ಕಥೆಯ ಬಗ್ಗೆ ಬರೆಯದಿದ್ದರೆ ನನ್ನ ಓದು, ಬರಹ ಎರಡೂ ಅಪೂರ್ಣವೆನಿಸೀತು!

ಕಥೆಯ ಹೆಸರು ಫೈರುಪೀಸ್‌ ಆದರೂ, ಸಂವೇದನಾಶೀಲರನ್ನು five years ವರೆಗೂ ಕಾಡಬಹುದಾದ ಕಥೆಯಿದು. ಇದು ಕೂಡುಕುಟುಂಬವೊಂದರ ತಲೆಮಾರುಗಳ ವೈವಿಧ್ಯದ, ವೈರುಧ್ಯದ, ವೈಧವ್ಯದ ಕಥೆ. ಒಂದು ತಲೆಮಾರು ಸಂಬಂಧಗಳಿಗೆ ಹಾಲೂಡುತ್ತಲೇ ಜತನದಿಂದ ಪೊರೆದರೆ, ಇನ್ನೊಂದು ತಲೆಮಾರು ಅಷ್ಟೇ ಉಡಾಫೆಯಿಂದ ಹಾಲಾಹಲವೂಡಿಸಿದ ಕಥೆ. ಇಲ್ಲಿ ಎರಡ್ಮೂರು ತಲೆಮಾರುಗಳಿರುವ ಕಾರಣ ಅದಕ್ಕೆ ತಕ್ಕಂತೆ ವೈವಿಧ್ಯಗಳೂ ಯಥೇಚ್ಛವಾಗಿವೆ. ಹೆಸರು, ಸ್ವಭಾವಗಳು, ರೀತಿ ರಿವಾಜುಗಳ ಚಿತ್ರಣಗಳು, ಆಯಾ ಕಾಲಕ್ಕೆ ತಕ್ಕಂತೆ ಸಂಬಂಧಗಳ ಕೊಂಡಿಗಳಲ್ಲಿನ ಗಟ್ಟಿತನ ಮತ್ತು ಶೈಥಿಲ್ಯಗಳು, ಅದಕ್ಕನುಗುಣವಾದ ಮನೋಧರ್ಮಗಳು… ಏನುಂಟು ಏನಿಲ್ಲ! ಪಾತ್ರವೊಂದು ʼತಲೆಮಾರುಗಳು ಕಳೆದಂತೆ ಸಾವೆಂಬ ಸಾವಿನ ತೀವ್ರತೆಯೂ ಕಡಿಮೆಯಾಗುವುದೇʼ ಎಂದು ಯೋಚಿಸುವ ಹೊತ್ತಿನಲ್ಲಿ ನನಗರಿವಿಲ್ಲದಂತೆ ಆ ತಾಯಿಯನ್ನು, ಬನಶಂಕರಿಯಲ್ಲಿರುವ ಆಕೆಯ ಮನೆಗೇ ಹೋಗಿ ತಬ್ಬಿ ಸಂತೈಸಲಾ ಅನಿಸುವಷ್ಟರ ಮಟ್ಟಿಗೆ ಈ ಅಭಿವ್ಯಕ್ತಿ ನನ್ನನ್ನು ತನ್ಮಯಗೊಳಿಸಿತು. ಇದನ್ನು ಬರೆಯುವ ಹೊತ್ತಿನಲ್ಲಿ ಕಥೆಗಾರನ ಕಣ್ಣೆಷ್ಟು ಪಸೆಯಾಗಿಬಹುದು ಎಂಬ ತಲ್ಲಣ ನನಗಿನ್ನೂ ಕಳೆದಿಲ್ಲ.

