-ಗುಂಡುರಾವ್ ದೇಸಾಯಿ
“ಅಯ್ಯೊ . . . ನನ್ನ ಬಂಗಾರಿನ ಯಾರ ಹೊತ್ತುಕೊಂಡು ಹೋಗಿದ್ದಾರೆ. ಅವರ ಮನಿ ಹಾಳಾಗ. ರೋಗ ಬಂದು ಕುಣಿಸೇರ” ಎಂದು ಬಯ್ಯುತ್ತಾ ಅಳುತ್ತಿದ್ದ ಮಾಲಜ್ಜಿಯನ್ನು ರಸ್ತೆಯಲ್ಲಿ ಹೊರಟಿದ್ದ ರಾಮು ರಾಜು “ಏನಾಯ್ತು? ಅಜ್ಜಿ” ಎಂದು ಕೇಳಿದರು.
“ಅಯ್ಯೊ ಮುಠ್ಠಳರಾ, ಮನೆಮುಂದಿನ ಖಾಲಿ ಕೊಟ್ಟಿಗೆನ ನೋಡಿದ್ರ ಗೊತ್ತಾಗೊದಲ್ವೇನ್ರೋ.? ನನ್ನ ಆಕಳನ್ನ ಯಾರೊ ಒಯ್ದುಬಿಟ್ಟಿದ್ದಾರೆ” ಎಂದು ಅಳುವುದನ್ನು ಜೋರ ಮಾಡಿದಳು.
ಸಿಟ್ಟು ಬಂದಾಗ ಮಾಲಜ್ಜಿ ಮಾತಾಡೋದೆ ಹೀಗೆ. ಏಚುಪೇಚು ಇಲ್ಲದ ಮನಸ್ಸು. ಆದರೆ ಮಕ್ಕಳೆಂದರೆ ಪಂಚಪ್ರಾಣ. ಬಿಡುವಿದ್ದಾಗ ರಾಮು ರಾಜು ಆಕೆಯ ಹಸು ಬಂಗಾರಿಯ ಜೊತೆಯಲ್ಲೆ ಕಾಲ ಕಳೆಯುತ್ತಿದ್ದರು. ಬಂಗಾರಿ ಹೆಸರಿನ ತಕ್ಕಂತೆ ಬಂಗಾರದ೦ತಿದ್ದ ಆಕಳು. ನೋಡಲು ದಷ್ಟಪುಷ್ಟವಾಗಿತ್ತು. ಹೆಚ್ಚಿಗೆ ಹಾಲನ್ನು ಕೊಡುತ್ತಿತ್ತು.
“ಬಂಗಾರಿ ಕಳುವಾಗಿದ್ದು ಸತ್ಯನಾ?” ಎಂದು ರಾಮು ಕೇಳಿದಾಗ “ಸುಳ್ಳ ಯಾಕ ಹೇಳಲಿ. ಇದ್ರೆ ಇಲ್ಲೆ ಇರುತ್ತಿತ್ತಲ್ಲ” ಎಂದು ಆಕಳು ಕಟ್ಟುತ್ತಿದ್ದ ಜಾಗವನ್ನು ತೋರಿಸಿದಳು.
“ಎಲ್ಲಾದರೂ ಹಗ್ಗ ಉಚ್ಚಿಕೊಂಡು ಹೋಗಿದೆಯೊ? ಏನೋ . . .?” ಎಂದು ಕೇಳಿದ ರಾಮು.
“ಹಾಗೆ ಆಗಿದ್ದರೆ ಸುತ್ತಾಡಿಕೊಂಡು ಇಲ್ಲೆ ಬಂದಿರೋದು. ಹಗ್ಗನ್ನ ಕತ್ತರಿಸಿಕೊಂಡು ಹೋಗಿದ್ದಾರೆ ನೋಡ್ರಪಾ” ಎಂದು ಕತ್ತರಿಸಿದ ಹಗ್ಗ, ಗೂಟಕ್ಕೆ ಇರೋದನ್ನ ತೋರಿಸಿದಳು.
