ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಂಗಾರದೊಡವೆ ಬೇಕೇ ನೀರೆ?

ಎಂ ಆರ್ ಕಮಲ

(ಸೌಮ್ಯ ಕನ್ನಡತಿ ನೆನಪಿಸಿದ್ದು ಈ ಬರಹ . KGF ಸಿನಿಮಾದಲ್ಲಿ ಬಂಗಾರ ಇಷ್ಡಪಡದ ಹೆಣ್ಣುಮಗಳು ಯಾರಿದ್ದಾರೆ ಎಂಬ ಡೈಲಾಗ್ ಕೊಂಚ ಕಸಿವಿಸಿ ಹುಟ್ಡಿಸಿತ್ತು)

ಐವತ್ತು ವರ್ಷಗಳ ಹಿಂದಿನ ಮಾತು. `ಇವನ ಯೋಗ್ತೆಗೆ ಬೆಂಕಿ ಹಾಕ, ಮುದ್ದೆ ನುಂಗೋತಾಕೆ ಒಂದಿಲ್ಲ’ ಎಂದು ಆರ್ಭಟಿಸಿ, ಅಳುತ್ತಿದ್ದ ಹೆಣ್ಣುಮಗಳನ್ನು ನೋಡಲು ನಾವೆಲ್ಲ ಬೆಳಗ್ಗೆ ಎದ್ದು ಜಗುಲಿಗೆ ಓಡಿದ್ದೆವು. ಮೇಟಿಕುರ್ಕೆಯ ಜಗುಲಿಯ ಅನೇಕ ನಾಟಕೀಯ ದೃಶ್ಯಗಳಲ್ಲಿ ಜಗಳಗಳು ಕೂಡ ಒಂದಾಗಿತ್ತು. ನನ್ನ ತಂದೆ ತುಂಬಾ ಸಮಾಧಾನಿ. ಎರಡು ಕಡೆಯವರಿಗೆ ಒಪ್ಪಿತವಾಗುವಂತೆ ಜಗಳಗಳನ್ನು ತೀರ್ಮಾನಿಸುವ ಕಲೆ ಅವರಿಗೆ ಕರಗತವಾಗಿತ್ತು.

ಹೀಗಾಗಿ ಪಂಚಾಯಿತಿ ಕಟ್ಟೆಗೆ ಹೋಗುವ ಬದಲು ನಮ್ಮ ಮನೆಯ ಮುಂದೆ ಜನರ ಜಾತ್ರೆಯಿರುತ್ತಿತ್ತು. `ಮುದ್ದೆ ನುಂಗೋತಾಕೆ ಒಂದಿಲ್ಲ’ ಅಂದರೇನು ಎಂದು ತಿಳಿಯದೆ ಅಮ್ಮನನ್ನು ಕೇಳಿದ್ದೆ. `ಹಾಗೆಂದರೆ ಕೊರಳಿಗೆ ಹಾಕಿಕೊಳ್ಳುವ ಚಿನ್ನದ ಸರ’ ಎಂದು ಅಮ್ಮ ಹೇಳಿದ್ದಳು. ಗಂಡ ಚಿನ್ನವನ್ನು ಕೊಡಿಸದೆ, ನೆಂಟರಿಷ್ಟರ ಮನೆಗೆ ಮದುವೆಗೆ ಹೋಗಲು ಅವಮಾನಿತಳಾಗಿದ್ದ ಹೆಂಗಸು ತೆಗೆದಿದ್ದ ಜಗಳವದು. ಜಗಳವಾಡಲು ಇದೊಂದು ವಿಷಯವೇ ಎಂದು ನನಗೆ ಅಚ್ಚರಿಯಾಗಿತ್ತು. ಚಿನ್ನದ ಒಡವೆಗಳ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದ ಬಾಲ್ಯವದು.ಹಾಗೆ ನೋಡಿದರೆ ಅಜ್ಜಿ, ಅಮ್ಮನ ಕತ್ತಿನಲ್ಲಿ ಕೂಡ ನಾನೆಂದೂ ಒಡವೆಗಳನ್ನು ಕಂಡಿರಲಿಲ್ಲ.