ಬದುಕು ಹರಿದು ಮುಕ್ಕಿದ, ಎಪ್ಪತ್ತು ಸಮೀಪಿಸಿದ ತಂಗಿಯ ಮುಡಿ ಬಿಚ್ಚಿ ಹೋದಾಗ ಎಂಭತ್ತರ ಸನಿಹದ ಅಕ್ಕ ತಾನೇ ಎದ್ದು ಬಂದು ಮುಡಿ ತಿದ್ದಿ, “ನನ್ನ ಹಿಮ್ಮುಡಿಯಲ್ಲಿದ್ದ ಹೇರ್‌ ಪಿನ್ನು ತೆಗೆದು ಅವಳ ಕೂದಲಿಗಿಕ್ಕಿ ಜತನವಿಟ್ಟು ಕಟ್ಟಿದೆ” ಎನ್ನುತ್ತಾಳೆ. ಇದು ಒಡಹುಟ್ಟಿದವರ ಒಲುಮೆಯಾದರೆ, ಇನ್ನೊಂದು ಸನ್ನಿವೇಶದಲ್ಲಿ ಗಂಡನ ಸೋದರಿ ರುಕ್ಮಿಣಿಯ ಜೀವನದ ದುರಂತಕ್ಕಾಗಿ ಮಿಡಿಯುವ ಹೆಣ್ಮಗಳು “ಇವರ ಬದುಕಿಗಂತೂ ಘನತೆ ಇರಲಿಲ್ಲ… ಹಾಳು ಬದುಕು ಅವರನ್ನು ನಡೆಸಿಕೊಂಡಿದ್ದೇ ಹಾಗಲ್ಲವಾ? ಈಗ ಸಾವಿಗಾದರೂ ಒಂದು ಮರ್ಯಾದೆ ಇರಲಿ…” ಎನ್ನುವಾಗ ಬದುಕನ್ನು ಶಪಿಸುತ್ತಾಳೆಯೇ ಹೊರತು ತನ್ನ ಅತ್ತಿಗೆಯನ್ನಲ್ಲ! ಹೀಗನ್ನುತ್ತ ರುಕ್ಮಿಣಿಯ ಮನೆಯಲ್ಲಿದ್ದ ಬಾಟಲಿ, ತಂಬಾಕಿನ ಪೊಟ್ಟಣಗಳನ್ನೆಲ್ಲ ಯಾರಿಗೂ ಕಾಣದಂತೆ ಬಚ್ಚಿಟ್ಟು ಶವವಾಗಿ ಮಲಗಿರುವ ಅತ್ತಿಗೆಯ ಘನತೆ ಕಾಪಾಡುತ್ತಾಳೆ. ಸಾಮಾನ್ಯದಲ್ಲಿ ಸಾಮಾನ್ಯವೆನಿಸುವ ಈ ಪ್ರಕ್ರಿಯೆಗಳೆರಡೂ ಕಥೆಯ ಹಿನ್ನೆಲೆಯಲ್ಲಿ ಎಷ್ಟು ಅಪ್ಯಾಯಮಾನ ಎನಿಸುತ್ತದೆಂದರೆ, ಕೂಡು ಕುಟುಂಬಗಳಲ್ಲಿ ತಡೆಯಿಲ್ಲದೇ ಹರಿಯುತ್ತಿದ್ದ ತುಂಬು ಪ್ರೀತಿ, ತುಂಬ ಪ್ರೀತಿಯನ್ನು ನಮ್ಮ ಕಣ್ಮುಂದೆ ನಿಲ್ಲಿಸಿ ಒಳಗನ್ನು ಆರ್ದ್ರವಾಗಿಸೀತು!