“ಪೊಲೀಸ್ ಸ್ಟೇಶನ್‌ಗೆ ಕಂಪ್ಲೆ೦ಟ್ ಕೊಡಬೇಕಿಲ್ಲೊ” ಎಂದು ರಾಜು ಕೇಳಿದಾಗ “ಅಯ್ಯೊ ಅಲ್ಲಿ ಹೋಗಿದ್ದೆ. ಅವರೋ, ನಾವೇನು ದನ ಕಾಯೋರಾ, ದನ ಹುಡುಕೋರಾ? ನಮಗೇನು ಬೇರೆ ಕೆಲಸ ಇಲ್ಲ ಎಂದು ಬೈದು ಕಳುಹಿಸಿದರು” ಎಂದಳು ಅಜ್ಜಿ.
“ಅಯ್ಯೊ . . . ! ಏನು ಮಾಡೋದು ಈಗ?” ಎಂದ ರಾಜು “ಇಡೀ ಊರ ತುಂಬಾ ತಿರುಗಾಡಿದೆ, ಎಲ್ಲರನ್ನೂ ಕೇಳಿದೆ, ಎಲ್ಲಿಯೂ ಸಿಗಲಿಲ್ಲ. ಅದು ನನಗೆ ಆಧಾರವಾಗಿತ್ತು. ಏನು ಮಾಡಲಿ?” ಎಂದು ಅಜ್ಜಿ ಮತ್ತೆ ಅಳುವುದನ್ನು ಜೋರ ಮಾಡಿದಳು.
“ಹಾಂ! ಒಂದು ಐಡಿಯಾ ಇದೆ ನನ್ನಲ್ಲಿ. ನಿನ್ನ ಆಕಳನ್ನು ಹುಡುಕಿಕೊಂಡು ಬರುವೆವು” ಎಂದನು ರಾಮು.
“ಹೇಗೆ ಹುಡುಕುವೆ . . .?” ಎಂದನು ರಾಜು ಕಿವಿಯಲ್ಲಿ ರಾಜುವಿಗೆ ರಾಮು ಹೇಳಿದ. “ಹೌದಲ್ಲ . . . !” ಎಂದ ರಾಜು. “ಅಜ್ಜಿ, ನಿನ್ನೆ ನಿನ್ನ ಆಕಳು ಕಳಿದಿದೆ ಎಂದರೆ ಊರಲ್ಲಿಯೆ ಇದೆ ಎಲ್ಲೂ ಹೋಗಿರಲ್ಲ. ನಾವು ನಿನಗೆ ತಂದೆ ತಂದು ಕೊಡುತ್ತೇವೆ” ಎಂದರು.
“ಹಾಗೆ ಮಾಡಿದ್ರೆ ನಿಮಗೆ ನಿತ್ಯ ಹಾಲು ಕೊಡುವೆ” ಎಂದು ಭರವಸೆ ನೀಡಿದಳು ಅಜ್ಜಿ.
“ಇಷ್ಟೇನಾ . . .? ಎಂದು ರಾಜು ಅಂದಾಗ. “ಮಕ್ಕಳಾದ ನಿಮಗೆ ಏನು ಬೇಕು ಅದನ್ನು ಕೊಡುವೆ. ಹುಡುಕಿ ಸಹಾಯ ಮಾಡಿ, ಜೀವನಕ್ಕೆ ಆಧಾರ ಅದು ಒಂದೆ. ನಿಮಗೆ ಚಾಕೋಲೇಟ್, ಕುರುಕುರೆ ಎಲ್ಲಾ ಕೊಡುವೆ” ಎಂದು ಕಣ್ಣೀರು ತೆಗೆದಳು ಅಜ್ಜಿ.
“ಅಜ್ಜಿ ನೀನು ಅಳಬೇಡ, ನಿನಗೆ ನಾವು ಸಹಾಯ ಮಾಡುವೆವು” ಎಂದು ನಡೆದರು.
****
ಸಂಜೆಯಾಗುತ್ತಲೇ ರಾಮು ಮತ್ತು ರಾಜು ಬಂಗಾರಿಯೊ೦ದಿಗೆ ಮರಳಿ ಬಂದರು. ಪೋಲಿಸರು ಜೊತೆಗಿದ್ದರು. ಅದನ್ನು ಕಳುವು ಮಾಡಿದ್ದ ಭೀಮಣ್ಣನು ಇದ್ದನು. ಬಂಗಾರಿ ಹಸುವನ್ನು ನೋಡಿ ‘ನನ್ನ ಮುಂದಿನ ಬದುಕು ಹೇಗೆ?” ಎಂದು ಭಯಗೊಂಡಿದ್ದ ಅಜ್ಜಿಗೆ ಆದ ಖುಷಿ ಅಷ್ಟಿಷ್ಟಲ್ಲ. ಸಂಭ್ರಮದಲ್ಲಿ ಬಂಗಾರಿಯನ್ನು, ಕರೆತಂದ ಮಕ್ಕಳನ್ನು ಮುದ್ದಾಡಿದಳು. ಮಕ್ಕಳಿಗೆ “ನೀವು ಹೇಗೆ ಕಂಡು ಹಿಡಿದಿರಿ?” ಎಂದು ಆಶ್ಚರ್ಯದಿಂದ ಕೇಳಿದಳು. ಜೊತೆಗಿದ್ದ ಪೊಲೀಸರು “ಹೌದು ನಿಮಗೆ ಹೇಗೆ ಗೊತ್ತಾಯಿತು?” ಎಂದರು.
ರಾಮು ಹೇಳತೊಡಗಿದ. ಬಂಗಾರಿಯೊAದಿಗೆ ಆಡುವಾಗ ಅದರೊಂದಿಗೆ ಕೀಟಲೆ ಮಾಡುತ್ತಿದ್ದೆವು. ‘ಬಂಗಾರಿ ಬಂಗಾರಿ’ ಎಂದು ಬಾಲ ಜಗ್ಗುತ್ತಿದ್ದೆವು. ಅದರಲ್ಲಿ ಮೊಬೈಲ್‌ನಲ್ಲಿ ‘ಬಂಗಾರಿ ಯಾರೇ ನೀ ಬುಲ್‌ಬುಲ್’ ಎಂದು ಹಾಡು ಹಾಕಿದರೆ ಹುಚ್ಚೆದ್ದು ಕುಣಿಯುತ್ತಿತ್ತು. “ನಮ್ಮೂರು ಹೇಗೊ ಚಿಕ್ಕದು, ಈ ಹಾಡು ಹಾಕಿಕೊಂಡು ಎಲ್ಲಾ ಓಣಿಯಲ್ಲಿ ಹೋಗೋಣ . . . ಹಾಡು ಕಿವಿಗೆ ಬಿದ್ದೊಡನೆ ಅದು ಕುಣಿಯುತ್ತದೆ, ಅದರ ಹೇಗಾದರೂ ಅದಕ್ಕೆ ಕಟ್ಟಿರುವ ಗೆಜ್ಜೆಯ ಸೌಂಡ್ ಬರುತ್ತದೆ. ಅದರ ಮೇಲೆ ಕಂಡು ಹಿಡಿಯ ಬಹುದು” ಎಂದೆ.
“ಹೌದು, ಕದ್ದವನಿಗೆ ಅಷ್ಟು ಬುದ್ಧಿ ಇರಲ್ಲೇನು. ಗೆಜ್ಜೆ ಬಿಚ್ಚಿದ್ದರೆ?” ಎಂದ ರಾಜು.
“ಗೆಜ್ಜೆ ಬಿಚ್ಚಿರಲಿ ಆದರೆ ಆ ಬಂಗಾರಿ ಹಾಡಿಗೆ ಅದು ಒದರುತ್ತದಲ್ಲ, ಕುಣಿಯುತ್ತದಲ್ಲ ಅದರ ಮೇಲೆ ಕಂಡು ಹಿಡಿಯಬಹುದು” ಎಂದೆ.
“ಹೋ . . . ಒಳ್ಳೆಯ ಐಡಿಯಾ ರಾಮು” ಎಂದ ರಾಜು. ಹಾಗೆ ಪ್ಲಾನ್ ಮಾಡಿಕೊಂಡು ಇಬ್ಬರೂ ಹೊರಟೆವು. ಈ ಹಾಡು ಹಾಕಿಕೊಂಡು ಎಲ್ಲಾ ಮನೆಯ ಮುಂದೆ ಅಡ್ಡಾಡಿದರೂ ಅದರ ಸುಳಿವೇ ಸಿಗಲಿಲ್ಲ. ಕೆಲವರು “ಏನೋ ನಿಮಗೆ ಬೇರೆ ಕೆಲಸ ಇಲ್ಲನೂ ಮೊಬೈಲ್ ನಲ್ಲಿ ಹಾಡು ಹಾಕಿಕೊಂಡು ಊರೆಲ್ಲ ಅಡ್ಡಾಡುತ್ತಿದ್ದೀರಿ. ನಿಮ್ಮ ಅಪ್ಪ ಅಮ್ಮಗ ಹೇಳಲೇನೂ . . .” ಅಂತ ಅಂಜಿಸಿದರು. ನಾನು “ನಾವು ಅಜ್ಜಿಯ ಕಳೆದಿರುವ ಆಕಳು ಹುಡುಕುತ್ತಿರುವುದಾಗಿ” ಹೇಳಿದಾಗ “ಹಾಡು ಹಾಕಿಕೊಂಡು ಅಡ್ಡಾಡಿದರೆ ಪೋಲಿ ಹುಡುಗರು ಅಂತಾರೆ. ನಡಿರಿ ನಡಿರಿ” ಎಂದು ಬೈದರು.
ನಮ್ಮ ಉದ್ದೇಶ ಅರ್ಥವಾಗದೆ ಜನರೆಲ್ಲ ಬೈಯುವವರೆ ಆಗಿದ್ದರು. ಕೊನೆಗೆ ಸಾಕಾಗಿ ಊರ ಹೊರಗಿನ ಪಾಳು ಗುಡಿಯ ಹತ್ತಿರ ಬಂದು ಕುಳಿತೆವು. “ಏನು ಮಾಡಬೇಕು? ಅಜ್ಜಿ ಮುಂದೆ ದೊಡ್ಡದಾಗಿ ಮಾತು ಕೊಟ್ಟು ಬಂದೀವಿ. ಮುಂದೇನು ಮಾಡೋದು . . . ? ಅಜ್ಜಿಗೆ ಹೇಗೆ ಮುಖ ತೋರಿಸೋದು . . . ?” ಎಂದು ಚಿಂತೆ ಮಾಡುತ್ತಾ ಕುಳಿತೆವು. ನಿಶ್ಯಬ್ದವಾಗಿತ್ತು. ಹಾಗೆ ಆಲೋಚಿಸುತ್ತಾ ಕುಳಿತಾಗ ‘ಬಂಗಾರಿ ಯಾರೇ ನೀ ಬು ಬುಲ್’ ಎಂದು ನಮ್ಮಿಂದ ಗೊತ್ತಿಲ್ಲದಂತೆ ಹಾಡು ಬಾಯಿಯಿಂದ ಹೊರ ಬಂತು.
ಮರುಕ್ಷಣದಲ್ಲಿ ಏನೋ ಸರಿದಾಡಿದ ಸದ್ದಾಯಿತು. ಕಿವಿಗಳು ಜಾಗೃತವಾದವು. ಹಿಂದೆ ನೋಡಿದರೆ ನಾಯಿಯೊಂದು ಓಡುತ್ತಿತ್ತು. “ಅಯಯಯಯಯ್ಯೋ . . . ! ನಮ್ಮ ಧ್ವನಿಗೆ ನಾಯಿ ಓಡುತ್ತಿದೆ ನೋಡು” ಎಂದು ರಾಜು ನಕ್ಕ. ನಾನು ಅದನ್ನು ಹೆದರಿಸಲು ‘ಬಂಗಾರಿ ಯಾರೇ ನೀ ಬುಲ್ ಬುಲ್’ಎಂದು ಜೋರಾಗಿ ಕೂಗ ತೊಡಗಿದೆ. ಅದು ಭಯದಿಂದ ಓಡಿ ಹೋಯಿತಾದರೂ ಮತ್ತೊಮ್ಮೆ ಏನೋ ಸರಿದಾಡಿದ ಸದ್ದಾಯಿತು. ಮತ್ತೆ ಆ ಹಾಡು ಹಚ್ಚಿದೆ. “ರಾಮು ಬ್ಯಾಡೋ… ಸಾಕು ಆ ಹಾಡು ಹಾಕಬ್ಯಾಡ, ಕೇಳಿ ಕೇಳಿ ಸಾಕಾಗಿದೆ” ಎಂದ ರಾಜು ಹೇಳಿದರೂ ನಾನು ಕೇಳಲಿಲ್ಲ. ಆ ಹಾಡು ಹಚ್ಚಿದ ಕೂಡಲೆ ಪಾಳು ದೇವಸ್ಥಾನದಲ್ಲಿ ಏನೋ ಸರಿದಾಡುವ ಸೌಂಡ್ ಕೇಳಿತು. ಭಯ ಬಂತು. ‘ದೆವ್ವಗಿವ್ವ ಅದನೂ’ ಅಂತ ಅಂಜಿದ್ವಿ. ಆ ಹಾಡಿಗೆ ಧ್ವನಿ ಹೆಚ್ಚುತ್ತಲೇ ಹೋಯಿತು. ಧೈರ್ಯ ಮಾಡಿ ಒಳ ಹೋದ್ವಿ.
ಆ ಸದ್ದು ಹೆಚ್ಚುತ್ತಾ ಹೋಯಿತು. ಮತ್ತೆ ಆ ಹಾಡು ಹಾಕಿದಾಗ ಸ್ವಷ್ಟವಾಯಿತು. ಅದನ್ನು ನೋಡಿ ನಮಗಾದ ಖುಷಿ ಅಷ್ಟಿಷ್ಟಲ್ಲ. ಒಳಗಡೆ ಹಸುವನ್ನು ಕಟ್ಟಿ ಹಾಕಿದ್ದರು. ಬಾಯಿಗೆ ಬಟ್ಟೆ ಬಿಗಿದಿದ್ದರು. ಅದು ಹಾಡಿಗೆ ಖುಷಿಯಿಂದ ಬಿಡಿಸಿಕೊಳ್ಳಲು ಒದ್ದಾಡುತ್ತಿತ್ತು. ಒಳಗಡೆ ಕಟ್ಟಿ ಹಾಕಿದ್ದ ಆಕಳನ್ನು ಬಿಡಿಸಿಕೊಂಡು ಬರುವಾಗ ‘ಈ ಭೀಮಣ್ಣ’ ನನ್ನದು ಅಂತ ವಾದಿಸಿ ಕಿತ್ತುಕೊಂಡ. ಅಲ್ಲೆ ಹೊರಟಿದ್ದ ಪೊಲೀಸ್ ಅಂಕಲ್‌ನ್ನು ಕೂಗಿ ಕರೆದ್ವಿ. ಅಷ್ಟರೊಳಗೆ ಬಂಗಾರಿ ಭೀಮಣ್ಣನ್ನು ಝಾಡಿಸಿ ಒದ್ದು ಬಿಟ್ಟಿತು. ಆದರೂ ಅವ ಹಿಡಿದುಕೊಳ್ಳುವುದನ್ನು ಬಿಡಲಿಲ್ಲ.
ಈ ಪೊಲೀಸ್ ಅಂಕಲ್‌ಗೆ ಅಜ್ಜಿಯ ಕಳುವಾದ ಹಸುವಿನ ವಿಚಾರ ಹೇಳಿದಾಗ, ಅವರಿಗೂ ನೀನು ಸ್ಟೇಶನ್ ಗೆ ಬಂದುದು ತಿಳಿದಿತ್ತು. ‘ಪಾಪ ಅಜ್ಜಿಯ ಹಸು’ ಎಂದು ಅವರು ನಮಗೆ ಸಹಾಯ ಮಾಡಿದರು ಎಂದು ರಾಮು ಬಿಡದೆ ಮಾತು ಮುಗಿಸಿದ. ಅಷ್ಟರಲ್ಲಿ ಭೀಮಣ್ಣನಿಗೆ ಬಂಗಾರಿ ಮತ್ತೆ ಝಾಡಿಸಿ ಒದೆಯಿತು. ಅವನು ಎದ್ನೋ ಬಿದ್ನೋ ಅಂತ ಓಡಿದ. ಪೊಲೀಸ್ ಅಂಕಲ್ ಭೀಮಣ್ಣನ ಹಿಂದೆ ಬೆನ್ನು ಹತ್ತಿದರು. ಮಕ್ಕಳ ಸಾಹಸ ವಿಷಯ ಕೇಳಿದಾಗ ಅಜ್ಜಿಗಾದ ಖುಷಿಗೆ ಪಾರವೇ ಇರಲಿಲ್ಲ.






0 Comments