ಕಣ್ಣು ಮಂಜಾಗುತ್ತಿದ್ದ ಅಮ್ಮನಿಗೆ, ಅಜ್ಜಿಗೆ ನಾವು ಹೆಣ್ಣುಮಕ್ಕಳು ಕರಿಮಣಿಯನ್ನು ಪೋಣಿಸಿ ಕೊಡುತ್ತಿದ್ದೆವು. ಅಮ್ಮನದು `ಬಂಗಾರವಿಲ್ಲದ ಬೆರಳು’! ಅಮ್ಮ ಮತ್ತು ಅಜ್ಜಿ ಸಿರಿವಂತ ಕುಟುಂಬದಿಂದ ಬಂದವರೇ. ಅಜ್ಜಿಯ ಮದುವೆಗೆ ಕುಕ್ಕೆಯಲ್ಲಿ ಒಡವೆಗಳನ್ನಿಟ್ಟಿದ್ದರಂತೆ, ಅಜ್ಜ ಊರೂರು ತಿರುಗುತ್ತ ಅದೆಲ್ಲವನ್ನು ಹಾಳು ಮಾಡಿತು ಎಂದು ಅಣ್ಣ ಗೊಣಗುತ್ತಿದ್ದರು. ಬಹುಶಃ ಮನೆಯ ಕಷ್ಟಗಳಿಗೆ ಅಮ್ಮನ ಒಡವೆಗಳು ಕೂಡ ಕರಗಿಹೋಗಿರಬೇಕು. ತಂದೆ ಮನೆಯಲ್ಲಿ ಕೊಟ್ಟಿದ್ದ ಒಂದೆರಡನ್ನು ಮಾತ್ರ ಅಮ್ಮ ಪೆಟ್ಟಿಗೆಗೆ ಬೀಗ ಹಾಕಿ ಭದ್ರವಾಗಿರಿಸಿಕೊಂಡಿದ್ದಳು.

ಚಿನ್ನದ ಒಡವೆಗಳೇತಕೆ ಅಮ್ಮ ತೊಂದರೆ ಕೊಡುವುವು ಬೇಡಮ್ಮಾ! ಬಣ್ಣದ ಬಟ್ಟೆಗಳೇತಕೆ ಅಮ್ಮಾ?ಮಣ್ಣಿನೊಳಾಡಲು ಬಿಡವಮ್ಮಾ!ಎಂಬ ಕುವೆಂಪು ಅವರ ಕವಿತೆಯನ್ನು ಶಾಲೆಯಲ್ಲಿದ್ದಾಗ ಉರುಹೊಡೆದು ಹೇಳುತ್ತಿದ್ದೆ. ಆದರೆ ನನ್ನ ಅಮ್ಮನನ್ನು ಕುರಿತು ಹೀಗೆ ಹೇಳುವ ಪ್ರಸಂಗ ಬರಲೇ ಇಲ್ಲ. ನಾವು ಅಕ್ಕ ತಂಗಿಯರು ಯಾವ ಒಡವೆಯನ್ನು ಚಿಕ್ಕ ವಯಸ್ಸಿನಲ್ಲಿ ತೊಟ್ಟವರಲ್ಲ. ಚಿನ್ನದ ಒಡವೆಗಳ ಕಲ್ಪನೆ ಕೂಡ ನನಗಿರಲಿಲ್ಲ. ಅಮ್ಮ ಕೊಬ್ಬರಿ ಸುಲಿಸಿದ ಮೇಲೆ ಮಟ್ಟೆ, ಚಿಪ್ಪುಗಳನ್ನು ಮಾರಾಟ ಮಾಡಿ ಬಂದ ದುಡ್ಡಿನಲ್ಲಿ `ಸ್ಟಾರ್’ ಎಂಬ ನಕ್ಷತ್ರಾಕಾರದ, ಒಂದೇ ಒಂದು ನೀಲಿ ಹರಳಿರುವ ಓಲೆಯನ್ನು ಕಷ್ಟಪಟ್ಟು ಮಾಡಿಸಿ ಹೆಣ್ಣುಮಕ್ಕಳ ಕಿವಿಗೆ ಹಾಕಿದ್ದಳು.