ಅವಿಭಾಜ್ಯ ಕುಟುಂಬಗಳಲ್ಲಿ ಮೇಲ್ನೋಟಕ್ಕೆ ಎಷ್ಟೇ ಭಿನ್ನಾಭಿಪ್ರಾಯಗಳು ಕಂಡರೂ ಅವೆಲ್ಲವನ್ನು ಮೀರಿ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಒಲವಿನೊರತೆ ಎಲ್ಲರನ್ನು ಪೊರೆಯುತ್ತಲೇ ಇತ್ತು. ಬಹಳಷ್ಟು ನ್ಯೂಕ್ಲಿಯರ್ ಕುಟುಂಬಗಳಲ್ಲಿ ಇಂದು ಸಂತೋಷವೆಂಬುದು‌ ತೋರಿಕೆಯಾಗುಳಿದು, ಮಕ್ಕಳೂ ವೃದ್ಧರೂ ಅಕ್ಷರಶಃ ಅನಾಥ ಭಾವವನ್ನೇ ಉಂಡು, ಮೌನವಾಗಿ ಬಿಕ್ಕುತ್ತಿದ್ದಾರೆ. ಹೀಗಾಗಿಯೇ ಮದುವೆಯ ದಶಮಾನೋತ್ಸವ ಕಳೆದರೂ, ದೂರುವ ಅವಕಾಶ ಸಿಕ್ಕಾಗೆಲ್ಲ “ನಿಮ್‌ ಕಡೆಯವರು…” ಎನ್ನುವುದೂ, ಮಕ್ಕಳಿಗೆ ಪೌಡರ್‌ ಹಾಕಲಿಲ್ಲ ಎಂಬಂಥ ಕಾರಣಕ್ಕೇ ವಿಚ್ಛೇದನಗಳೂ ಹೆಚ್ಚುತ್ತಲೇ ಇವೆ.

ಇನ್ನೊಂದು ಕಡೆಯಲ್ಲಿ ಮಣಿಯಕ್ಕ ವರ್ಷಗಟ್ಟಲೆಯಿಂದ ಬಾಯಿಪಾಠವಿರುವ, ಸೊಸೆಯ‌ ಫೋನ್ ನಂಬರು ಸರಿಯಿದೆಯೋ ಇಲ್ಲವೋ ಶಂಕೆಯುಂಟಾಗಿ ಕೊನೆಗೆ ಬದಿಗಿದ್ದ ಪತ್ರಿಕೆಯಲ್ಲಿ ಬರೆದುಕೊಂಡು, ನಿಧಾನವಾಗಿ ಒಂದೊಂದೇ ಅಂಕಿಯನ್ನು ಬಾಯಲ್ಲಿ ಹೇಳಿಕೊಂಡು, ಖಾತ್ರಿ ಮಾಡಿಕೊಂಡು ಡಯಲ್‌ ಮಾಡುತ್ತಾಳೆ. ಯಕಶ್ಚಿತ್‌ ಫೋನು ಮಾಡುವಂಥ ʼಸಣ್ಣʼ ಕೆಲಸ ಕೂಡ ಅವಳಿಗೆ ಆ ಹೊತ್ತಿನಲ್ಲಿ ದೊಡ್ಡ ಹೊರೆಯಂತೆ ಭಾಸವಾಗುತ್ತದೆ. ಇಳಿವಯಸ್ಸಿನ ತಳಮಳವನ್ನು ಎಷ್ಟು ಚೆನ್ನಾಗಿ ಕಟ್ಟಿಕೊಡಬಲ್ಲ ಸಾಲುಗಳಿವು ಎನಿಸುವ ಜೊತೆಗೇ, ಅಮ್ಮ ಇದ್ದಿದ್ದರೆ ನನ್ನ ನಂಬರ್‌ ಡಯಲ್‌ ಮಾಡಲಿಕ್ಕೆ ಹೀಗೇ ಮಾಡುತ್ತಿದ್ದಳೇನೋ ಎಂಬ ಭಾವವೊಂದು ಸುಳಿದುಹೋಯ್ತು.

ತಾನು ಮಾಡಿದ ಒಂದೇ ಒಂದು ತಪ್ಪಿನಿಂದಾಗಿ ಬದುಕಿಡೀ ಸವೆಯುವಂತಾದ ತಂಗಿ ರುಕ್ಮಿಣಿಯ ಶವವನ್ನು ಮುಂದಿಟ್ಟುಕೊಂಡು ಅವಳ ಮನೆಯಲ್ಲಿದ್ದ ವಸ್ತುಗಳ ದುರವಸ್ಥೆಯನ್ನು ವಿವರಿಸುತ್ತ ಮಣಿಯಕ್ಕ ಎಂಬ ಮಮತೆಯ ಒರತೆಯೂ “ಒಂದೊಂದೂ ರುಕ್ಮಿಣಿಯೆನ್ನುವ ಒಂದು ಮಹಾಪರಮ ದರಿದ್ರಾಧ್ಯಾಯದ ಅವನತಿಯನ್ನು ಬೆಳಗಿ ಮೊಳಗುವ ಕುರುಹಂತೆ ಇದ್ದವು…” ಆಕೆಯ ದುರಂತದ ತೀವ್ರತೆಯನ್ನು ಹೇಳಲೋಸಗವೇ ಕಥೆಗಾರ ಉದ್ದೇಶಪೂರ್ವಕ ಇಂಥ ಕಟು ಅಭಿವ್ಯಕ್ತಿಯನ್ನು ತೋರಿದ್ದು ಅರ್ಥವಾದರೂ ಒಂದು ಕ್ಷಣ ಬಿಕ್ಕುವಂತಾಗುತ್ತದೆ.

ವಸ್ತಾರೆಯವರು ಹಳೆ ಬೇರು ಹೊಸ ಚಿಗುರು ಕೂಡಿರಲು ಸೊಗಸು ಎಂಬುದನ್ನು ಅರಿತು, ಹಾಗೇ ಬದುಕುತ್ತಿರುವವರು. ಪಾರಂಪರಿಕ ಬದುಕಿನ ರುಚಿಯನ್ನುಣ್ಣುತ್ತಲೇ ಪರಮ ಆಧುನಿಕ ಜಗತ್ತಿನ ಎಲ್ಲ ಮಗ್ಗಲುಗಳನ್ನು ನೋಡಿದವರು. ಹಳ್ಳಿಯ ಮೌನವನ್ನು, ನಿಧಾನಗತಿಯನ್ನು, ಮೆಟ್ರೋ ಶಹರದ ಝಗಮಘಗಳ ವೇಗವನ್ನು ಅನುಭವಿಸಿಯೂ, ಅದರಾಚೆಗಿನ ಜಗತ್ತಿಗೆ ತೆರಳಿ ಕೋಶಸ್ಥನಾಗಿರುವುದನ್ನು ಸಾಧ್ಯ ಮಾಡಿಕೊಂಡವರು.  ಹಾಗಾಗಿಯೇ ಇಂತ ಕಥೆಗಳನ್ನು ಬರೆಯಲು ಸಾಧ್ಯವಾಗಿದೆ ಎಂದು ನನಗನ್ನಿಸಿದೆ. ಇವರ architecture ವೃತ್ತಿಯಲ್ಲಿರುವಷ್ಟೇ detailing, ಇವರ ಕಥೆಗಳಲ್ಲಿಯೂ ನಿಚ್ಚಳವಾಗಿದೆ. ಸಾಮಾನ್ಯವಾಗಿ ನಿರ್ಲಕ್ಷ್ಯ ಮಾಡಿಬಿಡಬಹುದಾದಂಥದ್ದನ್ನೂ ಇವರು ತನ್ನ ಸೂಕ್ಷ್ಮ ದೃಷ್ಟಿಯ ಮೂಲಕ ನಮ್ಮೆದುರಿಟ್ಟು ಆ ಚಿತ್ರಕ ಶಕ್ತಿಯಿಂದಲೇ ಕಥೆಯನ್ನು ಹತ್ತಿರಾಗಿಸಬಲ್ಲರು.

ಕಥೆಗಳನ್ನು ಮತ್ತು ಕನ್ನಡವನ್ನು ಪ್ರೀತಿಸುವವರು ನೀವಾಗಿದ್ದರೆ, ಖಂಡಿತವಾಗಿ ಹೇಳಬಲ್ಲೆ – ಈ ಪುಸ್ತಕ ನಿಮ್ಮನ್ನು ಅಳಿಸಿ, ನಗಿಸಿ, ರಂಜಿಸಿ, ಒಂದಷ್ಟು ಕಾಡುತ್ತದೆ.

‍ಲೇಖಕರು Admin

17 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading