’ಎಲ್ಲಿ ಜಾರಿತೋ ….ಮನವು…’
– ಎನ್ ಸಂಧ್ಯಾ ರಾಣಿ
ಹಿಂದೆ ಯಾವ ಜನ್ಮದಲ್ಲೋ
ಮಿಂದ ಪ್ರೇಮ ಜಲದ ಸೊಂಪು
ತಂದು ಚೀರುವೆದೆಯ ಭಾವ
ಹೇಳಲಾರೆ …… ತಾಳಲಾರೆ
’ಎಲ್ಲಿ ಜಾರಿತೋ ಮನವು…’, ನಾನು ನೋಡಿದ ಮಟ್ಟಿಗೆ ಇದು ಒಂದು ಬೋಲ್ಡ್ ಎನ್ನಿಸುವ ಮತ್ತು ಚರ್ವಿತ ಚರ್ವಣದ ಹಾದಿ ಬಿಟ್ಟ ಸಬ್ಜೆಕ್ಟ್. ರಂಗಾಸಕ್ತರು ಸೇರಿ ಕಟ್ಟಿಕೊಂಡ ಮ್ಯಾಂಗೋ ಹೌಸ್ ನಿಂದ ಇದು ಮೊದಲ ನಾಟಕ. ನಂದಿತಾ, ಮೈಕೊ ಮಂಜು, ನಾಗೇಶ್ ಯಾದವ್, ವಿದ್ಯಾ ವೆಂಕಟ್ ರಾಂ, ಅಲಕ್ ನಂದಾ ಇವರು ರಂಗದ ಮೇಲೆ, ನಿರ್ದೇಶನ ಗಣೇಶ್ ಯಾದವ್, ಹಿಂದಿ ನಾಟಕವನ್ನು ಕನ್ನಡಕ್ಕೆ ಅನುವಾದಿಸಿಕೊಟ್ಟಿರುವವರು ಸುಂದರಶ್ರೀ.
ಇದು ವಿವಾಹದಾಚೆಗಿನ ಒಂದು ಪ್ರೇಮಕಥೆ. ಹಾ, ಪ್ರಜ್ಞಾಪೂರ್ವಕವಾಗಿಯೇ ಇದನ್ನು ವಿವಾಹದಾಚೆಗಿನ ಪ್ರೇಮ ಕಥೆ ಎನ್ನುತ್ತಿದ್ದೇನೆ, ವಿವಾಹ ಬಾಹಿರ ಸಂಬಂಧ ಅನ್ನುತ್ತಿಲ್ಲ. ಇಲ್ಲಿ ಪ್ರೇಮವಿದೆ, ಅದಕ್ಕೆ ತಕ್ಕ ಮೋಹ, ವ್ಯಾಮೋಹ, ದೈಹಿಕ ಸೆಳೆತ, ಅದರಿಂದ ಬರುವ ಪೊಸೆಸ್ಸಿವೆನೆಸ್ಸ್ ಎಲ್ಲಾ ಇದೆ. ತಪ್ಪೋ ಸರಿಯೋ ….. ಅಷ್ಟಕ್ಕೂ ಅದು ತಪ್ಪೋ ಸರಿಯೋ ತೀರ್ಪು ಹೇಳಲು ನಾವು ಯಾರು? ’ಯಾವ ಜೀವ ಯಾವ ನೋವಿಗೀಡೋ, ಯಾವ ಭಾವ ನೆಮ್ಮಿ ಅದರ ಪಾಡೋ, ಕಾಣಲಿ ಬಿಡಿ ತನ್ನೊಳಗಿನ ಬೆಳಕ, ಇರಲಿ ಅದನು ಕುರಿತು ಚೂರು ಮರುಕ…’.
ಈ ಕಥೆಯಲ್ಲಿರುವ ಎರಡು ಮುಖ್ಯ ಪಾತ್ರಗಳೆಂದರೆ ರವಿ ಮತ್ತು, ಅನಘಾ. ರವಿ ಒಬ್ಬ ಪತ್ರಕರ್ತ, ಅನಘಾ ಒಂದು ಪತ್ರಿಕೆಯ ಉಪ ಸಂಪಾದಕಿ. ಇನ್ನುಳಿದಂತೆ ರವಿಯ ಹೆಂಡತಿ ಇದ್ದಾಳೆ, ಗಂಡನನ್ನು ಪ್ರೀತಿಸುವ, ಅವನ ಉಪೇಕ್ಷೆಯಿಂದ ನೊಂದು, ಹಠ ಮಾಡಿ, ನಾನು ನಿನ್ನ ಹೆಂಡತಿ, ನನ್ನ ಪಾಲಿನ ಪ್ರೀತಿಯನ್ನು ಕೊಡು ಎನ್ನುವ ಹೆಣ್ಣು. ಇನ್ನು ಅನಘಳ ಗಂಡ ಗಿರೀಶ್, ಒಬ್ಬ ಬಿಲ್ಡರ್, ಒಂದು ರೀತಿಯಲ್ಲಿ ಸ್ಥಿತಪ್ರಜ್ಞ, ತನ್ನ ಬದುಕು ಯಾವುದೇ ಥರದ ಅಡೆತಡೆಗಳಿಲ್ಲದೆ ನಡೆಯುತ್ತಿದ್ದರೆ ಬೇರೆ ಯಾವುದಕ್ಕೂ ತೀರಾ ತಲೆ ಕೆಡಿಸಿಕೊಳ್ಳದ ಗಂಡ.