ಉಳಿದವರ ಕಿವಿಯಲ್ಲಿ ಆದಿತ್ತೋ ಏನೋ, ಸರಿಯಾಗಿ ಗಮನಿಸಿಲ್ಲ. ತಕಪಕ ಸ್ವಭಾವದ ನಾನು ತಿರುಪನ್ನು ಮತ್ತೆ ಮತ್ತೆ ತಿರುಗಿಸುವ ಆಟವನ್ನು ಆಡಿ ಒಂದು ಕಿವಿಯ ಓಲೆಯನ್ನು ಕಳೆದುಕೊಂಡೆ. ಅದರ ಬೆಲೆ ಕೂಡ ತಿಳಿಯದಿದ್ದ ನನಗೆ ಅಮ್ಮ ಬಹಳ ನೋವಿನಿಂದ ಒಂದೇಟು ಕೊಟ್ಟಿದ್ದಳು. ಸಾಧಾರಣವಾಗಿ ಯಾರಿಗೂ ಹೊಡೆದವಳೇ ಅಲ್ಲ. ಅಲ್ಲಿಂದ ಮುಂದೆ ಕಿವಿಯ ತೂತು ಮುಚ್ಚದ ಹಾಗೆ ಸಣ್ಣ ಹಂಚಿಕಡ್ಡಿಯನ್ನು ಇಟ್ಟು ಶಾಲೆಗೆ ಕಳಿಸುತ್ತಿದ್ದಳು. ಸದ್ಯ, ಮತ್ತೆ ಸ್ಟಾರ್ ಕಳೆದು ಪೆಟ್ಟು ತಿನ್ನುವಂತಿಲ್ಲ ಎಂದು ಭಾರಿ ಖುಷಿಯಾಗಿತ್ತು. ಸುತ್ತಮುತ್ತಲಿನಲ್ಲಿ, ಶಾಲೆಗೆ ಚಿನ್ನದ ಒಡವೆಗಳನ್ನು ತೊಟ್ಟು ಬರುವ ಸಿರಿವಂತ ಹುಡುಗಿಯರು ಅನೇಕರಿದ್ದರು. ಮುಂಬಯಿಗೆ ಮದುವೆ ಮಾಡಿಕೊಟ್ಟಿದ್ದ ಜನಕರಾಯರ ಮಗಳು ಊರಿಗೆ ಬಂದು, ಅರಿಶಿನ ಕುಂಕುಮಕ್ಕೆಂದು ಮನೆಗೆ ಬಂದಿದ್ದಾಗ `ಕೆಂಪಿನ ಸರ’ ಹಾಕಿಕೊಂಡಿದ್ದಳು ಎನ್ನುವ ಚರ್ಚೆ ಜಗುಲಿಯಲ್ಲಿ ಒಮ್ಮೆ ಕೇಳಿತ್ತು.

