ವಿಜಯ್ ಹನಕೆರೆ
ಕೆಲವು ಕಥೆಗಳೇ ಹಾಗೆ..ಹೇಗೆ ಶುರು ಮಾಡುವುದು ಎನ್ನುವುದೇ ಕಸಿವಿಸಿಯಾಗುತ್ತದೆ.ಈ ಪುಟ್ಟ ಕಂದಮ್ಮ ಜ್ಯೋತಿ.. ಸಧ್ಯಕ್ಕೆ ಸಮರ್ಥನಂ ಸಂಸ್ಥೆಯಲ್ಲಿದ್ದಾಳೆ. ಕೇಳಿದರೆ ತನ್ನ ಹಿಂದಿನ ಕಥೆಯನ್ನು ಕಣ್ಣಿಗೆ ಕಟ್ಟಿದಂತೆ ಹೇಳತೊಡಗುತ್ತಾಳೆ.. .. ಆಗ ಅವಳಿಗೆ ನಾಲ್ಕು ವರ್ಷವಿದ್ದಿರಬಹುದು. ಇಬ್ಬರು ಅಕ್ಕಂದಿರು ಇದ್ದರಂತೆ. ಮೂರು ಮಕ್ಕಳನ್ನು ಸಾಕಲಾಗದೆ ಈಕೆಯ ಬಡತಾಯಿ ಸೇಡಂನ ಒಂದು ಬಸ್‌ಸ್ಟಾಂಡಿನಲ್ಲಿ ಬಿಟ್ಟು ಮರೆಯಾಗಿದ್ದಾಳೆ. ಇವರು ತಾಯಿಗಾಗಿ ಅಳುತ್ತಾ ಕುಳಿತುವಾಗಲೇ ಆತ ಬಂದಿದ್ದಾನೆ. ‘ಬನ್ನಿ ತಾಯಿಯನ್ನು ತೋರಿಸುತ್ತೇನೆ’ ಎಂದು ಹೇಳಿ ಕರೆದುಕೊಂಡು ಹೋಗಿದ್ದಾನೆ. ಮಕ್ಕಳು ಅವನನ್ನು ಹಿಂಬಾಲಿಸುತ್ತಾ ಕರಾಳ ಭವಿಷ್ಯದತ್ತ ಹೆಜ್ಜೆ ಹಾಕಿದ್ದಾರೆ.. ನಂತರ ಆತ ಒಂದು ಕೋಣೆಯಲ್ಲಿ ಕೂಡಿ ಹಾಕಿ ಮಕ್ಕಳನ್ನು ಭಿಕ್ಷೆ ಬೇಡುವಂತೆ ಒಪ್ಪಿಸಲು ಹಿಂಸಿಸಿದ್ದಾನೆ.
ಅಕ್ಕಂದಿರು ಉಪಾಯ ಮಾಡಿ ಒಪ್ಪಿ ಭಿಕ್ಷೆ ಬೇಡುವ ನೆಪದಲ್ಲಿ ಹೊರಗೆ ಹೋಗಿ ನಂತರ ತಪ್ಪಿಸಿಕೊಂಡಿದ್ದಾರೆ. ಜ್ಯೋತಿ ಮಾತ್ರ ಭಿಕ್ಷೆ ಬೇಡಲು ಪ್ರತಿಭಟಿಸಿದ್ದಾಳೆ. ಬೇಸತ್ತ ಅವನು ಸಂಜೆ ಕುಡಿದು ಬಂದು ಜ್ಯೋತಿಗೆ ಚೆನ್ನಾಗಿ ಬಡಿದಿದ್ದಾನೆ. ಅವನ ಯಾವ ಒತ್ತಾಯಕ್ಕೂ ಜ್ಯೋತಿ ಮಣಿಯದೇ ಇದ್ದಾಗ, ಕೊನೆಗೆ ಆಕೆಯ ಎರಡೂ ಕೈಗಳನ್ನು ಮುರಿದಿದ್ದಾನೆ. ಈಗ ಭಿಕ್ಷೆ ಬೇಡಲೇಬೇಕು ಎಂದು ಅವಳನ್ನು ಬೀದಿಗೆ ಎಳೆದು ತಂದಿದ್ದಾನೆ. ಜ್ಯೋತಿ ಆ ನೋವಲ್ಲೂ ಕಿರುಚುತ್ತಾ ಅವನಿಂದ ತಪ್ಪಿಸಿಕೊಳ್ಳಲು ಒದ್ದಾಡಿದ್ದಾಳೆ. ಅದೃಷ್ಟವಷಾತ್ ಯಾರೋ ದಾರಿಹೋಕರು ಅಲ್ಲೇ ಇದ್ದ ಪೋಲೀಸನೊಬ್ಬನ ಗಮನಕ್ಕೆ ತಂದಿದ್ದಾರೆ. ಹಾಗೋ ಹೀಗೋ ಪೋಲೀಸ್ ಅವನನ್ನು ಹಿಡಿದು ನಾಲ್ಕು ತದುಕಿದ್ದಾನೆ, ಜನರು ಜ್ಯೋತಿಯನ್ನು ಬಾಲಮಂದಿರಕ್ಕೆ ಒಪ್ಪಿಸಿದ್ದಾರೆ.
ಹಲವು ತಿಂಗಳುಗಳ ನಂತರ ಜ್ಯೋತಿ ಬೆಂಗಳೂರಿನ ಸಮರ್ಥನಂ ಸಂಸ್ಥೆಯ ಮಡಿಲಿಗೆ ಸೇರಿದ್ದಾಳೆ. ಈಗಲೂ ಕೇಳಿದರೆ ತನ್ನ ಪುಟ್ಟ ಕೈಗಳನ್ನು ಮುಂದೆ ಮಾಡಿ ತೋರಿಸುತ್ತಾ ಹಳೆಯ ಕಥೆಯನ್ನು ನಿಧಾನವಾಗಿ ಹೇಳತೊಡಗುತ್ತಾಳೆ. ಹೊಸಬರು ಯಾರಾದರೂ ಬಂದರೆ ಮಾತಾಡಿಸಲು ಹಿಂಜರಿಯುತ್ತಾಳೆ. ಅವಳಿಗೆ ನಂಬಿಕೆ ಬಂದರೆ ಮಾತ್ರ ಪಕ್ಕದಲ್ಲಿ ನಿಂತು ಮುದ್ದಾಗಿ ಮಾತಾಡುತ್ತಾಳೆ. ನಾನು ಪೋಲೀಸ್ ಆಗಬೇಕು ಎನ್ನುತ್ತಾಳೆ. ಅವಳ ಮುರಿದ ಎಳೆಯ ಕೈಗಳು ಮತ್ತೆ ಮೊದಲಿನಂತೆ ಆಗಲು ಒಟ್ಟು ಏಳು ಆಪರೇಷನ್‌ಗಳು ಆಗಬೇಕಾಗಿದೆ. ಅದರ ಖರ್ಚನ್ನು ಸಮರ್ಥನಂ ಸಂಸ್ಥೆ ಭರಿಸುತ್ತಿದೆ.
ಮೊನ್ನೆ ಮೊನ್ನೆ “ಕಾಸ್ ಗೆ ಟಾಸ್”ನಲ್ಲಿ ಶ್ರೀನಗರ ಕಿಟ್ಟಿ ಸುಮಾರು ಒಂದು ಲಕ್ಷದವರೆಗೆ ಜ್ಯೋತಿಗೆ ಗೆದ್ದು ಕೊಟ್ಟಿದ್ದಾರೆ. ಜಗತ್ತಿನಲ್ಲಿ ಒಳ್ಳೆಯವರೂ ಇದ್ದಾರೆ ಎಂದು ಜ್ಯೋತಿಗೆ ಇತ್ತೀಚೆಗೆ ಮನವರಿಕೆ ಆಗುತ್ತಿದೆ. ನೀವು ಎಂದಾದರು ಭೇಟಿಯಾದರೆ ತನ್ನ ಕಥೆಯನ್ನು ಹೇಳುತ್ತಾ ನಾಲಿಗೆ ಹೊರಕ್ಕೆ ತೆಗೆದು ಸುಲಿಯುತ್ತಾ ನಿಂತು ಸಂಕೋಚದಿಂದ ಹಣ ಸಹಾಯ ಕೇಳುತ್ತಾಳೆ. ಹಣದ ವಿಷಯ ಹಾಗಿರಲಿ. ಹೋಗಿ ಒಮ್ಮೆ ಮಾತಾಡಿಸಿ ಬನ್ನಿ. ಖುಷಿ ಪಟ್ಟಾಳು.







🙁
ದೇವರು ಎಷ್ಟು ಕ್ರೂರಿ. ಕಣ್ಣಲ್ಲಿ ನೀರು ಬಂತು ಜ್ಯೋತಿಯ ಕಥೆ ಕೇಳಿ. ದೇವರೇ ಆ ಕಂದಮ್ಮನ ಕೈಗಳು ಸರಿ ಹೋಗಲಿ ಅವಳ ಪೋಲಿಸ್ ಆಗುವ ಅಸೆ ನೇರವೆರಲಿ