ರವಿ ಮತ್ತು ಅನಘ ನಡುವೆ ಎರಡು ವರ್ಷಗಳಿಂದ ಪ್ರೇಮ ಇದೆ. ಅನಘ ತೀವ್ರ ವ್ಯಾಮೋಹದ, ತೀವ್ರತೆಯಲ್ಲಿ ಭಾವಿಸುವ, ಬದುಕುವ ಹೆಣ್ಣು. ರವಿಯನ್ನೂ ಹಾಗೇ ಪ್ರೇಮಿಸುತ್ತಾಳೆ. ಅವಳ ಪ್ರೇಮವಾದರೂ ಎಂಥಾದ್ದು? ಅರ್ಧರಾತ್ರಿಯಲ್ಲಿ ಅವನಿಗೆ ಫೋನ್ ಮಾಡಿ. ’ನಾನು ಈಗ ಚಂದ್ರನನ್ನು ನೋಡುತ್ತಾ ಇದ್ದೀನಿ, ನೀನೂ ನೋಡು, ಈಗಲೇ…’ ಅನ್ನುತ್ತಾಳೆ, ಬೆಳಗಿನ ಜಾವ ಮೂರು ಗಂಟೆಗೆ ಫೋನ್ ಮಾಡಿ ’ ನಾನು ಈಗ ಸ್ನಾನ ಮಾಡ್ತಾ ಇದ್ದೀನಿ, ನೀನು ಈಗ ಸ್ನಾನ ಮಾಡಲೇ ಬೇಕು’ ಅನ್ನುವ ತೀವ್ರತೆ. ಅವಳೊಂದು ಭಾವ ಪ್ರವಾಹ, ವ್ಯಾಮೋಹದ ಜಲಪಾತ. ಅದಕ್ಕೆ ರವಿ ತನ್ನನ್ನು ತಾನು ಸಂಪೂರ್ಣ ಒಡ್ಡಿಕೊಂಡುಬಿಡುತ್ತಾನೆ.
ಆದರೆ ಎಲ್ಲ ಸಂಬಂಧಗಳಂತೆ ಈ ಸಂಬಂಧಕ್ಕೂ ಅತಿ ಬಳಕೆಯ ತುಕ್ಕು ಹಿಡಿಯುತ್ತದೆ …. ಹೊಸ ವ್ಯಕ್ತಿಯ ಬಗೆಗಿನ ವಿಸ್ಮಯ ಬರಬರುತ್ತ ಕಡಿಮೆಯಾಗುತ್ತಿದೆ, ಎರಡು ವರ್ಷದ ನಂತರ ಇದು ಸಹ ಅನಘಳಿಗೆ ಮದುವೆಯಂತೆಯೇ ಕಾಣತೊಡಗುತ್ತದೆ. ಇಷ್ಟಕ್ಕಾಗಿ ನಾವು ಯಾಕಿಷ್ಟು ರಿಸ್ಕ್ ತಗೋಬೇಕು, ಬಿಟ್ಟು ಬಿಡೋಣ ಅನ್ನುತ್ತಾಳೆ. ’ನಾವಿಬ್ಬರೂ ಪಟ್ಟು ಹಿಡಿದು ಒಬ್ಬರನ್ನೊಬ್ಬರು ಭೇಟಿ ಮಾಡುತ್ತಿದ್ದದ್ದು ಹಿಡಿ ಸಂತೋಷಕ್ಕಾಗಿ, ಅದೆಲ್ಲಿ ರವಿ ಈಗ, ಸಿಕ್ಕಾಗ ಮಾತು, ಜಗಳ … ನಾವಿಬ್ಬರೂ ಗಂಡ ಹೆಂಡತಿ ಆಗಿ ಹೋಗಿದ್ದೀವಿ ಕಣೋ’ ಎಂದು ವಾಸ್ತವದ ಕಡೆ ಬೆಚ್ಚಿ ನೋಡುತ್ತಾಳೆ. ಇದು ಸಾಕಿನ್ನು ಎನ್ನುವ ನಿರ್ಧಾರ ಮಾಡುತ್ತಾಳೆ. ಈ ಹಂತದಿಂದ ನಾಟಕ ಬೆಳೆಯುತ್ತಾ ಹೋಗುತ್ತದೆ.

ಈ ನಾಟಕದ ವಸ್ತು ಯಾಕೆ ಚರ್ವಿತ ಚರ್ವಣ ಅಲ್ಲ, ಯಾಕೆಂದರೆ ಸಾಧಾರಣವಾಗಿ ಹೆಣ್ಣನ್ನು ಭಾವುಕತೆಯ ನೆಲೆಯಲ್ಲಿ ಗಂಡನ್ನು ವಾಸ್ತವಿಕ ನೆಲೆಯಲ್ಲಿ ಚಿತ್ರಿಸಲಾಗುತ್ತದೆ. ಹಾಗಾಗಿ ಗಂಡಿನ ನಿರ್ಧಾರ ಬುದ್ದಿಪೂರ್ವಕ ಹಾಗು ಹೆಣ್ಣಿನ ನಿರ್ಧಾರ ಭಾವಪ್ರೇರಿತ ಎಂದು ನೋಡಲಾಗುತ್ತದೆ. ಆದರೆ ಇಲ್ಲಿ ಹಾಗಲ್ಲ, ಇಲ್ಲಿ ’ಸಾಕು, ಹೋಗು’ ಎನ್ನುವವಳು ಹೆಣ್ಣು, ’ನೀನಿಲ್ಲದಿದ್ದರೆ ಹುಚ್ಚನಾಗ್ತೀನಿ’ ಎಂದು ತೊಳಲಾಡುವವನು ಗಂಡು. ಅವನಿಗೆ ಅವಳು ಬೇಕು, ಇನ್ನೂ ಬೇಕು, ಮುಂದೆಂದಾದರೂ ಮದುವೆಯಂತೆ ಈ ಪ್ರೇಮವೂ ಹಳಸಬಹುದಲ್ಲಾ ಎಂದರೆ, ’ಅದು ಆವಾಗ ನೋಡಿಕೊಳ್ಳೋಣ, ಈಗ ನನಗೆ ಅವಳು ಬೇಕು’ ಎನ್ನುವ ಅದಮ್ಯ ಹಂಬಲ ಅವನದು.
ವಿವಾಹದ ಚೌಕಟ್ಟಿಲ್ಲದ ಸಂಬಂಧದಲ್ಲಿ ಎರಡು ಜೀವಗಳು ಬೇರೆ ಆಗುತ್ತೇವೆಂದಾಗ ಅವರಿಬ್ಬರನ್ನೂ ಕೂರಿಸಿ ಯಾರೂ ಕೌನ್ಸಲಿಂಗ್ ಮಾಡುವುದಿಲ್ಲ, ’ಹೊಂದಿಕೊಳ್ಳಲು ಪ್ರಯತ್ನಿಸಿ’ ಎನ್ನುವುದಿಲ್ಲ, ಎಲ್ಲರ ಮನದಲ್ಲೂ ’ಹಾ ಇದು ಇನ್ನೇನಾಗಲು ಸಾಧ್ಯ’ ಎನ್ನುವ ಭಾವವೇ…. ಅವರ ಬದ್ಧತೆಯ ಹೊರತಾಗಿ ಅವರನ್ನು ಹಿಡಿದಿಡುವುದೇನೂ ಅಲ್ಲಿರುವುದಿಲ್ಲ. ಘಟಿಸಿದ ಕಳ್ಳ ಬಸಿರೊಂದು ಕತ್ತಲ ಓಣಿಯಲ್ಲಿ ಕತ್ತು ಕಿವುಚಿಸಿಕೊಂಡಂತೆ ಒಂದು ನಿಶ್ಪಾಪ ಭಾವದ ಗರ್ಭಪಾತವಾಗಿರುತ್ತದೆ ಅಲ್ಲಿ … ನಿಟ್ಟುಸಿರಿಗೆ ಅವಕಾಶವಿದೆ ಆದರೆ ಬಿಕ್ಕಿ ಬಿಕ್ಕಿ ಅಳಲು ಅಪ್ಪಣೆಯಿಲ್ಲ. ಇಲ್ಲಿ ಆಗುವುದೂ ಹಾಗೆಯೇ, ಇಬ್ಬರಿಗೂ ಸ್ನೇಹಿತನಾದವ ಇಬ್ಬರನ್ನೂ ಸಮಾಧಾನ ಪಡಿಸುತ್ತಾನೆಯೇ ಹೊರತು ಅವನಿಗೂ ಗೊತ್ತು ಇದು ನಿಲ್ಲುವ, ನಡೆಯುವ ಕಥೆ ಅಲ್ಲ ಎಂದು.
ಅನಘ ತೆಕ್ಕೆಯಿಂದ ಹಿಂದೆ ಸರಿದಾಗಿದೆ, ಆದರೆ ರವಿಗೆ ಅದನ್ನು ಒಪ್ಪಿಕೊಳ್ಳಲಾಗುತ್ತಿಲ್ಲ. ಕೈ ಬಿಡಿಸಿಕೊಂಡು ಹೆಜ್ಜೆ ಕಿತ್ತು ಮುಂದೆ ನಡೆದವರ ನಡೆ ಧೃಢ, ಏಕೆಂದರೆ ಅದು ಅವರ ನಿರ್ಧಾರ, ಅದರ ಸಾಧಕ ಬಾಧಕಗಳನ್ನು ಅವರು ಯೋಚಿಸಿ ಆಗಿದೆ. ಆದರೆ ಬಿಕ್ಕುತ್ತಾ, ಖಾಲಿ ಕೈ ನೋಡಿಕೊಳ್ಳುತ್ತಾ ಹಿಂದೆ ಉಳಿದವರದು ಸಂತೆಯಲ್ಲಿ ಸುಂಟರಗಾಳಿ ಬೀಸಿದಂತಹ ಪರಿಸ್ಥಿತಿ, ಯಾವುದನ್ನು ಸಂಭಾಳಿಸಬೇಕು? ಯಾರದ್ದೋ ನಿರ್ಧಾರ, ಇವರ ಮೇಲೆ ವಿಧಿಸಲ್ಪಟ್ಟಿದೆ, ಇಲ್ಲ ಇವರು ಕಾರಣ ಕೇಳುವಂತಿಲ್ಲ, ಇಲ್ಲ ಇವರು ವಾದ ಮಾಡುವಂತಿಲ್ಲ, ಇಲ್ಲ ಇವರು ಸಮಯವನ್ನೂ ಕೇಳುವಂತಿಲ್ಲ. ಒಪ್ಪಿಕೊಳ್ಳುವುದರ ಹೊರತಾಗಿ ಇವರ ಬಳಿ ಇನ್ನ್ಯಾವ ಆಯ್ಕೆ ಸಹ ಇಲ್ಲ.
ಪ್ರೀತಿ ಮಾಡುವಾಗ, ಪ್ರೀತಿ ಮಾಗುವಾಗ ಇಬ್ಬರ ಅಭಿಪ್ರಾಯ, ಎರಡು ಜೀವಗಳ ಒಪ್ಪಿಗೆ ಬೇಕು. ಆದರೆ ವಿದಾಯ ಹೇಳುವಾಗ ಪ್ರೀತಿ ಇಬ್ಬರಲ್ಲೊಬ್ಬರಿಗೆ ’ಸಾಕು’ ಎನ್ನಿಸಿದರೆ ಸಾಕು. ಡಿಫ಼ೈನ್ ಆಗದ, ಚೌಕಟ್ಟಿಲ್ಲದ ಪ್ರೇಮದ ಮುಖ್ಯ flaw ಇರುವುದು ಇಲ್ಲಿ. ಇಬ್ಬರೂ ಪ್ರಭುದ್ಧರು, ಭಾವ ಸಾಂಗತ್ಯ ಮುಖ್ಯ, ಇಬ್ಬರಿಗೂ ಸಮ್ಮತವೆನಿಸುವವರೆಗೂ ಜೊತೆಯಲ್ಲಿರೋಣ, ಒಬ್ಬರಿಗೆ ಸಾಕು ಎನ್ನಿಸಿದರೆ ಇನ್ನೊಬ್ಬರು ಅವರನ್ನು ತಡೆಯಬಾರದು ಎನ್ನುವ ಭಾವದಲ್ಲಿ ಪ್ರೇಮದ ಸಂಬಂಧ ಶುರುವಾಗುತ್ತದೆ. ಆದರೆ ಇಬ್ಬರಿಗೂ ಒಟ್ಟಿಗೇ ಸಾಕು ಅನ್ನಿಸಬೇಕಲ್ಲ? ಒಬ್ಬರಿಗೆ ’ಸಾಕು’ ಅನ್ನಿಸುವಾಗ ಇನ್ನೊಬ್ಬರಿಗೆ ಆ ಸಂಬಂಧ ’ಇನ್ನೂ ಬೇಕು’ ಅನ್ನಿಸುತ್ತಿದ್ದಾಗ….?
ಇಲ್ಲಿ ರವಿಗೂ ಹೀಗೇ ಆಗಿದೆ, ಅವಳನ್ನು, ಅವಳ ನಗುವನ್ನು, ಅವಳ ದೇಹವನ್ನು, ಸಾಂಗತ್ಯವನ್ನು ಯಾವುದನ್ನೂ ಅವನಿಂದ ಮರೆಯಲಾಗುತ್ತಿಲ್ಲ. ಅದಕ್ಕಾಗಿ ಮತ್ತೆ ಮತ್ತೆ ಅವಳನ್ನು ಕರೆಯುತ್ತಾನೆ, ಮತ್ತೆ ಮತ್ತೆ ಅವಳಿಗೆ ಫೋನ್ ಮಾಡುತ್ತಾನೆ, ಮತ್ತೆ ಮತ್ತೆ ಅವಳನ್ನು ಭೇಟಿ ಮಾಡುತ್ತಾನೆ.
ಆದರೆ ಹಿಂದೊಮ್ಮೆ ಬೆಚ್ಚನೆಯ ಬಿಸುಪು ಭಾವಗಳ ಅನಘ ಈಗ ಕರಗದ ಹಿಮರಾಶಿ. ಇನ್ನಿಲ್ಲದಂತೆ ಅವಳಿಗಾಗಿ ಹಂಬಲಿಸುವ ಅವನ ಸಿಗರೇಟು, ಕುಡಿತಾ ಎಲ್ಲಾ ಮೇರೆ ಮೀರುತ್ತಿದೆ, ’ಅವಳು ತನ್ನನ್ನ್ಯಾಕೆ ಅವಾಯ್ಡ್ ಮಾಡುತ್ತಿದ್ದಾಳೆ, ಅವಳಿಗೆ ನಾನು ಸಾಕಾದೆನಾ, ಅವಳ ಹುಡುಕಾಟದಲ್ಲಿ ನಾನು ಕೇವಲ ಒಂದು ನಿಲ್ದಾಣ ಮಾತ್ರವಾ, ನನ್ನನ್ನು ಅವಳು ತನ್ನ ಹುಡುಕಾಟದ ಒಂದು ಸಾಧನವಾಗಿ ಬಳಸಿಕೊಳ್ಳುತ್ತಿದ್ದಾಳಾ ಅಥವಾ ಅವಳು ಇನ್ಯಾರನ್ನಾದರೂ ಪ್ರೇಮಿಸುತ್ತಿದ್ದಾಳಾ……’ ನಿರಾಕರಣೆಗೊಂಡ ಮನಸ್ಸಿನಲ್ಲಿ ನೂರು ನೂರು ಪ್ರಶ್ನೆ …. ಒಮ್ಮೆ ಅವಳಿಗೆ ಫೋನ್ ಮಾಡಿದಾಗ ಅವಳ ಮನೆಯಲ್ಲಿ ತನ್ನ ಗೆಳೆಯನ ದನಿ ಕೇಳಿ ’ಬೋಳಿ ಮಗನೆ, ಅವಳ ಮನೇಲಿ ಏನೋ ಮಾಡ್ತಿದ್ದೀಯೋ…..’ ಎಂದು ಅರಚುವಾಗ ಅವನ ಇನ್ಸೆಕ್ಯುರಿಟಿ, ಹತಾಶೆ ಫಕ್ಕನೆ ಹೊರ ಚೆಲ್ಲುತ್ತದೆ. ರವಿಯಾಗಿ ಮಂಜು ರಂಗದ ಮೇಲೆ ಮಿಂಚುತ್ತಾರೆ.
’ಈ ಕಳ್ಳ ಭೇಟಿ ಸಾಕು ಕಣೋ’ ಅಂತ ಅವಳೆಂದರೆ, ’ನಿನಗಾಗಿ ಮನೆ ಕಟ್ಟುತ್ತಾ ಇದ್ದೀನಿ, ನಾವು ಅಲ್ಲಿ ಭೇಟಿ ಮಾಡೋಣ’ ಅನ್ನುತ್ತಾನೆ, ’ಈ ಪ್ರೀತಿ ನನ್ನ ಉಸಿರು ಕಟ್ಟಿಸುತ್ತಿದೆ’ ಎಂದು ಅವಳೆಂದರೆ ’ಆಯ್ತು ಅನು, ಸ್ವಲ್ಪ ಸ್ಪೇಸ್ ಕೊಡೋಣ ….. ನಾಳೆ ಸಿಗ್ತೀಯಲ್ಲ ಅನು????’ ಅಂತಾನೆ. ಅವಳು ಭಾವನಾತ್ಮಕ ನೆಲೆಯಲ್ಲಿ ನಿರಾಕರಿಸುವುದಕ್ಕೆ ಕಾರಣ ಹೇಳುತ್ತಾ ಹೋದರೆ, ಇವನು ವಾಸ್ತವಿಕ ನೆಲೆಯಲ್ಲಿ ಅದಕ್ಕೆ ಪರಿಹಾರ ಹೇಳಲು ತೊಳಲಾಡುತ್ತಿರುತ್ತಾನೆ. ಆದರೆ ಸತ್ಯ ಎಂದರೆ ಅವಳದು ಬುದ್ಧಿಮಟ್ಟದ ನಿರ್ಧಾರ, ಇವನದು ಭಾವದ ನೆಲೆಯ ಹಂಬಲ. ಅವಳು ಭೂಮಿ, ಇವನು ಮೋಡ, ’ವಿರಹವೋ, ದಾಹವೋ, ಬಿಡಲಾಗದ ಮೋಹವೋ..’ ಎನ್ನುವುದು ಇವನ ಸ್ಥಿತಿ.
ಆದರೆ ಅವಳು ಬಹುಷಃ ’೪೦ರ ನಂತರದ ಪ್ರೇಮ ಜ್ವರದಂತಿರಬೇಕು, ಏರಬೇಕು, ಮತ್ತು ಬೆವೆತು ಇಳಿದುಬಿಡಬೇಕು’ ಎನ್ನುವ ಜೋಗಿಯವರ ಲೇಖನವನ್ನು ಓದಿಬಿಟ್ಟಿದ್ದಾಳೆ! ತಮ್ಮ ಸಂಬಂಧ ಹೀಗೇ ಮುಂದುವರೆದರೆ ಎರಡು ಕುಟುಂಬಗಳು ಮುರಿದು ಬೀಳುತ್ತವೆ ಎನ್ನುವುದು ಅವಳಿಗೆ ಅರಿವಾಗಿದೆ. ಅದಕ್ಕಾಗೇ ಅವಳು ಕೈ ಬಿಡಿಸಿಕೊಂಡಿದ್ದಾಳೆ. ಅವನು ಖಾಲಿ ಕೈ ನೋಡುತ್ತಾ ಕುಳಿತಿದ್ದಾನೆ.
ಈ ನಾಟಕ ಎಲ್ಲೂ ಕಪ್ಪು ಬಿಳುಪಾಗದೆ, ಎಲ್ಲರೂ ರಕ್ತ ಮಾಂಸಗಳ ಮಾನವರೇ ಎನ್ನುವಂತೆ ಕಾಣಲು ಕಾರಣ ಸಮರ್ಥವಾದ ನಿರ್ದೇಶನ ಮತ್ತು ಅದ್ಭುತವಾದ ಅಭಿನಯ. ಅದರಲ್ಲೂ ಮಂಜು ಮತ್ತು ನಂದಿತಾ ಪರಸ್ಪರ ಸ್ಪರ್ಧೆಯಿಂದ ನಟಿಸಿದ್ದಾರೇನೋ ಎನ್ನುವಂತೆ ರಂಗವನ್ನು ಆಕ್ರಮಿಸಿಕೊಳ್ಳುತ್ತಾರೆ.
ಯಶ್ ಚೋಪ್ರಾ ’ಸಿಲ್ ಸಿಲಾ’ ಚಿತ್ರ ಮಾಡುವಾಗ ಪಾತ್ರಧಾರಿಗಳ ಆಯ್ಕೆ ನಡೆಸಿದ್ದರಂತೆ. ಆ ಕಾಲದ ಒಂದು ನಿಜ ಜೀವನದ ಪ್ರೇಮ ತ್ರಿಕೋನದಲ್ಲಿದ್ದ ಅಮಿತಾಭ್, ಜಯಬಾಧುರಿ ಮತ್ತು ರೇಖಾರನ್ನು ಪಾತ್ರಗಳಿಗೆ ಆರಿಸಲಾಗಿದೆ. ಆದರೆ ರೇಖಾಳ ಪತಿಯ ಪಾತ್ರಕ್ಕೆ ಸಂಜೀವ್ ಕುಮಾರ್ರನ್ನು ಕೇಳಿದಾಗ ಆತ ಇಷ್ಟು ಸಣ್ಣ ಪಾತ್ರವನ್ನು ನಾನು ಮಾಡುವುದೇ ಎಂದು ಹಿಂಜರಿದರಂತೆ. ಚಿತ್ರದಲ್ಲಿ ಒಂದು ಹೋಲಿ ಹಾಡಿನ ಸನ್ನಿವೇಶ ಬರುತ್ತದೆ, ’ರಂಗ್ ಭರ್ಸೇಹ ಭೀಗೇ ಚುನರ್ವಾಲಿ ರಂಗ್ ಭರ್ಸೇ..’ ಅಂತ. ಆ ಹಾಡಿನಲ್ಲೇ ಅಚಾನಕ್ ಆಗಿ ರೇಖಾಳ ಪತಿಯ ಪಾತ್ರಧಾರಿಗೆ ರೇಖಾ ಮತ್ತು ಅಮಿತಾಭ್ ರ ನಡುವೆ ಇರುವ ಸಂಬಂಧದ ಸುಳಿವು ಸಿಕ್ಕಿಬಿಡುತ್ತದೆ. ಆ ದೃಶ್ಯದಲ್ಲೇ ನಾನು ನನ್ನ ಅಭಿನಯವನ್ನು ಪಣಕ್ಕೆ ಹಚ್ಚಬಲ್ಲೆ ಎಂದು ಸಂಜೀವ್ ಕುಮಾರ್ಗೆ ಅನ್ನಿಸಿ ಆ ಪಾತ್ರವನ್ನು ಒಪ್ಪಿಕೊಂಡರಂತೆ. ಆ ಹಾಡನ್ನು ನೋಡಬೇಕು…. ಹಠಾತ್ತಾಗಿ ಪತಿಗೆ ತನ್ನ ಹೆಂಡತಿಗೂ, ಅಮಿತಾಭ್ ಗೂ ಇರುವ ಸಂಬಂಧದ ಅರಿವಾಗುತ್ತದೆ, ತುಟಿಯಲ್ಲಿ ಇನ್ನೂ ನಗುವಿರುತ್ತದೆ, ಆದರೆ ಕಣ್ಣಲ್ಲಿ ಆ ಕ್ಷಣ ಆಗುವ ಶಾಕ್, ಅಪನಂಬಿಕೆ, ನೋವು, ಅವಮಾನ…… ’ವಾಹ್’ ಅನ್ನಿಸಿಬಿಡುತ್ತದೆ.
ಅಂಥಹುದೇ ಒಂದು ಸನ್ನಿವೇಶ ಇಲ್ಲೂ ಬರುತ್ತದೆ, ರವಿ ಕೊನೆಗೆ ಅವಳ ನಿರಾಕರಣೆಯನ್ನು ಒಪ್ಪಿಕೊಂಡಾಗಿದೆ, ಕಡೆಯ ಭೇಟಿಗಾಗಿ ಅವಳನ್ನು ಅವಳನ್ನು ನಿರಾತಂಕವಾಗಿ ಭೇಟಿ ಮಾಡಲೆಂದೇ ಕಟ್ಟಿದ ಹೊಸ ಮನೆಗೆ ಕರೆದಿದ್ದಾನೆ. ಅವಳನ್ನು ಮರೆಯಲು ತಾನು ಏನೆಲ್ಲಾ ಮಾಡಿದ್ದೇನೆ ಎಂದು ಹೇಳುತ್ತಾ ಹೋಗುತ್ತಾನೆ, ವಾಕಿಂಗ್, ಸಂಗೀತ, ಓಶೋ ಎಲ್ಲಾ ಆಗಿದೆ, ಈಗ ನಿನ್ನನ್ನು ಮರೆತಿದ್ದೇನೆ ಎಂದು ಉನ್ಮಾದದ ದನಿಯಲ್ಲಿ ಹೇಳುತ್ತಾ ಹೋಗುತ್ತಾನೆ. ಅದು ಸುಳ್ಳು ಎಂದು ಅವಳಿಗೂ ಗೊತ್ತು, ಪ್ರೇಕ್ಷಕರಿಗೂ ಅದು ಗೊತ್ತಾಗುತ್ತದೆ. ಆದರೆ ಅನಘ ಅದರ ಅರಿವೇ ಇಲ್ಲದಂತೆ, ಸಹಜವಾಗಿ ಮಾತನಾಡುತ್ತಾ ಇರುತ್ತಾಳೆ. ಅಷ್ಟರಲ್ಲಿ ರವಿಯ ಹೆಂಡತಿಯ ಫೋನ್ ಬರುತ್ತದೆ, ’ಹಾ ಬೇಗ ಬರ್ತೀನಿ, ಶಾಪಿಂಗ್ಗೆ ಹೋಗೋಣ….’ ಎನ್ನುತ್ತಲೇ ರವಿ ಫೋನ್ ಇಡುವ ಮೊದಲು ’ಐ ಲವ್ ಯೂ’ ಅನ್ನುತ್ತಾನೆ ಹೆಂಡತಿಗೆ. ಆ ಒಂದು ಕ್ಷಣದಲ್ಲಿ ಅನಘಾಳ ಮುಖದ ಮೇಲೆ ಬರುವ ಆ ಅಸಹನೆಯ ಭಾವವಿದೆಯಲ್ಲಾ ನಂದಿತ ಅಲ್ಲಿ ಪೂರ್ತಿಯಾಗಿ ಗೆಲ್ಲುತಾರೆ. ಅದೊಂದು ನೋಟದಲ್ಲಿ ಎಷ್ಟೇ ಸಾಕೆಂದರೂ, ಬೇಡ ಹೋಗೆಂದರೂ ಪ್ರೇಮ ದೊಂದಿಗೇ ಬರುವ ಆ ಪೊಸೆಸಿವ್ ನೆಸ್ ಕಣ್ಣಿಗೆ ಕಟ್ಟುಬಿಡುತ್ತದೆ.
ಮೊದಲ ಸಲ ನೋಡುವಾಗ ಕೇವಲ ನಾಟಕದ ತಿರುಳನ್ನಷ್ಟೇ ನನ್ನದಾಗಿಸಿಕೊಳ್ಳಲು ಸಾಧ್ಯ ಆಯ್ತು, ಅದರ ಎಲ್ಲಾ ನೆಲೆಗಳಲ್ಲಿ ಅರಿಯಬೇಕೆಂದರೆ ನಾಟಕವನ್ನು ಮತ್ತೊಮ್ಮೆ ನೋಡಬೇಕು.
ನಾಟಕ ಇಂದು ಮತ್ತು ನಾಳೆ ರಂಗಶಂಕರದಲ್ಲಿ ಪ್ರದರ್ಶಿತಗೊಳ್ಳುತ್ತಿದೆ.








ತುಂಬಾ ಚನ್ನಾಗಿ ಬರೆದಿದ್ದೀರಿ! ಒಮ್ಮೆ ಈ ನಾಟಕವನ್ನು ನೋಡಲೇಬೇಕು ಎನ್ನುವಂತೆ ಮಾಡಿದೆ ನಿಮ್ಮ ಲೇಖನ.
ನಾನು ಮಾರ್ಚ್ ತಿಂಗಳಲ್ಲಿ ಬೆಂಗಳೂರಿಗೆ ಬಂದಾಗ ಈ ನಾಟಕವನ್ನು ಕಲಾಸೌಧದಲ್ಲಿ ನೋಡಿದೆ. ತುಂಬಾ ಚನ್ನಾಗಿದೆ. ಅದರಲ್ಲೂ ಮೈಕೊ ಮಂಜು ಮತ್ತು ನಂದಿತಾರವರ ಅಭಿನಯ ಅದ್ಬುತ. ನಿಮ್ಮ ವಿಮರ್ಶೆ ತುಂಬಾ ಚನ್ನಾಗಿ ಬಂದಿದೆ.
ನಾಟಕ ನೋಡಿದಷ್ಟೇ ಕುಷಿ ಕೊಟ್ಟಿತು ಈ ಲೇಖನ ..
tumba chennagide vimarshe. nayaka nodi ayita agale. eevathu nale allava nataka.
ಸಂಧ್ಯಾ, ಈ ನಾಟಕದ ಬಗ್ಗೆ ಕೇಳಿದ್ದೆ..ನೀವು ಕಣ್ಣಿಗೆ ಕಟ್ಟುವಂತೆ ಭಾವನೆಗಳನ್ನು ಜೀವಂತಗೊಳಿಸಿ ಬರೆದಿದ್ದೀರಿ…
“….ನಿಟ್ಟುಸಿರಿಗೆ ಅವಕಾಶವಿದೆ ಆದರೆ ಬಿಕ್ಕಿ ಬಿಕ್ಕಿ ಅಳಲು ಅಪ್ಪಣೆಯಿಲ್ಲ…ಇಲ್ಲ ಇವರು ವಾದ ಮಾಡುವಂತಿಲ್ಲ, ಇಲ್ಲ ಇವರು ಸಮಯವನ್ನೂ ಕೇಳುವಂತಿಲ್ಲ. ಒಪ್ಪಿಕೊಳ್ಳುವುದರ ಹೊರತಾಗಿ ಇವರ ಬಳಿ ಇನ್ನ್ಯಾವ ಆಯ್ಕೆ ಸಹ ಇಲ್ಲ.”
ಸಶಕ್ತವಾಗಿ ನಾಟಕವನ್ನು ‘ತೋರಿಸಿದ’ ಸಾಲುಗಳು. ಮನಮುಟ್ಟಿದ ಬರಹ
ಎಂದಿನಂತೆ ನಿಮ್ಮ ವಿಮರ್ಶೆಯೇ ಒಂದು ಕಲಾಕೃತಿಯಂತಿದೆ. ಒಂದು ನಾಟಕ ವಿಮರ್ಶೆಯನ್ನು ಇಷ್ಟು ಆಪ್ತವಾಗಿ ಕಥೆಯನ್ನಾಗಿಸುವ ನಿಮ್ಮ ಶೈಲಿಗೆ ಏನು ಹೇಳೋದು? ನಾಟಕ, ವಿಮರ್ಶೆ ಎಲ್ಲವನ್ನೂ ಮರೆತೂ ನಿಮ್ಮ ಬರೆಹವನ್ನು ಸ್ವಾದಿಸಲು ಸಾಕಷ್ಟು ಸಾಲುಗಳು ಇಲ್ಲಿವೆ. ಇದು ನಿಮ್ಮ ಈ ಬರೆಹಕ್ಕೆ ಮಾತ್ರ ಅನ್ವಯಿಸುವುದಿಲ್ಲ. ನಿಮ್ಮ ಶೈಲಿಯೇ ಅದು. ಬುದ್ಧಿಯನ್ನು ಬದಿಗಿಟ್ಟು ಹೃದಯದಿಂದ ಬರೆಯುತ್ತೀರಿ. ಥ್ಯಾಂಕ್ಸ್ ಇಷ್ಟು ಚಂದನೆಯ ಬರೆಹಗಳನ್ನು ಓದಿಸುತ್ತಿರುವುದಕ್ಕಾಗಿ.
Ow, such a beautiful narration. Great writing. ಆದರೆ ಸತ್ಯ ಎಂದರೆ ಅವಳದು ಬುದ್ಧಿಮಟ್ಟದ ನಿರ್ಧಾರ, ಇವನದು ಭಾವದ ನೆಲೆಯ ಹಂಬಲ. ಅವಳು ಭೂಮಿ, ಇವನು ಮೋಡ, ’ವಿರಹವೋ, ದಾಹವೋ, ಬಿಡಲಾಗದ ಮೋಹವೋ..’. A must watch ‘ನಾಟಕ’ for sure.
ಲೇಖನ ಓದಿ ಪ್ರತಿಕ್ರಯಿಸಿದ ನಿಮಗೆಲ್ಲಾ ಧನ್ಯವಾದಗಳು, ನನ್ನನ್ನು ತುಂಬಾ ಕಾಡಿದ ನಾಟಕ ಇದು .. ಇದು ನಿಮಗೂ ಇಷ್ಟ ಆಯ್ತು ಅನ್ನೋದು ನನ್ನ ಸಂತಸ..
ನಿಮ್ಮ ಲೇಖನ ಓದಿದ ಮೇಲೆ ನಾಟಕ ನೋಡಿದೆ. ಲೇಖನ ಮತ್ತು ನಾಟಕ ಒಂದನ್ನೊಂದು ಮೀರುವಂತಿದೆ.
Sandhya, ’ಯಾವ ಜೀವ ಯಾವ ನೋವಿಗೀಡೋ, ಯಾವ ಭಾವ ನೆಮ್ಮಿ ಅದರ ಪಾಡೋ, ಕಾಣಲಿ ಬಿಡಿ ತನ್ನೊಳಗಿನ ಬೆಳಕ, ಇರಲಿ ಅದನು ಕುರಿತು ಚೂರು ಮರುಕ…’.ಎಂಬ ಸಾಲುಗಳು ನನ್ನ All time favorite.. ನಾಟಕ ಚಂದವೋ ನಿಮ್ಮ ಬರಹ ಚಂದವೋ ಹ್ಯಾಗೆ ಹೇಳಲಿ ?
beautifull
ತುಂಬಾ ಚನ್ನಾಗಿ ವಿಮರ್ಶೆ ಬರೆದಿದ್ದೀರಿ.