ಹೈಸ್ಕೂಲ್ ಮೆಟ್ಟಿಲೇರಿದಾಗ ನೆರೆಮನೆಯ ಹುಡುಗಿ ಹಾಕಿಕೊಂಡಿದ್ದ ಲೋಲಾಕು ಬಹಳ ಇಷ್ಟವಾಗುತ್ತಿತ್ತು. ಓಡುವಾಗ, ಕುಂಟಾಬಿಲ್ಲೆ ಆಡುವಾಗ ಅವಳೊಂದಿಗೆ ಅಲುಗಾಡುತ್ತ, ಕೆನ್ನೆಗೆ ಸೋಕುತ್ತಿತ್ತಲ್ಲ! ಅದನ್ನು ನೋಡುವುದೇ ಸಂಭ್ರಮ ಎನ್ನಿಸಿತ್ತೇ ಹೊರತು ಹಾಕಿಕೊಳ್ಳಬೇಕೆಂದು ಅನ್ನಿಸಲೇ ಇಲ್ಲ. ಇನ್ನು ನಮ್ಮೂರಿಗೆ ಸಮೀಪವಿರುವ ಹೊಳಲಕೆರೆಯಲ್ಲಿ ನಮ್ಮ ಸಂಬಂಧಿಗಳು ಅನೇಕರಿದ್ದರು. ಅವರೆಲ್ಲ ಬಹಳ ಸಿರಿವಂತರೆಂದು ಅಣ್ಣ ಹೇಳುತ್ತಿದ್ದರು. ರಾಮೇಶ್ವರನ ಜಾತ್ರೆಗೆಂದು ಹೊಳಲಕೆರೆಗೆ ಹೋದಾಗ ಅವರ ಉಪ್ಪರಿಗೆಯ ಮನೆಗಳಲ್ಲಿ ಸಂತರ್ಪಣೆ ಇರುತ್ತಿತ್ತು. `ಇದ್ಯಾವುದೇ ನೆಕ್ ಲೆಸ್, ಹೊಸದಾಗಿ ತಗೊಂಡೆಯಾ? ಈ ಕೆಂಪಿನ ಸೆಟ್ ಚೆನ್ನಾಗಿದೆ’ ಇತ್ಯಾದಿ ಅವರಾಡುತ್ತಿದ್ದ ಮಾತುಗಳು ಅನಾಕರ್ಷಕವಾಗಿದ್ದವು.

ಬಾಲ್ಯದಿಂದಲೂ ನನಗೆ ಈ ಚಿನ್ನದ ಮೇಲೆ ಮೂರು ಕಾಸಿನ ವ್ಯಾಮೋಹವಿಲ್ಲ. ಕಾಲೇಜಿಗೆ ಬಂದ ಮೇಲೆ ಹಂಚಿಕಡ್ಡಿಯಿಟ್ಟುಕೊಂಡರೆ ಜನ ನಗುತ್ತಾರೆ ಎಂದು ಪುಟ್ಟದೊಂದು ರಿಂಗ್ ಅಮ್ಮ ಮಾಡಿಸಿಕೊಟ್ಟಿದ್ದಳು . ಮದುವೆಯಾಗುವವರೆಗೂ ಇದ್ದ ಒಡವೆ ಅದೊಂದೇ. `ಭಲೇ ಅದೃಷ್ಟವೋ ಅದೃಷ್ಟ’ ಚಿತ್ರದಲ್ಲಿ ಇಷ್ಟಗಲ `ಮಾರಿಗೆ’ಯ ರಿಂಗ್ ತೊಟ್ಟ ಕಲ್ಪನಾಳನ್ನು ನೋಡಿದ ಮೇಲೆ ಅದನ್ನೂ ಕಿತ್ತೆಸೆದೆ. ಆಗೆಲ್ಲ ಸ್ವಲ್ಪ ಬಡತನವಿದ್ದವರು ಚಿನ್ನದಂತೆ ಕಾಣುವ `ಉಮಾ ಗೋಲ್ಡ್ ‘ ಹಾಕಿಕೊಳ್ಳುತ್ತಿದ್ದರು. ಮನುಷ್ಯರ ಅಂತಸ್ತನ್ನು ಈ ಒಡವೆಗಳು ನಿರ್ಧರಿಸುತ್ತಿದ್ದುದರಿಂದ ಅಮ್ಮ ಯಾವ ಮದುವೆಗೂ ಹೋಗುತ್ತಿರಲಿಲ್ಲ.

ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ನಾನು ಓದುತ್ತಿದ್ದ ಕವಿತೆಗಳು ಈ ಆಭರಣಗಳನ್ನು ಬೇರೆಯ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದವು. `ಆಭರಣ ನಿನಗೇತಕೆ? ಸ್ವಾಭಾವಿಕ ರೂಪು ಸಂಪತ್ತಿರಲು?’ ಎನ್ನುವ ಡಿವಿಜಿಯವರ ಮಾತು ಎದೆಯೊಳಗಿಳಿದಿತ್ತು. ಬೇಂದ್ರೆಯವರ ಆತ ಕೊಟ್ಟ ವಸ್ತು, ಒಡವೆ ನನಗೆ ಅವಗೆ ಗೊತ್ತು ತೋಳುಗಳಿಗೆ ತೋಳಬಂಧಿ ಕೆನ್ನೆ ತುಂಬ ಮುತ್ತು ಸಾಲುಗಳಲ್ಲಿನ `ತೋಳಬಂಧಿ, ಮುತ್ತು’ ಗಳ ರೋಮಾಂಚನಕ್ಕೆ ಸಿಲುಕಿದವರಿಗೆ ಭೌತಿಕ ಒಡವೆ, ವಸ್ತುಗಳು ಮೋಹಕವಾಗಿರಲಿಲ್ಲ. `ಸಂಜೆಯ ಹೊಂಬಿಸಲು, ಸೂರ್ಯನ ಕೆಂಪೊಡಲು ಅಂಗಸಂಗವ ಬಯಸಿ ನಿನ್ನ ಬಿಗಿದು ಅಪ್ಪಿರಲು, ಎಂಥ ರಮ್ಯದ ನೋಟ ನೋಡೇ, ನಿನ್ನಯ ಒಡಲು ನೀರೆ, ಅಂಗನೆ ನಿನ್ನಂಗ ಸಿಂಗಾರಕ್ಕೊಪ್ಪುವ ಬಂಗಾರದೊಡವೆ ಬೇಕೇ ನೀರೆ’ ಎಂಬ ಹಾಡನ್ನು ಗುನುಗಿದ್ದೂ ಗುನುಗಿದ್ದೆ.

ಕುವೆಂಪು ಅವರ `ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ?’ ಹಾಡನ್ನು ಗೆಳತಿ ಕೃಷ್ಣವೇಣಿಯ ದನಿಯಲ್ಲಿ ಕೇಳಿದ್ದೂ ಕೇಳಿದ್ದೆ. `ಇಟ್ಟರೆ ತೊಟ್ಟರೆ ಪುಟ್ಟಕ್ಕನೂ ಚಂದ, ಆದರೆ ನಿನ್ನ ಹೆಣ್ಣುಮಕ್ಕಳು ಇಡದೆ, ತೊಡದೆ ಇದ್ದರೂ ಚಂದ’ ಎನ್ನುವ ಮಾತನ್ನು ಕೇಳಿ ಹಿರಿಹಿರಿ ಹಿಗ್ಗುತ್ತಿದ್ದ ಅಮ್ಮ ಇಷ್ಟವಾಗಿದ್ದಳು. ಮದುವೆಯಾಗಿ ಈ ಮನೆಗೆ ಬಂದ ಮೇಲೆ ಗಂಡನ ಮನೆಯವರು ಏನು ಕೊಟ್ಟರು ಎಂದು ಕಾಲೇಜಿನಲ್ಲಿ ಅನೇಕರು ಪ್ರಶ್ನಿಸುತ್ತಿದ್ದರು. ಒಡವೆಗಳ ಬಗ್ಗೆ ಆಸಕ್ತಿಯೇ ಇರದಿದ್ದ ನನಗೆ ಸಿಟ್ಟೇ ಬರುತ್ತಿತ್ತು. ನಾನು ಬೆಳ್ಳಿ ಕರಿಮಣಿ ಸರವನ್ನು ಹಾಕಿಕೊಂಡು ತಿರುಗುತ್ತಿದ್ದೆ. ಆ ಚಿನ್ನವನ್ನು ಹಾಕಿಕೊಂಡು, ಸದಾ ಅದರ ಬಗ್ಗೆಯೇ ಯೋಚಿಸುತ್ತ ಬಸ್ಸಿನಲ್ಲಿ ಓಡಾಡುವುದು ನನಗೆ ಇಷ್ಟವಾಗುತ್ತಿರಲಿಲ್ಲ. `ಚಿನ್ನದ ನೀರಾದರು ಬಿಡಿಸಿಕೊ, ಕೀಳಾಗಿ ಕಾಣ್ತಾರೆ’ ಎಂದು ನನ್ನ ಮನಸ್ಸನ್ನು ತಿದ್ದಲು ಅನೇಕರು ಪ್ರಯತ್ನಿಸಿದ್ದರು.

ಪಾಠ, ಪ್ರತಿಭೆಯ ಬಗ್ಗೆ ಅಪಾರ ಆತ್ಮವಿಶ್ವಾಸವಿದ್ದ ನಾನು ಅವರ ಮಾತುಗಳಿಗೆ ಸೊಪ್ಪು ಹಾಕಲಿಲ್ಲ. ನೃತ್ಯ ಮಾಡುವಾಗ ಈ `ಟೆಂಪಲ್ ಜ್ಯುಯಲರಿ’ ತೊಟ್ಟು ಖುಷಿಪಟ್ಟಿದ್ದು ಮುಗಿದಿತ್ತು. ಅಕ್ಕಂದಿರ ಜೊತೆ ಒಂದೆರಡು ಬಾರಿ ಆಭರಣದ ಅಂಗಡಿಗಳಿಗೆ ಹೋಗಿ ಏನೇನೋ ಕೊಂಡು ತಂದೆ. ತಂದ ಮೇಲೆ ನನ್ನ ಬಗ್ಗೆಯೇ ಸಿಟ್ಟು ಬಂದು ಅದೊಂದನ್ನು ಹಾಕಿಕೊಳ್ಳಲಿಲ್ಲ. ಕೊನೆಗೆ ಎಲ್ಲವನ್ನು ಬ್ಯಾಂಕಿನಲ್ಲಿ ಇಟ್ಟು ನಿರಾಳವಾದೆ. ಈಗಂತೂ ಸಾವಿರ ವಿನ್ಯಾಸಗಳಿರುವ `ಮಾರಿಗೆ’ ಒಡವೆಗಳು ಸಿಗುವಾಗ ಈ ಚಿನ್ನಕ್ಕೆ ಯಾಕೆ ಒದ್ದಾಡಬೇಕು? ಈ ಒಡವೆಗಳೇ ಹೆಚ್ಚು ಪ್ರಿಯ ನನಗೆ! `ಮೇಡಂ, ನನ್ನ ಹೆಂಡತಿಗೆ ನಿಮ್ಮನ್ನು ಒಮ್ಮೆ ತೋರಿಸಬೇಕು, ಒಂಚೂರು ಒಡವೆಯಿಲ್ಲದಿದ್ದರೂ ಎಷ್ಟು ಚೆನ್ನಾಗಿ ಕಾಣ್ತೀರ, ಅವಳಿಗೂ ಅರ್ಥವಾಗಲಿ’ ಎಂದು ಸಹೋದ್ಯೋಗಿಯೊಬ್ಬರು ಸದಾ ಹೇಳುತ್ತಿದ್ದರು.

ಹಿಂದೆಲ್ಲ ಬ್ಯಾಂಕುಗಳು ಇಲ್ಲದಿದ್ದಾಗ ಕಷ್ಟ ಕಾಲಕ್ಕೆ ಅಂತ ಒಡವೆ ತೆಗೆದುಕೊಳ್ಳುತ್ತಿದ್ದರು. ಈಗ ಬೇಕಿರಲಿ, ಬೇಡದಿರಲಿ, ಚೆನ್ನಾಗಿ ಕಾಣಲಿ, ಬಿಡಲಿ ಸಿಕ್ಕ ಒಡವೆಗಳನ್ನು ಹೇರಿಕೊಂಡು ಪ್ರದರ್ಶನ ಮಾಡುವುದೇ ಹೆಚ್ಚಾಗಿ ಹೋಗುತ್ತಿದೆ. ಈ `ಚಿನ್ನ’ಕ್ಕಾಗಿ ಎಷ್ಟು ಕುಟುಂಬಗಳು ನಾಶವಾಗಿವೆಯೋ? ಎಷ್ಟು ಹೆಣ್ಣುಮಕ್ಕಳ ಬಾಳು ಹಾಳಾಗಿದೆಯೋ? `ಚಿನ್ನ ಮಾತ್ರ ಬೇರೆಯವರದ್ದು ಹಾಕಿಕೊಳ್ಳಬಾರದು, ಅದು ಕಳೆದುಹೋಗಿ, ಹಿಂತಿರುಗಿಸಲು ದುಡ್ಡು ಇಲ್ಲದೆ ಮನೆ ಮನೆಗಳೇ ಖುಲಾಸಾಗಿವೆ’ ಎಂದು ಅಮ್ಮ ಹೇಳುತ್ತಿದ್ದಳು. ನಾಳೆ `ಅಕ್ಷಯ ತದಿಗೆ’ . ಆ ದಿನ ನಮ್ಮ ಮನೆಯಲ್ಲಿ ಹಬ್ಬ ಮಾಡುತ್ತಿದ್ದರು ನಿಜ, ಆದರೆ ಈ ಚಿನ್ನ ಕೊಳ್ಳುವ `ಟ್ರೆಂಡ್’ ಇರಲಿಲ್ಲ.

ಈ ಆಭರಣದ ಅಂಗಡಿಗಳು ಹುಟ್ಟು ಹಾಕಿದ ಮೌಢ್ಯವನ್ನು ನಂಬಿಕೊಂಡು ಹೆಣ್ಣುಮಕ್ಕಳು ಅಂಗಡಿಯ ಮುಂದೆ ಸಾಲುಗಟ್ಟುತ್ತಿದ್ದಾರೆ. ದುಡ್ಡಿಲ್ಲದವರು ಇಂತಹ ಹುಚ್ಚಿಗೆ ಸಿಕ್ಕಿ ಸಂಸಾರವನ್ನು ಹಾಳು ಮಾಡಿಕೊಂಡಿರುವುದನ್ನು ಕಣ್ಣಾರೆ ನೋಡಿದ್ದೇನೆ. ಈ ಹಳದಿ ಲೋಹವನ್ನು ನಾವೇ ತಿರಸ್ಕರಿಸಬೇಕು ಎಂದು ಸದಾ ಅನ್ನಿಸುತ್ತಿರುತ್ತದೆ. ಈ ನಿಟ್ಟಿನಲ್ಲಿ ನಾನು ಹಿಂದೆ ಅನುವಾದ ಮಾಡಿದ್ದ `ಆಲೀಸ್ ವಾಕರ್ ಕವಿತೆಯ ಕೆಲವು ಸಾಲುಗಳು ನೆನಪಿಗೆ ಬರುತ್ತಿವೆ.

ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಏರಿಕೆ-ಇಳಿಕೆಗೆ ಒಂದಿಷ್ಟೂ ಕಳವಳಿಸದೆ ನಾವೇ ಚಿನ್ನದ ಮೌಲ್ಯವ ಅಪಮೌಲ್ಯಗೊಳಿಸಬಹುದು ಎಲ್ಲೆಲ್ಲಿ ಚಿನ್ನವಿರುವುದೋ ಅಲ್ಲೊಂದು ಸರಪಳಿ ನಿನ್ನೊಂದಿಗೆ ಆ ಸರಪಳಿ ಇದ್ದಷ್ಟೂ ನಿನಗೆ ಅಪಾಯ! ಬದುಕಿನಲ್ಲಿ ಚಿನ್ನವನ್ನು ತಿರಸ್ಕರಿಸುತ್ತ ಹೋದಂತೆ ನೆಮ್ಮದಿ ಹೆಚ್ಚುತ್ತಿದೆ ಎನ್ನುವುದು ನನ್ನ ಅನುಭವ! ಅದು ನಿಮ್ಮದೂ ಆಗಿರಬೇಕು ಎಂದೇನಿಲ್ಲ.

‍ಲೇಖಕರು Admin

7 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading